Tuesday, 25 December 2018

ಬದುಕು ಗೆದ್ದ ಸಾಧಕಿಗೆ ಸಲಾಂ

ಮಂಜುನಾಥ ಗದಗಿನ 
ಮದುವೆಯಾಗಿ ಆರು ತಿಂಗಳಿಗೆ ತಾನು ಎಚ್‌ಐವಿ ಸೊಂಕಿತೆ ಎಂದು ಗೊತ್ತಾದರೂ, ಅದನ್ನು ದಿಟ್ಟತನದಿಂದ ಎದುರಿಸಿ, ಬದುಕು ಕಟ್ಟಿಕೊಂಡದ್ದು ಅಷ್ಟೇ ಅಲ್ಲದೇ ತನ್ನೊಡನೆ ಹಲವು ಎಚ್‌ಐವಿ ಸೊಂಕಿತ ಮಕ್ಕಳಿಗೆ ಆಶ್ರಯ ನೀಡಿ ‘ಮಹಾ’ತಾಯಿಯಾಗಿ ಈ ಜಗವೇ ಮೆಚ್ಚುವಂತೆ ಮುನ್ನುಗ್ಗುತ್ತಾ, ಇತರೆ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ ಈ ಮಹಿಳೆ. 
ಹೌದು! ಇವರು ಬೆಳಗಾವಿಯ ನಾಗರತ್ನ ಸುನೀಲ ರಾಮಗೌಡ. ಇವರದ್ದು ಬಾಲ್ಯ ವಿವಾಹ. ಕೇವಲ 16 ವರ್ಷ ವಯಸ್ಸಿನಲ್ಲೆ ಮದುವೆ ಮಾಡಿಕೊಡಲಾಯಿತು. ಸಮಾಜ ಎಂದರೆ ಏನು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ತಿಳಿವಳಿಕೆ ಇಲ್ಲದ ವಯಸ್ಸು. ಇಂತಹ ವಯಸ್ಸಿನಲ್ಲೇ ಮದುವೆಯಾದ ಕಾರಣ ಜೀವನವನ್ನು ಅಷ್ಟೊಂದು ಆನಂದದಿಂದ ಕಳೆಯಲಿಲ್ಲ. ಆಗ ತಾನೇ ಮದುವೆಯಾಗಿ ಗಂಡ ಮನೆಗೆ ಹೋಗಿದ್ದ ಇವರು, ಆರು ತಿಂಗಳ ಬಳಿಕ ಯಾವುದೋ ಕಾರಣಕ್ಕೆ ವೈದ್ಯರನ್ನು ಸಂಪರ್ಕಿಸಿದರೂ, ಈ ಭೇಟಿ ಅವರ ಬಾಳಲ್ಲಿ ಬರ ಸಿಡಿಲ್ಲನೇ ತಂದೊಡ್ಡಿತು. ಹೌದು! ವೈದ್ಯರ ತಪಾಸಣೆ ನಡೆಸಿ ನಿಮಗಿಬ್ಬರಿಗೂ ಎಚ್‌ಐವಿ ಇದೆ  ಜೀವಿತಾವಧಿ ಕಡಿಮೆ ಇದೆ ಎಂದು ಹೇಳಿ ಬಿಟ್ಟರು. ವೈದ್ಯರ ಈ ಮಾತು ಕೇಳಿ ಇವರು ಆಕಾಶವೇ ಕಳಚಿ ಬಿದ್ದಂತಾಗಿತ್ತು ಎಂದು ಹೇಳುವ ನಾಗರತ್ನಾ ಅವರು, ಮುಂದೆ ಬದುಕು ಕಟ್ಟಿಕೊಂಡ ಪರಿ ಮಾತ್ರ ಅದ್ಭುತ್.  
ದೇವರ ರೂಪದಲ್ಲಿ ಸಿಕ್ಕ ವೈದ್ಯ:
ಪತಿ ಹಾಗೂ ಪತ್ನಿ ಇಬ್ಬರಿಗೂ ಎಚ್‌ಐವಿ ಇದೆ ಎಂಬ ಸಂಗತಿ ಗೊತ್ತಾದಾಕ್ಷಣ ಇಬ್ಬರು ಅದೇಷ್ಟೂ ದಿನಗಳ ಕಾಲ ಈ ಜಗತ್ತಿನ ಮುಂದೆ ಕಾಣಿಸಿಕೊಳ್ಳಲಿಲ್ಲ. ಆದರೆ, ಬದುಕ ಬೇಕಲ್ಲ ಎಂಬ ಒಂದೇ ಒಂದು ಆಸೆಯಿಂದ ಇಬ್ಬರು ಗಟ್ಟಿ ಧೈರ್ಯ ಮಾಡಿ ದುಡಿಯಲು ಆರಂಭಿಸಿದೇವು. ಹೀಗೆ ನಾಲ್ಕುಗಳು ಕಳೆದ ಬಳಿಕ ಅದೊಂದು ದಿನ ಮಗುಬೇಕೆಂದು ಒಬ್ಬ ವೈದ್ಯರನ್ನು ಸಂಪರ್ಕ ಮಾಡಿದೇವು. ಆ ವೈದ್ಯರು ಋಣಾತ್ಮಕ ಮಗು ಪಡೆಯಬಹುದು ನೀವು ಯಾವುದೇ ಕಾರಣಕ್ಕೂ ಧೈರ್ಯಗುಂದಬೇಡಿ ಎಂದು ಮತ್ತಷ್ಟು ಆತ್ಮವಿಶ್ವಾಸ ತುಂಬಿದರು. ಹೀಗೆ ಈ ವೈದ್ಯರು ನೀಡಿದ ಸಲಹೆ ನಾವು ಋಣಾತ್ಮಕ ಗಂಡು ಮಗು ಪಡೆದೇವು. ಇದಾದ ನಂತರ ಬದುಕಬೇಕು. ಮಗನಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡಬೇಕು, ಎಚ್‌ಐವಿ ತಿಳಿವಳಿಕೆ ಬಗ್ಗೆ ಈ ಸಾರಿ ಹೇಳಬೇಕೆಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಮುನ್ನುಗ್ಗುತ್ತಾ ಬಂದಿದ್ದೇನೆ. ಕಳೆದ ನಾಲ್ಕು ವರ್ಷದ ಹಿಂದೆ ನನ್ನ ಪತಿ ಇಹಲೋಕ ತ್ಯಜೀಸಿದ್ದಾರೆ. ಯಾರ‌್ಗೊ ಅಪಘಾತ ಆದಾಗ ರಕ್ತ ಕೊಡಾಕ ಹೋದಾಗ ಬೆಡ್ ಟು ಬೆಡ್ ರಕ್ತ ಹಾಕಿದ್ರಂತ. ಆವಾಗ ಈ ಕಾಯಿಲೆ ಬಂದಿತ್ತು ಎಂದು ಹೇಳುತ್ತಾರೆ ನಾಗರತ್ನ. ಈಗ ಆ ಮಗನಿಗೆ 16 ವರ್ಷ 8ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಮಹಾತಾಯಿ:
16 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ತಮ್ಮ ಎಲ್ಲ ನೋವುಗಳನ್ನು ಮರೆತು, ತಮ್ಮೊಟ್ಟಿಗೆ ಎಚ್‌ಐವಿ ಸೊಂಕಿತ 10 ಹೆಣ್ಣು ಮಕ್ಕಳನ್ನು ಆಶ್ರಯ ನೀಡಿ ಸಲಹುತ್ತಿದ್ದಾರೆ. ಈ ಮಕ್ಕಳಿಗೆ ವಸತಿ, ಊಟ, ಬಟ್ಟೆ ಅಷ್ಟೇ ಅಲ್ಲದೇ ಆಸಕ್ತಿ ಇದ್ದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ ಸದ್ಯ ಐದು ಮಕ್ಕಳು ನರ್ಸಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ. ಇನ್ನುಳಿದ ಐದು ಹೆಣ್ಣು ಮಕ್ಕಳಿಗೆ ಜೀವನೋಪಾಯ ಮಾರ್ಗಗಳನ್ನು ಕಲಿಸುತ್ತಾ, ಕರಕುಶಲ ಕಲೆಗಳನ್ನು ಕಲಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೇ ಶಾಲೆ-ಕಾಲೇಜು, ಗ್ರಾಮಗಳಿಗೆ ಹೋಗಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಚ್‌ಐವಿ ಪೀಡಿತ ಮಹಿಳೆಯರಿಗಾಗಿ ಸ್ವಯಂ ಸೇವಾ ಸಂಸ್ಥೆಯೊಂದರನ್ನು ಸ್ಥಾಪಿಸಿ ಕಾರ್ಯೋನ್ಮುಕರಾಗಿದ್ದಾರೆ. ಅರ್ಚನಾ ಪದ್ಮನ್ನವರ ಹಾಗೂ ಪ್ರಮಿಳಾ ಕಂದ್ರೋಲ್ಲಿ ಅವರ ಸಹಾಯದ ಮೂಲಕ ಆಶ್ರಯ ಫೌಂಡೇಶನ್ ಸ್ಥಾಪಿಸಿ ಈ ಮೂಲಕ ನೊಂದವರ ಬಾಳಲ್ಲಿ ಬೆಳಕು ಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷ ಅಂದರೆ ಈ ಪೌಂಡೇಶನ್ ಹದಿಹರೆಯದ ಎಚ್‌ಐವಿ ಸೊಂಕಿತ ಹಾಗೂ ಎಚ್‌ಐವಿ ವಿಧವೆಯರಿಗೆ ಆರೈಕೆ ಮನೆಯಾಗಿ ಕೆಲಸ ಮಾಡುತ್ತಿದೆ. ಇಂತಹ ನೊಂದವರ, ಸಮಾಜ ತಿರಸ್ಕರಿಸಿದವರಿಗೆ ಆಶ್ರಯ ನೀಡುವ ರಾಜ್ಯದ ಏಕೈಕ ಪೌಂಡೇಶನ್ ಎಂಬ ಹೆಗ್ಗಳಿಗೆ ಆಶ್ರಯ ಪೌಂಡೇಶನ್. ಸ್ಥಳೀಯ ದಾನಿಗಳು ನೀಡವ ಹಣವೇ ಇವರಿಗೆ ಆಧಾರ ಹಾಗೂ ಇವರು ಕೆಲವು ಕಂಪನಿಗಳಿಗೆ ಸೆಮಿನಾರ್‌ಗೆ ಹೋದಾಗ ಬರುವ ಗೌರವ ಧನವೇ ಇದಕ್ಕೆಲ್ಲ ಆರ್ಥಿಕ ಬಲ. 
ಬಂದ ಪ್ರಶಸ್ತಿ:
ಇವರು ನಡೆಸುತ್ತಿರುವ ಬದುಕಿನ ಸ್ಫೂರ್ತಿಗೆ ಹಾಗೂ ಮಾಡುತ್ತಿರುವ ಸಮಾಜ ಕಾರ್ಯಕ್ಕೆ 2016ರಲ್ಲಿ ರಾಜ್ಯ ಸರ್ಕಾರದ ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯಪ್ರಶಸ್ತಿ, 2017ರಲ್ಲಿ ನ್ಯಾಶನಲ್ ಆದರ್ಶ ಮಹಿಳೆ, ಅನಾಥ ರಕ್ಷಕಿ ಪ್ರಶಸ್ತಿ, ಉತ್ತಮ ಸಮಾಜಿಕ ಕಾರ್ಯಕರ್ತೆ ಪ್ರಶಸ್ತಿ, ವಿಶೇಷ ಸಾಧಕಿ ಹೀಗೆ 40ಕ್ಕೂ ಹೆಚ್ಚು ಪ್ರಶಸ್ತಿಗಳು ಇವರನ್ನು ಅರಸಿ ಬರುವ ಮೂಲಕ ತಮ್ಮ ಮೌಲ್ಯವನ್ನು ವೃದ್ಧಿಸಿಕೊಂಡಿವೆ. ಅಷ್ಟೇ ಅಲ್ಲದೇ ಇವರ ಈ ಸೇವೆಗೆ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಪುರಸ್ಕರಿಸಿವೆ. 
ಇವರ ಈ ಹೋರಾಟದ ಬದುಕು ಇತರೆ ಮಹಿಳೆಯರಿಗೆ ಆದರ್ಶವಾಗಲಿ, ಇವರು ಇನ್ನೂ ನೂರಾರು ವರ್ಷ ಇದ್ದು, ಸಮಾಜ ಸೇವೆ ಮಾಡಲಿ ಎಂಬುವುದು ಸಮಾಜದ ಆಶಯ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...