ರಾಜ್ಯದ ಪ್ರಮುಖ ನಗರಿಗಳಲ್ಲೊಂದಾಗಿರುವ ಹುಬ್ಬಳ್ಳಿಯಲ್ಲಿ ಐತಿಹಾಸಿಕ ದೇವಾಲಯಗಳು ಅಗೋಚರವಾಗಿ ಉಳಿದಿರುವುದು ಇತಿಹಾಸ ಪ್ರಜ್ಞೆಯ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯಲ್ಲಿಯೂ ಇಷ್ಟೊಂದು ಹಳೇಯದಾದ ದೇಗುಲಗಳು ಇವೆ ಎಂಬುದು ಬಹುತೇಕ ಜನರಿಗೆ ಅರಿವು ಇದ್ದರೂ ಅವುಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಿಕೊಡುವಲ್ಲಿ ಅಡಳಿತ ಮತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಸಾವಿರ ವರ್ಷಗಳ ಇತಿಹಾಸವುಳ್ಳ ದೇವಾಲಯವೊಂದು ಹುಬ್ಬಳ್ಳಿಯ ಮೂಲಸ್ಥಾನವಾದ ಹಳೇಹುಬ್ಬಳ್ಳಿಯ ಕಿಲ್ಲೆಯಲ್ಲಿ ಇದೆ ಎಂಬುದು ಅಲ್ಲಿರುವ ಜನರಿಗೆ ತಿಳಿಯದ ಸಂಗತಿಯಾಗಿದೆ.
ಹುಬ್ಬಳ್ಳಿಯ ಹಳೇಬಸ್ ನಿಲ್ದಾಣದಿಂದ 3ಕಿ.ಮೀ ದೂರದಲ್ಲಿರುವ ಹಳೇಹುಬ್ಬಳ್ಳಿಯ ಇಂಡಿಪಂಪ ಸರ್ಕಲ್ ಹತ್ತಿರದ ದಿಡ್ಡಿ ಓಣಿ ಪ್ರವೇಶಿಸಿ ಸ್ಪಲ್ಪ ಮುಂದೆ ಸಾಗಿದರೆ, ಕಾಣಸಿಗುವುದೇ ಸಾವಿರ ವರ್ಷ ಇತಿಹಾಸವುಳ್ಳ ಭವಾನಿಶಂಕರ ಎಂಬ ಭವ್ಯ ದೇವಾಲಯ.
ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಈ ದೇವಾಲಯವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೂ ಈ ದೇವಾಲಯವನ್ನು ಗಮನಿಸಿದರೆ ಇದು ಪ್ರಾಚ್ಯವಸ್ತು ಇಲಾಖೆಗೆ ಸೇರೆದೇಯೇ? ಎಂಬ ಅನುಮಾನ ಕಾಡುತ್ತದೆ. ಇಲ್ಲಿ ‘ಇಲ್ಲ’ಗಳದ್ದೇ ದರ್ಬಾರು. ಒಂದು ಕೌಂಪೌಂಡ್ ಇಲ್ಲ, ದೇವಾಲಯದ ರಕ್ಷಣೆಗೆ ಯಾವುದೇ ಸಿಬ್ಬಂದಿ ಇಲ್ಲ, ಸೂಕ್ತ ನಿರ್ವಹಣೆ ಹಾಗೂ ಸೌಲಭ್ಯಗಳು ಇಲ್ಲದೇ ದೇವಾಯಲ ಹಾಳುಕೊಂಪೆಯಾಗಿರುವುದೇ ಇದಕ್ಕೆ ಸಾಕ್ಷಿ.
ದೇವಾಲಯ ಇರುವಿಕೆಯನ್ನು ತೋರಿಸಬೇಕಾದ ಮಾರ್ಗಸೂಚಿಗಳೆ ಈ ದೇವಾಲಯಕ್ಕೆ ಇಲ್ಲದೇ ಇರುವಾಗ, ಈ ದೇವಾಲಯ ಹೊರ ಜಗತ್ತಿಗೆ ಹೇಗೆ ಪರಿಚಯವಾಗಬೇಕು? ಮಾರ್ಗಸೂಚಿ ಫಲಕ ಹಾಕಿ ಐತಿಹಾಸಿಕ ದೇವಾಲಯವೊಂದು ಈ ಪ್ರದೇಶದಲ್ಲಿದೆ ಎಂದು ತಿಳಿಸಬೇಕಾದ ಮಹಾನಗರ ಪಾಲಿಕೆ, ಪ್ರಾಚ್ಯವಸ್ತು ಇಲಾಖೆ ಜಾಣಮೌನ ವಹಿಸಿರುವುದು ಐತಿಹಾಸಿಕ ದೇವಾಲಯ ನೇಪಥ್ಯಕ್ಕೆ ಸರಿದಿದೆ.
ಎಲ್ಲೆಂದರಲ್ಲಿ ಕಸ..
ಇತಿಹಾಸ ಸಾರಬೇಕಾದ ದೇವಾಲಯಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದೇ, ದೇವಾಸ್ಥನ ಆವರಣ ಕಸದಿಂದ ತುಂಬಿಕೊಂಡು ಮಲಿನವಾಗಿದೆ. ಇನ್ನೂ ಕಂಪೌಂಡ್ ಇಲ್ಲದೇ ಇರುವುದರಿಂದ ಹಂದಿ, ನಾಯಿಗಳಿಗೆ ಇಲ್ಲಿ ಮುಕ್ತ ಪ್ರವೇಶವಿದೆ. ಅವುಗಳು ಕೂಡ ತಮ್ಮ ಕ್ರಿಯೆಗಳನ್ನು ಆವರಣದಲ್ಲೆ ಮಾಡತ್ತಿವೆ. ಆವರಣದ ಸುತ್ತಲೂ ಗಿಡ ಗಂಟೆಗಳು ಬೆಳೆದು ನಿಂತಿರುವುದು ದೇವಾಲಯ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂಬುದನ್ನು ಸಷ್ಟಪಡಿಸುತ್ತದೆ.
ಅವಶೇಷಗಳ ಅವ್ಯವಸ್ಥೆ
ಇತಿಹಾಸವನ್ನು ಅನಾವರಣ ಮಾಡುವ ಈ ದೇವಾಲಯದ ಅವಶೇಷಗಳು ಗಿಡ-ಗಂಟೆಗಳಲ್ಲಿ ಅನಾಥವಾಗಿ ಬಿದ್ದಿವೆ. ಈ ಅವಶೇಷಗಳನ್ನು ಸಂರಕ್ಷಿಸುವ ಕೆಲಸವನ್ನು ಯಾರು ಮಾಡುವರು ಎಂದು ಆ ಭವಾನಿ ಶಂಕರನನ್ನೇ ಕೇಳಬೇಕು. ದೇವಾಲಯವು ತನ್ನದೇ ಟ್ರಸ್ಟ್ ಹೊಂದಿದ್ದು, ಅದು ಹೆಸರಿಗೆ ಮಾತ್ರ ಟ್ರಸ್ಟ ಎಂಬಂತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ವಿಶಿಷ್ಟ ದೇವಾಲಯ
ಸುಮಾರು 1000 ವರ್ಷಗಳ ಹಿಂದೆ ಬಾದಾಮಿ ಚಾಲುಕ್ಯರ ಭುವನೇಕ ಮಲ್ಲನೆಂಬಅರಸ ಈ ದೇವಾಲಯಕ್ಕೆ ಭೂಮಿಧಾನ ಮಾಡಿದ್ದಾನೆ ಎಂದು ಶಿಲಾಶಾಸನವೊಂದು ಉಲ್ಲೇಖಿಸಿದೆ(ಈಗ ಈ ಶಾಸನ ಮುಂಬಯಿನ ಪ್ರಿನ್ಸ್ ಆಫ್‌ವೇಲ್ಸ ವಸ್ತು ಸಂಗ್ರಹಾಲಯದಲ್ಲಿ ಇದೆಯಂತೆ). ಈ ದೇವಾಯಲವನ್ನು ಯಾರು? ಯಾವಾಗ? ಕಟ್ಟಿಸಿದರು ಎಂಬ ಮಾಹಿತಿಗಳು ದೊರಕಿಲ್ಲ. ಇದು ಮೂರು ಶಿಖರಗಳುಳ್ಳ ತ್ರಿಕೂಟ ಹಾಗೂ ಪಂಚಾಯತನ್(ಈಶ್ವರ, ನಾರಾಯಣ, ವಿಷ್ಣು, ಗಣಪತಿ, ಸೂರ್ಯ, ಪಾರ್ವತಿ ಇರುವ) ದೇವಾಲಯದ ತ್ರಿಕೂಟದ ಕೆಳಗೆ ಮೂರು ಗರ್ಭಗಳಿದ್ದು ಅಲ್ಲಿ ಈಶ್ವರ, ನಾರಾಯಣ, ಗಣಪತಿ ದೇವರುಗಳನ್ನು ಪ್ರತಿಪ್ಠಾಪಿಸಲಾಗಿದೆ. ಸಪ್ತ ಮಾತೃಕೆಯರಾದ ಬ್ರಾಹ್ಮಿ, ವೈಷ್ಣವಿ, ಮಹೇಶ್ವರಿ, ಇಂದ್ರಾಣಿ, ಕಾತ್ಯಾಯನಿ, ಚಾಮುಂಡಿ ಶಕ್ತಿ ದೇವತೆಗಳನ್ನು ಒಂದೇ ಸೂರಿನಲ್ಲಿ ಕಾಣಬಹುದು. ದೇಶದಲ್ಲೆ ಅಪರೂಪವಾದ ಸೂರ್ಯ ದೇವರ ಮೂರ್ತಿಯನ್ನು ಇಲ್ಲಿ ಕಾಣಬಹುದಾಗಿದೆ. ಗರ್ಭಗುಡಿಯ ಬಾಗಿಲುಗಳ ಮೇಲೆ ರಂಜು(ಹಗ್ಗ), ರತ್ನ,ಮಧ್ಯದಲ್ಲಿ ಗಜಲಕ್ಷ್ಮಿಯರನ್ನು ಸುಂದರವಾಗಿ ಕೆತ್ತಲಾಗಿದೆ. ಇದೇ ಕಾರಣಕ್ಕೆ ಈ ದೇವಾಲಯವನ್ನು ಜಕಣಾಚಾರ್ಯ ಶೈಲಿ ಎಂದು ಕರೆಯುತ್ತಾರೆ. ಎರಡು ವರ್ಷಗಳ ಹಿಂದೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಈ ದೇವಾಯಲಕ್ಕೆ 11ಲಕ್ಷ ರೂ. ಗಳನ್ನು ನೀಡಿ ಜೀರ್ಣೋದ್ದಾರ ಮಾಡಿಸಿದ್ದಾರೆ. ವರ್ಷದ ಹಿಂದೆ ಪ್ರಾಚ್ಯವಸ್ತು ಇಲಾಖೆ 40 ಲಕ್ಷ ರೂ ವೆಚ್ಚದಲ್ಲಿ ಮುಖಮಂಟಪ, ದ್ವಾರ ನಿರ್ಮಿಸಿದೆ ಎಂದು ಸ್ಥಳೀಯ ಹಿರಿಯರಾದ ಲಕ್ಷ್ಮೇಶ್ವರ ಅವರು ಹೇಳುತ್ತಾರೆ.
ನೋಟಿ ನೀಡಲಾಗಿದೆ
ದೇವಸ್ಥಾನ ಸುತ್ತಲೂ ಇರುವ ಜಾಗೆಯನ್ನು ಅನೇಕರು ಅತಿಕ್ರಮಿಸಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಎರಡು ವರ್ಷಗಳ ಹಿಂದೆ, ಅತಿಕ್ರಮಣ ಮಾಡಿರುವ ಜಾಗೆಯನ್ನು ತೆರವುಗೊಳಿಬೇಕೆಂದು ಸಂಬಂಧಿಸಿದವರಿಗೆ ನೋಟಿಸ ನೀಡಿದೆ. ನೋಟಿಸ್ ನೀಡಿ ಎರಡು ವರ್ಷಗಳು ಗತಿಸಿದರು, ಅತಿಕ್ರಮಣಕಾರರು ತೆರವುಗೊಳಿಸದೇ ಇರುವುದು ಮತ್ತು ಇಲಾಖೆ ಮೌನ ಜನರ ಅನುಮಾನಗಳಿಗೆ ಕಾರಣವಾಗಿದೆ.
ಉತ್ಸವಗಳ ಮೂಲಕ ಬೆಳಕಿಗೆ ಬರಲಿ
ಲಕ್ಷಾಂತರ ಹಣ ಖರ್ಚು ಮಾಡಿ ಪ್ರತಿ ವರ್ಷ ಜಿಲ್ಲಾಡಳಿತ ಜಿಲ್ಲಾ ಉತ್ಸವವನ್ನು ಗಾರ್ಡ್‌ನ್‌ಗಳು , ರಂಗಮಂದಿರಗಳಲ್ಲಿ, ಕೆಸಿಡಿ ಕಾಲೇಜು, ಮಠಗಳಲ್ಲಿ ಮಾತ್ರ ಆಯೋಜಿಸುತ್ತಿದೆ. ಇತಿಹಾಸ ಬಂಬಿಸುವ ಚಂದ್ರಮೌಳೇಶ್ವರ, ಭವಾನಿ ಶಂಕರ ದೇವಾಲಯ ಸೇರಿದಂತೆ ಹಲವು ಐತಿಹ್ಯದ ದೇವಾಲಯಗಳನ್ನು ಉತ್ಸವದ ಕಾರ್ಯಕ್ರಮಗಳಿಗೆ ಆಯ್ಕೆ ಮಾಡದೇ ಇರುವುದ ಜಿಲ್ಲಾಡಳಿತ ಮತು ಕನ್ನಡ ಸಂಸ್ಕೃತಿ ಇಲಾಖೆ ಉದ್ದೇಶಪೂರ್ವಕ ನಿರ್ಲಕ್ಷಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಮುಂಬರುವ ಉತ್ಸವದಲ್ಲಿ ಈ ದೇವಾಲಯಗಳನ್ನೂ ಆಯ್ಕೆ ಮಾಡಿ ಸುಸಜ್ಜಿತ ಕಾರ್ಯಕ್ರಮ ಆಯೋಜಿಸಿದರೆ ಉತ್ಸವ ಸಾರ್ಥಕತೆ ಪಡೆಯುವುದಲ್ಲದೇ ಇತಿಹಾಸಕ್ಕೆ ಹೊಸ ಮೆರಗು ತರುವುದರಲ್ಲಿ ಎರಡು ಮಾತಿಲ್ಲ.
----
ಹಂಪಿ ಗುಡಿಗಳ ಸಾಲಿಗೆ ಸೇರಿದ ಈ ದೇವಾಯಲವು, ಮೂರು ಶಿಖರ ಹಾಗೂ ಪಂಚಾಯತನ್ ದೇವರುಗಳನ್ನು ಹೊಂದಿರುವ ರಾಜ್ಯದ ಅಪರೂಪ ದೇವಾಲಯವಾಗಿದ್ದು, ದೇಶದಲ್ಲೆ ವಿರಳವಾಗಿ ಕಾಣಸಿಗುವ ಸೂರ್ಯ ದೇವರನ್ನು ಇಲ್ಲಿ ಕಾಣಬಹುದಾಗಿದೆ.