Sunday, 7 January 2018

ಡೊಳ್ಳಿಗೂ ಜೈ ನೇಕಾರಿಕೆಗೂ ಸೈ

ಮಂಜುನಾಥ ಗದಗಿನ ಬೆಳಗಾವಿ

ಮಹಿಳೆ ಎಂದರೆ ಕೇವಲ ಹೆರುವ ಹೊರುವ
ಯಂತ್ರ ಎಂದು ಭಾವಿಸುವ ಕಾಲವೊಂದಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಮಹಿಳೆ ಎಲ್ಲದಕ್ಕೂ ಸೈ ಎನ್ನುತ್ತಾ ಪುರುಷರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆಯುತ್ತಿದ್ದಾಳೆ. ಇದಕ್ಕೆ ನಿದರ್ಶನ ಎಂಬಂತೆ ಗಂಡು ಕಲೆ ಎಂದೆ ಖ್ಯಾತಿಯಾಗಿರುವ ಡೊಳ್ಳು ಕುಣಿತದಲ್ಲೂ ಮಹಿಳೆ ಕಾಲಿಟ್ಟು, ಆಳ ಎತ್ತರದ ಡೊಳ್ಳಿಗೆ ಹೆಗಲೊಡ್ಡಿ ಕುಣಿದು ಕುಪ್ಪಳಿಸಿ ನೋಡುಗರನ್ನು ನಿಬ್ಬೇರಗಾಗುವಂತೆ ಮಾಡುತ್ತಿದ್ದಾಳೆ.
ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಪುರುಷರಿಗೆ ಮಾತ್ರ ಸಿಮೀತವಾಗಿದ್ದ ಕ್ಷೇತ್ರಗಳಲ್ಲೂ ದಾಪು ಇಟ್ಟು ಸೈ ಎನಿಸಿಕೊಂಡಿದ್ದಾಳೆ. ಇದರ ಮಧ್ಯೆಯೇ ಸಂಸಾರದ ನೊಗ ಹೊತ್ತು ನಾನು ಅಬಲೆಯಲ್ಲ ಸಬಲೆ ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳುತ್ತಿದ್ದಾಳೆ. ನಮ್ಮ ದೇಶಿ ಕಲೆಯಾದ ಡೊಳ್ಳು ಕುಣಿತ ಹಬ್ಬ ಹರಿದಿನಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಒಂದು ಕಲೆ. ಆದರೆ, ಆಧುನಿಕತೆಯ ಮಧ್ಯೆ ಇಂದು ಡೊಳ್ಳು ಕುಣಿತ ಕಾಣ ಸಿಗುವುದೇ ಅಪರೂಪವಾಗಿದೆ. ಡೊಳ್ಳು ಕಲಾವಿದರು ಕೂಡಾ ತಮ್ಮ ಕಲೆಯನ್ನೇ ಮರೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಮಹಿಳೆಯರು ಮುಂದೆ ಬಂದು ಗಂಡು ಕಲೆಯಾದ ಡೊಳ್ಳು ಕುಣಿತವನ್ನು ಉಳಿಸಿ ಬೆಳೆಸಲು ಮುಂದಾಗಿದ್ದಾರೆ. ಇದರೊಟ್ಟಿಗೆ ಕುಟುಂಬಕ್ಕೆ ಆರ್ಥಿಕ ನೆರವಾಗುತ್ತಿದ್ದಾರೆ.
ಹೌದು! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಾಕಾಂಬರಿ ಜನಪದ ಮಹಿಳಾ ಡೊಳ್ಳು ಕುಣಿತ ಎಂಬ ಗುಂಪೊಂದನ್ನು ಕಟ್ಟಿಕೊಂಡು ಈ ಮೂಲಕ ಡೊಳ್ಳು ಕುಣಿತವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಡೊಳ್ಳು ಕುಣಿತ ಸಾಮಾನ್ಯ ಕುಣಿತವಲ್ಲ, ಈ ಕುಣಿತ ಮಾಡಲು ಪುರಷರೇ ಎದುರಿಸಿ ಬಿಡುತ್ತಾರೆ. ಯಾಕೆಂದರೆ ಕೊರಳಿಗೆ ಭಾರವಾದ ಡೊಳ್ಳು ಹಾಕಿ ಕೊಂಡು ಕುಣಿಯಬೇಕು. ಇಂತಹ ಕುಣಿತಕ್ಕೆ ಮಹಿಳೆಯರು ಮುಂದಾಗಿರುವುದು ಸೂಚಿಗದ ಸಂಗತಿಯೇ ಸರಿ.
ರೂವಾರಿ
ನೇಕಾರ ಕುಟುಂಬದ ಶಂಕ್ರವ್ವ ಮುಗಳಿ(42) ಎಂಬ ಮಹಿಳೆಯ 2008ರಲ್ಲಿ ಜನಪದ ಸಂಪ್ರದಾಯಿಕ ಸಂಘವನ್ನು ಕಟ್ಟಿಕೊಂಡು ಈ ಮೂಲಕ ಜನಪದ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದರು. ಇದೇ ಆಸಕ್ತಿಯೇ ಮುಂದೊಂದು ದಿನ ಡೊಳ್ಳು ಕುಣಿತಕ್ಕೆ ಪ್ರೇರಣೆಯಾಯಿತೆಂದು ಹೇಳುತ್ತಾರೆ ಶಂಕ್ರವ್ವ. ನಂತರ ದಿನಗಳಲ್ಲಿ ಈ ಸಂಘ ಶಾಕಾಂಬರಿ ಜನಪದ ಮಹಿಳಾ ಡೊಳ್ಳು ಕುಣಿತ ಸಂಘ ಎಂದು ಮರು ನಾಮಕರಣ ಹೊಂದಿತು.

ಎಲ್ಲರೂ ನೇಕಾರರು: 

ಆಧುನಿಕತೆಯ ಭರಾಟೆಯಲ್ಲಿ ನೇಕಾರಿಕೆ ಅವಸಾನದತ್ತ ಸಾಗುತ್ತಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದಂತಾಗಿದೆ. ಹೀಗಾಗಿ ನೇಕಾರ ಮಹಿಳೆಯರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈ ಗುಂಪಿನಲ್ಲಿ ಇರುವವರು ಎಲ್ಲರೂ ನೇಕಾರಿಕೆ ಕುಟುಂಬದವರು ಎನ್ನವುದು ವಿಶೇಷ. ಸದ್ಯ ಈ ಡೊಳ್ಳು ಕುಣಿತ ತಂಡದಲ್ಲಿ 16 ಜನ ಮಹಿಳೆಯರು ಇದ್ದಾರೆ. ಇವರೆಲ್ಲರೂ ಮನೆಯ ಕೆಲಸದ ನಡುವೆಯೇ ಡೊಳ್ಳು ಕುಣಿತ ಅಭ್ಯಾಸ ಮಾಡಿ ವಿವಿಧೆಡೆ ಪ್ರದರ್ಶನ ನೀಡುತ್ತಿರುವುದು ಸ್ತ್ರೀ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ. ಇನ್ನೊಂದು ವಿಶೇಷವೆಂದರೆ ಈ ಗುಂಪಿನಲ್ಲಿ ಎಲ್ಲರೂ 40 ವಯಸ್ಸಿಕ್ಕಿಂತ ಮೇಲಿನವರು ಎಂಬುವುದು. ಅಷ್ಟೇ ಅಲ್ಲದೇ ಈ ಗುಂಪಿನಲ್ಲಿ ದಾನಮ್ಮ ಪಟ್ಟದಕಲ್ಲ ಎಂಬ 60 ವಯಸ್ಸಿನ ಅಜ್ಜಿಯೂ ಇದ್ದಾಳೆ ಎಂಬುವುದು ಮತ್ತೊಂದು ವಿಶೇಷ.

ವಿವಿಧ ಪ್ರಕಾರದ ಪ್ರದರ್ಶನ:


ಕೊರಳಿಗೆ ಡೊಳ್ಳು ಹಾಕಿಕೊಂಡು ಈ ಮಹಿಳೆಯರು ನಾನಾ ಕಸರತ್ತುಗಳನ್ನು ಪ್ರದರ್ಶನ ಮಾಡುತ್ತಾರೆ. ಇವರು ಮಾಡುವ ಪ್ರಕಾರಗಳನ್ನು ಜನರು ಕಣ್ಣರಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುತ್ತಾರೆ. ತಾಳೆ, ತಾಸೆಯಂತಹ ಪ್ರಕಾರಗಳು ಈ ಮಹಿಳೆಯರ ಬತ್ತಳಿಕೆಯಲ್ಲಿವೆ. ಅಷ್ಟೇ ಅಲ್ಲದೇ ಗೊಂಬೆ ಕುಣಿತದಲ್ಲಿ ಈ ಮಹಿಳೆಯರು ಪ್ರಾವಿನ್ಯತೆ ಪಡೆದಿದ್ದಾರೆ. ಈಗಾಗಲೇ ಈ ಮಹಿಳಾ ಡೊಳ್ಳು ಕುಣಿತ ತಂಡ ಮಹಾರಾಷ್ಟ್ರ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇವರ ಕಲಾ ಪೋಷಣೆ ನೋಡಿ ಗೋಕಾಕದ ಗುರು ಸ್ಮತಿ ಬಳಗ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕಲಾ ತಂಡಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿ, ಮತ್ತಷ್ಟು ಉತ್ತುಂಗದ ಶಿಸ್ತಿಗೆ ಡೊಳ್ಳು ಕುಣಿತವನ್ನು ಈ ಮಹಿಳೆಯರು ತೆಗೆದುಕೊಂಡು ಹೋಗಲಿ ಎಂಬುವುದು ಕಲಾಪ್ರೇಕ್ಷಕರ ಆಶಯ. ಈ ತಂಡ ನಿಮ್ಮೂರಿನ ಜಾತ್ರೆ, ಸಮಾವೇಶ, ಸಮಾರಂಭಗಳಲ್ಲಿ ಹಜ್ಜೆ ಹಾಕಬೇಕೆ ಹಾಗಿದ್ದರೆ ಮೊ.ನಂ 95381 41024 ಸಂಪರ್ಕಿಸಿ.
--
ಡೊಳ್ಳು ಕುಣಿತ ಕೇಲವ ಗಂಡು ಕಲೆ ಎಂದು ಕರೆಯುತ್ತಿದ್ದರು. ಆದರೆ, ಆ ಕಲೆಗೆ ಮಹಿಳೆಯು ಸೈ ಎಂಬುವುದನ್ನು ತೊರಿಸಲು ಡೊಳ್ಳು ಕುಣಿತವನ್ನು ಆರಂಭಿಸಿ, ಡೊಳ್ಳು ಕುಣಿತ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಆರ್ಥಿಕ ನಿರ್ವಹಣೆಯನ್ನು ಮಾಡುತ್ತಿದ್ದೇವೆ.

ಶಂಕ್ರವ್ವ ಮುಗಳಿ, ತಂಡದ ಸಾರಥಿ


No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...