Monday, 27 June 2016

ನೋಡ ಬನ್ನಿ ಶಬರಿಕೊಳ್ಳ..

ಮಂಜುನಾಥ ಗದಗಿನ 

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀರಾಮನಿಗೊಸ್ಕರ ಶಬರಿ ಕಾಯ್ದಳು ಎಂದು ಎಲ್ಲರೂ ಗೊತ್ತಿದೆ. ಆದರೆ, ಅಲ್ಲಿ ಕಾಯ್ದಳು ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ, ಇತಿಹಾಸ ಪುಟಗಳನ್ನು ತೀರವಿ ಹಾಕಿದಾಗ ಶಬರಿ ಕಾಯ್ದದ್ದು ಸುರೇಬಾನ ಸಮೀಪದ ಶಬರಿಕೊಳ್ಳ ಎಂಬ ಸ್ಥಳದಲ್ಲಿ ಎಂಬುದು ತಿಳಿದು ಬರುತ್ತದೆ.
ಸುರೇಬಾನ ಗ್ರಾಮದ ಗ್ರಾಮದೇವತೆಯಾಗಿ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆ ಶ್ರೀ ಶಬರಿ ಪೂಜಿಸಲ್ಪಡುತ್ತಾಳೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ಶಬರಿದೇವಿ ನೆಲೆಸಿದ್ದಾಳೆ. ಈ ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಭವ್ಯವಾದ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯು
ತ್ತವೆ. 200 ಅಡಿಗಳ ಅಂತರದಿಂದ ಧುಮ್ಮಿಕ್ಕುವ ಅಂತರಗಂಗೆ ಎಂಬ ಕಿರು ಜಲಧಾರೆ ಇಲ್ಲಿ ಎಲ್ಲರನ್ನು ತನ್ನತ್ತ ಸೆಳೆದು ಮಂತ್ರ ಮುಗ್ದರನ್ನಾಗಿಸುತ್ತದೆ. ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳನ್ನು ಎಲ್ಲರನ್ನು ಅರೆ ಕ್ಷಣ ಚಕಿತಗೊಳಿಸುತ್ತವೆ.

ಜಕಣಾಚಾರಿ ಕೆತ್ತನೆ:

ಶಿಲ್ಪಿ ಜಕಣಾಚಾರಿ ಕೆತ್ತಿದ ಶಬರಿದೇವಿಯ ದೇಗುಲ ಇಲ್ಲಿದೆ. ವಿಶಾಕವಾದ ಮುಖ ಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿ ಮೂರ್ತಿಯು ಸುಮಾರು ಐದು ಅಡಿ ಎತ್ತರದ ಕಲ್ಲಿನ ಪ್ರಭಾವಳಿಗೆ ಹೊಂದಿಕೊಂಡ ಮೂರ್ತಿಯಾಗಿದೆ. ಒಮ್ಮೆ ದರ್ಶನ ಪಡೆದರೆ ಮತ್ತೆ ಮತ್ತೆ ದೇವಿಯ ದರ್ಶನ ಪಡೆದು ಪುನೀಯರಾಗಬೇಕೆಂಬ ಭಕ್ತಿ ಭಾವ ಹೊಮ್ಮುವಂತೆ ಮಾಡುವುದು ಇಲ್ಲಿನ ವೈಶಿಷ್ಟ. ದೇವಾಲಯದ ಎದುರಿಗೆ ದೀಪಮಾಲಿಕಾ ಕಂಭವಿದೆ. ಇಲ್ಲಿ ಪ್ರತಿ ವರ್ಷ ಕಾರ್ತಿಕೋತ್ಸವ ನಡೆಯುತ್ತದೆ.
ಶಬರಿಕೊಳ್ಳಕ್ಕೆ ಆಗಮನ:
ಶ್ರೀ ಶಬರಿಯು ಮಧ್ಯಪ್ರದೇಶದ ಶಭರ ಮಹಾರಾಜನ ಒಬ್ಬಳೇ ಮಗಳು. ಸುಂದರಿಯಾದ ಶ್ರೀ ಶಬರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಉದ್ದೇಶದಿಂದ ಸ್ವಯಂವರ ನಡೆಸಲು ಏರ್ಪಾಡು ಮಾಡುತ್ತಾನೆ. ಶಭರ ಮಹಾರಾಜನ ಅಪ್ಪಣೆಯಂತೆ ಅಷ್ಟ ದಿಕ್ಕುಗಳಿಂದ ಬೇಟೆಯಾಡಿ ಪ್ರಾಣಿಗಳ ತಲೆ ಕತ್ತರಿಸಿ ತಂದು ಸ್ವಯಂವರದ ಮಂಟಪಕ್ಕೆ ಶೃಂಗರಿಸಲು ತಿಳಿಸುವನು. ರಕ್ತ ಸಿಕ್ತ ಸ್ವಯಂವರ ಮಂಟಪವನ್ನು ಕಂಡು ದೀಗ್ಭ್ರಮೆಯಾಗಿ ತನ್ನ ಸ್ವಯಂವರದ ಸಲುವಾಗಿ ಪ್ರಾಣಿಗಳ ಜೀವ ತೆಗೆದಿದ್ದನ್ನು ನೋಡಲಾಗದೆ, ಜೀವನದಲ್ಲಿ ಹಿಂಸೆಗಿಂತ ಅಹಿಂಸಾಮಾರ್ಗ ಒಳ್ಳೆಯದು ಎಂದುಕೊಂಡು ಅದರಂತೆ ವೈರಾಗ್ಯತಳೆದು ಸುಖ-ಸಂಪತ್ತು, ಸೌಭಾಗ್ಯವನ್ನು ಬಿಟ್ಟು ಸಕಲ ರಾಜ ವೈಭವವನ್ನು ತೊರೆದು, ನಾರುಮಡಿಯನ್ನುಟ್ಟು ದೇಶ ಸಂಚಾರಿಯಾಗಿ ಶಬರಿಯು ಸುರೇಬಾನ ಗ್ರಾಮಕ್ಕೆ ಹೊಂದಿದ ಅರಣ್ಯದಲ್ಲಿ ನೆಲೆಸಿರುವುದು ಪುರಾಣದಲ್ಲಿ ಉಲ್ಲೇಖವಿದೆ. ರಾಮದುರ್ಗದಿಂದ 14 ಕಿ.ಮೀ ಮತ್ತು  ಸುರೇಬಾನದಿಂದ 3 ಕಿ.ಮೀ ಅಂತರದಲ್ಲಿದೆ ಈ ಶಬರಿ ನೆಲೆಸಿರುವ ಸ್ಥಳ.

ಈ ದೇವಾಲಯ ಕುರಿತು ಎರಡು ದೃಷ್ಟಾಂತಗಳು ಪ್ರಚಲಿತದಲ್ಲಿವೆ.

ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥ.
ಶ್ರೀರಾಮನ ಶ್ರೇಷ್ಠ ಭಕ್ತೆಯಾದ ಶ್ರೀ ಶಬರಿಯ ಭಕ್ತಿ ಅನನ್ಯವಾಗಿದೆ. ರಾಮ ಲಕ್ಷ್ಮಣನೊಂದಿಗೆ ವನವಾಸಕ್ಕೆ ಬರುವ ಮಾರ್ಗದಲ್ಲಿ ಶಬರಿ ರಾಮನಿಗಾಗಿ ತಾನು ಸಂಗ್ರಹಿಸಿದ ಬೋರೆ ಹಣ್ಣುಗಳನ್ನು ನೀಡಿದ ಕಥೆ ರಾಮಾಯಣದ್ದು. ಈ ಕಥೆಯಲ್ಲಿ ಬರುವ ಶಬರಿ ಇಲ್ಲಿಯೇ ವಾಸವಾಗಿದ್ದಳು.ಶ್ರೀರಾಮನ ಬರುವಿಗಾಗಿ ತಪಗೈದು ಶ್ರೀರಾಮನಿಗಾಗಿ ಬೋರೆ ಹಣ್ಣುಗಳನ್ನು ಆಯ್ದುತಂದು ಸಿಹಿನೋಡಿ ಸಿಹಿಯಾದ ಹಣ್ಣುಗಳನ್ನು ಬೇರ್ಪಡಿಸಿ ಇಡುತ್ತಿದ್ದಳು. ಶ್ರೀಮಾತೆಯ ತಪ್ಪಸ್ಸಿನ ಫಲವೋ ಏನೋ ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಬಂದನು. ಈ ಅಭಯಾರಣ್ಯದಲ್ಲಿ ನೆಲೆಸಿದ ಶ್ರೀ ಶಬರಿಮಾತೆಗೆ ದರ್ಶನವಿತ್ತು ಸಿಹಿ ಬೋರೆಹಣ್ಣುಗಳನ್ನು ಸೇವಿಸಿದರು. ಶ್ರೀರಾಮ ಆಕೆಯ ಭಕ್ತಿಯನ್ನು ಮೆಚ್ಚಿ ಏನು ವರ ಬೇಕು ಕೇಳು ನಿನಗೆ ಎಂದು ಕೇಳುತ್ತಾನೆ. ಆಕೆ ಶ್ರೀರಾಮನ ತೊಡೆಯ ಮೇಲೆ ಪ್ರಾಣ ಬಿಡಲು ಬಯಸುತ್ತಾಳೆ. ಪ್ರಾಣಪಕ್ಷಿ ಹಾರಿ ಹೋಗುವ ಸಂದರ್ಭದಲ್ಲಿ ರಾಮನ ತೊಡೆಯ ಮೇಲೆ ಮಲಗಿದ್ದಾಗ ರಾಮನು ಸುತ್ತಲೂ  ನೀರಿಗಾಗಿ ವೀಕ್ಷಿಸಿದನೆಂದೂ, ನೀರು ಕಂಡು ಬರದೇ ಇದ್ದಾಗ ಬಾಣ ಪ್ರಯೋಗಿಸಿ ತನ್ನ ಬಿಲ್ವಿದ್ಯೆಯ ಮೂಲಕ ನೀರು ತರಿಸಿದನೆಂಬ ಪ್ರತೀತಿ ಹೊಂದಿದ ಎರಡು ಹೊಂಡಗಳು ಸಾಕ್ಷಿಯಾಗಿ ಇಲ್ಲಿವೆ. ಆ ಹೊಂಡಗಳಲ್ಲಿ ಗಣಪತಿ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲಾ ಮತ್ತು ಪವಿತ್ರ ತೀರ್ಥವೆಂದು ಇಲ್ಲಿಗೆ ಬರುವ ಭಕ್ತಾಧಿಗಳು ಭಾವಿಸುತ್ತಾರೆ. ಶಬರಿ ನೆಲೆ ನಿಂತ ತಾಣವಾದ ಈ ಪವಿತ್ರ ಸ್ಥಳವೇ ಶ್ರೀ ಶಬರಿಕೊಳ್ಳವಾಗಿದೆ
ಶ್ರೀ ಶಬರಿ ಮಾತೆಯು ಶ್ರೀರಾಮನಿಗೆ ನನಗೆ ಮುಕ್ತಿ ದಯಪಾಲಿಸು ಅಂತ ಬೇಡಿಕೊಂಡಾಗ ಆಗ ಶ್ರೀರಾಮನು ಮಾತೆ ನಿನಗೆ ಮುಕ್ತಿ ಸಿಗಬೇಕಾದರೆ ನೀನು ’ಪಂದಳ ರಾಜ್ಯ’ದಲ್ಲಿನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪುನೀತಳಾಗು ಎಂದು ಅನುಗ್ರಹಿಸಿದ ಪವಿತ್ರ ಸ್ಥಾನವು ಇದಾಗಿದೆ. ಅಲ್ಲದೆ ದೇಶಾದ್ಯಂತ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ತುಳಸಿ ಮಾಲೆಯನ್ನು ಧರಿಸಿ ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆಯುದಕ್ಕಿಂತ ಮುನ್ನ  ಶ್ರೀ ಶಬರಿಯು ತಪಸ್ಸು ಮಾಡಿ ಮೋಕ್ಷ ಪಡೆದ ’ಶಬರಿ ಪೀಠಂ’ ಅಂತಾ ದೇವಸ್ಥಾನದಲ್ಲಿ ಮೊದಲು ಪೂಜೆಗೈದು ನಂತರ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ಮೊದಲಿನಿಂದಲೂ ನಡೆದು ಬಂದ ವಾಡಿಕೆಯಾಗಿದೆ.
ಇನ್ನೊಂದು ಕಥೆ ಸೊರೆವ್ವನದು. ಆಕೆ ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿದ್ದ ಋಷಿ ಮುನಿಗಳಿಗೆ ಉಪಟಳ ನೀಡುತ್ತಿದ್ದ ಸುರಭ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಅವಳ ಸ್ಮರಣೆಗಾಗಿ ದೇಗುಲ ನಿರ್ಮಾಣಗೊಂಡಿದೆ ಎನ್ನಲಾಗಿದೆ.
ಆದ್ದರಿಂದ ಈ ಊರನ್ನು ಮೊದಲಿಗೆ ಸೂರಿಬನ ಎಂದೂ ನಂತರದ ದಿನಗಳಲ್ಲಿ ಸೂರಿಬನವೇ ಸುರೇಬಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ ಎಂದೂ ಪ್ರತೀತಿ ಇದೆ.
ಈ ಕ್ಷೇತ್ರಕ್ಕೆ ನೂರಾರು ಜನ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಸಾಧು-ಸಂತರು ಬಂದು ಶ್ರೀ ಶಬರಿಯ ಸನ್ನಿಧಿಯಲ್ಲಿ ಜಪ-ತಪ ಗೈದು ಪುನೀತರಾಗಿರುವರು. ಮತ್ತು ಸುರೇಬಾನ-ಮನಿಹಾಳ ಗ್ರಾಮದ ಸದ್ಗುರು ಶ್ರೀ ಶಿವಾನಂದರು 18 ದಿನಗಳವರೆಗೆ ಅನುಷ್ಟಾನ ಗೈದು ಶ್ರೀ ಶಬರಿ ತಾಯಿ ಕೃಪೆಗೆ ಪಾತ್ರರಾಗಿರುವುದು ತಾಜಾ ನಿದಶರ್ನ.

ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳ:

      ಒಂದು ಸುಂದರ ಪುಷ್ಕರಣಿಯಲ್ಲಿ ಸತತ ಜಲೋದ್ಭವವಾಗುತ್ತಿದೆ. ಜಲದ ಪ್ರೋಕ್ಷಣೆಯಿಂದ ಪಾಪನಾಶವಾಗುವುದು. ಅಲ್ಲದೆ ಪಾನಮಾಡಿದರೆ ಸಕಲ ರೋಗಕ್ಕೆ ಸಂಜೀವಿನಿಯಂತಿದೆ. ಇನ್ನೊಂದು ಪುಷ್ಕರಣಿಯಲ್ಲಿ ಸ್ನಾನಕ್ಕೆ ವ್ಯವಸ್ಥೆ ಇದೆ. ದೇವಸ್ಥಾನಕ್ಕೆ ಹೊಂದಿಕೊಂಡು ಪೌಳಿಗಳು ಇವೆ. ಭಕ್ತಾದಿಗಳಿಗೆ ತಂಗಲು ಅನುಕೂಲವಿದೆ. ಈಗ ಸರಕಾರಿ ಸಹಾಯ ಧನದಲ್ಲಿ ಭವ್ಯವಾದ ಕಟ್ಟಡವಿದೆ. ಮದುವೆಯಂತಹ ಕಾರ್ಯಕ್ರಮಗಳಿಗೆ ಅವಕಾಶವಿದೆ. ವರ್ಷದಲ್ಲಿ ನೂರಾರು ಮದುವೆಗಳು ನಡೆಯುತ್ತವೆ. ಅಲ್ಲದೆ ಶ್ರೀಕ್ಷೇತ್ರದಲ್ಲಿ ನೋಡುಗರ ಮನಸೆಳೆಯುವ 200 ಅಡಿಗಳ ಅಂತರದಿಂದ ದುಮ್ಮಿಕ್ಕಿ ಬೀಳುವ ಅಂತರಗಂಗೆ, ಆಕಳ ಮೊಲೆಯು ಸೂಮಾರು 120 ಅಡಿಗಳಷ್ಟು ಎತ್ತರದಲ್ಲಿ ಗುಹೆಯಲ್ಲಿ ಇದೆ. ಸಾವಿರ ವರುಷ ಇತಿಹಾಸ ವಿರುವ ಬೋರೆಹಣ್ಣಿನ ಮರವಿದೆ. ಶ್ರೀರಾಮ ಮಂದಿರ ಹಾಗೂ ಮಳೆರಾಜನ ಮಂದಿರವು ಇದೆ.
ಇಲ್ಲಿನ ದೇವಿಗೆ ನಿತ್ಯವೂ ಪೂಜೆ, ಆಭಿಷೇಕ ಸಲ್ಲುತ್ತಿದೆ.ಕಾರ್ತಿಕ ಮಾಸ, ದೀಪಾವಳಿ ಅಮವಾಸ್ಯೆ , ಹುಣ್ಣಿಮೆ ಸಂದರ್ಭಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಜಾತ್ರೆ ದಿನ ಸುರೇಬಾನದ ಶ್ರೀ ಮಾರುತಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ದೇವಾಲಯದವರೆಗೂ ಬರುತ್ತದೆ ತದನಂತರ ಜಾತ್ರೆಗೆ ಚಾಲನೆ ನೀಡುತ್ತಾರೆ.


Monday, 9 May 2016

ಒಂದು ಬದುಕು ಎರಡು ಅನುಭವ!


 ನಮ್ಮದು ಚಿಕ್ಕ ಹಳ್ಳಿ, ಜೀವನ ಶೈಲಿಯಲ್ಲಿ ಆಡಂಬರವಿಲ್ಲ, ಇದದ್ದರಲ್ಲೆರ ಎಲ್ಲವನ್ನೂ ನಿಭಾಯಿಸಿಕೊಂಡು
 ತೃಪ್ತಿಕರ ಜೀವನ ನಡೆಸುತ್ತಿರುವ ಬಡ ಜೀವಗಳು. ಕಾಯಕವೇ ಕೈಲಾಸ ಎಂದು ದುಡಿಯುವ ದೇಹಗಳು. ಬೆಳ್ಳಿಗೆ ಆಯ್ತೆಂದರೆ, ಏ ಮಲ್ಲವ್ವ, ಏ ಕಲ್ಲವ್ವ ಬೇಗ ಬೇಗ ಬರ‌್ರೆ, ಬಂಡಿ ಹೊಂಡೈಯಿತಿ. ದಗುಡ ಬರದ ಹೋದರ ಬಿಟ್ಟ ಹೋಗತ್ತಿವ ನೋ! ಹೇ ತಡಿರ ಯಕ್ಕಾ ಅಷ್ಟೊಂದು ಅವಸರಾ ಯಾಕ ಮಾಡಾಕತ್ತಿ? ಬುತ್ತಿ ಕಟ್ಟಕೊಳ್ಳಾಕತ್ತಿನಿ ನಿಂದ್ರ, ಎನ್ನುವ ಮಲ್ಲವ. ಆತವಾ ಲಗುನ ಬಾ! ಮುಂಜಾನೆ ಇಂತಹ ಮಾತುಗಳು ಹಳ್ಳಿಗಳಲ್ಲಿ ಸರ್ವೆಸಾಮಾನ್ಯವಾಗಿ  ಕೇಳುತ್ತಿದೆ.
     ಮುಂಜಾನೆಯಿಂದ  ಸಾಯಂಕಾಲದವರೆಗೆ ದುಡಿದು, ನಗು ಮೊಗದಿ ಬರುವ ಅವರ ಮುಖ ಹುಣ್ಣಿಮೆಯ ಚಂದ್ರನಂತೆ ಲಕಾ,ಲಕಾ ಹೊಳಿಯುತ್ತಿದ್ದವು. ಬಂದ ತಕ್ಷಣ ಗಂಡನ ಬೇಕು ಬೇಡಗಳನ್ನು ಆಲಿಸಿಕೊಂಡು, ಸ್ಪಂದಿಸುವ ಹೃದಗಳು ಅಲ್ಲಿದ್ದವು. ಪ್ರತಿದಿನ ರಾತ್ರಿ ಹುಣ್ಣಿಮೆ ಚಂದ್ರ ಬರುತ್ತಿದ್ದ. ಈ ಸಮಯದಲ್ಲಿ ದುಡಿದು ಬೆಸತ್ ಜೀವಗಳು ಪಕ್ಕದ ಮನೆಗೆ ಹೋಗಿ ತಮ್ಮ ಸುಖ, ದುಖಃ ಹಂಚಿಕೊಳ್ಳುತ್ತಿದ್ದವು. ಅಲ್ಲಿ ದುಖ:. ದುಮ್ಮಾನ, ಹಾಸ್ಯ ಎಲ್ಲವೂ ತುಂಬಿಕೊಂಡಿರುತ್ತಿತ್ತು. ಗಂಡಸರು,  ಬಜಾರ, ಗುಡಿ ಕಟ್ಟೆಗಳಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.
    ಇನ್ನೂ ಯಾರಿಗಾದರೂ, ತೊಂದರೆಯಾದರೆ ಮಮಲ ಮರಗುವ ಜನ. ನೆರೆ-ಹೊರೆಯವರಂತು ಬಂಧುಬಳಗಗಿಂತ ಹೆಚ್ಚಾಗಿ ಪ್ರೀತಿ, ವಾತ್ಸಲ್ಯ ತೋರಿಸುತ್ತಾರೆ. ಇವು ನಾನು ಕಂಡು ನೋಡಿದ ಹಳ್ಳಿ ಜೀವನ.
   ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದೆ.  ನಗರ ಜೀವನ ಕಂಡಿರದ ನಾನು, ಹೇಗಪ್ಪಾ ಎಲ್ಲಿ ಇರುವದು? ಎಂದುಕೊಂಡೆ. ಇಲ್ಲಿನ ವಾತಾವರಣ, ಊಟ ನನಗೆ ಹೊಂದಾಣಿಕೆ ಆಗಲಿಲ್ಲ. ಆದರೂ ಇರಲೇ ಬೇಕಾದ ಅನಿವಾರ್ಯತೆ.
    ನಮ್ಮ ಭಾಷೆಗೂ, ಇಲ್ಲಿಯ ಭಾಷೆಗೂ ಸ್ವಲ್ಪ ವ್ಯತ್ಯಾಸ ಇದದ್ದು ಕಂಡುಕೊಂಡೆ. ಇನ್ನೂ ವೇಷ ಭೂಷಣ ಅಯೋ ದೇವರೆ! ಎಂದುಕೊಂಡೆ. ನಮ್ಮಲ್ಲಿ ಗಂಡಸರು ಪಂಚೆ, ಹೆಂಗಸರು ಇರಕಲ್ ಸೀರೆ ಉಟ್ಟಕೊಂಡ ಬರತ್ತಾ ಇದ್ದರ ಶಿವ-ಪಾರ್ವತಿ ನೋಡಿದ ಅನುಭವ. ಇಲ್ಲೂ ಶಿವ, ಶಿವಾ! ಒಂದು ದಿನಾ ನಾಲ್ಕೈದು ಹುಡುಗಿಯರು ಅರ್ಧಮರ್ಧ ಬಟ್ಟೆ ಹಾಕೊಂಡು ಬರ್ತಾಯಿದ್ದರೂ, ಅದನ್ನು ನೋಡಿದ ನಾನು ಅಯ್ಯೋ! ಪಾಪ ಅವರ ಮನೆಯಲ್ಲಿ ಹಾಕೊಳ್ಳಾಕ ಬಟ್ಟೆ ಕೊಡಿಸಿಲ್ಲಾ ಎಂದು ನನ್ನ ಗೆಳೆಯನಿಗೆ ಹೇಳಿದೆ. ಅವನು ಹಾಗಲ್ಲಾ ಲೇ ಅದು ಈಗಿನ ಪ್ಯಾಶನ್ ಎಂದ. ಇರಬಹುದು ಎಂದು ತಲೆ ಅಲ್ಲಾಡಿಸಿದೆ.

   ಇನ್ನೂ ಬೆಳ್ಳಿಗೆ ಆಫೀಸಿಗೆ ಹೋಗುವ, ಅಂಕಲ್-ಆಂಟಿ ರೋ! ದೇವದೇವಾ! ಅವಸರದಲ್ಲೇ ಹುಟ್ಟಿದ್ದಾರೆನೋ ಎಂಬಂಹ ಅವಸರ. ತಾವು ರೆಡಿ ಆಗುವ ಸಂಭ್ರಮದಲ್ಲಿ ಮಗು ಅಳತ್ತಾ, ಇದ್ದರು ಸಹ ಚಿನ್ನು, ಪಪ್ಪಿ, ಪಿಂಕಿ, ಮುದ್ದು ಸುಮ್ಮನಿರು, ನನಗೆ ಆಪೀಸಗೆ ಲೆಟ್ ಆಗಿದೆ. ನೀ ಬೇರೆ ಅಳತ್ತಾ ಇದ್ದಿಯಾ, ಸುಮ್ಮನಾಗು ಎಂದು ಗೊಣಗುತ್ತಾ, ಬಾಯ್ ಬಾಯ್ ಎಂದು ಹೊರಟೆ ಹೋಗುತ್ತಾರೆ. ಆ ಮಗು ಮಮ್ಮಿ, ಡ್ಯಾಡಿ ಎಂದೇ ಅಳತ್ತಾ ಇರುತ್ತೆ. ಆಪೀಸನ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅವರ ಮುಖ ಸುಟ್ಟ ಬದನೆಕಾಯಿ ಆಗಿರುತ್ತೆ. ಮನೆಗೆ ಬಂದವರೇ, ಬಾಗಿಲು ಹಾಕಿಕೊಂಡು ಒಳಗೆ ಕುಳಿತ್ತರೆ ಮುಗಿದೆ ಹೊಯ್ತಿ, ಮತ್ತೆ ಹೊರಗೆ ಬರುವುದು ಮರುದಿನ ಅದೇ  ಗಡಿಬಿಡಿಯಲ್ಲೇ.
    ರಾತ್ರ ಆಯ್ತಿ ಎಂದರೆ ದೇವಲೋಕವೇ ಧರೆಗಿಳಿದ ಅನುಭವ. ಜಗಮಗಿಸುವ ಕಟ್ಟಡಗಳು, ಗೀಜುಗೂಡುವ ರಸ್ತೆಗಳು, ಎಲ್ಲಿ ನೋಡಿದರು ಗೋಬಿ , ನ್ಯೂಡಲ್ಸ, ಪಾನಿಪುರಿ ಅಂಗಡಿಗಳ ಸಾಲು. ಇವುಗಳನ್ನು ತಿಂದು ಬಾಯಿ ಚಪ್ಪರಿಸುವ ಜನ. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ.

Sunday, 8 May 2016

ಕರುಣಾಮಯಿ



 ಒಂದು ಸುಂದರ ಸಂಸಾರ ಆ ಸಂಸಾರಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಆದರೆ ಆ ಕುಟುಂಬದಲ್ಲಿ ಹೇಳಿಕೊಳ್ಳುವಂತಹ ಬಡತನವೇನು ಇರಲಿಲ್ಲ.ಆದರೆ ಮನೆಯ ಯಜಮಾನನಿಗೆ ಮಾತ್ರ ದುಡ್ಡಿನ ಹಪಾ ಹಪಿ ಮಾತ್ರ ತುಸು ಜಾಸ್ತಿನೆ ಇತ್ತು. ಹೆಂಡತಿ ಏಷ್ಟೇ ದುಡಿದರೂ ಚಿತ್ರಹಿಂಸೆ ನೀಡುತ್ತಿದ್ದ. ಆದರೆ  ಹೆಂಡತಿ ಮಾತ್ರ ಸಹನೆ ಶೀಲೆ ಯಾಗಿದ್ದಳು. ಗಂಡನಾದವನು ಏನೇ ಅಂದರು ಅದು ಅವಳಿಗೆ ವೇದ ವ್ಯಾಖ್ಯವಾಗಿತ್ತು. ಎಂದೂ ಗಂಡಮಾತಿಗೆ ಎದುರು  ಮಾತನಾಡಿದವಳಲ್ಲ.
  ಈ ಕುಟುಂದ ಮೂಲ ಉದ್ಯೋಗ ಇದೇ ಎಂದು ಇರಲಿಲ್ಲ. ಯಾವ ಉದ್ಯೋಗ ದೊರೆತರು ಅದನ್ನೆ ಮಾಡುತ್ತಿದ್ದರು. ಆದರೆ ಇವರು ಬ್ರಾಹ್ಮಣರಲ್ಲ  ಆದರೂ ಮನೆಯ ಯಜಮಾನ ಮಾತ್ರ ಒಂದು ದೇವಾಲಯ ಅರ್ಚಕನಾಗಿದ್ದ, ಇದರೊಂದಿಗೆ ದೊಡ್ಡ ,ದೊಡ್ಡ ಸಮಾರಂಭಗಳ ಅಡುಗೆಯನ್ನು ಮಾಡುತ್ತಿದ್ದನು. ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರಾಗಿದ್ದರು.
  ಇನ್ನೂ ಮಗಳು ಮತ್ತು ಮಗ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಇಬ್ಬರೂ ಶಾಲೆಯಲ್ಲಿ ಚನ್ನಾಗಿ ಓದುತ್ತಿದ್ದರು. ಆದರೆ ತಂದೆಯ ದುಡ್ಡಿನ ವ್ಯಾಮೋಹ ಜಾಸ್ತಿಯಾಗಿದ್ದರಿಂದ ಮಗಳನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದನು. ಆ ಹುಡುಗಿಗೆ ಕೇಲವ ಆಗ ಹನೇರಡು ವರ್ಷ ವಯಸ್ಸು ಮಾತ್ರ ಆಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೆ ಮನೆಗೆ ಆಸರೆಯಾದಳು . ಆ ಹುಡುಗಿ ಮಾತ್ರ ಶಾಲೆಯಲ್ಲಿ ತುಂಬಾ ಜಾಣೆಯಾಗಿದ್ದಳು. ಆಟ-ಪಾಠದಲ್ಲಿ ಅವಳೆ ಶಾಲೆಗೆ ಪ್ರಥಮಳಾಗಿದ್ದಳು. ಅವಳ ತಂದೆ ಶಾಲೆ ಬಿಡಿಸಿದ್ದಾಗ, ಅವಳು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಆದರೆ ತಂದೆಯ ಹಣದಾಸೆಗೆ ಅವಳ ವಿದ್ಯಾಭ್ಯಾಸದ ಕನಸು ಮಾತ್ರ ಏಳನೇ ತರಗತಿಗೆ ಕಮರಿ ಹೋದದ್ದು ದುರಂತವೇ ಸರಿ.
  ಆದರೆ ಮನೆಯ ಯಜಮಾನನ ಹಣದಾಸೆ ಇಷ್ಷಕ್ಕೆ ನಿಲ್ಲಲಿಲ್ಲ. ಇದ್ದೊಬ್ಬ ಮಗನ ಮೇಲು ಅವನ ಕಣ್ಣು ಬಿದ್ದಿತು. ಆ ಹುಡುಗ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಇದ್ದೊಬ್ಬ ಮಗನನ್ನು ಚನ್ನಾಗಿ ಶಾಲೆಗೆ ಕಳುಹಿಸಬೇಕೆಂಬ ಇರಾದೇ ಮಾತ್ರ ಆ ತಂದೆಗೆ ಇರಲೇ ಇಲ್ಲ. ಬರೀ ದುಡ್ಡು, ದುಡ್ಡು ಎಂದು ಬಾಯಿ ಬಿಡುತ್ತಿದ್ದನು. ಒಂದಿನಾ " ನೀ ಶಾಲೆ ಕಲೆತು  ಏನ ದೊಡ್ಡ ಸಾಹೇಬಾ ಆಗ ಬೇಕಾಗಿಲ್ಲ, ಸಾಲಿ ಬಿಟ್ಟ ದುಡ್ಯಾಕ ಹೋಗ ಇನ್ನ" ಎಂದು ಆ ಪುಟ್ಟ ಮಗುವನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದ. ಪಾಪ ಆ ಹುಡುಗನದು ಮಾತ್ರ ಅರಣ್ಯ ರೋಧನ  ಯಾರು ಕೇಳುವವರಿಲ್ಲ.
  ಇದ್ದೊಬ್ಬ ಮಗನನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿರುವ ಸುದ್ದಿ ಇಡೀ ಓಣಿಗೆ ತಿಳಿಯಿತು. ಓಣಿ ಮಂದಿಯಲ್ಲ " ನಿನಗ ಇರಾಂವ ಒಬ್ಬ ಮಗಾ ಅದಾನು ಅವನರ ಸರಿಯಾಗಿ ಸಾಲಿಗೆ ಕಳುಹಿಸ ಬಾರದಾ ಎಂದು  ಬೈಯಲು ಪ್ರಾರಂಭಿಸಿದರು. ಇದರಿಂದ ಅವನ ಮನ ಪರಿವರ್ತನೆಯಾಗಿ, ಮಗನನ್ನು ಶಾಲೆಗೆ ಕಳುಹಿಸಲು ಮುಂದಾದಾಗ್ ಸಮಯ ಮೀರಿ ಹೋಗಿತ್ತು. ಆವಾಗ ಆ ಹುಡುಗ ನಾಲ್ಕನೇ ತರಗತಿಯಲ್ಲಿ ಫೇಲ್ ಆಗಿ ವತ್ತೆ ಅದೇ ತರಗತಿಯಲ್ಲಿ ಕುಳಿತುಕೊಳ್ಳುವ ಪರಸ್ಥಿತಿ ಬಂದೋದಗಿತು.
 ಇದರ ಮಧ್ಯ ಹೆಂಡತಿ, ಮಗಳಿಗೆ ತುಂಬಾನೆ ಕಾಟ ಕೊಡಲು ಪ್ರಾರಂಭಿಸಿದ್ದ, ಕುಳಿತ್ರು ತಪ್ಪು, ನಿಂತ್ರು ತಪ್ಪು ಏನ್ನುವಂತಹ ಪರಸ್ಥಿತಿ ಅವರದಾಗಿತ್ತು. ಪ್ರತಿ ಕ್ಷಣವು ಅವರಿಗೆ ನರಕ ಸದೃಶವಾಗಿತ್ತು. ಆದರೆ ಅದೆಲ್ಲವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಈ ಯಜಮಾನನ ಹಣದಾಸೆಗೆ ದೇವಸ್ಥಾನ ಹಣದ ಹುಂಡಿಯೇ ಮಾಯವಾಯಿತು.
  ಒಂದಿನಾ ಸಾಮೂಹಿಕ ವಿವಾಹ ನಿಮಿತ್ತ ಅಡುಗೆ ಮಾಡಲು ಹೋದಾಗ ರಾತ್ರಿ ಇಡೀ ನಿದ್ದೆಗೆಟ್ಟು ದುಡಿದನು. ಆದರೆ ಮರುದಿನ ವಿಶ್ರಾಂತಿ ತೆಗೆದುಕೊಳ್ಳದೇ, ಮತ್ತೆ ದುಡಿಯಲು ಪ್ರಾರಂಭಿಸಿದನು. ಇದರಿಂದ ಅವನ ಬಿಪಿ, ಶುಗರ ಹೆಚ್ಚಾಗಿ ಪಾಶ್ವವಾಯು ತಗುಲಿತು. ಇಂತಹ ಸಮಯದಲ್ಲಿ ಅವನ ಹೆಂಡತಿ  ಸಾಲ ಮಾಡಿ ದವಾಖಾನೆ ತೋರಿಸಿದಳು, ಆದರೆ ಅವನು ಮಾಡಿದ ಪಾಪಕ್ಕೆ ಆ ದೇವರ ಅವನ ಮಾತುಗಳನ್ನೆ ಕಿತ್ತುಕೊಂಡು ಬಿಟ್ಟಿದ್ದ.
 ಇಂತಹ ಸಮಯದಲ್ಲಿ ಅವನ  ಆರೈಕೆ ಮಾಡಿದವಳು ಅವನ ಹೆಂಡತಿನೇ. ಅವನು ಕೊಟ್ಟ ಕಷ್ಟಗಳೆಲ್ಲವನ್ನು ಮರೆತು ಅವನ ಹೊಲಸು ತೊಳೆಯುವದರಿಂದ ಹಿಡಿದು ರಾತ್ರಿ  ಮಲಗುವವರೆಗೂ ಅವನ ಜಾಕ್ರಿ ಮಾಡಿದಳು. ಇದರ ಜೊತೆ ಮನೆಯ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಳು.
   ಆಗ ಮಗ ಚಿಕ್ಕವನಾಗಿದ್ದರಿಂದ, ಅವನ ಅಕ್ಕ ಮನೆಯ ನೊಗವನ್ನು ಹೊತ್ತು ಗಂಡು ಮಗನ ಹಾಗೆ, ಎಲ್ಲವನ್ನು ಎದುರಿಸಿ, ಮಾಡಿದ ಸಾಲವನ್ನೆಲ್ಲಾ ತೀರಿಸಿ ತಾನೆ ದುಡಿದು, ಅದರಲ್ಲಿಯೇ ಸ್ವಲ್ಪ ಹಣವನ್ನು ಕೂಡಿಟ್ಟು, ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದಳು.
   ಆದರೆ ಆ ಹುಡುಗನ ಪರಸ್ಥಿತಿ ತಂತಿ ಮೇಲಿನ ನಡಿಗೆಯಂತಾಗಿತ್ತು. ಅತ್ತ ಸಾಲೆಗೆ ಹೋಗಲು ಆಗದು ಇತ್ತ ಬಿಡಲು ಆಗದಂತಹ ಪರಸ್ಥಿತಿ. ಆದರೆ ಅವನ ತಾಯಿ ಹೇಳಿದ್ದು ಮಾತ್ರ " ಮಗಾ ನೀನು ಸಾಲಿಗೆ ಹೋಗಿ ದೊಡ್ಡ ಸಾಗೇಬಾ ಆಗ್ಬೇಕು. ಏಸೇ ಕಷ್ಟಾದ್ರು ನೀ ಸಾಲಿ ಬಿಡಾಕ ಹೋಗಬ್ಯಾಡ, ಏಸೇ ಕಷ್ಟಾ ಬಂದ್ರು ಅವು ನನಗೆ ಇರ‌್ಲಿ" ಎಂದು ಮಗನನ್ನು ಶಾಲೆಗೆ ಕಳುಹಿಸಿದಳು.
  ಆ ಹುಡುಗ ಕೂಡಾ ಚನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದನು. ಆಗ ಅವನ ತಾಯಿಗೆ ಮಾತ್ರ ಎಲ್ಲವನ್ನು ಗೆದ್ದ ಸಂತಸ. ಮಗನ ಆ ಸಾಧನೆಯಿಂದ ಅವನ ತಾಯಿ ಹೆಚ್ಚಿನ ಓದಿಗಾಗಿ ಶಹರಕ್ಕೆ ಕಳುಹಿಸಿದಳು. ಅಲ್ಲಿಯೋ ಆ ಹುಡುಗ ಚನ್ನಾಗಿ ಓದಿ. ಉತ್ತಮ ಪಲಿತಾಂಶದೊಂದಿಗೆ ತನ್ನ ಓದನ್ನು ಮುಗಿಸಿದನು. ನಂತರ ಒಳ್ಳೇಯ ಕೆಲಸ ಹುಡುಕಿಕೊಂಡು. ಉತ್ತಮ ಸಂಭಳ ಪಡೆದುಕೊಳ್ಳುವಂತಾದ , ಅಷ್ಷರಲ್ಲಾಗಲೇ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ , ತನ್ನ ತಾಯಿಯನ್ನು ಶಹರಕ್ಕೆ ಕರೆದುಕೊಂಡು ಹೋಗಿ, ರಾಣಿಯ ಹಾಗೆ ನೋಡಿಕೊಂಡನು
  ತಾಯಿಯೇ ದೇವರು"

ಮಂಜುನಾಥ ಗದಗಿನ
ಪೋನ ನಂ ; 8050753148

Monday, 11 April 2016

ಕನಸಾಗಿಕಾಡಿ ಬದುಕಾಗಿರುವ ಪತ್ರಿಕೋದ್ಯಮ


ಕನಸುಗಳೇ ಹಾಗೆ! ಕಾಡುತ್ತವೆ. ಕೆರಳುತ್ತವೆ. ಕೆಣಕುತ್ತವೆ.. ಕೊನೆಗೆ ಸಾಕಾರಗೊಂಡೋ..ಸಾಕಾರಗೊಳ್ಳದೇನೋ..ಮನಸ್ಸಿನಾಳದಿಂದ ಸರಿದು ಮಾಯವಾಗುತ್ತವೆ.ಹ್ಞೂ! ನನಗೂ ಸಾವಿರ ಕನಸುಗಳ ಮಧ್ಯ ಒಂದು ಚಿಕ್ಕ ಕನಸು ಮೂಡಿತ್ತು. ಆ ಕನಸು ಈಡೇರಿಕೆಗೆ ನಾನಾ ಕಸರತ್ತುಗಳು. ಇವುಗಳೊಂದಿಗೆ ಅನೇಕ ಸವಾಲುಗಳನ್ನು ದಾಟಿ ಕನಸಾಗಿ ಕಾಡಿದ್ದ ಪತ್ರಿಕೋದ್ಯಮ ಅಣಿ ಇಟ್ಟೆ.
ಸಮಾಜ ಅಂಕುಡೊಂಕುಗಳನ್ನು ತಿದ್ದಿ ತಿಡುವ ಗುತರುತರ ಜವಾದ್ದಾರಿ ಪತ್ರಿಕೋದ್ಯಮದ್ದು. ಒಳ್ಳೆ ಕಾರ್ಯ ಮಾಡಿದಾಗ ಶಬ್ಬಾಶಗಿರಿ ನೀಡುತ್ತಾ, ತಪ್ಪು ಮಾಡಿದಾಗ ಚಾಟಿ ಏಟು ನೀಡುತ್ತಾ ಯಾರ ಅಚಿಜು ಅಳುಕು ಇಲ್ಲದೇ,ತನ್ನದೇ ಹಮ್ಮು ಬಿಮ್ಮಿನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಬದುಕು ಎಂಬುದು ಅಮೂಲ್ಯವಾದದ್ದು, ಬದುಕಬೇಕಾದರೆ ಕನಸುಗಳು ಅಷ್ಟೇ ಮುಖ್ಯ. ಕನಸುಗಳು ಬದುಕನ್ನು ರೂಪಿಸುತ್ತವೆ ಹಾಗೇ ನಾ ಕಂಡ ಪತ್ರಿಕೋದ್ಯಮದ ಕನಸು ಮುಂದಿನ ನನ್ನ ಬದುಕಾಗಿರುವುದು ಈಗ ಇತಿಹಾಸ.
ಪತ್ರಿಕೋದ್ಯಮ ಒಂದು ಗ್ಲಾಮರ್ ಲೋಕ ಎನ್ನುವುದು ಒಂದು ಮಾತಾದಾರೆ, ಅದರ ಒಳಗಿರುವ ಲೋಕ ನಮ್ಮನ್ನು ದಂಕು ಬಡಿಸುತ್ತವೆ. ಕ್ಷಣ ಕ್ಷಣಕ್ಕೂ ಹೊಸ ವಿಷಗಳು, ಹೊಸ ಮಾಹಿತಿಗಳನ್ನು ಹೆಕ್ಕಿ ತಗೆಯುವ ಕಸರತ್ತು ಅಲ್ಲಿ ಸದ್ದಿಲ್ಲದೇ ನಡೆಯುತ್ತಿರುತ್ತದೆ. ಆದರೆ ನಿಂತು ಓದುವವರಿಗೆ, ಕುಳಿತು ನೋಡುವವರಿಗೆ ಇದರ ಬಗ್ಗೆ ಕಿಂಚಿತ್ತು ಮಾಹಿತಿ ಇರುವುದಿಲ್ಲ.ಆದರೆ ಅದರ ಸುಳಿಗೆ .ಸಿಲುಕಿದಾಗಲೇ ಅದರ ಅರಿವು ಗೊತ್ತಾಗುವುದು. ಪತ್ರಿಕೋದ್ಯಮದಲ್ಲಿ ಸಾವಿರಾರು ಕನಸುಗಳನ್ನು ಕಂಡು ಅದೇಷ್ಟೋ ಜನ ಸಾಗಿದ್ದಾರೆ, ಸಾಧಿಸಿದ್ದಾರೆ, ಸಾಧಿಸಲಾಗದೇ ಸೋತು ಅದರ ಸಹವಾಸದಿಂದ ದೂರ ಸರಿದವರು ಇದ್ದಾರೆ.
 ಸುದ್ದಿಮನೆಯಲ್ಲಿ ಸದ್ದು ಮಾಡಬೇಕು, ಸಾವಿರ ಸಾವಿರ ಸಮಸ್ಯೆಗಳನ್ನು ಹೆಕ್ಕಿ ಸಮಾಜ ಸುಧಾರಿಸಬೇಕು ಎಂಬ ಕನಸು ನನ್ನದಾಗಿತ್ತು. ಒಬ್ಬ ವ್ಯಕ್ತಿ ಪತ್ರಕರ್ತನಾಗಲು ಓದು ಬರಹವಷ್ಟೇ ಇದ್ದರೆ ಸಾಲದು ಜನರ ಪ್ರತಿಧ್ವನಿಯಾಗಿ, ಸತ್ಯವನ್ನು ಹೇಳುವ, ಅನ್ಯಾಯದ ಪರ ನಿಲ್ಲುವ ಗಟ್ಟಿತನ ಬೇಕು ಹಾಗೇ ಕ್ರೀಯಾಶೀಲತೆಯು ಇರಬೇಕು. ಪತ್ರಿಕೋದ್ಯಮ ಸೇರಿದ ಕೆಲವೇ ದಿನಗಳನ್ನಿ ಈ ಸತ್ಯ ಅರಿವಾಯಿತು.
ಪತ್ರಿಕೋದ್ಯಮದಲ್ಲಿ ಕ್ಷಣ ಕ್ಷಣಕ್ಕೂ ಎದುರಾಗುವ ಅಪಾಗಳು, ಸಮಸ್ಯಗಳನ್ನು ಕಂಡು ಈ ವೃತ್ತಿಯೇ ಬೇಡ ಎಚಿದು ತೀರ್ಮಾನಿಸಿದ್ದು ಇದೆ. ಆದರೆ, ನನ್ನ ಕನಸು ಇಲ್ಲಿ ನಿಲ್ಲ ಬಾರದು, ಅದು ಕೂಡಾ ಪತ್ರಿಕೋದ್ಯಮದ ನೀರಿನೊಂದಿಗೆ ಹರಿಯಬೇಕು ಎಂದುಕೊಂಡು ಅದರ ಆಳ, ಅಗಲಗಳನ್ನು ತಿಳಿದುಕೊಳ್ಳಲು ಮುಂದಡಿ ಇಟ್ಟೆ.
ನಾವು ವಿದ್ಯಾರ್ಥಿಗಳಾಗಿದ್ದರು ಸಹ ನಮ್ಮ ಗುರುಗಳ ಹಲವು ವರ್ಷದ ಅನುಭವಗಳು ನಮ್ಮ ಬದುಕಿನ ಅನುಭವಗಳಿಗೆ ಸೇರುತ್ತವೆ. ಅವರು ಎದುರಿಸಿದ ಸಮಸ್ಯೆಗಳು ಕಂಡುಕೊಂಡ ಪರಿಹಾರಗಳು ನಮ್ಮ ಮುಂದಿನ ಬದುಕಿಗೆ ದಾರಿದೀಪವಾಗುತ್ತವೆ ನಮ್ಮ ಕನಸುಗಳಿಗೆ ನೀರೆರೆಯುತ್ತವೆ.
ಮತ್ತೊಬ್ಬರ ಭುಜದ ಮೇಲೆ ಬಂದುಕಿಟ್ಟು ಗುಂಡು ಹೊಡೆಯುವುದು ತುಂಬಾಜಾಣತನದ ಕೆಲಸ.  ಇದು ಕಷ್ಟದ ಕೆಲಸ ಎಂದುಕೊಳ್ಳುವವರ ಮುಂದೆ ನಾವು ಎಲ್ಲರಂತೆ ಎಂತಹ ಕಷ್ಟವಿದ್ದರು ಎದುರಿಸುವ ಶಕ್ತಿ ಮತ್ತು ಅಗತ್ಯವಾದ ಯುಕ್ತಿ ನಮ್ಮಲ್ಲೂ ಇದೆ ಎಂದು ತಿಳಿಸುವ ಕನಸು ನನ್ನದು.ಈ ಕನಸು ಹೊತ್ತ ಕಂಗಳು ಪತ್ರಿಕೊದ್ಯಮದಲ್ಲಿ ಬದುಕನ್ನು ರೂಪಿಸುತ್ತಿವೆ. ಕನಸಿಗೂ ಬದುಕಿಗೂ ಹಗಲು-ರಾತ್ರಿಯ ವ್ಯತ್ಯಾಸ ಬಿಟ್ಟರೆ ಎರಡು ಒಂದೇ. ಬದುಕು ಹಗಲು ಗನಸಾದರೆ, ಕನಸು ರಾತ್ರಿಯ ಬದುಕು. ಒಬ್ಬ ಒಳ್ಳೆಯ ಪತ್ರಕರ್ತೆಯಾಗಬೇಕು ಎಂಬುದು ನನ್ನ ಬದುಕಿನ ದೊಡ್ಡಕನಸು. ಕನಸಾಗಿ ಕಾಡಿದ ಕನಸು ಕಂಡ ಕನಸು ಸಾಕಾರಕ್ಕಾಗಿ ಶ್ರಮದಿಂದ ಕಲಿಯುತ್ತಿದ್ದೇನೆ.
manjunath gadgin

Wednesday, 6 April 2016

ಬಾಳಿಗೊಂದು ಯುಗಾದಿ!



ಹೊಸತನ-ವಿನೂತ ಬಾಳಿಗೊಂದು ಹಿರಿತನ ತಂದುಕೊಡುವುದೇ, ಈ ಯುಗಾದಿ. ಅದಕ್ಕೆಂದೇ ಭಾರತೀಯರಾದ ನಾವು ಇದನ್ನು ಹೊಸವರುಷ ಎಂದು ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ. ಅದೇ ಯುಗಾದಿ ನನ್ನ ಜೀವನದಲ್ಲೂ ಹೊಸತನ ತರುತ್ತಿತ್ತು.
   ಹೌದು! ಯುಗಾದಿ ಹೊಸತನದ ಸಂಕೇತ, ಈ ಹೊಸತನಕ್ಕಾಗಿ ನಾನು ಮತ್ತು ನನ್ನಕ್ಕ ಕ್ಯಾಲೆಂಡರನ್ನು ತಿರುವಿ ಹಾಕುತ್ತಾ ಪದೇ ಪದೇ ಯುಗಾದಿ ಹಬ್ಬ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ದಿನಗಳನ್ನು ಕಳೆಯುತ್ತಿದ್ದೇವು. ಯಾಕೆಂದ್ರೆ ಯುಗಾದಿ ಹಬ್ಬ ಬಂತೆಂದ್ರೆ  ನಮ್ಮಪ್ಪ ನಮ್ಗೆಲ್ಲಾ ಹೊಸ ಬಟ್ಟೆ ಕೊಡಿಸುತ್ತಿದ್ದ. ನಾವು ಕೂಡಾ ಯುಗಾದಿ ಒಂದು ತಿಂಗಳು ಇರುವಾಗಲೇ  ಯಪ್ಪಾ ಯಪ್ಪಾ ಹೊಸ ಅರ‌್ವಿ ಕೊಡ್ಸಾ ಎಂದು ಗಂಟು ಬಿಳುವುದು ಮಾಮೂಲಾಗಿತ್ತು.
  ಯುಗಾದಿ ಸಮೀಪಿಸುತ್ತಿದ್ದಂತೆ ನಮ್ಮ ಆಸೆಗಳಿಗೆ ರೆಕ್ಕೆ-ಪುಕ್ಕಗಳು ಬಂದು ಹಾರಾಡುತ್ತಿದ್ದವು. ನಮ್ಮ ಗೆಳೆಯರಿಗೆಲ್ಲಾ  ಲೇ ನಮ್ಮಪ್ಪ ಈ ಸಾರಿ ಯುಗಾದಿಗೆ ಜರ್ಬದಸ್ತ್ ಅಂಗಿ-ಚಡ್ಡಿ ಕೊಡಿಸ್ತಾನಂತ ಎಂದು ಓಣಿಯ ಗೆಳೆಯರಿಗಿಲ್ಲಾ ಹೇಳಿ ವರ್ಚಸ್‌ಮೆಂಟ ಮಾಡುತ್ತಿದ್ದೆ.
  ಮಿರ, ಮಿರ್ ಮಿಂಚುವ ಬಣ್ಣದ ತೋಳಂಗಿ, ಸಣಕಲು ಕಾಲುಗಳಿಗೆ ದಪ್ಪ ಜಿನ್ಸ ಪ್ಯಾಂಟು, ಅದಕ್ಕೊಪ್ಪುವ ಬೂಟುಗಳು, ವ್ಹಾ! ಏನ್ ಸ್ಟೈಲ್, ಏನ್ ಲುಕ್, ಅಂತಾ ಇರೋ ಗೆಳೆಯರು. ಅಷ್ಟರಲ್ಲೇ ನಮ್ಮವ್ವಾ ಏಳ್ಲಾ, ಇನ್ನ ಟೈಮ್ ಆತು, ಎಂದು ಗೊಣಗುವದು ನೋಡಿ ನನಗೆ ಎಚ್ಚರವಾಗಿ ಬಿಡುತ್ತಿತ್ತು. ಎದ್ದು ಕುಂತು ಇದು ಕನಸಾ! ಎಂದು ಪೆಚ್ಚು ಮೊರೆಹಾಕಿಕೊಳ್ಳುತ್ತಿದ್ದೆ. ಏಸ್! ಯುಗಾದಿ ಸುತ್ತ ಇಂತಹ ಕನಸುಗಳು ಸಾಮಾನ್ಯವಾಗಿ ಬಿಟ್ಟಿದ್ದವು.
  ಒಂದು ವಾರ ಮುಂಚಿತವಾಗಿಯೇ, ಅಪ್ಪ ಅಂಗಿ ತರಲು ಹೋಗುತ್ತಿದ್ದ, ಆದರೆ ಅವನಿಗೆ ನಮ್ಮನ್ನು ಬಿಟ್ಟು ಹೋಗುವ ಖಯಾಲಿ. ಹೇಗಾದ್ರು ಮಾಡಿ ಇವರನ್ನು ಬಿಟ್ಟು ಹೋಗಬೇಕೆಂದುಕೊಳ್ಳುತ್ತಿದ್ದ, ಆದರೆ ಅದು ಅಸಾದ್ಯವಾದ ಕೆಲಸವಾಗಿತ್ತು. ಏಕೆಂದರೆ ನಮ್ಮಪ್ಪ ನಮ್ಮನ್ನು ಬಿಟ್ಟು ಮಾರುದ್ದು ದೂರ ಹೋದಾಗ, ನಾನು ನಮ್ಮಕ್ಕ ಯಾವುದೇ ಸಂಧಿಯಿಂದ ಅಪ್ಪನನ್ನು ಹಿಂಭಾಲಿಸಿ ಬಿಡುತ್ತಿದ್ದೆವು. ಈ ರೀತಿಯಾಗಿ ಅಪ್ಪನ ದುಂಬಾಲು ಬಿದ್ದು ನಮ್ಮಗೆ ಇಷ್ಟವಾದ ಅಂಗಿಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದೇವು. ಆದರೆ ಆ ಹೊತ್ತಿದೆ ನಮ್ಮಪ್ಪನ ಕಿಸೆ ಖಾಲಿ-ಖಾಲಿಯಾಗುತ್ತಿತ್ತು.
  ಇನ್ನೂ ಯುಗಾದಿ ದಿನಾ, ಸೂರ್ಯ ಹುಟ್ಟುವ ಮುನ್ನವೇ ಎದ್ದು ಬೇವಿನ ಮರ ಹುಡುಕಿಕೊಂಡು ಅಲೆಯುತ್ತಿದ್ದೇವು. ಅದೆಲ್ಲೂ ಮರ ಕಂಡಿತೆಂದ್ರ ದಾವಂತ ಹೊಡಿಹೋಗುತ್ತಿದ್ದೇವು. ಅಷ್ಟರಲ್ಲಾಗಲೆ ಜನ ಬಂದು ಹೋಗುತ್ತಿದ್ದರು. ನಮ್ಗೆ ಗಿಡ ಹತ್ತಲು ಬರುತ್ತಿರಲಿಲ್ಲ. ಆದ್ದರಿಂದ ಅಲ್ಲೇ ಇದ್ದ ಜನಕ್ಕೆ  ಅಣ್ಣಾರ ನಮ್ಮಗು ಸ್ವಲ್ಪ ಹರದಕೊಡ್ರಿ ಎಂದು ಬೇಡಿಕೊಳ್ಳುತ್ತಿದ್ದೇವು. ಅವ್ರ ಪಾಪಾ ಅಂತಾ ಕಿತ್ತು ಕೊಡುತ್ತಿದ್ದರು. ಹೀಗೆ ತಂದ ಬೇವನ್ನು ನಮ್ಮವ್ವನ ಕೈಯಲ್ಲಿ ಕೊಟ್ಟಾಗ ಅವಳು ಅದನ್ನು, ನೀರಿಗೆ ಹಾಕಿ ಕಾಯಿಸುತ್ತಿದ್ಳು. ಯಾಕ ಹಾಕ್ತಿ ಬೇ.. ಅಂತಾ ಕೇಳಿದರೆ  ಬೇವನ್ನು ಹಾಕಿ ಸ್ನಾನ ಮಾಡಿದ್ರ  ಯಾವುದೇ ರೋಗಾ-ರುಜಿನಾ ಬರೋದಿಲ್ಲ ಅಂತಾ ಹೇಳುತ್ತಿದ್ದಳು. ಅದರಿಂದ ನಾವು ಖುಷಿಯಾಗಿ ಹಾಕಬೇ ಇನ್ನಷ್ಟ ಹಾಕ ಎಂದು ಹೇಳುತ್ತಿದೇವು.
 ಸ್ನಾನವಾದ ನಂತರ ತಂದೆ-ತಾಯಿ ಮತ್ತು ನಮ್ಮಕ್ಕನ ಕಾಲುಗಳಿಗೆ ಬಿದ್ದು ಆರ್ಶಿವಾದ ಪಡೆಯುತ್ತಿದ್ದೆ ಹಾಗೂ ಬೇವು-ಬೆಲ್ಲ ತಿನ್ನಿಸುತ್ತಿದ್ದೆ. ಆ ಪ್ರತಿವರ್ಷ ನಮ್ಮವ್ವ ಒಂದು ಮಾತು ಹೇಳುತ್ತಿದ್ದಳು  ಮಗಾ ಇವತ್ತ ಯಾರ ಕೂಡಾನು ಜಗ್ಲಾ ಮಾಡಬೇಡಾ ಎಂದು ತಪ್ಪದೇ ಹೇಳಿ ಕಳುಹಿಸುತ್ತಿದ್ದಳು.  ನಂತರ ದೇವರು, ದಿಂಡ್ರು ಅಂತಾ ಕಂಡ ಕಂಡ ದೇವರಿಗೆಲ್ಲಾ ಹೋಗಿ ನಮಸ್ಕಾರ ಮಾಡುತ್ತಿದ್ದೇನು.  ಈ ರೀತಿ ಯುಗಾದಿ ನನ್ನ ಜೀವನದಲ್ಲಿ ಕಹಿಗಿಂತ ಸಿಹಿಯನ್ನೆ ಹೆಚ್ಚಾಗಿ ನೀಡಿದೆ.

  ಮಂಜುನಾಥ ಗದಗಿನ
8050753148

Friday, 18 March 2016

ರಂಗಭೂಮಿಯ ರಂಗತೋರಣ (ಬಳ್ಳಾರಿಯ ರಂಗತೋರಣ)






    ಭಾರತ ಸಂಗೀತ, ಸಾಹಿತ್ಯ,ಸಿನಿಮಾ, ಜಾನಪದ,ಕಲೆ, ಸಾಹಿತ್ಯ ಹೀಗೆ ಹಲವಾರು ರೀತಿಯ ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ದೇಶ,ಅದರಲ್ಲಿ ರಂಗಭೂಮಿಯು ಹೊರತಗಿಲ್ಲ. ರಂಗಭೂಮಿ ಕೇವಲ ನಾಟಕವಾಗಿ ಪರಿವರ್ತನೆಗೊಳ್ಳದೇ, ಸ್ವಾತಂತ್ರ್ಯದ ಕಲ್ಪನೆ ಮೂಡಿಸಲು ಮತ್ತು ನಾಗರಿಕ ಸಮಾಜವನ್ನು ಬೆಳೆಸಲು ಧಾರ್ಮಿಕ ಪೌರಣಿಕ ನಾಟಕಗಳನ್ನು ಆಡಿ ಜನರ ಪರಿವರ್ತನೆ ಮಾಡುವುದರಲ್ಲಿ ರಂಗಭೂಮಿ ಸಾಕಷ್ಟು ಯಶಸ್ವಿಯಾಗಿದೆ. ಇಂದಿನ ದಿನಗಳಲ್ಲಿ ಅವಸಾನದ ಹಾದಿ ಹಿಡಿದಿರುವ ರಂರಭೂಮಿಗೆ ರಂಗು ತರಲು ಹೊರಟಿದೆ ಬಳ್ಳಾರಿಯ ರಂಗತೋರಣ ಬಳಗ.
   ಹೌದು! ಬಳ್ಳಾರಿಯ ರಂಗತೋರಣ ಸಂಸ್ಥೆ ಕಳೆದ ಒಂದು ದಶಕಗಳಿಂದ ತನ್ನ ರಂಗಭೂಮಿಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ. ವಿಶೇಷವಾಗಿ ವಿದ್ಯಾರ್ಥಿ ಯುವ ಜನರಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ, ಕಾಳಜಿ, ಹುರುಪು, ಹುಮ್ಮಸ್ಸು, ಚೈತನ್ಯ ಮೂಡಿಸಲು ವಿವಿಧ ರಂಗ ಚಟುವಟಿಗಳನ್ನು ನಡೆಸಿಕೊಂಡು ಹಲವಾರು ಯುವ ರಂಗ ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿದೆ.

ವಿವಿಧ ರಂಗ ಚಟುವಟಿಕೆಗಳು

ಯುವ ಜನರರಲ್ಲಿ ಸೃಜನಶೀಲ ರಂಗಾಸಕ್ತಿಯನ್ನು ಬೆಳೆಸುವ ಸಲುವಾಗಿ ಬಳ್ಳಾರಿಯ ರಂಗತೋರಣ ಬಳಗ ವರ್ಷವೀಡಿ ಹಲವಾರು ರಂಗ ಚಟುವಟಿಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದವರಿಗೆ ರಂಗ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಅವರಿಗೆ ರಂಗಭೂಮಿಯ ನಟನೆಯ ಬಗ್ಗೆ ತರಬೇತಿಯನ್ನು ನೀಡುತ್ತಿದೆ. ರಂಗ ಸವಾರಿ, ಸಂಕ್ರಾಂತಿ ರಂಗ ಸಂಭ್ರಮ, ರಂಗ ಚಾವಡಿ, ರಂಗ ಕಮ್ಮಟ, ರಂಗ ಮುಂಗಾರು ಹೀಗೆ ರಂಗಭೂಮಿಗೆ ಸಂಬಂಧಪಟ್ಟಂತೆ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ರಂಗಭೂಮಿಗೆ ಮತ್ತೆ ರಂಗನ್ನ ತರಲು ಹೊರಟಿದೆ.

ರಂಗತೋರಣದಲ್ಲಿ ಹೊಸ ರಂಗು.

 ರಂಗತೋರಣ ಬಳಗ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ರಂಗಭೂಮಿಯನ್ನು ಉಳಿಸುವ ಕಾರ್ಯದಲ್ಲಿ ತಲ್ಲೀಣವಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ. ಈ ಬಾರಿ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 10ನೇ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸಿ ಯಶಸ್ವಿಯಾಗಿದೆ.  ಈ ನಾಟಕೋತ್ಸವದಲ್ಲಿ ವಿನೂತನ ಪ್ರಯೋಗಳನ್ನು ರಂಗಾಸಕ್ತರು ಕಾಣಬಹುದು.

ಕಲಾತೋರಣ..

ಇದು ರಂಗಭೂಮಿಗೆ ಸಂಬಂಧಪಟ್ಟಂತಹ ವಸ್ತು ಪ್ರದರ್ಶನ. ಪ್ರತಿವರ್ಷವೂ ರಂಗತೋರಣದ ಆವರಣದಲ್ಲಿ ಈ ಕಲಾತೋರಣವನ್ನು ಆಯೋಜಿಸುತ್ತಾರೆ. ಅಷ್ಟೇ ಅಲ್ಲದೇ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದೆ. ಇನ್ನೊಂದು ಈ ಕಲಾತೋರಣ ವೈಶಿಷ್ಟತೆ ಎಂದರೆ ಇಲ್ಲಿ ವಿದ್ಯಾರ್ಥಿಗಳು ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಈ ಕಲಾತೋರಣದಲ್ಲಿ ಪ್ರದರ್ಶನಗೊಂಡರೆ ಅವರಿಗೆ 1000ರೂ ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ರಂಗಭೂಮಿಯ ಕಡೆಗೆ ಆಸಕ್ತಿ ತೋರಲಿ ಎಂಬುದೇ  ಈ ಪ್ರದರ್ಶನದ ಸದಾಶಯ.
  ರಂಗಚಾವಡಿ..
ವೇದಿಕೆಯ ಮೇಲೆ ನಟನೆ ಮಾಡಿದ ನಟನಾಕಾರರು, ತಮ್ಮ ನಟನೆಯ ಬಗ್ಗೆ ಹಾಗೂ ರಂಗಭೂಮಿಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವ ವೇದಿಕೆಯೆ ರಂಗಚಾವಡಿ. ಇದರ ಒಂದು ವಿಶೇಷತೆ ಎಂದರೆ ವೇದಿಕೆಯ ಮೇಲೆ ತಮ್ಮ ನಟನೆ ಮುಗಿದ ನಂತರ ಅದೇ ಉಡುಪಿನಲ್ಲಿ ಈ ವೇದಿಕೆಗೆ ಬಂದು ತಮ್ಮ ಅನುಭವನ್ನು ಹಂಚಿಕೊಳ್ಳಬೇಕು. ಬಣ್ಣ ಮಾಸುವ ಮುನ್ನ ಒಂದು ಅನುಭವ.

ರಂಗಬೆಳದಿಂಗಳು..

ನಾಟಕ ನೋಡಿ ದಣಿದ ಮನಸ್ಸುಗಳಿಗೆ ಒಂದು ಹುಮ್ಮಸ್ಸು ತರಲು ಹಾಗೂ ಪಾತ್ರಧಾರಿಗಳ ಬಹುಮುಖ ಪತ್ರಿಭೆಗಯನ್ನು ತೋರ್ಪಡಿಸಲು ರಂಗತೋರಣದ ಆವರಣದಲ್ಲಿ ಇಳಿಸಂಜೆಯಲ್ಲಿ ಆಯೋಜಿಸುವ ಫೈರಕ್ಯಾಂಫ್. ಇಲ್ಲಿ ಹಾಡು, ನೃತ್ಯ, ಅಭಿನಯ, ಮಿಮಿಕ್ರಿಯೆ, ಕವನಗಳು, ಹೀಗೆ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸುತ್ತಲೂ ನೆರೆದಿದ್ದ ಜನರ ನಡುವೆ ಬೆಂಕಿಯನ್ನು ಹಾಕಿ ಅದರ ಸುತ್ತ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ವೈಭವ ಯಾತ್ರೆ.

ನಾಟಕೋತ್ಸವದ ಸರ್ವಾಧ್ಯಕ್ಷರನ್ನು ಆನೆ ಅಂಬಾರಿಗಳ ಮೂಲಕ ನಾನಾ ಕಲಾತಂಡಗಳ ಮೂಲಕ ಅವರನ್ನು ಕರೆ ತರುವ ಒಂದು ಯಾತ್ರೆಯೇ ವೈಭವ ಯಾತ್ರೆ. ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲ ತಂಡಗಳು ಈ ಯಾತ್ರೆಗಳಲ್ಲಿ ನಾನಾ ವೇಷಭೂಷಣಗಳನ್ನು ತೊಟ್ಟುಕೊಂಡು ಸುತ್ತಲೂ ನೆರೆದಿದ್ದ ಜನರನ್ನು ರಂಜಿಸುತ್ತಾರೆ. ವೈಭವ ಯಾತ್ರೆಯಲ್ಲಿ ಯಾವ ತಂಡ ಉತ್ತಮ ಪ್ರದರ್ಶನ ತೊರುತ್ತದೆಯೋ ಆ ತಂಡಕ್ಕೆ ಬಹುಮಾನವನ್ನು ನೀಡಲಾಗುತ್ತದೆ. ಇದರ ಆಯ್ಕೆಯನ್ನು ನೆರೆದಿದ್ದ ಜನರೆ ಮಾಡುತ್ತಾರೆ. ಈ ಯಾತ್ರೆಯನ್ನು ನೋಡುವುದು ಒಂದೇ ಮೈಸೂರು ದಸರೆಯನ್ನು ನೋಡುವುದು ಒಂದೆ.
    ಒಟ್ಟಾರೆಯಾಗು ರಂಗತೋರಣ ಬಳಗ ರಂಗಭೂಮಿಯಲ್ಲಿ ವಿಭಿನ್ನ , ವಿಶಿಷ್ಟ ಪ್ರಯೋಗಳನ್ನು ಮಾಡುತ್ತಾ, ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ, ರಂಗ ಕಲೆಯನ್ನು ಉಳಿಸಿ ಬೆಳೆಸುತ್ತಿದೆ.  ಈ ಕಾರ್ಯದ ಹಿಂದೆ ಅದೇಷ್ಟೂ ಕೈಗಳು ಅವಿರತವಾಗಿ ಶ್ರಮಿಸುತ್ತಿವೆ. ಅಂತಹ ಕಾಣದ ಕೈಗಳಿಗೆ ನಮ್ಮದೊಂದು ನಮನ. ಇವರ ಈ ಕಲಾ ಸೇವೆ ಹೀಗೆ ನಿರಂತರವಾಗಿ ಮುಂದುವರೆದು ನಮ್ಮ ರಂಗಭೂಮಿ ಮತ್ತೆ ರಂಗಾಗಲಿ ಎಂಬುದೇ ಜನರ ಆಶಯ.
ಮಂಜುನಾಥ ಗದಗಿನ
8050753148

Tuesday, 8 March 2016

ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳು..!


ಇಷ್ಟ್ಯಾಕ ಕಾಡ್ತಿ ನನ್ನ- 


ಎದೆಯಾಳದಲ್ಲಿ ಇಳಿದ ನೆನಪುಗಳೇ ಹಾಗೆ, ಬೇಡವೆಂದರೂ, ಕೆದಕಿ, ಕೆಣಕಿ, ಕಾಡುತ್ತವೆ, ಕೆರಳಿಸುತ್ತವೆ. ಧೋ..ಎಂದು ನೆನಪಿನ ಮಳೆಯನ್ನೆ ಸುರಿಸಿ, ಕಣ್ಣಂಚನ್ನು ಒದ್ದೆಯಾಗಿಸುತ್ತವೆ. ಅಂತಹ ನೆನಪೊಂದು ಸದ್ದಿಲ್ಲದೇ ಎದೆಯಾಳದಲ್ಲಿ ಸರಿದಾಡುತ್ತಿದೆ, ನೆನಪುಗಳೊಂದಿಗೆ ಸರಸವಾಡುತ್ತಾ, ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳನ್ನು ಎಳೆಎಳೆದು ಹೊಸ ಮನ್ಮಂತರವನ್ನು ಸೃಷ್ಠಿಸುತ್ತಿದೆ.
ನಾನು ನನ್ನ ಕೆಲಸ ಎಂದು ನನ್ನದೆ ಲೋಕದಲ್ಲಿ ಹೊರ ಜಗತ್ತಿನ ಗಂಧ ಗಾಳಿಯು ಗೊತ್ತಿಲ್ಲದೆ ಇದ್ದ ಹಳ್ಳಿ ಹೈದನಾಗಿದ್ದೆ. ನನಗಾಗ ಧಾರವಾಡ  ಹೊಸ ಪ್ರಪಂಚ. ನಮ್ಮ ಊರಿನಿಂದ ಅಲ್ಲಿಗೆ ಕಲಿಯಲು ಹೋದವರು, ಆವಾಗ ಆವಾಗ ಊರಿಗೆ ಬಂದು ಧಾರವಾಡ ಎಂಬ ಹೊರ ಜಗತ್ತಿನ ಬಗ್ಗೆ ರೋಚಕ ಹಾಗೂ ಸ್ವಾರಸ್ಯಕರ ವಿಷಯಗಳನ್ನು ಹೇಳುತ್ತಿದ್ದರು. ಆಗ್ಲೆ ನನ್ಗೆ ಗೊತ್ತಾಗಿದ್ದು, ಧಾರವಾಡ ಎಂಬ ಸುಂದರ ನಗರಿಯ ತುಸು ಮಾಹಿತಿ. ವಿದ್ಯಾಕಾಶಿ, ನಿವೃತ್ತರ ಸ್ವರ್ಗ, ಕವಿಗಳ ನಾಡು ಎಂಬಿತ್ಯಾದಿ ಹೆಸರುಗಳನ್ನು ಕೇಳುತ್ತಿದ್ದೆ. ಇದೇ ಕಾರಣಕ್ಕೆ ಧಾರವಾಡ ಎಂದರೆ, ಅದೇನೋ ಮೈ-ಮನ ಫುಳಕಿತ್ತವಾಗುತ್ತಿದ್ದವು, ಅದನ್ನು ನೋಡಬೇಕು ಎಂಬ ಆಸೆ  ಹೆಮ್ಮರವಾಗಿ ಬೆಳೆದಿತ್ತು.
   ಇದೇ ಸಮಯಕ್ಕೆ ಪಿಯುಸಿ ಮುಗಿಯಿತು. ರೋಗಿ ಬಯಸಿದ್ದು, ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ನನ್ನ ಕನಸಿನ ಧಾರಾವಾಡದಲ್ಲಿ ಉನ್ನತ ಶಿಕ್ಷಣ ಕಲಿಯಲು ಅವಕಾಶ ದೊರೆಯಿತು. ಹೊಸ ಕನಸು, ಹೊಸ ಭರವಸೆ, ಹೊಸ ಉತ್ಸಾಹ, ಹೊಸ ಛಲಗಳೊಂದಿಗೆ ಧಾರವಾಡ ಎಂಬ ಮೋಹಕ ನಗರಿಗೆ ಪುಟ್ಟ ಮಗುವಾಗಿ ಅಂಬೆಗಾಲಿಟ್ಟೆ. ದಿಟ್ಟ ಹಜ್ಜೆಗಳ ಅಡಿಯಲ್ಲಿ ಧಾರವಾಡವನ್ನು ಅಚ್ಚರಿಯ ಕಣ್ಗಳಲ್ಲಿ ಆಶ್ವಾಧಿಸಲು ಪ್ರಾರಂಭಿಸಿದೆ. ಇಷ್ಟು ಬೇಗ ಧಾರವಾಡ ನನ್ನನ್ನು ತನ್ನೊಡಲಿನ ಮಗುವಾಗಿ ಸ್ವೀಕರಿಸುತ್ತದೆ ಎಂಬ ಕಲ್ಪನೆ ಕೂಡಾ ನನಗೆ ಇರಲಿಲ್ಲ. ಆವಾಗ್ಲೆ ಗೊತ್ತಾಗಿದ್ದು ಧಾರವಾಡಕ್ಕೆ ಎಲ್ಲವನ್ನೂ, ಎಲ್ಲರನ್ನೂ ಒಗ್ಗಿಸಿ, ತಗ್ಗಿಸುವ ತಾಕತ್ತಿದೆ ಎಂದು.
ಧಾರವಾಡದ ಮಳೆ, ಆ ಹಚ್ಚ ಹಸಿರು, ಎಳೆ ಬಿಸಿಲು, ಖಡಕ್ ರೊಟ್ಟಿ, ಜುಬ್ಲಿ ಸರ್ಕಲ್, ಬೇಂದ್ರೆ ಅಜ್ಜನ ಸಾಧನಕೇರಿ, ಶಾಲ್ಮಲೆಯ ಒಡಲು, ಶ್ರೀನಗರ ಸರ್ಕಲ್, ರೈಲ್ವೆ ಟ್ರ್ಯಾಕ್ ಮೇಲೆ ತೆಗೆಸಿದ ಸೆಲ್ಪಿ, ಒಂದೇ ಎರಡೆ ಧಾರಾನಗರಿಯ ನೆನಪುಗಳು, ಬಿಚ್ಚಿಟ್ಟು ಹಂಚಿಕೊಳ್ಳಲಾಗದಷ್ಟು ಎದೆಯಾಳದಲ್ಲಿ ಆಳವಾದ ಕಂದಕವನ್ನು ಸೃಷ್ಠಿಸಿವೆ.
ನಾವು ಯಾವುದೇ ಒಂದು ಸ್ಥಳದಲ್ಲಿ ಇದ್ದಾಗ, ಆ ಸ್ಥಳದ ಮಹಿಮೆ ಗೊತ್ತಾಗುವುದಿಲ್ಲ. ಇದ್ದಾಗ ’ಅಲ್ಲೆನ ಐತಿ ಬಿಡ್’ ಎಂಬ ಉದಾಸೀನ ಮನೋಭಾವನೆಯಿಂದ ಎಲ್ಲವನ್ನು ಅಲಗಳೆಯುತ್ತೆವೆ. ನಾವು ಆ ವಸ್ತು ಅಥವಾ ಸ್ಥಳ ನಮ್ಮನ್ನು ಬಿಟ್ಟು ದೂರ ಹೋದಾಗಲೇ, ಅದರ ನೈಜ ಮಹತ್ವ ಅರಿವಾಗುವುದು. ಇದು ನನ್ನನೊಬ್ಬನ ಮಾನಸಿಕ ಸ್ಥಿತಿ ಅಲ್ಲ. ಇದು ಪ್ರತಿಯೊಬ್ಬ ಮನುಷ್ಯನ ನೈಜ ಸ್ಥಿತಿಯಾಗಿದೆ. ಈಗ ಆಗಿರುವುದು ಅದೇ, ಧಾರವಾಡದಲ್ಲಿ ಇದ್ದಾಗ ಎಲ್ಲವನ್ನು ಉದಾಸಿನ ಮಾಡುತ್ತಾ, ಬರೀ ವಿನಾಃಕಾರಣ ಕಾಲಹರಣ ಮಾಡಿ ವಿದ್ಯಾರ್ಥಿ ಜೀವನ ಮುಗಿಸಿದೆ.
ಇದ್ದ ಅಷ್ಟು ದಿನಗಳು ಧಾರವಾಡ, ಸುಂದರ ಅನುಭವಗಳನ್ನು, ಬದುಕಿನ ಪಾಠವನ್ನು, ಸಮಾಜ ಎದುರಿಸುವ ರೀತಿಗಳನ್ನು ಕಲಿಸಿಕೊಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಗೆಳೆಯಂತೆ, ನಿಂತು ನನ್ನ ತಪ್ಪು-ಒಪ್ಪುಗಳಿಗೆ ಸಲಹೆ ಸೂಚನೆ ನೀಡುತ್ತಾ. ನನ್ನನ್ನು ತಿದ್ದಿ, ತಿಡಿ ಪೋಷಿಸಿದೆ. ಅವ್ವನಂತೆ ಸಾಕಿದೆ, ಅಪ್ಪನಂತೆ ಬೇಕು ಬೇಡಗಳನ್ನು ಆಲಿಸಿ, ಸರಿದಾರಿಯಲ್ಲಿ ಸಾಗುವಂತೆ ಎಚ್ಚರಿಕೆ ನೀಡಿದೆ. ಏನೆಂದು, ಹೇಳಲ್ಲಿ ನನ್ನ ಧಾರಾನಗರಿಯ ಬಗ್ಗೆ. ಏಷ್ಟು ಹೇಳಿದರೂ, ಅದೊಂದು ಮುಗಿಯದ ಕಥೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ, ಊರು ಬಿಟ್ಟು ಬಂದಾಗ ನನ್ನನ್ನು ಸಾಕಿ ಸಲುಹಿದ್ದು ಇದೇ ನನ್ನ ಧಾರವಾಡ.
      ಜೀವನದಲ್ಲಿ ಎಡವದಂತೆ ಎಚ್ಚರಿಸಿದ ಆ ಕಿತ್ತೋದ ರಸ್ತೆಗಳು, ಸದಾ ಹಸಿರು ಹೊದ್ದು ಮಲಗಿ, ಮನಕ್ಕೆ ತಂಪು ನೀಡುತ್ತಿದ್ದ ಕ್ಯಾಂಪಸ್‌ನ ಸಸ್ಯಶಾಲ್ಮಲೆ, ಮೈ-ಕೈಗೆ ಚಳಿ ಬೀಡಿಸಿದ ಆ ಪತ್ರಿಕೋದ್ಯಮದ ದಾರಿ, ಉತ್ಸಾಹ ಮತ್ತು ಪ್ರೋತ್ಸಾಹ ತುಂಬಿದ ಗೆಳೆಯರು, ವೃತ್ತಿ ಬದುಕಿನ ಪಾಠ ಕಲಿಸಿದ ಗುರುಗಳು, ಎಲ್ಲವೂ ಧಾರಾನಗರಿ ಕಟ್ಟಿಕೊಟ್ಟ ಬದುಕಿನ ಅವಿಸ್ಮರಣಿಯ ಕ್ಷಣಗಳು. ಮೊನ್ನೆ ಜಿಟಿ ಮಳೆಗೆ ಹುಡಿಯದ್ದ ಆ ಮಣ್ಣಿನ ಸುವಾಸನೆಯಲ್ಲಿ ಧಾರವಾಡದ ನೆನಪು ಕೂಡಾ ತೇಲಿ ಬಂತು. ಅದು ನನ್ನವಳ ನೆನಪಿನ ಹಾಗೆ.
ಮಂಜುನಾಥ ಗದಗಿನ
ಮೊ,8050753148

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...