ಹೊಸತನ-ವಿನೂತ ಬಾಳಿಗೊಂದು ಹಿರಿತನ ತಂದುಕೊಡುವುದೇ, ಈ ಯುಗಾದಿ. ಅದಕ್ಕೆಂದೇ ಭಾರತೀಯರಾದ ನಾವು ಇದನ್ನು ಹೊಸವರುಷ ಎಂದು ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ. ಅದೇ ಯುಗಾದಿ ನನ್ನ ಜೀವನದಲ್ಲೂ ಹೊಸತನ ತರುತ್ತಿತ್ತು.
ಹೌದು! ಯುಗಾದಿ ಹೊಸತನದ ಸಂಕೇತ, ಈ ಹೊಸತನಕ್ಕಾಗಿ ನಾನು ಮತ್ತು ನನ್ನಕ್ಕ ಕ್ಯಾಲೆಂಡರನ್ನು ತಿರುವಿ ಹಾಕುತ್ತಾ ಪದೇ ಪದೇ ಯುಗಾದಿ ಹಬ್ಬ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ದಿನಗಳನ್ನು ಕಳೆಯುತ್ತಿದ್ದೇವು. ಯಾಕೆಂದ್ರೆ ಯುಗಾದಿ ಹಬ್ಬ ಬಂತೆಂದ್ರೆ ನಮ್ಮಪ್ಪ ನಮ್ಗೆಲ್ಲಾ ಹೊಸ ಬಟ್ಟೆ ಕೊಡಿಸುತ್ತಿದ್ದ. ನಾವು ಕೂಡಾ ಯುಗಾದಿ ಒಂದು ತಿಂಗಳು ಇರುವಾಗಲೇ ಯಪ್ಪಾ ಯಪ್ಪಾ ಹೊಸ ಅರ‌್ವಿ ಕೊಡ್ಸಾ ಎಂದು ಗಂಟು ಬಿಳುವುದು ಮಾಮೂಲಾಗಿತ್ತು.
ಯುಗಾದಿ ಸಮೀಪಿಸುತ್ತಿದ್ದಂತೆ ನಮ್ಮ ಆಸೆಗಳಿಗೆ ರೆಕ್ಕೆ-ಪುಕ್ಕಗಳು ಬಂದು ಹಾರಾಡುತ್ತಿದ್ದವು. ನಮ್ಮ ಗೆಳೆಯರಿಗೆಲ್ಲಾ ಲೇ ನಮ್ಮಪ್ಪ ಈ ಸಾರಿ ಯುಗಾದಿಗೆ ಜರ್ಬದಸ್ತ್ ಅಂಗಿ-ಚಡ್ಡಿ ಕೊಡಿಸ್ತಾನಂತ ಎಂದು ಓಣಿಯ ಗೆಳೆಯರಿಗಿಲ್ಲಾ ಹೇಳಿ ವರ್ಚಸ್‌ಮೆಂಟ ಮಾಡುತ್ತಿದ್ದೆ.
ಮಿರ, ಮಿರ್ ಮಿಂಚುವ ಬಣ್ಣದ ತೋಳಂಗಿ, ಸಣಕಲು ಕಾಲುಗಳಿಗೆ ದಪ್ಪ ಜಿನ್ಸ ಪ್ಯಾಂಟು, ಅದಕ್ಕೊಪ್ಪುವ ಬೂಟುಗಳು, ವ್ಹಾ! ಏನ್ ಸ್ಟೈಲ್, ಏನ್ ಲುಕ್, ಅಂತಾ ಇರೋ ಗೆಳೆಯರು. ಅಷ್ಟರಲ್ಲೇ ನಮ್ಮವ್ವಾ ಏಳ್ಲಾ, ಇನ್ನ ಟೈಮ್ ಆತು, ಎಂದು ಗೊಣಗುವದು ನೋಡಿ ನನಗೆ ಎಚ್ಚರವಾಗಿ ಬಿಡುತ್ತಿತ್ತು. ಎದ್ದು ಕುಂತು ಇದು ಕನಸಾ! ಎಂದು ಪೆಚ್ಚು ಮೊರೆಹಾಕಿಕೊಳ್ಳುತ್ತಿದ್ದೆ. ಏಸ್! ಯುಗಾದಿ ಸುತ್ತ ಇಂತಹ ಕನಸುಗಳು ಸಾಮಾನ್ಯವಾಗಿ ಬಿಟ್ಟಿದ್ದವು.
ಒಂದು ವಾರ ಮುಂಚಿತವಾಗಿಯೇ, ಅಪ್ಪ ಅಂಗಿ ತರಲು ಹೋಗುತ್ತಿದ್ದ, ಆದರೆ ಅವನಿಗೆ ನಮ್ಮನ್ನು ಬಿಟ್ಟು ಹೋಗುವ ಖಯಾಲಿ. ಹೇಗಾದ್ರು ಮಾಡಿ ಇವರನ್ನು ಬಿಟ್ಟು ಹೋಗಬೇಕೆಂದುಕೊಳ್ಳುತ್ತಿದ್ದ, ಆದರೆ ಅದು ಅಸಾದ್ಯವಾದ ಕೆಲಸವಾಗಿತ್ತು. ಏಕೆಂದರೆ ನಮ್ಮಪ್ಪ ನಮ್ಮನ್ನು ಬಿಟ್ಟು ಮಾರುದ್ದು ದೂರ ಹೋದಾಗ, ನಾನು ನಮ್ಮಕ್ಕ ಯಾವುದೇ ಸಂಧಿಯಿಂದ ಅಪ್ಪನನ್ನು ಹಿಂಭಾಲಿಸಿ ಬಿಡುತ್ತಿದ್ದೆವು. ಈ ರೀತಿಯಾಗಿ ಅಪ್ಪನ ದುಂಬಾಲು ಬಿದ್ದು ನಮ್ಮಗೆ ಇಷ್ಟವಾದ ಅಂಗಿಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದೇವು. ಆದರೆ ಆ ಹೊತ್ತಿದೆ ನಮ್ಮಪ್ಪನ ಕಿಸೆ ಖಾಲಿ-ಖಾಲಿಯಾಗುತ್ತಿತ್ತು.

ಸ್ನಾನವಾದ ನಂತರ ತಂದೆ-ತಾಯಿ ಮತ್ತು ನಮ್ಮಕ್ಕನ ಕಾಲುಗಳಿಗೆ ಬಿದ್ದು ಆರ್ಶಿವಾದ ಪಡೆಯುತ್ತಿದ್ದೆ ಹಾಗೂ ಬೇವು-ಬೆಲ್ಲ ತಿನ್ನಿಸುತ್ತಿದ್ದೆ. ಆ ಪ್ರತಿವರ್ಷ ನಮ್ಮವ್ವ ಒಂದು ಮಾತು ಹೇಳುತ್ತಿದ್ದಳು ಮಗಾ ಇವತ್ತ ಯಾರ ಕೂಡಾನು ಜಗ್ಲಾ ಮಾಡಬೇಡಾ ಎಂದು ತಪ್ಪದೇ ಹೇಳಿ ಕಳುಹಿಸುತ್ತಿದ್ದಳು. ನಂತರ ದೇವರು, ದಿಂಡ್ರು ಅಂತಾ ಕಂಡ ಕಂಡ ದೇವರಿಗೆಲ್ಲಾ ಹೋಗಿ ನಮಸ್ಕಾರ ಮಾಡುತ್ತಿದ್ದೇನು. ಈ ರೀತಿ ಯುಗಾದಿ ನನ್ನ ಜೀವನದಲ್ಲಿ ಕಹಿಗಿಂತ ಸಿಹಿಯನ್ನೆ ಹೆಚ್ಚಾಗಿ ನೀಡಿದೆ.
ಮಂಜುನಾಥ ಗದಗಿನ
8050753148
No comments:
Post a Comment