Thursday, 29 March 2018

ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳು..!


 ಮಂಜುನಾಥ ಗದಗಿನ


ಎದೆಯಾಳದಲ್ಲಿ ಇಳಿದ ನೆನಪುಗಳೇ ಹಾಗೆ, ಬೇಡವೆಂದರೂ, ಕೆದಕಿ, ಕೆಣಕಿ, ಕಾಡುತ್ತವೆ, ಕೆರಳಿಸುತ್ತವೆ. ಧೋ..ಎಂದು ನೆನಪಿನ ಮಳೆಯನ್ನೆ ಸುರಿಸಿ, ಕಣ್ಣಂಚನ್ನು ಒದ್ದೆಯಾಗಿಸುತ್ತವೆ. ಅಂತಹ ನೆನಪೊಂದು ಸದ್ದಿಲ್ಲದೇ ಎದೆಯಾಳದಲ್ಲಿ ಸರಿದಾಡುತ್ತಿದೆ, ನೆನಪುಗಳೊಂದಿಗೆ ಸರಸವಾಡುತ್ತಾ, ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳನ್ನು ಎಳೆಎಳೆದು ಹೊಸ ಮನ್ಮಂತರವನ್ನು ಸೃಷ್ಠಿಸುತ್ತಿದೆ.
ನಾನು ನನ್ನ ಕೆಲಸ ಎಂದು ನನ್ನದೆ ಲೋಕದಲ್ಲಿ ಹೊರ ಜಗತ್ತಿನ ಗಂಧ ಗಾಳಿಯು ಗೊತ್ತಿಲ್ಲದೆ ಇದ್ದ ಹಳ್ಳಿ ಹೈದನಾಗಿದ್ದೆ. ನನಗಾಗ ಧಾರವಾಡ  ಹೊಸ ಪ್ರಪಂಚ. ನಮ್ಮ ಊರಿನಿಂದ ಅಲ್ಲಿಗೆ ಕಲಿಯಲು ಹೋದವರು, ಆವಾಗ ಆವಾಗ ಊರಿಗೆ ಬಂದು ಧಾರವಾಡ ಎಂಬ ಹೊರ ಜಗತ್ತಿನ ಬಗ್ಗೆ ರೋಚಕ ಹಾಗೂ ಸ್ವಾರಸ್ಯಕರ ವಿಷಯಗಳನ್ನು ಹೇಳುತ್ತಿದ್ದರು. ಆಗ್ಲೆ ನನ್ಗೆ ಗೊತ್ತಾಗಿದ್ದು, ಧಾರವಾಡ ಎಂಬ ಸುಂದರ ನಗರಿಯ ತುಸು ಮಾಹಿತಿ. ವಿದ್ಯಾಕಾಶಿ, ನಿವೃತ್ತರ ಸ್ವರ್ಗ, ಕವಿಗಳ ನಾಡು ಎಂಬಿತ್ಯಾದಿ ಹೆಸರುಗಳನ್ನು ಕೇಳುತ್ತಿದ್ದೆ. ಇದೇ ಕಾರಣಕ್ಕೆ ಧಾರವಾಡ ಎಂದರೆ, ಅದೇನೋ ಮೈ-ಮನ ಫುಳಕಿತ್ತವಾಗುತ್ತಿದ್ದವು, ಅದನ್ನು ನೋಡಬೇಕು ಎಂಬ ಆಸೆ  ಹೆಮ್ಮರವಾಗಿ ಬೆಳೆದಿತ್ತು.
   ಇದೇ ಸಮಯಕ್ಕೆ ಪಿಯುಸಿ ಮುಗಿಯಿತು. ರೋಗಿ ಬಯಸಿದ್ದು, ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ನನ್ನ ಕನಸಿನ ಧಾರಾವಾಡದಲ್ಲಿ ಉನ್ನತ ಶಿಕ್ಷಣ ಕಲಿಯಲು ಅವಕಾಶ ದೊರೆಯಿತು. ಹೊಸ ಕನಸು, ಹೊಸ ಭರವಸೆ, ಹೊಸ ಉತ್ಸಾಹ, ಹೊಸ ಛಲಗಳೊಂದಿಗೆ ಧಾರವಾಡ ಎಂಬ ಮೋಹಕ ನಗರಿಗೆ ಪುಟ್ಟ ಮಗುವಾಗಿ ಅಂಬೆಗಾಲಿಟ್ಟೆ. ದಿಟ್ಟ ಹಜ್ಜೆಗಳ ಅಡಿಯಲ್ಲಿ ಧಾರವಾಡವನ್ನು ಅಚ್ಚರಿಯ ಕಣ್ಗಳಲ್ಲಿ ಆಶ್ವಾಧಿಸಲು ಪ್ರಾರಂಭಿಸಿದೆ. ಇಷ್ಟು ಬೇಗ ಧಾರವಾಡ ನನ್ನನ್ನು ತನ್ನೊಡಲಿನ ಮಗುವಾಗಿ ಸ್ವೀಕರಿಸುತ್ತದೆ ಎಂಬ ಕಲ್ಪನೆ ಕೂಡಾ ನನಗೆ ಇರಲಿಲ್ಲ. ಆವಾಗ್ಲೆ ಗೊತ್ತಾಗಿದ್ದು ಧಾರವಾಡಕ್ಕೆ ಎಲ್ಲವನ್ನೂ, ಎಲ್ಲರನ್ನೂ ಒಗ್ಗಿಸಿ, ತಗ್ಗಿಸುವ ತಾಕತ್ತಿದೆ ಎಂದು.
ಧಾರವಾಡದ ಮಳೆ, ಆ ಹಚ್ಚ ಹಸಿರು, ಎಳೆ ಬಿಸಿಲು, ಖಡಕ್ ರೊಟ್ಟಿ, ಜುಬ್ಲಿ ಸರ್ಕಲ್, ಬೇಂದ್ರೆ ಅಜ್ಜನ ಸಾಧನಕೇರಿ, ಶಾಲ್ಮಲೆಯ ಒಡಲು, ಶ್ರೀನಗರ ಸರ್ಕಲ್, ರೈಲ್ವೆ ಟ್ರ್ಯಾಕ್ ಮೇಲೆ ತೆಗೆಸಿದ ಸೆಲ್ಪಿ, ಒಂದೇ ಎರಡೆ ಧಾರಾನಗರಿಯ ನೆನಪುಗಳು, ಬಿಚ್ಚಿಟ್ಟು ಹಂಚಿಕೊಳ್ಳಲಾಗದಷ್ಟು ಎದೆಯಾಳದಲ್ಲಿ ಆಳವಾದ ಕಂದಕವನ್ನು ಸೃಷ್ಠಿಸಿವೆ. 
ನಾವು ಯಾವುದೇ ಒಂದು ಸ್ಥಳದಲ್ಲಿ ಇದ್ದಾಗ, ಆ ಸ್ಥಳದ ಮಹಿಮೆ ಗೊತ್ತಾಗುವುದಿಲ್ಲ. ಇದ್ದಾಗ ’ಅಲ್ಲೆನ ಐತಿ ಬಿಡ್’ ಎಂಬ ಉದಾಸೀನ ಮನೋಭಾವನೆಯಿಂದ ಎಲ್ಲವನ್ನು ಅಲಗಳೆಯುತ್ತೆವೆ. ನಾವು ಆ ವಸ್ತು ಅಥವಾ ಸ್ಥಳ ನಮ್ಮನ್ನು ಬಿಟ್ಟು ದೂರ ಹೋದಾಗಲೇ, ಅದರ ನೈಜ ಮಹತ್ವ ಅರಿವಾಗುವುದು. ಇದು ನನ್ನನೊಬ್ಬನ ಮಾನಸಿಕ ಸ್ಥಿತಿ ಅಲ್ಲ. ಇದು ಪ್ರತಿಯೊಬ್ಬ ಮನುಷ್ಯನ ನೈಜ ಸ್ಥಿತಿಯಾಗಿದೆ. ಈಗ ಆಗಿರುವುದು ಅದೇ, ಧಾರವಾಡದಲ್ಲಿ ಇದ್ದಾಗ ಎಲ್ಲವನ್ನು ಉದಾಸಿನ ಮಾಡುತ್ತಾ, ಬರೀ ವಿನಾಃಕಾರಣ ಕಾಲಹರಣ ಮಾಡಿ ವಿದ್ಯಾರ್ಥಿ ಜೀವನ ಮುಗಿಸಿದೆ.
ಇದ್ದ ಅಷ್ಟು ದಿನಗಳು ಧಾರವಾಡ, ಸುಂದರ ಅನುಭವಗಳನ್ನು, ಬದುಕಿನ ಪಾಠವನ್ನು, ಸಮಾಜ ಎದುರಿಸುವ ರೀತಿಗಳನ್ನು ಕಲಿಸಿಕೊಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಗೆಳೆಯಂತೆ, ನಿಂತು ನನ್ನ ತಪ್ಪು-ಒಪ್ಪುಗಳಿಗೆ ಸಲಹೆ ಸೂಚನೆ ನೀಡುತ್ತಾ. ನನ್ನನ್ನು ತಿದ್ದಿ, ತಿಡಿ ಪೋಷಿಸಿದೆ. ಅವ್ವನಂತೆ ಸಾಕಿದೆ, ಅಪ್ಪನಂತೆ ಬೇಕು ಬೇಡಗಳನ್ನು ಆಲಿಸಿ, ಸರಿದಾರಿಯಲ್ಲಿ ಸಾಗುವಂತೆ ಎಚ್ಚರಿಕೆ ನೀಡಿದೆ. ಏನೆಂದು, ಹೇಳಲ್ಲಿ ನನ್ನ ಧಾರಾನಗರಿಯ ಬಗ್ಗೆ. ಏಷ್ಟು ಹೇಳಿದರೂ, ಅದೊಂದು ಮುಗಿಯದ ಕಥೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ, ಊರು ಬಿಟ್ಟು ಬಂದಾಗ ನನ್ನನ್ನು ಸಾಕಿ ಸಲುಹಿದ್ದು ಇದೇ ನನ್ನ ಧಾರವಾಡ. 
      ಜೀವನದಲ್ಲಿ ಎಡವದಂತೆ ಎಚ್ಚರಿಸಿದ ಆ ಕಿತ್ತೋದ ರಸ್ತೆಗಳು, ಸದಾ ಹಸಿರು ಹೊದ್ದು ಮಲಗಿ, ಮನಕ್ಕೆ ತಂಪು ನೀಡುತ್ತಿದ್ದ ಕ್ಯಾಂಪಸ್‌ನ ಸಸ್ಯಶಾಲ್ಮಲೆ, ಮೈ-ಕೈಗೆ ಚಳಿ ಬೀಡಿಸಿದ ಆ ಪತ್ರಿಕೋದ್ಯಮದ ದಾರಿ, ಉತ್ಸಾಹ ಮತ್ತು ಪ್ರೋತ್ಸಾಹ ತುಂಬಿದ ಗೆಳೆಯರು, ವೃತ್ತಿ ಬದುಕಿನ ಪಾಠ ಕಲಿಸಿದ ಗುರುಗಳು, ಎಲ್ಲವೂ ಧಾರಾನಗರಿ ಕಟ್ಟಿಕೊಟ್ಟ ಬದುಕಿನ ಅವಿಸ್ಮರಣಿಯ ಕ್ಷಣಗಳು. ಮೊನ್ನೆ ಜಿಟಿ ಮಳೆಗೆ ಹುಡಿಯದ್ದ ಆ ಮಣ್ಣಿನ ಸುವಾಸನೆಯಲ್ಲಿ ಧಾರವಾಡದ ನೆನಪು ಕೂಡಾ ತೇಲಿ ಬಂತು. ಅದು ನನ್ನವಳ ನೆನಪಿನ ಹಾಗೆ. 




5 comments:

  1. Dharwad Malena Belgaum hudgina nambokagalla

    ReplyDelete
  2. ನಿಮ್ಮ ಬರವಣಿಗೆ ಚೆನ್ನಾಗಿದೆ

    ReplyDelete
  3. ನಿಮ್ಮ ಬರವಣಿಗೆ ಚೆನ್ನಾಗಿದೆ

    ReplyDelete

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...