Sunday, 14 July 2019

ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!

ಮಂಜನಾಥ ಗದಗಿನ

ಸರ್ಕಾರಿ ಕನ್ನಡ ಶಾಲೆಗಳೋ, ಅಲ್ಲೇನ ಕಲ್ಸ್ತಾರ, ಮಾಸ್ತಗೊಳಗೆ ಏನು ಬರಂಗಿಲ್ಲ, ಇನ್ನ ನಮ್ಮ ಮಕ್ಕಳಿಗೆ ಕಲ್ಸೋದ್ರಾಗ ಅಷ್ಟ ಐತಿ ಎಂದು ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಮೂಗು ಮುರಿದು ಮಾತನಾಡುವ ಜನರೇ ಹೆಚ್ಚು. ಆದರೆ, ಇಲ್ಲೊಂದು ಶಾಲೆ ಮಾತ್ರ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಸ್ಮಾರ್ಟ್ ಆಗಿ, ರಾಜ್ಯದ ಮನೆ, ಮನದ ಮಾತಾಗಿದೆ.
ಹೌದು! ಅದೇ ರಾಯಬಾಗದ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಇಡೀ ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ ಕೀತಿ ಸಾಹಿತಿ ಹಾಗೂ ಶಾಲೆಯ ಶಿಕ್ಷಕ ವೀರಣ್ಣ ಮಡಿವಾಳರ ಎಂಬ ಅಸಾಧಾರಣ ವ್ಯಕ್ತಿ ಸಲ್ಲುತ್ತದೆ.
ಶಾಲೆಯೊಂದು ಭಾಷಾ ಪ್ರಯೋಗಾಲಯವಾಗಬೇಕು ಎಂಬ ಅಭಿಲಾಸೆಯಿಂದ ಮಡಿವಾಳ ಅವರು ಹಲವು ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳೂ ಖಾಸಗಿ ಪಬ್ಲಿಕ್ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂಬ ಮಹತ್ತ ಕನಸನ್ನು ಕಟ್ಟಿಕೊಂಡು ಅದೊಂದು ದಿನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡರು. ಇದನ್ನು ನೋಡಿದ ಸಹೃದಯಿಗಳು ಮಡಿವಾಳರ ಕನಸಿನ ಶಾಲೆಯ ಆರಂಭಕ್ಕೆ ಕೈ ಜೋಡಿಸಿದರು. ನಂತರ ಮಡಿವಾಳ ಅವರಿಂದ ನಡೆದದ್ದು ಸ್ಮಾರ್ಟ್ ಪ್ಲಸ್ ಕ್ಲಾಸ್ ಎಂಬ ಹೊಸ ಕಲ್ಪನೆಯ ಶಾಲೆಯ ಆರಂಭ.

ಏನುದು ಸ್ಮಾರ್ಟ್ ಪ್ಲಸ್ ಕ್ಲಾಸ್:

ನಾವೇಲ್ಲ ಸ್ಮಾರ್ಟ್ ಕ್ಲಾಸ್‌ಗಳ ಬಗ್ಗೆ ಕೇಳಿದ್ದೇವೆ. ಆದರೆ, ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ಪರಿಕ್ಪನೆ ಮಡಿವಾಳ ಅವರದ್ದು. ಸ್ಮಾರ್ಟ್ ಕ್ಲಾಸ್‌ನಲ್ಲಿ ಮಕ್ಕಳಿಗೆ ಪಿಪಿಟಿ(ಪ್ರಜಂಟೆಶನ್ ಪವರ್ ಪಾಯಿಂಟ್) ಮೂಲಕ ಮಕ್ಕಳಿಗೆ ಪಾಠ ಭೋದನೆ ಮಾಡಲಾಗುತ್ತಿದೆ. ಆದರೆ, ಸ್ಮಾರ್ಟ್ ಪ್ಲಸ್ ಕ್ಲಾಸ್‌ನಲ್ಲಿ ಒಂದು ಟಿವಿ ಹಾಗೂ ವೈರಲೇಸ್ ಇಂಟರ್ನೆಟ್ ಬಳಕೆ ಮಾಡಲಾಗುತ್ತಿದೆ. ಅಂದರೆ, ನಿಡಗುಂದಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೪೦ ಇಂಚಿನ ಟಿವಿಯನ್ನು ಹಾಕಲಾಗಿದೆ. ಇದಕ್ಕೆ ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಟಿವಿಯಲ್ಲಿ ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಯ್ಯೂಟೂಬ್ ನಲ್ಲಿ ಮಕ್ಕಳಿಗೆ ಬೇಕಾಗ ಪಠ್ಯಗಳನ್ನು ತೋರಿಸಿ ಪಾಠ ಭೋದನೆ ಮಾಡಲಾಗುತ್ತಿದೆ. ಇದು ಪರಿಣಾಮಕಾರಿ ಕೂಡಾ ಆಗಿದೆ. ಇದೇ ಕಾರಣಕ್ಕೆ ಮಕ್ಕಳು ಬೇಸರ, ಆಯಾಸ ಮಾಡಿಕೊಳ್ಳದೇ ಉತ್ಸಾಹದಿಂದ ಕಲಿಯುತ್ತಿದ್ದಾರೆ.


ಗ್ರೀನ್ ಬೋರ್ಡ್:


ಈ ಶಾಲೆಯಲ್ಲಿ ೧ರಿಂದ ೫ನೇ ತರಗತಿ ಇದೆ. ಇಬ್ಬರೇ ಶಿಕ್ಷಕರು ಇದ್ದು, ೧೨೦ ಮಕ್ಕಳು ಕಲಿಯುತ್ತಿದ್ದಾರೆ. ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಎಲ್ಲ ಮಕ್ಕಳಿಗೂ ಗ್ರೀನ್ ಬೋರ್ಡ್‌ಗಳನ್ನು ಒದಗಿಸಲಾಗಿದೆ. ಈ ಸ್ಮಾಟ್ ಬೋರ್ಡ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗುತ್ತಿದೆ. ಈ ಶಾಲೆಯ ಮಕ್ಕಳು ಪಾಠಿ, ಪೆನ್ಸಿಲ್ ತರದೇ ಇದ್ದರೂ ನಡೆಯುತ್ತಿದೆ. ಏಕೆಂದರೆ ಗ್ರೀನ್ ಬೋರ್ಡ್ ಬಳಕೆ ಇದೆ.
ಪ್ರತಿ ಮಕ್ಕಳಿಗೂ ಖುರ್ಚಿ:
ಸರ್ಕಾರಿ ಶಾಲೆಗಳು ಯಾವುದೇ ವಿಷಯಗಳಲ್ಲೂ ಹಿಂದೆ ಬಿದ್ದಿಲ್ಲ ಎಂಬುವುದಕ್ಕೆ ಈ ಶಾಲೆ ನಿದರ್ಶನವಾಗಿದೆ. ಕನ್ನಡಾಭಿವೃದ್ಧಿ ಪ್ರಾಧಿಕಾರದವರು ನೀಡಿದ ೧ ಲಕ್ಷ ಹಣದಿಂದ ಈ ಶಾಲೆಯ ಮಕ್ಕಳಿಗೆ ಖುರ್ಚಿ ಹಾಗೂ ರೌಂಡ್ ಟೇಬಲ್‌ಗಳನ್ನು ತರಲಾಗಿದೆ. ಮಕ್ಕಳು ಈ ಖುರ್ಚಿ ಮೇಲೆ ಕುಳಿತು ಆರಾಮಾಗಿ ಪಾಠ ನೋಡಿ ಕಲಿಬಹುದಾಗಿದೆ. ಇದಷ್ಟೇ ಅಲ್ಲದೇ, ಶಾಲೆಯಲ್ಲಿ ಮಕ್ಕಳಿಗೆ ಆಗಾಗ ಚರ್ಚಾ ಸ್ಪರ್ಧೆಗಳನ್ನು ಏರ್ಪಾಡು ಮಾಡಿದಾಗ ಈ ರೌಂಡ್ ಟೇಬಲ್ ಸುತ್ತಲೂ ಖುರ್ಚಿ ಹಾಕಿ ಸುಂದವಾರ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಇದಷ್ಟೇ ಅಲ್ಲೇ ಈ ಶಾಲೆ ಮುಖ್ಯೋಪಾಧ್ಯಾಯ ಕೊಠಡಿ ಕೂಡಾ ಹೈಟೆಕ್ ಮಾಡಲಾಗಿದೆ.
ಮನರಂಜನೆಯೊಂದಿಗೆ ಭೋದನೆ:
ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಈ ಶಾಲೆಯಲ್ಲಿ ಮನರಂಜನೆಗೂ ಅವಕಾಶ ಇದೆ. ಪಾಠ ಬೋಧನೆ ಆರಂಭಕ್ಕೂ ಮುನ್ನ ೧೦ರಿಂದ ೧೫ ನಿಮಿಷಗಳ ಕಾಲ ಮಕ್ಕಳಿಗೆ ಇಷ್ಟವಾದ ಹಾಡುಗಳನ್ನು ಟಿವಿಯಲ್ಲಿ ಹಾಕಿ ಅವರಿಂದ ನೃತ್ಯ ಮತ್ತೀತ್ತರ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳ ಮನಸ್ಸನ್ನು ಸಂತಸ ಪಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಈ ಮೂಲಕ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದುತ್ತಿದ್ದಾರೆ. ನಂತರ ಕಲಿನಲಿ-ನಲಿಕಲಿ ಯೋಜನೆ ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಇನ್ನೂ ತಿಂಗಳಿಗೆ ಮಕ್ಕಳ ಚಿತ್ರಗಳನ್ನು ಇಲ್ಲಿ ತೋರಿಸಲಾಗುತ್ತಿದೆ. ಹೀಗಾಗಿ ಈ ಶಾಲೆಯಲ್ಲಿ ಜಾಗತಿಕ ಮಕ್ಕಳ ಶಿಕ್ಷಣ ನೀಡಲಾಗುತ್ತಿದೆ.ಇದರಿಂದ ಈ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಹೊರ ಹೊಮ್ಮಿದೆ.
ಎರಡನೇ ಯೂನಿಟ್ ಆರಂಭ:
ಸ್ಮಾರ್ಟ್ ಪ್ಲಸ್ ಕ್ಲಾಸ್‌ನಡಿಯಲ್ಲಿ ಎರಡು ಯೂನಿಟ್‌ಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರಿನ ಶಶಿಧರ ಟಿ.ಎಂ ಹಾಗೂ ಚನ್ನಪಟ್ಟಣದ ಯತೀಶ ಚಂದ್ರ ಅವರು ಕೊಟ್ಟ ಆರ್ಥಿಕ ನೆರವಿನಿಂದ ಪ್ರಥಮ ಯೂನಿಟ್ ಕ್ಲಾಸ್‌ನಡಿಯಲ್ಲಿ ಡಿಜಿಟಲ್ ಪಾಠ ಬೋಧನೆ ಮಾಡಲಾಗುತ್ತಿದೆ. ಒಂದನೆ ಯೂನಿಟ್‌ನಲ್ಲಿ ೪೦ ಇಂಚಿನ ಟಿವಿ ಹೊಂದಲಾಗಿದ್ದು, ಎರಡನೇ ಯುನಿಟ್‌ನಲ್ಲಿ ೫೦ ಇಂಚಿನ ಟಿವಿ ತರಲಾಗುತ್ತಿದೆ. ಈ ಟಿವಿಯಲ್ಲಿ ಇನ್ನಷ್ಟು ಹೆಚ್ಚಿ ಎಚಡಿ ಹಾಗೂ ಬಹು ಆಯ್ಕೆಗಳು ಇರಲಿದ್ದು, ಮತ್ತಷ್ಟು ಸ್ಮಾರ್ಟ್ ಪ್ಲಸ್ ಕ್ಲಾಸ್ ನಡೆಸಲು ಅನುಕೂಲವಾಗಲಿದೆ ಎನ್ನುತ್ತಾರೆ ವೀರಣ್ಣ ಮಡಿವಾಳ ಅವರು. ಇದಷ್ಟೇ ಅಲ್ಲದೇ ಈ ಶಾಲೆ ಮೂರು ವರ್ಷದಲ್ಲಿ ಅದ್ಭುತ್‌ವಾಗಿ ಬೆಳೆದು ಖಾಸಗಿ ಶಾಲೆಗಳ ಮಕ್ಕಳು ಈ ಶಾಲೆಗೆ ಬರುವಂತಾಗಿದೆ. ವರ್ಷದಿಂದ ವರ್ಷಕ್ಕೆ ಈ ಶಾಲೆಗಳ ಮಕ್ಕಳ ಸಂಖ್ಯೆ ಕೂಡಾ ವೃದ್ಧಿಸುತ್ತಿದೆ. ಇಂತಹ ಶಾಲೆಗಳನ್ನು ರಾಜ್ಯದಲ್ಲೇ ಎಲ್ಲೆಡೆ ನಿರ್ಮಾಣವಾದರೆ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂಬ ಮಾತು ತಾನಾಗಿಯೇ ಮಾಯವಾಗಿ, ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುವುದು ಎಂಬುವುದು ಶಿಕ್ಷಣ ಪ್ರೇಮಿಗಳ ಆಶಯ.
--

ಸರ್ಕಾರಿ ಶಾಳೆಗಳಲೂ ಕೂಡಾ ಖಾಸಗಿ ಶಾಲೆಗಳನ್ನು ಮೀರಿಸಬೇಕು ಎಂಬ ಕನಸು ನನ್ನದಾಗಿತ್ತು. ಈ ಕನಸಿನಡಿಯಲ್ಲೇ ನಾನು ಸ್ಮಾರ್ಟ್ ಪ್ಲಸ್ ಕ್ಲಾಸ್ ಆರಂಭಿಸಿದ್ದೇನೆ. ನನ್ನ ಈ ಪರಿಕ್ಪನೆ ನೋಡಿ ನಾಲ್ಕು ಸರ್ಕಾರಿ ಶಾಲೆಗಳು ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ನಿರ್ಮಾಣಕ್ಕೆ ಮುಂದಾಗಿವೆ. ರಾಜ್ಯದಲ್ಲ ಎಲ್ಲ ಶಾಲೆಗಳು ಈ ರೀತಿ ನಿರ್ಮಾಣವಾಗಬೇಕು ಎಂಬ ಆಶಯ ನನ್ನದು.
-ವೀರಣ್ಣ ಮಡಿವಾಳರ, ಶಿಕ್ಷಕ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...