Wednesday, 7 February 2018

ಬಿಳಿ ಆನೆ ಹುಡುಕುತ್ತಾ..!!

ಮಂಜುನಾಥ ಗದಗಿನ
   ಜೀವನದಲ್ಲಿ ಮೂರ್ಖ ಆಗೋದು ಎಷ್ಟೋಂದು ಸುಲಭ ಅಲ್ವಾ! ಸಮಯ ಸಂದರ್ಭಗಳು ನಮ್ಮನ್ನು ಮೂರ್ಖರನ್ನಾಗಿಸಿದ್ರೆ, ಮತ್ತೊಂದಿಷ್ಟು ಸಾರಿ ನಮ್ಮ ಮಹಾನ ಬುದ್ದಿಮತ್ತೆಯಿಂದ ಮಹಾನ ಮೂರ್ಖರಾಗಿರುತ್ತೇವೆ. ಅದರಲ್ಲೂ ಮೂರ್ಖರಲ್ಲಿ ನಾನಾ ಮೂರ್ಖರಿದ್ದಾರೆ. ಮೂರ್ಖ, ಶತಮೂರ್ಖ, ಅಡ್ಡ್ನಾಡಿಮೂರ್ಖ, ಹೀಗೆ ಮೂರ್ಖತನದ ಆಳವನ್ನು ಬಗೆದಷ್ಟು ನಾವೇ ಮೂರ್ಖರಾಗುತ್ತೇವೆ. ನಮ್ಮ ಮೂರ್ಖತನವನ್ನು ನೆನೆಸಿಕೊಳ್ಳಲೆಂದೆ ಏ.1 ನ್ನು ಮೂರ್ಖರ ದಿನವನ್ನಾಗಿ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಳಿ ಆನೆಯ ಮೂರ್ಖತನ ನೆನಪಿಗೆ ಬಂದು ಮುಖದಲ್ಲಿ ಕಿರು ನಗೆಯನ್ನ ಹೊಮ್ಮಿಸುತ್ತಿದೆ.

ನಾನಾಗ ಆರನೇ ತರಗತಿಯ ವಿದ್ಯಾರ್ಥಿ. ಆ ಸಮಯಕ್ಕೆ ಹೊರ ಪ್ರಪಂಚದ ಅರಿವೇ ಇಲ್ಲದ ಹಸುಗೂಸಾಗಿದ್ದೆ. ಶಾಲೆ, ಶಾಲೆ ಬಿಟ್ರೆ, ಮನೆ ಇವೆರಡೆ ನನ್ನ ಲೋಕವಾಗಿದ್ದವು. ಯಾರು ಏನೇ! ಹೇಳಿದ್ರು ಮೂಕ ಬಸವಣ್ಣನ ಹಾಗೆ ತಲೆ ಅಲ್ಲಾಡಿಸುತ್ತಾ, ನನ್ನ ಪಾಡಿಗೆ ನಾನಿರುತ್ತಿದ್ದೆ. ಅದೊಂದು ದಿನ ಶಾಲೆ ಮುಗಿಸಿಕೊಂಡು, ಸ್ನೇಹತರ ಒಟ್ಟಿಗೆ ಮನೆಗೆ ಬರುತ್ತಿದೆ. ಆವಾಗ ನಮ್ಮ ಓಣಿಯ ಹಿರಿಯಣ್ಣ, ಲೋ, ಮಂಜ್ಯಾ ಬಾರೋ ಇಲ್ಲಿ ಎಂದು ಕರೆದು.  ನಿನ್ಗೊಂದ ವಿಷಾ ಗೊತ್ತಾ! ಇವತ್ತು ನಮ್ಮ ಬಜಾರನಲ್ಲಿ ಬಿಳಿ ಆನೆ ಬಂದಿದೆ ಅಂತೆ, ಎಲ್ಲರ‌್ರು, ಅಲ್ಲಿ ಹೋಗಿ ನೋಡ್ಕೊಂಡ ಬಂದಿದ್ದಾರೆ. ಈ ಕರಿ ಆನೆ ಇದೆಯಲ್ಲಾ, ಅದಕ್ಕಿಂತ ಭಯಂಕರವಾಗಿದೆ ಎಂದು ಹೇಳ್ತಾಯಿರ‌್ಬೇಕಾದ್ರೆ, ಅಲ್ಲೆ ಪಕ್ಕದಲ್ಲೆ ಕುಳಿತ್ತಿದ್ದ ಮತ್ತೋಬ್ಬರು ಹೌದು! ನಾವು ನೋಡ್ಕೊಂಡ ಬಂದ್ವಿ ಎಂದು, ಅವರ ಮಾತಿಗೆ ಪುಷ್ಠಿ ನೀಡಿದ್ರು.
ಹ್ಞೂ! ಅವರ ಹೇಳೋದು, ಕೇಳಿ ನಮಗೆ ಕುತೂಹಲ ತಡೆಯಲು ಆಗಲಿಲ್ಲಾ. ಅಷ್ಟಕ್ಕೂ ಆ ವಯಸ್ಸಿಗೆ ಬಿಳಿ ಆನೆಗಳು ಇರೋದಿಲ್ಲ ಎಂಬ ವಿಚಾರವು ನಮಗಿರಲಿಲ್ಲ. ಮನೆಗೆ ಹೋದಾವ್ರ, ಪಾಟಿಚೀಲಾ, ಇಟ್ಟು ಬಜಾರ ಕಡೆ ಓಡಿದ್ವಿ..ಓಡಿದ್ವಿ..ಓಡಿ ಬಜಾರನ ಸಂಧಿ ಗೊಂದಿಗಳೆಲ್ಲಾ ತೀರವಿಹಾಕಿ, ಬಿಳಿ ಆನೆ ಹುಡುಕಿದ್ವಿ. ಆದ್ರ ಬಿಳಿ ಆನೆ ಸುಳಿವೇ ಸಿಗಲಿಲ್ಲಾ. ಮನೆಗೆ ಬಂದು ನಮ್ಮ ಅಪ್ಪಾನ ಮುಂದೆ ನಡೆದ ವಿಷಯವನ್ನ ಹೇಳಿದಾಗ, ಅಪ್ಪ ಸಹಿತ ನಗೋದಕ್ಕೆ ಶುರು ಮಾಡಿದಾ. ಯಾಕೆ ಅಂತ ಕೇಳಿದಕ್ಕೆ, ನಿಮ್ಮ ಟೀಚರ್ ಚಲೋ ಸಾಲಿ ಕಲ್ಸಿದ್ದಾರ ಬೀಡು ಎಂದು ಹೊರಟು ಹೋದಾ.
ಬಿಳಿ ಆನೆಯ ಇದೇ, ಎಂದು ಹೇಳಿದ ಆ ಅಣ್ಣ ಮತ್ತೆ ಸಿಕ್ಕ, ಆವಾಗ ಅವ್ನ ಕೇಳಿದ್ವಿ.  ಅಣ್ಣಾ ನಾವ್ ಹೋಗಿದ್ವಿ ಅಲ್ಲಿ ಎಲ್ಲೂ ಬಿಳಿ ಆನೆ ಕಾಣಿಸ್ಲೆ ಇಲ್ಲಾ ಎಂದು ಒಟ್ಟಾಗಿ ಹೇಳಿದ್ವಿ. ಅದಕ್ಕ ಅವನು ಏಪ್ರಿಲ್ ಫೂಲ್! ಏಪ್ರಿಲ್ ಫೂಲ್ ಎಂದನು. ನಮಗೆ ಆಗ ಏಪ್ರಿಲ್ ಫಸ್ಟ್ ಏಪ್ರಿಲ್ ಫೂಲ್ ದಿನಾಚರಣೆ ಅಂತಾ ಗೊತ್ತೆ ಇರಲಿಲ್ಲಾ. ಆ ಅಣ್ಣಯ್ಯಾ, ತಿಳಿಸಿದ ಮೇಲೆ ನಮ್ಗೆ ಗೊತ್ತಾಗಿದ್ದು. ಹಿಂಗು ತಿಂದ ಮಂಗನ ಹಾಗೆ ಅಲ್ಲಿಂದ ಹೊರಟು ಬಂದ್ವಿ. ನಂತರ ನಾವು ಕೂಡಾ ಸಿಕ್ಕವರ‌್ನ ಏಪ್ರಿಲ್ ಫೂಲ್ ಮಾಡಲು ಶುರು ಮಾಡಿದ್ವಿ.
ಏಪ್ರಿಲ್ ಫಸ್ಟ್ ಬಂತು ಅಂದ್ರೆ ನನ್ಗೆ ಬಿಳಿ ಆನೆ ಹಾಗೂ ನಮ್ಮ ಓಣಿಯ ಅಣ್ಣ ನೆನಪಿಗೆ ಬರುತ್ತಾರೆ. ನನ್ನ ಮೂರ್ಖತನಕ್ಕೆ ಒಂದು ಸುಂದರ ನೆನಪನ್ನ ಒದಗಿಸಿದ ನನ್ನ ಓಣಿಯ ಅಣ್ಣಿಗೆ ನಾನು ಏಫ್ರಿಲ್ ಫೂಲ್ ಮಾಡಲು ಕಾತುರನಾಗಿದ್ದೇನೆ. ನೀವು ಕೂಡಾ ನಿಮ್ಮ ನೆಚ್ಚಿನವರನ್ನು ಯಾವ ರೀತಿಯಾಗಿ ಮೂರ್ಖರನ್ನಾಗಿಸ್ಬೇಕು ಎಂಬುದನ್ನ ಈಗಲೇ ಪ್ಲಾನ ಮಾಡಿ.

8050753148


Saturday, 3 February 2018

ಕ್ಷಮೇ ಇರಲಿ ನನ್ನ ಮೋಸಕ್ಕೆ.

ಮಂಜುನಾಥ ಗದಗಿನ

ಯಾಕೋ.. ಮನ
ಸ್ಸು ಹಳಹಳ ಏನಿಸುತ್ತಿದೆ. ಮುಗ್ದ ಮನಸ್ಸುಗಳಿಗೆ ಮೋಸ ಮಾಡುತ್ತಿದ್ದೇನಾ? ಎಂಬ ಕೊರಗು ದಿನೇ ದಿನೇ ಹೆಮ್ಮರವಾಗಿ ಬೆಳೆಯುತ್ತಿದೆ. ಆದರೆ, ಮನಸ್ಸಿನ ಮೊಲೆಯಲ್ಲೆಲ್ಲೋ ಇದು ವಾಸ್ತವ ಪರಸ್ಥಿಗೆ ಸರಿಯಾಗಿದೆ ಎಂದು ಮಾರ್ಧನಿಸುತ್ತಿದೆ.
   ಕಲಿಬೇಕು ಎಂಬ ಹಂಬಲ, ಸಾಧಿಸಬೇಕು ಎಂಬ ಛಲದೊಂದಿಗೆ ವೃದ್ಧ ತಂದೆ-ತಾಯಿಗಳನ್ನು ಬಿಟ್ಟು ಬಂದು ಅರ್ಧ ದಶಕಗಳೇ ಕಳೆದು ಹೋಗಿವೆ. ಆದ್ರೆ ನಾನು ಸಾಧಿಸಿದ್ದೇಷ್ಟು ಎಂಬ ಯಕ್ಷ ಪ್ರಶ್ನೆ ಮಾತ್ರ ನನ್ನನ್ನೆ ಪ್ರಶ್ನಿಸುತ್ತಿದೆ. ಆದರೆ ಊರಲ್ಲಿ ಅವ್ವ ಮಾತ್ರ ನನ್ನ ಮಗಾ ದೊಡ್ಡ ಸಾಲಿನ್ಯಾಗ, ದೊಡ್ಡ ವಿಷಯ ಕಲಿತಾನ ಎಂದು ಊರಿನ ಹತ್ತಾರು ಮಂದಿಗೆ ಹೆಮ್ಮೆಯಿಂದ ತುಸು ಜಂಭದಿಂದ ಹೇಳಿಕೊಳ್ಳುತ್ತಿದ್ದಾಳೆ.
   ಇಂತಹ ಅಮಾಯಕ ಮುಗ್ದ ಮನಸ್ಸಿನ ಮೌನ ಭಾವನೆಗಳಿಗೆ ಮೋಸದ ಮುಳ್ಳು ಚುಚ್ಚುತ್ತಿದ್ದೇನಾ?  ಎಂಬ ಗೊಂದಲ ಮನಸ್ಸಿನ ಅಂತರಾಳದಲ್ಲಿ ಕೊರೆಯುತ್ತಿದೆ. ಊರು ಬಿಟ್ಟ ಪ್ರಾರಂಭದಲ್ಲಿ ತಂದೆ-ತಾಯಿಗಳಿಗೆ ಹೊರೆಯಾಗಬಾರದೆಂದು ನಾನಾ ಕಡೆ ಕೆಲ್ಸ ಮಾಡಿ ಶಿಕ್ಷಣ ಹಾಗೂ ನನ್ನ ದೈನಂದಿನ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಿದ್ದೆ.  ಆದ್ರೆ ಯಾವಾಗ ಪದವಿ ಹಂತ ಮುಗಿದು ಸ್ನಾತಕೋತ್ತರ ಹಂತಕ್ಕೆ ಮುನ್ನುಡಿ ಇಟ್ಟಿನೋ! ಆವಾಗಿನಿಂದ ಅವ್ವನ ಹತ್ರ ದುಡ್ಡಿಗಾಗಿ ಕೈ ಚಾಚಲು ಶುರುಮಾಡಿದೆ. ಅಪ್ಪ ಪಾರ್ಶ್ವವಾಯುಗೆ ಒಳಗಾಗಿ ಹಾಸಿಗೆ ಹಿಡಿದು ದಶಕಗಳೇ ಕಳೆದು ಹೋಗಿದ್ದರ ಪರಿಣಾಮವಾಗಿ ಮನೆಯ ನೊಗವನ್ನು ಅವ್ವನೇ ಹೊತ್ತು ನಿಭಾಯಿಸುತ್ತಿದ್ದಾಳೆ.
  ಹೊಟ್ಟೆ, ಬಟ್ಟೆ, ಕಟ್ಟಿಕೊಂಡು ಸ್ಪಲ್ಪ ದುಡ್ಡು ಮಿಕ್ಕಿಸಿ ಮಗನಿಗೆ ಕೊಡ್ಬೇಕೆಂದು ಸಕ್ಕರೆ ಡಬ್ಬದಲ್ಲಿ ಕೂಡಿಹಾಕುತ್ತಿರುತ್ತಾಳೆ. ನಾನು ಊರಿಗೆ ಹೋದಾಗ ಆ ದುಡ್ಡನ್ನು ನನ್ನ ಕೈಗಿಟ್ಟು  ಮಗಾ!! ಚನ್ನಾಗಿ ಸಾಲಿ ಕಲ್ತ ದೊಡ್ಡ ನೌಕರಿ ಮಾಡ, ನಮ್ಮ ಕಡೆಯೇನ, ಚಿಂತಿ ಮಾಡ್ಬ್ಯಾಡ ಎಂದು ಹೇಳಿ ಕಳುಹಿಸುತ್ತಾಳೆ.
  ಆದರೆ ಅವ್ವ ಕೊಡುವ ಆ ದುಡ್ಡು ಯಾವುದಕ್ಕೂ ಸಾಲುವುದಿಲ್ಲ. ಶಹದ ಆಗು-ಹೋಗುಗಳು ಅವಳಿಗೇನು? ಗೊತ್ತು ಪಾಪಾ! ಒಂದು ಟೀ ಕುಡಿದ್ರೆ ಹತ್ತು ರೂಪಾಯಿ ಕೈ ಬಿಟ್ಟು ಹೋಗುವ ಇಂದಿನ ದುನಿಯಾದಲ್ಲಿ ಅವ್ವನ ಆ ದುಡ್ಡು ನನಗೆ ಸಾಲುತ್ತಿರಲಿಲ್ಲ. ಆದ್ರೆ ಜಾಸ್ತಿ ದುಡ್ಡು ಕೇಳುವ ಹುಂಬು ಧೈರ್ಯ ನನಗಿರಲಿಲ್ಲ. ಅವರ ಜೀವನವೇ ಸರಕಾರ ಕೊಡೋ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲ ವೇತನದಿಂದ ನಡೆಯುತ್ತಿದ್ದೆ. ಇಂತಹ ಸಮದಲ್ಲಿ ದುಡ್ಡು ಕೇಳಿದ್ರೆ ಅವರಾದ್ರು ಎಲ್ಲಿಂದ ಕೊಟ್ಟಾರು?
   ಅವ್ವ ಕೊಟ್ಟ ಆ ಕಾಸು ಖಾಲಿಯಾಗುತ್ತಿದ್ದಂತೆ, ಅಕ್ಕನ ಹತ್ರವೋ, ಮಾವನ ಹತ್ರವೋ ಕೈ ಚಾಚ ಬೇಕಾಗಿತ್ತು. ಆದ್ರೆ ಈಗಾಗಲೇ ನಾ ಅವರಿಗೆ ಹೊರೆಯಾಗಿದ್ದೇನೆ. ಇಂತಹದ್ರಲ್ಲಿ ಅವರ ಹತ್ರ ದುಡ್ಡು ಕೇಳುವುದು ನನ್ಗೆ ಮುಜುಗರ ಉಂಟು ಮಾಡುತ್ತಿತ್ತು. ಈ ಮುಜಗರದಿಂದ ಪಾರಾಗ್ಬೇಕೆಂದು ಕೊಂಡು ಈ ಸಾರಿ ಊರಿಗೆ ಹೋದೆ. ಬ್ಯಾಂಕೊಂದರಲ್ಲಿ ಅವ್ವನ ಹೆಸರಿನಲ್ಲಿ ಒಂದಿಷ್ಟು ಹಣ ಇಡಲಾಗಿದೆ. ಈ ಹಣವೇ ನಮ್ಮೆಲ್ಲರ ಪಾಲಿನ ದೊಡ್ಡ ಆಸ್ತಿ, ಈ ದುಡ್ಡನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು ಎಂದು ಅವ್ವ ಆಗಾಗಾ ಹೇಳ್ತಾನೆ ಇದ್ಲು. ಅದು ನನ್ನ ಮದುವೆಗೆ  ತೆಗೆದಿಟ್ಟ ದುಡ್ಡೆಂದು ಪದೇ ಪದೇ ಹೇಳುತ್ತಿದ್ದಳು. ಆದ್ರೆ ನನ್ನ ಕಷ್ಟ ಪರಿಹರಿಸಲು ಆ ದುಡ್ಡಿನಿಂದ ಮಾತ್ರ ಸಾಧ್ಯವೆಂದು, ನಾನು ಆ ದುಡ್ಡಿಗೆ ಒಂದು ಎಟಿಎಂ ಕಾರ್ಡ ಮಾಡಿಸಲು ಬ್ಯಾಂಕಿನಿಂದ ಎಟಿಎಮ್ ಪಾರ್ಮ ತೆಗೆದುಕೊಂಡು ಹೋಗಿ ಅವ್ವನ ಮುಂದೆ  ಬೇ ಯವ್ವಾ, ಬ್ಯಾಂಕನವರು ಅದೇನೋ, ಸಹಿ ಕೇಳಾಕತ್ತಾರ, ಸಹಿ ಮಾಡ್ದೇ ಹೋದ್ರ ಪಾಸ್ಬುಕ್ ಬಂದ್ ಆಗತೈತಿ ಅಂತ ಹೇಳಿ ಅವಳಿಂದ ಹೆಬ್ಬಟ್ಟು ಒತ್ತಿಸಿಕೊಂಡು ಬಂದೆ. ಅವಳು ಎರಡು ಮಾತನಾಡದೇ ಸಹಿ ಮಾಡಿದ್ಳು, ಯಾಕೆ? ಗೊತ್ತಾ ಮಗನ ಮೇಲಿನ ಅಪಾರ ನಂಬಿಕೆಯಿಂದ.
    ಅಪ್ಲಿಕೇಷನ ಕೊಟ್ಟ ಎರಡು ದಿನಗಳಲ್ಲಿ ಎಟಿಎಂ ಬಂದಿತು. ನಾನು ಎಟಿಎಂ ತೆಗೆದುಕೊಂಡು ಬರ‌್ಬೇಕಾದ್ರೆ ಅದೇ ಮುಗ್ದ ಅವ್ವ ಸಕ್ಕರೆ ಡಬ್ಬದಿಂದ ನೂರರ ಎರಡು ಗರಿಗರಿ ನೋಟುಗಳನ್ನು ತೆಗೆದು ನನ್ನ ಕೈಗೆ ಇಟ್ಟಳು. ನಾನು ಯಾವುದೇ ಮುಜುಗರ ಇಲ್ಲದೇ ಆ ದುಡ್ಡನ್ನು ತೆಗೆದುಕೊಂಡು ಬಂದು ಬಿಟ್ಟೆ.
    ಆದ್ರೆ ಆ ಎಟಿಎಂ ನಿಂದ ಹಣವನ್ನು ಡ್ರಾ ಮಾಡಿಕೊಳ್ಳಬೇಕಾದ್ರೆ ಯಾಕೋ, ಮನಸ್ಸು ಹಿಂದೆಟ್ಟು ಹಾಕುತ್ತದೆ. ಇದಕ್ಕೆ ಕಾರಣ ನಾನು ಅವ್ವನ ನಂಬಿಕೆಗೆ ಮಾಡಿದ ಮೋಸ, ಅವಳು ನನ್ನ ಮೇಲೆ ಇಟ್ಟ ಭರವಸೆಯ ಮೋಸ. ಆದ್ರೆ ಹೀಗೆ ಮಾಡದೇ ಬೇರೆ ವಿಧಿ ಇಲ್ಲ ಎಂದು ಮತ್ತೊಂದು ಮನಸ್ಸು ಹೇಳುತ್ತದೆ. ಆದ್ರೆ ಇದು ನಾ ಅವ್ವನಿಗೆ ಮಾಡಿದ ಮೋಸವಲ್ಲ, ಇದು ನನ್ಗೆ ನಾನೇ ಮಾಡಿಕೊಂಡ ಮೋಸ ಯಾಕೆಂದ್ರೆ ಅವ್ವನಿಗೊಸ್ಕರ ನನ್ನ ಅಂತರಾಳದಲ್ಲಿ ಒಂದು ಗುಡಿಕೊಟ್ಟಿ ಪೂಜಿಸುತ್ತಾ ಇದ್ದೇನೆ. ಆದ್ರು ನನ್ನ ಮೋಸಕ್ಕೆ ಒಂದು ಕ್ಷಮೇ ಇರಲಿ ಅವ್ವ.

Tuesday, 23 January 2018

ಹಸಿವೇ ಎಂಬ ಹೆಬ್ಬಾವು!

 ಹಸಿದ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯು ಸಾಲದು ಎಂಬ ಮಾತು ಈಗ ಅರ್ಥವಾಗುತ್ತಿದೆ. ಊರಲ್ಲಿ ಅವ್ವ ಮಾಡಿದ ಬಿಸಿ, ಬಿಸಿ ರೊಟ್ಟಿ ತಿಂದು ಉಂಡಾಡಿ ಗುಂಡನ ಹಾಗೆ ತೀರಗಾಡ್ತಾಯಿದ್ದೆ. ಯಾವಾಗ ಊರ ಬಿಟ್ಟು ಧಾರವಾಡ ಸೇರಿಕೊಂಡ ನೋ..ಅವಾಗ ಗೊತ್ತಾಯಿತು.ಹಸಿವು ಎಂಬ ಶೂಲದ ಮಹತ್ವ. ಈಗ ಒಂದೊತ್ತು ಊಟ ಇಲ್ಲದೇ ಹೊದ್ರು ಹಸಿವೇ ಎಂಬ ಹೆಬ್ಬಾವು ಹೊಟ್ಟೆಯನ್ನೆ ಕಚ್ಚಿ ತಿನ್ನುತ್ತಿದೆ.
ಊರಲ್ಲಿ ಇದ್ದಾಗ ರಾಜಾಹುಲಿಯ ಹಾಗೆ ಕುಡಿಮೀಸೆಯ ಮೇಲೆ ಕೈ ಹೊತ್ತು, ಟೀಫ್ ಟಾಫ್ ಡ್ರೆಸ್ ಮಾಡ್ಕೋಂಡು ಇರಗ್ತಾಯಿದ್ರೆ, ಇವರೇನು? ಮಹಾರಾಜನ ಮೊಮ್ಮಕ್ಕಳಾ! ಎಂದು ಜನ ಗುಸು-ಗುಸು, ಪಿಸು-ಪಿಸು ಮಾತಾಡ್ತಾಯಿದ್ರು. ಕಿಸೆ ತುಂಬ ಕಾಸು, ಕೈಯಲ್ಲೊಂದು ಬೈಕ್ ಹಿಡ್ಕೊಂಡ ಜಮ್ ಅಂತಾ ಇದ್ವಿ. ಮನೆಯಲ್ಲಿ ಪೋನ್ ಮಾಡಿ ಮಗಾ! ಊಟಕ್ಕೆ ಬಾರ‌್ಲಾ ಎಂದು ಕರೆಯೊವರೆಗೂ ಅಲೆದಾಡ್ತಾಯಿದ್ವಿ.ಆದ್ರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಊರು ಬಿಟ್ಟು ಪರ ಊರಿಗೆ ಬಂದ ಮೇಲೆ, ಹಳೆಯ ನೆನಪುಗಳು ಸ್ಮತಿಪಟಲಗಳಲ್ಲಿ ಇಣುಕುತ್ತಾ, ನಮ್ಮನ್ನು ನೋಡಿ ಗಹಗಹಿಸಿ ನಗ್ತಾಯಿವೆ. ರಾಜಾಹುಲಿಯಾಗಿ ಊರು,ಕೆರಿ ಸುತ್ತಾಯಿದ್ದೆ, ಆದ್ರೆ ಈಗ ರಾಜಾಇಲಿಯಾಗಿ ಕ್ಯಾಂಪಸ್‌ನ ಸಂಧಿ, ಗೊಂದಿಗಳಲ್ಲಿ ಆಮಂತ್ರಣವಿಲ್ಲದ ಔತಣಕೂಟಗಳಿಗೆ ಅಲೆದಾಡ್ತಾಯಿದ್ದೇನೆ.
 ಹಾಗಂತ್ತಾ ಇದು ನನ್ನೊಬ್ಬ ಕಥೆಯಲ್ಲ. ಇದು ಊರು ಬಿಟ್ಟು ಬಂದ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಥೆಯ ವ್ಯಥ್ಯೆಯಾಗಿದೆ. ಮನೆಯಲ್ಲಿದ್ದಾಗ ಒಂದು ಕಡ್ಡಿಯನ್ನು ಈ ಕಡೆಯಿಂದ ತೆಗೆದು ಆ ಕಡೆ ಹಾಕುವದಿಲ್ಲ. ಆದ್ರೆ ಊರು ಬಿಟ್ಟ ಮೇಲೆ ಹಾಸ್ಟೆಲೋ..ರೂಮೋ.. ಮಾಡಿಕೊಂಡು ಸೆಗಣಿಯಲ್ಲಿಯ ಹುಳುವಿನ ಹಾಗೆ ಒದ್ಯಾಡುತ್ತಿರುತ್ತಾರೆ.
ಪತ್ರಿನಿತ್ಯ ಬೆಳಗಾದ್ರೆ ಸಾಕು, ಮಾಡಲೇ..ತಗಿಲೇ..ತಿನ್ನಲೇ..ತೋಳಿಲೇ..ಒಗಿಲೇ..ಎಂಬ ಲೇ ಜೀವ ಪ್ರಾರಂಭವಾಗುತ್ತದೆ. ಇದರ ಮಧ್ಯೆ ಕ್ಲಾಸು..ಲಕ್ಚರು ಎಂಬ ಕಿರಿ,ಕಿರಿ ಬೇರೆ. ಇದೆಲ್ಲವುದರೊಂದಿಗೆ ಹಸಿವೇ ಎಂಬ ಹೆಮ್ಮಾರಿ ಬೇರೆ ದಿನ ಬೆಳಗಾದ್ರೆ, ಸಾಕು, ಕೋಳಿಯಗಿಂತಲೂ ಅತತ್‌ವಾಗಿ ಕೂಗಲೂ ಶುರುಮಾಡುತ್ತೇ ಈ ಹೊಟ್ಟೆ ಎಂಬ ಬಕಾಸುರ. ಇದಕ್ಕೆ ಮಾಡಿ ಹಾಕೋದು, ಎಂದ್ರೆ ಎದೆ ಝಲ್ ಏನಿಸುತ್ತದೆ. ಆದ್ರೆ ತಿನ್ನೊವಾಗ ಸ್ವರ್ಗಕ್ಕೆ ನಾಲ್ಕೇ ಗೇಣು ಅನಿಸುತ್ತದೆ.
ಹುಡುಗರು ಅಡುಗೆಯಲ್ಲಿ ಪಾರಂಗತರಲ್ಲ. ಆದ್ರೆ ಕೆಲವೊಂದಿಷ್ಟು ಹುಡುಗರು ಮಾತ್ರ ಹೆಂಗಳೆಯರೆಗೆ ಟಾಂಗ್ ಕೊಡುವ ಹಾಗೆ ವಿವಿಧ ಭೋಜನಗಳನ್ನು ಮಾಡಲು ಕಲ್ತಿರ‌್ತಾರೆ. ಆದ್ರೆ ಅಡುಗೆ ಮಾಡಲು ಬರದೇ ಹುಡುಗ್ರು ಅಡುಗೆ ಮನೆಯಂದ್ರೆ ಅಖಾಡಕ್ಕೆ ಇಳಿದವರ ಹಾಗೆ ಆಡುತ್ತಾರೆ. ಪ್ರತಿದಿನ ಅನ್ನ, ಸಾರು.. ಬಿಟ್ಟರೇ ಮನೆಯಿಂದ ತಂದ ಖಡಕ್ ರೊಟ್ಟಿನೇ ಗತಿ. ಇದರಿಂದ ಊಟ ಎಂದರೆ ಮುಖ ಸಪ್ಪೆ ಮಾಡಿಕೊಳ್ಳುತ್ತಾರೆ.
ಆದ್ರೆ ಇದೆಲ್ಲವಿಂದ ತುಸು ವಿಮುಕ್ತಿ ಪಡೆಯಲು ವಿದ್ಯಾರ್ಥಿಗಳು ಅನಿವಾರ‌್ಯವಾಗಿ ಅಲ್ಲಲ್ಲಿ ನಡೆಯುವ ಆಮಂತ್ರಣವಿಲ್ಲ ಔತಣಕೂಟಗಳಿಗೆ ಹೋಗಿ ಗಡತ್ತಾಗಿ ಜಡಿದು ಬರುತ್ತಾರೆ. ಹೌದು! ಇದು ಹಸಿವೆ ಎಂಬ ಹೆಬ್ಬಾವನ್ನು ನಿಗಿಸಲು ಅನಿವಾರ‌್ಯ ಕೂಡಾ ಆಗಿದೆ. ಕ್ಯಾಂಪಸ್‌ನಲ್ಲಿ ಹಾಗೂ ಸುತ್ತ-ಮುತ್ತಲೂ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಆಮಂತ್ರಣಗಳು ಬಂದಿರುವುದಿಲ್ಲ. ಆದ್ರೆ ಒಬ್ಬ ವಿದ್ಯಾರ್ಥಿಗೆ ಗೊತ್ತಾದ್ರೆ ಸಾಕು, ಎಲ್ಲ ವಿದ್ಯಾರ್ಥಿಗಳ ಮೊಬೈಗಳು ರಿಂಗಣಿಸುತ್ತವೆ ನಂತರ, ಕಾರ್ಯಕ್ರಮ ವೀಕ್ಷಿಸಿ, ಭರ್ಜರಿ ಊಟ ಮಾಡಿ ಬರುತ್ತೇವೆ. ಇದರಿಂದ ಒಂದು ದಿನದ, ಹಸಿವುವೆಂಬ ಹೆಬ್ಬಾವಿಗೆ ತಣಿಸಿದಂತೆ ಆಗುತ್ತದೆ. ಆದ್ರೆ ಕೆಲವೊಂದು ಸಾರಿ ಅದೇ ಹೆಬ್ಬಾವು ಹೆಡೆ ಏತ್ತಿದಾಗ, ಅದಕ್ಕೆ ತಣ್ಣಿರ ಬಟ್ಟೆ ಹಾಕಿ ತೆಪ್ಪಗೆ ಮಲಗಿಸುತ್ತೇವೆ.
ಹಸಿವೇ ಎಂಬ ಹೆಬ್ಬಾವನ್ನು ಬಿಳ್ಕೋಡುವುದೆಂದರೆ, ಉರಿ,ಉರಿಯುವ ಅಗ್ನಿ ತನ್ನ ಶಾಖವನ್ನು ಬಿಟ್ಟು ಕೊಟ್ಟಂತೆ, ಅಲ್ಲವೇ? ಆದ್ರೆ ಹಸಿವೇ ಎಂಬ ಹೆಬ್ಬಾವಿಗೆ ಯಾವುದರ ಹಂಗಿದೆ, ಅದು ಎಲ್ಲರನ್ನು ಸುತ್ತಿಕೊಂಡೆ ಇರುತ್ತದೆ. ಆದರೆ ಅದರ ಅರಿವು ಮಾತ್ರ ನಮಗಿಗ ಆಗುತ್ತಿದೆ.
ಮಂಜುನಾಥ ನಾ ಗದಗಿನ

Sunday, 21 January 2018

ಎಣ್ಣೆ ಪುರಾಣ..!

 ಮಂಜುನಾಥ ಗದಗಿನ

     ಎಣ್ಣೆ ಎಂದರೇ ಸಾಕು, ಅದೆಷ್ಟೋ..ಮುಖಗಳಲ್ಲಿ ವಧುವಿನ ಕಳೆ ಬಂದು ಬಿಡುತ್ತದೆ. ಮತ್ತೊಂದಿಷ್ಟು ಮುಖಗಳು ಶಿಂಗೆ ಎಣ್ಣೆ ಕುಡಿದರವ ಹಾಗಾಗಿರುತ್ತವೆ. ಈ ಎಣ್ಣೆ ಮಹಿಮೆನೆ ಹಾಗೆ, ಅದು ಕಾಲಿಟ್ಟಲೆಲ್ಲಾ ಧೂಳ್ ಎಬ್ಬಿಸಿರುತ್ತದೆ. ಅದರ ಮರ್ಮವೆನೆಂಬುವದು ಆ ದೇವರೇ ಬಲ್ಲ.  ಹ್ಞೂ! ಮೊನ್ನೆ ಕ್ಲಾಸ್‌ನಲ್ಲು ಎಣ್ಣೆಯದ್ದೆ ಸಮಾಚಾರ, ಹುಡಗ-ಹುಡುಗಿಯರು ಎನ್ನದೇ ಎಲ್ಲರ ಬಾಯಿಯಲ್ಲೂ ಎಣ್ಣೆಯದ್ದೆ ಮಾತು.
   ಅವತ್ತು ಎಡಮಗ್ಗಲಲ್ಲಿ ಎದ್ದಿರ‌್ಬೇಕು. ಕಾಲೇಜಿಗೆ ಹೋಗುವ ದಾರಿಯಲ್ಲಿ ಬಸ್ ಕೆಟ್ಟು ಹೋಯಿತು. ಇದರಿಂದ ಕ್ಲಾಸ್‌ಗೆ ಹೋಗುವದು ತುಂಬಾ ಲೇಟ್ ಆಯಿತು. ಅದರಲ್ಲೂ ನಮ್ಮ ವಿಭಾಗಕ್ಕೆ ಹೋಗ್ಬೇಕಾದ್ರೆ, ಅರ್ಧ ಜೀವವೇ ಕೈ ಬಂದಿರುತ್ತದೆ. ಇಂತಹದ್ರಲ್ಲಿ ದಡಬಡಾಯಿಸಿಕೊಂಡು ಕ್ಲಾಸ್‌ಗೆ ಎಂಟ್ರಿಕೊಟ್ಟೆ, ಎಲ್ಲ ಸಹಪಾಠಿಗಳು ಹರಟುತ್ತಾ ಕುಳಿತಿದ್ರು. ಇದನ್ನು ನೋಡಿದಾಕ್ಷಣ ನಿಟ್ಟುಸಿರು ಬಿಟ್ಟು, ಸ್ವಲ್ಪ ಸಾವರಿಸಿಕೊಂಡು, ಕ್ಲಾಸ್ ರೋಮ್‌ಗೆ ಹೋದೆ.
   ಲೇಕ್ಚರ್ ಇಲ್ಲದ ಕ್ಲಾಸುಗಳಲ್ಲಿ ಸ್ಟೂಡೆಂಟ್‌ಗಳದ್ದೇ ದರ್ಬಾರು. ಅವರಲ್ಲೇ ಕೆಲವೊಂದಿಷ್ಟು ಮಹಾನುಭಾವರು ವಿಶಿಷ್ಟ! ಕ್ಲಾಸ್‌ಗಳನ್ನು ತೆಗೆದುಕೊಂಡು, ಅವರಿವರ ಕಾಲು ಎಳೆಯುತ್ತಾ ರೇಗಿಸುತ್ತಿರುತ್ತಾರೆ. ಹೀಗೆ ಕಾಡು ಹರಟೆಯ ಮಧ್ಯ ಒಬ್ಬನನ್ನು ಟಾರ್ಗೇಟ ಮಾಡಿ ಕಾಡಿಸುವದು ವಿದ್ಯಾರ್ಥಿ ಗುಂಪುಗಳಲ್ಲಿ ಸರ್ವೇಸಾಮಾನ್ಯ ಇದೇ ರೀತಿ ಅವತ್ತಿನ ದಿನದ ಟಾರ್ಗೇಟ ಆಗಿದ್ದು ನಮ್ಮೆಲ್ಲರ ಕುಚುಕು ಮೌನೇಶ ಅಲಿಯಾಸ ಸಿಂಹ. ಹೌದು! ಅವನನ್ನು ನಾವು ಪ್ರೀತಿಯಿಂದ ಸಿಂಹ
ಎಂದು ಕರೆಯುತ್ತೇವೆ.
   ನಮ್ಮ ಕ್ಲಾಸ್ನ ಸನ್ಯಾಸಿ ಎಂದೆ ಕರೆಯಲ್ಪಡುವ ದಿನೇಶ, ಅವತ್ತು ಅದೊಂದು ಮೂಲೆಯಲ್ಲಿ ಕುಳಿತಿದ್ದ. ಅದೇನೋ, ಸಡನಾಗಿ ಎದ್ದು  ಮೌನೇಶ ಗೋದ್ರೆಜ್ ಆಯಿಲ್ ನಿಮ್ಮ ಕೂದಲುಗಳು ಊದುರುತ್ತಿವೆಯೇ? ಹಾಗಾದ್ರೆ ಬಳಸಿ  ಮೌನೇಶ ಗೋದ್ರೆಜ್ ಆಯಿಲ್ ಎಂದು ಪಕ್ಕದಲ್ಲೆ ಕುಳಿತಿದ್ದ ಮಿಲನನ್ನು ಕೇಳಿದ. ಅದಕ್ಕೆ ಮಿಲನ ಕೂಡಾ ಧ್ವನಿಗೂಡಿಸಿದ್ದರಿಂದ, ಮೌನೇಶನ ಪಿತ್ತ ನೇತ್ತಿಗೇರಿತು.  ಲೋ.. ದಿನ್ಯಾ ಸುಮ್ಮನ ಕುಂದ್ರೂ, ಇಲ್ಲಾಂದ್ರ ನೋಡ ಮತ್ತ ಎಂದು ದಬಾಯಿಸಿದ. ಆದ್ರೆ ದಿನೇಶ ಇದಾವುದಕ್ಕೂ ಕೇರ್ ಮಾಡದೇ, ತನ್ನ ಘನಕಾರ್ಯವನ್ನು ಮುಂದುವರೆಸಿದ್ದ. ಇದನ್ನು ನೋಡಿ ಉಳಿದವರು ತಮ್ಮಂತಮ್ಮಲ್ಲೇ  ನಿಮ್ಮ ತಲೆಯಲ್ಲಿ ಹೊಟ್ಟು ಆಗಿದೇಯೇ? ಹಾಗಾದ್ರೆ ಬಳಸಿ  ಮೌನೇಶ ಗೋದ್ರೆಜ್ ಆಯಿಲ್ ಎಂದು ತಮಾಸೆ ಮಾಡಲು ಶುರುವಿಟ್ಟುಕೊಂಡರು.
  ಇನ್ನೂ ಹೊರಗಿನಿಂದ, ಯಾರಾದ್ರು? ಒಳಗಡೆ ಬಂದ್ರೆ ಸಾಕು ಎಲ್ಲರೂ ಎಕಸ್ವರದಲ್ಲಿ  ನಿಮ್ಮ ತಲೆಯಲ್ಲಿ ಕೂದಲುಗಳು ಬೆಳೆಯಬೇಕೆ? ಹಾಗಾದ್ರೆ ಬಳಲಿ, ಮೌನೇಶ ಗೋದ್ರಜ್ ಆಯಿಲ್ ಎಂದು ಕೂಗುತ್ತಿದ್ದೇವು. ಅವರೂ ಇದನ್ನು ಅರ್ಥ ಮಾಡಿಕೊಂಡು, ಮೌನೇಶ ಹತ್ರ ಹೋಗಿ  ಎಣ್ಣೆ  ಕೊಡೋ.. ಎಂದು ಕಾಡಿಸುತ್ತಿದ್ದರು. ಇದನ್ನು ನೋಡಿ ಪಾಪಾ! ಮೌನೇಶ ಸಹಿತಿ ನಮ್ಮ ಧ್ವನಿಗೆ ಧ್ವನಿಯಾಗಿ ಬಿಟ್ಟ. ನಮ್ಮ ಎಣ್ಣೆ ಪುರಾಣ ಇಷ್ಟಕ್ಕೆ ನಿಲ್ಲದೇ, ಕ್ಲಾಸ್ ನಡೆದಾಗ್ಲೂ ಶುರುವಿತ್ತು. ಕೇಲವರಂತು ಅನ್ನೋದು, ನಗೋದು ಮಾಡ್ತಾಯಿದ್ರು ಇದನ್ನು ನೋಡಿ, ನಮ್ಮ ಸರ್ ಯಾಕೆ? ನಗ್ತಾಯಿದ್ದಿರಾ? ಎಂದು ಕೇಳಿಯೇಬಿಟ್ರು. ಅದಕ್ಕೆ, ಏನಿಲ್ಲ ಸರ್ ಎಂದು, ಮತ್ತೆ ಪಾಠ ಕೇಳಲು ಶುರು ಮಾಡಿದ್ವಿ.
   ಕ್ಲಾಸ್ ಮುಗಿದ ಮೇಲೆ ಮತ್ತದೇ ಎಣ್ಣೆ ಮಾತು ಶುರುವಾಯಿ, ಕ್ಯಾಂಪಸ್ ಬಂದ್ರು ಈ ಮ್ಯಾಟರ್ ಮಾತ್ರ ನಿಂತಿರಲಿಲ್ಲ. ಅಷ್ಟೋತ್ತಿಗಾಗಲೇ ಬಸ್ ಬಂದಿದ್ದರಿಂದ ನಾನು, ಶ್ರೀ, ಬಸ್ ಹತ್ತಿ ಹೊರಟೆವು. ಆದ್ರೆ ಅವರ ಮಧ್ಯೆ ಎಣ್ಣೆ ಪುರಾಣದ ಮಾತು ಸದ್ದಿಲ್ಲದೆ ಗದ್ದಲ ಎಬ್ಬಿಸಿತ್ತು.



Sunday, 7 January 2018

ಡೊಳ್ಳಿಗೂ ಜೈ ನೇಕಾರಿಕೆಗೂ ಸೈ

ಮಂಜುನಾಥ ಗದಗಿನ ಬೆಳಗಾವಿ

ಮಹಿಳೆ ಎಂದರೆ ಕೇವಲ ಹೆರುವ ಹೊರುವ
ಯಂತ್ರ ಎಂದು ಭಾವಿಸುವ ಕಾಲವೊಂದಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಮಹಿಳೆ ಎಲ್ಲದಕ್ಕೂ ಸೈ ಎನ್ನುತ್ತಾ ಪುರುಷರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆಯುತ್ತಿದ್ದಾಳೆ. ಇದಕ್ಕೆ ನಿದರ್ಶನ ಎಂಬಂತೆ ಗಂಡು ಕಲೆ ಎಂದೆ ಖ್ಯಾತಿಯಾಗಿರುವ ಡೊಳ್ಳು ಕುಣಿತದಲ್ಲೂ ಮಹಿಳೆ ಕಾಲಿಟ್ಟು, ಆಳ ಎತ್ತರದ ಡೊಳ್ಳಿಗೆ ಹೆಗಲೊಡ್ಡಿ ಕುಣಿದು ಕುಪ್ಪಳಿಸಿ ನೋಡುಗರನ್ನು ನಿಬ್ಬೇರಗಾಗುವಂತೆ ಮಾಡುತ್ತಿದ್ದಾಳೆ.
ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಪುರುಷರಿಗೆ ಮಾತ್ರ ಸಿಮೀತವಾಗಿದ್ದ ಕ್ಷೇತ್ರಗಳಲ್ಲೂ ದಾಪು ಇಟ್ಟು ಸೈ ಎನಿಸಿಕೊಂಡಿದ್ದಾಳೆ. ಇದರ ಮಧ್ಯೆಯೇ ಸಂಸಾರದ ನೊಗ ಹೊತ್ತು ನಾನು ಅಬಲೆಯಲ್ಲ ಸಬಲೆ ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳುತ್ತಿದ್ದಾಳೆ. ನಮ್ಮ ದೇಶಿ ಕಲೆಯಾದ ಡೊಳ್ಳು ಕುಣಿತ ಹಬ್ಬ ಹರಿದಿನಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಒಂದು ಕಲೆ. ಆದರೆ, ಆಧುನಿಕತೆಯ ಮಧ್ಯೆ ಇಂದು ಡೊಳ್ಳು ಕುಣಿತ ಕಾಣ ಸಿಗುವುದೇ ಅಪರೂಪವಾಗಿದೆ. ಡೊಳ್ಳು ಕಲಾವಿದರು ಕೂಡಾ ತಮ್ಮ ಕಲೆಯನ್ನೇ ಮರೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಮಹಿಳೆಯರು ಮುಂದೆ ಬಂದು ಗಂಡು ಕಲೆಯಾದ ಡೊಳ್ಳು ಕುಣಿತವನ್ನು ಉಳಿಸಿ ಬೆಳೆಸಲು ಮುಂದಾಗಿದ್ದಾರೆ. ಇದರೊಟ್ಟಿಗೆ ಕುಟುಂಬಕ್ಕೆ ಆರ್ಥಿಕ ನೆರವಾಗುತ್ತಿದ್ದಾರೆ.
ಹೌದು! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಾಕಾಂಬರಿ ಜನಪದ ಮಹಿಳಾ ಡೊಳ್ಳು ಕುಣಿತ ಎಂಬ ಗುಂಪೊಂದನ್ನು ಕಟ್ಟಿಕೊಂಡು ಈ ಮೂಲಕ ಡೊಳ್ಳು ಕುಣಿತವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಡೊಳ್ಳು ಕುಣಿತ ಸಾಮಾನ್ಯ ಕುಣಿತವಲ್ಲ, ಈ ಕುಣಿತ ಮಾಡಲು ಪುರಷರೇ ಎದುರಿಸಿ ಬಿಡುತ್ತಾರೆ. ಯಾಕೆಂದರೆ ಕೊರಳಿಗೆ ಭಾರವಾದ ಡೊಳ್ಳು ಹಾಕಿ ಕೊಂಡು ಕುಣಿಯಬೇಕು. ಇಂತಹ ಕುಣಿತಕ್ಕೆ ಮಹಿಳೆಯರು ಮುಂದಾಗಿರುವುದು ಸೂಚಿಗದ ಸಂಗತಿಯೇ ಸರಿ.
ರೂವಾರಿ
ನೇಕಾರ ಕುಟುಂಬದ ಶಂಕ್ರವ್ವ ಮುಗಳಿ(42) ಎಂಬ ಮಹಿಳೆಯ 2008ರಲ್ಲಿ ಜನಪದ ಸಂಪ್ರದಾಯಿಕ ಸಂಘವನ್ನು ಕಟ್ಟಿಕೊಂಡು ಈ ಮೂಲಕ ಜನಪದ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದರು. ಇದೇ ಆಸಕ್ತಿಯೇ ಮುಂದೊಂದು ದಿನ ಡೊಳ್ಳು ಕುಣಿತಕ್ಕೆ ಪ್ರೇರಣೆಯಾಯಿತೆಂದು ಹೇಳುತ್ತಾರೆ ಶಂಕ್ರವ್ವ. ನಂತರ ದಿನಗಳಲ್ಲಿ ಈ ಸಂಘ ಶಾಕಾಂಬರಿ ಜನಪದ ಮಹಿಳಾ ಡೊಳ್ಳು ಕುಣಿತ ಸಂಘ ಎಂದು ಮರು ನಾಮಕರಣ ಹೊಂದಿತು.

ಎಲ್ಲರೂ ನೇಕಾರರು: 

ಆಧುನಿಕತೆಯ ಭರಾಟೆಯಲ್ಲಿ ನೇಕಾರಿಕೆ ಅವಸಾನದತ್ತ ಸಾಗುತ್ತಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದಂತಾಗಿದೆ. ಹೀಗಾಗಿ ನೇಕಾರ ಮಹಿಳೆಯರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈ ಗುಂಪಿನಲ್ಲಿ ಇರುವವರು ಎಲ್ಲರೂ ನೇಕಾರಿಕೆ ಕುಟುಂಬದವರು ಎನ್ನವುದು ವಿಶೇಷ. ಸದ್ಯ ಈ ಡೊಳ್ಳು ಕುಣಿತ ತಂಡದಲ್ಲಿ 16 ಜನ ಮಹಿಳೆಯರು ಇದ್ದಾರೆ. ಇವರೆಲ್ಲರೂ ಮನೆಯ ಕೆಲಸದ ನಡುವೆಯೇ ಡೊಳ್ಳು ಕುಣಿತ ಅಭ್ಯಾಸ ಮಾಡಿ ವಿವಿಧೆಡೆ ಪ್ರದರ್ಶನ ನೀಡುತ್ತಿರುವುದು ಸ್ತ್ರೀ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ. ಇನ್ನೊಂದು ವಿಶೇಷವೆಂದರೆ ಈ ಗುಂಪಿನಲ್ಲಿ ಎಲ್ಲರೂ 40 ವಯಸ್ಸಿಕ್ಕಿಂತ ಮೇಲಿನವರು ಎಂಬುವುದು. ಅಷ್ಟೇ ಅಲ್ಲದೇ ಈ ಗುಂಪಿನಲ್ಲಿ ದಾನಮ್ಮ ಪಟ್ಟದಕಲ್ಲ ಎಂಬ 60 ವಯಸ್ಸಿನ ಅಜ್ಜಿಯೂ ಇದ್ದಾಳೆ ಎಂಬುವುದು ಮತ್ತೊಂದು ವಿಶೇಷ.

ವಿವಿಧ ಪ್ರಕಾರದ ಪ್ರದರ್ಶನ:


ಕೊರಳಿಗೆ ಡೊಳ್ಳು ಹಾಕಿಕೊಂಡು ಈ ಮಹಿಳೆಯರು ನಾನಾ ಕಸರತ್ತುಗಳನ್ನು ಪ್ರದರ್ಶನ ಮಾಡುತ್ತಾರೆ. ಇವರು ಮಾಡುವ ಪ್ರಕಾರಗಳನ್ನು ಜನರು ಕಣ್ಣರಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುತ್ತಾರೆ. ತಾಳೆ, ತಾಸೆಯಂತಹ ಪ್ರಕಾರಗಳು ಈ ಮಹಿಳೆಯರ ಬತ್ತಳಿಕೆಯಲ್ಲಿವೆ. ಅಷ್ಟೇ ಅಲ್ಲದೇ ಗೊಂಬೆ ಕುಣಿತದಲ್ಲಿ ಈ ಮಹಿಳೆಯರು ಪ್ರಾವಿನ್ಯತೆ ಪಡೆದಿದ್ದಾರೆ. ಈಗಾಗಲೇ ಈ ಮಹಿಳಾ ಡೊಳ್ಳು ಕುಣಿತ ತಂಡ ಮಹಾರಾಷ್ಟ್ರ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇವರ ಕಲಾ ಪೋಷಣೆ ನೋಡಿ ಗೋಕಾಕದ ಗುರು ಸ್ಮತಿ ಬಳಗ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕಲಾ ತಂಡಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿ, ಮತ್ತಷ್ಟು ಉತ್ತುಂಗದ ಶಿಸ್ತಿಗೆ ಡೊಳ್ಳು ಕುಣಿತವನ್ನು ಈ ಮಹಿಳೆಯರು ತೆಗೆದುಕೊಂಡು ಹೋಗಲಿ ಎಂಬುವುದು ಕಲಾಪ್ರೇಕ್ಷಕರ ಆಶಯ. ಈ ತಂಡ ನಿಮ್ಮೂರಿನ ಜಾತ್ರೆ, ಸಮಾವೇಶ, ಸಮಾರಂಭಗಳಲ್ಲಿ ಹಜ್ಜೆ ಹಾಕಬೇಕೆ ಹಾಗಿದ್ದರೆ ಮೊ.ನಂ 95381 41024 ಸಂಪರ್ಕಿಸಿ.
--
ಡೊಳ್ಳು ಕುಣಿತ ಕೇಲವ ಗಂಡು ಕಲೆ ಎಂದು ಕರೆಯುತ್ತಿದ್ದರು. ಆದರೆ, ಆ ಕಲೆಗೆ ಮಹಿಳೆಯು ಸೈ ಎಂಬುವುದನ್ನು ತೊರಿಸಲು ಡೊಳ್ಳು ಕುಣಿತವನ್ನು ಆರಂಭಿಸಿ, ಡೊಳ್ಳು ಕುಣಿತ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಆರ್ಥಿಕ ನಿರ್ವಹಣೆಯನ್ನು ಮಾಡುತ್ತಿದ್ದೇವೆ.

ಶಂಕ್ರವ್ವ ಮುಗಳಿ, ತಂಡದ ಸಾರಥಿ


Thursday, 14 September 2017

ಕಲೆಯಲ್ಲಿ ಕಲಾಪ್ರವೀಣ ಈ ಪ್ರಭಾಕರ

ಕಲೆ ಕಲಾವಿದನ ಸ್ವತ್ತು. ಇದು ಎಲ್ಲರಿಗೂ ಸಿದ್ದಿಸುವಂತಹದ್ದು ಅಲ್ಲ. ಕಲೆ ಒಲಿಯಬೇಕಾದರೆ ಶ್ರದ್ಧೆ, ಏಕಾಗ್ರತೆ ಅವಶ್ಯಕ. ಇಂತಹ ಚಿತ್ರಕಲೆಯನ್ನು ಗುರುವಿಲ್ಲದೇ ಶ್ರದ್ಧೆ ಮೂಲಕ ಒಳವಡಿಸಿಕೊಂಡಿದ್ದಾರೆ ಪ್ರಭಾಕರ ಗೌಡ.
ಹೌದು! ಕಲೆ ಕಲಿಯಬೇಕಾದರೆ ಗುರು ಬೇಕಂತಿಲ್ಲ. ಶ್ರದ್ಧೆ, ಆಸಕ್ತಿ ಇದ್ದರೆ ಸಾಕು. ಪ್ರಭಾಕರ ಗೌಡ ಅವರು ಅಷ್ಟೇ ಚಿಕ್ಕ ವಯಸ್ಸಿನಲ್ಲಿ ಪುಸ್ತಕಗಳಲ್ಲಿ ಇರುತ್ತಿದ್ದ ಚಿತ್ರಗಳನ್ನು ನೋಡಿಕೊಂಡು ಅವುಗಳ ತರಹ ಬಿಡಿಸಿಯೇ ಇಂದು ನಾಲ್ಕು ಜನ ಮೆಚ್ಚುವ ಒಳ್ಳೆಯ ಪೆನ್ಸಿಲ್ ಕಲಾವಿದರಾಗಿದ್ದಾರೆ. ಇವರು ಚಿತ್ರಿಸುವ ಚಿತ್ರಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.
ಪ್ರಭಾಕರ ಗೌಡ ಮೂಲತಃ ಉಕ ಸಿದ್ದಾಪುರನವರು. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮುಗಿಸಿದ್ದಾರೆ. ಪ್ರಸುತ್ ಹೈದ್ರಾಬಾದನಲ್ಲಿ ವೆಬ್ ಮಿಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಕೊಂಡ ಪ್ರಭಾಕರ ಶಾಲಾಮಟ್ಟದಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನ ಪಡೆದುಕೊಂಡಿದ್ದಾರೆ. ಹೀಗೆ ಬಹುಮಾನ ಪಡೆದ ಸಂದರ್ಭದಲ್ಲಿ ಅವರ ಗುರುಗಳು ನೀಡಿದ ಶಬ್ಬಾಶಗಿರಿ ಅವರಲ್ಲಿ ಚಿತ್ರಕಲೆ ಮತ್ತಷ್ಟು ಆಸಕ್ತಿ ಮೂಡಿಸಿತು. ನಂತರ ದಿನಗಳಲ್ಲಿ ಪ್ರಭಾಕರ ಬಿಳಿ ಹಾಳೆ ಮೇಲೆ ಪೆನ್ಸಿಲ್ ಹಿಡಿದು ಚಿತ್ರಿಸ ತೊಡಗಿದ್ದರು. ಹೀಗೆ ಅವರು ಇಂದು ಉತ್ತಮ ಪೆನ್ಸಿಲ್ ಚಿತ್ರ ಕಲಾವಿದನಾಗಿ ರೂಪಗೊಂಡಿದ್ದಾರೆ. ಆದರೆ, ಅವರ ಕಲೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಮಾತ್ರ ದೊರೆತ್ತಿಲ್ಲ. ತಾವು ಮಾಡಿದ್ದ ಸ್ಕೆಚ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡುವ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಹುಟ್ಟು ಹಾಕಿಕೊಂಡಿದ್ದಾರೆ.
ಬಾಹುಚಿತ್ರ ಬಿಡುಗಡೆ ಸಂದರ್ಭದಲ್ಲಿ ಇವರು ಚಿತ್ರಿಸಿದ ಅನುಷ್ಕಾ ಹಾಗೂ ಪ್ರಭಾಸ ಅವರ ರೋಮ್ಯಾಂಟಿಕ್ ಚಿತ್ರವನ್ನು ಪ್ರಭಾಸ ಅವರೇ ತಮ್ಮ ಫೆಸ್ಬುಕ್‌ನಲ್ಲಿ ಅಪಲೋಡ ಮಾಡಿದ್ದಾರೆ. ಇವರ ಕಲೆ ಮೆಚ್ಚಿ ಹವಾರು ಅಭಿಮಾನಿಗಳು ಇವರಿಗೆ ಭೇಷ್ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಪೆಂಟ್ ಆರ್ಟ್ ಮಾಡಬೇಕು ಎಂಬುವುದು ಪ್ರಭಾಕರ ಅವರ ಆಸೆಂವಾಗಿದೆ. ಇವರು ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿ ಇದ್ದ ಹಾಗೇ ಚಿತ್ರಿಸುತ್ತಾರೆ. ಇದು ಅವರಿಗೆ ಒಲಿದ ಅದ್ಭುತ್ ಶಕ್ತಿ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ಮುಂದಿನ ದಿನಗಳಲಿ ಅವಕಾಶ ಸಿಕ್ಕರೆ ಚಿತ್ರಕಲಾ ಪ್ರದರ್ಶನ ಏರ್ಪಡಿಸುವ ಇರಾದೆಯನ್ನು ಪ್ರಭಾಕರ ಗೌಡ ಹೊಂದಿದ್ದಾರೆ. ಅವರ ಈ ಪೆನ್ಸಿಲ್ ಸ್ಕೆಚ್‌ಗೆ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿ. ಅವರಿಗೆ ಅವರ ಕಲೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಲಿ ಎಂಬುವುದು ಕಲಾ ಅಭಿಮಾನಿಗಳ ಆಶಯ.

ಮಂಜುನಾಥ ಗದಗಿನ ಬೆಳಗಾವಿ









Wednesday, 18 January 2017

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..!!

    ಇಂದು-ನಾಳೆ ಮುಗಿಯದೇ,ನಿತ್ಯ ನಿರಂತರ ಹರಿಯುವುದೇ ಸ್ನೇಹದ ಕಡಲು. ಆ ಕಡಲಲ್ಲಿ ನಮ್ಮ ನೆನೆಪುಗಳು ಮಿಂಚು ದೋಣಿಗಳು ಇದ್ದ ಹಾಗೆ, ಬಂದು ಹೀಗೆ ಹೋಗುತ್ತೆ. ಅದರೊಟ್ಟಿಗೆ ಸಾಗರದ ಅಲೆಯ ಹಾಗೆ ಮಧುರಕ್ಷಣಗಳನ್ನು ಹೊತ್ತುಕೊಂಡು ಬಂದು ಎದೆಯಾಳದಲ್ಲಿ ತುಂಟ ನೆನಪುಗಳನ್ನು ಸುರಿಸುತ್ತವೆ.
ಬೆಟ್ಟದಂತಹ ಕನಸುಗಳೊಂದಿಗೆ, ಒಂದು ಭರವಸೆಯೊಂದಿಗೆ ಅದೇಷ್ಟೋ ವಿದ್ಯಾರ್ಥಿಗಳು ತಂದೆ-ತಾಯಿ,ಬಂಧುಬಳಗ, ಬಾಲ್ಯದ ಸ್ನೇಹಿತರುನ್ನು ಬಿಟ್ಟು ಕಾಣದ ಊರಿಗೆ ಬಂದು ಶಿಕ್ಷಣ ಪಡೆಯುತ್ತಾರೆ. ಅದರಲ್ಲೂ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದರೆ ಊರು ಬಿಟ್ಟು ಬರಲೇ ಬೇಕು. ಹ್ಞೂ! ನಾನು ಕೂಡಾ ಒಂದು ಚಿಕ್ಕ ಭರವಸೆಯೊಂದಿಗೆ ನಗರಕ್ಕೆ ಅಂಬೆಗಾಲಿಟ್ಟವನು. ಗೊತ್ತಿಲ್ಲದ ಊರಿಗೆ ಬಂದ ಮೇಲೆ ಪ್ರಾರಂಭದಲ್ಲಿ ಎಡವುದು ಸಹಜ. ಮತ್ತೆ ಚೇತರಿಸಿಕೊಂಡು ಮುನ್ನುಗುವದು ಕಾಲ ಸಹಜ. ನಾನು ಕೂಡಾ ಪ್ರಾರಂಭದ ಎಲ್ಲ ಕಷ್ಟಗಳನ್ನು ಅನುಭವಿಸಿ ಸ್ನಾತಕೋತ್ತರ ಮುಗಿಸಿದವನೇ. ಆದರೆ ನನ್ನ ಆ ಕಷ್ಟಗಳಿಗೆ, ಸುಖಗಳಿಗೆ ಹೇಗಲಾಗಿ ನಿಂತುಕೊಂಡಿದ್ದು ನನ್ನ ಸ್ನೇಹಿತರು.
ಅವು ಕಾಲೇಜಿನ ಆರಂಭದ ದಿನಗಳು. ಕಂಡಷ್ಟು ಬಗೆದಷ್ಟು ಎಲ್ಲವೂ ಹೊಸದು. ಅದರೊಟ್ಟಿಗೆ ಹೊಸ ಮುಖಗಳ ದರ್ಶನ. ಅನಂತರ ಅವೇ ಮುಖಗಳು ಮಾಗದರ್ಶ ನೀಡಿದ್ದು ಈಗ ಇತಿಹಾಸ. ಕಾಲಗಳು ಗತಿಸಿದರು ನೆನಪುಗಳು ಗತಿಸವು ಎಂಬುದಕ್ಕೆ ಕ್ಯಾಂಪಸನ್ ಕೆಲವು ಸ್ನೇಹದ ಸಹಾಯಗಳು,ಕಿಟಲೆಗಳು, ಮುನಿಸು, ದ್ವೇಷ, ಜಗಳ, ಕಾಡು ದಾರಯಲ್ಲಿ ಕಾಡಿಸಿದ್ದು ಎಲ್ಲವೂ ನೆನಪಿನ ದೋಣಿಯಲ್ಲಿ ಸಾಗುವವೇ.
ದಿನದ ಖರ್ಚಿಗೆ ಎಂದು ತಂದಿದ್ದ ಸಾವಿರ ರೂಪಾಯಿ, ಕಾಡುದಾರಿ ಮಧ್ಯೆ ಕಳೆದು ಹೋದಾಗಿ,ಊರಿಗೆ ಹೋಗಲು ದುಡ್ಡು ಇಲ್ಲದಿದ್ದಾಗ, ನನ್ನ ಕಷ್ಟವನ್ನು ಆಲಿಸಿ, ತನ್ನ ಜೇಬಿನಿಂದ ನೂರರ ಮೂರು ನೋಟುಗಳನ್ನು ನನ್ನ ಕೈಗಿಟ್ಟು ಮಂಜು ಈ ದುಡ್ಡು ತೆಗೆದುಕೊಂಡು ಹೋಗು, ನಿನ್ನ ಖರ್ಚಿಗೂ ಆಗುತ್ತದೆ, ನೀನು ಊರಿಂದ ಬಂದ ಮೇಲೆ ಕೊಡುವಂತೆ ಎಂದು ಕಷ್ಟ ಕಾಲದಲ್ಲಿ ಕನಿಕರದಿಂದ ಸಹಾಯ ಮಾಡಿದ ಸುರೇಶಣ್ಣ. ಎಕ್ಸಾಂ ಬಂದಾಗ ವಾರ್ಡನ ಎದುರು ಹಾಕಿಕೊಂಡು ಸ್ನೇಹಕ್ಕೆ ತನ್ನ ಹಾಸ್ಟೇಲ್‌ನಲ್ಲಿ ನೆಲೆಸಲು ಅವಕಾಶ ಕೊಡುತ್ತಿದ್ದ, ಪ್ರತಿದಿನ ಮಧ್ಯಾಹ್ನ ತುತ್ತು ಊಟ ಕೊಡುತ್ತಿದ್ದ ಯಲ್ಲಪ್ಪ, ಪ್ರತಿದಿನ ದುಡ್ಡು ಖರ್ಚು ಮಾಡಿ ಲೇಖನಗಳನ್ನು ಟೈಫ ಮಾಡಲು ಹೋಗುತ್ತಿದ್ದಾಗ ಅಣ್ಣ ನನ್ನ ಲ್ಯಾಫಿ ಇದೆ. ಮನೆಗೆ ತೆಗೆದುಕೊಂಡು ಹೋಗಿ ಟೈಫ್ ಮಾಡು ಎಂದು ಸಹೃದಯ ತೋರಿದ ಮಧುಶ್ರೀ. ಸ್ಟೋರ್ಟ ಟೀಶರ್ಟಗೆ ಕೊಡಲು ದುಡ್ಡು ಇಲ್ಲದಾದ ತನ್ನ ಕೈಯಿಂದ ದುಡ್ಡು ನೀಡಿದ ಸುಬ್ಬು, ಪ್ರತಿದಿನ ಪ್ರಯಾಣದಲ್ಲಿ ಜತೆಯಾಗಿ ಇರುತ್ತಿದ್ದ ಶ್ರೀ ಹೀಗೆ ಸ್ನೇಹ ಎಂಬ ಸುಂದರ ಕಡಲನ್ನು ತೆರೆಯುತ್ತಾ ಹೋದ ಹಾಗೆ ಅದರ ಹರವು ಹೆಚ್ಚಾಗುತ್ತಾ ಸಾಗುತ್ತದೆ.
  ಲೇಖನ ಕಳುಹಿಸಲು ಲ್ಯಾಫಿ ಕೊಡಲಿಲ್ಲ ಎಂದು, ಮಲ್ಲಿಕಾರ್ಜುನ ಜೊತೆ ಮಾತು ಬಿಟ್ಟದ್ದು, ಅಕ್ಕನ ಮದುವೆಗೆ ಕರೆದಿಲ್ಲ ಎಂದು ಮೂನಿಸಿಕೊಂಡದ್ದು, ಕಾಲೇಜಗೆ ನನ್ನ ಬಿಟ್ಟು ಹೋದ ಎಂದು ಗೆಳೆಯನೊಂದಿಗೆ ಸೆಟಗೊಂಡಿದ್ದು, ಎಕ್ಸಾಂ ನಲ್ಲಿ ತೊರಿಸಲಿಲ್ಲ ಎಂದು ಕೋಪಗೊಂಡಿದ್ದು, ಹಾಸ್ಟೇಲ್ ದಾರಿಯಲ್ಲಿ ಮಾವು ಕದ್ದು ತಿನ್ನಂದ್ದು, ರೈಲ್ವೆ ಹಳಿಗಳ ಮೇಲೆ ಬೇಕಾಬಿಟ್ಟಿ ಸೇಲ್ಪಿ ತೆಗೆದುಕೊಂಡದ್ದು, ಶ್ರೀನಗರ ಸರ್ಕಲ್‌ನಲ್ಲಿ ನಿಂತು ಸ್ನೇಹಿತರೊಟ್ಟಿಗೆ ಹುಡ್ಗಿಯರಿಗೆ ಕಾಳಹಾಕಿದ್ದು, ಒಂದೇ ಬೈಕ್ ಮೇಲೆ ಪಂಚಪಾಂಡವರು ಪ್ರಯಾಣಿಸಿದ್ದು, ಒಂದೇ ಪ್ಲೇಟ್‌ನಲ್ಲಿ ಮೂವರು ಊಟ ಮಾಡಿದ್ದು, ನೇರಳೆ ಹಣ್ಣಿಗಾಗಿ ಗಿಡ ನೇತಾಡಿದ್ದು ಎಲ್ಲವು ಸ್ನೇಹದ ಸುಮಧುರ ಕ್ಷಣಗಳೆ. ಆದರೆ ಆ ಸ್ನೇಹಿತರು ಈಗ ನನ್ನೊಟ್ಟಗಿಲ್ಲ. ಆದರೆ ಅವರ ನೆನಪು ಮಾತ್ರ ನನ್ನೊಟ್ಟಿಗೆ ಸದಾ ಇರುತ್ತವೆ. ವೃತ್ತಿ ಬದುಕಿನಲ್ಲಿ ಎಲ್ಲ ಸ್ನೇಹಿತರು ಒಂದೊಳ್ಳೆ ಹುದ್ದೆ ಪಡೆಕೊಳ್ಳಿ ಎಂದು ಆಶಿಸುವ ನಿಮ್ಮ ಸ್ನೇಹಿತ ಮಂಜು.
ಮಂಜುನಾಥ ಗದಗಿನ

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...