"ಪೈಲ್ವಾನ್" ಕಿಚ್ಚ ಸುದೀಪ ಅಭಿನಯದ ಸದ್ಯದ ಬಾಕ್ಸ್ ಆಫೀಸನಲ್ಲಿ ಧೂಳ್ ಎಬ್ಬಿಸುತ್ತಿರುವ ಚಿತ್ರ. ಇಂತಹ ದೊಡ್ಡ ಚಿತ್ರದಲ್ಲಿ ಹಳ್ಳಿಯಿಂದ ಬಂದ ಪ್ರತಿಭೆಯೊಂದು ಕರುನಾಡಿನ ಜನರನ್ನು ತನ್ನ ಅಮೋಘ ಅಭಿನಯದ ಮೂಲಕ ನಗೆಗಡಲಿ ತೇಲುವಂತೆ ಮಾಡಿದೆ.
ಹೌದು!ಅವರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಅಪ್ಪಣ್ಣ(ಅಪ್ಪು) ರಾಮದುರ್ಗ.
ರಂಗಭೂಮಿಯಿಂದ ಬಂದ ಪ್ರತಿಭೆಯೊಂದು ಕನ್ನಡ ಚಿತ್ರರಂಗದಲ್ಲಿ ತನ್ನ ಅಭಿನಯದ ಮೂಲಕ ಛಾಪು ಮೂಡಿಸುತ್ತಿದೆ ಅಂದ್ರೆ ಸಣ್ಣ ಮಾತಲ್ಲ. ಪೈಲ್ವಾನ್ ಚಿತ್ರದಲ್ಲಿ ಸುದೀಪ ಪ್ರಥಮ ಹಿರೋ ಆಗಿ ನಟಿಸಿದ್ದರೆ, ಅಪ್ಪಣ್ಣ ಆ ಚಿತ್ರದ ಎರಡನೇ ಹಿರೋ ಆಗಿ ಎಲ್ಲರ ಮನಸ್ಸು ಗೆದ್ದು ನಾಡಿನ ಮನೆ ಮನದ ಮಾತಾಗಿದ್ದಾರೆ. "ಪಂಚ ಡೈಲಾಗ್ ಮೂಲಕ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ನಿರ್ದೇಶಕ ಕೃಷ್ಣ ಅವರು ನನಗೆ ಅವಕಾಶ ಕೊಟ್ಟು ಬೆನ್ನು ತಟ್ಟಿದ್ದು, ಸುದೀಪ್ ಸರ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವ ಸೇರಿದಂತೆ ಅನೇಕ ನಟರೊಂದಿಗೆ ನಟಿಸಿದ್ದು ನನ್ನ ಬದುಕಿನ ಸಾರ್ಥಕತೆ ಅಂತಾ ಭಾವಿಸುತ್ತೇನೆ ಎನ್ನು ಇವರ ಮಾತುಗಳೇ ಹೇಳುತ್ತವೆ ಇವರ ಹೃದಯ ವೈಶಾಲತೆ ಹಾಗೂ ಅದ್ಭುತ್ ನಟ ಎಂದು.
ಅಪ್ಪಣ್ಣ ನಾಲ್ಕು ವರ್ಷವರಿದ್ದಾಗ ಅವರ ತಂದೆ ತೀರಿಕೊಂಡರು. ಆವಾಗ ಅಪ್ಪಣ್ಣ ಅವರ ತಾಯಿಗೆ ಪ್ರಪಂಚ ಎಂದರೆ ಏನು ಎಂಬ ಅರಿವೇ ಇರಲಿಲ್ಲ. ಇಂತಹ ಸಮಯದಲ್ಲೂ ಆ ತಾಯಿ ನಾಲ್ಕು ಜನರ ಮನೆಯ ಮುಸುರೆ ತಿಕ್ಕಿ ತನ್ನ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಸಾಕಿ ಸಲುಹಿದರು. ಆದರೆ, ಅಪ್ಪಣ್ಣ ಮಾತ್ರ ತರ‌್ಲೆ ಮಾಡಿಕೊಂಡು, ಅವರಿವರನ್ನು ನಗಿಸುತ್ತಾ ಇದ್ದರು. ಆದರೆ, ಅಪ್ಪಣ್ಣ ಅವರ ತಾಯಿಗೆ ಮಾತ್ರ ಇದು ಇಷ್ಟವಾಗದೇ ಪ್ರತಿದಿನ ಬೈಯುತ್ತಿದ್ದರು. ಆದರೆ, ರಾಮದುರ್ಗ ಕಲಾವಿದರಾದ ಅಂತಾಪುರ ಬಾಬು ಹಾಗೂ ಅಶೋಕ ಗೋನಬಾಳ ಅವರು, ಅಪ್ಪಣ್ಣವರ ಈ ತರ‌್ಲೆ ತುಂಟಾಟದಲ್ಲಿ ಇದ್ದ ಆ ಒಂದು ಹಾಸ್ಯವನ್ನು ಗುರುತಿಸಿ, ಅಪ್ಪಣ್ಣನ ನಿನ್ನಲ್ಲಿ ಒಂದು ಅಗಾಧ ಹಾಸ್ಯ ಕಲೆ ಇದೆ. ಈ ಕಲೆಯನ್ನು ಹಾಳು ಮಾಡಿಕೊಳ್ಳಬೇಡ ಎಂದು ಪ್ರೋತ್ಸಾಹಿಸಿದರು. ಆವಾಗ ಅಪ್ಪಣ್ಣ ಅವರಿಗೆ ಒಳಿತು ಎಂದು ಕಾಣಿಸಿತು. ನಂತರ ಗುರುಗಳಾದ ಅಂತಾಪುರ ಬಾಬು ಅವರ ಸಹಾಯದಿಂದ 2015ರಲ್ಲಿ ನಿನಾಸಂನಲ್ಲಿ ಡಿಪ್ಲೋಮಾ ಇನ್ ಆರ್ಟ್ ತರಬೇತಿಗೆ ಸೇರಿಕೊಂಡರು. ಅಲ್ಲಿ ಉತ್ತಮ ತರಬೇತಿ ಪಡೆದುಕೊಂಡು ಅದ್ಭುತ ಕಲಾವಿದರಾಗಿ ಹೊರಹೊಮ್ಮಿದರು. ನಂತರ ಆಟಮಾಟ ಆಶ್ರಯದಲ್ಲಿ ಅಕ್ರಮ ಸಂತಾನ ಎಂಬ ನಾಟಕ ಪ್ರದರ್ಶನ ಮಾಡಿದರು. ಇದು ಭರ್ಜರಿ ಹಿಟ್ ಆಗಿ ಅಪ್ಪಣ್ಣ ಅವರಿಗೆ ಹೆಸರು ತಂದು ಕೊಟ್ಟಿತು. ಅನಂತರ ಅಪ್ಪು ಅವರ ಹಿಂದೆಯೇ ಅದೃಷ್ಟದ ಬಾಗಿಲು ತೆರೆಯುತ್ತಾ ಬಂದಿತು. ಇದು ಸಾಧ್ಯವಾಗಿದ್ದು ಕಲಾ ದೇವತೆಯಿಂದ ಎನ್ನುತ್ತಾರೆ ಅಪ್ಪು ರಾಮದುರ್ಗ. ಆದರೆ, ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಬಡತನ ಕಲಿಸುತ್ತದೆ ಎಂಬ ಮಾತು ಅಪ್ಪಣ್ಣ ಅವರಿಗೆ ಒಪ್ಪುವಂತಹದ್ದು, ಯಾಕಂದರೆ ಇವರು ಬಡತನದಲ್ಲಿ ಬೆಳೆದ ಪ್ರತಿಭೆ.