Saturday, 6 August 2022

ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಶಿಸ್ತು ತುಂಬಿದ ಸೇವಾದಳ

 -ಮಂಜುನಾಥ ಗದಗಿನ



ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾ.ಸು.ಹರ್ಡೀಕರ(ನಾರಾಯಣ ಸುಬ್ಬರಾವ್ ಹರ್ಡೀಕರ) ಅವರ ಹೆಸರು ಚಿರಸ್ಥಾಯಿ. ಒಂದು ಉತ್ತಮವಾದ ಸಂಘಟನೆ, ಬಲ, ಶಿಸ್ತು ಇಲ್ಲದೇ ಮುನ್ನುಗ್ಗುತ್ತಿದ್ದ ಹೋರಾಟಕ್ಕೆ ಸೇವಾದಳ ಎಂಬ ಸಂಘಟನೆ ಹುಟ್ಟು ಹಾಕಿ ಆ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದರು ನಾ.ಸು.ಹರ್ಡೀಕರ.

ಅದು ೧೯೨೧ರ ಸಮಯ. ರಾಷ್ಟ್ರಾದ್ಯಂತ ಸ್ವಾತಂತ್ರ್ಯದ ಹೋರಾಟದ ಕಾವು ಏರ ತೊಡಗಿತ್ತು. ಬ್ರಿಟಿಷರ ಸರ್ಕಾರ ಕಾಯ್ದೆ, ಕಾನೂನುಗಳನ್ನು ವಿರೋಧಿಸಿ ಅನೇಕ ಹೋರಾಟಗಳು ನಡೆಯುತ್ತಿದ್ದವು. ಇದೇ ಸಮಯದಲ್ಲಿ ಅಂದರೆ, ೧೯೨೧ರಲ್ಲಿ ಧಾರವಾಡದಲ್ಲಿ ಪಿಕೆಟಿಂಗ್ ಮಾಡುವ ಸಂದರ್ಭದಲ್ಲಿ ಬ್ರಿಟಿಷರು ಪೈರಿಂಗ್ ಮಾಡಿದರು. ಈ ವೇಳೆ ಮೂವರು ಅಸುನೀಗಿದರು. ಇದರಿಂದ ೧೯೨೩ರಲ್ಲಿ ನಾಗಪುರದಲ್ಲಿ ರಾಷ್ಟ್ರಧ್ವಜ ಕಟ್ಟುವುದಕ್ಕೆ ಪ್ರತಿಬಂಧಕ ವಿಧಿಸಲಾಯಿತು. ಈ ಆಜ್ಞೆಯನ್ನು ಉಲ್ಲಂಘನೆ ಮಾಡುವುದಕ್ಕೆ ನಾ.ಸು.ಹರ್ಡೀಕರ ಅವರು ನೇತೃತ್ವದಲ್ಲಿ ಜನರ ಗುಂಪು ನಾಗಪುರಕ್ಕೆ ತೆರಳಿ ಆಜ್ಞೆ ಉಲ್ಲಂಘಿಸಿ ಜೈಲು ಸೇರಿದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷರು ಚಿತ್ರಹಿಂಸೆ ನೀಡುತ್ತಿದ್ದರು. ಹೀಗಾಗಿ ಜೈಲಿಂದ ಹೋಗಬೇಕಾದರೆ ಇನ್ಮುಂದೆ ಯಾವುದೇ ಚಳವಳಿ, ಸತ್ಯಾಗ್ರಹ ಮಾಡುವುದಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದುಕೊಟ್ಟು ಹೋಗಬೇಕು ಎಂದು ಹೇಳಿದರು. ನಾ.ಸು.ಹರ್ಡೀಕರ ಅವರು ನಾನು ಬರೆದುಕೊಡುವುದಿಲ್ಲ ಎಂದು ಸಾರಾಸಗಟಾಗಿ ಹೇಳಿದರು. ಈ ಸುದ್ದಿ ರಾಷ್ಟ್ರವ್ಯಾಪ್ತಿ ಹರಡಿತು.
೧೯೨೩ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಮಹಮ್ಮದ ಅಲಿ ಅವರ ಅಧ್ಯಕ್ಷಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಈ ಅಧಿವೇಶನದಲ್ಲಿ ನಾ.ಸು.ಹರ್ಡೀಕರ ಅವರು ಪಾಲ್ಗೊಂಡು, ಸಾತಂತ್ರ್ಯ ಹೋರಾಟಕ್ಕೆ ಅಪ್ಪಟ್ಟ ದೇಶಪ್ರೇಮಿಗಳನ್ನು ನಿರ್ಮಾಣ ಮಾಡುವ ಒಂದು ಶಿಸ್ತಿನ ಸಂಘಟನೆಬೇಕು. ಅದಕ್ಕೆ ಅವರು ಹಿಂದೂಸ್ತಾನ ಸೇವಾದಳ ಆರಂಭ ಮಾಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಮನ್ನಣೆ ಕೊಟ್ಟು ಆ ಅಧಿವೇಶನದಲ್ಲಿ ಹಿಂದೂಸ್ಥಾನ ಸೇವಾದಳ ಸ್ಥಾಪನೆ ಮಾಡಲಾಯಿತು. ಸೇವಾದಳದ ಪ್ರಥಮ ಅಧ್ಯಕ್ಷರಾಗಿ ಜವಾಹರಲಾಲ್ ನೆಹರು ಆಯ್ಕೆಯಾಗಿದರು. ಸಂಸ್ಥಾಪಕ ಸಂಚಾಲಕರಾಗಿ ನಾ.ಸು.ಹರ್ಡೀಕರ ಅವರು ಆಯ್ಕೆಯಾದರು. ನಂತರ ಇದೇ ಸೇವಾದಳ ಆಗಿ ಮುಂದುವರೆಯಿತು.
ಸೇವಾದಳದ ಪಾತ್ರ:
ಸೇವಾದಳ ಸ್ಥಾಪನೆಯಾದ ನಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಬಲ ಬಂದಿತು. ಸಂಘಟನೆ ಮತ್ತು ಶಿಸ್ತು ಇಲ್ಲದೇ ಸಾಗುತ್ತಿದ್ದ ಹೋರಾಟಕ್ಕೆ ಒಂದು ಶಿಸ್ತು ಬಂದಿತು. ನಾ.ಸು.ಹರ್ಡೀಕರ ಅವರು ದೇಶದ ಅನೇಕ ಹಳ್ಳಿಗಳಿಗೆ ತೆರಳಿ ಸೇವಾದಳ ಹುಟ್ಟು ಹಾಕಿ ಯುವ ಜನಾಂಗದಲ್ಲಿ ಸ್ವಾತಂತ್ರ್ಯದ ಬಗ್ಗೆ ಕಿಚ್ಚು ಮೂಡಿಸಿದರು. ಅವರನ್ನು ಸೇವಾದಳಕ್ಕೆ ಕರೆ ತಂದು ರಾಷ್ಟ್ರಪ್ರೇಮ, ಶಿಸ್ತು, ಸಂಘಟನೆ ಹಾಗೂ ದೈಹಿಕ, ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯ ಮಾಡಿದರು. ಹೀಗೆ ಹಿಂದೂಸ್ಥಾನ ಸೇವಾದಳ ವ್ಯಾಪಕವಾಗಿ ಬೆಳೆಯಿತು. ಸೇವಾದಳದಲ್ಲಿ ತಯಾರಾದ ಯುವಪಡೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿತು.
೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಸೇವಾದಳದ ಪಾತ್ರ ದೊಡ್ಡದಾಗಿದೆ. ಈ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿಕೊಂಡಿದ್ದರು. ಅಧಿವೇಶನದ ಸಕಲ ಸಿದ್ಧತೆಗಳನ್ನು ಗಂಗಾಧರರಾವ್ ದೇಶಪಾಂಡೆ ಹಾಗೂ ನಾ.ಸು.ಹರ್ಡೀಕರ ಅವರ ನೇತೃತ್ವದ ಸೇವಾದಳ ನೋಡಿಕೊಂಡಿತ್ತು. ಅಧಿವೇಶನ ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಇದರಿಂದ ಸಂತಸಗೊಂಡ ಗಾಂಧೀಜಿ ಅವರು ಸೇವಾದಳದ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿ ‘ಸೇವಾದಳ’ ಇನ್ನಷ್ಟು ರಾಷ್ಟ್ರವ್ಯಾಪ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಇನ್ನೂ ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ಕರ ವಿರೋಧಿಸಿ ಗಾಂಧೀಜಿ ಅವರು ದಂಡಿಯಾತ್ರೆ ಆರಂಭಿಸಿದರು. ಇದರ ಹಿನ್ನೆಲೆಯಲ್ಲಿ ಕಾರವಾರ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಾ.ಸು.ಹರ್ಡೀಕರ ಅವರು ತಮ್ಮ ಸೇವಾದಳದ ಸಿಬ್ಬಂದಿಯೊಂದಿಗೆ ಅಂಕೋಲಾಕ್ಕೆ ಹೋಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇನ್ನು ಕಾನೂನು ಭಂಗ ಚಳವಳಿ, ಪಿಕೆಟಿಂಗ್, ಅಸಹಕಾರ ಚಳವಳಿ ಹೀಗೆ ಸಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಕಾರ್ಯಕರ್ತರು ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.
ಆದರೆ, ೧೯೩೧ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಒಂದೇ ಸಂಘಟನೆ ಇರಲಿ ಎಂಬ ಉದ್ದೇಶದಿಂದ ಗಾಂಧೀಜಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸೇವಾದಳವನ್ನು ವಿಲೀನ ಮಾಡಿದರು. ನಂತರದ ದಿನಗಳಲ್ಲಿ ಸೇವಾದಳ ಒಂದು ಪಕ್ಷಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ನಾ.ಸು.ಹರ್ಡೀಕರ ಅವರು ೧೯೫೦ರಲ್ಲಿ ಭಾರತೀಯ ಸೇವಾದಳ ಸ್ಥಾಪನೆ ಮಾಡಿದರು. ೧೮೮೯ರಲ್ಲಿ ಧಾರವಾಡದಲ್ಲಿ ಜನಿಸಿದರಾದ್ರು ಸ್ವಾತಂತ್ರ್ಯಾನಂತ ಹರ್ಡೀಕರ ಅವು ಬೆಳಗಾವಿ ಜಿಲ್ಲೆಯ ಘಟಪ್ರಭಾಕ್ಕೆ ಬಂದು ನೆಲೆಸಿದರು. ಇಲ್ಲಿ ಅವರು ಕರ್ನಾಟಕ ಆರೋಗ್ಯ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಸೇವಾನಿರತ ಇರುವಾಗಲೇ ನಾ.ಸು.ಹರ್ಡೀಕರ ಅವರು ಆಗಸ್ಟ್ ೨೬ ೧೯೭೫ರಲ್ಲಿ ಅಸ್ತಗಂತರಾದರು. ಘಟಪ್ರಭಾದಲ್ಲಿ ಅವರ ಸಮಾಧಿ ಇದ್ದು, ಇದು ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...