Saturday, 26 October 2019

ನೋಡ ಬನ್ನಿ ಬೆಳಗಾವಿ ರಾಜ್ಯೋತ್ಸವ!


ಮಂಜುನಾಥ ಗದಗಿನ
ರಾಜಕೀಯ ಶಕ್ತಿ ಎಂದೇ ಬಿಂಬಿತವಾಗಿರುವ ಬೆಳಗಾವಿ ಭಾಷೆ ಹಾಗೂ ಗಡಿ ವಿವಾದಿಂದ ಒಂದಿಲ್ಲವೊಂದು ರೀತಿಯಲ್ಲಿ ರಾಜ್ಯದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಆದರೆ, ನವೆಂಬರ್ ೧ ಬಂತೆಂದರೆ ಸಾಕು ರಾಜ್ಯದ ಮನೆ, ಮನದ ಮಾತಾಗಿ ಬಿಡುತ್ತದೆ ಕುಂದಾನಗರಿ ಬೆಳಗಾವಿ. ಇದಕ್ಕೆ ಕಾರಣ ಅದ್ಧೂರಿ ರಾಜ್ಯೋತ್ಸವ.
ಹೌದು! ಇಡೀ ರಾಜ್ಯದಲ್ಲೇ ಕನ್ನಡ ರಾಜ್ಯೋತ್ಸವವನ್ನು ಒಂದು ದೊಡ್ಡ ಹಬ್ಬ ಎಂಬಂತೆ ಆಚರಿಸುವುದು ಅದು ಬೆಳಗಾವಿಯಲ್ಲಿ ಮಾತ್ರ. ಪ್ರತಿ ವರ್ಷ ಬರುವ ಹಬ್ಬಗಳನ್ನು ಕೂಡಿ ಆಚರಿಸುತ್ತಾರೋ ಇಲ್ಲ, ಆದ್ರೆ ರಾಜ್ಯೋತ್ಸವ ಬಂತು ಎಂದರೆ ಸಾಕು ಜಿಲ್ಲೆಯಲ್ಲಿ ಕನ್ನಡ. ಕನ್ನಡ ಎಂಬುವುದು ಘೋಷ ವ್ಯಾಕ್ಯವಾಗಿ ಬಿಡುತ್ತದೆ. ಅಷ್ಟರ ಮಟ್ಟಿಗೆ ಬೆಳಗಾವಿ ರಾಜ್ಯೋತ್ಸವ ಎಲ್ಲರ ಹಬ್ಬವಾಗಿ ಬಿಟ್ಟಿದೆ.
ಯಾಕೆ ಇಷ್ಟೊಂದು ಅದ್ಧೂರಿ?:
ಬೆಳಗಾವಿ ಗಡಿ ಪ್ರದೇಶ. ಇದೇ ಕಾರಣಕ್ಕ ನೆರೆ ಮಹಾರಾಷ್ಟ್ರ ಪದೇಪದೇ ಕಾಲು ಕೆದರಿಕೊಂಡು ಗಡಿ ವಿವಾದ ಹುಟ್ಟು ಹಾಕಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಲೇ ಇರುತ್ತದೆ. ಇನ್ನು ಭಾಷಾವಾರು ರಾಜ್ಯ ರಚನೆ ಮುಂದಾದಾಗ ನಮ್ಮನ್ನು ಕಡೆಗಣಿಸಿ ರಾಜ್ಯ ರಚನೆ ಮಾಡಲಾಗಿದೆ ಎಂದು ಬೆಳಗಾವಿಯ ಮರಾಠಿ ಭಾಷಿಕರು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ವತಿಯಿಂದ ರಾಜ್ಯೋತ್ಸವ ದಿನದಂದು ಪ್ರತಿವರ್ಷ ಕಪ್ಪು ಪಟ್ಟಿ ಧರಿಸಿಕೊಂಡು ಕರಾಳ ದಿನ ಆಚರಿಸುತ್ತಾ ಬಂದಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಹಲವು ಕಟ್ಟುನಿಟ್ಟಿನ ಸೂಚನೆ ಮೇರೆ ಅನುಮತಿ ನೀಡುತ್ತಾ ಬಂದಿದೆ. ಆದರೆ, ಎಂಇಎಸ್ ಮಾತ್ರ ಕೆಲವು ಸಾರಿ ಜಿಲ್ಲಾಡಳಿತದ ಷರತ್ತುಗಳನ್ನು ಮುರಿದು ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದೆ. ಎಂಇಎಸ್ ಹಾಗೂ ಮಹಾರಾಷ್ಟ್ರಕ್ಕೆ ಸೆಡ್ಡು ಹೊಡೆಯಬೇಕೆಂಬ ಕಾರಣ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿವೆ.
ಕನ್ನಡಮಯ:                                                                              
ನವೆಂಬರ್ ೧ ಬೆಳಗಾವಿಗರ ಪಾಲಿಗೆ ಅವಿಸ್ಮರಣೀಯ ದಿನ. ರಾಜ್ಯೋತ್ಸವ ಒಂದು ತಿಂಗಳು ಇರುವಾಗಲೇ ಕನ್ನಡ ರಾಜ್ಯೋತ್ಸವದ ತಯಾರಿಗಳು ಆರಂಭಗೊಂಡಿವೆ. ಹಲವು ಕನ್ನಡಪರ ಸಂಘಟನೆಗಳು ಯೋಜನೆಗಳನ್ನು ಹಾಕಿಕೊಂಡು ಕನ್ನಡಹಬ್ಬಕ್ಕೆ ತಯಾರಿ ನಡೆಸಿವೆ. ಇನ್ನು ನಗರದ ತುಂಬೆಲ್ಲ ಕನ್ನಡದ ಬಾವುಟಗಳು, ಕನ್ನಡಕ್ಕಾಗಿ ದುಡಿದ ಮಹನೀಯರ ಕಟೌಟ್‌ಗಳನ್ನು ಹಾಕಿ ಕನ್ನಡತನ ಮೆರೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿ ಹೃದಯ ಭಾಗ ಚೆನ್ನಮ್ಮ ಸರ್ಕಲ್ ರಾಜ್ಯೋತ್ಸವದ ಪ್ರಮುಖ ಕೇಂದ್ರವಾಗಿ ಬಿಟ್ಟಿದೆ.
ರಿಯಾಯಿತಿ, ಕಲಾತಂಡ:
ರಾಜ್ಯದ ಜನತೆಗೆ ದಸರಾ ನಾಡ ಹಬ್ಬವಾದರೆ ಬೆಳಗಾವಿಗರಿಗೆ ರಾಜ್ಯೋತ್ಸವ ನಾಡಹಬ್ಬವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ನ.೧ರಂದು ನಗರದ ಬಹುತೇಕ ಅಂಗಡಿ, ಮಾಲಗಳು ರಿಯಾಯಿತಿಗಳನ್ನು ಘೋಷಿಸಿ ಕನ್ನಡ ರಾಜ್ಯೋತ್ಸಕ್ಕೆ ತಮ್ಮ ಕೊಡುಗೆ ನೀಡುತ್ತಿವೆ. ಕಳೆದ ಸಾರಿ ಶೇ.೨೦ರಷ್ಟು ರಿಯಾಯಿತಿ ಘೋಷಿಸುವ ಮೂಲಕ ರಾಜ್ಯೋತ್ಸವಕ್ಕೆ ಇಂಬು ನೀಡಿದ್ದರು. ಇನ್ನೂ ರಾಜ್ಯೋತ್ಸವ ಚೆನಮ್ಮ ಸರ್ಕಲ್‌ನಲ್ಲಿ ಜನಜಾತ್ರೆ ನೆರೆದಿರುತ್ತದೆ. ಎಲ್ಲರ ಬಾಯಲ್ಲೂ ಕನ್ನಡದ ಮಾತು, ಕನ್ನಡದ ಬಾವುಟಗಳು ರಾರಾಜಿಸುತ್ತಿರುವುತ್ತವೆ. ಮತ್ತೊಂದೆಡೆ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳ ಮೆರೆವಣಿಗೆ ರಾಜ್ಯೋತ್ಸವಕ್ಕೆ ಕಳೆ ತಂದಿರುತ್ತದೆ. ಜಿಲ್ಲಾಡಳಿತ ಮುಂಚಿತವಾಗಿವೆ. ತಾಲೂಕುವಾರು ಸ್ತಬ್ಧ ಚಿತ್ರ ಹಾಗೂ ಕಲಾತಂಡಗಳಿಗೆ ಆಹ್ವಾನ ನೀಡಿರುತ್ತದೆ. ಅಂದಾಜು ೫೦ಕ್ಕೂ ಅಧಿಕ ಕಲಾ ತಂಡಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡಿಗರ ಮನ ತಣಿಸುತ್ತವೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಉತ್ತಮ ಸ್ತಬ್ಧ ಚಿತ್ರ ಹಾಗೂ ಕಲಾ ತಂಡಗಳಿಗೆ ಸೂಕ್ತ ಬಹುಮಾನ ಕೂಡ ನೀಡಲಾಗುತ್ತಿದೆ.
ಸಂಗೀತ, ಹೋಳಿಗೆ, ಡ್ರೋಣ:
ಗಣೇಶ ಹಬ್ಬ ಬಿಟ್ಟರೆ ಮತ್ತೆ ಡಿಜೆ ಸದ್ದು ಕೇಳುವುದು ರಾಜ್ಯೋತ್ಸವ ದಿನದಂದು. ನಗರದ ಪ್ರಮುಖ ಓಣಿಯಿಂದ ಡಿಜೆಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಹಚ್ಚಿಕೊಂಡು ಬರುತ್ತಾರೆ. ಇದರೊಟ್ಟಿ ಪ್ರತಿಯೊಬ್ಬರ ಕನ್ನಡ ಧ್ವಜ ಹಿಡಿ ಕನ್ನಡ ಹಾಡುಗಳಿಗೆ ಹುಚ್ಚೆದ್ದು ಹೆಜ್ಜೆ ಹಾಕುತ್ತಾ ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಇದಷ್ಟೇ ಅಲ್ಲದೇ ಹುಕ್ಕೇರಿ ಹಿರೇಮಠದಿಂದ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಹೋಳಿಗೆ ಊಟವನ್ನು ಊಣಬಡಿಸಲಾಗುತ್ತಿದೆ. ಇನ್ನೂ ರಾಜ್ಯೋತ್ಸವನ್ನು ಸೆರೆ ಹಿಡಿಯಲೂ ಡ್ರೋಣ ಕ್ಯಾಮೆರ್‌ಗಳು ಹದ್ದಿನಂತೆ ಆಕಾಶದಲ್ಲಿ ತೇಲುತ್ತಿರುತ್ತವೆ.
ಟೀ ಶರ್ಟ್, ಸ್ಲೋಗನ್:
ಬೆಳಗಾವಿ ರಾಜ್ಯೋತ್ಸವ ಸಾಮಾಜಿಕ ಜಲತಾಣದಲ್ಲೂ ಭಾರಿ ಸದ್ದು ಮಾಡುತ್ತಿದೆ. ಕಳೆದ ಸಾರಿ ನಮ್ಮ ಬೆಳಗಾವಿ ಫೇಸ್ಬುಕ್ ಪೇಜ್‌ನಿಂದ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಅನ್ನುವ ಟೀಶರ್ಟ್ ಹಾಗೂ ಹಾಡು ಭಾರಿ ಸದ್ದು ಮಾಡುತ್ತಿದೆ. ಅಂದಾಜು ೩ ಸಾವಿರಕ್ಕೂ ಅಧಿಕ ಜನರು ಈ ಟೀ ಶರ್ಟ್ ಖರೀದಿಸಿ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಕೂಡಾ ‘ಏನ್ ಮಾಡ್ಕೋತಿ ಮಾಡ್ಕೋ, ಬೆಳಗಾವಿ ನಮ್ದೈತಿ ಬರ್ಕೋ’ ಎಂಬ ಸ್ಲೋಗನ್ ಸದ್ದು ಮಾಡುತ್ತಿದೆ. ಈಗಾಗಲೇ ಈ ಸ್ಲೋಗನ್ ಟೀಶರ್ಟ್‌ಗಳು ತಯಾರಿದ್ದು ರಾಜ್ಯೋತ್ಸವ ದಿನದಂದು ರಾರಾಜಿಸಲು ಅಣಿಯಾಗಿವೆ.
ರಾಜ್ಯೋತ್ಸವದ ಸವಿ ಸವಿಯ ಬೇಕಾದರೆ ನೀವು ರಾಜ್ಯೋತ್ಸವ ದಿನದಂದು ಬೆಳಗಾವಿಗೆ ಬರಲೇ ಬೇಕು. ಯಾಕಂದ್ರೆ ಇಲ್ಲಿಯ ರಾಜ್ಯೋತ್ಸವ ಸಂಭ್ರಮ ಮತ್ತೇಲ್ಲೂ ಕಾಣ ಸಿಗುವುದಿಲ್ಲ. ಈ ಬಾರೀ ರಾಜ್ಯೋತ್ಸವಕ್ಕೂ ಬೆಳಗಾವಿ ಮಂದಿ ಸನ್ನದ್ಧರಾಗಿ ಕನ್ನಡ ಡಿಂಡಿಂ ಬಾರಿಸಲು ಕಾಯ್ದು ಕುಳಿತಿದ್ದಾರೆ. 

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...