ಮಂಜುನಾಥ ಗದಗಿನ
ರಾಮದುರ್ಗ ಹಲವು ಐತಿಹಾಸಿಕ ಸ್ಥಳಗಳ ತವರೂರು. ಕೊಳ್ಳಗಳ ನಾಡು ರಾಮದುರ್ಗ. ಹಲವಾರು ಪೌರಾಣಿಕ ಸ್ಥಳಗಳನ್ನು ಹಾಗೂ ಪ್ರೇಕ್ಷಣಿಯ ಸ್ಥಳಗಳನ್ನು ತನ್ನೊಡಲೊಳಗೆ ಇಟ್ಟುಕೊಂಡಿರುವ ರಾಮದುರ್ಗ ಎಲ್ಲರ ಗಮನ ಸೆಳೆಯುತ್ತಿದೆ. ನೋಡ ಬಯಸಿದಷ್ಟು ಕೌತುಕಗಳು ಇಲ್ಲಿ ಕಾಣ ಸಿಗುತ್ತವೆ.ಶಬರಿಕೊಳ್ಳ:
ಬೆಳಗಾವಿ ಅರೆ ಮಲೆನಾಡು. ಸರ್ವಕಾಲಕ್ಕೂ ತಂಪು ಸೂಸುವ ನೆಲ. ಇನ್ನೂ ಮಳೆಗಾಲ ಬಂತೆಂದ್ರೆ ಸಾಕು ಪ್ರಕೃತಿ ತನ್ನ ಒಯ್ಯಾರದಿಂದಲ್ಲೇ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾಳೆ. ಇದಕ್ಕೆ ಕಾರಣ ಸುತ್ತಲ ಇರುವ ಅನೇಕ ಜಲಧಾರೆಗಳು. ಇವುಗಳಲ್ಲಿ ಸುರೇಬಾನದ ಶಬರಿಕೊಳ್ಳವು ಒಂದು.
ಹೌದು! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಇಂತಹದ್ದೊಂದು ಜಲಧಾರೆ ಇದೀಗ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದು. ಶಬರಿ ದೇವಿ ರಾಮನಿಗಾಗಿ ಕಾಯ್ದಳು ಎಂಬ ಪ್ರತೀತಿ ಇದೆ. ಶಬರಿ ರಾಮನಿಗಾಗಿ ಕಾಯ್ದದ್ದು ಇದೇ ಶಬರಿಕೊಳ್ಳದಲ್ಲಿ. ಇದೇ ಕಾರಣಕ್ಕೆ ಈ ಕ್ಷೇತ್ರಕ್ಕೆ ಶಬರಿಕೊಳ್ಳ ಎಂಬ ಹೆಸರು ಬಂದಿದ್ದು.೨೦೦ ಅಡಿಯಿಂದ ಧುಮ್ಮಿಕ್ಕು ಅಂತರಗಂಗೆಯೊಂದ ಈ ಸ್ಥಳದಲ್ಲಿ ಇದೇ ಎಂಬ ಮಾಹಿತಿ ಬಹುತೇಕ ಜನರಿಗೆ ತಿಳಿದಯ ವಿಷಯವಾಗಿದೆ. ಆದರೆ, ಇಲ್ಲೊಮ್ಮಿ ಭೇಟಿ ನೀಡಿದರೆ ಸಾಕು ಎಂಬ ವ್ಯಕ್ತಿ ಕೂಡಾ ಇಲ್ಲಿಯ ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗದೇ ಇರನು. ಏಕೆಂದ್ರೆ ಸುತ್ತಲು ಬೆಟ್ಟಗುಡ್ಡ, ಇದರೊಟ್ಟಿಗೆ ಝಳು,ಝುಳು ಹರಿವ ಜಲಧಾರೆ. ಒಟ್ಟಿನಲ್ಲಿ ಶಬರಿಕೊಳ್ಳ ಸೌಂದರ್ಯ ಮಾತ್ರ ಅನನ್ಯ.
ಇಲ್ಲಿಯ ಶಬರಿ ದೇವಿ ಸುರೇಬಾನ ಗ್ರಾಮದ ಗ್ರಾಮದೇವತೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ನೆಲೆಸಿದ್ದಾಳೆ. ಈ ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯುತ್ತಿವೆ. ಆದರೆ ಬೇಸಿಗೆಕಾಲದಲ್ಲಿ ಈ ಎರಡು ಹೊಂಡಗಳ ನೀರು ನೆಲಕಚ್ಚಿದ್ದವು. ಆದರೆ ಇದೀಗ ಅಧಿಕ ಮಳೆಯಾಗಿದ್ದರಿಂದ ಅಂತರಗಂಗೆ ಹಾಗೂ ಹೊಂಡಗಳು ಭರಪೂರ ನೀರಿನಿಂದ ಕಂಗೊಳಿಸುತ್ತಿವೆ.
ತೋರಗಲ್ಲ ಕೋಟೆ:
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಬಗ್ಗೆ ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಕೋಟೆ ಕೂಡ ಏಳು ಸುತ್ತಿನ ಕೋಟೆ ಆಗಿತ್ತು ಎಂದು ಹೇಳಲಾಗುತ್ತದೆ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ ಕೋಟೆಯ ಕಥೆ. ಏಳು ಸುತ್ತಿನ ಕೋಟೆ ಇದಾಗಿತ್ತಂತೆ. ಈಗ ಐದು ಆವರಣಗಳನ್ನು ಮಾತ್ರ ಕಾಣಲು ಸಾಧ್ಯ. ನಾಲ್ಕು ದಿಕ್ಕಿನಲ್ಲೂ ಒಂದೊಂದು ಬುರುಜು (ಗೊಮ್ಮಟ) ಇದೆ. ಕೋಟೆ ಪ್ರವೇಶಕ್ಕೆ ಮೊದಲು ನಾಲ್ಕು ದ್ವಾರಗಳು ಇದ್ದವಂತೆ. ಸದ್ಯ ಪೂರ್ವದ ದ್ವಾರ ಮಾತ್ರ ಬಳಕೆಯಲ್ಲಿದೆ. ಒಳಭಾಗದಲ್ಲಿ ಕಟ್ಟೆಯಿದ್ದು, ದಣಿದು ಬಂದವರು ಅರೆಕ್ಷಣ ಕುಳಿತರೆ ಸಾಕು, ಜೋಂಪು (ನಿದ್ರೆ) ಆವರಿಸುತ್ತದೆ. ಒಳಗಿನ ಕಟ್ಟಡವೊಂದರ ಮೇಲೆ ಇಬ್ಬರು ಡುಮ್ಮಣ್ಣರ ಕೆತ್ತನೆಗಳಿವೆ. ಕೋಟೆಯ ಒಳಭಾಗ ಸುಮಾರು ನೂರು ಎಕರೆಯಷ್ಟು ವಿಸ್ತಾರವಾಗಿದೆ. ಮಧ್ಯದಲ್ಲಿರುವ ರಾಜವಾಡೆ ಪ್ರದೇಶವೇ ಐದು ಎಕರೆಗಳಷ್ಟು ದೊಡ್ಡದಾಗಿದೆ. ಪಕ್ಕದಲ್ಲೇ ಭೂತಂಕುಶ ಅರಸ ನಿರ್ಮಿಸಿದ ಭೂತನಾಥ ದೇವಾಲಯ ಇಲ್ಲಿನ ಆಕರ್ಷಣೆ. ಇದು ಚಾಲುಕ್ಯ ಶೈಲಿಯಲ್ಲಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಸುಖಾಸನ ಸಭಾಮಂಟಪ, ೧೨ ಕಂಬಗಳ ನವರಂಗ, ಗರ್ಭಗೃಹದಲ್ಲಿರುವ ಶಿವಲಿಂಗ ಅದರ ಎದುರಿಗೆ ನಂದಿ, ಸುತ್ತಲಿನ ಗೋಡೆಯ ಮೇಲಿನ ಶಿಲ್ಪಕಲೆ ಮನಸೂರೆಗೊಳ್ಳುತ್ತವೆ. ಶಿವ ದೇವಾಲಯ, ದುರ್ಗಾದೇವಾಲಯ, ಗಣಪತಿ ವಿಜಯನಗರ ವಾಸ್ತು ಶೈಲಿಯ ಮಾದರಿಯಲ್ಲಿವೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ. ಈ ಕೋಟೆಯಲ್ಲಿ ಕನ್ನಡ ಹಾಗೂ ಪರ್ಶಿಯನ್ ಭಾಷೆಯ ಶಾಸನಗಳನ್ನು ಕಾಣಬಹುದಾಗಿದೆ. ಸುತ್ತಲ ಪರಿಸರವನ್ನು ಮಲಪ್ರಭೆ ಸುಂದರವನ್ನಾಗಿಸಿದ್ದಾಳೆ.
ಮೇಗುಂಡೇಶ್ವರಕೊಳ್ಳ:
ಇದು ಕೂಡಾ ರಾಮದುರ್ಗ ತಾಲೂಕಿನ ಐತಿಹಾಸಿಕ ಪ್ರೇಕ್ಷಣಿಯ ಸ್ಥಳವಾಗಿದೆ. ರಾಮದುರ್ಗ ಪಟ್ಟಣದಿಂದ ೫-೬ ಕಿಮೀ ದೂರದಲ್ಲಿದೆ ಈ ಸ್ಥಳ. ಇಲ್ಲಿಯೂ ಸರ್ವ ಕಾಲಕ್ಕೂ ಬತ್ತದ ಹೊಂಡವೊಂದಿದೆ. ಇದಕ್ಕೆ ಮೇಗುಂಡೇಶ್ವರಕೊಳ್ಳ ಎಂದು ಕರೆಯುತ್ತಾರೆ. ಇಲ್ಲಿಯ ಜಲವನ್ನು ತೀರ್ಥರೂಪವಾಗಿ ಜನರಿಗೆ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ಇಲ್ಲಿಗೆ ಬಂದ ಜನತೆ ಈ ನೀರನ್ನು ಕೊಡ ಅಥವಾ ಬಾಟಲ್ ಗಳಲ್ಲಿ ತುಂಬಿಕೊಂಡು ತೀರ್ಥ ರೂಪದಲ್ಲಿ ನಿತ್ಯ ಸೇವಿಸುತ್ತಾರೆ.
ಸಿದ್ಧೇಶ್ವರಕೊಳ್ಳ:
ಇಲ್ಲಿರುವ ದೇವಾಲಯ ಚಾಲುಕ್ಯರ ಕಾಲದ್ದು ಎಂದು ಹೇಳಲಾಗುತ್ತಿದೆ. ಹಲವಾರು ಪವಾಡಗಳು ನಡೆದ ಸ್ಥಳ ಇದು. ದೇವಸ್ಥಾನದ ಹಿಂದಗಡೆ ಒಂದು ಜಲಮೂಲವಿದೆ. ಈ ಜಲಮೂಲ ಅನಾದಿ ಕಾಲದಿಂದಲೂ ಬತ್ತಿಲ್ಲ. ಈ ಜಲಮೂಲಕ್ಕೆ ಸಿದ್ದಪ್ಪಜ್ಜನಕೊಳ್ಳ, ಮೇಗುಂಡಪ್ಪನಕೊಳ್ಳ ಎಂದು ಕರೆಯಲಾಗುತ್ತಿದೆ. ಇಲ್ಲಿಯ ನೀರನ್ನೇ ದೇವರ ಅಭಿಷೇಕ, ತೀರ್ಥವನ್ನಾಗಿ ನೀಡಲಾಗುತ್ತಿದೆ.
ಗೊಡಚಿ ವೀರಭದ್ರೇಶ್ವ:
ಬೆಳಗಾವಿಯಿಂದ ೮೦ ಕಿಮೀ ದೂರದ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ದೇವಾಲಯ ನಾಡಿನ ಮನೆ,ಮನದ ಮಾತಾಗಿದೆ. ನಾಡಿನ ಅನೇಕ ಪುಣ್ಯಕ್ಷೇತ್ರಗಳ ಪೈಕಿ ಈ ಗೊಡಚಿ ಕ್ಷೇತ್ರವು ಒಂದು. ತನ್ನದೇ ಇತಿಹಾಸ, ಪರಂಪರೆಯ ಮೂಲಕ ರಾಜ್ಯಾದ್ಯಂತ ಭಕ್ತವೃಂದವನ್ನು ಹೊಂದಿ ಗಮನ ಸೆಳೆಯುತ್ತಿದೆ.ಉತ್ತರಕರ್ನಾಟಕದಲ್ಲಿ ಹಲವಾರು ಪ್ರಮುಖ ಜಾತ್ರೆಗಳು ನಡೆಯುತ್ತಿವೆ ಅವುಗಳಲ್ಲಿ ಉತ್ತರ ಕರ್ನಾಟಕದ ಧರ್ಮಸ್ಥಳ ಎಂದು ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಗೋಡಚಿಯ ವೀರಭದ್ರೇಶ್ವರ ಜಾತ್ರೆಯು ಡಿಸೆಂಬರ ೨೨ರಿಂದ ೫ ದಿನಗಳ ಕಾಲ ನಡೆಯಲಿದೆ. ಗೊಡಚಿ ಕ್ಷೇತ್ರವು ಕರ್ನಾಟಕದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು ಈ ಕ್ಷೇತ್ರದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಅದು ನಮ್ಮ ಅರಿವಿಗೆ ಬರುತ್ತದೆ. ಅದಕ್ಕಾಗಿ ಜಾತ್ರೆಯ ವಿಷಯಕ್ಕಿಂತ ಮೊದಲು ಗೋಡಚಿ ಕ್ಷೇತ್ರದ ಬಗ್ಗೆ ತಿಳಿಸದೆ ಹೋದರೆ ಪ್ರಮಾದವಾಗುತ್ತದೆ. ಗೋಡಚಿ ಕ್ಷೇತ್ರವು ಬಾದಾಮಿ ಚಾಲುಕ್ಯರ ಕೀರ್ತಿವರ್ಮನಿಂದ ಹಿಡಿದು ಕೊಲ್ಹಾಪೂರ ಸಂಸ್ಥಾನದ ಭಾಗಕ್ಕೆ ಶಿ ಕರವೀರಷಿರ ನಾಡೆಂದು ಹೆಸರು ಬಂದಿದೆ ಎಂದು ಗೋಡಚಿ ಗ್ರಾಮದಲ್ಲಿ ದೊರೆತ ತಾಮ್ರಪಟದಲ್ಲಿ ಶಿಕೆತ್ತಿಅರಸಷಿ ಎಂಬುದರಿಂದ ಬಂದಿದೆ ಎಂಬುದು ಇತಿಹಾಸಕಾರರ ಅನಿಸಿಕೆಯಾಗಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಸೇರುವ ಗೋಡಚಿಯ ವೀರಭದ್ರೇಶ್ವರ ಜಾತ್ರೆಯ ವಿಶೇಷವೆಂದರೆ ಬೆಳವಲು(ಬಳೂಲ)ಕಾಯಿ, ಬೋರೆ (ಬಾರಿ) ಹಾಗೂ ಬಾಳೆಹಣ್ಣುಗಳ ಮಾರಾಟ ಈ ಜಾತ್ರೆಯ ವಿಶೇಷವಾಗಿದೆ.
ಶಿವನಮೂರ್ತಿ:
ರಾಮದುರ್ಗ ತಾಲೂಕಿನ ಮೂಳ್ಳೂರ ಬೆಟ್ಟದಲ್ಲಿ ಮೇಲೆ ನಿರ್ಮಾಣ ಗೊಂಡ ೭೮ ಅಡಿ ಎತ್ತರದ ಶಿವನ ಮೂರ್ತಿ ರಾಜ್ಯದ ಎರಡನೇ ದೊಡ್ಡ ಶಿವನಮೂರ್ತಿಯಾಗಿದೆ. ಮುರಡೇಶ್ವರ ಮಾದರಿಯಲ್ಲಿ೧.೫ ಕೋಟಿ ವೆಚ್ಚದಲ್ಲಿ ಬೃಹತ ಶಿವನಮೂರ್ತಿ ಹಾಗೂ ಉದ್ಯಾನವನ ನಿರ್ಮಿಸಿ ೨೦೧೮ರ ಶಿವರಾತ್ರಿ ದಿನದಂದು ಲೋಕಾರ್ಪಣೆ ಮಾಡಲಾಗಿದೆ.ಶಿವನಮೂರ್ತಿ ಕೆಳ ಮಹಡಿಯಲ್ಲಿ ಈಶ್ವರಲಿಂಗುವನ್ನು ಮಧ್ಯಪ್ರದೇಶದ ನರ್ಮಾದ ನದಿಯ ದಡದಲ್ಲಿರುವ ಓಂಕಾರೇಶ್ವರ ದೇವಸ್ಥಾನದಿಂದ ತಂದು ಕೂಡಿಸಲಾಗಿದೆ. ಇದು ಕೂಡಾ ಉತ್ತಮ ಪ್ರೇಕ್ಷಣಿಯ ಸ್ಥಳವಾಗಿದೆ.
---
ಹೋಗುವುದು ಹೇಗೆ?
ಬೆಳಗಾವಿಯಿಂದ ೧೧೦ ಕಿಮೀ ರಾಮದುರ್ಗ ಇದೆ. ಅಲ್ಲಿಂದ ಶಬರಿಕೊಳ್ಳ ೧೪ ಕಿಮೀ ಇದೆ. ರಾಮದುರ್ಗದಿಂದ ಸುರೇಬಾನಕ್ಕೆ ಬಸ್ ಮೂಲಕ ಹಾಗೂ ಬೈಕ್ ಮೂಲಕವೂ ಹೋಗಬಹುದು. ರಾಮದುರ್ಗದಿಂದ ಸುರೇಬಾನದಿಂದ ಶಬರಿಕೊಳ್ಳಕ್ಕೆ ಟಂಟಂ ಇರುತ್ತವೆ. ಆದರೆ, ಶಬರಿಕೊಳ್ಳದಲ್ಲಿ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಊಟದ ವ್ಯವಸ್ಥೆ ಕೂಡಾ ಇಲ್ಲ. ಇನ್ನೂ ರಾಮದುರ್ಗದಿಂದ ತೋರಗಲ್ಲ ಕೋಟೆ ೧೫ ಕಿಮೀ ಇದೆ. ಗೊಡಚಿ ಕೂಡಾ ೧೭ ಕಿಮೀ ಆಗುತ್ತದೆ. ಸಿದ್ಧೇಶ್ವಕೊಳ್ಳ, ಮೇಗುಂಡೇಶ್ವರಕೊಳ್ಳ ೧೦ ಕಿಮಿ ಆಗುತ್ತದೆ. ಆದರೆ, ಎಲ್ಲಿವೂ ಉಳಿದುಕೊಳ್ಳುವ ಹಾಗೂ ಊಟದ ವ್ಯವಸ್ಥೆ ಇಲ್ಲ.