Tuesday, 23 January 2018

ಹಸಿವೇ ಎಂಬ ಹೆಬ್ಬಾವು!

 ಹಸಿದ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯು ಸಾಲದು ಎಂಬ ಮಾತು ಈಗ ಅರ್ಥವಾಗುತ್ತಿದೆ. ಊರಲ್ಲಿ ಅವ್ವ ಮಾಡಿದ ಬಿಸಿ, ಬಿಸಿ ರೊಟ್ಟಿ ತಿಂದು ಉಂಡಾಡಿ ಗುಂಡನ ಹಾಗೆ ತೀರಗಾಡ್ತಾಯಿದ್ದೆ. ಯಾವಾಗ ಊರ ಬಿಟ್ಟು ಧಾರವಾಡ ಸೇರಿಕೊಂಡ ನೋ..ಅವಾಗ ಗೊತ್ತಾಯಿತು.ಹಸಿವು ಎಂಬ ಶೂಲದ ಮಹತ್ವ. ಈಗ ಒಂದೊತ್ತು ಊಟ ಇಲ್ಲದೇ ಹೊದ್ರು ಹಸಿವೇ ಎಂಬ ಹೆಬ್ಬಾವು ಹೊಟ್ಟೆಯನ್ನೆ ಕಚ್ಚಿ ತಿನ್ನುತ್ತಿದೆ.
ಊರಲ್ಲಿ ಇದ್ದಾಗ ರಾಜಾಹುಲಿಯ ಹಾಗೆ ಕುಡಿಮೀಸೆಯ ಮೇಲೆ ಕೈ ಹೊತ್ತು, ಟೀಫ್ ಟಾಫ್ ಡ್ರೆಸ್ ಮಾಡ್ಕೋಂಡು ಇರಗ್ತಾಯಿದ್ರೆ, ಇವರೇನು? ಮಹಾರಾಜನ ಮೊಮ್ಮಕ್ಕಳಾ! ಎಂದು ಜನ ಗುಸು-ಗುಸು, ಪಿಸು-ಪಿಸು ಮಾತಾಡ್ತಾಯಿದ್ರು. ಕಿಸೆ ತುಂಬ ಕಾಸು, ಕೈಯಲ್ಲೊಂದು ಬೈಕ್ ಹಿಡ್ಕೊಂಡ ಜಮ್ ಅಂತಾ ಇದ್ವಿ. ಮನೆಯಲ್ಲಿ ಪೋನ್ ಮಾಡಿ ಮಗಾ! ಊಟಕ್ಕೆ ಬಾರ‌್ಲಾ ಎಂದು ಕರೆಯೊವರೆಗೂ ಅಲೆದಾಡ್ತಾಯಿದ್ವಿ.ಆದ್ರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಊರು ಬಿಟ್ಟು ಪರ ಊರಿಗೆ ಬಂದ ಮೇಲೆ, ಹಳೆಯ ನೆನಪುಗಳು ಸ್ಮತಿಪಟಲಗಳಲ್ಲಿ ಇಣುಕುತ್ತಾ, ನಮ್ಮನ್ನು ನೋಡಿ ಗಹಗಹಿಸಿ ನಗ್ತಾಯಿವೆ. ರಾಜಾಹುಲಿಯಾಗಿ ಊರು,ಕೆರಿ ಸುತ್ತಾಯಿದ್ದೆ, ಆದ್ರೆ ಈಗ ರಾಜಾಇಲಿಯಾಗಿ ಕ್ಯಾಂಪಸ್‌ನ ಸಂಧಿ, ಗೊಂದಿಗಳಲ್ಲಿ ಆಮಂತ್ರಣವಿಲ್ಲದ ಔತಣಕೂಟಗಳಿಗೆ ಅಲೆದಾಡ್ತಾಯಿದ್ದೇನೆ.
 ಹಾಗಂತ್ತಾ ಇದು ನನ್ನೊಬ್ಬ ಕಥೆಯಲ್ಲ. ಇದು ಊರು ಬಿಟ್ಟು ಬಂದ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಥೆಯ ವ್ಯಥ್ಯೆಯಾಗಿದೆ. ಮನೆಯಲ್ಲಿದ್ದಾಗ ಒಂದು ಕಡ್ಡಿಯನ್ನು ಈ ಕಡೆಯಿಂದ ತೆಗೆದು ಆ ಕಡೆ ಹಾಕುವದಿಲ್ಲ. ಆದ್ರೆ ಊರು ಬಿಟ್ಟ ಮೇಲೆ ಹಾಸ್ಟೆಲೋ..ರೂಮೋ.. ಮಾಡಿಕೊಂಡು ಸೆಗಣಿಯಲ್ಲಿಯ ಹುಳುವಿನ ಹಾಗೆ ಒದ್ಯಾಡುತ್ತಿರುತ್ತಾರೆ.
ಪತ್ರಿನಿತ್ಯ ಬೆಳಗಾದ್ರೆ ಸಾಕು, ಮಾಡಲೇ..ತಗಿಲೇ..ತಿನ್ನಲೇ..ತೋಳಿಲೇ..ಒಗಿಲೇ..ಎಂಬ ಲೇ ಜೀವ ಪ್ರಾರಂಭವಾಗುತ್ತದೆ. ಇದರ ಮಧ್ಯೆ ಕ್ಲಾಸು..ಲಕ್ಚರು ಎಂಬ ಕಿರಿ,ಕಿರಿ ಬೇರೆ. ಇದೆಲ್ಲವುದರೊಂದಿಗೆ ಹಸಿವೇ ಎಂಬ ಹೆಮ್ಮಾರಿ ಬೇರೆ ದಿನ ಬೆಳಗಾದ್ರೆ, ಸಾಕು, ಕೋಳಿಯಗಿಂತಲೂ ಅತತ್‌ವಾಗಿ ಕೂಗಲೂ ಶುರುಮಾಡುತ್ತೇ ಈ ಹೊಟ್ಟೆ ಎಂಬ ಬಕಾಸುರ. ಇದಕ್ಕೆ ಮಾಡಿ ಹಾಕೋದು, ಎಂದ್ರೆ ಎದೆ ಝಲ್ ಏನಿಸುತ್ತದೆ. ಆದ್ರೆ ತಿನ್ನೊವಾಗ ಸ್ವರ್ಗಕ್ಕೆ ನಾಲ್ಕೇ ಗೇಣು ಅನಿಸುತ್ತದೆ.
ಹುಡುಗರು ಅಡುಗೆಯಲ್ಲಿ ಪಾರಂಗತರಲ್ಲ. ಆದ್ರೆ ಕೆಲವೊಂದಿಷ್ಟು ಹುಡುಗರು ಮಾತ್ರ ಹೆಂಗಳೆಯರೆಗೆ ಟಾಂಗ್ ಕೊಡುವ ಹಾಗೆ ವಿವಿಧ ಭೋಜನಗಳನ್ನು ಮಾಡಲು ಕಲ್ತಿರ‌್ತಾರೆ. ಆದ್ರೆ ಅಡುಗೆ ಮಾಡಲು ಬರದೇ ಹುಡುಗ್ರು ಅಡುಗೆ ಮನೆಯಂದ್ರೆ ಅಖಾಡಕ್ಕೆ ಇಳಿದವರ ಹಾಗೆ ಆಡುತ್ತಾರೆ. ಪ್ರತಿದಿನ ಅನ್ನ, ಸಾರು.. ಬಿಟ್ಟರೇ ಮನೆಯಿಂದ ತಂದ ಖಡಕ್ ರೊಟ್ಟಿನೇ ಗತಿ. ಇದರಿಂದ ಊಟ ಎಂದರೆ ಮುಖ ಸಪ್ಪೆ ಮಾಡಿಕೊಳ್ಳುತ್ತಾರೆ.
ಆದ್ರೆ ಇದೆಲ್ಲವಿಂದ ತುಸು ವಿಮುಕ್ತಿ ಪಡೆಯಲು ವಿದ್ಯಾರ್ಥಿಗಳು ಅನಿವಾರ‌್ಯವಾಗಿ ಅಲ್ಲಲ್ಲಿ ನಡೆಯುವ ಆಮಂತ್ರಣವಿಲ್ಲ ಔತಣಕೂಟಗಳಿಗೆ ಹೋಗಿ ಗಡತ್ತಾಗಿ ಜಡಿದು ಬರುತ್ತಾರೆ. ಹೌದು! ಇದು ಹಸಿವೆ ಎಂಬ ಹೆಬ್ಬಾವನ್ನು ನಿಗಿಸಲು ಅನಿವಾರ‌್ಯ ಕೂಡಾ ಆಗಿದೆ. ಕ್ಯಾಂಪಸ್‌ನಲ್ಲಿ ಹಾಗೂ ಸುತ್ತ-ಮುತ್ತಲೂ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಆಮಂತ್ರಣಗಳು ಬಂದಿರುವುದಿಲ್ಲ. ಆದ್ರೆ ಒಬ್ಬ ವಿದ್ಯಾರ್ಥಿಗೆ ಗೊತ್ತಾದ್ರೆ ಸಾಕು, ಎಲ್ಲ ವಿದ್ಯಾರ್ಥಿಗಳ ಮೊಬೈಗಳು ರಿಂಗಣಿಸುತ್ತವೆ ನಂತರ, ಕಾರ್ಯಕ್ರಮ ವೀಕ್ಷಿಸಿ, ಭರ್ಜರಿ ಊಟ ಮಾಡಿ ಬರುತ್ತೇವೆ. ಇದರಿಂದ ಒಂದು ದಿನದ, ಹಸಿವುವೆಂಬ ಹೆಬ್ಬಾವಿಗೆ ತಣಿಸಿದಂತೆ ಆಗುತ್ತದೆ. ಆದ್ರೆ ಕೆಲವೊಂದು ಸಾರಿ ಅದೇ ಹೆಬ್ಬಾವು ಹೆಡೆ ಏತ್ತಿದಾಗ, ಅದಕ್ಕೆ ತಣ್ಣಿರ ಬಟ್ಟೆ ಹಾಕಿ ತೆಪ್ಪಗೆ ಮಲಗಿಸುತ್ತೇವೆ.
ಹಸಿವೇ ಎಂಬ ಹೆಬ್ಬಾವನ್ನು ಬಿಳ್ಕೋಡುವುದೆಂದರೆ, ಉರಿ,ಉರಿಯುವ ಅಗ್ನಿ ತನ್ನ ಶಾಖವನ್ನು ಬಿಟ್ಟು ಕೊಟ್ಟಂತೆ, ಅಲ್ಲವೇ? ಆದ್ರೆ ಹಸಿವೇ ಎಂಬ ಹೆಬ್ಬಾವಿಗೆ ಯಾವುದರ ಹಂಗಿದೆ, ಅದು ಎಲ್ಲರನ್ನು ಸುತ್ತಿಕೊಂಡೆ ಇರುತ್ತದೆ. ಆದರೆ ಅದರ ಅರಿವು ಮಾತ್ರ ನಮಗಿಗ ಆಗುತ್ತಿದೆ.
ಮಂಜುನಾಥ ನಾ ಗದಗಿನ

Sunday, 21 January 2018

ಎಣ್ಣೆ ಪುರಾಣ..!

 ಮಂಜುನಾಥ ಗದಗಿನ

     ಎಣ್ಣೆ ಎಂದರೇ ಸಾಕು, ಅದೆಷ್ಟೋ..ಮುಖಗಳಲ್ಲಿ ವಧುವಿನ ಕಳೆ ಬಂದು ಬಿಡುತ್ತದೆ. ಮತ್ತೊಂದಿಷ್ಟು ಮುಖಗಳು ಶಿಂಗೆ ಎಣ್ಣೆ ಕುಡಿದರವ ಹಾಗಾಗಿರುತ್ತವೆ. ಈ ಎಣ್ಣೆ ಮಹಿಮೆನೆ ಹಾಗೆ, ಅದು ಕಾಲಿಟ್ಟಲೆಲ್ಲಾ ಧೂಳ್ ಎಬ್ಬಿಸಿರುತ್ತದೆ. ಅದರ ಮರ್ಮವೆನೆಂಬುವದು ಆ ದೇವರೇ ಬಲ್ಲ.  ಹ್ಞೂ! ಮೊನ್ನೆ ಕ್ಲಾಸ್‌ನಲ್ಲು ಎಣ್ಣೆಯದ್ದೆ ಸಮಾಚಾರ, ಹುಡಗ-ಹುಡುಗಿಯರು ಎನ್ನದೇ ಎಲ್ಲರ ಬಾಯಿಯಲ್ಲೂ ಎಣ್ಣೆಯದ್ದೆ ಮಾತು.
   ಅವತ್ತು ಎಡಮಗ್ಗಲಲ್ಲಿ ಎದ್ದಿರ‌್ಬೇಕು. ಕಾಲೇಜಿಗೆ ಹೋಗುವ ದಾರಿಯಲ್ಲಿ ಬಸ್ ಕೆಟ್ಟು ಹೋಯಿತು. ಇದರಿಂದ ಕ್ಲಾಸ್‌ಗೆ ಹೋಗುವದು ತುಂಬಾ ಲೇಟ್ ಆಯಿತು. ಅದರಲ್ಲೂ ನಮ್ಮ ವಿಭಾಗಕ್ಕೆ ಹೋಗ್ಬೇಕಾದ್ರೆ, ಅರ್ಧ ಜೀವವೇ ಕೈ ಬಂದಿರುತ್ತದೆ. ಇಂತಹದ್ರಲ್ಲಿ ದಡಬಡಾಯಿಸಿಕೊಂಡು ಕ್ಲಾಸ್‌ಗೆ ಎಂಟ್ರಿಕೊಟ್ಟೆ, ಎಲ್ಲ ಸಹಪಾಠಿಗಳು ಹರಟುತ್ತಾ ಕುಳಿತಿದ್ರು. ಇದನ್ನು ನೋಡಿದಾಕ್ಷಣ ನಿಟ್ಟುಸಿರು ಬಿಟ್ಟು, ಸ್ವಲ್ಪ ಸಾವರಿಸಿಕೊಂಡು, ಕ್ಲಾಸ್ ರೋಮ್‌ಗೆ ಹೋದೆ.
   ಲೇಕ್ಚರ್ ಇಲ್ಲದ ಕ್ಲಾಸುಗಳಲ್ಲಿ ಸ್ಟೂಡೆಂಟ್‌ಗಳದ್ದೇ ದರ್ಬಾರು. ಅವರಲ್ಲೇ ಕೆಲವೊಂದಿಷ್ಟು ಮಹಾನುಭಾವರು ವಿಶಿಷ್ಟ! ಕ್ಲಾಸ್‌ಗಳನ್ನು ತೆಗೆದುಕೊಂಡು, ಅವರಿವರ ಕಾಲು ಎಳೆಯುತ್ತಾ ರೇಗಿಸುತ್ತಿರುತ್ತಾರೆ. ಹೀಗೆ ಕಾಡು ಹರಟೆಯ ಮಧ್ಯ ಒಬ್ಬನನ್ನು ಟಾರ್ಗೇಟ ಮಾಡಿ ಕಾಡಿಸುವದು ವಿದ್ಯಾರ್ಥಿ ಗುಂಪುಗಳಲ್ಲಿ ಸರ್ವೇಸಾಮಾನ್ಯ ಇದೇ ರೀತಿ ಅವತ್ತಿನ ದಿನದ ಟಾರ್ಗೇಟ ಆಗಿದ್ದು ನಮ್ಮೆಲ್ಲರ ಕುಚುಕು ಮೌನೇಶ ಅಲಿಯಾಸ ಸಿಂಹ. ಹೌದು! ಅವನನ್ನು ನಾವು ಪ್ರೀತಿಯಿಂದ ಸಿಂಹ
ಎಂದು ಕರೆಯುತ್ತೇವೆ.
   ನಮ್ಮ ಕ್ಲಾಸ್ನ ಸನ್ಯಾಸಿ ಎಂದೆ ಕರೆಯಲ್ಪಡುವ ದಿನೇಶ, ಅವತ್ತು ಅದೊಂದು ಮೂಲೆಯಲ್ಲಿ ಕುಳಿತಿದ್ದ. ಅದೇನೋ, ಸಡನಾಗಿ ಎದ್ದು  ಮೌನೇಶ ಗೋದ್ರೆಜ್ ಆಯಿಲ್ ನಿಮ್ಮ ಕೂದಲುಗಳು ಊದುರುತ್ತಿವೆಯೇ? ಹಾಗಾದ್ರೆ ಬಳಸಿ  ಮೌನೇಶ ಗೋದ್ರೆಜ್ ಆಯಿಲ್ ಎಂದು ಪಕ್ಕದಲ್ಲೆ ಕುಳಿತಿದ್ದ ಮಿಲನನ್ನು ಕೇಳಿದ. ಅದಕ್ಕೆ ಮಿಲನ ಕೂಡಾ ಧ್ವನಿಗೂಡಿಸಿದ್ದರಿಂದ, ಮೌನೇಶನ ಪಿತ್ತ ನೇತ್ತಿಗೇರಿತು.  ಲೋ.. ದಿನ್ಯಾ ಸುಮ್ಮನ ಕುಂದ್ರೂ, ಇಲ್ಲಾಂದ್ರ ನೋಡ ಮತ್ತ ಎಂದು ದಬಾಯಿಸಿದ. ಆದ್ರೆ ದಿನೇಶ ಇದಾವುದಕ್ಕೂ ಕೇರ್ ಮಾಡದೇ, ತನ್ನ ಘನಕಾರ್ಯವನ್ನು ಮುಂದುವರೆಸಿದ್ದ. ಇದನ್ನು ನೋಡಿ ಉಳಿದವರು ತಮ್ಮಂತಮ್ಮಲ್ಲೇ  ನಿಮ್ಮ ತಲೆಯಲ್ಲಿ ಹೊಟ್ಟು ಆಗಿದೇಯೇ? ಹಾಗಾದ್ರೆ ಬಳಸಿ  ಮೌನೇಶ ಗೋದ್ರೆಜ್ ಆಯಿಲ್ ಎಂದು ತಮಾಸೆ ಮಾಡಲು ಶುರುವಿಟ್ಟುಕೊಂಡರು.
  ಇನ್ನೂ ಹೊರಗಿನಿಂದ, ಯಾರಾದ್ರು? ಒಳಗಡೆ ಬಂದ್ರೆ ಸಾಕು ಎಲ್ಲರೂ ಎಕಸ್ವರದಲ್ಲಿ  ನಿಮ್ಮ ತಲೆಯಲ್ಲಿ ಕೂದಲುಗಳು ಬೆಳೆಯಬೇಕೆ? ಹಾಗಾದ್ರೆ ಬಳಲಿ, ಮೌನೇಶ ಗೋದ್ರಜ್ ಆಯಿಲ್ ಎಂದು ಕೂಗುತ್ತಿದ್ದೇವು. ಅವರೂ ಇದನ್ನು ಅರ್ಥ ಮಾಡಿಕೊಂಡು, ಮೌನೇಶ ಹತ್ರ ಹೋಗಿ  ಎಣ್ಣೆ  ಕೊಡೋ.. ಎಂದು ಕಾಡಿಸುತ್ತಿದ್ದರು. ಇದನ್ನು ನೋಡಿ ಪಾಪಾ! ಮೌನೇಶ ಸಹಿತಿ ನಮ್ಮ ಧ್ವನಿಗೆ ಧ್ವನಿಯಾಗಿ ಬಿಟ್ಟ. ನಮ್ಮ ಎಣ್ಣೆ ಪುರಾಣ ಇಷ್ಟಕ್ಕೆ ನಿಲ್ಲದೇ, ಕ್ಲಾಸ್ ನಡೆದಾಗ್ಲೂ ಶುರುವಿತ್ತು. ಕೇಲವರಂತು ಅನ್ನೋದು, ನಗೋದು ಮಾಡ್ತಾಯಿದ್ರು ಇದನ್ನು ನೋಡಿ, ನಮ್ಮ ಸರ್ ಯಾಕೆ? ನಗ್ತಾಯಿದ್ದಿರಾ? ಎಂದು ಕೇಳಿಯೇಬಿಟ್ರು. ಅದಕ್ಕೆ, ಏನಿಲ್ಲ ಸರ್ ಎಂದು, ಮತ್ತೆ ಪಾಠ ಕೇಳಲು ಶುರು ಮಾಡಿದ್ವಿ.
   ಕ್ಲಾಸ್ ಮುಗಿದ ಮೇಲೆ ಮತ್ತದೇ ಎಣ್ಣೆ ಮಾತು ಶುರುವಾಯಿ, ಕ್ಯಾಂಪಸ್ ಬಂದ್ರು ಈ ಮ್ಯಾಟರ್ ಮಾತ್ರ ನಿಂತಿರಲಿಲ್ಲ. ಅಷ್ಟೋತ್ತಿಗಾಗಲೇ ಬಸ್ ಬಂದಿದ್ದರಿಂದ ನಾನು, ಶ್ರೀ, ಬಸ್ ಹತ್ತಿ ಹೊರಟೆವು. ಆದ್ರೆ ಅವರ ಮಧ್ಯೆ ಎಣ್ಣೆ ಪುರಾಣದ ಮಾತು ಸದ್ದಿಲ್ಲದೆ ಗದ್ದಲ ಎಬ್ಬಿಸಿತ್ತು.



Sunday, 7 January 2018

ಡೊಳ್ಳಿಗೂ ಜೈ ನೇಕಾರಿಕೆಗೂ ಸೈ

ಮಂಜುನಾಥ ಗದಗಿನ ಬೆಳಗಾವಿ

ಮಹಿಳೆ ಎಂದರೆ ಕೇವಲ ಹೆರುವ ಹೊರುವ
ಯಂತ್ರ ಎಂದು ಭಾವಿಸುವ ಕಾಲವೊಂದಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಮಹಿಳೆ ಎಲ್ಲದಕ್ಕೂ ಸೈ ಎನ್ನುತ್ತಾ ಪುರುಷರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆಯುತ್ತಿದ್ದಾಳೆ. ಇದಕ್ಕೆ ನಿದರ್ಶನ ಎಂಬಂತೆ ಗಂಡು ಕಲೆ ಎಂದೆ ಖ್ಯಾತಿಯಾಗಿರುವ ಡೊಳ್ಳು ಕುಣಿತದಲ್ಲೂ ಮಹಿಳೆ ಕಾಲಿಟ್ಟು, ಆಳ ಎತ್ತರದ ಡೊಳ್ಳಿಗೆ ಹೆಗಲೊಡ್ಡಿ ಕುಣಿದು ಕುಪ್ಪಳಿಸಿ ನೋಡುಗರನ್ನು ನಿಬ್ಬೇರಗಾಗುವಂತೆ ಮಾಡುತ್ತಿದ್ದಾಳೆ.
ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಪುರುಷರಿಗೆ ಮಾತ್ರ ಸಿಮೀತವಾಗಿದ್ದ ಕ್ಷೇತ್ರಗಳಲ್ಲೂ ದಾಪು ಇಟ್ಟು ಸೈ ಎನಿಸಿಕೊಂಡಿದ್ದಾಳೆ. ಇದರ ಮಧ್ಯೆಯೇ ಸಂಸಾರದ ನೊಗ ಹೊತ್ತು ನಾನು ಅಬಲೆಯಲ್ಲ ಸಬಲೆ ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳುತ್ತಿದ್ದಾಳೆ. ನಮ್ಮ ದೇಶಿ ಕಲೆಯಾದ ಡೊಳ್ಳು ಕುಣಿತ ಹಬ್ಬ ಹರಿದಿನಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಒಂದು ಕಲೆ. ಆದರೆ, ಆಧುನಿಕತೆಯ ಮಧ್ಯೆ ಇಂದು ಡೊಳ್ಳು ಕುಣಿತ ಕಾಣ ಸಿಗುವುದೇ ಅಪರೂಪವಾಗಿದೆ. ಡೊಳ್ಳು ಕಲಾವಿದರು ಕೂಡಾ ತಮ್ಮ ಕಲೆಯನ್ನೇ ಮರೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಮಹಿಳೆಯರು ಮುಂದೆ ಬಂದು ಗಂಡು ಕಲೆಯಾದ ಡೊಳ್ಳು ಕುಣಿತವನ್ನು ಉಳಿಸಿ ಬೆಳೆಸಲು ಮುಂದಾಗಿದ್ದಾರೆ. ಇದರೊಟ್ಟಿಗೆ ಕುಟುಂಬಕ್ಕೆ ಆರ್ಥಿಕ ನೆರವಾಗುತ್ತಿದ್ದಾರೆ.
ಹೌದು! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಾಕಾಂಬರಿ ಜನಪದ ಮಹಿಳಾ ಡೊಳ್ಳು ಕುಣಿತ ಎಂಬ ಗುಂಪೊಂದನ್ನು ಕಟ್ಟಿಕೊಂಡು ಈ ಮೂಲಕ ಡೊಳ್ಳು ಕುಣಿತವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಡೊಳ್ಳು ಕುಣಿತ ಸಾಮಾನ್ಯ ಕುಣಿತವಲ್ಲ, ಈ ಕುಣಿತ ಮಾಡಲು ಪುರಷರೇ ಎದುರಿಸಿ ಬಿಡುತ್ತಾರೆ. ಯಾಕೆಂದರೆ ಕೊರಳಿಗೆ ಭಾರವಾದ ಡೊಳ್ಳು ಹಾಕಿ ಕೊಂಡು ಕುಣಿಯಬೇಕು. ಇಂತಹ ಕುಣಿತಕ್ಕೆ ಮಹಿಳೆಯರು ಮುಂದಾಗಿರುವುದು ಸೂಚಿಗದ ಸಂಗತಿಯೇ ಸರಿ.
ರೂವಾರಿ
ನೇಕಾರ ಕುಟುಂಬದ ಶಂಕ್ರವ್ವ ಮುಗಳಿ(42) ಎಂಬ ಮಹಿಳೆಯ 2008ರಲ್ಲಿ ಜನಪದ ಸಂಪ್ರದಾಯಿಕ ಸಂಘವನ್ನು ಕಟ್ಟಿಕೊಂಡು ಈ ಮೂಲಕ ಜನಪದ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದರು. ಇದೇ ಆಸಕ್ತಿಯೇ ಮುಂದೊಂದು ದಿನ ಡೊಳ್ಳು ಕುಣಿತಕ್ಕೆ ಪ್ರೇರಣೆಯಾಯಿತೆಂದು ಹೇಳುತ್ತಾರೆ ಶಂಕ್ರವ್ವ. ನಂತರ ದಿನಗಳಲ್ಲಿ ಈ ಸಂಘ ಶಾಕಾಂಬರಿ ಜನಪದ ಮಹಿಳಾ ಡೊಳ್ಳು ಕುಣಿತ ಸಂಘ ಎಂದು ಮರು ನಾಮಕರಣ ಹೊಂದಿತು.

ಎಲ್ಲರೂ ನೇಕಾರರು: 

ಆಧುನಿಕತೆಯ ಭರಾಟೆಯಲ್ಲಿ ನೇಕಾರಿಕೆ ಅವಸಾನದತ್ತ ಸಾಗುತ್ತಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದಂತಾಗಿದೆ. ಹೀಗಾಗಿ ನೇಕಾರ ಮಹಿಳೆಯರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈ ಗುಂಪಿನಲ್ಲಿ ಇರುವವರು ಎಲ್ಲರೂ ನೇಕಾರಿಕೆ ಕುಟುಂಬದವರು ಎನ್ನವುದು ವಿಶೇಷ. ಸದ್ಯ ಈ ಡೊಳ್ಳು ಕುಣಿತ ತಂಡದಲ್ಲಿ 16 ಜನ ಮಹಿಳೆಯರು ಇದ್ದಾರೆ. ಇವರೆಲ್ಲರೂ ಮನೆಯ ಕೆಲಸದ ನಡುವೆಯೇ ಡೊಳ್ಳು ಕುಣಿತ ಅಭ್ಯಾಸ ಮಾಡಿ ವಿವಿಧೆಡೆ ಪ್ರದರ್ಶನ ನೀಡುತ್ತಿರುವುದು ಸ್ತ್ರೀ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ. ಇನ್ನೊಂದು ವಿಶೇಷವೆಂದರೆ ಈ ಗುಂಪಿನಲ್ಲಿ ಎಲ್ಲರೂ 40 ವಯಸ್ಸಿಕ್ಕಿಂತ ಮೇಲಿನವರು ಎಂಬುವುದು. ಅಷ್ಟೇ ಅಲ್ಲದೇ ಈ ಗುಂಪಿನಲ್ಲಿ ದಾನಮ್ಮ ಪಟ್ಟದಕಲ್ಲ ಎಂಬ 60 ವಯಸ್ಸಿನ ಅಜ್ಜಿಯೂ ಇದ್ದಾಳೆ ಎಂಬುವುದು ಮತ್ತೊಂದು ವಿಶೇಷ.

ವಿವಿಧ ಪ್ರಕಾರದ ಪ್ರದರ್ಶನ:


ಕೊರಳಿಗೆ ಡೊಳ್ಳು ಹಾಕಿಕೊಂಡು ಈ ಮಹಿಳೆಯರು ನಾನಾ ಕಸರತ್ತುಗಳನ್ನು ಪ್ರದರ್ಶನ ಮಾಡುತ್ತಾರೆ. ಇವರು ಮಾಡುವ ಪ್ರಕಾರಗಳನ್ನು ಜನರು ಕಣ್ಣರಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುತ್ತಾರೆ. ತಾಳೆ, ತಾಸೆಯಂತಹ ಪ್ರಕಾರಗಳು ಈ ಮಹಿಳೆಯರ ಬತ್ತಳಿಕೆಯಲ್ಲಿವೆ. ಅಷ್ಟೇ ಅಲ್ಲದೇ ಗೊಂಬೆ ಕುಣಿತದಲ್ಲಿ ಈ ಮಹಿಳೆಯರು ಪ್ರಾವಿನ್ಯತೆ ಪಡೆದಿದ್ದಾರೆ. ಈಗಾಗಲೇ ಈ ಮಹಿಳಾ ಡೊಳ್ಳು ಕುಣಿತ ತಂಡ ಮಹಾರಾಷ್ಟ್ರ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇವರ ಕಲಾ ಪೋಷಣೆ ನೋಡಿ ಗೋಕಾಕದ ಗುರು ಸ್ಮತಿ ಬಳಗ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕಲಾ ತಂಡಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿ, ಮತ್ತಷ್ಟು ಉತ್ತುಂಗದ ಶಿಸ್ತಿಗೆ ಡೊಳ್ಳು ಕುಣಿತವನ್ನು ಈ ಮಹಿಳೆಯರು ತೆಗೆದುಕೊಂಡು ಹೋಗಲಿ ಎಂಬುವುದು ಕಲಾಪ್ರೇಕ್ಷಕರ ಆಶಯ. ಈ ತಂಡ ನಿಮ್ಮೂರಿನ ಜಾತ್ರೆ, ಸಮಾವೇಶ, ಸಮಾರಂಭಗಳಲ್ಲಿ ಹಜ್ಜೆ ಹಾಕಬೇಕೆ ಹಾಗಿದ್ದರೆ ಮೊ.ನಂ 95381 41024 ಸಂಪರ್ಕಿಸಿ.
--
ಡೊಳ್ಳು ಕುಣಿತ ಕೇಲವ ಗಂಡು ಕಲೆ ಎಂದು ಕರೆಯುತ್ತಿದ್ದರು. ಆದರೆ, ಆ ಕಲೆಗೆ ಮಹಿಳೆಯು ಸೈ ಎಂಬುವುದನ್ನು ತೊರಿಸಲು ಡೊಳ್ಳು ಕುಣಿತವನ್ನು ಆರಂಭಿಸಿ, ಡೊಳ್ಳು ಕುಣಿತ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಆರ್ಥಿಕ ನಿರ್ವಹಣೆಯನ್ನು ಮಾಡುತ್ತಿದ್ದೇವೆ.

ಶಂಕ್ರವ್ವ ಮುಗಳಿ, ತಂಡದ ಸಾರಥಿ


ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...