ಮಂಜುನಾಥ ಗದಗಿನ
ಕಡುಕಪ್ಪು ಆಕಾಶದಲ್ಲಿ ಮಿಂಚೂಂದು ಮೂಡಿದಾಗ ಎದೆಯಲ್ಲಿ, ಅದೇನೋ! ಸಂಚಲನ. ಮಾಸಿದ ನೆನಪುಗಳು ಬೇಡವೆಂದರು ತುಂಟ ಮಳೆ ಬೀಡಬೇಕಲ್ಲಾ, ಬಂದು ಮನಸ್ಸಿನಾಳದಲ್ಲಿ ನೆನಪಿನ ತುಂತುರು ಹನಿಗಳನ್ನು ಸುರಿಸಿಯೇ ಹೋಗುತ್ತದೆ. ಹಾಗೆಯೇ ಚಂದದ ಚಿತ್ರವೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಮನಸ್ಸು ಕೂಡಾ ತನಗರಿವಿಲ್ಲದೇ ಆ ನೆನಪಿನ ಮಳೆಯಲ್ಲಿ ಜಾರಿ ಹೋಗುತ್ತದೆ.
ಈಗತಾನೆ ಮಳೆಗಾಲ ಆರಂಭವಾಗಿದೆ. ಬಿಸಿಲಿಗೆ ಬಾಯಿತೆರೆದಿದ್ದ ಭೂತಾಯ ಒಡಲ ಹೊಕ್ಕ ಮಳೆಯ ಹನಿಗಳು ಗಮ್ ಎಂದು ಮಣ್ಣಿನ ಸುವಾಸೆಯನ್ನು ಎಲ್ಲೆಡೆ ಹರಡಿಕೊಂಡಿದೆ. ಇದರೊಟ್ಟಿಗೆ ಬಾಲ್ಯದ ಆ ದಿನಗಳು ಕೂಡಾ ಹೂಡಿ ಎದ್ದು ಮನಸ್ಸಿನಾಳದಲ್ಲಿ ಹೊಸ ಮನ್ಮಂತರನ್ನು ಸೃಷ್ಠಿಸಿ ತೇಲಾಡುತ್ತಿವೆ. ಅದು ಕೂಡಾ ಕಾಗದ ದೋಣಿಯ ನೆನಪಿನೊಂದಿಗೆ.
ದಟ್ಟ ಕಾರ್ಮೋಡಗಳು ಆಗಸದ ತುಂಬೇಲ್ಲಾ ಹರಡಿಕೊಂಡು ಒಂದಕ್ಕೊಂದು ಜಿದ್ದಿಗೆ ಬಿದ್ದವರ ಹಾಗೆ ತೇಲುತ್ತಿದ್ದರೆ. ಮಳೆ ಬರುವ ಮುನ್ಸೂಚನೆ ಎಂದು ತಿಳಿದುಕೊಂಡು ಮನೆ ಸೇರುತ್ತಿದ್ದೇವು. ಮಳೆಯ ಹನಿಗಳು ಭೂಮಿಯನ್ನು ತಾಕೀದಾಗ, ಸೂಸುತ್ತಿದ್ದ ಆ ತಣ್ಣನೆಯ ತಂಗಾಳಿಗೆ ಮೈಮನಗಳು ಜಲ್ ಎಂದು ಅವ್ವನ ಸೆರಗಿನ ಹಿಂದೆ ಬೆಚ್ಚಗೆ ಅವಿತುಕೊಳ್ಳುವ ಹಾಗೆ ಮಾಡುತ್ತಿತ್ತು.
ಹೊರಗಡೆ ಮಳೆಯ ಆರ್ಭಟ ಹೆಚ್ಚಾದಂತೆ, ನಮ್ಮ ಕಾಗದ ದೋಣಿಯ ಆಸೆಗಳು ಗರಿಗೆದರುತ್ತಿದ್ದವು. ನಾನು ನಮ್ಮಕ್ಕ ಪುಸ್ತಕದ ಹಾಳೆಗಳನ್ನು ಕಿತ್ತುಕೊಂಡು, ಕಾಗದ ದೋಣಿಗಳನ್ನು ತಯಾರಿಸಿ ನಾನು ಅವ್ವನ ಮಗನಾಗಿದ್ದರಿಂದ ನಾನು ಅವ್ವ ಹೆಸರು ಬರೆದು ,ಅಕ್ಕ ಅಪ್ಪನ ಹೆಸರು ಬರೆದು ಮನೆಯ ಮುಂದೆ ನಿಂತು ತೇಲಿಬಿಡುತ್ತಿದ್ದೇವು. ಅವುಗಳು ಸಾಗಿದಂತೆ ಅವುಗಳ ಹಿಂದೆ ನಮ್ಮ ಪಯಣವು ಸಾಗುತ್ತಿತ್ತು. ಕಾಗದ ದೋಣಿಗಳು ನಾ ಮುಂದು ತಾ ಮುಂದು ಎಂಬಂತೆ ಸಾಗುತ್ತಿದ್ದರೆ, ನಾವುಗಳು ನನ್ನ ದೋಣಿ ಮುಂದೆ ಸಾಗಲಿ ಎಂದು ಅದರ ಹಿಂದೆ ನೀರು ಚಿಮ್ಮುತ್ತಾ ದೋಣಿಗೆ ವೇಗತುಂಬುತ್ತಿದ್ದೇವು.
ದೋಣಿಗಳು ಸಾಗಿದಂತೆ ನಮ್ಮ ಹಾರಾಟ ಚಿರಾಟವು ಸಾಗುತ್ತಿತ್ತು. ದೋಣಿಗಳು ಸಾಗಿದಂತೆ ಮುಂದೆ ಇರುತ್ತಿದ್ದ ಕಡ್ಡಿ ಕಸರನ್ನು ಸ್ವಚ್ಚ ಮಾಡುತ್ತಾ, ದೋಣಿಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದೇವು. ಅವುಗಳು ನಮ್ಮ ಮನೆಯಿಂದ ಸ್ವಲ್ಪ ದೂರವಿರುವ ಕೆರೆಯನ್ನು ತಲುಪೂರೆಗು ಮಳೆಯನ್ನು ಲೆಕ್ಕಿಸದೇ ಅವುಗಳ ಜೊತೆ ಆಟ ಆಡುತ್ತಾ, ಹೋಗುತ್ತಿದ್ದೇವು. ಒಂದು ವೇಳೆ ಯಾವುದೇ ದೋಣಿ ಮುಗುಚಿದರು ಮತ್ತೊಂದು ದೋಣಿಗೆ ಸಾಥ ನೀಡುತ್ತಿದ್ದೇವು.
ಇನ್ನೂ ಶಾಲೆಗೆ ಹೋದ ಸಂದರ್ಭದಲ್ಲಿ ಮಳೆ ಬಂದ್ರೆ ಮುಗಿದೆ ಹೋಯಿತು. ನಮ್ಮ ಗೆಳೆಯರೆಲ್ಲರೂ ಗಂಡು ಕಾಗದ ದೋಣಿಗಳನ್ನು ಮಾಡಿ ಬೀಡುತ್ತಿದ್ದರು. ಹೌದು! ದೋಣಿಗಳಲ್ಲಿ ಗಂಡು ಮತ್ತು ಹೆಣ್ಣು ದೋಣಿಗಳಿವೆ. ದೋಣಿಯ ಕೆಳಗೆ ಒಂದು ಮಡಚಿದ ತುದಿ ಬಂದರೆ ಅದು ಗಂಡು ದೋಣಿ, ಇಲ್ಲಾ ಅಂದ್ರೆ ಅದು ಹೆಣ್ಣು ದೋಣಿ. ಹೀಗೆ ಶಾಲೆಯಿಂದ ಬರ‌್ಬೇಕಾದ್ರೆ ದೋಣಿಗಳನ್ನು ರಸ್ತೆ ಪಕ್ಕದ ಚರಂಡಿಯಲ್ಲಿ ಬೀಡುತ್ತಿದ್ದೇವು. ಕೆಲವೊಂದಿಷ್ಟು ಹುಡ್ಗರು ನಿಂತ ನೀರಿನಲ್ಲಿ ಕಲ್ಲಿನ ಕಪ್ಪೆ ಜಿಗಿಸುತ್ತಾ ತಲೆಯ ಮೇಲೆ ಪಾಠಿ ಚೀಲವನ್ನು ಹೊದ್ದುಕೊಂಡು ಮನೆಗೆ ಸಾಗುತ್ತಿದ್ದೇವು. ಆ ಕ್ಷಣಗಳನ್ನು ನೆನೆದ್ರೆ ಮೈ ಮನಸ್ಸುಗಳು ಅರೇ ಕ್ಷಣ ಕಾಗದ ದೋಣಿಯಲ್ಲಿ ಪ್ರಯಾಣಿಸುತ್ತದೆ, ಮನಸ್ಸು ಕಪ್ಪೆಯ ಹಾಗೆ ಜಿಗಿದಾಡುತ್ತದೆ.
ಮಳೆ ಕೇವಲ ಮಳೆ ಅಲ್ಲ, ಅದು ಬಾನು ಕೂಡಿಟ್ಟ ಭಾವನೆಗಳ ಸೆಲೆ. ಈ ಸೆಲೆಯಲ್ಲೆ ನಮ್ಮಲ್ಲೆರ ಭಾವನೆಗಳು ಆ ಮಳೆಯೊಂದಿಗೆ ಚಲ್ಲಾಟ ಆಡುತ್ತವೆ. ಅಂತಹ ಚಲ್ಲಾಟದ ಒಂದು ಸುಂದರ ನೆನಪೆ ಈ ಕಾಗದ ದೋಣಿಯ ಮಾಸದ ನೆನಪು.
No comments:
Post a Comment