-
ಮಂಜುನಾಥ ಗದಗಿನ
ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರು ಹಲವರು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಗೋವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರಾನಂತರೂ ಮದುವೆಯಾಗದೇ ದೇಶಕ್ಕಾಗಿ ದುಡಿದು ಮಡಿದ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ ಅಣ್ಣು ಗುರೂಜಿ(ಬಾಳಕೃಷ್ಣ).
ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಎಲ್ಲೆಡೆ ವ್ಯಾಪಕವಾಗಿತ್ತು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ನಾಯಕರು ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸುವ ಭಾಷಣಗಳನ್ನು ಅಲ್ಲಲ್ಲಿ ಮಾಡುತ್ತಿದ್ದರು. ಹೀಗಾಗಿ ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಇಲ್ಲಿಂದ ಅವರು ಖಾದಿಯನ್ನೇ ಉಡಲು ಆರಂಭಿಸಿದರು. ಅವರ ತಾಯಿ ಕೂಡಾ ಖಾದಿ ಸೀರೆ ಮಾತ್ರ ಉಡುತ್ತಿದ್ದರು. ಇವರು ೧೯೦೫ರಲ್ಲಿ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಜನಿಸಿದರು. ೧೫ನೇ ವಯಸ್ಸಿನಲ್ಲೇ ತಂದೆ ಕಳೆದುಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬೆಳಗಾವಿಗೆ ಆಗಮಿಸಿದರು. ಇಲ್ಲಿ ಮರಾಠಿ ಭಾಷೆ ಕಲಿತು ೧೨ ರು.ಗೆ ಕಾರಕೂನ ಆಗಿ ಕೆಲಸ ಆರಂಭಿಸಿದರು. ಇದೇ ವೇಳೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕರ್ನಾಟಕ ಗಂಗಾಧರರಾವ್ ದೇಶಪಾಂಡೆ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು. ಇದರಿಂದ ಕೂಪಿತರಾದ ಅಣ್ಣು ಗುರೂಜಿ ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದರು.
ರಾಷ್ಟ್ರೀಯ ಶಾಲೆ ಆರಂಭ:
ಸಾತಂತ್ರ್ಯ ಹೋರಾಟಗಾರರಿಗೆ ಧೈರ್ಯ ಹಾಗೂ ರಾಷ್ಟ್ರೀಯ ಮನೋಭಾವ, ನೈತಿಕಗುಣಮಟ್ಟ ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಈ ಶಾಲೆಗೆ ಅವರೇ ಪಾಠ ಮಾಡುತ್ತಿದ್ದರು. ಈ ಶಾಲೆ ಬರೋಬ್ಬರಿ ಮೂರು ವರ್ಷ ಕಾಲ ನಡೆದು ನಂತರ ಸ್ಥಗಿತಗೊಂಡಿತು. ಅಲ್ಲಿವರೆಗೂ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡಿದೆ. ಈ ಶಾಲೆಯಿಂದಲೇ ಬಾಳಕೃಷ್ಣ ಇದ್ದ ಅವರು ಹೆಸರು ಅಣ್ಣು ಗುರೂಜಿ ಎಂದಾಯಿತು. ೧೯೨೪ರಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾರ್ಯಕರ್ತರಾಗಿ ಪಾಲ್ಗೊಂಡಿದ್ದರು. ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದರು.
ಜೈಲುವಾಸ:
ಬ್ರಿಟಿಷ್ ಸರ್ಕಾರದ ನಡೆಗಳನ್ನು ವಿರೋಧಿಸಿದಕ್ಕಾಗಿ ಅಣ್ಣು ಗುರೂಜಿ ಅವರು ಹಿಂಡಲಗಾ, ಯರವಾಡ ಸೇರಿದಂತೆ ಅನೇಕ ಜೈಲುಗಳಲ್ಲಿ ಬಂಧಿಯಾಗಿದ್ದರು. ಇನ್ನೂ ಉಪ್ಪಿನ ಸತ್ಯಾಗ್ರಹಕ್ಕೆ ಗಾಂಧೀಜಿ ಅವರು ಕರೆ ನೀಡಿದಾಗ ಇವರು ಮುಂಚೂಣಿಯಲ್ಲಿ ನಿಂತು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಈ ವೇಳೆ ಬಂಧನಕ್ಕೊಳಗಾಗಿ ಒಂಬತ್ತು ತಿಂಗಳು ಸೆರೆವಾಸ ಕೂಡಾ ಅನುಭವಿಸಿದರು. ಜೈಲಿನಲ್ಲೇ ಇದ್ದುಕೊಂಡು ಇಂಗ್ಲಿಷ್ ಕೂಡಾ ಕಲಿತರು.ನಂತರ ದಿನಗಳಲ್ಲಿ ಬ್ರಿಟಿಷ್ ಸರ್ಕಾರದ ಪ್ರತಿಯೊಂದು ದುರಾಡಳಿತ ನೀತಿಗಳನ್ನು ವಿರೋಧಿಸುತ್ತಾ ಜನಜಾಗೃತಿ ಮೂಡಿಸಲು ಆರಂಭಿಸಿದರು.
ಯುವಕರಲ್ಲಿ ಕಿಚ್ಚು ಹೆಚ್ಚಿಸಿದರು:
ಗಾಂಧೀಜಿ ಅವರ ಅನುಯಾಯಿ ಆಗಿದ್ದ ಇವರು ಗಾಂಧೀಜಿ ಅವರು ಕರೆ ನೀಡುತ್ತಿದ್ದ ಪ್ರತಿಯೊಂದು ಚಳವಳಿಯಲ್ಲೂ ಮುಂದಾಳತ್ವ ವಹಿಸಿಕೊಂಡು ಯಶಸ್ವಿಯಾಗಿಸುತ್ತಿದ್ದರು. ಸ್ವದೇಶಿ ವಸ್ತುಗಳ ಪ್ರಚಾರ, ವಿದೇಶಿ ವಸ್ತುಗಳ ಬಹಿಷ್ಕಾರ, ಶೆರೆ ಅಂಗಡಿಗಳ ಮುಂದೆ ಪಿಕೆಟಿಂಗ್, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ನಾ.ಸು.ಹರ್ಡೇಕರ ಮಂಜಪ್ಪ ಅವರು ಆರಂಭಿಸಿದ್ದ ಹಿಂದುಸ್ತಾನ ಸೇವಾದಳ ಸೇರಿದರು. ಈ ಮೂಲಕ ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಲತುಂಬಿದರು.ಇಷ್ಟೇ ಅಲ್ಲದೇ ೧೯೩೭ರಲ್ಲಿ ಹುದಲಿ ಗ್ರಾಮದಲ್ಲಿ ಗಾಂಧಿ ಸೇವಾ ಸಂಘವನ್ನು ಸ್ಥಾಪಿಸಿ ಅಸ್ಪಶತೆ ನಿವಾರಣೆಗೆ ಶ್ರಮಿಸಿದರು.
ಪಿತೂರಿ ಮೂಲಕ ಬಂಧನ:
೧೯೪೭ರ ಚಲೇಚಾವ ಚಳವಳಿ ಮೂಲಕ ದೇಶದ ಸ್ವಾತಂತ್ರ್ಯದ ಹೋರಾಟ ವೇಗ ಪಡೆದುಕೊಂಡಿತು. ಈ ವೇಳೆ ಸರ್ಕಾರಿ ಕಚೇರಿ, ಪೊಲೀಸ್ ಠಾಣೆಗಳನ್ನು ಸುಡುವುದು, ರೈಲುಗಳ ಧ್ವಂಸ, ಸರ್ಕಾರಿ ಖಜಾನೆ ಲೂಟಿ ಹೀಗೆ ಕಿಚ್ಚು ಹೆಚ್ಚಿತು. ಈ ವೇಳೆ ಅಣ್ಣು ಗುರೂಜಿ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಈ ವೇಳೆ ಅವರ ಕಾರ್ಯಕ್ಷೇತ್ರ ಪಾಶ್ವಾಪುರದಲ್ಲಿ ಅವರ ತಂಡ ಅಡಗಿದೆ ಎಂಬ ಸುದ್ದಿ ತಳಿದು ಬ್ರಿಟಿಷರು ಗುಂಡಿನ ಮಳೆಗರೆದರು. ಈ ವೇಳೆ ಕೆಲವು ಮೃತಪಟ್ಟರು. ಇವರಲ್ಲಿ ಅಣ್ಣು ಗುರೂಜಿ ಅವರು ಮೃತಪಟ್ಟರು ಎಂದು ಬ್ರಿಟಿಷರು ಸಂತಸಪಟ್ಟರು. ಆದರೆ, ಅಣ್ಣು ಗುರುಜಿ ಮತ್ತಿತ್ತರು ಅಲ್ಲಿಂದ ಪರಾರಿಯಾಗಿದ್ದರು. ಈ ಸುದ್ದಿ ತಿಳಿದ ಬ್ರಿಟಿಷರು ಅಣ್ಣು ಗುರೂಜಿ ಹಾಗೂ ಅವರ ಜೊತೆ ಇದ್ದರನ್ನು ಹಿಡಿದುಕೊಟ್ಟರೆ ₹೫ ಸಾವಿರ ಕೊಡುವುದಾಗಿ ಘೋಷಣೆ ಮಾಡಿದರು. ಅನ್ಯರ ಪಿತೂರಿ ಮೂಲಕ ವಿಜಯಪುರದಲ್ಲಿ ಅಣ್ಣು ಗುರೂಜಿ ಬ್ರಿಟಿಷರ್ ಸೆರೆಯಾಗಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ನಂತರ ಬಿಡುಗಡೆಯಾಗಿ ಕೃಷಿ, ಕರ್ನಾಟಕ ಏಕೀಕರಣ, ಕನ್ನಡ ಸಂಘಟನೆ ಮಾಡಿ ೨೪-೦೭-೧೯೯೦ರಲ್ಲಿ ನಿಧನರಾದರು.