Thursday, 29 March 2018

ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳು..!


 ಮಂಜುನಾಥ ಗದಗಿನ


ಎದೆಯಾಳದಲ್ಲಿ ಇಳಿದ ನೆನಪುಗಳೇ ಹಾಗೆ, ಬೇಡವೆಂದರೂ, ಕೆದಕಿ, ಕೆಣಕಿ, ಕಾಡುತ್ತವೆ, ಕೆರಳಿಸುತ್ತವೆ. ಧೋ..ಎಂದು ನೆನಪಿನ ಮಳೆಯನ್ನೆ ಸುರಿಸಿ, ಕಣ್ಣಂಚನ್ನು ಒದ್ದೆಯಾಗಿಸುತ್ತವೆ. ಅಂತಹ ನೆನಪೊಂದು ಸದ್ದಿಲ್ಲದೇ ಎದೆಯಾಳದಲ್ಲಿ ಸರಿದಾಡುತ್ತಿದೆ, ನೆನಪುಗಳೊಂದಿಗೆ ಸರಸವಾಡುತ್ತಾ, ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳನ್ನು ಎಳೆಎಳೆದು ಹೊಸ ಮನ್ಮಂತರವನ್ನು ಸೃಷ್ಠಿಸುತ್ತಿದೆ.
ನಾನು ನನ್ನ ಕೆಲಸ ಎಂದು ನನ್ನದೆ ಲೋಕದಲ್ಲಿ ಹೊರ ಜಗತ್ತಿನ ಗಂಧ ಗಾಳಿಯು ಗೊತ್ತಿಲ್ಲದೆ ಇದ್ದ ಹಳ್ಳಿ ಹೈದನಾಗಿದ್ದೆ. ನನಗಾಗ ಧಾರವಾಡ  ಹೊಸ ಪ್ರಪಂಚ. ನಮ್ಮ ಊರಿನಿಂದ ಅಲ್ಲಿಗೆ ಕಲಿಯಲು ಹೋದವರು, ಆವಾಗ ಆವಾಗ ಊರಿಗೆ ಬಂದು ಧಾರವಾಡ ಎಂಬ ಹೊರ ಜಗತ್ತಿನ ಬಗ್ಗೆ ರೋಚಕ ಹಾಗೂ ಸ್ವಾರಸ್ಯಕರ ವಿಷಯಗಳನ್ನು ಹೇಳುತ್ತಿದ್ದರು. ಆಗ್ಲೆ ನನ್ಗೆ ಗೊತ್ತಾಗಿದ್ದು, ಧಾರವಾಡ ಎಂಬ ಸುಂದರ ನಗರಿಯ ತುಸು ಮಾಹಿತಿ. ವಿದ್ಯಾಕಾಶಿ, ನಿವೃತ್ತರ ಸ್ವರ್ಗ, ಕವಿಗಳ ನಾಡು ಎಂಬಿತ್ಯಾದಿ ಹೆಸರುಗಳನ್ನು ಕೇಳುತ್ತಿದ್ದೆ. ಇದೇ ಕಾರಣಕ್ಕೆ ಧಾರವಾಡ ಎಂದರೆ, ಅದೇನೋ ಮೈ-ಮನ ಫುಳಕಿತ್ತವಾಗುತ್ತಿದ್ದವು, ಅದನ್ನು ನೋಡಬೇಕು ಎಂಬ ಆಸೆ  ಹೆಮ್ಮರವಾಗಿ ಬೆಳೆದಿತ್ತು.
   ಇದೇ ಸಮಯಕ್ಕೆ ಪಿಯುಸಿ ಮುಗಿಯಿತು. ರೋಗಿ ಬಯಸಿದ್ದು, ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ನನ್ನ ಕನಸಿನ ಧಾರಾವಾಡದಲ್ಲಿ ಉನ್ನತ ಶಿಕ್ಷಣ ಕಲಿಯಲು ಅವಕಾಶ ದೊರೆಯಿತು. ಹೊಸ ಕನಸು, ಹೊಸ ಭರವಸೆ, ಹೊಸ ಉತ್ಸಾಹ, ಹೊಸ ಛಲಗಳೊಂದಿಗೆ ಧಾರವಾಡ ಎಂಬ ಮೋಹಕ ನಗರಿಗೆ ಪುಟ್ಟ ಮಗುವಾಗಿ ಅಂಬೆಗಾಲಿಟ್ಟೆ. ದಿಟ್ಟ ಹಜ್ಜೆಗಳ ಅಡಿಯಲ್ಲಿ ಧಾರವಾಡವನ್ನು ಅಚ್ಚರಿಯ ಕಣ್ಗಳಲ್ಲಿ ಆಶ್ವಾಧಿಸಲು ಪ್ರಾರಂಭಿಸಿದೆ. ಇಷ್ಟು ಬೇಗ ಧಾರವಾಡ ನನ್ನನ್ನು ತನ್ನೊಡಲಿನ ಮಗುವಾಗಿ ಸ್ವೀಕರಿಸುತ್ತದೆ ಎಂಬ ಕಲ್ಪನೆ ಕೂಡಾ ನನಗೆ ಇರಲಿಲ್ಲ. ಆವಾಗ್ಲೆ ಗೊತ್ತಾಗಿದ್ದು ಧಾರವಾಡಕ್ಕೆ ಎಲ್ಲವನ್ನೂ, ಎಲ್ಲರನ್ನೂ ಒಗ್ಗಿಸಿ, ತಗ್ಗಿಸುವ ತಾಕತ್ತಿದೆ ಎಂದು.
ಧಾರವಾಡದ ಮಳೆ, ಆ ಹಚ್ಚ ಹಸಿರು, ಎಳೆ ಬಿಸಿಲು, ಖಡಕ್ ರೊಟ್ಟಿ, ಜುಬ್ಲಿ ಸರ್ಕಲ್, ಬೇಂದ್ರೆ ಅಜ್ಜನ ಸಾಧನಕೇರಿ, ಶಾಲ್ಮಲೆಯ ಒಡಲು, ಶ್ರೀನಗರ ಸರ್ಕಲ್, ರೈಲ್ವೆ ಟ್ರ್ಯಾಕ್ ಮೇಲೆ ತೆಗೆಸಿದ ಸೆಲ್ಪಿ, ಒಂದೇ ಎರಡೆ ಧಾರಾನಗರಿಯ ನೆನಪುಗಳು, ಬಿಚ್ಚಿಟ್ಟು ಹಂಚಿಕೊಳ್ಳಲಾಗದಷ್ಟು ಎದೆಯಾಳದಲ್ಲಿ ಆಳವಾದ ಕಂದಕವನ್ನು ಸೃಷ್ಠಿಸಿವೆ. 
ನಾವು ಯಾವುದೇ ಒಂದು ಸ್ಥಳದಲ್ಲಿ ಇದ್ದಾಗ, ಆ ಸ್ಥಳದ ಮಹಿಮೆ ಗೊತ್ತಾಗುವುದಿಲ್ಲ. ಇದ್ದಾಗ ’ಅಲ್ಲೆನ ಐತಿ ಬಿಡ್’ ಎಂಬ ಉದಾಸೀನ ಮನೋಭಾವನೆಯಿಂದ ಎಲ್ಲವನ್ನು ಅಲಗಳೆಯುತ್ತೆವೆ. ನಾವು ಆ ವಸ್ತು ಅಥವಾ ಸ್ಥಳ ನಮ್ಮನ್ನು ಬಿಟ್ಟು ದೂರ ಹೋದಾಗಲೇ, ಅದರ ನೈಜ ಮಹತ್ವ ಅರಿವಾಗುವುದು. ಇದು ನನ್ನನೊಬ್ಬನ ಮಾನಸಿಕ ಸ್ಥಿತಿ ಅಲ್ಲ. ಇದು ಪ್ರತಿಯೊಬ್ಬ ಮನುಷ್ಯನ ನೈಜ ಸ್ಥಿತಿಯಾಗಿದೆ. ಈಗ ಆಗಿರುವುದು ಅದೇ, ಧಾರವಾಡದಲ್ಲಿ ಇದ್ದಾಗ ಎಲ್ಲವನ್ನು ಉದಾಸಿನ ಮಾಡುತ್ತಾ, ಬರೀ ವಿನಾಃಕಾರಣ ಕಾಲಹರಣ ಮಾಡಿ ವಿದ್ಯಾರ್ಥಿ ಜೀವನ ಮುಗಿಸಿದೆ.
ಇದ್ದ ಅಷ್ಟು ದಿನಗಳು ಧಾರವಾಡ, ಸುಂದರ ಅನುಭವಗಳನ್ನು, ಬದುಕಿನ ಪಾಠವನ್ನು, ಸಮಾಜ ಎದುರಿಸುವ ರೀತಿಗಳನ್ನು ಕಲಿಸಿಕೊಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಗೆಳೆಯಂತೆ, ನಿಂತು ನನ್ನ ತಪ್ಪು-ಒಪ್ಪುಗಳಿಗೆ ಸಲಹೆ ಸೂಚನೆ ನೀಡುತ್ತಾ. ನನ್ನನ್ನು ತಿದ್ದಿ, ತಿಡಿ ಪೋಷಿಸಿದೆ. ಅವ್ವನಂತೆ ಸಾಕಿದೆ, ಅಪ್ಪನಂತೆ ಬೇಕು ಬೇಡಗಳನ್ನು ಆಲಿಸಿ, ಸರಿದಾರಿಯಲ್ಲಿ ಸಾಗುವಂತೆ ಎಚ್ಚರಿಕೆ ನೀಡಿದೆ. ಏನೆಂದು, ಹೇಳಲ್ಲಿ ನನ್ನ ಧಾರಾನಗರಿಯ ಬಗ್ಗೆ. ಏಷ್ಟು ಹೇಳಿದರೂ, ಅದೊಂದು ಮುಗಿಯದ ಕಥೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ, ಊರು ಬಿಟ್ಟು ಬಂದಾಗ ನನ್ನನ್ನು ಸಾಕಿ ಸಲುಹಿದ್ದು ಇದೇ ನನ್ನ ಧಾರವಾಡ. 
      ಜೀವನದಲ್ಲಿ ಎಡವದಂತೆ ಎಚ್ಚರಿಸಿದ ಆ ಕಿತ್ತೋದ ರಸ್ತೆಗಳು, ಸದಾ ಹಸಿರು ಹೊದ್ದು ಮಲಗಿ, ಮನಕ್ಕೆ ತಂಪು ನೀಡುತ್ತಿದ್ದ ಕ್ಯಾಂಪಸ್‌ನ ಸಸ್ಯಶಾಲ್ಮಲೆ, ಮೈ-ಕೈಗೆ ಚಳಿ ಬೀಡಿಸಿದ ಆ ಪತ್ರಿಕೋದ್ಯಮದ ದಾರಿ, ಉತ್ಸಾಹ ಮತ್ತು ಪ್ರೋತ್ಸಾಹ ತುಂಬಿದ ಗೆಳೆಯರು, ವೃತ್ತಿ ಬದುಕಿನ ಪಾಠ ಕಲಿಸಿದ ಗುರುಗಳು, ಎಲ್ಲವೂ ಧಾರಾನಗರಿ ಕಟ್ಟಿಕೊಟ್ಟ ಬದುಕಿನ ಅವಿಸ್ಮರಣಿಯ ಕ್ಷಣಗಳು. ಮೊನ್ನೆ ಜಿಟಿ ಮಳೆಗೆ ಹುಡಿಯದ್ದ ಆ ಮಣ್ಣಿನ ಸುವಾಸನೆಯಲ್ಲಿ ಧಾರವಾಡದ ನೆನಪು ಕೂಡಾ ತೇಲಿ ಬಂತು. ಅದು ನನ್ನವಳ ನೆನಪಿನ ಹಾಗೆ. 




Saturday, 24 March 2018

ಆಟಗಳು ಉಂಟು ಲೆಕ್ಕಕ್ಕಿಲ್ಲ..!


ಮಂಜುನಾಥ ಗದಗಿನ

 ಆಟದೊಂದಿಗೆ ಪಾಠ ಕೇಳುತ್ತಿದ್ದರೆ, ಅದೆನೋ, ಹರುಷ. ಮತ್ತಷ್ಟು ಕಲಿಬೇಕು, ತಿಳಿದುಕೊಳ್ಳಬೇಕು ಎಂಬ ಹಂಬಲ ವ್ಯಕ್ತಿಗತವಾಗಿ ಪರಕಾಯ ಪ್ರವೇಶ ಮಾಡುತ್ತಿತ್ತು. ಅದರಲ್ಲೂ ಚಿನ್ನಿ-ದಾಂಡು, ಲಗೋರಿ, ಬುಗುರಿ, ಕಣ್ಣಾಮುಚ್ಚಾಲೆ ಆಟಗಳ ಜೀವನದ ಅವಿಬಾಜ್ಯ ಅಂಗಗಳಾಗಿ ಬಾಲ್ಯದ ದಿನಗಳಲ್ಲಿ ಪಾರಮ್ಯ ಮೆರೆದಿದ್ದವು. ಆದರೆ ಇಂದು ಈ ಆಟಗಳೆಲ್ಲಾ, ಕಂಪ್ಯೂಟರ್, ಮೊಬೈಲ್, ವಿಡಿಯೋ ಗೇಮ್‌ಗಳಲ್ಲಿ ಕಳೆದು ಹೋಗಿರುವದು ಮನುಕುಲದ ಯಾಂತ್ರಿಕ ಬದುಕನ್ನು ಅನಾವರಣಗೊಳಿಸುತ್ತವೆ.

ಬೇಕಾದ್ದು, ಬೇಡವಾದದ್ದನ್ನು ಬೆನ್ನಿಗೆ ಕಟ್ಟಿಕೊಂಡು,ದಿನಗಳನ್ನು ಆರಂಭಿಸುವ ಇಂದಿನ ನಾಗರಿಕ ಪ್ರಜೆಗಳಿಗೆ ಆಟ ಆಡಲು ಎಲ್ಲಿಂದ ಬರಬೇಕು ಪುರಸೋತ್ತು. ತಮ್ಮ ಮಕ್ಕಳಿಗೆ ಎಲ್ಲಿಲದ್ದ ಕಾಯ್ದೆ,ನಿಯಮ ಎಂಬ ಕಟ್ಟಳೆಗಳಲ್ಲಿ ಬಂದಿಸಿ, ಹೊರಗಡೆಯ ಪ್ರಪಂಚಕ್ಕೆ ಅಪರಿಚಿತರನ್ನಾಗಿ ಮಾಡುತ್ತಿದ್ದಾರೆ. ತಮ್ಮ ಮಕ್ಕಳು, ಕೇಳಿದ್ದೇಲ್ಲವನ್ನ ಮನೆಯಲ್ಲಿಯೇ ತಂದುಕೊಟ್ಟು, ಅವರನ್ನು ನಾಲ್ಕು ಗೋಡೆಗಳ ಮಧ್ಯ ಬಂದಿಸಿದ್ದಾರೆ. ಹೀಗಿರುವಾಗ ಮಕ್ಕಳು ಹೊರ ಜಗತ್ತಿನೊಂದಿಗೆ ಬೇರೆತು, ಸ್ವಚ್ಚಂದಾಗಿ ಆಡುವದು ದೂರದ ಮಾತಾಯಿತು. ಹೀಗಿರುವಾಗ ನಮ್ಮ ಗ್ರಾಮೀಣ ಕ್ರೀಡೆಗಳು, ಬೆಳೆಯುವದು ಯಾವಾಗ? ಕೈಯಲ್ಲೊಂದು ಜಗತ್ತಿನ್ನು ಒಳಗೊಂದ ಮೊಬೈಲ್ ಇದ್ದರೆ ಸಾಕು, ಹೆತ್ತವರನ್ನು ಹೇಡೆಮುರಿಕಟ್ಟಿ ಬೀಡುತ್ತಾರೆ ಇಂದಿನ ಮಕ್ಕಳು. 
ಮೊನ್ನೆ ರಜೆಗೆಂದು ಊರಿಗೆ ಹೋದಾಗ, ಗೆಳೆಯರ ಜೊತೆ ಓಣಿಯ ಸಂಧಿ-ಗೊಂದಿಗಳಲ್ಲಿ ಲೋಕಾಭಿರಾಮವಾಗಿ ಮಾತಾಡುತ್ತಾ ಸುತ್ತಾಡುತ್ತಿದ್ದೆ. ಅಲ್ಲೆ ಪಕ್ಕದಲ್ಲೆ ಒಂದಿಷ್ಟು ತಮ್ಮಂದಿರು ಚಿನ್ನಿ-ದಾಂಡುಗಳನ್ನು ಹಿಡಿದುಕೊಂಡು, ಬೀಸಿ ಹೊಡೆಯುತ್ತಿರುವುದ ಕಂಡು, ಬಾಲ್ಯ ನೆನಪುಗಳು ಸ್ಮತಿಪಟಲಗಳ್ಲಿ ನಲಿದಾಡಲು ಶುರು ಮಾಡಿದವು. ನಾವುಗಳು ಕೂಡಾ, ಅವರ ಹಾಗೆಯೇ ದಿನ ಬೆಳಗಾದ್ರೆ ಚಿನ್ನಿ-ದಾಡು, ಕಿಸೆಯಲ್ಲೊಂದಿ ಗೋಲಿಯನ್ನು ಇಳಿಸಿಕೊಂಡು ಬರುತ್ತಿದ್ದೇವು. ಚಿನ್ನಿ-ದಾಂಡು ಆಡುತ್ತಿದಬೇಕಾದ್ರೆ ಕಾಲು ಗೆದರಿಕೊಂಡು ಗೆಳೆಯರ ಜೊತೆ ಗುದ್ದಾಡಿದ್ದು, ರಸ್ತೆಯಲ್ಲಿ ಓಡಾಡುವ ಮುದಕರಿಗೆ ಬಡಿದಾಗ, ಅವರು ಲೋ..ಬಾಡ್ಯಾ ನಿನಗ್ ಬ್ಯಾರೇ ಯಾರು ಸಿಗಲಿಲ್ಲೇನೋ..ಎಂದು ಬೈದದ್ದು, ಸೋತಾಗ ಮಾರುದ್ದ ದೂರದಿಂದ ಕೋಳಿಯ ಹಾಗೆ ಕುಕ್ಕುಕ್ಕೂ..ಎಂದು ಕೂಗುತ್ತಾ ಓಡಿದ್ದು ಎಲ್ಲವು ನೆನಪಾಗಿ, ಕಣ್ಣಾಲಿಗೆಗಳು ತೇವಗೊಂಡವು. ನಾವುಗಳು ಕೂಡಾ, ಅವರ ಜೊತೆ ಒಂದ ಕೈ ಚಿನ್ನಿ-ದಾಂಡು ಆಡಿ ಖುಷಿಪಟ್ಟೆವು.
ಈ ಆಟಗಳನ್ನು ಆಡುವುದರಿಂದ ಮೊದಲೆಲ್ಲಾ ಮಕ್ಕಳಿಗೆ ವ್ಯಾಯಾಮವಾಗುತಿತ್ತು. ಬುದ್ದಿ ಚುರುಕಾಗುತ್ತಿತ್ತು. ಇದೇ ಕಾರಣಕ್ಕೆ ಈ ಆಟಗಳನ್ನು ಋತುಮಾನಕ್ಕನುಗುಣವಾಗಿ ಆಡಲಾಗುತ್ತಿತ್ತು. ಆದರೆ ಇಂದು ದಿನ ಬೆಳಗಾದ್ರೆ ಸಾಕು ಬ್ಯಾಟು, ಚಂಡು ಹಿಡಿದು ಹೊರಟು ಬಿಟ್ಟರೇ, ಯಾರದಾದ್ರು ತಲೆನೋ..ಕೈಯೋ ಮುರಿಯೋ ವರೆಗೂ ಆಡಿ, ಜಗಳದೊಂದಿಗೆ ಮನೆಗೆ ಮರಳುತ್ತಿದ್ದಾರೆ. ಆಟಗಳು ಮನುಷ್ಯನ ಮನಸ್ಸನ್ನ ಉಲ್ಲಸಿತನ್ನಾಗಿಸುತ್ತವೆ. ಅಂತಹ ಆಟಗಳಲ್ಲಿ ಚಿನ್ನಿ-ದಾಂಡು, ಲಗೋರಿ ಆಟಗಳು ಮಹತ್ತರವಾಗಿವೆ. ಆದರೆ ಇಂದಿನ ಮಕ್ಕಳಿಗೆ ಚಿನ್ನಿ-ದಾಂಡು, ಲಗೋರಿ, ಬುಗುರಿ ಎಂದರೆ ಹಾಗೆಂದ್ರೆ ಏನು? ಎಂದು ಕೇಳುವ ಪರಸ್ಥಿತಿ ನಿರ್ಮಾಣವಾಗಿದೆ.
ತಾಯಿಯಾದ್ಳು ಆಡಿ ಬಾ ಏನ ಕಂದ, ಅಂಗಾಲ ತೊಳೆದೇನ, ತೆಂಗಿನ ಕಾಯಿ ತಿಳಿನೀರ ತಕ್ಕೊಂದು ಬಂಗಾರದ ಮೊರೆ ತೊಳೆದೇನು ಎಂದು ಆಡಿ ದಣಿದು ಬಂದ ತನ್ನ ಮಗನನ್ನು ಉಪಚರಿಸುತ್ತಿದ್ದಳು. ಆದರೆ ಈಗನ ತಾಯಂದಿರು ಧೋಳ್‌ಲ್ಲಿ ಆಡಬ್ಯಾಡ, ಕೇಸರಲ್ಲಿ ನಡಿಬ್ಯಾಡ ನನ್ನ ಮಗನ, ಆಡಿದ್ದು ಗೊತ್ತಾದ್ರ ಕೈಕಾಲ ಮುರಿತಿನ ಎಂದು ಮಕ್ಕಳನ್ನು ಗಧರಿಸುತ್ತಿದ್ದಾರೆ. ಹೀಗಾದ್ರ ನಮ್ಮ ಮಕ್ಕಳು ಈ ಆಟಗಳನ್ನು ಆಡುವುದು ಯಾವಾಗ? ಈ ಆಟಗಳು ಉಳಿಯೋದು ಹೇಗೆ? ಒಂದು ವೇಳೆ ಇಂತಹ ಆಟಗಳು ಇದ್ದಾವೇ, ಎಂದು ನಮ್ಮ ಮಕ್ಕಳಿಗೆ ತಿಳಿಸಬೇಕಾದರೆ, ಸಾಹಿತ್ಯ ಸಮ್ಮೇಳನದ ಹಾಗೆಯೋ, ಕ್ರಿಕೇಟನ ಟೋರ್ನಾಮೆಂಟಗಳ ಹಾಗೆ ಟೋರ್ನಿ ಕರೆದು ಅವುಗಳಿಗೂ ಪಂದ್ಯ ಏರ್ಪಡಿಸಿ, ಪರ್ದಶಿಸಿದರೆ ನಮ್ಮ ಯುವ ಜನಾಂಗಕ್ಕೆ ಇವುಗಳ ಬಗ್ಗೆ ಮನವರಿಕೆ ಆದರೂ ಆದಿತು.



Saturday, 17 March 2018

ಬಾಳಿಗೊಂದು ಯುಗಾದಿ!

ಮಂಜುನಾಥ ಗದಗಿನ


ಹೊಸತನ-ವಿನೂತ ಬಾಳಿಗೊಂದು ಹಿರಿತನ ತಂದುಕೊಡುವುದೇ, ಈ ಯುಗಾದಿ. ಅದಕ್ಕೆಂದೇ ಭಾರತೀಯರಾದ ನಾವು ಇದನ್ನು ಹೊಸವರುಷ ಎಂದು ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ. ಅದೇ ಯುಗಾದಿ ನನ್ನ ಜೀವನದಲ್ಲೂ ಹೊಸತನ ತರುತ್ತಿತ್ತು.
   ಹೌದು! ಯುಗಾದಿ ಹೊಸತನದ ಸಂಕೇತ, ಈ ಹೊಸತನಕ್ಕಾಗಿ ನಾನು ಮತ್ತು ನನ್ನಕ್ಕ ಕ್ಯಾಲೆಂಡರನ್ನು ತಿರುವಿ ಹಾಕುತ್ತಾ ಪದೇ ಪದೇ ಯುಗಾದಿ ಹಬ್ಬ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ದಿನಗಳನ್ನು ಕಳೆಯುತ್ತಿದ್ದೇವು. ಯಾಕೆಂದ್ರೆ ಯುಗಾದಿ ಹಬ್ಬ ಬಂತೆಂದ್ರೆ  ನಮ್ಮಪ್ಪ ನಮ್ಗೆಲ್ಲಾ ಹೊಸ ಬಟ್ಟೆ ಕೊಡಿಸುತ್ತಿದ್ದ. ನಾವು ಕೂಡಾ ಯುಗಾದಿ ಒಂದು ತಿಂಗಳು ಇರುವಾಗಲೇ  ಯಪ್ಪಾ ಯಪ್ಪಾ ಹೊಸ ಅರ‌್ವಿ ಕೊಡ್ಸಾ ಎಂದು ಗಂಟು ಬಿಳುವುದು ಮಾಮೂಲಾಗಿತ್ತು.
  ಯುಗಾದಿ ಸಮೀಪಿಸುತ್ತಿದ್ದಂತೆ ನಮ್ಮ ಆಸೆಗಳಿಗೆ ರೆಕ್ಕೆ-ಪುಕ್ಕಗಳು ಬಂದು ಹಾರಾಡುತ್ತಿದ್ದವು. ನಮ್ಮ ಗೆಳೆಯರಿಗೆಲ್ಲಾ  ಲೇ ನಮ್ಮಪ್ಪ ಈ ಸಾರಿ ಯುಗಾದಿಗೆ ಜರ್ಬದಸ್ತ್ ಅಂಗಿ-ಚಡ್ಡಿ ಕೊಡಿಸ್ತಾನಂತ ಎಂದು ಓಣಿಯ ಗೆಳೆಯರಿಗಿಲ್ಲಾ ಹೇಳಿ ವರ್ಚಸ್‌ಮೆಂಟ ಮಾಡುತ್ತಿದ್ದೆ.
  ಮಿರ, ಮಿರ್ ಮಿಂಚುವ ಬಣ್ಣದ ತೋಳಂಗಿ, ಸಣಕಲು ಕಾಲುಗಳಿಗೆ ದಪ್ಪ ಜಿನ್ಸ ಪ್ಯಾಂಟು, ಅದಕ್ಕೊಪ್ಪುವ ಬೂಟುಗಳು, ವ್ಹಾ! ಏನ್ ಸ್ಟೈಲ್, ಏನ್ ಲುಕ್, ಅಂತಾ ಇರೋ ಗೆಳೆಯರು. ಅಷ್ಟರಲ್ಲೇ ನಮ್ಮವ್ವಾ ಏಳ್ಲಾ, ಇನ್ನ ಟೈಮ್ ಆತು, ಎಂದು ಗೊಣಗುವದು ನೋಡಿ ನನಗೆ ಎಚ್ಚರವಾಗಿ ಬಿಡುತ್ತಿತ್ತು. ಎದ್ದು ಕುಂತು ಇದು ಕನಸಾ! ಎಂದು ಪೆಚ್ಚು ಮೊರೆಹಾಕಿಕೊಳ್ಳುತ್ತಿದ್ದೆ. ಏಸ್! ಯುಗಾದಿ ಸುತ್ತ ಇಂತಹ ಕನಸುಗಳು ಸಾಮಾನ್ಯವಾಗಿ ಬಿಟ್ಟಿದ್ದವು.
  ಒಂದು ವಾರ ಮುಂಚಿತವಾಗಿಯೇ, ಅಪ್ಪ ಅಂಗಿ ತರಲು ಹೋಗುತ್ತಿದ್ದ, ಆದರೆ ಅವನಿಗೆ ನಮ್ಮನ್ನು ಬಿಟ್ಟು ಹೋಗುವ ಖಯಾಲಿ. ಹೇಗಾದ್ರು ಮಾಡಿ ಇವರನ್ನು ಬಿಟ್ಟು ಹೋಗಬೇಕೆಂದುಕೊಳ್ಳುತ್ತಿದ್ದ, ಆದರೆ ಅದು ಅಸಾದ್ಯವಾದ ಕೆಲಸವಾಗಿತ್ತು. ಏಕೆಂದರೆ ನಮ್ಮಪ್ಪ ನಮ್ಮನ್ನು ಬಿಟ್ಟು ಮಾರುದ್ದು ದೂರ ಹೋದಾಗ, ನಾನು ನಮ್ಮಕ್ಕ ಯಾವುದೇ ಸಂಧಿಯಿಂದ ಅಪ್ಪನನ್ನು ಹಿಂಭಾಲಿಸಿ ಬಿಡುತ್ತಿದ್ದೆವು. ಈ ರೀತಿಯಾಗಿ ಅಪ್ಪನ ದುಂಬಾಲು ಬಿದ್ದು ನಮ್ಮಗೆ ಇಷ್ಟವಾದ ಅಂಗಿಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದೇವು. ಆದರೆ ಆ ಹೊತ್ತಿದೆ ನಮ್ಮಪ್ಪನ ಕಿಸೆ ಖಾಲಿ-ಖಾಲಿಯಾಗುತ್ತಿತ್ತು.
  ಇನ್ನೂ ಯುಗಾದಿ ದಿನಾ, ಸೂರ್ಯ ಹುಟ್ಟುವ ಮುನ್ನವೇ ಎದ್ದು ಬೇವಿನ ಮರ ಹುಡುಕಿಕೊಂಡು ಅಲೆಯುತ್ತಿದ್ದೇವು. ಅದೆಲ್ಲೂ ಮರ ಕಂಡಿತೆಂದ್ರ ದಾವಂತ ಹೊಡಿಹೋಗುತ್ತಿದ್ದೇವು. ಅಷ್ಟರಲ್ಲಾಗಲೆ ಜನ ಬಂದು ಹೋಗುತ್ತಿದ್ದರು. ನಮ್ಗೆ ಗಿಡ ಹತ್ತಲು ಬರುತ್ತಿರಲಿಲ್ಲ. ಆದ್ದರಿಂದ ಅಲ್ಲೇ ಇದ್ದ ಜನಕ್ಕೆ  ಅಣ್ಣಾರ ನಮ್ಮಗು ಸ್ವಲ್ಪ ಹರದಕೊಡ್ರಿ ಎಂದು ಬೇಡಿಕೊಳ್ಳುತ್ತಿದ್ದೇವು. ಅವ್ರ ಪಾಪಾ ಅಂತಾ ಕಿತ್ತು ಕೊಡುತ್ತಿದ್ದರು. ಹೀಗೆ ತಂದ ಬೇವನ್ನು ನಮ್ಮವ್ವನ ಕೈಯಲ್ಲಿ ಕೊಟ್ಟಾಗ ಅವಳು ಅದನ್ನು, ನೀರಿಗೆ ಹಾಕಿ ಕಾಯಿಸುತ್ತಿದ್ಳು. ಯಾಕ ಹಾಕ್ತಿ ಬೇ.. ಅಂತಾ ಕೇಳಿದರೆ  ಬೇವನ್ನು ಹಾಕಿ ಸ್ನಾನ ಮಾಡಿದ್ರ  ಯಾವುದೇ ರೋಗಾ-ರುಜಿನಾ ಬರೋದಿಲ್ಲ ಅಂತಾ ಹೇಳುತ್ತಿದ್ದಳು. ಅದರಿಂದ ನಾವು ಖುಷಿಯಾಗಿ ಹಾಕಬೇ ಇನ್ನಷ್ಟ ಹಾಕ ಎಂದು ಹೇಳುತ್ತಿದೇವು.
 ಸ್ನಾನವಾದ ನಂತರ ತಂದೆ-ತಾಯಿ ಮತ್ತು ನಮ್ಮಕ್ಕನ ಕಾಲುಗಳಿಗೆ ಬಿದ್ದು ಆರ್ಶಿವಾದ ಪಡೆಯುತ್ತಿದ್ದೆ ಹಾಗೂ ಬೇವು-ಬೆಲ್ಲ ತಿನ್ನಿಸುತ್ತಿದ್ದೆ. ಆ ಪ್ರತಿವರ್ಷ ನಮ್ಮವ್ವ ಒಂದು ಮಾತು ಹೇಳುತ್ತಿದ್ದಳು  ಮಗಾ ಇವತ್ತ ಯಾರ ಕೂಡಾನು ಜಗ್ಲಾ ಮಾಡಬೇಡಾ ಎಂದು ತಪ್ಪದೇ ಹೇಳಿ ಕಳುಹಿಸುತ್ತಿದ್ದಳು.  ನಂತರ ದೇವರು, ದಿಂಡ್ರು ಅಂತಾ ಕಂಡ ಕಂಡ ದೇವರಿಗೆಲ್ಲಾ ಹೋಗಿ ನಮಸ್ಕಾರ ಮಾಡುತ್ತಿದ್ದೇನು.  ಈ ರೀತಿ ಯುಗಾದಿ ನನ್ನ ಜೀವನದಲ್ಲಿ ಕಹಿಗಿಂತ ಸಿಹಿಯನ್ನೆ ಹೆಚ್ಚಾಗಿ ನೀಡಿದೆ.


Friday, 16 March 2018

ಯುವ ಪರಿಸರ ಪ್ರೇಮಿ ಲಿಂಗರಾಜ ನಿಡುವಣಿ

 
ಯಾವುದೇ ಫಲಾಪೇಕ್ಷೆಗಳು ಇಲ್ಲದೇ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜನತರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೊರಟ್ಟಿದ್ದಾರೆ ಗ್ರಾಮೀಣ ಪ್ರದೇಶದ ಯುವ ಪರಿಸರ ಪ್ರೇಮಿ ಲಿಂಗರಾಜ ನಿಡುವಣಿ.
  ಮೂಲತಃ ಶೇರವಾಡ ಗ್ರಾಮದವರಾದ ಲಿಂಗರಾಜ ಕೃಷಿ ಕುಟುಂಬದಿಂದ ಬಂದವರು. ಇವರ ಅಜ್ಜನವರು ಗಿಡ ಮೂಲಿಕೆಗಳಿಂದ ಔಷದಿ ತಯಾರಿಸಿ ಜನರಿಗೆ ನೀಡುತ್ತಿದ್ದರು. ಔಷಧಿಗಾಗಿ ಮನೆಯಲ್ಲಿ ನಾನಾ ನಮೂನೆಯ ಗಿಡಗಳನ್ನು ಬೆಳೆಸುತ್ತಿದ್ದರು. ಈ ಗಿಡಗಳ ರಕ್ಷಣೆಯ ಹೊಣೆಯನ್ನು ಲಿಂಗರಾಜರವರಿಗೆ ವಹಿಸುತ್ತಿದ್ದರು.  ಇದೇ ಕಾರಣಕ್ಕೆ ನಿಂಗರಾಜರವರಲ್ಲೂ ಪರಿಸರ ಬಗ್ಗೆ ಆಸಕ್ತಿ ಹುಟ್ಟಿತು. ಈ ಹವ್ಯಾಸವನ್ನು ಮುಂದುವರೆಸಿಕೊಂಡು ಹೊರಟ್ಟಿದ್ದಾರೆ.
ಸಂಘ-ಸಂಸ್ಥೆಗಳ ಸ್ಥಾಪನೆ.
 ಇಷ್ಟು ಚಿಕ್ಕ ವಯಸ್ಸಿನಲ್ಲೇ ಅನೇಕ ಅಂದೋಲನಗಳನು ಸಂಘಟಿಸುವದರ ಮೂಲಕ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.  ಪರಿಸರ ಹಾಗೂ ಸಮಾಜಮುಖಿ ಪರಿವರ್ತನೆಗಾಗಿ, ವಿನೂತನ, ಮಾರುತಿ ಯುವಕ ಮಂಡಳ ಹಾಗೂ ಪರಿವರ್ತನ ಯುವಕ ಮಂಡಳ ಎಂಬ ಎರಡು ಸಂಸ್ಥೆಗಳನ್ನು ಹುಟ್ಟು ಹಾಕಿ, ಇವುಗಳ ಮೂಲಕ ಪರಿಸರ ಜಾಗೃತಿಗಳನ್ನು ಮೂಡಿಸುತ್ತಿದ್ದಾರೆ. ಈ ಸಂಸ್ಥೆಗಳನ್ನು ನಡೆಸಲು ಯಾರ ಸಹಾಯ, ಸಹಕಾರವನ್ನು ಪಡೆಯದೇ ತಮ್ಮ ಸ್ವಂತ ಹಣದಿಂದಲ್ಲೇ ನಡೆಸುತ್ತಿದ್ದಾರೆ. ಈ ಸಂಸ್ಥೆಗಳ ಮೂಲಕ ಚಿಕ್ಕ ಮಕ್ಕಳಿಗೆ ಪರಿಸರದ ಬಗ್ಗೆ ಭಾಷಣ, ಚಿತ್ರಕಲೆ, ಕ್ವಿಜ್, ಹಾಗೂ ಸಾಕ್ಷ್ಯಚಿತ್ರಗಳನ್ನು ತೊರಿಸುವದರ ಮೂಲಕ ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಪ್ರತಿಯೊಂದು ಆಂದೋಲನಗಳ ಹಿಂದೆ ಈ ಯುವಕ ಮಂಡಳಗಳ ಸಹಾಯ ಇದ್ದೆ ಇರುತ್ತದೆ.
ಹೊಸ ಆಂದೋಲನಗಳ ಹರಿಕಾರ
ಪವಿತ್ರ ಪಂಚವಟಿ ಆಂದೋಲನ(ಬೇವು, ಬನ್ನಿ, ಅರಳಿ, ಹತ್ತಿ, ಪತ್ರಿ ಪ್ರಾಣವಾಯು ವೃದ್ದಿಸುವ ಗಿಡಗಳು), ಉಣಕಲ್ ಕೆರೆ ಸ್ವಚ್ಚತಾ ಅಭಿಯಾನ, ಕಸ, ಪ್ಲಾಸಿಕ ಮತ್ತು ಹಂದಿಗಳ ಮುಕ್ತ ಆಂದೋಲನ( ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಕಳುಹಿಸಿದ್ದಾರೆ), ಪರಿಸರ ಸ್ನೇಹಿ ಆಂದೋಲನ, ಶೌಚಾಲಯ ಸಮರ, ಸಸ್ಯಗಳ ದಾಖಲಿಕರಣ, ಗಿಡಗಳಿಗೆ ರಾಖಿ ಕಟ್ಟುವುದರ ಮೂಲಕ, ವಿಶಿಷ್ಟವಾಗಿ ರಕ್ಷಾಬಂಧನವನ್ನು ಆಚರಿಸಿದರು ಹಾಗೂ ಧಾರವಾಡದ ಶೇರೆವಾಶಡದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ, ಶಾಲೆಯ ಆವರಣದಲ್ಲಿ 125 ಕ್ಕೂ ಹೆಚ್ಚಿನ ಜಾತಿಯ ಗಿಡಗಳನ್ನು ನೆಟ್ಟು, ಆ ಗಿಡಗಳ ಪ್ರಯೋಜನದ ಬಗ್ಗೆ ಜನರಿಗೆ ತಿಳಿಹೇಳುತ್ತಿದ್ದಾರೆ. ಈ ಕಾರ್ಯಕ್ರಮದಕ್ಕೆ ಮಾಜಿ ಸಚಿವ ಬಸವರಾಜ ಹೊರಟ್ಟಿಯವರು ಸ್ವಪ್ರೇರಣೆಯಿಂದ ಬಂದು ಗಿಡ ನಟ್ಟಿದ್ದರು.
ಸಮಾಜಮುಖಿ ಕಾರ್ಯಗಳು
   ನಿಂಗರಾಜ ನಿಡುವಣಿ ಪರಿಸರ ಪ್ರೇಮಿ ಅಷ್ಟೇ ಅಲ್ಲದೇ , ಒಬ್ಬ ಸಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಾ ನೊಂದವರ ಬಾಳಿಗೆ ಬೆಳಕಾಗಿದ್ದಾರೆ. ಜನಸಂಖ್ಯೆ ಬಗ್ಗೆ ತಿಳುವಳಿಕೆ ನೀಡಲು ಜನಸಂಖ್ಯಾ ಆಂದೋಲನ, ಮತಧಾನದ ಜಾಗೃತಿ, ಮಕ್ಕಳ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆ ಹಾಗೂ ಗರ್ಭೀನಿಯರಿಗೆ ಉಡಿತುಂಬುವ ಕಾರ್ಯಕ್ರಮದ ಮೂಲಕ, ಗರ್ಭೀನಿಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮತ್ತು ಗ್ಲೋಬಲ್ ಹ್ಯಾಂಡವಾಷ ಡೇ ದಿನದಂದು, ಶಾಲಾ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಆಂದೋಲನ ಹಮ್ಮಿಕೊಂಡಿದ್ದರು. ಈ ಆಂದೋಲನವನ್ನು ಗಮನಿಸಿದ ಯುನೆಸೆಫ ಇವರ ಈ ಆಂದೋಲನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, 25 ಸಾವಿರ ಹ್ಯಾಂಡಗ್ಲೋಸ್‌ಗಳನ್ನು ನೀಡಿದೆ.
    ಇವೇಲ್ಲದರ ಜೊತೆಗೆ ಪ್ಯಾಮಿಲಿ ಪ್ಲಾನಿಂಗ್ ಅಸೋಶಿಯಸ್‌ನ ಧಾರವಾಡದ ಕಾರ್ಯಕಾರಣಿ ಸಮಿತಿಯ ಏಕೈಕ ಯುವ ಸದಸ್ಯರಾಗಿ, ಭಾರತ ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಯುವದಳದ ಸ್ವಯಂ ಸೇವಕರಾಗಿ ಪರಿಸರ ಹಾಗೂ ಸಮಾಜಿಕ ಕಾರ್ಯಕ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೋಂಡಿದ್ದಾರೆ.
   ಇವರ ಈ ಸಾಧನೆಗಳನ್ನು ಗಮನಿಸಿದ ನಾಡಿನ ಪ್ರತಿಷ್ಠಿತ ಪ್ರತಿಕೆಯೊಂದು ಇವರನ್ನು ಪರಿಸರ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಆಕಾಶವಾಣಿಯಲ್ಲಿ ಪರಿಸರ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಇನ್ನೂ ಸಾಲುಮರದ ತಿಮಕ್ಕ ಲಿಂಗರಾಜರವರ ಪರಿಸರ ಪ್ರೀತಿಗೆ ಬೇಷ್ ಎಂದಿದ್ದಾರೆ.
ನಿಂಗರಾಜ ನಿಡುವಣಿ ಅನಿಸಿಕೆ:-
   ನಾವು ಪರಿವರ್ತನೆ ಬಯಸುವುದಾರೆ, ಅದು ನಮ್ಮಿಂದಲೇ, ಪ್ರಾರಂಭವಾಗಬೇಕು, ಅಂದಾಗ ಮಾತ್ರ ನಮ್ಮ ಸುತ್ತ-ಮುತ್ತಲಿನ ಪರಿಸರ ಉಳಿಯಲು ಸಾಧ್ಯ ಯುವಕರು ಹೆಚ್ಚು ಹೆಚ್ಚಾಗಿ ಪರಿಸರ ರಕ್ಷಣೆಯಲ್ಲಿ ತೊಡಗಬೇಕು.

-ಮಂಜುನಾಥ ಗದಗಿನ

Saturday, 10 March 2018

ಕುರಿ ಕಾಯೋ ಹುಡ್ಗ ಈಗ ಪಿಎಸ್ಐ!


ಮಂಜುನಾಥ ಗದಗಿನ
ಇದು ಕುರಿ ಕಾಯೋ ಹುಡಗನೊಬ್ಬ ತನ್ನ ಛಲದಿಂದ ಪಿಎಸ್ಐ ಆದ ಛಲದ ಕಥೆ. ಸಾಧನೆಗೆ ಬಡತನ ಅಡ್ಡಿಯಾಗದು. ಸಾಧಿಸಬೇಕು, ಗುರಿಮುಟ್ಟಬೇಕು ಎಂಬ ಛಲವಿದ್ದರೆ ಸಾಕು ಎಂತಹ ಬಡತನಕ್ಕೂ ಸೆಡ್ಡು ಹೊಡೆದು ಮುನ್ನಗ್ಗಬಹುದು ಎಂಬುದಕ್ಕೆ ಈ ಮಾದರಿಯಾಗಿದ್ದಾನೆ. ನನಗಾಗದು ಎಂದು ಕೈಕಟ್ಟಿ ಕುಳಿತ ಅದೇಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾನೆ. ಇದೀಗ ಪಿಎಸ್ಐ ಪರೀಕ್ಷೆ ಇದೆ ಪಾಸ್ ಆಗಿ ಎಲ್ಲರಿಗೂ ಸ್ಫೂರ್ತಿ ಆಗಿದ್ದಾನೆ. ಪಿಸ್ತ ಇನ್ ಸರ್ವಿಸನಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್, ಒಟ್ಟಾರೆ ರಾಜ್ಯಕ್ಕೆ 76ನೇ ರ್ಯಾಂಕ್ ಇದೆ.  ಎಲ್ಲರಿಗೂ ಸ್ಫೂರ್ತಿ.

ಆತನದ್ದು ತೀರಾ ಬಡ ಕುಟುಂಬ. ಇದ್ದದ್ದರಲ್ಲಿ ಎಲ್ಲವನ್ನು ಕಾಣುವ ಸರಳ ಕುಟುಂಬ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತಿಗೆ ಕಟಿಬದ್ಧರಾಗಿ ನಡೆಯುತ್ತಿದ್ದ. ಯಾವತ್ತು ತನ್ನ ಎಲ್ಲೆಯನ್ನು ಮೀರಿ ದಾಟಿ ಮತ್ತೊಬ್ಬರಿಗೆ ನೋವು ಕೊಟ್ಟವನಲ್ಲ. ಇದ್ದ ಬಡತನದಲ್ಲೇ ತಾನು ಕೂಲಿನಾಲಿ ಮಾಡಿಕೊಂತ. ತಾನು ಓದುತ್ತಾ, ತಮ್ಮ, ತಂಗಿಯರನ್ನು ಓದುತ್ತಾ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾನೆ.
ಶಾಲೆಯಲಿ ಇತ ನಂ ಒನ್. ಹೀಗಾಗಿ ಈತ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದ. ಪ್ರತಿದಿನ ಶಾಲೆಗೆ ಬರುತ್ತಿದ್ದ. ಎಲ್ಲರಂತೆ ಕಲಿಯುತ್ತಿದ್ದ. ಆದರೆ, ಶಾಲೆ ಬಿಟ್ಟ ಮೇಲೆ ಅಜ್ಜನ ಆಸ್ತಿಯಾಗಿದ್ದ ಕುರಿಗಳನ್ನು ಹೊಡೆದುಕೊಂಡು ಅದೇಲೋ ದೂರದ ಗುಡ್ಡಕ್ಕೆ ಹೋಗಿ ಮೆಯಿಸಿಕೊಂಡು ಬರುತ್ತಿದ್ದ. ಇದರೊಟ್ಟಿಗೆ ಕೈಯಲ್ಲೊಂದು ಪುಸ್ತಕ ಹೊತ್ತುಕೊಂಡು ಕಲಿಯುತ್ತಿದ್ದ. ಆ ಕಡೆ ಕುರಿಗಳು ತಮ್ಮ ಪಾಡಿಗೆ ತಾವುಗಳು ಮೆಯ್ಯುತ್ತಿರುತ್ತೇವೆ. ಓದಿನಲ್ಲಿ ಮಗ್ನನಾಗಿ ಬಿಡುತ್ತಿದ್ದ. ಹೀಗಾಗಿ ಈತ ಆಟ, ಪಾಠದಲ್ಲಿ ಮುಂದಿದ್ದ. ಪ್ರತಿದಿನ ಆಡು ಕಾಯುವುದೇ ಈತನ ಕಾಯಕವಾಗಿತ್ತು. ಬಿಡುವಿನ ಸಮಯದಲ್ಲಿ ಗೆಳೆಯರೊಟ್ಟಿಗೆ ನಗುವಿನ ಹರಟೆ.
ಇಷ್ಟೇ ಶಾಲೆಯ ರಜೆಗಳಲ್ಲಿ ಈತ ತನ್ನ ಶಾಲೆಯ ಖರ್ಚು ಸರಿದೂಗಿಸಲು ಮದುವೆ ಪೆಂಡಾಲ್‌ಗಳನ್ನು ಹಾಕಲು ಹೋಗುತ್ತಿದ್ದ. ಈ ಸಮಯದಲ್ಲಿ ಗಳಿಸಿದ ಹಣವೇ ಆತನ ಶಿಕ್ಷಣಕ್ಕೆ ಆಧಾರವಾಗಿತ್ತು. ಹಾಗೋ ಹೀಗೋ ಆಡು ಕಾಯುತ್ತಾ, ಮದುವೆ ಪೆಂಡಾಲ್ ಹಾಕುತ್ತ, ಪಿಯುಸಿ ಮುಗಿಸಿದ. ನಂತರ ಬಿಕಾಂ ಅಲ್ಲಿಯೂ ಇದೆ ಸ್ಥಿತಿ. ಕಾಲೇಜಿಗೆ ಹೋಗಿದ್ದಕ್ಕಿಂತ ಕುರಿ ಕಾಯುವುದು, ಪೆಂಡಾಲ್ ಹಾಕುವುದು. ಆದರೆ, ಇದೆ ಸಮಯಕ್ಕೆ ಏನಾದರೂ ಸಾಧಿಸಬೇಕು ಎಂಬ ಛಲ ಆತನಲ್ಲಿ ಮೂಡಿತು. ಇದೇ ಕಾರಣಕ್ಕೆ ಕುದಿಯುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶುರು ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಇರುವಾಗಲೇ, ಡಿಗ್ರಿ ಕೂಡ ಮುಗಿತು.
ಇನ್ನೇನು ಮನೆಯಲ್ಲಿ ಇದ್ದ ಒಂದು ಕೋಣೆಯಲ್ಲಿಯೇ ತನ್ನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳತೊಡಗಿದ. ಇದಕ್ಕೆ ಒಂದು ಟೈಂ ಟೇಬಲ್ ತಯಾರಿಸಿ ಓದಿದೆ. ಇದರೊಟ್ಟಿಗೆ ಕುರಿ ಕಾಯುವ ಕೆಲಸ ಬೇರೆ. ಈತನ ಈ ಪರಿಶ್ರಮಕ್ಕೆ ಒಂದೆ ಸಲ್ಲಕ್ಕೆ ಎರಡು ಸರ್ಕಾರಿ ನೌಕರರು ಅರಸಿ ಬಂದವು. ಕೆಎಸ್‌ಐಎಸ್‌ಎಫ್ ಹಾಗೂ ಕೆಎಸ್‌ಆರ್‌ಪಿ. ಇದರಲ್ಲಿ ಸೇರಿದ್ದು ಕೆಎಸ್‌ಆರ್‌ಪಿ. ನೌಕ್ರಿ ಹಿಡಿದು ಬೆಂಗಳೂರು. ಈತನ ಛಲ ಇಷ್ಟಕ್ಕೇ ನಿಲ್ಲಲಿಲ್ಲ. ಅಲ್ಲಿದ್ದು ಮತ್ತೇ ಓದಿದ ಇದರ ಪರಿಣಾಮವಾಗಿ ಇಲಾಖೆಯಲ್ಲಿ ಪರೀಕ್ಷೆಯಲ್ಲಿ ಪಾಸಾದ. ಆದರೆ, ಅನಿವಾರ್ಯ ಕಾರಣಗಳಿಂದ ಈ ಹುದ್ದೆಗೆ ಸೇರಲಾಗುವುದಿಲ್ಲ. ಹೀಗೆ ಎಸ್ಡಿಎ ಪರೀಕ್ಷೆ ಬರೆದ ಅಲ್ಲಿಯೂ ಯಶ ಕಂಡ. ಆದರೆ, ನ್ಯಾಯಾಲಯದಲ್ಲಿ ಕ್ರಿ.ಶ. ಮತ್ತೇ ಸಿವಿಲ್ ಕಾನ್ಸಸ್ಟೇಬಲ್ ಪರೀಕ್ಷೆ ಬರೆದಿದ್ದಾರೆ. ಇದರಲ್ಲೂ ಯಶಸ್ಸು ಸಾಧಿಸಿದ. ಸದ್ಯ ಕುಂದಾನಗರಿಯಲ್ಲಿ ಆರಕ್ಷಕ ಹುದ್ದೆಯಲ್ಲಿ ಜನರ ರಕ್ಷಣೆ ಮಾಡುತ್ತಿದ್ದಾರೆ. ಹೌದು! ಅವನೆ ಕಟಕೋಳ ಗ್ರಾಮದ ಕರೆಪ್ಪ ಕುರುವಿನಕೊಪ್ಪ. ಇತನ ಛಲ ಹಾಗೂ ಸಾಧಿಸಬೇಕೆಂಬ ಒಂದೇ ಒಂದು ದೃಢತೆ ಇತನ ಸಾಧನೆಗೆ ಕಾವಲು. ಇತನ ಸಾಧನೆ ಇಷ್ಟಕ್ಕೆ ಮುಗಿದಿಲ್ಲ. ಈ ಪಿಎಸ್‌ಐ ಆಗಬೇಕು ಹಿರಿಯಾಸೆ, ಅಚಲ ಗುರಿಯೊಂದಿಗೆ ನಿರಂತರ ಓದಿನಲ್ಲಿ ಮಗ್ನನಾಗಿದ್ದಾನೆ. ಇಂದು ನಾಳೆ ಇದರಲ್ಲೂ ಯಶ ಸಾಧಿಸುತ್ತಾನೆ ಎಂಬ ನಂಬಿಕೆಯೇ ಆತನದ್ದು. ಏನೇ ಆಗಲಿ ನನ್ನಿಂದ ಆಗದು ಎಂಬ ಯುವಕರಿಗೆ ಈ ಸ್ಪೂರ್ತಿ. ಇದೇ ಕಾರಣಕ್ಕೆ ಐದು ನೌಕ್ರಿ ಪಡೆದು, ಮತ್ತಷ್ಟು ಉನ್ನತ ಹುದ್ದೆಗೇರಬೇಕೆಂದು ಮುನ್ನುಗ್ಗುತ್ತಿದ್ದಾನೆ. ಇತನ ಎಲ್ಲ ಕನಸುಗಳು, ನೂರಾಸೆ ಕನಸುಗಳು. ಮತ್ತಷ್ಟು ಮಗದಷ್ಟು ಜನಕ್ಕೆ ಇದು ಮಾದರಿಯಾಗಲಿ ಎಂಬ ಎಲ್ಲರ ಆಶಯ.
-
ಮಂಜುನಾಥ ಗದಗಿನ

Saturday, 3 March 2018

ರಂಗೇರಿದ ರಂಗಿನ ನೆನಪು..


ಪ್ರಕೃತಿ ಸಂಪೂರ್ಣ ಸೊರಗಿರುತ್ತದೆ, ಉದುರಿದ ಎಲೆಗಳು, ಬಾಡಿದ ಬಳ್ಳಿಗಳು, ಬೆತ್ತಲಾಗಿ ನಿಂತ ಮರಗಳು ಮತ್ತೆ ಮರು ಜೀವ ಪಡೆಯಲು ಕಾತರಿಸುತ್ತಿರುತ್ತವೆ. ಇಂತಹ ಸಮಯದಲ್ಲೆ ಬಣ್ಣಗುಂದಿದ ನಮ್ಮ ಬದುಕಿನಲ್ಲಿ ಬಣ್ಣ ತುಂಬಲು ರಂಗನ್ನು ಹೋದ್ದು, ಬಂದೇ ಬೀಡುತ್ತದೆ, ರಂಗಿನ ಹಬ್ಬ ಹೋಳಿ. ಇಂತಹ ರಂಗಿನ ನೆನಪುಗಳು ರಂಗಾಗಿ ರಂಗೇರಿ ಗರಿ ಬಿಚ್ಚಿ ನಲಿದಾಡುತ್ತಿವೆ.
ಮಹಾ ಶಿವರಾತ್ರಿ ಮುಗಿದ ಕೂಡಲೇ, ನಮ್ಮ ರಂಗಿನಾಟಗಳು ಶುರುವಾಗುತ್ತಿದ್ದವು. ಅಟ್ಟದ ಮೇಲೆ ಬೆಚ್ಚಗೆ ಮಲಗಿದ್ದ ಹಲಗೆಗಳು ಈ ವೇಳೆ ಧೂಳಗೊಡವಿ ಮೇಲೆಲುತ್ತಿದ್ದವು. ಓಣಿ ತುಂಡಹೈಕ್ಳುಗಳು ಒಂದು ಕಡೆ ಹಲಗೆ ಬಾರಿಸುತ್ತಿದ್ದರೆ, ಹೋಗೋ,ಬರೋರು ಹಾ..ಹಾ..ಶುರುವಾಯಿತ್ತಪ್ಪ ಈ ಕಪ್ಪಿಯಾಟಗಳು ಎಂದು ಗೋಣಗುತ್ತಾ ಹೋಗುತ್ತಿದ್ದರು. ಮತ್ತೊಂದಿಷ್ಟು ಜನರು ಅಯ್ಯೋ..!ಪಾಪಾ ಕಣ್ರಿ ಮಕ್ಳಾದ್ರು ಯಾವಾಗ ಹಲಗೆ ಬಾರಿಸ್ಬೇಕು ಎಂದು ಕನಿಕರ ಪಟ್ಟುಕೊಳ್ಳುತ್ತಿದ್ದರು.
ಹೀಗೆ ಶುರುವಾದ ನಮ್ಮ ಹೋಳಿಯ ಸಂಭ್ರಮ, ದಿನದಿಂದ ದಿನಕ್ಕೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡು ರಂಗೆರುತ್ತಿತ್ತು. ಕೆಲವೊಂದಿಷ್ಟು ಸಾರಿ ನಮ್ಮ ಹಲಗೆಯ ಸದ್ದಿಗೆ ಓಣಿಯ ಹಿರಿಯರು ಮಂಗಳಾರತಿ ಮಾಡುತ್ತಿದ್ದರು. ಈ ಹೋಳಿ ಹುಣ್ಣಿಮೆಯ ಹೈಲೈಟ್ಸ್‌ಗಳಾದ ತಮಟೆ ಪಡೆಯುವುದು, ಬಣ್ಣದಲ್ಲಿ ಮಿಂದೆಳುವು ಇದರೊಟ್ಟಿಗೆ ಹೊಯ್ಕೋಳೋದು. ಹೌದು! ಹೋಳಿ ಶುರುವಾದ್ರೆ ಹೊಯ್ಕೋಂಡವರ ಬಾಯಿಗೆ ಹೋಳಿಗೆ ಎನ್ನುತ್ತಾ, ಸಾಮೂಹಿಕವಾಗಿ ನಾಲ್ಕು ಮಂದಿಗೆ ಕಿರಿಕಿರಿಯಾಗುವ ಹಾಗೆ ಹೊಯ್ಕೋಳ್ತಾಯಿದ್ವಿ.
ಮಹಾಶಿವರಾತ್ರಿ ಮುಗಿತಾ, ಇದ್ದಂತೆ ನಮ್ಮ ಓಣಿಯ ಮಾಸ್ಟರ ಮೈಂಡಗಳು ಕಾರ್ಯಪ್ರವೃತ್ತವಾಗುತ್ತಿದ್ದವು. ಓಣಿಯಲ್ಲಿ ಯಾವ ರೀತಿಯಾಗಿ ಕಟ್ಟಿಯನ್ನು ಕಳ್ಳತನ ಮಾಡ್ಬೇಕು, ಯಾರು ಮಾಡಬೇಕು, ಹೇಗೆ ಮಾಡ್ಬೇಕೆಂಬ ಗುಸು-ಗುಸು,ಪಿಸು,ಪಿಸು ಮಾತುಗಳ ಭರಾಟೆ ಜೋರಾಗಿ ನಡೆಯುತ್ತಿದ್ದವು. ನಮ್ಮ ಮಾಸ್ಟರ ಪ್ಲಾನಗಳಿಗೆ ಸಂಧಿ,ಗೊಂದಿಯಲ್ಲಿ ಬಚ್ಚಿಟ ಕಟ್ಟಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಕಾಮಣ್ಣನ ಬೀದಿ ಸೇರುತ್ತಿದ್ದವು. ಅವತ್ತೊಂದು ದಿನ ನಮ್ಮ ಓಣಿಯ ಹುಡುಗರೆಲ್ಲ ಸೇರಿ ರಾತ್ರಿ ವೇಳೆಯಲ್ಲಿ ಕಟ್ಟಿಗೆ ಕಳ್ಳತನ ಮಾಡಲು ಹೋದಾಗ, ಸಿಕ್ಕಿ ಹಾಕಿಕೊಂಡು, ಹೊಡೆತ ತಿಂದಿದ್ವಿ, ನಮ್ಮ ಓಣಿಯಲ್ಲಿ ನಾವೆಲ್ಲರೂ ಕಟ್ಟಿಗೆ ಕಳ್ಳರೆಂದೆ ರಾತ್ರೋ ರಾತ್ರಿ ಪ್ರಸಿದ್ದಿ ಪಡೆದುಕೊಂಡಿದ್ದೆವು.
ಬೀದಿ ಕಾಮಣ್ಣನನ್ನು ಸುಡುವುದಕ್ಕೂ ಮುನ್ನಾದಿನ, ನಮ್ಮ ಕಡೆ ಮನೆ ಕಾಮಣ್ಣನನ್ನು ಸುಡುವುದು ವಾಡಿಕೆ ಇದೆ. ಈ ಸಮಯದಲ್ಲಿ ಓಣಿಯ ಹುಡುಗರೆಲ್ಲ ತಮ್ಮ ಹಲಗೆಯನ್ನು ತಂದು ಬಾರಿಸುತ್ತಿದ್ದರು. ಈ ಸಮಯದಲ್ಲಿ ಗೊಬ್ಬರಿ ಚೂರೊಂದನ್ನು ಕಾಮಣ್ಣನಿಗೆ ಹಾಕಲಾಗುತ್ತದೆ. ಈ ಗೊಬ್ಬರಿ ಚೂರಿಗಾಗಿ ನಮ್ಮ ಹುಡುಗರು ಜಿದ್ದಿಗೆ ಬಿದ್ದು ಅದನ್ನು ಪಡೆದುಕೊಳ್ಳುತ್ತಿದ್ದರು. ಯಾರಿಗೆ ಆ ಗೊಬ್ಬರಿ ಸಿಗುತ್ತದೆಯೋ..ಅವರು ಗೊಬ್ಬರಿಯ ಕರಿ ಮಸಿಯಿಂದ ಇತರೆ ಹುಡುಗರಿಗೆ ಮೀಸೆ ಕೊರೆಯುತ್ತಿದ್ದರು. ಹೀಗೆ ಮಾಡುವುದರಿಂದ ಬೇಗ ಮೀಸೆ ಚಿಗುರತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.
ಕಾಮಣ್ಣನ ದಹನದ ದಿನ  ಅಪ್ಪ, ನೀರ ಬಣ್ಣ ಮಾಡಿ ಕೊಡುತ್ತಿದ್ದ. ನಾ ಅದನ್ನು ತುಂಬಿಕೊಂಡು ಹೋಗೋ,ಬರೋರಗೆ ಮಾರುದ್ಧ ದೂರದಿಂದಲೇ ಪಿಚಕಾರಿಯಿಂದ ಹೊಡೆಯುತ್ತಿದೆ. ಈ ಸಂದರ್ಭದಲ್ಲಿ ಯಾರಾದ್ರು ನನಗೆ ಬಣ್ಣ ಹಚ್ಚಲು ಬಂದ್ರೆ, ನಮ್ಮಪ್ಪ ಅವರನ್ನು ಗದರಿಸಿ ಕಳುಹಿಸುತ್ತಿದ್ದ. ರಂಗಿನಾಟ ಮುಗಿದ ಮೇಲೆ ಅವ್ವ ಮೂರು ಗುಂಡೆ ನೀರು ಕಾಯಿಸಿ, ಬಣ್ಣ ಹೋಗೋವರೆಗೂ ಸ್ನಾನ ಮಾಡಿಸುತ್ತಿದ್ಳು. ನಂತರ ಬಿಸಿ ಬಿಸಿ ಹೋಳಿಗೆ ಮಾಡಿ ತಿನ್ನಿಸುತ್ತಿದ್ದಳು.
ಈ ರೀತಿಯಾಗಿ ಬಾಲದ್ಯ ರಂಗಿನಾಟ ಬಲು ಮೋಜಿನಿಂದ ಕೂಡಿತ್ತು.

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...