ಮಂಜುನಾಥ ಗದಗಿನ
ನಾಡಾಗಲಿ, ನುಡಿಯಾಗಲಿ
ಎಂದೆಂದೂ ಕನ್ನಡ ಅಭಿಮಾನ
ನಮ್ಮದಾಗಿರಲಿ.
ತನು, ಮನ ನಿಮ್ಮದಾಗಲಿ
ಕನ್ನಡ ಉಸಿರಾಗಲಿ, ನಮ್ಮೂರ
ನುಡಿ ಹಬ್ಬ ಎಲ್ಲರ ಮನದ ಮಾತಾಗಲಿ.
ಕುವೆಂಪು, ಬೇಂದ್ರೆ, ಮಾಸ್ತಿ ಬೆಳೆಸಿದ
ಕನ್ನಡ ಕಟ್ಟೋಣ, ನಮ್ಮೂರ ನುಡಿ
ತೇರಲ್ಲಿ ಹೊತ್ತು ಮೆರೆಯೋಣ.
ಕನ್ನಡಾಂಬೆಯ ಸೇವೆಗೆ
ಸಿದ್ಧರಾಗೋಣ, ನಮ್ಮೂರ
ನುಡಿ ತೇರು ಎಳೆದು ಪುನೀತರಾಗೋಣ.
-ಮಂಜುನಾಥ ಗದಗಿನ
ರಾಮದುರ್ಗ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಟಕೋಳ ಗ್ರಾಮದಲ್ಲಿ ಮಾ.7ರಂದು ಅದ್ಧೂರಿಯಾಗಿ ಜರುಗಲಿದೆ. ಈಗಾಗಲೇ ಹಲವಾರು ಸಭೆಗಳ ಮೂಲಕ ಕನ್ನಡ ನುಡಿ ತೇರು ಎಳೆಯಲು ಯುವ ಮನಸ್ಸುಗಳು ಸಕಲ ಸನ್ನದ್ಧವಾಗಿದೆ. ಇದಷ್ಟೇ ಅಲ್ಲದೇ ನಮ್ಮೇಲ್ಲರ ಹೆಮ್ಮೆಯ ಲೇಖಕಿ ಕಲ್ಯಾಣಮ್ಮ ಲಂಗೋಟಿಯವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ನುಡಿ ತೇರು ಎಳೆಯುವ ಮುನ್ನ ನಮ್ಮ ರಾಮದುರ್ಗದ ಸಾಹಿತಿಗಳ ಹಾಗೂ ರಾಮದುರ್ಗ ಪರಿಚಯವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ...

ಈ ತಾಲೂಕಿನ ’ಕನ್ನಡ ಕುವಲಯಾನಂದಲಂಕಾರ’ ಗ್ರಂಥದ ಕರ್ತೃ ಜಾಯೇಂದ್ರ ಅಥವಾ ಜಾಗೊಂಡ ದೇಸಾಯಿ ಎಂದು ತಿಳಿದು ಬಂದ ಸಂಗತಿ. ಈತನ ತಂದೆಯ ಹೆಸರು ಲಿಂಗಭೂವರನೆಂದೂ, ಇವರು ತೊರಗಲ್ಲ ಸೀಮೆಗೆ ಅರಸರಾಗಿದ್ದರೆಂಬ ಮಾಹಿತಿಯಿದೆ. ಅದು ಹೀಗಿದೆ-
’ಇತಿ ಕುವಲಯಾನಂದಲಂಕಾರ ಶಾಸ್ತ್ರಂ ಕರ್ನಾಟಕ ಭಾಷಾಯಾಂ
ಜಾಯಗೊಂಡ ದೇಸಾಯಿ ವಿರಚಿತ ಕವನಂ ಸಂಪೂರ್ಣಂ
-ಕನ್ನಡ ಕುವಲಯಾನಂದ ಪುಟ-81, ಮಂಗಳಾಚರಣ’
ಇದು ಸಂಸ್ಕೃತದ ಕವಿ ಅಪ್ಪಯ್ಯ ದೀಕ್ಷಿತರ ದಟ್ಟವಾದ ಪ್ರಭಾವವನ್ನು ಸೂಚಿಸುತ್ತದೆ. ಈ ತಾಲ್ಲೂಕಿನ ಮೊಟ್ಟ ಮೊದಲ ಕವಿಯೇ ಜಾಯೇಂದ್ರ ದೇಸಾಯಿಯೆಂಬುದು ಸುಸ್ಪಷ್ಟ, ಇವರ ’ಕನ್ನಡ ಕುವಲಯಾನಂದ’ ಕೃತಿಯನ್ನು ಶಿ.ಚೆ. ನಂದೀಮಠ ಅವರು ಸಂಪಾದಿಸಿ 1970 ರಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯ ಪೂರ್ವ ಪೀಠಿಕೆಯಲ್ಲಿ ಇತಿ ಜಾಯೇಂದ್ರ ಭೂಪಾಲ ವಿರಚಿತ ಶೃಂಗಾರ ತಿಲಕ ಸಮಾಪ್ತ ಎಂಬ ಉಲ್ಲೇಖದಿಂದ ಜಾಯೇಂದ್ರ ದೇಸಾಯಿಯು ಶೃಂಗಾರ ತಿಲಕವೆಂಬ ಎರಡನೆಯ ಗ್ರಂಥವನ್ನು ರಚಿಸಿದ್ದಾನೆಂದು ಹೇಳಬಹುದು. ಈ ಕವಿಯ ಕಾಲ 1735 ರಿಂದ 1785 ಎಂದು ತಿಳಿದು ಬರುತ್ತದೆ. ಅಂದರೆ ರಾಮದುರ್ಗ ತಾಲ್ಲೂಕಿನ ಮೊದಲ ಸಾಹಿತಿ/ ಕವಿಯೇ ಜಾಯೇಂದ್ರ ದೇಸಾಯಿ. ಈತನ ಕನ್ನಡ ಕುವಲಯಾನಂದವೇ ಮೊದಲ ಕೃತಿ ಎಂದು ಸದ್ಯ ಉಪಲಬ್ಧ ಮಾಹಿತಿಗಳಿಂದ ನಿರ್ಣಯಿಸಬಹುದಾಗಿದೆ.
ಈ ತಾಲ್ಲೂಕಿನ ಸಾಹಿತಿಗಳು ಬೇರೆ ಬೇರೆ ತಾಲೂಕುಗಳಲ್ಲಿ ನೆಲೆಸಿದವರು, ಬೇರೆ ತಾಲೂಕಿನವರು ಈ ತಾಲೂಕಿನಲ್ಲಿ ನೆಲೆಸಿದವರು ಇದ್ದುದರಿಂದ ಅವರೆಲ್ಲರ ಕುರಿತಾಗಿ ಬಣ್ಣಿಸುವುದು ಕಷ್ಟಸಾಧ್ಯವಾದರೂ ಕ್ರಿಕೆಟ್ ಆಟದ ಹೈಲೇಟ್ ಎಂಬಂತೆ ಸಂಕ್ಷಿಪ್ತದಲ್ಲಿ ಇಲ್ಲಿಯ ಸಾಹಿತಿಗಳ ಕಿರುಪರಿಚಯ ಮತ್ತು ಸಾಧನೆಯ ಹೆಜ್ಜೆಯ ಗುರುತುಗಳನ್ನು ಪರಿಚಯಿಸಲು ಪ್ರಯತ್ನಿಸಲಾಗಿದೆ.
ಋಷಿಕವಿ ಸಾಲಿಗ್ರಾಮ ಚಂದ್ರರಾಯರು:
ಋಷಿಯಲ್ಲದವನು ಕಾವ್ಯ ಬರೆಯಲಾರ ಎಂಬ ಮಾತು ಸಾಲಿ ರಾಮಚಂದ್ರರಾಯರಿಗೆ ಸರಿಯಾಗಿ ಅನ್ವಯಿಸುತ್ತದೆ. ಅವರು ಬಾಳಿ ಬದುಕಿದ ಜೀವನ ಸಂದೇಶವೇ ಅವರ ಸಾಹಿತ್ಯ ಸಂದೇಶವಾಗಿದೆ. ಯದ್ಭಾವಂ ತದ್ಭವತಿ ಎಂಬೋಕ್ತಿಯಂತೆ ಅವರ ಬದುಕು ಮತ್ತು ಬರಹ ಒಂದೇಯಾಗಿದ್ದವು. ಅವರು ತಮ್ಮ ಜೀವನದಲ್ಲಿ ಪಟ್ಟ ಯಾತನೆ, ನೋವು-ನಲಿವುಗಳೆಲ್ಲ ಅವರ ಸಾಹಿತ್ಯದ ಅಂಗಗಳಾಗಿವೆ. ಜೀವನವು ಅವರಿಗೆ ಅಮೃತಕ್ಕಿಂತ ವಿಷವನ್ನೇ ಹೆಚ್ಚು ಕೊಟ್ಟಿದೆಯೆಂದರೆ ತಪ್ಪಾಗಲಾರದು. ಅವರು ವಿಷವನ್ನು ಉಂಡು ವಿಷಕಂಠರಾಗಿ, ತಮ್ಮ ಸಾಹಿತ್ಯದ ಮುಖಾಂತರ ಅಮೃತ ಸಿಂಚನಗೈದಿದ್ದಾರೆ. ಇವರದು ಆದರ್ಶ ವ್ಯಕ್ತಿತ್ವ. ಗಾಂಧೀಜಿಯವರ ಅನುಯಾಯಿಯಾಗಿ ಅಂಚೆ ಕಚೇರಿಯ ಕೆಲಸಕ್ಕೆ ವಿದಾಯ ಹೇಳಿ ಗಾಂಧೀಜಿಯವರ ಕರೆಗೆ ಓಗೊಟ್ಟು ಹೋದವರು. ’ಯದುಪತಿ’ ಅವರ ಕಾದಂಬರಿ ತಮ್ಮದೇ ಚರಿತ್ರೆಯಾಗಿದೆ. ’ತಿಲಾಂಜಲಿ’ ಮಗನ ಆಗಲುವಿಕೆಯಿಂದ ರಚಿತವಾದ ಶೋಕಗೀತೆ. ಅವರ ಮತ್ತೊಂದು ಕೃತಿ ’ಚಿತ್ರ ಸೃಷ್ಠಿ’ (ಕ.ಸಂ). ಉತ್ತರ ಕರ್ನಾಟಕದಲ್ಲೆಲ್ಲ ಕನ್ನಡ ಶಾಲೆಗಳೇ ಇರದೆ, ಮರಾಠಿ ಮಾಧ್ಯಮದ ಶಾಲೆಗಳಲ್ಲಿಯೇ ಅಚ್ಚ ಕನ್ನಡ ಮಕ್ಕಳು ಓದುತ್ತಿರುವ ಸಂದರ್ಭದಲ್ಲಿ ಸಾಲಿಯವರು ರಚಿಸಿದ ಷಟ್ಪದಿಯು ಕರ್ನಾಟಕದ ನಾಡಗೀತೆಯೆಂದೇ ಹೇಳಬೇಕು.ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ
ಕನ್ನಡದ ನೆಲದ ನೀರ್ ಹೊನಲೆನಗೆ ದೇವನದಿ!
ಕನ್ನಡ ನೆಲದ ಕಲ್ಲೆನಗೆ ಸಾಲಿಗ್ರಾಮಶಿಲೆ! ಕನ್ನಡವೇ ದೈವಮ್ಮೆ
ಕನ್ನಡ ಶಬ್ದಮೆನಗೋಂಕಾರಮೀಯನ್ನ
ಕನ್ನಡದ ನುಡಿಯೆ ಗಾಯತ್ರಿಯದ್ಬುತ ಮಂತ್ರ
ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಕಮೀ ಜಗದೊಳೆನಗೆ !
ಎಂದು ಮುಂತಾಗಿ ಹಾಡಿದ ಸಾಲಿಯವರ ಕವನವನ್ನು ನಾವು ಮರೆಯಲು ಹೇಗೆ ಸಾಧ್ಯ? (1888-1978) ಕುಸುಮಾಂಜಲಿ, ಚಿಗುರೆಲೆ, ಅಭಿಸಾರ, ಶ್ರೀರಾಮ ಚರಿತ, ಅಯೋಧ್ಯಾಕಾಂಡ, ಸುಕಲ್ಯಾಣ, ಸಿಪಾಯಪ್ಪ, ಜಾಣ ಪ್ರಣಿಗಳು, ಜಯ ಗುರುದೇವ, ಹಿಂದೂಸ್ತಾನದ ಇತಿಹಾಸ, ಜೀವನ ಲೀಲೆ, ಸುಧಾಮಚರಿತಂ, ಶರಣಾಗತಿ, ಗದ್ಯ ರಾಮಾಯಣ ಮುಂತಾದ 21 ಕ್ಕೂ ಮಿಕ್ಕು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಡಾ. ಡಿ.ಎಸ್. ಕರ್ಕಿ: (1907-1984):
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಡಾ. ಕರ್ಕಿಯವರು ಈ ತಾಲೂಕಿನ ಭಾಗೋಜಿ (ಹಿರೇ)ಕೊಪ್ಪ ಗ್ರಾಮದವರು. ಹಚ್ಚೇವು ಕನ್ನಡದ ದೀಪದಿಂದ ಕರುನಾಡ, ಭಾರತ, ವಿಶ್ವಕ್ಕೆ ಬೆಳಕು ನೀಡಿದವರು. ಕನ್ನಡಿಗರ ಪ್ರೀತಿಯ, ನಲ್ಮೆಯ, ಅಚ್ಚುಮೆಚ್ಚಿನ ಸ್ನೇಹದ ಕವಿ. ಸದುವಿನಯ ಸದಾಚಾರದ ಸಾತ್ವಿಕ ಕವಿಯೀತ. ಅವರೊಂದು ಜೀವಂತ ಕಾವ್ಯವಾಗಿದ್ದರು. ಹಿರಿಯರಿರಲಿ, ಕಿರಿಯರಿರಲಿ ಅವರೊಂದಿಗೆ ಕಾವ್ಯ ಶಾಸ್ತ್ರದ ವಿನೋದದಲ್ಲಿ ತೊಡಗುತ್ತಿದ್ದರು. ರಸಿಕತನದ ಸುಳಿಸುಖದಲ್ಲಿ ಅವರು ಕಾಲವನ್ನೇ ಪರಿಗಣಿಸುತ್ತಿರಲಿಲ್ಲ. ಪ್ರಕೃತಿಯಲ್ಲಿ ಜೀವನ ಯಾನದಲ್ಲಿ ಸಾತ್ವಿಕ ಸೌಂದರ್ಯವನ್ನು ಆಸ್ವಾದಿಸಿ, ಆರಾಧಿಸುವ ಅದರ ನಾದ-ಲಯಕ್ಕೆ ಮಗುವಿನ ಮುಗ್ದತೆ ದೈವೀಕರುಣೆಗೆ ಮಾರು ಹೋಗುವ ಮನೋಧರ್ಮ ಅವರದಾಗಿತ್ತು.’ಬೆಳು ನಗೆಯಲಿ’ ಚೆಲುವಿನ ಮೊಗದಲಿ, ತುಳುಕುವ ಆನಂದ
ಅದಾವ ಪೂರ್ವದ ಉದಾರ ಹೃದಯರು ಚೆಲ್ಲಿದ ಪ್ರತಿಬಿಂಬ
ಸದಾ ನಗುಮೊಗದ, ಸಮಾಧಾನದ ಸಾತ್ವಿಕ ಕಲೆಯನ್ನುಕ್ಕಿಸುವ ಸರಸ ಸಜ್ಜನಿಕೆಯ, ನಿರ್ಮಲ ಅಂತಃಕರಣದ ಸಾಕಾರ ಮೂರ್ತಿ ಡಾ. ಕರ್ಕಿಯವರಾಗಿದ್ದರು. ನವೋದಯದ ಕವಿಗಳಲ್ಲಿ ಒಬ್ಬರಾದವರು. ಇವರ ಭಾವಾಭಿವ್ಯಕ್ತಿಗೆ ಹಿರಿಯ ಕವಿಗಳಾದ ಮಧುರಚೆನ್ನ, ಬೇಂದ್ರೆ, ಕುವೆಂಪು, ವೀ.ಸೀ. ಮುಂತಾದವರು ನಮ್ರತೆಯ ದೀಕ್ಷೆ ಕೊಟ್ಟಿದ್ದರೇನೋ ಎಂಬಂತೆ ಚಿಕ್ಕವರನ್ನು ದೊಡ್ಡವರನ್ನು ನಮ್ರತೆಯಿಂದ ಕಾಣುತ್ತಿದ್ದ ಕವಿ. ಅವರ ಸಾಹಿತ್ಯಿಕ ಸಾಧನೆ ಅಪೂರ್ವವಾದುದು. ಮೃದು ಮಧುರ ಭಾವನೆಗಳ ನಿಸರ್ಗ ಪ್ರೇಮ ಕವಿಯಿಂದ ರಚನೆಗೊಂಡ ’ಭಾವಗೀತ’ ಕವನ ಸಂಕಲನಗಳು ಕನ್ನಡಿಗರ ಮನೆ ಮಾತಾಗಿವೆ. ನಕ್ಷತ್ರಗಾನ, ಭಾವತೀರ್ಥ, ಗೀತಗೌರವ, ಕರಿಕೆ ಕಣಗಿಲ, ನಮನ, ಬಣ್ಣದ ಚೆಂಡು, ತನನ ತೋಂ, ಪದ್ಮಪಾಣಿ ಮುಂತಾದವು. ಅವರ ಗದ್ಯವೂ ಕಾವ್ಯದಷ್ಟು ಸುಸಂಬದ್ಧವೂ, ಸುಸಂಗತವಾದುದು. ನಾಲ್ದೆಸೆಯ ನೋಟ, ಅಂಗಡಿ ದಂಪತಿಗಳು, ಐವರು ಶಿಕ್ಷಣ ತಜ್ಞರು, ಸಾಹಿತ್ಯ ಸಂಸ್ಕೃತಿ ಮುಂತಾದವು ಓದುಗರಿಗೆ ಆಪ್ಯಾಯಮಾನವಾಗಿವೆ. ಕನ್ನಡ ಛಂದೋವಿಕಾಸ ಕನ್ನಡದಲ್ಲಿರುವ ಮೊಟ್ಟಮೊದಲ ಛಂದೋಗ್ರಂಥ. ಇದು ಇವರ ಪಿ.ಎಚ್.ಡಿ. ಮಹಾಪ್ರಬಂಧವೂ ಹೌದು. ಇದು ಹದಿಮೂರು ಸಲ ಮರುಮುದ್ರಣಗೊಂಡಿದೆ. ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಕ.ವಿ.ವಿ. ಗೌರವ ಪ್ರಾಧ್ಯಾಪಕರಾಗಿ (ನಿವೃತ್ತಿ ನಂತರ) ಆಧುನಿಕ ವಚನಕಾರರಾಗಿ, ಕವಿಯಾಗಿ, ವಿಮರ್ಶಕರಾಗಿ, ಛಂದಶಾಸ್ತ್ರಜ್ಞ, ಸಂಶೋಧಕರಾಗಿ ನವೋದಯ ಸಾಹಿತ್ಯದಲ್ಲಿ ಶ್ರೇಷ್ಠರಾಗಿ 20ಕ್ಕೂ ಮಿಕ್ಕು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ ಕವಿ ಕರ್ಕಿಯವರಾಗಿದ್ದು, ನಮ್ಮ ತಾಲ್ಲೂಕಿನ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ ಧೀಮಂತ ಸಾಹಿತಿ! ಅವರು ಗಾಂಧೀಜಿಯವರನ್ನು ಅಗಲಿದಾಗ ಬರೆದ ಸರ್ವಶ್ರೇಷ್ಠ ಕವನ ದಿವ್ಯಜ್ಯೋತಿ ಎಂಬುದಾಗಿದ್ದು; ಗಾಂಧೀಜಿ ಅವರು ತಿಳಿ ನೀಲದ ನೀಲವಾಗಿ ದೂರ ಹೋದರೂ ಗಾಂಧೀಸ್ಮತಿ ದೇಶ ಬಾಂಧವರಿಗೆ ನಂದಾದೀಪವಾಗಿದೆ. ಅದರ ಪಲ್ಲವಿ-
ತಿಳಿ ನೀಲದಲ್ಲಿ ತಾ ನೀಲವಾಗಿ ಅವ ಹೋದ ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು ಇನ್ನೊಮ್ಮೆ ಏಕೆ ಬಾರ’
ಡಾ. ಕರ್ಕಿಯವರ ಹಿರೇಮೆಗೆ ಈ ಕವನವೊಂದೇ ಸಾಕ್ಷಿ!
ಹುಲಕುಂದ ಭೀಮಕವಿ (1909-1970):
ಬಸಪ್ಪ ಸಂಗಪ್ಪ ಬೆಟಗೇರಿ ಇವರ ಕಾವ್ಯನಾಮ ಭೀಮಕವಿ, ಇವರೊಬ್ಬ ಆಶುಕವಿ, ಗೀಗೀ ಪದಗಳ ರಚಕ ಮತ್ತು ಹಾಡುಗಾರ. ಗಾಂವಟಿ ಶಾಲೆಯ 4ನೆಯ ತರಗತಿ ಓದಿದವರು. ದಾನಮ್ಮ ಇವರ ಧರ್ಮಪತ್ನಿ. 1930 ರಲ್ಲಿ ಮುರಗೋಡ-ಹೊಸೂರಿನಲ್ಲಿ ಗಾಂಧೀಜಿ ವಿನೋಭಾಜಿಯವರ ಶಿಷ್ಯರಾಗಿದ್ದ ಇವರು ಸಿದ್ರಾಮ ಗುರೂಜಿ ಹರಕುಣಿ ಯವರೊಂದಿಗೆ ಆಶ್ರಮ ಕಟ್ಟಿಕೊಂಡು ರಾಷ್ಟ್ರೀಯ ಆಂದೋಲನದ ಕಾರ್ಯಕ್ರಮ ನಡೆಸುತ್ತಿದ್ದರು. ತಮ್ಮ ಗೀಗೀ ಪದಗಳ ಮೂಲಕ ಗಾಂಧೀ ತತ್ವ ಮತ್ತು ಕಾಂಗ್ರೆಸ್ ಸಂಸ್ಥೆಯ ಪ್ರಚಾರ ಮಾಡಿದವರು. ಇವರು ಭೀಮಕವಿಗೀತ ಮೇಳ ಕಟ್ಟಿ ನಾಡಿನ ತುಂಬ ಸಭೆ ಸಮಾರಂಭಗಳಲ್ಲಿ ಗೀಗೀ ಪದಗಳನ್ನು ಹಾಡುತ್ತಿದ್ದರು. ಇವರು ನಮ್ಮ ಅಜ್ಜ ಸಂಗಪ್ಪ ಬೆಟಗೇರಿ ಅವರ ಮಗ. ಸಂಗಪ್ಪನವರ ಮಗಳನ್ನೇ ನಮ್ಮ ಅಣ್ಣನಿಗೆ ಧರ್ಮಪತ್ನಿಯನ್ನಾಗಿ ಸ್ವೀಕರಿಸಿದ್ದು ನಮ್ಮ ವೈನಿಯಾಗಿದ್ದಾರೆ. ಭೀಮಕವಿಯ ಜೊತೆ ಮಲ್ಲಪ್ಪ ಮೂಗಬಸು, ಸೋಮಲಿಂಗಪ್ಪ ದೊಡವಾಡ ಮುಂತಾದವರು ಕೂಡಿಕೊಂಡು ’ಗಾಂಧೀಗೀತ ಮೇಳ ಕಟ್ಟಿ ಅದರ ಅಡಿಯಲ್ಲಿ ಕಾರ್ಯಕ್ರಮ ಮಾಡಿದವರು. ಅವರು 1942 ರಲ್ಲಿ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದುದರಿಂದ ನಾಲ್ಕು ತಿಂಗಳ ಕಾರಾಗೃಹ ವಾಸ ಮಾಡಿದವರು. ತಾವು ಉಸಿರು ಇರುವವರೆಗೂ ಹುಲಕುಂದ ಗೆಳೆಯರ ಗುಂಪು ಕಟ್ಟಿ ಹಲವಾರು ರಾಷ್ಟ್ರೀಯ, ಸಾರ್ವಜನಿಕ ಕಾರ್ಯಕ್ರಮ ನಡೆಸಿಕೊಟ್ಟವರು. ಸಾಹಿತ್ಯ ರಚನೆಯನ್ನು ಮಾಡಿದವರು. ಅವರ ಲಾವಣಿ ಪದಗಳು ನಾಡಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಇತರ ಜನಪದ ಗೀತೆಗಳನ್ನು ರಚಿಸಿ ಜನರಲ್ಲಿರುವ ಮೂಢ ನಂಬಿಕೆ, ಅಂಧಕಾರವನ್ನು ತೊಡೆದು ಹಾಕುವಲ್ಲಿ ಶ್ರಮಿಸಿದವರು. ’ಜನಪದ ರಾಷ್ಟ್ರೀಯ ಗೀತೆಗಳು’ ಎಂಬುದು ಪ್ರಸಿದ್ಧ ಕೃತಿ ಮತ್ತು ’ಸರ್ವೋದಯ ಗ್ರಾಮೀಣ ಜನಪದ ಗೀತೆಗಳು’ ಎಂಬ ಕೃತಿಗಳನ್ನು ಪ್ರಕಟಿಸಿದರು. ಇವರು ರಾಷ್ಟ್ರಮಟ್ಟದ- ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆಂದು ಹೇಳಲು ಹೆಮ್ಮೆ ಎನಿಸುತ್ತದೆ. 1947 ರಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಕನ್ನಡ ಜನಪದ ಮೇಳ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಇದು ಅವರ ವಿದ್ವತ್ತು ಮತ್ತು ಬಹುಮುಖ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ.ಹುಲಕುಂದದ ಶಿವಲಿಂಗ ಕವಿ (1890-1955):
ಶಿವಲಿಂಗ ಕವಿಯು ’ಕಲಗಿ’ ಮತ್ತು ’ತುರಾಯಿ’ ಪ್ರಕಾರಗಳಲ್ಲಿ ಗೀಗೀ ಪದಗಳನ್ನು ರಚಿಸಿ ಹಾಡಿದ್ದಾರೆ. ಇವರು ಹಿರೇಮಠದ ಪಟ್ಟದ ಸ್ವಾಮಿಗಳಾಗಿದ್ದರು. ಜಾತಿ-ಮತ-ಪಂಥಗಳನ್ನು ಮೀರಿದವರಾಗಿದ್ದರು. ಗೀಗೀ ಮೇಳ ಕಟ್ಟಿ ನಾಡಿನ ತುಂಬೆಲ್ಲ ಸಂಚಾರ ಮಾಡಿದವರು. ಇವರ ಮೇಳದವರೂ, ಶಿಷ್ಯರೂ ಆಗಿದ್ದ ದುಂಡಿರಾಜ ಲಿಮಯೆ ಅವರು; ಈ ಕವಿಯ ಶಿವಲಿಂಗಸ್ವಾಮಿ ರಚಿತ ಗೀಗೀ ಪದಗಳು ಎಂಬ ಕೃತಿಯನ್ನು ರಕಟಿಸಿದ್ದಾರೆ. ರುದ್ರಯ್ಯ- ಈರವ್ವನವರ ಪುತ್ರರೇ ಶಿವಲಿಂಗ ಸ್ವಾಮಿ 1890 ರಲ್ಲಿ ಜನಿಸಿ 1955 ರಲ್ಲಿ ಲಿಂಗೈಕ್ಯರಾದವರು. ಇವರ ಕವಿತ್ವದ ಶಕ್ತಿಯೇ ಭೀಮಕವಿಗೆ ಪೂರಕವಾಗಿದ್ದುದು ಸ್ಮರಣೀಯ.ಲಿಂಗನಗೌಡಾ ಪಾಟೀಲ (1908-1994):
ಇವರು ಈ ತಾಲೂಕಿನ ಚಿಕ್ಕೊಪ್ಪ ಗ್ರಾಮದವರು. ಲೋಕಮತ ಪತ್ರಿಕೆಯ ಸಂಪಾದಕರೂ ಹಾಗೆಯೇ ವಿಶಾಲ ಕರ್ನಾಟಕ ಮತ್ತು ನವಯುಗ ಪತ್ರಿಕೆಗಳ ಸಹ ಸಂಪಾದಕರಾಗಿಯೂ ಮತ್ತು ಕೆಲವು ವರ್ಷ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಒಮ್ಮೆ ಎಂ.ಎಲ್.ಸಿಯೂ ಆಗಿದ್ದರು. ’ವೈರಾಗ್ಯ ಫಲ’, ’ರಾಮದುರ್ಗ ಸಂಸ್ಥಾನ ವಿಮೋಚಹೋರಾಟ’, ಹೀಗೆ ಎರಡು ಗದ್ಯ ಕೃತಿಗಳನ್ನು ರಚಿಸಿದ ಕೀರ್ತಿ ವಿಶಾರದರು. ಇವರ ಗದ್ಯ ಸರಳವೂ, ಸುಭಗವೂ ಆಗಿದ್ದು, ಜನಸಾಮಾನ್ಯರಿಗೂ ತಿಳಿಯವಂತಹ ಶೈಲಿಯಾಗಿತ್ತು.ಶ್ರೀ ಬಿ.ಸಿ. ದೇಸಾಯಿ (1941-1990):
ಇವರು ಸಾಲಹಳ್ಳಿ ಗ್ರಾಮದವರು. ನವ್ಯ ಸಾಹಿತ್ಯದ ಗಟ್ಟಿ ಬರಹಗಾರರು. ಶ್ರೀಮಂತ ವತನದಾರರು, ಚಂದೂರಾವ-ಗೋಪುಬಾಯಿಯವರ ಮಗನಾಗಿ 1941 ರಲ್ಲಿ ಜನಿಸಿದವರು. ಬಿ.ಎ. ಪದವಿಯನ್ನು ಆಂಗ್ಲ ಭಾಷೆಯಲ್ಲಿ ಪೂರೈಸಿಕೊಂಡವರು. ಇವರ ಬಾಳ ಸಂಗಾತಿ ಘೋಡಗೇರಿಯ ಪಾಟೀಲ ಮನೆತನದ ರಾಜಲಕ್ಷ್ಮೀಯವರೊಂದಿಗೆ ವಿವಾಹವಾದವರು. ಇವರಿಗೆ ಮೂವರು ಸುಪುತ್ರರು. ಅವರದು ಚಿಂತನಶೀಲ ವ್ಯಕ್ತಿತ್ವ ಮತ್ತು ಸತತ ಅಧ್ಯಯನ ಮುಖಿಯಾದವರು. ಓದು ಅವರ ಜೀವನದುದ್ದಕ್ಕೂ ಅಂಟಿಕೊಂಡು ಬಂದಿತು. ಮೃತ್ಯುದೇವಿಯ ಮಡಿಲಿನವರೆಗೂ ಅವರ ಕೈಯಲ್ಲಿ ಗ್ರಂಥವಿರುತ್ತಿತ್ತು. ಹೊಸ ಪುಸ್ತಕ ಬಂದರೆ ಇವರ ಕೈಯಲ್ಲಿಯೇ ಮೊದಲು ಸೇರುತ್ತಿತ್ತು.ಇವರು ಚತುರ್ ಭಾಷಾ ಬಲ್ಲಿದರಾಗಿದ್ದರು. ಹಳ್ಳಿಯ ಜಾನಪದವನ್ನು ಒಳಹೊಕ್ಕು ನೋಡಿದವರು. ಅವರು ಜ್ಞಾನ ಭಂಡಾರವೇ; ನಡೆದಾಡುವ ವಿಶ್ವಕೋಶವೇ ಆಗಿದ್ದರು. ಮನೆಯೇ ಗ್ರಂಥಾಲಯವಾಗಿತ್ತು. ಅದೆಷ್ಟೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇವರಿಂದ ಹಿತೋಕ್ತಿಗಳನ್ನು, ವೈಚಾರಿಕತೆಯನ್ನು ಹೇಳಿಸಿಕೊಂಡು ತೃಪ್ತಿ-ಸಂತಸ ಪಟ್ಟವರುಂಟು. ಇವರ ’ಹುಸಿ’ ಎಂಬ ಕವನ ಸಂಕಲನ ’ಸಾವು ಮತ್ತು ಇತರ ಕಥೆಗಳು’ ಎಂಬ ಕಥಾ ಸಂಕಲನಗಳನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ಅವರಿತ್ತ ಎರಡು ಕೃತಿರತ್ನಗಳು. ಇಂತಹ ಅಪರೂಪದ ಚಿಂತಕ, ಸಾಹಿತಿಯ ಗೌರವಾರ್ಥಕವಾಗಿ ರಾಮದುರ್ಗ ಪಟ್ಟಣದಲ್ಲಿ ಶ್ರೀ ಬಿ.ಸಿ. ದೇಸಾಯಿಯವರ ಮಾರ್ಗವೆಂಬ ಹೆಸರನ್ನಿಟ್ಟು ಗೌರವ ಸಲ್ಲಿಸಿದ್ದು ಪ್ರಶಂಸನೀಯವಾದುದು.
ಡಾ. ವ್ಹಿ. ಜಿ. ಪೂಜಾರ:
ಇವರು ಈ ತಾಲ್ಲೂಕಿನ ಹೊಸೂರು ಗ್ರಾಮದವರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವರು. ಈ ತಾಲ್ಲೂಕಿನ ಪ್ರಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು; ವೀರಶೈವ ಸಾಹಿತ್ಯದಲ್ಲಿ ಪವಾಡ ಕಥೆಗಳು ಎಂಬುದು ಇವರ ಸಂಶೋಧನಾ ಮಹಾಪ್ರಬಂಧ, ಕವಿವಾಣಿಯಲ್ಲಿ ಶ್ರೀ ಷಣ್ಮುಖ ಶಿವಯೋಗಿಗಳು, ನಿಷ್ಠೆಯ ಕಡಲಪ್ಪ- ವೀರಪ್ಪನವರು, ಸ್ವರವಚನಗಳಲ್ಲಿ ವಿಡಂಬನೆ, ಸಾಹಿತ್ಯ ಸಮಾವೇಶ, ಸಾಹಿತ್ಯ ಮಾರ್ಗ, ಶರಣರ ಎರಡು ನಾಟಕಗಳು, ಕನ್ನಡ ಸಾಹಿತ್ಯ, ಸಾಹಿತ್ಯ ಸಂಬಂಧ, ಶೋಧ, ಸಮೀಕ್ಷೆ, ರಾಮಪುರ ಚಿಕ್ಕಪ್ಪಯ್ಯನ ಸ್ವರ ವಚನ, ತ್ರಿವಿಧಿ, ಸಂಗವಿಭು ಮುಂತಾಗಿ ಅರವತ್ತಕ್ಕೆ ಮಿಕ್ಕು ಕೃತಿಗಳನ್ನು ರಚಿಸಿದ ಕೀರ್ತಿವಂತರು. ಸಂಪಾದನೆ, ಸಂಶೋಧನೆ, ನಡುಗನ್ನಡ ಸಾಹಿತ್ಯದ ವಿಮರ್ಶೆ-ಹೀಗೆ ಹಲವು ವಿಧದಲ್ಲಿ ತಮ್ಮ ಸಾಹಿತ್ಯದ ವಿಮರ್ಶೆ ಮಾಡಿ ಸಾಹಿತ್ಯದ ಸೊಬಗನ್ನು ಈ ನಾಡು-ನುಡಿಗೆ ಅರ್ಪಿಸಿದ್ದಾರೆ.ಮಾರ್ಕಂಡೇಯ ದೊಡಮನಿ:
ಇವರು ರಾಮದುರ್ಗದವರಲ್ಲದೆ ನಲವತ್ತು ವರ್ಷಗಳ ಕಾಲ ಶಿಕ್ಷಕರಾಗಿ, ಡೈಯಟ್‌ದ ಉಪನ್ಯಾಸಕರಾಗಿ ಈಗ ಧಾರವಾಡದಲ್ಲಿ ವಾಸಿಸಿರುವರು. ವಯಸ್ಸು 80 ರ ಮೇಲ್ಪಟ್ಟಾದರೂ ಧಾರವಾಡದ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವರು. ಸಮಗಾರ ಹರಳಯ್ಯ ಮಾಸಪತ್ರಿಕೆಯ ಸಂಪಾದಕರು. ಇವರ ಸಾಹಿತ್ಯ ರಚನೆ ಅಪಾರವಾದುದು. ಹೂಮಾಲೆ, ಜಗದಾನಂದ (ಕ.ಸಂ.). ಪ್ರಶ್ನೋತ್ತರ ವ್ಯಾಕರಣ, ಶಿವಶರಣ ಸಮಗಾರ ಹರಳಯ್ಯ, ಶ್ರೀ ಸದ್ಗುರು ಶಿವಾನಂದ ಸ್ವಾಮಿಗಳು, ಮೋಹಿತೆ ಗೋವಿಂದ ಮಹರಾಜರು, ನಾವು ನಮ್ಮ ನಡತೆ, ನೀನಾಗು ಭಾರತೀಯ, ಆತ್ಮಾನಂದ ತಂದೆ, ಮದುವೆ, ಗುರುಶಿಷ್ಯ, ಗುರುವಿನೊಡನೆ ಆತ್ಮದೆಡೆಗೆ, ಪರಮಾನಂದದೆಡೆಗೆ ಈ ಮುಂತಾದ ಕವನ, ಚರಿತೆ, ಮಕ್ಕಳ ಚರಿತ್ರೆ, ಸಂಶೋಧನೆ, ಪ್ರಬಂಧ, ಆಧ್ಯಾತ್ಮ ಗ್ರಂಥಗಳನ್ನು ರಚಿಸಿ ನಾಡು ನುಡಿಗೆ ಕೃತಕೃತ್ಯರಾಗಿದ್ದಾರೆ. ರಾಷ್ಟ್ರ- ರಾಜ್ಯ ಪ್ರಶಸ್ತಿ ಅಂಬೇಡ್ಕರರ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಪ್ರೊ. ವೆಂಕಟೇಶ ಹುಣಸೀಕಟ್ಟಿ:
ಕಾಕತಾಳಿಯವೇನೋ ಎನ್ನುವಂತೆ ಹುಣಸೀಕಟ್ಟಿಯವರು ಹೊಸಕೋಟಿ ಗ್ರಾಮದವರು, ನಾನೂ ಅಲ್ಲಿಯವನು. ಹಲಗತ್ತಿ ಅವರ ಬೀಗರ ಊರು. ನನ್ನ ತಾಯಿಯ ತವರು ಮನೆಯೂ ಹಲಗತ್ತಿ. ಇದು ಎಂಥ ಅವಿನಾಭಾವ ಸಂಬಂಧ ನೋಡಿ! ಹೊಸಕೋಟಿಯಿಂದ ಈಗ ನಿಕಟ ಪೂರ್ವ ಅಧ್ಯಕ್ಷರಾಗಿ ತಮಗೆಲ್ಲ ವರ್ಷದುದ್ದಕ್ಕೂ ಸಾಹಿತ್ಯದ ರಸದೌತಣವನ್ನು ಉಣಬಡಿಸಿದವರು. ಅವರಿಗಿಂತ ಹತ್ತು ವರ್ಷ ಚಿಕ್ಕವನು. ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಮಾಡಿದ್ದುದು ಹೊಸಕೋಟೆಗೆ ಜೋಡು ದೀಪ್ತಿ ಬೆಳಗುವಂತಾದುದು. ಈ ಸಮ್ಮೇಳನದಲ್ಲಿ ನಮ್ಮೀರ್ವರ ಸೌಭಾಗ್ಯವೆಂದೇ ಭಾವಿಸಿದ್ದೇನೆ! ಆದರೆ ನಮ್ಮಿಬ್ಬರಲ್ಲಿ ಒಂದು ವ್ಯತ್ಯಾಸವೇನೆಂದರೆ ಅವರು ಬೀಗರ ಊರಿನಲ್ಲಿ ವಾಸವಾಗಿದ್ದಾರೆ. ನಾನು ಧಾರವಾಡದಲ್ಲಿದ್ದೇನೆ. ಊರು ಬಿಟ್ಟರೂ ಊರಿನ ಮೇಲೆ, ಅಭಿಮಾನ, ಪ್ರೀತಿಯುಳ್ಳವರು ಎಂಬುದನ್ನು ವಿನಮ್ರದಿಂದ ಹೇಳಿಕೊಳ್ಳುವೆ. ಅವರು ಹೊನ್ನಾವರ ಕಾಲೇಜಿನಲ್ಲಿ ಭೌತ- ರಸಾಯನಶಾಸ್ತ್ರದ ಬೋಧಕರಾಗಿ ಸೇವೆ ಸಲ್ಲಿಸಿ ವಿಶ್ರಾಂತದ ಬದುಕಿಗೆ ಆಸರೆಯಾಗಿರುವರು. ಆದರೆ ಅವರು ಸಾಹಿತ್ಯ ರಚನೆಗೆ ತೊಡಗಿಸಿಕೊಂಡು ಮೂವ್ವತ್ತಕ್ಕೂ ಮಿಕ್ಕು ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯದ ಕಣಜವನ್ನು ಶ್ರೀಮಂತಗೊಳಿಸಿದ್ದುದಕ್ಕೆ ತಮ್ಮೆಲ್ಲರ ಪರವಾಗಿ ಶ್ರೀಯುತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಶ್ರೀ ಹನುಮಂತಗೌಡಾ ಮುದಿಗೌಡರ:
ಶ್ರೀಯುತರು ಕಿಲ್ಲಾ ಹೊಸಕೋಟಿಯಲ್ಲಿ ಜನಿಸಿ, ಗುತ್ತಿಗೋಳಿ ಹೊಸಕೋಟಿಯ ಅಳಿಯರಾಗಿ ಬಂದು ನೆಲೆಸಿ, ಗಣ್ಯ ವ್ಯಾಪಾರಸ್ಥರೂ, ಸಮಾಜ ಸೇವಕರೂ, ನುರಿತ ಭಾಷಣಕಾರರೂ ಆಗಿ ಸೇವೆ ಸಲ್ಲಿಸುತ್ತಲಿರುವರು. ಇವರು ಹಲಗಲಿ ಬಂಡಾಯದಂತಹ ಸುಮಾರು ಎಂಟ್ಹತ್ತು ಕಾವ್ಯ, ನಾಟಕ, ಪ್ರಬಂಧ, ಸಂಕಲನಗಳನ್ನು ರಚಿಸಿ ಉದ್ದಾಮ ಸಾಹಿತಿಯಾದವರು. ಅವರಿಂದ ಕನ್ನಡ ನಾಡು ನುಡಿಯ ಸೇವೆ ಸದಾ ಕ್ರಿಯಾಶೀಲವಾಗಿದೆಯೆಂಬುದು ಕಂಡ ಸತ್ಯ!ಶ್ರೀ ಶಿರೀಫ್ ಜೋಶಿ:
ರಾಮದುರ್ಗದವರೇ ಆದ ಇವರು ಚಿಕ್ಕೋಡಿಯ ನೀರಾವರಿ ಇಲಾಖೆಯಲ್ಲಿ ಸದ್ಯ ಸೇವೆಯಲ್ಲಿದ್ದಾರೆ. ರಾಘವೆಂದ್ರ ಸ್ತುತಿ, ಯಶೋಗಾಥೆ, ಮಿಂಚು ಎಲ್ಲಾರೂ ಮಾಡೂದು ಹೊಟ್ಟೆಗಾಗಿ, ಕನ್ನಡ ಕನ್ನಡಿ, ಚೆಲುವ ಕನ್ನಡ ನಾಡು, ಸಾಂಸ್ಕೃತಿಕ ಐತಿಹಾಸಿಕ ಕೈಪಿಡಿ ಎಂಬಿತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇವರು ರೂಪಾಂತರ ಮಾಡಿದ ಕೃತಿಗಳುಂಟು! ಇವರ ನಾಟಕಗಳು ರಂಗ ಪ್ರಯೋಗ ಕಂಡಿವೆ. ಹೀಗೆ ಸಾಹಿತ್ಯ ಕೃಷಿ ಮಾಡಿದ ಉತ್ತಮ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಶ್ರೀ ಜಿ.ಬಿ. ಕುಲಗೋಡ:
ಅವರು ಇದೇ ಗ್ರಾಮ ಬಟಕುರ್ಕಿಯವರು. ಈಗ ಬೆಳಗಾವಿಯಲ್ಲಿ ನೆಲೆಸಿದ್ದಾರೆ. ನಗೆಹನಿ ಕವನ ಸಂಕಲನ, ನಕ್ಕು ನೋಡಿ, ಚುಟುಕುಗಳ ಸಂಕಲನವನ್ನು ಪ್ರಕಟಿಸಿದ ಶ್ರೀಯುತರು10-02-1947 ರಲ್ಲಿ ಜನಿಸಿ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಗಮನಾರ್ಹ ವ್ಯಕ್ತಿತ್ವ ಹೊಂದಿದವರು.
ಶ್ರೀ ರಾಮಣ್ಣ ಬ್ಯಾಟಿ:
ಸುರೇಬಾನ ಮನಿ ಹಾಳದವರು, ಓದಿದ್ದು 3ನೇಯ ತರಗತಿ, ವೃತ್ತಿ ನೇಕಾರಿಕೆ, ಈಗ ಸದ್ಯ ಗದಗ-ಬೆಟಗೇರಿಯಲ್ಲಿ ವಾಸವಾಗಿದ್ದಾರೆ. ಎಲೆಯ ಮರೆಯ ಫಲದಂತೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೇ ತೊಡಗಿಸಿಕೊಂಡವರು. ಸಿದ್ಧಲಿಂಗನ ಕಾವ್ಯ ಸುಧೆ, ಭಕ್ತಿ ಕುಸುಮ, ಶ್ರೀದೇವಾಂಗ ಶತಕ, ಶ್ರೀ ಹೊಳಲಮ್ಮದೇವಿ ಶತಕ, ಅನ್ನದಾನೇಶ್ವರಿ ಶತಕ, ನಿವೃತ್ತಿನಾಥರ ಚರಿತ್ರೆ, ಗೌರಿಶಂಕರ ಚರಿತಾಮೃತ, ಶ್ರೀ ಗುಡ್ಡಾಪುರ ದಾನಮ್ಮದೇವಿ ಪುರಾಣ, ಶ್ರೀ ಇಟಗಿ ಭೀಮಂಬಿಕಾ ಪುರಾಣ, ಮುಂತಾಗಿ ಷಟ್ಪದಿ ಕಾವ್ಯಗಳನ್ನು ರಚಿಸಿದ್ದಲ್ಲದೆ, ಯಾತಾಳಿ ಚನ್ನಬಸಪ್ಪನ ಚರಿತ್ರೆ, ಮುಕ್ಕಣ್ಣೇಶ್ವರ ಚರಿತಾಮೃತ, ಬದಾಮಿ ರುದ್ರಪ್ಪಜ್ಜನವರು -ಹೀಗೆ ಮುಂತಾದ 20 ಕ್ಕೂ ಮಿಕ್ಕು ಕೃತಿಗಳನ್ನು ರಚಿಸಿದ್ದು ಅವರನ್ನು ಸ್ಮರಿಸಲೇಬೇಕಾದುದು.ಶ್ರೀ ಅಶೋಕ ಚೊಳಚಗುಡ್ಡ:
ಅವರು ಸದ್ಯ ಧಾರವಾಡದಲ್ಲಿದ್ದು ಚುಟುಕು ಕವಿಯೆಂದೇ ಖ್ಯಾತನಾಮರು. ಪುಟ್ಟನ ಹಾಡು, ಮತ್ತು ಚುಟುಕು ನಗು-ಹಾಸ್ಯ ಕವನ ಸಂಕಲನಗಳನ್ನು ರಚಿಸಿರುವರು.
ಹಸನ್ ನಮೀಂ ಸುರಕೋಡ:
ಅವರು ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಜಾತಿ ಪದ್ಧತಿ, ಅನುವಾದಿತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದವರು. ವಾದಿರಾಜ ಭಟ್ಟ ರವರು, ತಿಳಿಯಾದ ನೀರು (ಕಾದಂಬರಿ) ಚೆನ್ನ ಚೆಲುವ ಚೆಂಬೆಳಕು ಜೀವನ ಚರಿತ್ರೆಯನ್ನು ಬರೆದು ಪ್ರಕಟಿಸಿರುವರು.ಮಹಾದೇವ ತೇರದಾಳ:
ಅವರು ಅಂಚೆ ಇಲಾಖೆಯ ನೌಕರರು, ಅವರು ಹರಳಯ್ಯನ ಭಕ್ತಿ, ವಿಜಯ ಮಾಲೆ ನಾಳಿನ ಪ್ರಜೆ-ನಾವು ಮುಂತಾದ ಕೃತಿಗಳನ್ನು ರಚಿಸಿದ್ದಾರೆ.ಅವರಾದಿಯ ಸಿದ್ದು ಮೋಟೆ:
ಅವರು ಅರಿವು ನೀಡಯ್ಯ (ಕ.ಸಂ) ರಚಿಸಿದ್ದಾರಲ್ಲದೇ ಓಂ ಫಲಹಾರೇಶ್ವರ, ಡೊಳ್ಳಿನ ಮೇಳ, ಕಟ್ಟಿ ಡೊಳ್ಳಿನ ಹಾಡುಗಳನ್ನು ರಚಿಸಿ ನಾಡಿನುದ್ದಗಲಕ್ಕೂ ಹಾಡುತ್ತಲಿದ್ದಾರೆ. ಇದೇ ಗ್ರಾಮದ ಬೀರಪ್ಪ ಮೋಟೆ ಎಂಬುವವರೂ ಸ್ವರಚಿತ ಡೊಳ್ಳಿನ ಹಾಡುಗಳು ಮತ್ತು ಸಿದ್ಧರ ಬಂಢಾರ ಎಂಬ ಕೃತಿಗಳೆರಡನ್ನು ರಚಿಸಿದ್ದಾರೆ. ಪಂಚಗಾವಿ ಗ್ರಾಮದ ಡಾ. ಬಿ. ಎಸ್. ಭಜಂತ್ರಿ ಅವರು ’ಹುಲಕುಂದದ ಲಾವಣಿ ಸಂಪ್ರದಾಯ: ಒಂದು ಅಧ್ಯಯನ’ ಎಂಬ ಸಂಶೋಧನಾ ಮಹಾ ಪ್ರಬಂಧ ರಚಿಸಿದ್ದುದಲ್ಲದೇ ’ಜಾನಪದ ಒಗಟುಗಳು’ ಕೃತಿಯನ್ನು ಪ್ರಕಟಿಸಿದ್ದಾರೆ. ಸಿದ್ನಾಳ ಗ್ರಾಮದ ಹಿರೇಮಠ ವ್ಹಿ.ವ್ಹಿ. ಮತ್ತು ಚಂದರಗಿಯ ಪಿ. ಸುಭಾಸ ಇವರಿಬ್ಬರೂ ಸೇರಿ ’ಬಿಂಬ-ಪ್ರತಿಬಿಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಹಲಗತ್ತಿಯ ಕೆ.ವ್ಹಿ. ಅಜವಾನ ಅವರು ಬಾಳು ಮುರಿದರೂ ತಾಳ ತಪ್ಪಲಿಲ್ಲ ಎಂಬ ವೃತ್ತಿ ರಂಗಭೂಮಿಯ ಸಾಮಾಜಿಕ ನಾಟಕ ರಚಿಸಿದ್ದಾರೆ.ಬೇರೆ ತಾಲ್ಲೂಕಿನವರಾದ ಸಂಗಮೇಶ ಆರ್. ಗುರವ ಅವರು ಸುರೇಬಾನದಲ್ಲಿ ನೆಲೆಸಿದ್ದಾರೆ. ವಿದ್ಯೆಯಿದ್ದರೂ ದುಡಿಮೆ ಬೇಕು, ಕೂಡಿ ಬಾಳಿದರೆ ಸ್ವರ್ಗಸುಖ, ಸಿಂಧೂರ ಲಕ್ಷ್ಮಣ, ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಇವು ಇವರ ಪ್ರಕಟಿತ ನಾಟಕಗಳು.
ಚಾಂದಕವಟೆಯ ಪ್ರೊ. ಸಿದ್ದಣ್ಣ ಲಂಗೋಟಿ:
ಅವರು ರಾಮದುರ್ಗದಲ್ಲಿ ನೆಲೆಸಿದ್ದಾರೆ. ಇವರ ಧರ್ಮಪತ್ನಿ ಡಾ. ಕಲ್ಯಾಣಮ್ಮ ಎಸ್. ಲಂಗೋಟಿಯವರೂ ರಾಮದುರ್ಗ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿಶ್ರಾಂತ ಬದುಕಿಗೆ ಆಶ್ರಯವಾಗಿದ್ದಾರೆ. ಇವರು ಆಧುನಿಕ ವಚನಕಾರ ’ಕುಮಾರ ಕಕ್ಕಯ್ಯ ಮೋಳ: ಒಂದು ಅಧ್ಯಯನ’ ಸಂಶೋಧನೆ ಮಹಾಪ್ರಬಂಧವನ್ನು ರಚಿಸಿದ್ದಾರೆ ಮತ್ತು ಸ್ತ್ರೀ ಸಂವೇದನೆಗಳು, ಜಯದೇವಿ ತಾಯಿ ಲಿಗಾಡೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಪ್ರೊ. ಸಿದ್ದಣ್ಣ ಅವರು ಶರಣರ ಚರಿತ್ರೆಗಳನ್ನು ಸುಮಾರು 80ಕ್ಕೂ ಮಿಕ್ಕು ಬರೆದು ಪ್ರಕಟಿಸಿದ್ದಾರೆ. ಇಲಕಲ್ಲದ ಡಾ. ಮಹಾಂತ ಶಿವಯೋಗಿಗಳು ಹೊರಡಿಸುವ ಬಸವ ಬೆಳಗು ಮಾಸಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವರು. ಇಂಥ ಶರಣರ ಬದುಕು-ಬರಹ ಹಿತಮಿತವಾಗಿ ಸಾಗಿರುವುದು ಮಾದರಿಯಾಗಿದೆ. ಅವರದು ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿರುವುದು ಶಿವನಿಗೆ ಎಂದು ಹೇಳಬಹುದು.ಡಾ. ರಾಜೇಂದ್ರ ಅಣ್ಣಾನವರ:
ಇವರು ಬೆಂಬಳಗಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವರು. ನೋವಿನ ಎಳೆಗಳು, ಕತ್ತಲೆಯ ದಾರಿ, ಇಂಚರ ಸ್ಮರಣೆ, ಮೂರು ಕವನ ಸಂಕಲನಗಳು, ಪ್ರೇಮದಂಬರ, ಬೇಂದ್ರೆ ಸ್ಮರಣೆ, ಲಿಂಗನಗೌಡ ಪಾಟೀಲರ ಸಮನ್ವಯ ಭಾಗ-1, 2, 3,4 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ’ಅದೃಶ್ಯ ಕವಿಯ ಜೀವನ ಮತ್ತು ಕೃತಿಗಳು’ ಇದು ಸಂಶೋಧನ ಮಹಾ ಪ್ರಬಂಧವನ್ನು ಪ್ರಕಟಿಸಿ ಸಾಹಿತ್ಯದ ಕಣಜವನ್ನು ಶ್ರೀಮಂತಿಕೆಗೊಳಿಸಿದ್ದಾರೆ.ಇವರಲ್ಲದೇ ಇನ್ನೂ ಎಲೆಯ ಮರೆಯ ಕಾಯಿಯಂತೆ ಅನೇಕ ಕವಿ, ಸಾಹಿತಿ, ನಾಟಕ, ರಂಗ ಕಲಾವಿದರು, ಜನಪದ ಹಾಡುಗಾರರು ನನ್ನ ಗಮನಕ್ಕೆ ಬಾರದೇ ಉಳಿದಿರಬಹುದು. ಬೆಳಗಾವಿ ಜಿಲ್ಲೆಯ ಉಳಿದೆಲ್ಲ ತಾಲ್ಲೂಕುಗಳಿಗಿಂತಲೂ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದು ರಾಮದುರ್ಗ ತಾಲೂಕು ಪ್ರಮುಖ ಪಾತ್ರ ವಹಿಸಿದೆಯೆಂದು ಹೇಳಲು ಹೆಮ್ಮೆಯೆನಿಸುತ್ತದೆ. ಕನ್ನಡ ವೃತ್ತಿ ರಂಗಭೂಮಿಗೂ, ರಾಮದುರ್ಗ ತಾಲೂಕಿನಿಂದ ಚಾರಿತ್ರಿಕ ಕೊಡುಗೆ ಸಂದಿದೆ. ಜನಪದ ಸಾಹಿತ್ಯದ ಕೊಡುಗೆಯೂ ಅಪಾರವಾಗಿದೆ. ಯಾವುದೇ ದೇಶದ ನಾಡಿನ ಸಂಸ್ಕೃತಿಗೆ ಮೂಲ ಸೆಲೆಯಾಗಿ ಜಾನಪದ ಸಂಸ್ಕೃತಿಯಿದ್ದೇ ಇರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಶಿಷ್ಟ ಸಾಹಿತ್ಯವು ಸೃಷ್ಟಿಯಾದದ್ದು ಜನಪದ ಮೂಲದಿಂದಲೇ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.
ಪ್ರೇಕ್ಷಣಿಯ ಸ್ಥಳ:
ರಾಮದುರ್ಗ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲದೇ ಗೊಡಚಿಯ ವೀರಭದ್ರೇಶ್ವರ ದೇವಸ್ಥಾನ, ರಾಮದುರ್ಗದ ವೆಂಕಟೇಶ್ವರ ದೇವಸ್ಥಾನ, ಹಲಗತ್ತಿಯ ಬಸವೇಶ್ವರ ದೇವಸ್ಥಾನ, ಶಬರಿಕೊಳ್ಳ, ಸಿದ್ಧೇಶ್ವರ ಕೊಳ್ಳ, ಮೇಗುಂಡೇಶ್ವರ ಕೊಳ್ಳ, ಅವರಾದಿಯ ಶ್ರೀ ಫಲಹಾರೇಶ್ವರ ಮಠ, ಕುಳ್ಳೂರು- ಶಿವಯೋಗಿಗಳು ಮತ್ತು ಸಿದ್ಧರಾಮೇಶ್ವರರು, ರೇವಯ್ಯ ಮಹಾಸ್ವಾಮಿಗಳ ಕಲ್ಮಠ, ಹೊಸಕೋಟಿಯ ರೇವಯ್ಯ ಸ್ವಾಮಿ ಮಠ ಮತ್ತು ಜಲಕನ್ಯೆಯರ ಹೊಕ್ಕು ತುಂಬುವ ಬಾವಿ (ಜಕನ್ಯಾರ ಬಾವಿ), ಮುದೇನೂರಿನ ಹಾಗೂ ಚಿಪ್ಪಲಕಟ್ಟಿಯ ಲಕ್ಷ್ಮೀದೇವಿ, ಸಾಲಹಳ್ಳಿಯವರೇ ಆದ ಪರಮಪೂಜ್ಯ ಶ್ರೀ ಲಿಂಗೈಕ್ಯ ಮಹಾಂತ ಶಿವಯೋಗಿಗಳು ನಿರ್ಮಿಸಿದ ನೆರೆಯ ತಾಲ್ಲೂಕುಗಳಾದ ಅರಬಾವಿ ಮಠ, ಮುರಗೋಡ ಮಠ ಇನ್ನೂ ಮುಂತಾದ ಸರ್ವಧರ್ಮ ಸಮನ್ವಯ ದೃಷ್ಠಿಯನ್ನು ಸಾರಿ ಪ್ರಸಾರ ಮಾಡುವ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕದಂತಿರುವ ಮಸಜೀದಗಳು ಇಲ್ಲಿವೆ.
ಹಚ್ಚೇವು ಕನ್ನಡದ ದೀಪ!
ಕರುನಾಡ ದೀಪ, ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ!
(ಸಂಗ್ರಹ ಮಾಹಿತಿ)
(ಸಂಗ್ರಹ ಮಾಹಿತಿ)
No comments:
Post a Comment