Saturday, 6 August 2022

ರಾಯಣ್ಣನ ಕಥೆ ಹೇಳುವ ನಂದಗಡ

 ಮಂಜುನಾಥ ಗದಗಿನ



‘ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು’ ಹೀಗೆಂದು ತಾನು ಗಲ್ಲಿಗೇರುವ ಮುನ್ನ ಬಿಟ್ರಿಷರ ವಿರುದ್ಧ ಘರ್ಜಿಸಿ ತಾಯ್ನಾಡಿ ಗಾಗಿ ಪ್ರಾಣ ತ್ಯಾಗ ಮಾಡಿದ ದ ಏಕೈಕ ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

ರಾಯಣ್ಣ ಎಂಬ ಹೆಸರು ಕೇಳಿದರೆ ಸಾಕು ಬ್ರಿಟಿಷ ಸರ್ಕಾರವೇ ನಡಗುತ್ತಿತ್ತು. ಯಾಕೆಂದರೆ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ತನ್ನ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಆಂಗ್ಲರ ನಿದ್ದೆಗೇಡಿಸಿದ್ದ ವೀರ ಪರಾಕ್ರಮಿ, ಕಿತ್ತೂರು ರಾಣಿ ಚೆನ್ನಮ್ಮನ ಬಲಗೈಬಂಟ ಸಂಗೊಳ್ಳಿ ರಾಯಣ್ಣ.
ಇಡೀ ದೇಶದಲ್ಲಿ ಆಂಗ್ಲರ ಅಧಿಪತ್ಯ ಸ್ಥಾಪನೆಯಾಗಿ, ಸಣ್ಣಪುಟ್ಟ ಸಂಸ್ಥಾನಗಳನ್ನು ತಮ್ಮ ಅಧೀನಕ್ಕೆ ಪಡೆಯಬೇಕೆಂದು ಬ್ರಿಟಿಷರು ಕಾಯ್ದುಕುಳಿತ್ತಿದ್ದರು. ಇದೇ ವೇಳೆ ಸಮೃದ್ಧಭರಿತವಾಗಿದ್ದ ಕಿತ್ತೂರು ಸಂಸ್ಥಾನದ ಮೇಲೆ ಅವರ ಕಣ್ಣು ಬೀದಿತು. ಚೆನ್ನಮ್ಮನಿಗೆ ಗಂಡು ಸಂತಾನ ಇಲ್ಲದ ಕಾರಣ ದತ್ತು ತೆಗೆದುಕೊಂಡಿದ್ದಳು. ಇದನ್ನು ತಿಳಿದು ಬ್ರಿಟಿಷರು ದತ್ತುಪುತ್ರನಿಗೆ ಉತ್ತರಾಧಿಕಾರ ಹಕ್ಕಿಲ್ಲ ಎಂಬ ಕಾಯ್ದೆಯಡಿ ನೀವು ನಮಗೆ ಕಪ್ಪ ಕೊಟ್ಟು ಶರಣಾಗಬೇಕು ಎಂದು ತಿಳಿಸಿದಾಗ ಚೆನ್ನಮ್ಮ ನಾವೇಕೆ ನಿಮಗೆ ಕೊಡಬೇಕು ಕಪ್ಪ ಎಂದು ಘರ್ಜಿಸಿದ್ದಳು. ಇದರಿಂದ ಕುಪಿತರಾದ ಆಂಗ್ಲರು ಅಕ್ಟೋಬರ್ ೨೧, ೧೮೨೪ರಂದು ಬ್ರಿಟಿಷ ಅಧಿಕಾರಿ ಥ್ಯಾಕರೆ ಮುಂದಾಳತ್ವದಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ವೀರ ವನಿತೆ ರಾಣಿ ಚೆನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟಳು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ನೇತೃತ್ವದಲ್ಲಿ ಕಿತ್ತೂರಿನ ವೀರ ಸೈನಿಕರು ಮುನ್ನುಗ್ಗಿದ್ದರು. ಇದೇ ವೇಳೆ ಅಮಟೂರು ಬಾಳಪ್ಪನವರು ತಮ್ಮ ಖಡ್ಗದಿಂದ ಥ್ಯಾಕರೆ ರುಂಡ ಚಂಡಾಡಿದರು. ಭಯಗೊಂಡ ಆಂಗ್ಲರು ಅಲ್ಲಿಂದ ಕಾಲ್ಕಿತ್ತರು. ಇಷ್ಟಕ್ಕೆ ಸುಮ್ಮನಾಗದ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಆದರೆ ತಮ್ಮವರ ಮೋಸದಿಂದಲೇ ಕಿತ್ತೂರಿಗೆ ಸೋಲಾಯಿತು. ರಾಯಣ್ಣ, ಚನ್ನಮ್ಮ ಬ್ರಿಟಿಷರ ವಶವಾದರು. ಆದರೆ, ಕೆಲವು ದಿನಗಳ ನಂತರ ರಾಯಣ್ಣ ಬಿಡುಗಡೆಯಾದ.
ಬಂಡಾಯವೆದ್ದ ರಾಯಣ್ಣ:
ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಬ್ರಿಟಿಷರು ಕಿತ್ತುಕೊಂಡಿದ್ದರು. ಇದಷ್ಟೇ ಅಲ್ಲದೇ ಭೂಮಿಯ ಮೇಲಿನ ಕರಭಾರವನ್ನು ಹೆಚ್ಚಿಸಿದ್ದರು. ಇದರ ವಿರುದ್ಧ ರಾಯಣ್ಣ ತನ್ನದೊಂದು ಸೈನ್ಯ ಕಟ್ಟಿಕೊಂಡು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲೀಕರ ವಿರುದ್ಧ ಬಂಡಾವೆದ್ದ. ತನ್ನ ಯುದ್ಧ ತಂತ್ರಗಳಲ್ಲಿ ಒಂದಾದ ಗೆರಿಲ್ಲಾ ತಂತ್ರಗಾರಿಕೆ(ಶತ್ರುವಿಗೆ ಸಿಗದೇ, ಶತ್ರುಗಳ ಚಲನವಲನ ಅರಿತು ಯುದ್ಧ ಮಾಡುವ ತಂತ್ರ) ಬಳಸಿ ಭೂಮಾಲೀಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡು ಸುಟ್ಟುಹಾಕಿದ. ಅಲ್ಲದೇ, ಅವರಿಂದ ಕಿತ್ತುಕೊಂಡ ಹಣವನ್ನು ನಿರ್ಗತಿಕರಿಗೆ ಹಂಚತೊಡಗಿದ.
ಬೆಟ್ಟ ಗುಡ್ಡಗಳೇ ಅಡಗುತಾಣ:
ತನ್ನ ಗೆರಿಲ್ಲಾ ಯುದ್ಧದ ಮೂಲಕವೇ ಬ್ರಿಟಿಷ ಸರ್ಕಾರ ಬಿದ್ದೆಗೇಡಿಸಿದ್ದ ರಾಯಣ್ಣ ಚೆನ್ಮಮ್ಮನ ದತ್ತುಪುತ್ರನನ್ನು ಕಿತ್ತೂರಿನ ಉತ್ತರಾಧಿಕಾರಿಯನ್ನಾಗಿಸುವ ಛಲ ಹಾಗೂ ಬ್ರಿಟಿಷ ಸರ್ಕಾರ ಸೊಕ್ಕಡಗಿಸಲು ತನ್ನ ಸೈನ್ಯದೊಂದಿಗೆ ದಟ್ಟಡವಿಯಲ್ಲಿ ಅಡಗಿಕೊಂಡು ಬ್ರಿಟಿಷ ವಿರುದ್ಧ ರಣತಂತ್ರ ಹೆಣೆದು ಯುದ್ಧ ಸಾರುತ್ತಿದ್ದ. ಅದರಲ್ಲೂ ಖಾನಾಪುರ ತಾಲೂಕಿನ ಹಂಡಿಭಡಗನಾಥ, ಸಂಪಗಾಂವ, ನಂದಗಡ ಕಾನನದಲ್ಲಿ ರಾಯಣ್ಣ ಬಿಡಾರ ಹೂಡಿ ಬ್ರಿಟಿಷರ ವಿರುದ್ಧ ಯುದ್ಧ ಸಾರುತ್ತಿದ್ದ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ರಾಯಣ್ಣ ಸೈನ್ಯ ಹೆಚ್ಚು ಕಾರ್ಯಾಚರಣೆ ಮಾಡುತ್ತಿತ್ತು. ಇದು ಕೂಡಾ ಗೆರಿಲ್ಲಾ ಯುದ್ಧದ ಒಂದು ತಂತ್ರವಾಗಿತ್ತು.
ಮೋಸದಿಂದ ರಾಯಣ್ಣ ಸೆರೆ:
ಯುದ್ಧ ಮಾಡಿ ರಾಯಣ್ಣನ್ನು ಗೆಲಲ್ಲು ಅಸಾಧ್ಯವೆಂದು ತಿಳಿದ ಬ್ರಿಟಿಷರು ಕುತಂತ್ರ ಬುದ್ಧಿ ಪ್ರಯೋಗ ಮಾಡಿದರು. ರಾಯಣ್ಣನ ಸ್ವಂತ ಮಾವನಾಗಿದ್ದ ಲಕ್ಷ್ಮಣನನ್ನು ತಮ್ಮ ಕುತಂತ್ರದ ದಾಳವನ್ನಾಗಿ ಬಳಸಿಕೊಂಡರು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಬ್ರಿಟಿಷ ಸೈನಿಕರು ಆಕ್ರಮಣ ಮಾಡಿದರು. ಆಗ ರಾಯಣ್ಣ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ಕೊಡು ಎಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ಹೀಗಾಗಿ ರಾಯಣ್ಣ ಮೋಸದಿಂದ ಬ್ರಿಟಿಷರ ವಶವಾದನು.
ನಂದಗಡದಲ್ಲಿ ರಾಯಣ್ಣ ಸಮಾಧಿ:
ಸೆರೆಯಾಗಿದ್ದ ರಾಯಣ್ಣ ಆಶಯದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ೧೮೩೧ರ ಜನವರಿ ೨೬ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಗೆಲ್ಲಿಗೇರಿಸುವ ಮುನ್ನ ನಿನ್ನ ಕೊನೆಯಾಸೆ ಏನು ಎಂದು ಕೇಳಿದಾಗ ರಾಯಣ್ಣ ’ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು ಎಂದು ಘರ್ಜಿಸಿದ್ದ. ರಾಯಣ್ಣನನ್ನು ಗಲ್ಲಿಗೇರಿಸಿದ ನಂತರ ನೆಟ್ಟ ಆಲದ ಮರ ಇನ್ನೂ ಇದ್ದು, ಇಲ್ಲಿಗೆ ನಿತ್ಯ ನೂರಾರು ಜನರು ಬಂದು ರಾಯಣ್ಣನ ಸಮಾಧಿ ದರ್ಶನ ಪಡೆದು ನಮಗೂ ರಾಯಣ್ಣನತಹ ಮಗ ಹುಟ್ಟಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...