Saturday, 6 February 2016

ಹೇಗಿದ್ದ ಹೇಗಾದ ಅಪ್ಪ!!


  ಅಪ್ಪ ಮೊದಲಿನ ಹಾಗಿಲ್ಲ. ನನ್ನ ಜೊತೆ ಮಾತನಾಡುವದಿಲ್ಲ, ನನ್ನ ಜೊತೆ ಹೆಜ್ಜೆ ಹಾಕುವದಿಲ್ಲ, ಬಾಯಿತುಂಬಾ ಮಗನೇ ಎಂದು ಕರಿಯೋದಿಲ್ಲ, ಅಪ್ಪಿ ಮುದ್ದಾಡುವುದಿಲ್ಲ, ತಪ್ಪು ಮಾಡಿದಾಗ ದಂಡಿಸುವದಿಲ್ಲ. ಆದರೆ ಒಳಗೊಳಗೆ ಅದೇನೋ! ಮಾತನಾಡುತ್ತಾನೆ, ತನ್ನ ಕೋಲಿನೊಂದಿಗೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾನೆ. ತನ್ನ ಹಾಸಿಗೆಗಳಲ್ಲೆ ಬಿದ್ದು ಹೊರಳಾಡುತ್ತಿದ್ದಾನೆ. ಹೌದು! ಅಪ್ಪ ಮಾತನಾಡುವದಿಲ್ಲ, ಸರಿಯಾಗಿ ನಡೆದಾಡುವುದಿಲ್ಲ. ಯಾಕಂದ್ರೆ ದಶಕಗಳ ಹಿಂದೆ ಪಾರ್ಶ್ವವಾಯು ಎಂಬ ಹೆಮ್ಮಾರಿ ನನ್ನಪ್ಪನ ಕೈ, ಬಾಯಿಗಳನ್ನು ಕಿತ್ತುಕೊಂಡು, ಮೂಲೆಯಲ್ಲಿ


ಹೆಡೆಮುರಿ ಕಟ್ಟಿ ಮಲಗಿಸಿದೆ.
  ಅವು ಬಾಲ್ಯದ ದಿನಗಳು. ಅಪ್ಪ ಅಂದ್ರೆ ಸಾಕು ಅದೇಲ್ಲಿಂದಲ್ಲೋ! ಪ್ರತ್ಯಕ್ಷವಾಗಿ ಬೀಡುತ್ತಿದ್ದ. ನಾನು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದ್ರೆ ಅಪ್ಪ ತನ್ನ ಕಚ್ಚೆ ಸರಿ ಮಾಡಿಕೊಂಡು ಊರು ತುಂಬಾ ಹೆಗಲ ಮೇಲೇ ಕುಳರಿಸಿ, ಆನೆ ಅಂಬಾರಿಯ ಹಾಗೆ ಹೊತ್ತು ತೀರುಗುತ್ತಿದ್ದ. ಹ್ಞೂ! ನಾನು ಆ ದೇವರ ಏಕೈಕ ವರ ಪ್ರಸಾದ ನಮ್ಮಪ್ಪ ಅಮ್ಮನಿಗೆ. ನಾನು ಹುಟ್ಟಿದಾಗಲೇ ಅಪ್ಪ ಓಣಿ ಮಂದಿಗೇಲ್ಲಾ, ಕಡಬಿನ ಊಟ ಹಾಕಿ ಸಂಭ್ರಮಿಸಿದ್ದ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ, ಮಾತಿನಲ್ಲೂ ಅಪ್ಪ ಹಿರಿ ಹಿರಿ ಹಿಗ್ಗಿ ಸಂಭ್ರಮಿಸುತ್ತಿದ್ದ ಅಂತ ಅವ್ವ ಪದೇ ಪದೇ ಹೇಳ್ತಾಯಿದ್ಳು. ಆದರೆ ಈಗ ಆ ಸಂಭ್ರಮ! ಮನೆಯ ಮೂಲೆಯಲ್ಲಿ ಹೊರ ಪ್ರಪಂಚದ ಅರಿವಿಲ್ಲದೇ ಬೆಚ್ಚಗೆ ಅವಿತುಕೊಂಡು ಕುಳಿತಿದೆ. 
  ಅಪ್ಪನದು ಊರಿನಲ್ಲಿ ದೊಡ್ಡ ಹೆಸರು. ಶುಭ ಕಾರ‌್ಯಗಳಿಂದ ಹಿಡಿದು ಅಶುಭಕಾರ‌್ಯಗಳೇಲ್ಲವು ಅಪ್ಪ ನೇತೃತ್ವದಲ್ಲೇ ನಡೆಯುತ್ತಿದ್ದವು. ಅಪ್ಪ ನೇಕಾರಿಕೆ, ಅಡುಗೆ, ಗುಡಿಗಳ ಪೂಜಾರಿಕೆ ಹೀಗೆ ಎಲ್ಲದರಲ್ಲೂ ಪಾರಂಗತನಾಗಿದ್ದ. ಆದರೆ ಅಪ್ಪನಿಗೆ ಹಣದ ವ್ಯಾಮೋಹ ಸ್ಪಲ್ಪ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೇನೆ ಅಪ್ಪ ಇಂದು ಮೂಲೆಗುಂಪಾಗಿ ಸೊಂಪಿಲ್ಲದೇ ಬದುಕಿನ ಕೊನೆಯ ದಿನಗಳನ್ನು ಏಣಿಸುತ್ತಾ ಕುಳಿತಿದ್ದಾನೆ.
  ಅಪ್ಪ ಅಂದ್ರೆ, ಆಕಾಶ ನೋಡಿದಷ್ಟು, ಹೇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತಾನೆ. ಅಪ್ಪ ಅಂದ್ರೆ ಗುರು, ಮಾರ್ಗದರ್ಶಿ, ಹಿತೈಸಿ, ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಗೆಳೆಯ. ಹೌದು! ನನ್ನಪ್ಪ ಕೂಡಾ ನನ್ಗೆ ಎಲ್ಲವೂ ಆಗಿದ್ದ. ನನ್ನ ಸುಖ, ದುಖಃಕ್ಕೆ ಹೇಗಲಾಗಿ, ಬಾಲ್ಯದ ಪ್ರತಿಯೊಂದು ಪ್ರತಿಯೊಂದು ಕ್ಷಣಗಳಿಗೂ ಜೀವ ತುಂಬುತ್ತಾ, ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದ ನನ್ನಪ್ಪ. ಇಂದು ನನ್ನನ್ನ ಯಾರಾದ್ರು, ಗುರುತಿಸುತ್ತಾರೆ, ಒಳ್ಳೆ ಹುಡುಗ, ವಿನಯವಂತ ಅಂತಾ ಕರೆಯುತ್ತಾರೆ ಎಂದ್ರೆ ಅದಕ್ಕೆ ಕಾರಣ ನನ್ನಪ್ಪ. 
 ಪ್ರಾರಂಭದಲ್ಲೇ ನನ್ಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ, ಒಳ್ಳೆಯ ಸಂಸ್ಕಾರ ತುಂಬಿದ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿಸಿದ. ಇದೇ ಕಾರಣಕ್ಕೆ ಇಂದು ನಾನೊಂದು ಸುಂದರ ಮೂರ್ತಿಯಾಗಿ ಜಗತ್ತಿಗೆ ತೆರೆದಿಕೊಂಡಿದ್ದೇನೆ.
ಮಂಜುನಾಥ ಗದಗಿನ, 
8050753148



No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...