ಮಂಜುನಾಥ ಗದಗಿನ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀರಾಮನಿಗೊಸ್ಕರ ಶಬರಿ ಕಾಯ್ದಳು ಎಂದು ಎಲ್ಲರೂ ಗೊತ್ತಿದೆ. ಆದರೆ, ಅಲ್ಲಿ ಕಾಯ್ದಳು ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ, ಇತಿಹಾಸ ಪುಟಗಳನ್ನು ತೀರವಿ ಹಾಕಿದಾಗ ಶಬರಿ ಕಾಯ್ದದ್ದು ಸುರೇಬಾನ ಸಮೀಪದ ಶಬರಿಕೊಳ್ಳ ಎಂಬ ಸ್ಥಳದಲ್ಲಿ ಎಂಬುದು ತಿಳಿದು ಬರುತ್ತದೆ.

ಸುರೇಬಾನ ಗ್ರಾಮದ ಗ್ರಾಮದೇವತೆಯಾಗಿ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆ ಶ್ರೀ ಶಬರಿ ಪೂಜಿಸಲ್ಪಡುತ್ತಾಳೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ಶಬರಿದೇವಿ ನೆಲೆಸಿದ್ದಾಳೆ. ಈ ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಭವ್ಯವಾದ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯು
ತ್ತವೆ. 200 ಅಡಿಗಳ ಅಂತರದಿಂದ ಧುಮ್ಮಿಕ್ಕುವ ಅಂತರಗಂಗೆ ಎಂಬ ಕಿರು ಜಲಧಾರೆ ಇಲ್ಲಿ ಎಲ್ಲರನ್ನು ತನ್ನತ್ತ ಸೆಳೆದು ಮಂತ್ರ ಮುಗ್ದರನ್ನಾಗಿಸುತ್ತದೆ. ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳನ್ನು ಎಲ್ಲರನ್ನು ಅರೆ ಕ್ಷಣ ಚಕಿತಗೊಳಿಸುತ್ತವೆ.
ಜಕಣಾಚಾರಿ ಕೆತ್ತನೆ:

ಶಿಲ್ಪಿ ಜಕಣಾಚಾರಿ ಕೆತ್ತಿದ ಶಬರಿದೇವಿಯ ದೇಗುಲ ಇಲ್ಲಿದೆ. ವಿಶಾಕವಾದ ಮುಖ ಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿ ಮೂರ್ತಿಯು ಸುಮಾರು ಐದು ಅಡಿ ಎತ್ತರದ ಕಲ್ಲಿನ ಪ್ರಭಾವಳಿಗೆ ಹೊಂದಿಕೊಂಡ ಮೂರ್ತಿಯಾಗಿದೆ. ಒಮ್ಮೆ ದರ್ಶನ ಪಡೆದರೆ ಮತ್ತೆ ಮತ್ತೆ ದೇವಿಯ ದರ್ಶನ ಪಡೆದು ಪುನೀಯರಾಗಬೇಕೆಂಬ ಭಕ್ತಿ ಭಾವ ಹೊಮ್ಮುವಂತೆ ಮಾಡುವುದು ಇಲ್ಲಿನ ವೈಶಿಷ್ಟ. ದೇವಾಲಯದ ಎದುರಿಗೆ ದೀಪಮಾಲಿಕಾ ಕಂಭವಿದೆ. ಇಲ್ಲಿ ಪ್ರತಿ ವರ್ಷ ಕಾರ್ತಿಕೋತ್ಸವ ನಡೆಯುತ್ತದೆ.
ಶಬರಿಕೊಳ್ಳಕ್ಕೆ ಆಗಮನ:
ಶ್ರೀ ಶಬರಿಯು ಮಧ್ಯಪ್ರದೇಶದ ಶಭರ ಮಹಾರಾಜನ ಒಬ್ಬಳೇ ಮಗಳು. ಸುಂದರಿಯಾದ ಶ್ರೀ ಶಬರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಉದ್ದೇಶದಿಂದ ಸ್ವಯಂವರ ನಡೆಸಲು ಏರ್ಪಾಡು ಮಾಡುತ್ತಾನೆ. ಶಭರ ಮಹಾರಾಜನ ಅಪ್ಪಣೆಯಂತೆ ಅಷ್ಟ ದಿಕ್ಕುಗಳಿಂದ ಬೇಟೆಯಾಡಿ ಪ್ರಾಣಿಗಳ ತಲೆ ಕತ್ತರಿಸಿ ತಂದು ಸ್ವಯಂವರದ ಮಂಟಪಕ್ಕೆ ಶೃಂಗರಿಸಲು ತಿಳಿಸುವನು. ರಕ್ತ ಸಿಕ್ತ ಸ್ವಯಂವರ ಮಂಟಪವನ್ನು ಕಂಡು ದೀಗ್ಭ್ರಮೆಯಾಗಿ ತನ್ನ ಸ್ವಯಂವರದ ಸಲುವಾಗಿ ಪ್ರಾಣಿಗಳ ಜೀವ ತೆಗೆದಿದ್ದನ್ನು ನೋಡಲಾಗದೆ, ಜೀವನದಲ್ಲಿ ಹಿಂಸೆಗಿಂತ ಅಹಿಂಸಾಮಾರ್ಗ ಒಳ್ಳೆಯದು ಎಂದುಕೊಂಡು ಅದರಂತೆ ವೈರಾಗ್ಯತಳೆದು ಸುಖ-ಸಂಪತ್ತು, ಸೌಭಾಗ್ಯವನ್ನು ಬಿಟ್ಟು ಸಕಲ ರಾಜ ವೈಭವವನ್ನು ತೊರೆದು, ನಾರುಮಡಿಯನ್ನುಟ್ಟು ದೇಶ ಸಂಚಾರಿಯಾಗಿ ಶಬರಿಯು ಸುರೇಬಾನ ಗ್ರಾಮಕ್ಕೆ ಹೊಂದಿದ ಅರಣ್ಯದಲ್ಲಿ ನೆಲೆಸಿರುವುದು ಪುರಾಣದಲ್ಲಿ ಉಲ್ಲೇಖವಿದೆ. ರಾಮದುರ್ಗದಿಂದ 14 ಕಿ.ಮೀ ಮತ್ತು ಸುರೇಬಾನದಿಂದ 3 ಕಿ.ಮೀ ಅಂತರದಲ್ಲಿದೆ ಈ ಶಬರಿ ನೆಲೆಸಿರುವ ಸ್ಥಳ.
ಈ ದೇವಾಲಯ ಕುರಿತು ಎರಡು ದೃಷ್ಟಾಂತಗಳು ಪ್ರಚಲಿತದಲ್ಲಿವೆ.
ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥ.
ಶ್ರೀರಾಮನ ಶ್ರೇಷ್ಠ ಭಕ್ತೆಯಾದ ಶ್ರೀ ಶಬರಿಯ ಭಕ್ತಿ ಅನನ್ಯವಾಗಿದೆ. ರಾಮ ಲಕ್ಷ್ಮಣನೊಂದಿಗೆ ವನವಾಸಕ್ಕೆ ಬರುವ ಮಾರ್ಗದಲ್ಲಿ ಶಬರಿ ರಾಮನಿಗಾಗಿ ತಾನು ಸಂಗ್ರಹಿಸಿದ ಬೋರೆ ಹಣ್ಣುಗಳನ್ನು ನೀಡಿದ ಕಥೆ ರಾಮಾಯಣದ್ದು. ಈ ಕಥೆಯಲ್ಲಿ ಬರುವ ಶಬರಿ ಇಲ್ಲಿಯೇ ವಾಸವಾಗಿದ್ದಳು.ಶ್ರೀರಾಮನ ಬರುವಿಗಾಗಿ ತಪಗೈದು ಶ್ರೀರಾಮನಿಗಾಗಿ ಬೋರೆ ಹಣ್ಣುಗಳನ್ನು ಆಯ್ದುತಂದು ಸಿಹಿನೋಡಿ ಸಿಹಿಯಾದ ಹಣ್ಣುಗಳನ್ನು ಬೇರ್ಪಡಿಸಿ ಇಡುತ್ತಿದ್ದಳು. ಶ್ರೀಮಾತೆಯ ತಪ್ಪಸ್ಸಿನ ಫಲವೋ ಏನೋ ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಬಂದನು. ಈ ಅಭಯಾರಣ್ಯದಲ್ಲಿ ನೆಲೆಸಿದ ಶ್ರೀ ಶಬರಿಮಾತೆಗೆ ದರ್ಶನವಿತ್ತು ಸಿಹಿ ಬೋರೆಹಣ್ಣುಗಳನ್ನು ಸೇವಿಸಿದರು. ಶ್ರೀರಾಮ ಆಕೆಯ ಭಕ್ತಿಯನ್ನು ಮೆಚ್ಚಿ ಏನು ವರ ಬೇಕು ಕೇಳು ನಿನಗೆ ಎಂದು ಕೇಳುತ್ತಾನೆ. ಆಕೆ ಶ್ರೀರಾಮನ ತೊಡೆಯ ಮೇಲೆ ಪ್ರಾಣ ಬಿಡಲು ಬಯಸುತ್ತಾಳೆ. ಪ್ರಾಣಪಕ್ಷಿ ಹಾರಿ ಹೋಗುವ ಸಂದರ್ಭದಲ್ಲಿ ರಾಮನ ತೊಡೆಯ ಮೇಲೆ ಮಲಗಿದ್ದಾಗ ರಾಮನು ಸುತ್ತಲೂ ನೀರಿಗಾಗಿ ವೀಕ್ಷಿಸಿದನೆಂದೂ, ನೀರು ಕಂಡು ಬರದೇ ಇದ್ದಾಗ ಬಾಣ ಪ್ರಯೋಗಿಸಿ ತನ್ನ ಬಿಲ್ವಿದ್ಯೆಯ ಮೂಲಕ ನೀರು ತರಿಸಿದನೆಂಬ ಪ್ರತೀತಿ ಹೊಂದಿದ ಎರಡು ಹೊಂಡಗಳು ಸಾಕ್ಷಿಯಾಗಿ ಇಲ್ಲಿವೆ. ಆ ಹೊಂಡಗಳಲ್ಲಿ ಗಣಪತಿ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲಾ ಮತ್ತು ಪವಿತ್ರ ತೀರ್ಥವೆಂದು ಇಲ್ಲಿಗೆ ಬರುವ ಭಕ್ತಾಧಿಗಳು ಭಾವಿಸುತ್ತಾರೆ. ಶಬರಿ ನೆಲೆ ನಿಂತ ತಾಣವಾದ ಈ ಪವಿತ್ರ ಸ್ಥಳವೇ ಶ್ರೀ ಶಬರಿಕೊಳ್ಳವಾಗಿದೆ
ಶ್ರೀ ಶಬರಿ ಮಾತೆಯು ಶ್ರೀರಾಮನಿಗೆ ನನಗೆ ಮುಕ್ತಿ ದಯಪಾಲಿಸು ಅಂತ ಬೇಡಿಕೊಂಡಾಗ ಆಗ ಶ್ರೀರಾಮನು ಮಾತೆ ನಿನಗೆ ಮುಕ್ತಿ ಸಿಗಬೇಕಾದರೆ ನೀನು ’ಪಂದಳ ರಾಜ್ಯ’ದಲ್ಲಿನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪುನೀತಳಾಗು ಎಂದು ಅನುಗ್ರಹಿಸಿದ ಪವಿತ್ರ ಸ್ಥಾನವು ಇದಾಗಿದೆ. ಅಲ್ಲದೆ ದೇಶಾದ್ಯಂತ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ತುಳಸಿ ಮಾಲೆಯನ್ನು ಧರಿಸಿ ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆಯುದಕ್ಕಿಂತ ಮುನ್ನ ಶ್ರೀ ಶಬರಿಯು ತಪಸ್ಸು ಮಾಡಿ ಮೋಕ್ಷ ಪಡೆದ ’ಶಬರಿ ಪೀಠಂ’ ಅಂತಾ ದೇವಸ್ಥಾನದಲ್ಲಿ ಮೊದಲು ಪೂಜೆಗೈದು ನಂತರ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ಮೊದಲಿನಿಂದಲೂ ನಡೆದು ಬಂದ ವಾಡಿಕೆಯಾಗಿದೆ.
ಇನ್ನೊಂದು ಕಥೆ ಸೊರೆವ್ವನದು. ಆಕೆ ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿದ್ದ ಋಷಿ ಮುನಿಗಳಿಗೆ ಉಪಟಳ ನೀಡುತ್ತಿದ್ದ ಸುರಭ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಅವಳ ಸ್ಮರಣೆಗಾಗಿ ದೇಗುಲ ನಿರ್ಮಾಣಗೊಂಡಿದೆ ಎನ್ನಲಾಗಿದೆ.
ಆದ್ದರಿಂದ ಈ ಊರನ್ನು ಮೊದಲಿಗೆ ಸೂರಿಬನ ಎಂದೂ ನಂತರದ ದಿನಗಳಲ್ಲಿ ಸೂರಿಬನವೇ ಸುರೇಬಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ ಎಂದೂ ಪ್ರತೀತಿ ಇದೆ.
ಈ ಕ್ಷೇತ್ರಕ್ಕೆ ನೂರಾರು ಜನ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಸಾಧು-ಸಂತರು ಬಂದು ಶ್ರೀ ಶಬರಿಯ ಸನ್ನಿಧಿಯಲ್ಲಿ ಜಪ-ತಪ ಗೈದು ಪುನೀತರಾಗಿರುವರು. ಮತ್ತು ಸುರೇಬಾನ-ಮನಿಹಾಳ ಗ್ರಾಮದ ಸದ್ಗುರು ಶ್ರೀ ಶಿವಾನಂದರು 18 ದಿನಗಳವರೆಗೆ ಅನುಷ್ಟಾನ ಗೈದು ಶ್ರೀ ಶಬರಿ ತಾಯಿ ಕೃಪೆಗೆ ಪಾತ್ರರಾಗಿರುವುದು ತಾಜಾ ನಿದಶರ್ನ.
ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳ:

ಒಂದು ಸುಂದರ ಪುಷ್ಕರಣಿಯಲ್ಲಿ ಸತತ ಜಲೋದ್ಭವವಾಗುತ್ತಿದೆ. ಜಲದ ಪ್ರೋಕ್ಷಣೆಯಿಂದ ಪಾಪನಾಶವಾಗುವುದು. ಅಲ್ಲದೆ ಪಾನಮಾಡಿದರೆ ಸಕಲ ರೋಗಕ್ಕೆ ಸಂಜೀವಿನಿಯಂತಿದೆ. ಇನ್ನೊಂದು ಪುಷ್ಕರಣಿಯಲ್ಲಿ ಸ್ನಾನಕ್ಕೆ ವ್ಯವಸ್ಥೆ ಇದೆ. ದೇವಸ್ಥಾನಕ್ಕೆ ಹೊಂದಿಕೊಂಡು ಪೌಳಿಗಳು ಇವೆ. ಭಕ್ತಾದಿಗಳಿಗೆ ತಂಗಲು ಅನುಕೂಲವಿದೆ. ಈಗ ಸರಕಾರಿ ಸಹಾಯ ಧನದಲ್ಲಿ ಭವ್ಯವಾದ ಕಟ್ಟಡವಿದೆ. ಮದುವೆಯಂತಹ ಕಾರ್ಯಕ್ರಮಗಳಿಗೆ ಅವಕಾಶವಿದೆ. ವರ್ಷದಲ್ಲಿ ನೂರಾರು ಮದುವೆಗಳು ನಡೆಯುತ್ತವೆ. ಅಲ್ಲದೆ ಶ್ರೀಕ್ಷೇತ್ರದಲ್ಲಿ ನೋಡುಗರ ಮನಸೆಳೆಯುವ 200 ಅಡಿಗಳ ಅಂತರದಿಂದ ದುಮ್ಮಿಕ್ಕಿ ಬೀಳುವ ಅಂತರಗಂಗೆ, ಆಕಳ ಮೊಲೆಯು ಸೂಮಾರು 120 ಅಡಿಗಳಷ್ಟು ಎತ್ತರದಲ್ಲಿ ಗುಹೆಯಲ್ಲಿ ಇದೆ. ಸಾವಿರ ವರುಷ ಇತಿಹಾಸ ವಿರುವ ಬೋರೆಹಣ್ಣಿನ ಮರವಿದೆ. ಶ್ರೀರಾಮ ಮಂದಿರ ಹಾಗೂ ಮಳೆರಾಜನ ಮಂದಿರವು ಇದೆ.
ಇಲ್ಲಿನ ದೇವಿಗೆ ನಿತ್ಯವೂ ಪೂಜೆ, ಆಭಿಷೇಕ ಸಲ್ಲುತ್ತಿದೆ.ಕಾರ್ತಿಕ ಮಾಸ, ದೀಪಾವಳಿ ಅಮವಾಸ್ಯೆ , ಹುಣ್ಣಿಮೆ ಸಂದರ್ಭಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಜಾತ್ರೆ ದಿನ ಸುರೇಬಾನದ ಶ್ರೀ ಮಾರುತಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ದೇವಾಲಯದವರೆಗೂ ಬರುತ್ತದೆ ತದನಂತರ ಜಾತ್ರೆಗೆ ಚಾಲನೆ ನೀಡುತ್ತಾರೆ.