Tuesday, 16 August 2022

ಶಿಕ್ಷಣಕ್ಕೆ ವಿದಾಯ ಹೇಳಿದ್ದೆ...

 ಬಡತನಕ್ಕೆ ಮೂರು ಬಾರಿ ಶಿಕ್ಷಣ ನಿಲ್ಲಿಸಿದ್ದೆ > ಮತ್ತೆ ಮೇಲೆದ್ದು ಬಂದೆ



ಸದಾ ಸಿಂಡರಿಸಿಕೊಂಡುತ್ತಿದ್ದ ಅಪ್ಪನನ್ನು ಏನು ಕೇಳುವುದು ಎಂಬ ಮನೋಭಾವಕ್ಕಿಂತ ದುಡಿದ ದುಡ್ಡು ಬದುಕಿಗೆ ಸಾಕಾಗುತ್ತಿಲ್ಲ ಎಂಬ ಬಡತನವೇ ನನ್ನ ಬಾಲ್ಯದ ಅದೇಷ್ಟೋ ಕನಸು, ಆಸೆಗಳನ್ನ ಕಿತ್ತುಕೊಂಡು ಬಿಟ್ಟಿತ್ತು. ಈ ಬಡತನ ನನ್ನ ಶಿಕ್ಷಣವನ್ನೇ ಕಸಿದುಕೊಂಡು ದುಡಿಮೆಗೆ ಹಚ್ಚಿದ್ದು ನೆನೆಸಿಕೊಂಡರೇ ಭಯವಾಗುತ್ತದೆ. “ಸಾಲಿ ಕಲ್ತ ಏನ ಮಾಡ್ತಿ ಮಗ್ಗಾ ನೇಯ್ಯಾಕ ಹೋಗ ಇನ್ನ’ ಎಂಬ ಅಪ್ಪನ ಆ ಮಾತುಗಳು ನನ್ನಲ್ಲಿ ಇನ್ನು ಮಾರ್ದನಿಸುತ್ತಿವೆ. ಹೀಗೆ ಅಪ್ಪನ ಹಠಕ್ಕೆ ಶಿಕ್ಷಣಕ್ಕೆ ವಿದಾಯ ಹೇಳಿ ಮಗ್ಗ ನೇಯಲೂ ಆರಂಭಿಸಿದೆ. 

“ಒಬ್ಬ ಮಗಾ ಅದಾನ ಅವನರ ಚಲೋತಂಗ ಸಾಲಿ ಕಲ್ಸಬಾರದಾ’ ಎಂಬ ಜನರ ಮಾತು ಅಪ್ಪನಿಗೆ ನಾಟಿದ್ದವು ಅನ್ಸುತ್ತೆ. ಮತ್ತೆ ಶಾಲೆಗೆ ಕಳುಹಿಸಲು ಅಣಿಯಾದ. ಆದರೆ, ಅದಾಗಲೇ ಒಂದು ವರ್ಷದ ನನ್ನ ಶಿಕ್ಷಣ ಇತಿಹಾಸದ ಗರ್ಭ ಸೇರಿ ಆಗಿತ್ತು. ಮತ್ತೆ ಶಾಲೆಗೆ ಹೋಗಲು ಮನಸು ಚಡಪಡಿಸುತ್ತಿತ್ತು. ಮತ್ತೆ ಶಾಲೆ ಆರಂಭವಾಯಿತು. ಮತ್ತದೇ ಕಾಯಿಪಲ್ಲೆ ತರುವ ಚೀಲ, ಪಾಠಿ ಜೊತೆಯಾಗಿ ಹೆಜ್ಜೆ ಹಾಕಿದವು. ಅದಾಗಲೇ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಹೆಜ್ಜೆ ಇಟ್ಟಿದ್ದೆ. ಆಗ ಗೊತ್ತಾಗಿದ್ದು ಓಡುವ ಕಾಲದ ಎದುರು ನಾವೇಷ್ಟು ಸಣ್ಣವರು ಎಂದು. ನೂರೆಂಟು ವಿಚಾರ, ಚಿಂತೆ, ವೈದ್ಯರ ಮಾತಿನ ನಿರ್ಲಕ್ಷ್ಯ ಮಾಡಿದ್ದರಿಂದ ಅಪ್ಪನಿಗೆ ಪಾರ್ಶ್ವವಾಯು ಹೊಡೆಯಿತು. ಆಗ ನಾನು ಏಂಟನೇ ತರಗತಿ ಪ್ರವೇಶ ಪಡೆದುಕೊಂಡಿದ್ದೇ ಅಷ್ಟೇ. ಅಪ್ಪನಿಗೆ ಹೀಗಾಗಿದ್ದರಿಂದ ನಾನು ಒಬ್ಬನೇ ಮಗ. ಮನೆಯ ಜವಾಬ್ದಾರಿ ನನ್ನ ಮೇಲೆ ಬಿತ್ತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಿ ಮನೆಯ ನೊಗ ಹೊರಬೇಕು ಎಂದು ನಿರ್ಧರಿಸಿದೆ. ಹೀಗಾಗಿ ಒಂದೆರೆಡು ತಿಂಗಳು ಶಾಲೆಯನ್ನು ಬಿಟ್ಟು ಮಗ್ಗದ ಕಡೆ ಮುಖ ಮಾಡಿದೆ. ಆದರೆ, ಅಕ್ಕ “ನಾನು ನೇಯುತ್ತೇನೆ ನೀನು ಶಾಲೆಗೆ ಹೋಗು’ ಎಂದು ಹೇಳಿದ್ಲು. ಮನಸ್ಸು ಸುತಾರಾಮ ಒಪ್ಪಲಿಲ್ಲ. ಆದರೆ, ಓದಬೇಕು ಎಂಬ ಆಸೆ ಮತ್ತೆ ಶಾಲೆ ಕಡೆಗೆ ಕರೆದುಕೊಂಡು ಹೋಯಿತು. ಬೆಳಿಗ್ಗೆ ಬೇಗ ಎದ್ದು ಮಗ್ಗ ನೇಯ್ದು ಮತ್ತೆ ಶಾಲೆಗೆ ಹೋಗುತ್ತಿದೆ. ಮತ್ತೆ ಶಾಲೆಯಿಂದ ಬಂದ ಮೇಲೆ ನೇಯುತ್ತಿದೆ. ಹಾಗೋ ಹೀಗೋ ಮಾಡಿ ಪ್ರೌಢ ಶಿಕ್ಷಣ ಮುಗಿಸುವ ಹಂತಕ್ಕೆ ಬಂದು ನಿಂತೆ. ಆಗ ಅಕ್ಕನ ಮದುವೆ ಕೂಡಾ ಆಗಿ ಹೋಯಿತು. ಇದೀಗ ನಾನು, ಪಾರ್ಶ್ವವಾಯು ಪೀಡಿತ ಅಪ್ಪ, ಮತ್ತ ಅವ್ವ್ಪ ಅಷ್ಟೇ ಬದುಕಾಯಿತು. 

       ಪ್ರಾಪಂಚಿಕ ಜ್ಞಾನವಿಲ್ಲದ ಅವ್ವ, ಮಾತು ಬಾರದ ಅಪ್ಪ. ನಾನು ಹೇಗೆ ಕಾಲೇಜಿಗೆ ಹೋಗಲಿ ಎಂದು ಮನಸ್ಸು ಚಿಂತಿಸಲು ಆರಂಭಿಸಿತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಬೇಕು ಎಂದುಕೊಂಡು ಸಂಪೂರ್ಣವಾಗಿ ಮಗ್ಗದ ಕಡೆ ವಾಲಿದೆ. ಆದರೆ, ಕೆಲವು ಜನರ ಮಾತು ಮತ್ತೆ ಮನಸ್ಸು ಬದಲಿಸಿತು. ಖಾಸಗಿ ಕಾಲೇಜಿಗೆ ದುಡ್ಡು ಕಟ್ಟಲು ಆಗದ ಕಾರಣ ಆಗ ತಾನೇ ಊರಿನಲ್ಲಿ ಸ್ಥಾಪನೆಯಾಗಿದ್ದ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದುಕೊಂಡೆ. ಆಗ ಕಾಲೇಜಿನಲ್ಲಿ ಶಿಕ್ಷಕರು ಇಬ್ಬರೇ, ಅವರು ಎರವಲು ಬೇರೆ. ಊರಿಂದ ಬಂದು ವಾರದಲ್ಲಿ ಎರಡು ಸಾರಿ ಪಾಠ ಮಾಡುತ್ತಿದ್ದರು. ಕಾಲೇಜು ಹಂತದಲ್ಲಿಯೂ ಅದೇ ಮಗ್ಗ ಮತ್ತು ಪಾಠವೇ ನನ್ನ ಬದುಕಾಗಿತ್ತು. ಆಟಕ್ಕೆ ವಿದಾಯ ಹೇಳಿ ಅದೇಷ್ಟೋ ವರ್ಷಗಳೆ ಗತಿಸಿ ಹೋಗಿದ್ದವು. ನಿರೀಕ್ಷೆಗಳು ಹೆಚ್ಚಾದಂತೆ ಪರೀಕ್ಷೆಗಳು ಹೆಚ್ಚಾಗುತ್ತವೆ ಎಂಬುವುದನ್ನು ಅರಿತುಕೊಂಡೆ. ಅದಕ್ಕೆ ಬದುಕಿನಲ್ಲಿ ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡು ಪರೀಕ್ಷೆಗಳನ್ನು ಪಾಸು ಮಾಡುತ್ತಾ ಸಾಗಿದೆ. ಓದಿದೆ. ಇದೇ ಕಾರಣಕ್ಕೆ ಕಾಲೇಜಿಗೆ ಪ್ರಥಮ ಬಂದೆ. ಆಗ ಪೇಪರ್‌ನಲ್ಲಿ ಪೋಟೋ ಬಂದದ್ದು ನೋಡಿ, ಅಪ್ಪ, ಅವ್ವ ಸಂತಸಕೊಂಡರು.

ಮುಂದೆ....ನಡೆದದ್ದು ಬದುಕು ಕಟ್ಟಿಕೊಳ್ಳುವ ದೊಡ್ಡ ಹೋರಾಟ. ಅಪ್ಪ-ಅವ್ವನನ್ನು ಬಿಟ್ಟು ದೂರದ ಹುಬ್ಬಳಿಯತ್ತ ಪಯಣ.....

ನಿರೀಕ್ಷಿಸಿ......!                                        -ಮಂಜುನಾಥ ಗದಗಿನ


No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...