ಮಂಜುನಾಥ ಗದಗಿನ
ಅಂಗವೈಕಲ್ಯತೆ ಶಾಪವಲ್ಲ, ಅದು ವರ ಎಂಬ ಮಾತು ಈ ಮಕ್ಕಳಿಗೆ ಅನ್ವಯಿಸುತ್ತದೆ. ಸಾಧಿಸುವ ಆತ್ಮಸ್ಥೈರ್ಯವೊಂದಿದ್ದರೆ ಎಂಬತಹ ಕಷ್ಟಗಳು ತಲೆಬಾಗುತ್ತವೆ. ಈ ಮಾತಿಗೆ ನಿದರ್ಶನ ಎಂಬಂತೆ ಈ ಅಂಧ ಮಕ್ಕಳು ನಮ್ಮ ಕಣ್ಮುಂದೆ ಸಾಧಿಸಿ ನಿಂತಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ನಾವ್ಯಾರಿಗೂ ಕಮ್ಮಿ ಇಲ್ಲ ಎಂಬಂತಹ ಸಾಧನೆ ಮಾಡಿ ತೋರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ದೇಶದ ಪ್ರಥಮ ಶಾಲೆ:
ಅದು ೨೦೧೦ನೇ ಇಸ್ವಿ. ಈ ವರ್ಷದಲ್ಲೆ ದೇಶದ ಪ್ರಥಮ ಅಂಧ ಮಕ್ಕಳ ಯೋಗ ಶಾಲೆ ಆರಂಭವಾಯಿತು. ಸ್ಥಳೀಯ ಯಚ್ಚರೇಶ್ವರ ಮಠದ ಸ್ವಾಮೀಜಿ ಪ್ರೇರಣೆ ಹಾಗೂ ಬೆಂಗಳೂರಿನ ನೆಸ್ಟ್ ಸಂಸ್ಥೆಯ ನೆರವಿನಿಂದ ಕೆಲೂರ ಕುಟುಂಬದಿಂದ ಆರಂಭಗೊಂಡಿತು. ಈ ಶಾಲೆ ಆರಂಭಕ್ಕೆ ಯೋಗಪಟು ಶಿವಾನಂದ ಕೆಲೂರ, ಅವರ ತಾಯಿ ತುಳಸಮ್ಮ ಸೇವೆ ಸ್ಮರಣೀಯ. ಶಾಲೆ ಆರಂಭಿಸಿದಾಗ ೫ ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಈಗ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ೧೪ ಬೋಧಕ ಸಿಬ್ಬಂದಿ ಇದ್ದಾರೆ. ಎಲ್ಲ ಅಂಧ ಮಕ್ಕಳ ಶಾಲೆಯಲ್ಲಿರುವಂತೆಯೇ ಇಲ್ಲೂ ಮಕ್ಕಳಿಗೆ ಬ್ರೈಲ್ ಆಧಾರಿತ ಓದು-ಬರಹ, ಕಂಪ್ಯೂಟರ್ ತರಬೇತಿ, ಚಲನವಲನ ತರಬೇತಿ, ಕರಕುಶಲ, ಕ್ರೀಡೆ, ಸಂಗೀತ ಶಿಕ್ಷಣದ ಜೊತೆಗೆ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ೬ರಿಂದ ೧೮ ವರ್ಷ ವಯಸ್ಸಿನ ವಿಕಲಚೇನ ಮಕ್ಕಳು ಈ ಶಾಲೆಯಲ್ಲಿ ಇದ್ದಾರೆ. ೧ರಿಂದ ೯ನೇ ತರಗತಿಗಳು ಇಲ್ಲಿ ನಡೆಯುತ್ತಿವೆ. ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಶಾನುಭವದ ಮೂಲಕ ಯೋಗ ಹಾಗೂ ಮಲ್ಲಕಂಬ ತರಬೇತಿ ಕೊಡುತ್ತಿದ್ದಾರೆ.

೨೦೧೦, ೨೦೧೧ ಮತ್ತು ೨೦೧೨ರಲ್ಲಿ ನಿರಂತರವಾಗಿ ಮೂರು ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡ ಗರಿಮೆ ಈ ಮಕ್ಕಳದ್ದು, ೨೦೧೪ ಮತ್ತು ೨೦೧೫ರಲ್ಲಿ ಚಾಲುಕ್ಯ ಉತ್ಸವದಲ್ಲಿ, ೨೦೧೨ರಲ್ಲಿ ರನ್ನ ಉತ್ಸವದಲ್ಲಿ, ೨೦೧೬ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ೨೦೧೫ರಲ್ಲಿ ಮತ್ತು ೨೦೧೭ರಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಸಾಧಕ ವಿದ್ಯಾರ್ಥಿಗಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರಿಸಿದ್ದರು. ದೆಹಲಿಯಲ್ಲಿ ವಿಶ್ವ ಯೋಗ ದಿನ, ಯೋಗ ಸಪ್ತಾಹ ಮತ್ತು ಅಂತಾರಾಷ್ಟ್ರೀಯ ಯೋಗ ಹಬ್ಬದಲ್ಲಿ ಈ ಶಾಲೆ ಮಕ್ಕಳು ಪ್ರದರ್ಶನ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಹೊರ ನಾಡು ಕನ್ನಡಿಗರ ಸಮ್ಮೇಳನ, ಯೋಗ ಒಲಿಂಪಿಯಾಡ, ೨೦೧೭ರಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಉದಯ ವಾಹಿನಿಯ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ಶಾಲೆಯ ಮಕ್ಕಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿದ್ದಾರೆ. ೨೦೧೨ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲೆಯ ಮಕ್ಕಳು ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ೪೦ ದೇಶಗಳಿಂದ ಬಂದಿದ್ದ ಸಾಮಾನ್ಯ (ಕಣ್ಣು ಕಾಣುವ) ಸ್ಪರ್ಧಾಳುಗಳುಗಳ ಎದುರು ಜ್ಞಾನಸಿಂಧು ಶಾಲೆಯ ೮ ಅಂಧ ವಿದ್ಯಾರ್ಥಿಗಳು ಈ ಸಾಧನೆ ಮೆಚ್ಚುವಂತಹದ್ದು.

೨೦೧೦ರಲ್ಲಿ ವಿದ್ಯಾರ್ಥಿಗಳಾದ ಸರಸ್ವತಿ ಕಬಾಡರ, ಭೀಮಸಿ ಕಬಾಡರ, ಅಯ್ಯಪ್ಪ ಅಂತಕನವರಗೆ ಯೋಗ ಸಿರಿ’ ಪ್ರಶಸ್ತಿ ಲಭಿಸಿದೆ. ೨೦೧೧ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್ ರಾಷ್ಟ್ರೀಯ ಪ್ರಶಸ್ತಿ, ಬಾಗಲಕೋಟೆ ಹಬ್ಬ ಉತ್ಸವ ಸಮಿತಿಯಿಂದ ಕಲಾ ಭೂಷಣ ಪ್ರಶಸ್ತಿ ಹಾಗೂ ಬಸವರಾಜ ಹೊರಟ್ಟಿ ಅವರ ಅವ್ವ ಟ್ರಸ್ಟ್ ಪ್ರಶಸ್ತಿಗಳು ಸಂದಿವೆ. ೨೦೧೬ರಲ್ಲಿ ಶಾಲೆಯ ಸಂಚಾಲಕಿ ತುಳಸಮ್ಮ ಕೆಲೂರ ಅವರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೬ರಲ್ಲಿ ಕಲಬುರ್ಗಿಯ ದಿಗ್ಗಾಂವಿ ಸ್ಮರಣಾರ್ಥ ಟ್ರಸ್ಟ್‌ನ ₹೫ ಲಕ್ಷ ಮೊತ್ತದ ರಾಷ್ಟ್ರೀಯ ಕಾಯಕ ಸಿರಿ ಪ್ರಶಸ್ತಿ. ₹೫೦ ಸಾವಿರ ಮೊತ್ತದ ಕಾಯಕ ಯೋಗಿ ಪ್ರಶಸ್ತಿ ಶಾಲೆಯ ಸಂಚಾಲಕಿ ತುಳಸಮ್ಮ ಅವರಿಗೆ ಲಭಿಸಿದೆ. ವಿದ್ಯಾರ್ಥಿ ಮಣಿಕಂಠನಿಗೆ ೨೦೧೭ರ ಮಕ್ಕಳ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನ ನೀಡಿ, ಚಿಣ್ಣರ ಚಿನ್ನ ಪ್ರಶಸ್ತಿ, ೨೦೧೭ರ ಜುಲೈನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಮಣಿಕಂಠನಿಗೆ ಒಲಿದಿದೆ. ದೆಹಲಿಯಲ್ಲಿರುವ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ೨೦೧೮ರಲ್ಲಿ ಈ ಶಾಲೆಗೆ ಪ್ರಶಂಸಾ ಪತ್ರ ನೀಡಿದೆ. ಈಚೆಗೆ ಪುಟ್ಟಪತಿ ಶಿರಡಿ ಸಾಯಿ ಬಾಬಾ ಸಂಸ್ಥೆಯಿಂದ ಪ್ರಶಸ್ತಿ ಕೂಡಾ ದೊರೆತಿದೆ.
ಕರೆ ತರುತ್ತಾರೆ:
ಈ ಶಾಲೆ ವತಿಯಿಂದ ಹಳ್ಳಿ ಹಳ್ಳಿಗಳಿಗೆ ಹೋಗಿ ನಿಮ್ಮಲ್ಲಿ ಅಂಧ ಮಕ್ಕಳು ಇದ್ದರೆ ಅವರನ್ನು ನಮ್ಮ ಶಾಲೆಗೆ ಕರೆದುಕೊಂಡು ಬನ್ನಿ ನಾವು ವಿದ್ಯಾಭ್ಯಾಸ ಕೊಡುತ್ತೇವೆ ಎಂದು ಪ್ರಚಾರ ಮಾಡಿ ಮಕ್ಕಳನ್ನು ಕರೆತರುವ ಕೆಲಸವನ್ನು ಈ ಶಾಲೆಯ ಸಿಬ್ಬಂದಿ ಮಾಡುತ್ತಿದೆ. ಅಷ್ಟೇ ಅಲ್ಲದೇ ಜಾತ್ರೆ, ಮತ್ತೀತ್ತರ ಸಭೆ ಸಮಾರಂಭಗಳಲ್ಲೂ ಪ್ರಚಾರ ಮಾಡಿ ಅಂಧ ಮಕ್ಕಳನ್ನು ಕರೆ ತಂದು ಉಚಿತ ಶಿಕ್ಷಣ ನೀಡಿ ಸಾಧಕ ಮಕ್ಕಳನ್ನಾಗಿ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಅದೇಷ್ಟೋ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿ ಸೈ ಅನಿಕೊಂಡಿದ್ದಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುವುದು ವಿಶೇಷ.
ನಿಮ್ಮ ಕಾರ್ಯಕ್ರಮಗಳಿಗೆ ಸ್ಟಾರ್ ನಟರನ್ನು ಕರೆ ತರುವ ಬದಲು, ಈ ಮಕ್ಕಳನ್ನು ಕರೆಸಿ ಪ್ರದರ್ಶನ ನೀಡಿ, ಆ ಮಕ್ಕಳಿಗೆ ಆರ್ಥಿಕ ಸಹಾಯವೂ ಆಗುತ್ತದೆ. ಮಕ್ಕಳ ಕಲೆ ಪ್ರದರ್ಶನಕ್ಕೆ ಒಂದು ವೇದಿಕೆಯೂ ದೊರೆಯುತ್ತವೆ ಎಂಬ ಮಾತು ಜನ ಸಾಮಾನ್ಯರದ್ದು.