ಮಂಜುನಾಥ ಗದಗಿನ ,
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಬಗ್ಗೆ ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಕೋಟೆ ಕೂಡ ಏಳು ಸುತ್ತಿನ ಕೋಟೆ ಆಗಿತ್ತು ಎಂದು ಹೇಳಲಾಗುತ್ತದೆ.
ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ ಕೋಟೆಯ ಕಥೆ. ಏಳು ಸುತ್ತಿನ ಕೋಟೆ ಇದಾಗಿತ್ತಂತೆ. ಈಗ ಐದು ಆವರಣಗಳನ್ನು ಮಾತ್ರ ಕಾಣಲು ಸಾಧ್ಯ. ನಾಲ್ಕು ದಿಕ್ಕಿನಲ್ಲೂ ಒಂದೊಂದು ಬುರುಜು (ಗೊಮ್ಮಟ) ಇದೆ. ಕೋಟೆ ಪ್ರವೇಶಕ್ಕೆ ಮೊದಲು ನಾಲ್ಕು ದ್ವಾರಗಳು ಇದ್ದವಂತೆ. ಸದ್ಯ ಪೂರ್ವದ ದ್ವಾರ ಮಾತ್ರ ಬಳಕೆಯಲ್ಲಿದೆ. ಒಳಭಾಗದಲ್ಲಿ ಕಟ್ಟೆಯಿದ್ದು, ದಣಿದು ಬಂದವರು ಅರೆಕ್ಷಣ ಕುಳಿತರೆ ಸಾಕು, ಜೋಂಪು (ನಿದ್ರೆ) ಆವರಿಸುತ್ತದೆ. ಒಳಗಿನ ಕಟ್ಟಡವೊಂದರ ಮೇಲೆ ಇಬ್ಬರು ಡುಮ್ಮಣ್ಣರ ಕೆತ್ತನೆಗಳಿವೆ. ಕೋಟೆಯ ಒಳಭಾಗ ಸುಮಾರು ನೂರು ಎಕರೆಯಷ್ಟು ವಿಸ್ತಾರವಾಗಿದೆ. ಮಧ್ಯದಲ್ಲಿರುವ ರಾಜವಾಡೆ ಪ್ರದೇಶವೇ ಐದು ಎಕರೆಗಳಷ್ಟು ದೊಡ್ಡದಾಗಿದೆ. ಪಕ್ಕದಲ್ಲೇ ಭೂತಂಕುಶ ಅರಸ ನಿರ್ಮಿಸಿದ ಭೂತನಾಥ ದೇವಾಲಯ ಇಲ್ಲಿನ ಆಕರ್ಷಣೆ.
ಇದು ಚಾಲುಕ್ಯ ಶೈಲಿಯಲ್ಲಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಸುಖಾಸನ ಸಭಾಮಂಟಪ, 12 ಕಂಬಗಳ ನವರಂಗ, ಗರ್ಭಗೃಹದಲ್ಲಿರುವ ಶಿವಲಿಂಗ ಅದರ ಎದುರಿಗೆ ನಂದಿ, ಸುತ್ತಲಿನ ಗೋಡೆಯ ಮೇಲಿನ ಶಿಲ್ಪಕಲೆ ಮನಸೂರೆಗೊಳ್ಳುತ್ತವೆ. ಶಿವ ದೇವಾಲಯ, ದುರ್ಗಾದೇವಾಲಯ, ಗಣಪತಿ ವಿಜಯನಗರ ವಾಸ್ತು ಶೈಲಿಯ ಮಾದರಿಯಲ್ಲಿವೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ. ಈ ಕೋಟೆಯಲ್ಲಿ ಕನ್ನಡ ಹಾಗೂ ಪರ್ಶಿಯನ್ ಭಾಷೆಯ ಶಾಸನಗಳನ್ನು ಕಾಣಬಹುದಾಗಿದೆ. ಸುತ್ತಲ ಪರಿಸರವನ್ನು ಮಲಪ್ರಭೆ ಸುಂದರವನ್ನಾಗಿಸಿದ್ದಾಳೆ.
ಅಡಗುದಾಣಗಳು:
ಕೋಟೆಯ ಹೊರಗಿನ ಚಲನವಲನ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿ 300 ಅಡಿಗಳಿಗೆ ಒಂದರಂತೆ ಅಡಗುದಾಣಗಳಿವೆ. ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಫಿರಂಗಿಗಳನ್ನು ಅಳವಡಿಸಿದ್ದ ಕುರುಹುಗಳಿವೆ. ಎರಡು ಫಿರಂಗಿಗಳು ಕೋಟೆ ಆವರಣದಲ್ಲಿ ಈಗಲೂ ಮಣ್ಣು ತಿನ್ನುತ್ತಾ ಬಿದ್ದುಕೊಂಡಿವೆ. ಪಾಳುಬಿದ್ದ ಅರಮನೆ, ಕುದುರೆ ಲಾಯ, ನ್ಯಾಯಾಲಯ ಕಟ್ಟಡ, ನೆಲಮಹಡಿ ಗೋದಾಮುಗಳೆಲ್ಲ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿವೆ. ಮಾರುಕಟ್ಟೆಯಂತೆ ಹೋಲುವ ಭಗ್ನಾವಶೇಷವೊಂದು ಇಲ್ಲಿದ್ದು ಪ್ರಾಯಶಃ ಅದು ಆಗಿನ ಕಾಲದ ಶಸ್ತ್ರಾಗಾರ ಆಗಿದ್ದಂತೆ ತೋರುತ್ತದೆ.
ಶಿವಾಜಿ ಸೈನ್ಯದ ಬೀಡು:
ಭೂತಾಯಶ ಎಂಬ ರಾಜ ಕ್ರಿ.ಶ.1100ರಲ್ಲಿ ತೋರಗಲ್ ಗ್ರಾಮವನ್ನು ನಿರ್ಮಾಣ ಮಾಡಿದ. ಅವರೇ ಈ ಊರಿನ ಸುತ್ತ ಬೃಹದಾಕಾರದ ಕೋಟೆಯನ್ನೂ ಕಟ್ಟಿಸಿದರು ಎಂಬ ಪ್ರತೀತಿಯಿದೆ. ಛತ್ರಪತಿ ಶಿವಾಜಿ ಮಹಾರಾಜರು ರಾಜ್ಯ ವಿಸ್ತರಣೆ ಮಾಡಲು ದಂಡಯಾತ್ರೆ ಕೈಗೊಂಡಾಗ ಅಪ್ಪಾಜಿ ಸುರೋ ಮತ್ತು ಮಾಲಾಜಿ ಮೀರಾಸಾಹೇಬ್ ಭೋಸಲೆ ಎಂಬ ಯೋಧರ ನೇತೃತ್ವದಲ್ಲಿ 12 ತುಕಡಿ ಸೈನ್ಯವನ್ನು ದಕ್ಷಿಣದ ಕಡೆಗೆ ಕಳುಹಿಸಿಕೊಟ್ಟಿದ್ದರು. ಆ ಸೈನ್ಯ ತೋರಗಲ್ ಕೋಟೆಯಲ್ಲೇ ಬಿಡಾರ ಹೂಡಿತ್ತು. ರಾಜ್ಯ ವಿಸ್ತರಣೆಗೆ ಅದನ್ನೇ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು, ನರಗುಂದ ಸಂಸ್ಥಾನವನ್ನು ತನ್ನ ಕೈವಶ ಮಾಡಿಕೊಂಡಿತ್ತೆಂದು ದಾಖಲೆಗಳು ಹೇಳುತ್ತವೆ.
ರಾಜರ ಆಳ್ವಿಕೆ:
ತೋರಗಲ್ ನಾಡು ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳ ಸಿಂಗದೇವ, ಕಲ್ಯಾಣ ಚಾಲುಕ್ಯರು, ಮರಾಠರು(ಶಿವಾಜಿ), ವೆಂಕಟಪ್ಪ, ವಿಜಾಪುರದ ಅಲಿ ಆದಿಲ್‌ಶಾಹಿ, ನವಲಗುಂದ ಸಂಸ್ಥಾನ, ಕರವೀರದ ಛತ್ರಪತಿ ಶಂಭು, ಪೇಶ್ವೆ, ಶಿಂಧೆ ಮನೆತನಗಳಿಂದ 11ನೇ ಶತಮಾನದಿಂದ 19ನೇ ಶತಮಾನದವರೆಗೂ ಆಳ್ವಿಕೆಗೆ ಒಳಪಟ್ಟಿತ್ತು. ಚಾಲುಕ್ಯ ಶೈಲಿಯ ದೇವಾಲಯಗಳನ್ನು ಹೊಂದಿದ ಇಲ್ಲಿನ ದೇವಾಲಯಗಳಲ್ಲಿ ಕ್ರಿ.ಶ.1184 ರಲ್ಲಿ ಭೂತಂಕುಶ ದೊರೆಯು ಭೂತನಾಥ ದೇವಾಲಯವನ್ನು ನಿರ್ಮಿಸಿದ್ದ. ಇತಿಹಾಸಕಾರ ಡಾ.ಪ್ಲೀಟ್ ಅವರ ಸಂಶೋಧನೆಯ ಪ್ರಕಾರ, ಬುಕ್ಕರಾರ್ಯನ ಆಳ್ವಿಕೆ ಹಾಗೂ ಚಾಲುಕ್ಯರು, ಬಿಜಾಪುರದ ಸುಲ್ತಾನರು, ವಿಜಯನಗರ ಅರಸರು, ಸೇವುಣರು, ಮರಾಠಾ ಪೇಶ್ವೆಗಳ ಆಳ್ವಿಕೆಯನ್ನು ಈ ಸ್ಥಳದಲ್ಲಿ ನಡೆಸಿದ್ದು ಏಳು ಸುತ್ತಿನ ಕೋಟೆ ಆಯಾ ಅರಸರ ಕಾಲಕ್ಕೆ ಹಂತಹಂತವಾಗಿ ಕಟ್ಟಲ್ಪಟ್ಟಿದೆ. ಮರಾಠರ ಕಾಲಕ್ಕೆ ಕೊಲ್ಲಾಪುರ ಮಹಾರಾಜ ತನ್ನ ಕುಟುಂಬದ ಸದಸ್ಯರೊಂದಿಗೆ ಇಲ್ಲಿ ವಾಸ್ತವ್ಯ ಮಾಡಿ ಶಿಂಧೆ ಮಹಾರಾಜರ ಆಳ್ವಿಕೆಯನ್ನು ಕಂಡಿತು. ಉದಯ ಸಿಂಹ ನರಸೋಜಿರಾವ್ ಎಂಬ ಕೊಲ್ಲಾಪುರದ ಮಹಾರಾಜ ಸ್ವಾತಂತ್ರ್ಯಪೂರ್ವದಲ್ಲಿ ಆಳಿದ ಕೊನೆಯ ಮಹಾರಾಜ. ಸ್ವಾತಂತ್ರ್ಯ ನಂತರ ಇವರ ಆಡಳಿತ ಅಂತ್ಯವಾಯಿತು.
No comments:
Post a Comment