ಮಹಾದೇವಪ್ಪ ಪಟ್ಟಣ ಸ್ಥಾಪಿಸಿದ್ದ ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ
-ಮಂಜುನಾಥ ಗದಗಿನಸ್ವಾತಂತ್ರ್ಯ ಹೋರಾಟ ತೀವ್ರಗತಿಯಲ್ಲಿ ಸಾಗಿದ್ದ ಸಮಯ. ಈ ವೇಳೆ ಬ್ರಿಟಿಷರು ಹೆಚ್ಚಿಸಿದ್ದ ಕಂದಾಯಕ್ಕಿಂತ ಜನರ ಮೇಲೆ ಹೆಚ್ಚಿನ ಕಂದಾಯ ಹೇರಿದ್ದ ಸಂಸ್ಥಾನಿಕರ ವಿರುದ್ಧ ಜನರನ್ನು ಒಗ್ಗೂಡಿಸಿ ಬ್ರಿಟಿಷರಿಗೆ ಪರೋಕ್ಷವಾಗಿ ನಡುಕ ಹುಟ್ಟಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ಸ್ಥಾಪನೆ ಮಾಡಿ ಜನರ ಮನಪರಿವರ್ತನೆ ಮಾಡಿ ಜನರಿಗೆ ಮನರಂಜನೆಯ ಜತೆಗೆ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿದ್ದು ರಾಮದುರ್ಗದ ಮಹಾದೇವಪ್ಪ ಪಟ್ಟಣ.
ಮಹಾದೇವಪ್ಪ ಪಟ್ಟಣನವರು ಬಾಯಿಯಲ್ಲಿ ಬಂಗಾರ ಚಮಕ ಇಟ್ಟುಕೊಂಡು ಹುಟ್ಟಿದರು. ಮನೆಯಲ್ಲಿ ಸಾಕಷ್ಟು ಆಸ್ತಿ ಇತ್ತು. ಕುಳಿತು ಉಂಡರೂ ಕರಗದಷ್ಟು ಶ್ರೀಮಂತಿಕೆ ಅವರ ಬಳಿ ಇತ್ತು. ಆದರೆ, ಇದ್ಯಾವುದಕ್ಕೂ ಪಟ್ಟಣ ಅವರು ಮಾರು ಹೋಗದೇ ದೇಶಕ್ಕಾಗಿ, ತಮ್ಮ ಜನರಿಗೆ ಒಳಿತಾದರೆ ಸಾಕು ಎಂಬ ಒಂದೇ ಒಂದು ಮನೋಭಾವ ಅಲ್ಲರಲ್ಲಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಶ್ರೀಮಂತಿಕೆ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.
೧೯೩೪ ರಿಂದ ೧೯೩೭ರ ಅವಧಿಯಲ್ಲಿ ತೀವ್ರ ಬರಗಾಲ ತಲೆದೋರಿತ್ತು. ದುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ದುಸ್ತರವಾಗಿತ್ತು. ಇಂತಹ ಸನ್ನಿವೇಶದಲ್ಲಿ ಜನರ ಕಷ್ಟಗಳಿಗೆ ಮುಂದಾಗುವುದು ಬಿಟ್ಟು ಸಂಸ್ಥಾನದ ರಾಜ ಬ್ರಿಟಿಷ್ ಹದ್ದಿಗಿಂತ ಒಂದೂವರೆ ಪಟ್ಟು ಹೆಚ್ಚಿಗೆ ಭೂಕಂದಾಯ ವಸೂಲಿ ಮಾಡುತ್ತಿದ್ದ. ಸಂಸ್ಥಾನಿಕರ ಹಾಗೂ ಜನರ ಹೋರಾಟಕ್ಕೆ ಹಾದಿ ಮಾಡಿಕೊಟ್ಟಿತು.
ಇಂತಹ ಸಂದರ್ಭದಲ್ಲಿ ಸಂಸ್ಥಾನಿಕರ ವಿರುದ್ಧ ಹೋರಾಟ ನಡೆಸಲು ಜನರು ಮುಂದಾದರು. ಈ ವೇಳೆ ಮಹಾದೇವಪ್ಪ ಪಟ್ಟಣ ಅವರು ಮುಂಚೂಣಿಗೆ ಬಂದು ಬಂಡಾಯದ ನಾಯಕತ್ವ ವಹಿಸಿಕೊಂಡರು. ಇದಾದ ನಂತರ ಪಟ್ಟಣ ಅವರು ಸಂಸ್ಥಾನಿಕ ರಾಜನ ಕೆಂಗಣ್ಣಿಗೆ ಗುರಿಯಾದರು. ಈ ವೇಳೆ ಪಟ್ಟಣ ಅವರನ್ನು ರಾಜ ಬಗ್ಗು ಬಡಿಯಲು ನೋಡಿದ. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಮಹಾದೇವಪ್ಪನವರು ನ್ಯಾಯವಾದಿ ಬಿ.ಎನ್.ಮುನವಳ್ಳಿ ಅವರ ಜತೆಗೂಡಿ ಜನಜಾಗೃತಿ ಮಾಡಿದರು.
ಸ್ಫೂರ್ತಿಗಾಗಿ ರಾಜ ಬೀದಿಯಲ್ಲಿ ಕಾಂಗ್ರೆಸ್ ಧ್ವಜ ಕಂಬ ನೆಟ್ಟರು. ಸ್ವಯಂ ಸೇವಕರ ಪಡೆ ಕಟ್ಟಿದರು. ಬಂಡಾಯದಲ್ಲಿ ಪಾಲ್ಗೊಂಡ ಹೋರಾಟಗಾರರ ಖರ್ಚು-ವೆಚ್ಚ ನೋಡಿಕೊಂಡರು. ಇದೇ ವೇಳೆ ಜನರನ್ನು ಒಂದುಗೂಡಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ರಚಿಸುವ ಮೂಲಕ ಜನರಲ್ಲಿ ಬಂಡಾಯ ಹಾಗೂ ಸ್ವಾತಂತ್ರ್ಯ ಹೋರಾಟ ಬಗ್ಗೆ ಜಾಗೃತಿ ಮೂಡಿಸಿ ಜನರು ಹೋರಾಟಕ್ಕೆ ಕರೆತಂದರು. ಏನಾದರೂ ನಿರ್ಧಾರಗಳನ್ನು ಮಾಡಲು, ಚರ್ಚಿಸಲು ಈ ನಾಟಕ ಕಂಪನಿ ಬಳಸಿಕೊಂಡರು. ನಾಟಕ ನೋಡಲು ಬರುವ ಜನರಿಗೆ ಅರಿವು ಮೂಡಿಸಿದರು.
ಹೋರಾಟದ ಕಾವು ಹೆಚ್ಚಾದಂತೆ ಇವರನ್ನೆಲ್ಲ ಮಟ್ಟ ಹಾಕಲು ರಾಜ ಕೊಲ್ಲಾಪುರದಲ್ಲಿದ್ದ ಬ್ರಿಟಿಷ್ ಪೊಲಿಟಿಕಲ್ ಏಜೆಂಟ್‌ನನ್ನು ಸಂಪರ್ಕಿಸಿ ಸೈನ್ಯ ಕಳುಹಿಸಲು ಕೇಳಿಕೊಂಡ. ಆದರೆ, ಚಳವಳಿ ತೀವ್ರ ಸ್ವರೂಪ ಕಂಡ ಬ್ರಿಟಿಷರು ರಾಜನಿಗೆ ಬುದ್ಧಿವಾದ ಹೇಳಿ ಕಳಹಿಸಿದರು. ಇನ್ನು ಪಟ್ಟಣ ಹಾಗೂ ಮುನವಳ್ಳಿ ಅವರನ್ನು ಕೊಂದರೆ ಬಂಡಾಯ ಶಮನವಾಗುವುದು ಎಂದು ಯೋಚಿಸಿದ್ದ ರಾಜ ಅವರನ್ನು ಕೊಲ್ಲಲು ೧೯೩೯ರಲ್ಲಿ ತೇರ ಬಜಾರದಲ್ಲಿದ್ದ ಕಾಂಗ್ರೆಸ್ ಧ್ವಜ ಸ್ತಂಭ ತೆರವುಗೊಳಿಸಿದ.
ಇದು ಸಂಘರ್ಷಕ್ಕೆ ಕಾರಣವಾಗಿ ಲಾಠಿ ಜಾರ್ಜ್, ಕಲ್ಲು ತೂರಾಟಕ್ಕೆ ಕಾರಣವಾಯಿತು. ಈ ವೇಳೆ ಪರಿಸ್ಥಿತಿ ಗಂಭೀರತೆ ಅರಿತ ಪಟ್ಟಣ ಅವರು ಮನೆಗೆ ಬಂದು ಮನೆಯಲ್ಲಿದ್ದ ಹಣ ತೆಗೆದುಕೊಂಡು ಊರು ಬಿಟ್ಟು ಭೂಗತರಾದರು. ತದನಂತರ ಮುನವಳ್ಳಿ ಅವರ ಬಂಧನವಾಗಿ ಅದು ಹಿಂಸಾಚಾರಕ್ಕೆ ತಿರುಗಿ ಪೊಲೀಸರು, ಹೋರಾಟಗಾರರ ಹತ್ಯೆಯಾಯಿತು. ಈ ಸುದ್ದಿ ತಿಳಿದ ಮಹಾದೇವಪ್ಪ ಪಟ್ಟಣ ಅವರು ನೊಂದುಕೊಂಡರು. ಪಟ್ಟಣ ಅವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ಕೂಡವಾಯಿತು. ಅಲ್ಲದೆ, ಹಿಡಿದು ಕೊಟ್ಟವರಿಗೆ ₹೧೦ ಸಾವಿರ ಕೊಡುವುದಾಗಿ ತಿಳಿಸಲಾಯಿತು. ಇದರಿಂದ ಪಟ್ಟಣ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದರು. ತಮ್ಮ ಸ್ಥಳಗಳನ್ನು ಬದಲಿಸುತ್ತಾ ಅಲೆದಾಡಿದರು. ಇದೇ ವೇಳೆ ಪಟ್ಟಣ ಅವರು ಶರಣಾಗಬೇಕು. ಇಲ್ಲದಿದ್ದರೆ ಅವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಫರ್ಮಾನು ಹೊರಡಿಸಲಾಯಿತು. ಆದರೆ, ಪಟ್ಟಣ ಅವರು ಶರಣಾಗದೇ ಇದ್ದ ಕಾರಣ ಅವರ ೪೦೦ ಎಕರೆ ಜಮೀನನ್ನು ಸಂಸ್ಥಾನಿಕರು ವಶಪಡಿಸಿಕೊಂಡರು. ನಂತರ ದೇಶದ ವಿವಿಧೆಡೆ ಭೂಗತರಾಗಿ ಚಲೇಚಾವ್ ಚಳವಳಿಯಲ್ಲಿ ಪಾಲ್ಗೊಂಡರು.
ಜೈಲು ಸುಟ್ಟು, ಪೊಲೀಸರ ಹತ್ಯೆ ಮಾಡಿದ ಕಾರಣಕ್ಕೆ ಅನೇಕರಿಗೆ ಶಿಕ್ಷೆಯಾಯಿತು. ಈ ವೇಳೆ ಶಿಕ್ಷೆಗೊಳಗಾಗಿದ್ದ ಎಲಿಗಾರ ಬಸಪ್ಪ ನೇಣಿಗೇರುವ ಮುನ್ನ ಕೊನೆಯ ಆಸೆ ಕೇಳಿದಾಗ, ಮಹಾದೇವಪ್ಪ ಹೋರಾಟ ಮುಂದುವರಿಸುತ್ತಾನೆ. ಗುರಿ ಸಾಧಿಸಿ ನಮ್ಮೆಲ್ಲರ ಸಾವಿನ ಸೇಡು ತೀರಿಸಿಕೊಳ್ಳುತ್ತಾನೆ’ ಎಂದು ರಣೋತ್ಸಾಹ ಹೊರಗೆಡವಿದ್ದ. ಅದು ಜನರ ಹೋರಾಟವನ್ನು ಜೀವಂತವಾಗಿ ಇಟ್ಟಿತ್ತು. ಮಹಾತ್ಮ ಗಾಂಧೀಜಿ ಈ ಗಲ್ಲು ಶಿಕ್ಷೆ ರದ್ದುಪಡಿಸಲು ಕೇಳಿದ್ದರು. ರಾಜ ಮನ್ನಿಸಲಿಲ್ಲ. ೧೯೪೬ರಲ್ಲಿ ಮಹಾದೇವಪ್ಪ ಪಟ್ಟಣ ಅವರ ಮೇಲಿದ್ದ ವಾರೆಂಟ್ ಅನ್ನು ಹಿಂಪಡೆಯಲಾಯಿತು. ನಂತರ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಮಹಾದೇವಪ್ಪ ಪಟ್ಟಣವರು ಬಂಡಾಯವೆದ್ದು ಸಂಸ್ಥಾನಿಕರಿಗೆ ಸಿಂಹಸ್ವಪ್ನವಾಗಿ ಪರಿಣಿಮಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇವರ ಕಿಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿತ್ತು. ಅವರು ಸ್ಥಾಪಿಸಿದ್ದ ನಾಟಕ ಕಂಪನಿ ಕೂಡಾ ಬಂಡಾಯದಲ್ಲಿ ಅನನ್ಯ ಪಾತ್ರ ನಿರ್ವಹಿಸಿತ್ತು.
No comments:
Post a Comment