Friday, 18 March 2016

ರಂಗಭೂಮಿಯ ರಂಗತೋರಣ (ಬಳ್ಳಾರಿಯ ರಂಗತೋರಣ)






    ಭಾರತ ಸಂಗೀತ, ಸಾಹಿತ್ಯ,ಸಿನಿಮಾ, ಜಾನಪದ,ಕಲೆ, ಸಾಹಿತ್ಯ ಹೀಗೆ ಹಲವಾರು ರೀತಿಯ ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ದೇಶ,ಅದರಲ್ಲಿ ರಂಗಭೂಮಿಯು ಹೊರತಗಿಲ್ಲ. ರಂಗಭೂಮಿ ಕೇವಲ ನಾಟಕವಾಗಿ ಪರಿವರ್ತನೆಗೊಳ್ಳದೇ, ಸ್ವಾತಂತ್ರ್ಯದ ಕಲ್ಪನೆ ಮೂಡಿಸಲು ಮತ್ತು ನಾಗರಿಕ ಸಮಾಜವನ್ನು ಬೆಳೆಸಲು ಧಾರ್ಮಿಕ ಪೌರಣಿಕ ನಾಟಕಗಳನ್ನು ಆಡಿ ಜನರ ಪರಿವರ್ತನೆ ಮಾಡುವುದರಲ್ಲಿ ರಂಗಭೂಮಿ ಸಾಕಷ್ಟು ಯಶಸ್ವಿಯಾಗಿದೆ. ಇಂದಿನ ದಿನಗಳಲ್ಲಿ ಅವಸಾನದ ಹಾದಿ ಹಿಡಿದಿರುವ ರಂರಭೂಮಿಗೆ ರಂಗು ತರಲು ಹೊರಟಿದೆ ಬಳ್ಳಾರಿಯ ರಂಗತೋರಣ ಬಳಗ.
   ಹೌದು! ಬಳ್ಳಾರಿಯ ರಂಗತೋರಣ ಸಂಸ್ಥೆ ಕಳೆದ ಒಂದು ದಶಕಗಳಿಂದ ತನ್ನ ರಂಗಭೂಮಿಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ. ವಿಶೇಷವಾಗಿ ವಿದ್ಯಾರ್ಥಿ ಯುವ ಜನರಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ, ಕಾಳಜಿ, ಹುರುಪು, ಹುಮ್ಮಸ್ಸು, ಚೈತನ್ಯ ಮೂಡಿಸಲು ವಿವಿಧ ರಂಗ ಚಟುವಟಿಗಳನ್ನು ನಡೆಸಿಕೊಂಡು ಹಲವಾರು ಯುವ ರಂಗ ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿದೆ.

ವಿವಿಧ ರಂಗ ಚಟುವಟಿಕೆಗಳು

ಯುವ ಜನರರಲ್ಲಿ ಸೃಜನಶೀಲ ರಂಗಾಸಕ್ತಿಯನ್ನು ಬೆಳೆಸುವ ಸಲುವಾಗಿ ಬಳ್ಳಾರಿಯ ರಂಗತೋರಣ ಬಳಗ ವರ್ಷವೀಡಿ ಹಲವಾರು ರಂಗ ಚಟುವಟಿಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದವರಿಗೆ ರಂಗ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಅವರಿಗೆ ರಂಗಭೂಮಿಯ ನಟನೆಯ ಬಗ್ಗೆ ತರಬೇತಿಯನ್ನು ನೀಡುತ್ತಿದೆ. ರಂಗ ಸವಾರಿ, ಸಂಕ್ರಾಂತಿ ರಂಗ ಸಂಭ್ರಮ, ರಂಗ ಚಾವಡಿ, ರಂಗ ಕಮ್ಮಟ, ರಂಗ ಮುಂಗಾರು ಹೀಗೆ ರಂಗಭೂಮಿಗೆ ಸಂಬಂಧಪಟ್ಟಂತೆ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ರಂಗಭೂಮಿಗೆ ಮತ್ತೆ ರಂಗನ್ನ ತರಲು ಹೊರಟಿದೆ.

ರಂಗತೋರಣದಲ್ಲಿ ಹೊಸ ರಂಗು.

 ರಂಗತೋರಣ ಬಳಗ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ರಂಗಭೂಮಿಯನ್ನು ಉಳಿಸುವ ಕಾರ್ಯದಲ್ಲಿ ತಲ್ಲೀಣವಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ. ಈ ಬಾರಿ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 10ನೇ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸಿ ಯಶಸ್ವಿಯಾಗಿದೆ.  ಈ ನಾಟಕೋತ್ಸವದಲ್ಲಿ ವಿನೂತನ ಪ್ರಯೋಗಳನ್ನು ರಂಗಾಸಕ್ತರು ಕಾಣಬಹುದು.

ಕಲಾತೋರಣ..

ಇದು ರಂಗಭೂಮಿಗೆ ಸಂಬಂಧಪಟ್ಟಂತಹ ವಸ್ತು ಪ್ರದರ್ಶನ. ಪ್ರತಿವರ್ಷವೂ ರಂಗತೋರಣದ ಆವರಣದಲ್ಲಿ ಈ ಕಲಾತೋರಣವನ್ನು ಆಯೋಜಿಸುತ್ತಾರೆ. ಅಷ್ಟೇ ಅಲ್ಲದೇ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದೆ. ಇನ್ನೊಂದು ಈ ಕಲಾತೋರಣ ವೈಶಿಷ್ಟತೆ ಎಂದರೆ ಇಲ್ಲಿ ವಿದ್ಯಾರ್ಥಿಗಳು ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಈ ಕಲಾತೋರಣದಲ್ಲಿ ಪ್ರದರ್ಶನಗೊಂಡರೆ ಅವರಿಗೆ 1000ರೂ ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ರಂಗಭೂಮಿಯ ಕಡೆಗೆ ಆಸಕ್ತಿ ತೋರಲಿ ಎಂಬುದೇ  ಈ ಪ್ರದರ್ಶನದ ಸದಾಶಯ.
  ರಂಗಚಾವಡಿ..
ವೇದಿಕೆಯ ಮೇಲೆ ನಟನೆ ಮಾಡಿದ ನಟನಾಕಾರರು, ತಮ್ಮ ನಟನೆಯ ಬಗ್ಗೆ ಹಾಗೂ ರಂಗಭೂಮಿಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವ ವೇದಿಕೆಯೆ ರಂಗಚಾವಡಿ. ಇದರ ಒಂದು ವಿಶೇಷತೆ ಎಂದರೆ ವೇದಿಕೆಯ ಮೇಲೆ ತಮ್ಮ ನಟನೆ ಮುಗಿದ ನಂತರ ಅದೇ ಉಡುಪಿನಲ್ಲಿ ಈ ವೇದಿಕೆಗೆ ಬಂದು ತಮ್ಮ ಅನುಭವನ್ನು ಹಂಚಿಕೊಳ್ಳಬೇಕು. ಬಣ್ಣ ಮಾಸುವ ಮುನ್ನ ಒಂದು ಅನುಭವ.

ರಂಗಬೆಳದಿಂಗಳು..

ನಾಟಕ ನೋಡಿ ದಣಿದ ಮನಸ್ಸುಗಳಿಗೆ ಒಂದು ಹುಮ್ಮಸ್ಸು ತರಲು ಹಾಗೂ ಪಾತ್ರಧಾರಿಗಳ ಬಹುಮುಖ ಪತ್ರಿಭೆಗಯನ್ನು ತೋರ್ಪಡಿಸಲು ರಂಗತೋರಣದ ಆವರಣದಲ್ಲಿ ಇಳಿಸಂಜೆಯಲ್ಲಿ ಆಯೋಜಿಸುವ ಫೈರಕ್ಯಾಂಫ್. ಇಲ್ಲಿ ಹಾಡು, ನೃತ್ಯ, ಅಭಿನಯ, ಮಿಮಿಕ್ರಿಯೆ, ಕವನಗಳು, ಹೀಗೆ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸುತ್ತಲೂ ನೆರೆದಿದ್ದ ಜನರ ನಡುವೆ ಬೆಂಕಿಯನ್ನು ಹಾಕಿ ಅದರ ಸುತ್ತ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ವೈಭವ ಯಾತ್ರೆ.

ನಾಟಕೋತ್ಸವದ ಸರ್ವಾಧ್ಯಕ್ಷರನ್ನು ಆನೆ ಅಂಬಾರಿಗಳ ಮೂಲಕ ನಾನಾ ಕಲಾತಂಡಗಳ ಮೂಲಕ ಅವರನ್ನು ಕರೆ ತರುವ ಒಂದು ಯಾತ್ರೆಯೇ ವೈಭವ ಯಾತ್ರೆ. ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲ ತಂಡಗಳು ಈ ಯಾತ್ರೆಗಳಲ್ಲಿ ನಾನಾ ವೇಷಭೂಷಣಗಳನ್ನು ತೊಟ್ಟುಕೊಂಡು ಸುತ್ತಲೂ ನೆರೆದಿದ್ದ ಜನರನ್ನು ರಂಜಿಸುತ್ತಾರೆ. ವೈಭವ ಯಾತ್ರೆಯಲ್ಲಿ ಯಾವ ತಂಡ ಉತ್ತಮ ಪ್ರದರ್ಶನ ತೊರುತ್ತದೆಯೋ ಆ ತಂಡಕ್ಕೆ ಬಹುಮಾನವನ್ನು ನೀಡಲಾಗುತ್ತದೆ. ಇದರ ಆಯ್ಕೆಯನ್ನು ನೆರೆದಿದ್ದ ಜನರೆ ಮಾಡುತ್ತಾರೆ. ಈ ಯಾತ್ರೆಯನ್ನು ನೋಡುವುದು ಒಂದೇ ಮೈಸೂರು ದಸರೆಯನ್ನು ನೋಡುವುದು ಒಂದೆ.
    ಒಟ್ಟಾರೆಯಾಗು ರಂಗತೋರಣ ಬಳಗ ರಂಗಭೂಮಿಯಲ್ಲಿ ವಿಭಿನ್ನ , ವಿಶಿಷ್ಟ ಪ್ರಯೋಗಳನ್ನು ಮಾಡುತ್ತಾ, ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ, ರಂಗ ಕಲೆಯನ್ನು ಉಳಿಸಿ ಬೆಳೆಸುತ್ತಿದೆ.  ಈ ಕಾರ್ಯದ ಹಿಂದೆ ಅದೇಷ್ಟೂ ಕೈಗಳು ಅವಿರತವಾಗಿ ಶ್ರಮಿಸುತ್ತಿವೆ. ಅಂತಹ ಕಾಣದ ಕೈಗಳಿಗೆ ನಮ್ಮದೊಂದು ನಮನ. ಇವರ ಈ ಕಲಾ ಸೇವೆ ಹೀಗೆ ನಿರಂತರವಾಗಿ ಮುಂದುವರೆದು ನಮ್ಮ ರಂಗಭೂಮಿ ಮತ್ತೆ ರಂಗಾಗಲಿ ಎಂಬುದೇ ಜನರ ಆಶಯ.
ಮಂಜುನಾಥ ಗದಗಿನ
8050753148

Tuesday, 8 March 2016

ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳು..!


ಇಷ್ಟ್ಯಾಕ ಕಾಡ್ತಿ ನನ್ನ- 


ಎದೆಯಾಳದಲ್ಲಿ ಇಳಿದ ನೆನಪುಗಳೇ ಹಾಗೆ, ಬೇಡವೆಂದರೂ, ಕೆದಕಿ, ಕೆಣಕಿ, ಕಾಡುತ್ತವೆ, ಕೆರಳಿಸುತ್ತವೆ. ಧೋ..ಎಂದು ನೆನಪಿನ ಮಳೆಯನ್ನೆ ಸುರಿಸಿ, ಕಣ್ಣಂಚನ್ನು ಒದ್ದೆಯಾಗಿಸುತ್ತವೆ. ಅಂತಹ ನೆನಪೊಂದು ಸದ್ದಿಲ್ಲದೇ ಎದೆಯಾಳದಲ್ಲಿ ಸರಿದಾಡುತ್ತಿದೆ, ನೆನಪುಗಳೊಂದಿಗೆ ಸರಸವಾಡುತ್ತಾ, ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳನ್ನು ಎಳೆಎಳೆದು ಹೊಸ ಮನ್ಮಂತರವನ್ನು ಸೃಷ್ಠಿಸುತ್ತಿದೆ.
ನಾನು ನನ್ನ ಕೆಲಸ ಎಂದು ನನ್ನದೆ ಲೋಕದಲ್ಲಿ ಹೊರ ಜಗತ್ತಿನ ಗಂಧ ಗಾಳಿಯು ಗೊತ್ತಿಲ್ಲದೆ ಇದ್ದ ಹಳ್ಳಿ ಹೈದನಾಗಿದ್ದೆ. ನನಗಾಗ ಧಾರವಾಡ  ಹೊಸ ಪ್ರಪಂಚ. ನಮ್ಮ ಊರಿನಿಂದ ಅಲ್ಲಿಗೆ ಕಲಿಯಲು ಹೋದವರು, ಆವಾಗ ಆವಾಗ ಊರಿಗೆ ಬಂದು ಧಾರವಾಡ ಎಂಬ ಹೊರ ಜಗತ್ತಿನ ಬಗ್ಗೆ ರೋಚಕ ಹಾಗೂ ಸ್ವಾರಸ್ಯಕರ ವಿಷಯಗಳನ್ನು ಹೇಳುತ್ತಿದ್ದರು. ಆಗ್ಲೆ ನನ್ಗೆ ಗೊತ್ತಾಗಿದ್ದು, ಧಾರವಾಡ ಎಂಬ ಸುಂದರ ನಗರಿಯ ತುಸು ಮಾಹಿತಿ. ವಿದ್ಯಾಕಾಶಿ, ನಿವೃತ್ತರ ಸ್ವರ್ಗ, ಕವಿಗಳ ನಾಡು ಎಂಬಿತ್ಯಾದಿ ಹೆಸರುಗಳನ್ನು ಕೇಳುತ್ತಿದ್ದೆ. ಇದೇ ಕಾರಣಕ್ಕೆ ಧಾರವಾಡ ಎಂದರೆ, ಅದೇನೋ ಮೈ-ಮನ ಫುಳಕಿತ್ತವಾಗುತ್ತಿದ್ದವು, ಅದನ್ನು ನೋಡಬೇಕು ಎಂಬ ಆಸೆ  ಹೆಮ್ಮರವಾಗಿ ಬೆಳೆದಿತ್ತು.
   ಇದೇ ಸಮಯಕ್ಕೆ ಪಿಯುಸಿ ಮುಗಿಯಿತು. ರೋಗಿ ಬಯಸಿದ್ದು, ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ನನ್ನ ಕನಸಿನ ಧಾರಾವಾಡದಲ್ಲಿ ಉನ್ನತ ಶಿಕ್ಷಣ ಕಲಿಯಲು ಅವಕಾಶ ದೊರೆಯಿತು. ಹೊಸ ಕನಸು, ಹೊಸ ಭರವಸೆ, ಹೊಸ ಉತ್ಸಾಹ, ಹೊಸ ಛಲಗಳೊಂದಿಗೆ ಧಾರವಾಡ ಎಂಬ ಮೋಹಕ ನಗರಿಗೆ ಪುಟ್ಟ ಮಗುವಾಗಿ ಅಂಬೆಗಾಲಿಟ್ಟೆ. ದಿಟ್ಟ ಹಜ್ಜೆಗಳ ಅಡಿಯಲ್ಲಿ ಧಾರವಾಡವನ್ನು ಅಚ್ಚರಿಯ ಕಣ್ಗಳಲ್ಲಿ ಆಶ್ವಾಧಿಸಲು ಪ್ರಾರಂಭಿಸಿದೆ. ಇಷ್ಟು ಬೇಗ ಧಾರವಾಡ ನನ್ನನ್ನು ತನ್ನೊಡಲಿನ ಮಗುವಾಗಿ ಸ್ವೀಕರಿಸುತ್ತದೆ ಎಂಬ ಕಲ್ಪನೆ ಕೂಡಾ ನನಗೆ ಇರಲಿಲ್ಲ. ಆವಾಗ್ಲೆ ಗೊತ್ತಾಗಿದ್ದು ಧಾರವಾಡಕ್ಕೆ ಎಲ್ಲವನ್ನೂ, ಎಲ್ಲರನ್ನೂ ಒಗ್ಗಿಸಿ, ತಗ್ಗಿಸುವ ತಾಕತ್ತಿದೆ ಎಂದು.
ಧಾರವಾಡದ ಮಳೆ, ಆ ಹಚ್ಚ ಹಸಿರು, ಎಳೆ ಬಿಸಿಲು, ಖಡಕ್ ರೊಟ್ಟಿ, ಜುಬ್ಲಿ ಸರ್ಕಲ್, ಬೇಂದ್ರೆ ಅಜ್ಜನ ಸಾಧನಕೇರಿ, ಶಾಲ್ಮಲೆಯ ಒಡಲು, ಶ್ರೀನಗರ ಸರ್ಕಲ್, ರೈಲ್ವೆ ಟ್ರ್ಯಾಕ್ ಮೇಲೆ ತೆಗೆಸಿದ ಸೆಲ್ಪಿ, ಒಂದೇ ಎರಡೆ ಧಾರಾನಗರಿಯ ನೆನಪುಗಳು, ಬಿಚ್ಚಿಟ್ಟು ಹಂಚಿಕೊಳ್ಳಲಾಗದಷ್ಟು ಎದೆಯಾಳದಲ್ಲಿ ಆಳವಾದ ಕಂದಕವನ್ನು ಸೃಷ್ಠಿಸಿವೆ.
ನಾವು ಯಾವುದೇ ಒಂದು ಸ್ಥಳದಲ್ಲಿ ಇದ್ದಾಗ, ಆ ಸ್ಥಳದ ಮಹಿಮೆ ಗೊತ್ತಾಗುವುದಿಲ್ಲ. ಇದ್ದಾಗ ’ಅಲ್ಲೆನ ಐತಿ ಬಿಡ್’ ಎಂಬ ಉದಾಸೀನ ಮನೋಭಾವನೆಯಿಂದ ಎಲ್ಲವನ್ನು ಅಲಗಳೆಯುತ್ತೆವೆ. ನಾವು ಆ ವಸ್ತು ಅಥವಾ ಸ್ಥಳ ನಮ್ಮನ್ನು ಬಿಟ್ಟು ದೂರ ಹೋದಾಗಲೇ, ಅದರ ನೈಜ ಮಹತ್ವ ಅರಿವಾಗುವುದು. ಇದು ನನ್ನನೊಬ್ಬನ ಮಾನಸಿಕ ಸ್ಥಿತಿ ಅಲ್ಲ. ಇದು ಪ್ರತಿಯೊಬ್ಬ ಮನುಷ್ಯನ ನೈಜ ಸ್ಥಿತಿಯಾಗಿದೆ. ಈಗ ಆಗಿರುವುದು ಅದೇ, ಧಾರವಾಡದಲ್ಲಿ ಇದ್ದಾಗ ಎಲ್ಲವನ್ನು ಉದಾಸಿನ ಮಾಡುತ್ತಾ, ಬರೀ ವಿನಾಃಕಾರಣ ಕಾಲಹರಣ ಮಾಡಿ ವಿದ್ಯಾರ್ಥಿ ಜೀವನ ಮುಗಿಸಿದೆ.
ಇದ್ದ ಅಷ್ಟು ದಿನಗಳು ಧಾರವಾಡ, ಸುಂದರ ಅನುಭವಗಳನ್ನು, ಬದುಕಿನ ಪಾಠವನ್ನು, ಸಮಾಜ ಎದುರಿಸುವ ರೀತಿಗಳನ್ನು ಕಲಿಸಿಕೊಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಗೆಳೆಯಂತೆ, ನಿಂತು ನನ್ನ ತಪ್ಪು-ಒಪ್ಪುಗಳಿಗೆ ಸಲಹೆ ಸೂಚನೆ ನೀಡುತ್ತಾ. ನನ್ನನ್ನು ತಿದ್ದಿ, ತಿಡಿ ಪೋಷಿಸಿದೆ. ಅವ್ವನಂತೆ ಸಾಕಿದೆ, ಅಪ್ಪನಂತೆ ಬೇಕು ಬೇಡಗಳನ್ನು ಆಲಿಸಿ, ಸರಿದಾರಿಯಲ್ಲಿ ಸಾಗುವಂತೆ ಎಚ್ಚರಿಕೆ ನೀಡಿದೆ. ಏನೆಂದು, ಹೇಳಲ್ಲಿ ನನ್ನ ಧಾರಾನಗರಿಯ ಬಗ್ಗೆ. ಏಷ್ಟು ಹೇಳಿದರೂ, ಅದೊಂದು ಮುಗಿಯದ ಕಥೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ, ಊರು ಬಿಟ್ಟು ಬಂದಾಗ ನನ್ನನ್ನು ಸಾಕಿ ಸಲುಹಿದ್ದು ಇದೇ ನನ್ನ ಧಾರವಾಡ.
      ಜೀವನದಲ್ಲಿ ಎಡವದಂತೆ ಎಚ್ಚರಿಸಿದ ಆ ಕಿತ್ತೋದ ರಸ್ತೆಗಳು, ಸದಾ ಹಸಿರು ಹೊದ್ದು ಮಲಗಿ, ಮನಕ್ಕೆ ತಂಪು ನೀಡುತ್ತಿದ್ದ ಕ್ಯಾಂಪಸ್‌ನ ಸಸ್ಯಶಾಲ್ಮಲೆ, ಮೈ-ಕೈಗೆ ಚಳಿ ಬೀಡಿಸಿದ ಆ ಪತ್ರಿಕೋದ್ಯಮದ ದಾರಿ, ಉತ್ಸಾಹ ಮತ್ತು ಪ್ರೋತ್ಸಾಹ ತುಂಬಿದ ಗೆಳೆಯರು, ವೃತ್ತಿ ಬದುಕಿನ ಪಾಠ ಕಲಿಸಿದ ಗುರುಗಳು, ಎಲ್ಲವೂ ಧಾರಾನಗರಿ ಕಟ್ಟಿಕೊಟ್ಟ ಬದುಕಿನ ಅವಿಸ್ಮರಣಿಯ ಕ್ಷಣಗಳು. ಮೊನ್ನೆ ಜಿಟಿ ಮಳೆಗೆ ಹುಡಿಯದ್ದ ಆ ಮಣ್ಣಿನ ಸುವಾಸನೆಯಲ್ಲಿ ಧಾರವಾಡದ ನೆನಪು ಕೂಡಾ ತೇಲಿ ಬಂತು. ಅದು ನನ್ನವಳ ನೆನಪಿನ ಹಾಗೆ.
ಮಂಜುನಾಥ ಗದಗಿನ
ಮೊ,8050753148

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...