Monday, 28 January 2019

ಫೆಸ್ಬುಕ್ ಲೈಫ್ ಇಷ್ಟೇನೆ..!


ಆ..ಗಿಜಿಗಿಜಿಗಿಜಿ...ಅಯ್ಯೋ...ಅಯ್ಯೋ..ಲೈಪು ಇಷ್ಟೇನೆ
ಕಿರಿಕಿರಿ ಕಯ ಕಯ ಕೂ ಕೋ..ಲೈಪು ಹಂಗೇನೆ...

ಹೋ....
ಫೆಸ್ಬುಕ್ನಲ್ಲಿ ಎಂಟ್ರಿ ಕೊಟ್ಟು ಪ್ರೋಪೈಲ್ಗೆ ಒಳ್ಳೆ ಪೋಟೋ ಹಾಕಿ ಲೈಕು, ಕಂಮೆಂಟು ಪಡಕೋ..
ಲೈಪು ಇಷ್ಟೇನೆ

ಹಂಗು ಹಿಂಗು ಎಡಿಟು ಮಾಡಿ, ಗೆಳೆಯರು ಹೇಳೋ ಪೋಟೋ ಹಾಕಿ ಭೇಷ ಅನಿಸ್ಕೋ
ಲೈಪು ಇಷ್ಟೇನೆ.

ಹುಡ್ಗಿರ ಇಷ್ಟ ಪಡುವ ಹಾಗೆ ಡ್ರೆಸು ಮಾಡ್ಕೋ, ಒಳ್ಳೋಳ್ಳೆ ಫೋಟೋ ತೆಗೆದು ಫೆಸ್ಬುಕಗೆ ಹಾಕ್ತಾ ಇರು, ಲೈಪು ಇಷ್ಟೇನೆ..

ನಮ್ಮ ಫ್ರೆಂಡ್ಸು ಸ್ವಲ್ಪ ಪಾಪದವರು, ಲೈಕು, ಕಮೆಂಟು ಕೊಡೋಕೆ ಯೋಚಿಸ್ತಾರೆ
ಆದ್ರು ಪೋಟೋಹಾಕ್ತಾ ಇರು,
ಲೈಪು ಇಷ್ಟೇನೆ...

ಆ ಗಿಜಿಬಿಜಿಗಿಜಿ ಓ..ಓ..ಓ
ಕಿರಿಕಿರಿ ಕಯ ಕಯ ಕೊ ಕೂ ಕೋ
ಕಿರಿಯರ ಸರಿಗಮ ಅ ಆ ಇ ಉ ಊ ಎ ಏ ಒ ಓ ಓ

ಗೆಳೆಯಾ ನಿನಗೆ ಟೆನ್ಶನ್ ಯಾಕೊ, ಬೇಕಾದ್ರೆ ನೀನು ಪೋಟೋ ಹಾಕೋ, ಊರಲ್ಲಿ ಹೋದ ಮಾನ ಫೆಸ್ಬುಕ್ನಲ್ಲಿ ಪಡಕೋ ಲೈಪು ಇಷ್ಟೇನೆ.

ಗೆಳೆಯಾ ನೋಡು ಬರವಣಿಗೆ ಬಿಗಿಯಾಗ್ ಹಿಡ್ಕೊ ವೈರಿಗಳು
ಕೈಯ ಮುಗಿಯಲಿ ನಿಂಗೆ ಲೃಪು ಇಷ್ಟೇನೆ
ಹುಡ್ಗಾ ಹುಡ್ಗಿ ಚಾಟು ಮಾಡಿ, ಪ್ರೀತಿ ಪ್ರೇಮ ಅಂತ ಸುತ್ತಾಡಿ ಲವ್ವರ ಎಲ್ಲ್ ಹೋದ್ಲಂತ ಗೂಗಲ್ನಲ್ಲಿ ಹುಡುಕು ಲೈಪು ಇಷ್ಟೇನೆ

ಲಾಗೌಟ್ ಆಗ್ಬೇಡ ಫೆಸ್ಬುಕ್ ನಿಂದ ಪ್ರೋಪೈಲ್ ನಿಂದೇನೆ ಎಂಟ್ರಿ ಆದ ಮೇಲೆ ಲೈಪು ಇಷ್ಟೇನೆ..

ನೀ ಹಾಕಿದ್ದ ಫೋಸ್ಟಗೆ ಲೈಕ್
ಬರಲಿಲ್ಲ ಅಂತ ಬೇಜಾರ ಆಗಬ್ಯಾಡ, ಮುಂದ ಅವರ ಕಮೆಂಟು ಮಾಡ್ಯಾರು ಲೈಪು ಇಷ್ಟೇನೆ

ಲವ್ ಬಗ್ಗೆ ಯದ್ವಾ ತದ್ವಾ ಬರೆದು ನೀನು ಹಚ್ಚನಾಗಿ ತೀರುಗಬ್ಯಾಡ ಜೀವನ ಮುಂದ
ಒಜ್ಜಿ ಅಕೈತಿ ಲೈಪು ಇಷ್ಟೇನೆ

ಹಗಲೋತ್ತಲೆ ಮೊಬೈಲ್ಗೆ ಪವರ
ಬ್ಯಾಂಕ್ ಹಾಕಿ ಹುಡ್ಗಿಗೆ ಚಾಟ್ ಮಾಡ್ಬ್ಯಾಡ, ಪವರ್ ಬ್ಯಾಂಕ್ ಖಾಲಿ ಆದ್ರ ಲೈಪು ಕಷ್ಟನೇ

ಇಷ್ಟ ಇದ್ರು ಲೈಕು ಮಾಡು
ಕಷ್ಟ ಆದ್ರು ಕಮೆಂಟು ಮಾಡು
ಒಮ್ಮೆ ಎದುರಿಗೆ ಬಂದ್ರೆ ಮಾತಾಡ್ಸು ಲೈಪು ಇಷ್ಟೇನೆ...ಲೈಪು ಹಿಂಗೇನೆ
*ಮಂಜುನಾಥ ಗದಗಿನ*💐

Sunday, 20 January 2019

ಬನಶಂಕರಿ ಜಾತ್ರ್ಯಾಗ ನಾಟಕ ಗುಂಗು

ಮಂಜುನಾಥ ಗದಗಿನ

ಬಾದಾಮಿ ಬನಂಕರಿ ಜಾತ್ರೆ ಅಂದ್ರ,ಬಾಲಕರಿಂದ ಹಿಡಿದು ಹಣ್ಣ ಹಣ್ಣ ಮುದುಕರವರೆಗೂ ಶ್ಯಾನಾ ಪ್ರೀತಿ. ಯಾಕಂದ್ರ ತಂದೆ-ತಾಯಿ ಬಿಟ್ಟ ಈ ಜಾತ್ರೆನಲ್ಲಿ ಎಲ್ಲವೂ ದೊರೆಯುತ್ತದೆ ಎಂಬ ಲೋಕಾರೂಢಿ ಮಾತಿದೆ. ಅದು ಕರೇ ಕೂಡಾ ಹೌದು, ಇನ್ನ ಜಾತ್ರೆಯಲ್ಲಿ ಮನರಂಜನೆಗೆನೂ ಕಡಿಮೆ ಇಲ್ಲ ಈ ಸಾರಿ ಭರ್ಜರಿ ನಾಟಕಗಳು ಬಂದಿವೆ. ಅದರಲ್ಲೂ ಕಾಮಿಡಿ ಕಿಲಾಡಿ, ಮಜಾಭಾರತನಲ್ಲಿ ಮಿಂಚು ಹರಿಸಿದ ಸ್ಟಾರ್ ನಟರ ದಂಡೆ ಇದೆ. ಉದಾ. ನಮ್ಮ ರಾಮದುರ್ಗ ಅಪ್ಪಣ್ಣ ರಾಮದುರ್ಗ, ಸಂದಾನಂದ ಕಾಳೆ, ನೀಲಾ ಜೇವರ್ಗಿ, ಚಿಲ್ಲರೇ ಮಂಜ ಅಲಿಯಾಸ ಮಂಜುನಾಥ ಗುಡ್ಡದವರ, ರಾಮದುರ್ಗದ ಸದ್ಯ ದಂಡುಪಾಳ್ಯದಲ್ಲಿ ನಟನಾ ಪಾರಮ್ಯ ಮೇರೆದ ವಿಠ್ಠಲ್ ಪರೀಟ ಹೀಗಾ ಸ್ಟಾರ್ ನಟರು ನಗುವಿನ ಕಚಗುಳಿ ಇಡಲು ಅಣಿಯಾಗಿದ್ದಾರೆ. ಒಟ್ಟನಲ್ಲಿ ಈ ಬಾರಿ ಜಾತ್ರಿನಲ್ಲಿ ನಾಟಕ ಗುಂಗ ಜೋರ್ ಐತಿ.
ಹಿಂದೊಮ್ಮೆ ನಾಟಕ ರತ್ನ ಗುಬ್ಬಿ ವೀರಣ್ಣ, ಏಳಗಿ ಬಾಳಪ್ಪ, ಕಂದಗಲ್ಲ ಹಣಮಂತರಾಯ, ಚಿತ್ತರಗಿ ಗಂಗಾಧರ ಶಾಸ್ತ್ರಿ, ಡಾ. ರಾಜಕುಮಾರ ಹಾಸ್ಯ ಕಲಾವಿದ ನರಸಿಂಹರಾಜು, ಸೇರಿದಂತೆ ಮುಂತಾದವರು ಈ ಜಾತ್ರೆಯಲ್ಲಿ ಬಂದು ನಾಟಕವನ್ನಾಡಿ ಹೋಗಿರುವುದು ಒಂದು ವಿಶೇಷ. ಇವರ ಪೌರಾಣಿಕ, ಭಕ್ತಿ ಪ್ರಧಾನ ನಾಟಕಗಳನ್ನು ಹಿರಿಯರು ಇಂದಿಗೂ ಮೆಲಕು ಹಾಕುತ್ತಾರೆ.
ಚಲನಚಿತ್ರ ನಟ, ನಟಿಯರಾದ ವಿನಯಾಪ್ರಸಾದ, ಪ್ರೇಮಾ, ಉಮಾಶ್ರೀ, ಟೈಗರ್ ಪ್ರಭಾಕರ, ಬಿರಾದಾರ, ಶ್ರುತಿ, ಟೆನ್ನಿಸ್ ಕೃಷ್ಣ, ದಾಮಿನಿ, ಇನ್ನು ಅನೇಕ ಧಾರಾವಾಹಿ ಕಲಾವಿದರು ಸೇರಿದಂತೆ ಕಿರು ತೆರೆಯ ನಟ ನಟಿಯರು ಬಂದು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರೊಂದಿಗೆ ಇದೀಗ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ, ಸೇರಿದಂತೆ ಅನೇಕ ನಟರು ಇಲ್ಲಿ ಕಲೆ ಪ್ರದರ್ಶನ ನೀಡಿದ್ದನನ್ನು ನೆನೆಸಿಕೊಳ್ಳಲೇ ಬೇಕು.
----
ಈ ಬಾರಿ ಬಂದ ನಾಟಕಗಳು..

1. ಹೆಣ್ಣು ಹೆತ್ತವಳು.
2. ಪ್ಯಾಟಿ ಹುಡಿಗ್ಯಾರ.
3. ಬಂದರ ನೊಡ ಬಂಗಾರಿ.
4. ತೊದಲ ಗಂಗಿ ಹರಿದಾಳ ಅಂಗಿ.
5. ನಿದ್ದಿಗೆಡಿಶ್ಯಾಳ ಬಸಲಿಂಗಿ.
6. ಹುಚ್ಚ ಹಿಡಿಶ್ಯಾಳ ಹುಚ್ಚಮಂಗಿ.
7. ಅವ್ವ ಬಂಗಾರಿ ಮಗಳ ಸಿಂಗಾರಿ.
8. ಮಂಗಳೂರು ಮಾಣಿ ಹುಬ್ಬಳ್ಳಿ ರಾಣಿ.
9. ಕೈ ಕೊಟ್ಟ ಹುಡಗಿ ತಲೆ ಕೆಟ್ಟ ಹುಡುಗ.
10. ಅಪ್ಪ ಮನ್ಯಾಗ ಮಗಳ ಸಂತ್ಯಾಗ.
11. ಅತ್ತಿ ಅಟ್ಟದ ಮ್ಯಾಗ ಮಾವ ಕಟ್ಟಿಮ್ಯಾಗ.
12. ಬಂಡ ಬಡ್ಡಿ ಮಗ

Friday, 4 January 2019

ನಟನೆಯಲ್ಲಿ ಅಪ್ಪಟ್ಟ ಅಪರಂಜಿ ಈ ಅಪ್ಪಣ್ಣ



ಮಂಜುನಾಥ ಗದಗಿನ
ನಾವು ಮಾಡುವ ಅದೇಷ್ಟೋ ತರ‌್ಲೆ ತುಂಟಾಟಗಳು ನಮ್ಮ ಭವಿಷ್ಯದ ಭದ್ರ ಬುನಾದಿಗೆ ಕಾರಣವಾಗುತ್ತದೆ. ಅದೇ ನಮ್ಮ ಏಳ್ಗೆಗೆ ಕಾರಣವಾಗುತ್ತದೆ ಎಂದರೆ ನಂಬಲೆ ಬೇಕು. ಹೌದು! ಇವರು ಮಾಡುತ್ತಿದ್ದ ಕೋತಿ ಚೇಷ್ಠೆ, ತಂಟಾಟಗಳೆ ಇವರಿಗೆ ವರವಾಗಿ ಇಂದು ದೊಡ್ಡ ಕಲಾವಿದರಾಗಿ ಬೆಳೆಯಲು ಕಾರಣವಾಗಿದೆ.
ಅವರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಅಪ್ಪಣ್ಣ(ಅಪ್ಪು) ರಾಮದುರ್ಗ. ಅಪ್ಪಣ್ಣ ನಾಲ್ಕು ವರ್ಷವರಿದ್ದಾಗ ಅವರ ತಂದೆ ತೀರಿಕೊಂಡರು. ಆವಾಗ ಅಪ್ಪಣ್ಣ ಅವರ ತಾಯಿಗೆ ಪ್ರಪಂಚ ಎಂದರೆ ಏನು ಎಂಬ ಅರಿವೇ ಇರಲಿಲ್ಲ. ಇಂತಹ ಸಮಯದಲ್ಲೂ ಆ ತಾಯಿ ನಾಲ್ಕು ಜನರ ಮನೆಯ ಮುಸುರೆ ತಿಕ್ಕಿ ತನ್ನ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಸಾಕಿ ಸಲುಹಿದರು. ಆದರೆ, ಅಪ್ಪಣ್ಣ ಮಾತ್ರ ತರ‌್ಲೆ ಮಾಡಿಕೊಂಡು, ಅವರಿವರನ್ನು ನಗಿಸುತ್ತಾ ಇದ್ದರು. ಆದರೆ, ಅಪ್ಪಣ್ಣ ಅವರ ತಾಯಿಗೆ ಮಾತ್ರ ಇದು ಇಷ್ಟವಾಗದೇ ಪ್ರತಿದಿನ ಬೈಯುತ್ತಿದ್ದರು. ಆದರೆ, ರಾಮದುರ್ಗ ಕಲಾವಿದರಾದ ಅಂತಾಪುರ ಬಾಬು ಹಾಗೂ ಅಶೋಕ ಗೋನಬಾಳ ಅವರು, ಅಪ್ಪಣ್ಣವರ ಈ ತರ‌್ಲೆ ತುಂಟಾಟದಲ್ಲಿ ಇದ್ದ ಆ ಒಂದು ಹಾಸ್ಯವನ್ನು ಗುರುತಿಸಿ, ಅಪ್ಪಣ್ಣನ ನಿನ್ನಲ್ಲಿ ಒಂದು ಅಗಾಧ ಹಾಸ್ಯ ಕಲೆ ಇದೆ. ಈ ಕಲೆಯನ್ನು ಹಾಳು ಮಾಡಿಕೊಳ್ಳಬೇಡ ಎಂದು ಪ್ರೋತ್ಸಾಹಿಸಿದರು. ಆವಾಗ ಅಪ್ಪಣ್ಣ ಅವರಿಗೆ ಒಳಿತು ಎಂದು ಕಾಣಿಸಿತು. ನಂತರ ಗುರುಗಳಾದ ಅಂತಾಪುರ ಬಾಬು ಅವರ ಸಹಾಯದಿಂದ 2015ರಲ್ಲಿ ನಿನಾಸಂನಲ್ಲಿ ಡಿಪ್ಲೋಮಾ ಇನ್ ಆರ್ಟ್ ತರಬೇತಿಗೆ ಸೇರಿಕೊಂಡರು. ಅಲ್ಲಿ ಉತ್ತಮ ತರಬೇತಿ ಪಡೆದುಕೊಂಡು ಅದ್ಭುತ ಕಲಾವಿದರಾಗಿ ಹೊರಹೊಮ್ಮಿದರು. ನಂತರ ಆಟಮಾಟ ಆಶ್ರಯದಲ್ಲಿ ಅಕ್ರಮ ಸಂತಾನ ಎಂಬ ನಾಟಕ ಪ್ರದರ್ಶನ ಮಾಡಿದರು. ಇದು ಭರ್ಜರಿ ಹಿಟ್ ಆಗಿ ಅಪ್ಪಣ್ಣ ಅವರಿಗೆ ಹೆಸರು ತಂದು ಕೊಟ್ಟಿತು. ಅನಂತರ ಅಪ್ಪು ಅವರ ಹಿಂದೆಯೇ ಅದೃಷ್ಟದ ಬಾಗಿಲು ತೆರೆಯುತ್ತಾ ಬಂದಿತು. ಇದು ಸಾಧ್ಯವಾಗಿದ್ದು ಕಲಾ ದೇವತೆಯಿಂದ ಎನ್ನುತ್ತಾರೆ ಅಪ್ಪು ರಾಮದುರ್ಗ. ಆದರೆ, ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಬಡತನ ಕಲಿಸುತ್ತದೆ ಎಂಬ ಮಾತು ಅಪ್ಪಣ್ಣ ಅವರಿಗೆ ಒಪ್ಪುವಂತಹದ್ದು, ಯಾಕಂದರೆ ಇವರು ಬಡತನದಲ್ಲಿ ಬೆಳೆದ ಪ್ರತಿಭೆ.

ಧಾರಾವಾಹಿ, ಸಿನಿಮಾದಲ್ಲಿ ನಟನೆ:

ತರ‌್ಲೆ ತುಂಟಾಟಗಳಿಂದ ಎಲ್ಲರ ಕಾಲೆಳೆಯುತ್ತಾ, ಎಲ್ಲರಿಂದಲೂ ತಿರಸ್ಕಾರಕ್ಕೊಳಗಾಗಿದ್ದ ಒಬ್ಬ ಯುವಕ ಧಾರವಾಹಿ, ಸಿನಿಮಾದಲ್ಲಿ ನಟನೆ ಮಾಡುವುದು ಎಂದರೆ ಸಾಮಾನ್ಯದ ಮಾತಲ್ಲ. ಆದರೆ, ಅಪ್ಪಣ್ಣ ಮಾತ್ರ ಇದಕ್ಕೆ ವಿರುದ್ಧ. ತನ್ನ ಋಣಾತ್ಮಕ ಶಕ್ತಿಯನ್ನೇ ಧನಾತ್ಮಕ ಶಕ್ತಿಯನ್ನಾಗಿಸಿಕೊಂಡು ಪ್ರಿನ್ಸ್‌ನಂತೆ ಮೇಲೆದ್ದು ಇಂದು ಸಿನಿಮಾ, ಧಾರಾವಾಹಿಗಳಲ್ಲಿ ಮಿಂಚು ಹರಿಸುತ್ತಾ, ಎಲ್ಲರನ್ನು ನಕ್ಕು ನಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಮಿಡಿ ಕಿಲಾಡಿಗಳಲ್ಲಿ ರಾಮದುರ್ಗದ ಕೀರ್ತಿ ಪತಾಕೆಯನ್ನು ಬಾನೆತ್ತಕ್ಕೆ ಹಾರಿಸುತ್ತಿದ್ದಾರೆ. ಅಪ್ಪಣ್ಣ ಆಕಾಶದೀಪ, ಮೀನಾಕ್ಷಿ ಮದುವೆ, ಪಾರ್ವತಿ ಪರಮೇಶ್ವರ ಎಂಬ ಸಿರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಧ್ವಜ, ರವಿಹಿಸ್ಟ್ರಿ ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಆದರೆ, ಈ ಮೂರು ಚಿತ್ರಗಳು ಮುಂದಿನ ತಿಂಗಳು ಬಿಡುಗಡೆಯಾಗಲಿವೆ.

ಈಗಲು ತಾಯಿ ಬಾಳೆಹಣ್ಣ ಮಾರಾಟ:

ಅಪ್ಪಣ್ಣ ಅವರ ತಾಯಿ ಖಾಲಿ ಕುಳಿತುಕೊಳ್ಳುವವರು ಅಲ್ಲ. ಸದಾ ಒಂದಿಲ್ಲೊಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು. ಅಪ್ಪಣ್ಣ ದೊಡ್ಡ ಕಲಾವಿದರಾಗಿದ್ದು ಸಹಿತ ಅವರ ಬಡತನ ಮಾತ್ರ ದೂರವಾಗಿಲ್ಲ. ತಾಯಿ ಮಾತ್ರ ಈಗಲೂ ರಾಮದುರ್ಗದಲ್ಲಿ ಬಾಳೇಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ(ಸಹೋದರ) ಗೌಂಡಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಪ್ಪಣ್ಣ ಅವರು ಮಾತ್ರ ಕಲಾ ಪೋಷಕರಾಗಿ ಎಲ್ಲರನ್ನು ನಕ್ಕು-ನಗಿಸುತ್ತಾ ಬಣ್ಣದ ಬದುಕಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಈ ನಟನೆ ಇನ್ನು ಹೆಚ್ಚು ಬೆಳೆಯಲಿ ಕುಂದಾನಗರಿಯ ಹೆಸರು ಪಸರಿಸಲಿ ಎಂಬುವುದು ಕಲಾಪ್ರೇಕ್ಷಕರ ಆಶಯ.

Monday, 31 December 2018

ಸಾಕ್ಸ್ ಮಾರುತ್ತಿದ್ದವ, ದೊಡ್ಡ ಕಲಾವಿದನಾದ ಕಹಾನಿ!


ಮಂಜುನಾಥ ಗದಗಿನ 
ಅವು ಕಷ್ಟದ ದಿನಗಳು ದಿನ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಇಂತಹ ಸಮಯದಲ್ಲಿ ನಮ್ಮೂರಿನ ದುರ್ಗಾದೇವಿ ಭಜನಾ ಸಂಘದ ಮೂಲಕ ಜನಪದ, ಭಜನಾ ಪದಗಳನ್ನು ಹಾಡುತ್ತ ಇದ್ದೆ. ಇದೇ ಸಮಯÓÜಕ್ಕೆ ಹರಲಾಪುರದ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಎಸ್.ಎಸ್.ಹಿರೇಮಠ ಎಂಬುವವರು ನನ್ನನ್ನು ಬೀದಿ ನಾಟಕ ಮಾಡಲಿಕ್ಕೆ ಕರೆದರು. ಅಲ್ಲಿಂದ ನನ್ನ ನಟನಾ ಬದುಕು ಆರಂಭವಾಯಿತು. ನಂತರ ವಾರ್ತಾ ಇಲಾಖೆ ಮುಖಾಂತರ ರಾಜ್ಯದ ವಿವಿಧೆಡೆ ಬೀದಿ ನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಾ ಬಂದೆ. ಈ ವೇಳೆ ವಾರ್ತಾ ಇಲಾಖೆಯಿಂದ ದಿನಕ್ಕೆ ಕೊಡುತ್ತಿದ್ದ 200 ನನಗ ದೊಡ್ಡ ಸಂಬಳ ಆಗಿತ್ತು.
ಹೀಗೆ ಊರೂರು ನಾಟಕ ಮಾಡಿಕೊಂಡ ಹೋದ ಸಮಯದಲ್ಲಿ ಸರಿಯಾದ ಊಟ, ನಿದ್ದೆ ಇರುತ್ತಿರಲಿಲ್ಲ. ಆ ವೇಳೆ ಊರಿನ ಅಂಗನವಾಡಿ, ದೇವಾಲಯಗಳೇ ನಮಗೆ ಆಶ್ರಯ ತಾಣಗಳಾಗಿದ್ದವು. ಇನ್ನು ಊರಿನ ಅಧ್ಯಕ್ಷರು, ಉಪಾಧ್ಯಕ್ಷ, ಕಲಾಪ್ರೇಮಿಗಳು ನೀಡುತ್ತಿದ್ದ ತುತ್ತು ಅನ್ನವೇ ನಮಗೆ ಮೃಷ್ಟಾನ್ನವಾಗಿತ್ತು. ಅದೆಷ್ಟೋ ಸಾರಿ ಸ್ನಾನವನ್ನೇ ಮಾಡದೇ ಗಬ್ಬು ವಾಸನೆ ಮೈಯಿಂದ ಊರೂರು ತಿರಗಾಡಿದ್ದೇನೆ. ಇದೇ ವೇಳೆ ಸಾವಿರಕ್ಕೂ ಅಧಿಕ ಬೀದಿ ನಾಟಕಗಳಲ್ಲಿ ನಟಿಸಿದ್ದೇನೆ. ಆ ಕಷ್ಟದ ದಿನಗಳನ್ನ ನೆನೆದರೆ ಕಣ್ಣೀರು ಕಪಾಳಕ್ಕೆ ಬರುತ್ತವೆ. ಆದ್ರೆ ಕಷ್ಟ ಪಟ್ರೆ ಸುಖ ಇದೆ ಎಂಬ ಮಾತು ನನ್ನ ಬದುಕಿನಲ್ಲಿ ನಿಜ ಆಗಿದೆ.
ನನ್ನೂರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುಲ್ತಾನಪುರ. ಬಹಳ ಚಿಕ್ಕ ಹಳ್ಳಿ. ಹೆಸರು ಸದಾನಂದ ಕಾಳಿ. ಸದ್ಯ ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ಎಂಬ ಸ್ಪರ್ಧೆಯಲ್ಲಿ ಎಲ್ಲರನ್ನು ನಕ್ಕು ನಗಿಸುತ್ತಾ ಇದ್ದೇನೆ. ಈಗಿನ ಸದಾನಂದ ಶಾಲಾದಿನಗಳಲ್ಲಿ ದಡ್ಡ ಸದಾನಂದ ಆಗಿದ್ದ. ಹೀಗಾಗಿಯೇ ಎಸ್ಸೆಸ್ಸೆಲ್ಲಿಯಲ್ಲಿ ನಾಲ್ಕು ವಿಷಯಗಳಲ್ಲಿ ಡುಮ್ಕಿ ಹೊಡೆದಿದ್ದೆ. ನಂತರ ವರ್ಷಕ್ಕ ಒಂದ್ರಂತ ಪಾಸ್ ಆದೆ. ನಂತರ ಬಿಎಡ್ ಮಾಡಿಕೊಂಡೆ. ಮುಂದೆ ಕಲಾ ಸೇವೆ ನನ್ನನ್ನು ಕೈಬೀಸಿ ಕರೆಯಿತು. ಜಾನಪದ, ಭಜನಾ ಪದ, ಬೀದಿ ನಾಟಕ ಅಂತ ರಾಜ್ಯದೆಲ್ಲೆಡೆ ಸುತ್ತಿದೆ. ಇದೇ ವೇಳೆ ನಟನೆಯಲ್ಲಿ ಇನ್ನಷ್ಟು ಪಳಗಬೇಕೆಂದು ಚಿತ್ರದುರ್ಗದ ಸಾಣೇಹಳ್ಳಿ ಶಿವಸಂಚಾರ ಮಠದಲ್ಲಿ ಒಂದು ವರ್ಷದ ನಟನಾ ತರಬೇತಿ ಪಡೆದೆ. ಈ ವೇಳೆ ಮೂರ್ನಾಲ್ಕು ನಾಟಕಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಮಲೆಗಳಲ್ಲಿ ಮದುಮಗಳು ಎಂಬ ಅದ್ಭುತ ಹಾಗೂ ದೀರ್ಘ ನಾಟಕದಲ್ಲಿ ಅಭಿನಯಿಸುವ ಭಾಗ್ಯ ನನಗೆ ದೊರೆಯಿತು. ಇದು ಬರೋಬ್ಬರಿ ಒಂಬತ್ತು ತಾಸಿನ ನಾಟಕ. ಇಂತಹ ನಾಟಕದಾಗ ನನ್ಗ 70 ವರ್ಷ ವಯಸ್ಸಿನ ವೆಂಕಟಪ್ಪ ನಾಯಕ ಎಂಬ ಪಾತ್ರ ದೊರೆಯಿತು. ಈ ನಾಟಕ ನನ್ನ ಬಣ್ಣದ ಬದುಕಿಗೆ ಚಿನ್ನದ ದಿನಗಳನ್ನಾಗಿ ಕಲ್ಪಿಸಿತು.
ಮನೆಗೆಲಸ ಮಾಡಿದ್ದೇನೆ:
ಆರಂಭದ ದಿನಗಳಲ್ಲಿ ಬೆಂಗಳೂರು ನನಗೆ ಹೊಸತು. ಇಲ್ಲಿ ಬಂದಾಗ ಎಲ್ಲವನ್ನು ಅಚ್ಚರಿಯ ಕಂಗಳಲ್ಲಿ ನೋಡುತ್ತಿದ್ದೆ. ಈ ವೇಳೆ ಹೊಟ್ಟೆ ಪಾಡಿಗಾಗಿ ಒಬ್ಬ ಶ್ರೀಮಂತರ ಮನೆಯಲ್ಲಿ ಕೆಲಸದಾಳು ಆಗಿ ದುಡಿಯುತ್ತಿದ್ದೆ. ಅವರ ಮನೆ ಕ್ಲೀನ್ ಮಾಡುವುದು. ಅವರ ಕಾರ್ ತೊಳೆಯುವುದು. ಅವರು ಕಾಲು ಒತ್ತು ಅಂದಾಗ ಕಾಲ ಒತ್ತುವುದು ಮಾಡುತ್ತಿದೆ. ಇದಷ್ಟೇ ಅಲ್ಲದೇ ಬೆಂಗಳೂರು ಮಹಾನಗರದಲ್ಲಿ ಗೊತ್ತಿಲ್ಲದ ಸಂಧಿ ಗೊಂದಿಗಳಲ್ಲಿ ತಿರುಗಾಡಿ ಹೆಲ್ಮೆಟ್, ಗ್ಲಾಸ್, ಸಾಕ್ಸ್‌ಗಳನ್ನು ಮಾರಿ ಜೀವನ ಕಂಡುಕೊಂಡಿದ್ದೇನೆ. 20 ಲೀಟರ್‌ನ ವಾಟರ್ ಕ್ಯಾನ್‌ಗಳನ್ನು ಸೇಲ್ ಮಾಡಿದ್ದೇನೆ. ಇಂದು ಅದೇ ರಸ್ತೆಯಲ್ಲಿ ಓಡಾಡುವಾಗ ಹಿಂದಿನ ದಿನಗಳು ಕಣ್ಣುಂದೆ ಬರುತ್ತವೆ. ನನ್ನ ಈ ಎಲ್ಲ ಕಷ್ಟಗಳು ನನ್ನೊಬ್ಬನಿಗೆ ಗೊತ್ತು. ಈ ನೋವುಗಳನ್ನು ಮತ್ಯಾರ ಮುಂದೆಯೂ ನಾನು ತೋಡಿಕೊಂಡಿಲ್ಲ. ಆದರೆ, ಆ ದೇವರು ನನ್ನ ಕಷ್ಟಗಳಿಗೆ ಸದ್ಯ ಉತ್ತಮ ಪ್ರತಿಫಲ ನೀಡಿದ್ದಾನೆ ಅನಿಸುತ್ತಿದೆ. 
ಮಾಸ್ಟರ್ ಆನಂದ ಕೈ ಹಿಡಿದರು:
ನನ್ನ ನಟನೆ ನೋಡಿ ಮಾಸ್ಟರ್ ಆನಂದ ತಮ್ಮ ಧಾರಾವಾಹಿ ರೋಬೋ ಫ್ಯಾಮಿಲಿಯಲ್ಲಿ ಒಂದು ಅವಕಾಶ ಒದಗಿಸಿಕೊಟ್ಟರು. ನಂತರ ದಿನಗಳಲ್ಲಿ ಮತ್ತಷ್ಟು ಅವಕಾಶಗಳು ನನ್ನನ್ನು ಅರಸಿ ಬಂದವು. ಶ್ರೀಮಾನ ಶ್ರೀಮತಿ ಮತ್ತಿತರ ಧಾರವಾಹಿಗಳಲ್ಲಿ ಅಭಿನಯಿಸಿ ನಾಡಿನ ಜನರ ಹೃದಯಲ್ಲಿ ಒಂದು ಸ್ಥಾನ ಪಡೆದ ಹೆಮ್ಮೆ ನನಗಿದೆ. ಅಷ್ಟೇ ಅಲ್ಲದೇ ಪಟಾಕಿ, ನನ್ನ ನಿನ್ನ ಪ್ರೇಮಕಥೆ, ಮಟಾಶ್, ನರಗುಂದ ಬಂಡಾಯ, ಚರಂತಿ, ಪ್ರಯಾಣಿಕರ ಗಮನಕ್ಕೆ ಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ಅವುಗಳಲ್ಲಿ ಪಟಾಕಿ, ನನ್ನ ನಿನ್ನ ಪ್ರೇಮಕಥೆ ಬಿಡುಗಡೆಯಾಗಿವೆ. ಉಳಿದ ಸಿನೆಮಾಗಳು ಬಿಡುಗಡೆಯಾಗಲು ಸನ್ನದ್ಧ ಇವೆ. ಕಲಾ ಪ್ರೇಮಿಗಳು ಇಲ್ಲಿವರೆಗೂ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲ ನೀಡಿ ಪೋಷಿಸುತ್ತಾರೆ ಎಂಬ ನಂಬಿಕೆ ನನ್ನದು.

Saturday, 29 December 2018

ಶಿಲ್ಪಕಲೆಗಳ ತೊಟ್ಟಿಲು ಹೂಲಿ



- ಮಂಜುನಾಥ ಗದಗಿನ 
ಹೂಲಿ. ಹೆಸರು ಕೇಳಿದರನೇ ಅದೇನೋ ರೋಮಾಂಚನ. ಇತಿಹಾಸ ಪುಟಗಳಲ್ಲಿ ತನ್ನದೇ ವೈಶಿಷ್ಟತೆಗಳ ಮೂಲಕ ನಾಡಿನ ಮನೆ-ಮನದ ಮಾತಾಗಿದ್ದ ಪುಟ್ಟ ಹಳ್ಳಿ.
ನೂರಾರು ದೇವಾಲಗಳು, ನೂರಾರು ಬಾವಿಗಳನ್ನು ತನ್ನೊಡಲಲ್ಲಿ ಅವಿತುಗೊಂಡು ನಾಡಿನ ಗಮನ ಸೆಳೆದ ಹಳ್ಳಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ. ಯಲ್ಲಮ್ಮನ ನಾಡು ಸವದತ್ತಿಯಿಂದ ೧೦ ಕಿಮೀ ದೂರದಲ್ಲಿದೆ ಈ ಐತಿಹಾಸಿಕ ಸ್ಥಳ. ಶಿಲ್ಪಕಲೆ, ವಾಸ್ತುಶಿಲ್ಪ, ಶಾಸನಗಳನ್ನು ಹೊಂದುವ ಮೂಲಕ ಸರ್ವಧರ್ಮ ಸಮನ್ವಯತೆ ಸಾರುವ ಇಂತಹ ಒಂದು ಸ್ಥಳ ಅದೆಷ್ಟೋ ಜನರಿಗೆ ಗೋಚರವಾಗಿಲ್ಲ. ಈ ಗ್ರಾಮದಲ್ಲಿ ಮಧನೇಶ್ವರ, ಅಂಧಕೇಶ್ವರ, ತಾರಕೇಶ್ವರ, ಬನಶಂಕರಿ, ರಾಮೇಶ್ವರ, ನಾರಾಯಣ, ವೀರಭದ್ರ, ಕಲ್ಮೇಶ್ವರ, ಕರಿಸಿದ್ಧೇಶ್ವರ, ಪಂಚಲಿಂಗೇಶ್ವರ ಸೇರಿದಂತೆ ವಾಸ್ತುಶಿಲ್ಪಗಳಿಂದ ಕೂಡಿದ ಹಲವಾರು ಪ್ರಾಚೀನ ದೇವಾಲಯಗಳನ್ನು ಕಾಣಬಹುದು. 
ಹಲವು ಹೆಸರುಗಳು:
ಹೂಲಿ ಗ್ರಾಮ ಪ್ರಾಚೀನ ಕಾಲದಲ್ಲಿ ಬೆಳವುಲ ದೇಶದ ಮಹಾರಾಜರು ಆಡಳಿತ ನಡೆಸುತ್ತಿದ್ದ ಕೇಂದ್ರವಾಗಿದ್ದು, ಹದಿನೆಂಟು ಅಗ್ರಹಾರಗಳ ಮುಕುಟ ರತ್ನದಂತಿತ್ತು ಎಂದು ವರ್ಣಿಸಲಾಗಿದೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಪಕ್ಕದಲ್ಲಿ ಅನೇಕ ವಿರೂಪಗೊಂಡ ದೇವಾಲಯಗಳಿವೆ. ಋಷಿಮುನಿಗಳು ಇಲ್ಲಿ ಯಜ್ಞ- ಯಾಗಾದಿಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಕುರುಹಾಗಿ ಹಾಳಾದ ಅನೇಕ ಯಜ್ಞಕುಂಡ ಸ್ತಂಭಗಳಿವೆ. ಇದನ್ನು ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿ ರಾಜರು, ವಿಜಯನಗರದ ಅರಸರು, ಮರಾಠರು ಕಾಲಕಾಲಕ್ಕೆ ತಮ್ಮ ಆಡಳಿತಕ್ಕೆ ಬಳಸಿಕೊಂಡಿರುವುದನ್ನು ಇಲ್ಲಿ ಲಭ್ಯವಾದ ಶಾಸನಗಳು ತಿಳಿಸುತ್ತವೆ.
ರಾಜನಾದ ಕಾರ್ತವೀರ್ಯಾರ್ಜುನ ಕಾಲಾವಧಿಯಲ್ಲಿ ಇದು ರಾಜಧಾನಿಯಾಗಿತ್ತು ಎಂದು ಯಲ್ಲಮ್ಮದೇವಿ ಚರಿತ್ರೆಯಲ್ಲಿ ಉಲ್ಲೇಖಿತವಾಗಿದೆ. ಹೂಲಿಯನ್ನು ಇಲ್ಲಿ ಲಭ್ಯವಾದ ಹಲವಾರು ಶಾಸನಗಳಲ್ಲಿ ಮಹಿಸ್ಪತಿ ನಗರ, ದಕ್ಷಿಣ ಕಾಶಿ, ಪೂವಲ್ಲಿ, ಪುಲಿಪುರ, ಪುಲಿಗ್ರಾಮ, ಚೂಡಾಮಣಿ ಪೂಲಿ, ಹೂಲಿ ಎಂದೆಲ್ಲ ಕರೆಯಲಾಗಿದೆ. ಯಲ್ಲಮ್ಮನ ಚರಿತ್ರೆಯಲ್ಲಿ ಧರ್ಮವರ್ಧನ ಎಂಬ ರಾಜ ಇಲ್ಲಿ ಆಳುತ್ತಿದ್ದನಂತೆ. ಜಮದಗ್ನಿಯು ರೇಣುಕಾದೇವಿಗೆ ಅಕ್ಕಿ ಕಾಳಿನ ತೂಕದ ಬಂಗಾರ ತರಲು ಈ ರಾಜನಲ್ಲಿಗೆ ಕಳಿಸುತ್ತಾನೆ ಎಂಬ ದುಷ್ಟಾಂತವು, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಹಲವು ಪ್ರಸಂಗಗಳು ಹೂಲಿ ಮತ್ತು ಸುತ್ತ ಮುತ್ತಲಿನ ಸ್ಥಳಗಳ ಕೆಲವು ಘಟನೆಗಳ ದುಷ್ಟಾಂತಗಳಲ್ಲಿ ಉಲ್ಲೇಖಿತವಾಗುವ ಮೂಲಕ ಪುರಾಣ ಚರಿತ್ರೆಯಿಂದಲೂ ಪ್ರಸಿದ್ಧಿ ಹೊಂದಿದ ಗ್ರಾಮವಾಗಿತ್ತು ಹೂಲಿ.
ಆಕರ್ಷಕ ಪಂಚಲಿಂಗೇಶ್ವರ ದೇವಾಲಯ:
ಪಂಚಲಿಂಗೇಶ್ವರ ದೇವಾಲಯವನ್ನು ಪುರಾತತ್ವ ಇಲಾಖೆ ಸಂರಕ್ಷಿಸಿದ್ದು, ಇದೊಂದು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ಇನ್ನುಳಿದ ದೇವಾಲಯಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಐದು ವಿಶಿಷ್ಟ ಗೋಪುರಗಳನ್ನು ಒಳಗೊಂಡ ಈ ದೇವಾಲಯವನ್ನು ಕ್ರಿ.ಶ.೧೦೪೪ರಲ್ಲಿ ಲಚ್ಚಿಯಬ್ಬರಸಿಯು ಕಟ್ಟಿಸಿದ್ದು ಪೂರ್ವಾಭಿಮುಖವಾಗಿ ಮೂರು. ದಕ್ಷಿಣ ಮತ್ತು ಉತ್ತರಕ್ಕೆ ಮುಖಮಾಡಿದ ಒಂದೊಂದು ಗರ್ಭಗೃಹಗಳನ್ನು ಈ ದೇವಾಲಯ ಒಳಗೊಂಡಿದೆ. ಈ ದೇವಾಲಯದಲ್ಲಿ ೨೦ ವಿಶಾಲವಾದ ಕಂಬಗಳ ಅಂತರಾಳವಿದೆ. ಚಾವಣಿಯಲ್ಲಿ ಕಮಲಗಳನ್ನು ಬಿಡಿಸಲಾಗಿದ್ದು ಎದುರಿನ ವಿಶಾಲವಾದ ಮುಖಮಂಟಪದಲ್ಲಿ ೫೦ ಕಂಬಗಳಿದ್ದು ಇದು ಮೂರು ದಿಕ್ಕಿನಲ್ಲಿ ಪ್ರವೇಶದ್ವಾರಗಳಿಂದ ಕೂಡಿದ ಭವ್ಯವಾದ ಮುಖ ಮಂಟಪ ಹೊಂದಿರುವುದು. ಸುಂದರ ವಿನ್ಯಾಸದ ಆಕರ್ಷಕ ಕೆತ್ತನೆ ಇದರ ವಿಶೇಷ, ಗರ್ಭಗೃಹಕ್ಕೆ ಎದುರಾಗಿ ನಂದಿ, ಅದರ ಬಲಕ್ಕೆ ವಿಷ್ಣು ಎಡಕ್ಕೆ ಗಣೇಶ ವಿಗ್ರಹಗಳಿವೆ. 
ಚಿಕ್ಕನಂದೇಶನ ಹುಟ್ಟೂರು:
ಹೂಲಿ ಗ್ರಾಮವನ್ನು ಪ್ರವೇಶಿಸಿದರೆ ಇದು ಶಿಲ್ಪಕಲಾವಶೇಷಗಳ ಸಮುಚ್ಛಯವೆನೋ ಎನಿಸುತ್ತದೆ. ಅವಶೇಷಗಳಾಗಿ ನಿಂತಿರುವ ಇಲ್ಲಿನ ದೇವಾಲಯ ಹಾಗೂ ಕೆರೆಗಳನ್ನು ನೋಡಿದರೆ ಹಿಂದೆ ಎಷ್ಟು ವೈಭವದಿಂದ ಈ ಗ್ರಾಮ ಮೆರೆದಿರಬಹುದು ಎಂದು ಊಹಿಸಬಹುದಾಗಿದೆ. ರಾಘವಾಂಕ ಕಾವ್ಯದ ಲೇಖಕ ಚಿಕ್ಕನಂದೇಶ ಈ ಗ್ರಾಮದವರಾಗಿದ್ದಾರೆ. ಇವರು ಹೂಲಿ ಗ್ರಾಮವನ್ನು ಪುವಲ್ಲಿ ಎಂದು ಬಣ್ಣಿಸಿದ್ದಾರೆ. ಇಲ್ಲಿನ ಶಾಸನಗಳು ಬಿಜ್ಜಳನ ಮಗ ಅಹವ ಮಲ್ಲದೇವ, ತ್ರಿಭುವನ ಮಲ್ಲದೇವನ ಕುರಿತದ್ದಾಗಿವೆ. 

Friday, 28 December 2018

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಸಾಧನೆ ಶಿಖರ ಏರಿದ ಶ್ರೀಧರ!




ಮಂಜುನಾಥ ಗದಗಿನ
ನಾನು ಆರನೇ ವಯಸ್ಸಿನವನಿದ್ದಾಗ ಅಪಘಾತವಾಗಿ ಬಲಗೈ ಕಳೆಕೊಂಡೆ. ನನಗಾಗ ಅಷ್ಟೊಂದು ತಿಳಿವಳಿಕೆ ಇರಲಿಲ್ಲ. ಆದರೆ, ನನ್ನ ತಂದೆ-ತಾಯಿ ದೃತಿಗೆಡದೆ ನನ್ನ ಆರೈಕೆ ಮಾಡಿದರು. ಆರಂಭದಲ್ಲಿ ನನ್ನ ಎಲ್ಲ ಕೆಲಸಗಳನ್ನು ಅವರೇ ಮಾಡಿದರೂ, ನಂತರ ನಾನೇ ಒಂದೊಂದಾಗಿ ನನ್ನ ಕೆಲಸಗಳನ್ನು ಒಂಟಿಗೈಯಲ್ಲಿ ಮಾಡಲು ಪ್ರಯತ್ನಿಸಿ, ಅದರಲ್ಲಿ ಯಶಸ್ಸು ಸಾಧಿಸಿ ಸ್ವಾವಲಂಬಿಯಾದೆ. ಆದರೆ, ಒಂದು ಕಡೆ ಮಾತ್ರ ಭವಿಷ್ಯತನ್ನು ನೆನೆಸಿಕೊಂಡು, ನನ್ನ ಕಣ್ಣೆದುರು, ನನ್ನ ವಾರಿಗೆಯ ಹುಡುಗರು  ಆಡುತ್ತಿದ್ದನ್ನು ಕಂಡು ಜೀವನದ ಮೇಲೆ ಜಿಗುಪ್ಸೆ ಹುಟ್ಟಿಕೊಂಡು, ಊಟ ತಿಂಡಿ, ಆಟ ಪಾಠಗಳಲ್ಲಿ ನಿರಾಸಕ್ತನಾಗಿ ನನ್ನೊಳಗೆ ನಾನೇ ಕಳೆದು ಹೋಗುತ್ತಿದೆ. ಆದರೆ, ಅಪ್ಪ-ಅವ್ವನಿಗೆ ನನ್ನದೆ ಚಿಂತೆ. ಇದರೊಟ್ಟಿಗೆ ಮೂವರು ಅಕ್ಕಂದಿರ ಹೊಣೆಗಾರಿಕೆ ಬೇರೆ.
ಅದೊಂದು ದಿನ ಗೆಳೆಯರೆಲ್ಲ ಬಂದು ಒತ್ತಾಯ ಮಾಡಿದ್ದರಿಂದ ಇಲ್ಲಿಯ ಬಸವೇಶ್ವರ ಸರ್ಕಲ್ ಹತ್ತಿರದ ಈಜುಗೊಳಗೆ ಹೋದೆ, ಆದರೆ, ನನಗೆ ಈಜು ಬರುತ್ತಿರಲಿಲ್ಲ, ಹೀಗಾಗಿ ಪಕ್ಕದಲ್ಲೆ ಗೆಳೆಯರ ಮೋಜು-ಮಸ್ತಿ ನೋಡುತ್ತಾ, ಒಳ ಒಳಗೆ ಕಲ್ಪನಾ ಲೋಕದಲ್ಲಿ ಕುಳಿತ್ತಿದ್ದೆ. ನನ್ನ ತಳಮಳ ಕಂಡ  ಅಲ್ಲಿಯ ಹುಡುಗರಿಗೆ ಈಜು ಕಲಿಸುತ್ತಿದ್ದ ಮಾಸ್ತರ ಒಬ್ಬರು ಬಂದು ಯಾಕಯ್ಯ ಒಬ್ಬನೇ ಕುಳಿತ್ತಿದ್ದೀಯಾ, ನೀನು ನೀರಿಗಿಳಿತಿಯಾ ಎಂದು ಕೇಳಿದರು. ಹೌದು, ರ್ಸ ನಾನು ಕೂಡಾ ಈಜು ಕಲಿಬೇಕು, ಅವರಂತೆ ನಲಿಬೇಕು ಎಂಬ ಆಸೆ ಇದೆ..ಆದರೆ, ನಾನು ಅವರಂತಲ್ಲ, ಎಂದು ನನ್ನ ಅರ್ಧ ಕೈ ತೊರಿಸಿದೆ. ಅದ್ಕೆ ಅವರು, ಸ್ವಲ್ಪ ಯೋಚಿಸಿ ನಿನಗ ನಿಜವಾಗ್ಲು ಈಜು ಕಲಿಯುವ ಆಸೆ ಇದ್ರೆ, ನಾಳೆ ನಿನ್ನ ಪಾಲಕರನ್ನು ಕರೆದುಕೊಂಡು ಬಾ, ನಾನು ನಿನಗೆ ಈಜು ಕಲಿಸುತ್ತೇನೆ ಎಂದು ಹೇಳಿ ಕಳುಹಿಸಿದರು. ನಾನು ಕೂಡಾ ಅಪ್ಪನ ಮುಂದೆ, ನಡೆದ ಎಲ್ಲ ವಿಷಯ ಹೇಳಿದೆ, ಅದ್ಕೆ ಅಪ್ಪ ತುಸು ಯೋಚನೆ ಮಾಡಿ, ಈಜು ನಿನ್ನಿಂದ ಸಾಧ್ಯ ಎಂದು ಮರು ಪ್ರಶ್ನೆ ಹಾಕಿದರೂ, ನಾನು ಆತ್ಮ ವಿಶ್ವಾಸದಿಂದ ಹ್ಞು ಎಂದೆ, ಮರುದಿನ ನಾನು ಮತ್ತು ನನ್ನಪ್ಪ ಈಜುಗೊಳಕ್ಕೆ ಹೋಗಿ ಗುರುಗಳನ್ನು ಭೇಟಿಯಾದೇವು. ಅಪ್ಪನ ಹತ್ತಿರ ಗುರುಗಳು ಎಲ್ಲವನ್ನು ಮಾತಾಡಿ, ನೀವೆನು ಹೆದರ ಬೇಡಿ, ನಿಮ್ಮ ಮಗನನ್ನು ನನ್ನ ಮಗನಂತೆ ಕಂಡು ಈಜು ಕಲಿಸುತ್ತೇನೆ ಮಾತು ಕೊಟ್ಟು ಕಳುಹಿಸಿದರು. ಅವರೇ ಉಮೇಶ ಕಲಘಟಗಿ ಗುರುಗಳು. ನಂತರ ನಡೆದ ತರಬೇತಿಗಳು ನೆನೆದರೆ, ಈಗಲೂ ಮೈ ಜುಮ್ಮ ಅನ್ನುತ್ತವೆ. ಆದರೆ, ಗುರುಗಳ ಮಾರ್ಗದರ್ಶ ಹಾಗೂ ನನ್ನ ಆತ್ಮ ವಿಶ್ವಾಸ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಕಲಿಬೇಕು ಎಂಬ ಆಸಕ್ತಿ, ಸಾಧಿಸಬೇಕು ಎಂಬ ಛಲ ಇದ್ದರೆ, ಅಂಗವೈಕಲ್ಯ ಯಾವ ಲೆಕ್ಕಕ್ಕು ಇಲ್ಲ. ಆದರೆ, ದೃಢ ಮನಸ್ಸು ಮುಖ್ಯ ಎಂದು ಬೆಳಗಾವಿ ವಿಕಲಚೇತನ ಈಜುಪಟು ಶ್ರೀಧರ ಮಾಳಗಿ ಹೇಳುತ್ತಾರೆ.
ನಾವು  ಮೂಲತಃ ಬೈಲಹೊಂಗಲ ತಾಲೂಕಿನ ಹಣ್ಣೀಕೇರಿ ಗ್ರಾಮದವರು. ತುತ್ತು ಅನ್ನ ಅರಸಿ ಅಪ್ಪ ಬೆಳಗಾವಿಗೆ  ಬಂದರು. ಸದ್ಯ ಉದ್ಯಮ ಭಾಗದ ಒಂದು ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಅಪ್ಪ. ಅವ್ವ ಕೂಡಾ ಅವರಿವರ ಮನೆಗೆಲಸ ಮಾಡಿಕೊಂಡು ಅಪ್ಪನಿಗೆ ನೆರವಾಗಿದ್ದಾಳೆ. ಇಬ್ಬರೂ ಸೇರಿ ದುಡಿದರೂ ತಿಂಗಳಿಗೆ 10 ಸಾವಿರ ಸಂಪಾದನೆ. ಈ ಹಣದಲ್ಲೇ ಸಂಸಾರ ನಡೆಸುವ ಸಾಹಸ ಈ ನಮ್ಮದು. ಆದರೆ, ಇಲ್ಲಿವರೆಗೂ ನನ್ನ ಆಸೆ, ಆಕಾಂಕ್ಷೆಗಳಿಗೆ ಕಾವಲಾಗಿ ನಿಂತು ಉತ್ಸಾಹಕ್ಕೆ ಪ್ರೋತ್ಸಾಹ ತುಂಬುತ್ತಿದ್ದಾರೆ.

ಆರ್ಥಿಕ ಸಹಾಯ:

ನನಗೆ  2012 ರಿಂದ 2017ರವಗೆಗೂ ಬೆಳಗಾವಿ ಉದ್ಯಮ ಭಾಗ ಪೋಲಿಯೊ ಹೈಡಾನ್ ಕಂಪನಿ ಆರ್ಥಿಕ ಸಹಾಯ ನೀಡುತ್ತಾ ಬಂದಿತ್ತು. ಆದರೆ, ನನ್ನ ಪ್ರತಿಭೆ ಗುರುತಿಸಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಗೋ ಸ್ಪೋರ್ಟ್ಸ್ ಪೌಂಡೇಶನ್ 2017ರಿಂದ ಕ್ರೀಡಾ ವೆಚ್ಚ ಭರಿಸುತ್ತಿದೆ. ವರ್ಷಕ್ಕೆ 3 ಲಕ್ಷದವರೆಗೂ ನೀಡಿ ಪ್ರೋತ್ಸಾಹಿಸುತ್ತಿದೆ. ಸದ್ಯ ನಾನು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಕಾಮರ್ಸನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ತರಬೇತುದಾರರಾದ ರಾಘವೇಂದ್ರ ಅನ್ವೇಕರ, ರಾಜೇಶ ಶಿಂಧೆ, ಪ್ರಸಾರ ತೆಂಡೂರ್ಲ್ಕ ಇವರ ಸಹಾಯ ಇಲ್ಲದೇ ಹೋಗಿದ್ದರೆ, ನಾ ಯಾರೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇವರ ಸಹಾಯ ಎಂದಿಗೂ ಮರೆಯಲಾರದ್ದು.
ವಿಶ್ವ ಪ್ಯಾರಾ ಈಜುನಲ್ಲಿ ಭಾಗಿ:
ಜೂ. 7 ರಿಂದ 10ರವರೆಗೂ ಜರ್ಮನ ದೇಶದ ಬರ್ಲಿನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಈಜು ಸ್ಪಧೆಯಲ್ಲಿ ಭಾಗವಹಿಸಿ 100 ಮೀರ್ಟ್ ಪ್ರೀ ಸ್ಟೈಲ್‌ನಲ್ಲಿ 1 ನಿಮಿಷ 10 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 11ನೇ ಸ್ಥಾನ ಪಡೆದು ಕೊಂಡೆ, ಅದು ಒಂದೇ ಸೆಕೆಂಡನಲ್ಲಿ ಎರಡು ಸ್ಥಾನ ಕೈತಪ್ಪಿತು. ಬರ್ಟ ಪ್ಲೈನಲ್ಲಿ 1.16 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 5ನೇ ಸ್ಥಾನ ಪಡೆದುಕೊಂಡು ಏಶಿಯನ್ ಗೇಮ್ಸ್‌ಗೆ ಕ್ವಾಲಿಪೈ ಆಗಿದ್ದೇನೆ. ಈ ಸ್ಪರ್ಧೆಯಲ್ಲಿ 34 ದೇಶಗಳ 30ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಇವರೆಲ್ಲೂರಿಗೂ ಕಠಿಣ ಸವಾಲೊಡ್ಡಿದ ಹೆಮ್ಮೆ ನನಗಿದೆ.

ಅದ್ಭುತ್ ಸಾಧನೆ:

ನಾನು ಮೊದಲ ಬಾರಿಗೆ 2012ರಲ್ಲಿ ಚನೈನಲ್ಲಿ ನಡೆದ 12ನೇ ಪ್ಯಾರಾ ಓಲಂಪಿಕ್ ಈಜು ಹಾಗೂ ವಾರ್ಟ ಪೋಲೋ ಸ್ಪರ್ಧೆ ಮಾಡಿದೆ. ಇಲ್ಲಿ ಅಮೋಘ ಪ್ರದರ್ಶನ ನೀಡಿ 2 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕ ಪಡೆಯುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ನನ್ನನ್ನು ನಾನು ಗುರುತಿಸಿಕೊಂಡರ. ನಂತರ 2013ರಲ್ಲಿ ಬೆಂಗಳೂರಿನಲ್ಲಿ ನಡೆದ 13ನೇ ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಈಜು ಹಾಗೂ ವಾರ್ಟ ಪೋಲೋದಲ್ಲಿ 4 ಬೆಳ್ಳಿ ಪದಕ ಸಂಪಾದಿಸಿದೆ.. ಇನ್ನೂ ಮಧ್ಯಪ್ರದೇಶದ ಇಂದೋರದಲ್ಲಿ ನಡೆದ 14ನೇ ಅಂಗವಿಕಲ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನ, 1 ಕಂಚು, 2017ರಲ್ಲಿ ಉದಯಪುರಲ್ಲಿ ನಡೆದ 17ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ 5 ಚಿನ್ನ ನನ್ನದಾಯಿತು. 2017ರಲ್ಲಿ ದುಬೈನಲ್ಲಿ ನಡೆದ ಏಶಿಯನ್ ಯುಥ್ ಪ್ಯಾರಾ ಗೇಮ್ಸ್‌ನಲ್ಲಿ 1 ಬೆಳ್ಳಿ, 2 ಕಂಚಿಗೆ ಕೊರಳೊಡ್ಡಿದೆ. ಇದೆಲ್ಲವನ್ನು ನೋಡಿ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಪುರಸ್ಕರಿಸಿವೆ. ಮತ್ತಷ್ಟು ಸಾಧನೆ ಮಾಡಲು ಹುಮ್ಮಸ್ಸು ತುಂಬಿವೆ.
ಸಾಧನೆಗೆ ಅಂಗವೈಖಲ್ಯ ಅಡ್ಡಿಯಲ್ಲ. ನಾನು ಕೂಡಾ ಅಂಗವೈಖಲ್ಯ ಇದೇ

Thursday, 27 December 2018

ತೋರಗಲ್ ಕೋಟೆ ಕಂಡವರ‌್ಯಾರು?



ಮಂಜುನಾಥ ಗದಗಿನ ,
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಬಗ್ಗೆ ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಕೋಟೆ ಕೂಡ ಏಳು ಸುತ್ತಿನ ಕೋಟೆ ಆಗಿತ್ತು ಎಂದು ಹೇಳಲಾಗುತ್ತದೆ.
ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ ಕೋಟೆಯ ಕಥೆ. ಏಳು ಸುತ್ತಿನ ಕೋಟೆ ಇದಾಗಿತ್ತಂತೆ. ಈಗ ಐದು ಆವರಣಗಳನ್ನು ಮಾತ್ರ ಕಾಣಲು ಸಾಧ್ಯ. ನಾಲ್ಕು ದಿಕ್ಕಿನಲ್ಲೂ ಒಂದೊಂದು ಬುರುಜು (ಗೊಮ್ಮಟ) ಇದೆ. ಕೋಟೆ ಪ್ರವೇಶಕ್ಕೆ ಮೊದಲು ನಾಲ್ಕು ದ್ವಾರಗಳು ಇದ್ದವಂತೆ. ಸದ್ಯ ಪೂರ್ವದ ದ್ವಾರ ಮಾತ್ರ ಬಳಕೆಯಲ್ಲಿದೆ. ಒಳಭಾಗದಲ್ಲಿ ಕಟ್ಟೆಯಿದ್ದು, ದಣಿದು ಬಂದವರು ಅರೆಕ್ಷಣ ಕುಳಿತರೆ ಸಾಕು, ಜೋಂಪು (ನಿದ್ರೆ) ಆವರಿಸುತ್ತದೆ. ಒಳಗಿನ ಕಟ್ಟಡವೊಂದರ ಮೇಲೆ ಇಬ್ಬರು ಡುಮ್ಮಣ್ಣರ ಕೆತ್ತನೆಗಳಿವೆ. ಕೋಟೆಯ ಒಳಭಾಗ ಸುಮಾರು ನೂರು ಎಕರೆಯಷ್ಟು ವಿಸ್ತಾರವಾಗಿದೆ. ಮಧ್ಯದಲ್ಲಿರುವ ರಾಜವಾಡೆ ಪ್ರದೇಶವೇ ಐದು ಎಕರೆಗಳಷ್ಟು ದೊಡ್ಡದಾಗಿದೆ. ಪಕ್ಕದಲ್ಲೇ ಭೂತಂಕುಶ ಅರಸ ನಿರ್ಮಿಸಿದ ಭೂತನಾಥ ದೇವಾಲಯ ಇಲ್ಲಿನ ಆಕರ್ಷಣೆ. 
ಇದು ಚಾಲುಕ್ಯ ಶೈಲಿಯಲ್ಲಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಸುಖಾಸನ ಸಭಾಮಂಟಪ, 12 ಕಂಬಗಳ ನವರಂಗ, ಗರ್ಭಗೃಹದಲ್ಲಿರುವ ಶಿವಲಿಂಗ ಅದರ ಎದುರಿಗೆ ನಂದಿ, ಸುತ್ತಲಿನ ಗೋಡೆಯ ಮೇಲಿನ ಶಿಲ್ಪಕಲೆ ಮನಸೂರೆಗೊಳ್ಳುತ್ತವೆ. ಶಿವ ದೇವಾಲಯ, ದುರ್ಗಾದೇವಾಲಯ, ಗಣಪತಿ ವಿಜಯನಗರ ವಾಸ್ತು ಶೈಲಿಯ ಮಾದರಿಯಲ್ಲಿವೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ. ಈ ಕೋಟೆಯಲ್ಲಿ ಕನ್ನಡ ಹಾಗೂ ಪರ್ಶಿಯನ್ ಭಾಷೆಯ ಶಾಸನಗಳನ್ನು ಕಾಣಬಹುದಾಗಿದೆ. ಸುತ್ತಲ ಪರಿಸರವನ್ನು ಮಲಪ್ರಭೆ ಸುಂದರವನ್ನಾಗಿಸಿದ್ದಾಳೆ.
ಅಡಗುದಾಣಗಳು:
ಕೋಟೆಯ ಹೊರಗಿನ ಚಲನವಲನ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿ 300 ಅಡಿಗಳಿಗೆ ಒಂದರಂತೆ ಅಡಗುದಾಣಗಳಿವೆ. ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಫಿರಂಗಿಗಳನ್ನು ಅಳವಡಿಸಿದ್ದ ಕುರುಹುಗಳಿವೆ. ಎರಡು ಫಿರಂಗಿಗಳು ಕೋಟೆ ಆವರಣದಲ್ಲಿ ಈಗಲೂ ಮಣ್ಣು ತಿನ್ನುತ್ತಾ ಬಿದ್ದುಕೊಂಡಿವೆ. ಪಾಳುಬಿದ್ದ ಅರಮನೆ, ಕುದುರೆ ಲಾಯ, ನ್ಯಾಯಾಲಯ ಕಟ್ಟಡ, ನೆಲಮಹಡಿ ಗೋದಾಮುಗಳೆಲ್ಲ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿವೆ. ಮಾರುಕಟ್ಟೆಯಂತೆ ಹೋಲುವ ಭಗ್ನಾವಶೇಷವೊಂದು ಇಲ್ಲಿದ್ದು ಪ್ರಾಯಶಃ ಅದು ಆಗಿನ ಕಾಲದ ಶಸ್ತ್ರಾಗಾರ ಆಗಿದ್ದಂತೆ ತೋರುತ್ತದೆ. 
ಶಿವಾಜಿ ಸೈನ್ಯದ ಬೀಡು:
ಭೂತಾಯಶ ಎಂಬ ರಾಜ ಕ್ರಿ.ಶ.1100ರಲ್ಲಿ ತೋರಗಲ್ ಗ್ರಾಮವನ್ನು ನಿರ್ಮಾಣ ಮಾಡಿದ. ಅವರೇ ಈ ಊರಿನ ಸುತ್ತ ಬೃಹದಾಕಾರದ ಕೋಟೆಯನ್ನೂ ಕಟ್ಟಿಸಿದರು ಎಂಬ ಪ್ರತೀತಿಯಿದೆ. ಛತ್ರಪತಿ ಶಿವಾಜಿ ಮಹಾರಾಜರು ರಾಜ್ಯ ವಿಸ್ತರಣೆ ಮಾಡಲು ದಂಡಯಾತ್ರೆ ಕೈಗೊಂಡಾಗ ಅಪ್ಪಾಜಿ ಸುರೋ ಮತ್ತು ಮಾಲಾಜಿ ಮೀರಾಸಾಹೇಬ್ ಭೋಸಲೆ ಎಂಬ ಯೋಧರ ನೇತೃತ್ವದಲ್ಲಿ 12 ತುಕಡಿ ಸೈನ್ಯವನ್ನು ದಕ್ಷಿಣದ ಕಡೆಗೆ ಕಳುಹಿಸಿಕೊಟ್ಟಿದ್ದರು. ಆ ಸೈನ್ಯ ತೋರಗಲ್ ಕೋಟೆಯಲ್ಲೇ ಬಿಡಾರ ಹೂಡಿತ್ತು. ರಾಜ್ಯ ವಿಸ್ತರಣೆಗೆ ಅದನ್ನೇ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು, ನರಗುಂದ ಸಂಸ್ಥಾನವನ್ನು ತನ್ನ ಕೈವಶ ಮಾಡಿಕೊಂಡಿತ್ತೆಂದು ದಾಖಲೆಗಳು ಹೇಳುತ್ತವೆ.
ರಾಜರ ಆಳ್ವಿಕೆ:
ತೋರಗಲ್ ನಾಡು ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳ ಸಿಂಗದೇವ, ಕಲ್ಯಾಣ ಚಾಲುಕ್ಯರು, ಮರಾಠರು(ಶಿವಾಜಿ), ವೆಂಕಟಪ್ಪ, ವಿಜಾಪುರದ ಅಲಿ ಆದಿಲ್‌ಶಾಹಿ, ನವಲಗುಂದ ಸಂಸ್ಥಾನ, ಕರವೀರದ ಛತ್ರಪತಿ ಶಂಭು, ಪೇಶ್ವೆ, ಶಿಂಧೆ ಮನೆತನಗಳಿಂದ 11ನೇ ಶತಮಾನದಿಂದ 19ನೇ ಶತಮಾನದವರೆಗೂ ಆಳ್ವಿಕೆಗೆ ಒಳಪಟ್ಟಿತ್ತು. ಚಾಲುಕ್ಯ ಶೈಲಿಯ ದೇವಾಲಯಗಳನ್ನು ಹೊಂದಿದ ಇಲ್ಲಿನ ದೇವಾಲಯಗಳಲ್ಲಿ ಕ್ರಿ.ಶ.1184 ರಲ್ಲಿ ಭೂತಂಕುಶ ದೊರೆಯು ಭೂತನಾಥ ದೇವಾಲಯವನ್ನು ನಿರ್ಮಿಸಿದ್ದ. ಇತಿಹಾಸಕಾರ ಡಾ.ಪ್ಲೀಟ್ ಅವರ ಸಂಶೋಧನೆಯ ಪ್ರಕಾರ, ಬುಕ್ಕರಾರ್ಯನ ಆಳ್ವಿಕೆ ಹಾಗೂ ಚಾಲುಕ್ಯರು, ಬಿಜಾಪುರದ ಸುಲ್ತಾನರು, ವಿಜಯನಗರ ಅರಸರು, ಸೇವುಣರು, ಮರಾಠಾ ಪೇಶ್ವೆಗಳ ಆಳ್ವಿಕೆಯನ್ನು ಈ ಸ್ಥಳದಲ್ಲಿ ನಡೆಸಿದ್ದು ಏಳು ಸುತ್ತಿನ ಕೋಟೆ ಆಯಾ ಅರಸರ ಕಾಲಕ್ಕೆ ಹಂತಹಂತವಾಗಿ ಕಟ್ಟಲ್ಪಟ್ಟಿದೆ. ಮರಾಠರ ಕಾಲಕ್ಕೆ ಕೊಲ್ಲಾಪುರ ಮಹಾರಾಜ ತನ್ನ ಕುಟುಂಬದ ಸದಸ್ಯರೊಂದಿಗೆ ಇಲ್ಲಿ ವಾಸ್ತವ್ಯ ಮಾಡಿ ಶಿಂಧೆ ಮಹಾರಾಜರ ಆಳ್ವಿಕೆಯನ್ನು ಕಂಡಿತು. ಉದಯ ಸಿಂಹ ನರಸೋಜಿರಾವ್ ಎಂಬ ಕೊಲ್ಲಾಪುರದ ಮಹಾರಾಜ ಸ್ವಾತಂತ್ರ್ಯಪೂರ್ವದಲ್ಲಿ ಆಳಿದ ಕೊನೆಯ ಮಹಾರಾಜ. ಸ್ವಾತಂತ್ರ್ಯ ನಂತರ ಇವರ ಆಡಳಿತ ಅಂತ್ಯವಾಯಿತು.

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...