ಮಳೆಗಾಲ ಬರೈತಿ ಅನ್ನೋ ತಿಂಗ್ಲ ಮುಂಚಿತವಾಗಿಯೇ ಜಂತಿ ಮನೆ ರಿಪೇರಿ ಕಾಮಗಾರಿ ಚಾಲೋ ಆಗತಿತ್ತ. ಯಾಕಂದ್ರ ನೆಮ್ಮದಿಯಿಂದ ಮಳೆಗಾಲ ಮುಗಿಸಬೇಕಲ್ಲ ಅದ್ಕ. ಮಳೆ ಆರಂಭಕ್ಕೂ ಮುನ್ನ ಜಂತಿ ಮನಿ ಮಾಳಿಗಿಗೆ ಮಣ್ಣ ಹಾಕಿ ಮನೆಯನ್ನ ಸದೃಢವನ್ನಾಗಿಸುವುದು ಮೊದಲ ಕಾರ್ಯ. ಹೀಗಾಗಿ ಅಪ್ಪ ಮಟ್ಟಿ ಮಣ್ಣು ಅಥವಾ ಹೆಂಟಿ ಮಣ್ಣು ಹಾಕಿಸಲು ಆಡರ್ರ್ ಕೊಡ್ತಾ ಇದ್ದ. ಅದು ಒಂದು ಎತ್ತಿ ಬಂಡಿ ಎಷ್ಟು ಮಣ್ಣು. ಈ ಮಣ್ಷು ಹಾಕಿಸಲು ಅದೇಷ್ಟೋ ಬಾರೀ ಚೌಕಾಸಿ ಬೇರೆ. ಕೊನೆಗೆ ೧೦, ೨೦ ರುಪಾಯಿ ಕಡಿಮೆ ಮಾಡಿ ಮನೆಯ ಅಂಗಳಕ್ಕೆ ಮಣ್ಣು ಬಿದ್ದಿರುತಿತ್ತು.
ಹೀಗೆ ಬಿದ್ದ ಮಣ್ಣಮ್ನ ಜಂತಿ ಮನಿಯ ಮಾಳಿಗೆ ಕಾಣಿಸುವುದೇ ಹರ ಸಾಹಸವಾಗಿತ್ತು. ಯಾಕಂದ್ರೆ ನಮ್ಮ ಮನೆಗೆ ಮಾಳಿಗೆಗೆ ಹೋಗಲು ಮೆಟ್ಟಿಲು ಇರಲಿಲ್ಲ. ಇದರ ಬದಲಾಗಿ ಏಣಿ ಸಹಾಯದಿಂದ ಮಾಳಿಗೆಗೆ ಮಣ್ಣು ಹಾಕುವ ಕಾರ್ಯ ಮಾಡಬೇಕಾಗಿತ್ತು. ಅದೊಂದು ವರ್ಷ ನಾನು, ಅವ್ವ, ಅಪ್ಪ ಮೂವರೇ ಮಾಳಿಗೆಗೆ ಮಣ್ಣು ಹಾಕುತಿದ್ದೇವು. ಏಕಾಏಕಿ ಏಣಿಯ ಹಲ್ಲು ಮುರಿದು ಅಪ್ಪನ ಕಾಲಿಗೆ ಗಾಯವಾಗಿತ್ತು. ಇದಾದ ನಂತರದ ಏಣಿಯ ಕಾಲು ಹಿಡಿದು ಮಾಳಿಗೆಗೆ ಮಣ್ಣು ಹಾಕುತಿದ್ದೇವು. ಇನ್ನು ಕೆಲವು ಸಾರಿ ಓಣಿಯ ಎರಡ್ಮೂರು ಜನರನ್ಮು ಕರೆದು ಮಾಳಿಗಿಗೆ ಮಣ್ಣು ಹಾಕುತಿದ್ದೇವು.
ಮಾಳಿಗೆ ಮಣ್ಣು ಕಂಡರೆ ಮುಗಿತು ಎನ್ನುವಂತಿಲ್ಲ. ಅದರ ಅಸಲಿಯತ್ತು ನಂತರ ತಿಳಿತಾಯಿತ್ತು. ಯಾಕಂದ್ರ ಹಾಕಿದ ಮಣ್ಣು ಸರಿ ಇದ್ರ ಮಾಳಗಿ ಗಟ್ಟಿ ಆಗ್ತಾ ಇತ್ತು. ಇಲ್ಲಂದ್ರ ಮಾಳಿಗಿ ತುಂಬ ಕಾಂಗ್ರೆಸ ಕಸ ಬೆಳೆದು ಅದನ್ನು ಕೀಳುವುದೇ ಕಾಯಕವಾಗಿ ಬಿಡುತಿತ್ತು. ಒಂದು ವೇಳೆ ಮಣ್ಣು ಸರಿ ಇಲ್ಲದೇ ಮಾಳಿಗೆ ಮೇಲೆ ಕಸ ಬೆಳೆದರೆ ಆ ವರ್ಷದ ಮಳೆಗಾಲ ಆ ದೇವರಿಗೆ ಪ್ರೀತಿ ಅನ್ನುವಂತಾಗುತಿತ್ತು. ಯಾಕಂದ್ರೆ, ಕಸ ಕಿತ್ತು ವಾರದಲ್ಲೇ ಮತ್ತೆ ಕಸ ಬೆಳೆಯಲು ಆರಂಭಿಸುತಿತ್ತು. ಹೀಗೆ ಕಸ ಕಿತ್ತು ಕಿತ್ತು ಮಾಳಿಗೆ ಸಡಿಲಗೊಂಡು ಮಳೆಯಾದರೆ ಮನೆಯಲ್ಲ ಸೂರಿ ಜೀವನ ನರಕವಾಗಿ ಬಿಡುತಿತ್ತು. ಮಾಳಿಗೆ ಹತ್ತಿ ಆ ಮಣ್ಣನ್ನು ಕಾಲಿಲೇ ತುಳಿದು ಭದ್ರ ಮಾಡುವುದರಲ್ಲೇ ಕಣ್ಣಿರೇ ಮಳೆಯಾಗಿ ಸುರಿದು ಬಿಡುತಿದ್ದವು..
ಮಳೆಗಾಲ ಆರಂಭವಾದೊಡನೆ ಮನೆಗೆ ಗೋಡೆ, ಜಂತಿಗಳು ಕಣ್ಣೀರು ಸುರಿಸಲು ಆರಂಭ ಮಾಡುತಿದ್ದವು.....
-ಮಂಜುನಾಥ ಗದಗಿನ
ಮುಂದುವರೆಯುವುದು...