Saturday, 9 February 2019

ಕ್ಯಾಂಪಸ್‌ನಲ್ಲಿ ಜಾರಿ ಬಿದ್ದಿರಿ ಜೋಕೆ..!

ಮಂಜುನಾಥ ಗದಗಿನ
ಕ್ಯಾಂಪಸ್ ಬಣ್ಣದ ಬದುಕಿನ ಚಿನ್ನದ ದಿನಗಳಿಗೆ ಕಾರಣವಾಗುವ ಕಲರ್ ಕಲರ್ ಲೋಕ. ಇಲ್ಲಿ ಹುಟ್ಟುವ ಅದೇಷ್ಟೋ ಆಸೆ, ಆಕಾಂಕ್ಷೆಗಳು ಬದುಕಿನ ಕೊನೆ ದಿನಗಳವರೆಗೂ ಜೊತೆಯಾಗಿಯೇ ಇರುತ್ತವೆ. ಇಂತಹ ಕ್ಯಾಂಪಸ್ ಎಂಬ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಲೆ ಜಾಗ್ರತರಾಗಿರುವುದು ಮುಖ್ಯ. ಓದು ಬಿಟ್ಟು ಇತರೆ ಖಯಾಲಿಗಳಿಗೆ ಅಂಟಿಕೊಂಡೆ ಬದುಕು ಜಾರಿ ಬಿದ್ದಿತು ಜೋಕೆ..!
ಕ್ಯಾಂಪಸ್ ಹದಿಹರೆಯದ ಯುವಕ, ಯುವತಿಯರ ಕನಸುಗಳ ಲೋಕ. ಹಳ್ಳಿ ಹುಂಬ ಕೂಡಾ ಇಲ್ಲಿಯ ಮಾಯಗೆ ಜೋತು ಬಿದ್ದು, ರಜನಿಕಾಂತನನ್ನೇ ಮಿರಿಸುವ ಸ್ಟೈಲ್‌ಕಿಂಗ್ ಆಗಿ ಬದಲಾಗತಾನೆ. ಪುಟ್ಟ ಗೌರಿ ತರಹ ಗರ್ತಿ ಗೌರಮ್ಮನ ಹಾಗೆ ಲಂಗಾ ದಾವಣಿ ಹಾಕ್ಕೊಂಡು ಹಳ್ಳಿಯಲ್ಲಿ ಹವಾ ಮೆಂಟೇನ್ ಮಾಡೋ ಹುಡುಗಿಯೂ ಇಲ್ಲಿ ಬಂದು ಜೀನ್ಸ, ಟೀಶರ್ಟ ಹಾಕ್ಕೊಂಡು ರ‌್ಯಾಂಪ್ ಮೇಲೆ ಬಂದು ವಾಕ್ ಮಾಡತಾಳೆ. ಹೌದು! ಕ್ಯಾಂಪಸ್ ಮಹಿಮೆಯ ಅಂತಹದ್ದು, ಎಲ್ಲರನ್ನು ಒಗ್ಗಿ, ತಗ್ಗಿ, ಬಗ್ಗಿಸಿ ತನ್ನ ದಾಸರನ್ನಾಗಿಸಿಕೊಳ್ಳುತ್ತದೆ. ಹೀಗಂತ ನಾವು ಮೈ ಮರೆತು ಕ್ಯಾಂಪಸ್‌ಗೆ ಮೈಕೊಟ್ಟರೆ ಬದುಕು ಗೋವಿಂದ..ಗೋವಿಂದ.
ಹರೆಯದ ವಯಸ್ಸು ನೂರಾರು ಕನಸು ಎಂಬಂತೆ ಈ ನೂರಾರು ಕನಸುಗಳು ಬಹುತೇಕ ಹುಟ್ಟಿಕೊಳ್ಳುವುದು ಈ ಕ್ಯಾಂಪಸ್ ಎಂಬ ಅಖಾಡದಲ್ಲಿಯೇ. ಈ ಆಸೆಗಳ ಈಡೇರಿಕೆಗೆ ಯುವಕ, ಯುವತಿಯರು ಪಡುವ ಪಾಡು ಆ ದೇವರಿಗೆ ಪ್ರೀತಿ. ಸುಳ್ಳು, ಮೋಸ, ಕಾಮ, ಕ್ರೋದ, ಮದ, ಮತ್ಸರಗಳೆ ಆ ಆಸೆಗಳಿಗೆ ಬೆನ್ನೇಲುಬಾಗಿ ನಿಂತಿರುತ್ತವೆ. ನಾವೇಷ್ಟೇ ಪ್ರಾಮಾಣಿಕವಾಗಿ ಇರಬೇಕೆಂದು ಕೊಂಡರು ಕ್ಯಾಂಪಸನ್ ಕೆಲವೊಂದು ವಿಕೃತ ಮನಸ್ಸುಗಳು ಸುಮ್ಮನೆ ಬಿಡುವುದಿಲ್ಲ. ಕೆರಳಿಸಿ, ಕಾಡಿಸುತ್ತಲೇ ಇರುತ್ತವೆ. ಆದರೆ, ಅದನ್ನು ಮೀರಿ ನಮ್ಮ ಸುಂದರ ಬದುಕು ಕಟ್ಟಿಕೊಳ್ಳುವುದು ಇಲ್ಲಿ ಮುಖ್ಯವಾಗಿದೆ.
ನನಗೂ ಒಬ್ಬ ಗೆಳೆಯಬೇಕು ಎಂಬ ಸಾಲುಗಳು ಕ್ಯಾಂಪಸ್ ಮೆಟ್ಟಿಲು ಹತ್ತಿದ ಪ್ರತಿಯೊಬ್ಬ ಹುಡಗಿಯ ರಾಷ್ಟ್ರಗೀತೆಯಾಗಿ ಮನಸ್ಸಿನಾಳದಲ್ಲಿ ಪ್ರತಿದಿನ ಪ್ರತಿಧ್ವನಿಸುತ್ತಲೇ ಇರುತ್ತದೆ. ಕ್ಯಾಂಪಸ್‌ನ ಪ್ರತಿಯೊಂದು ಸಂದಿಗೊಂದಿಗಳು ಕೂಡಾ ಪ್ರೇಮಿಗಳ ಫೇವರೇಟ್ ಅಡ್ಡಾಗಳಾಗಿರುತ್ತವೆ. ಹೀಗೆ ಕ್ಯಾಂಪಸನ್ ಕಾರಿಡಾರ್‌ಗಳಲ್ಲಿ ಪ್ರೇಮಿಗಳು ಕೈ ಕೈ ಹಿಡಿಕೊಂಡು, ಹಣೆಗೆ ಮುತ್ತಿಕ್ಕೂತ್ತಾ ಸರಸ ತಲ್ಲಾಪಗಳಲ್ಲಿ ತಲ್ಲೀನರಾಗಿರುತ್ತಾರೆ. ಇಂತಹ ಸಮಯದಲ್ಲಿ ಹುಡುಗಿಯೊಬ್ಬಳು ತನಗೂ ಸುತ್ತಾಡಲೂ, ಹಣೆ ಮುತ್ತಿಕ್ಕೂವ ಗೆಳೆಯಬೇಕು ಎಂದು ಹಂಬಲಿಸದೇ ಇರಳು. ಇದೇ ಆಸೆಗೆ ಬಿದ್ದು ಅವಳು ಕೂಡಾ ಪ್ರೀತಿ, ಪ್ರೇಮ ಎಂಬ ಮೋಸದಾಟಕ್ಕೆ ಬಿದ್ದು, ಒದ್ದಾಡಲು ಶುರು ಮಾಡುತ್ತಾಳೆ. ಓದು, ಬರಹ ಬಿಟ್ಟು ಡೇಟಿಂಗ್, ಚಾಟಿಂಗ್ ಅಂತ ಸಿನಿಮಾ, ಗಾರ್ಡನ್ ಸುತ್ತಾಡಿ, ಹೆತ್ತವರ ಕಷ್ಟಗಳಿಗೆ ಬೆಲೆ ಇಲ್ಲದಂತೆ ಮಾಡುತ್ತಾರೆ. ಆದರೆ, ಈ ಪ್ರೀತಿ ಪ್ರೇಮ, ಕಾಮಕ್ಕೆ ಅಷ್ಟೇ ಸಿಮೀತವೋ..ಮದುವೆವರೆಗೂ ಮುಂದುವರೆಯುತ್ತದೇಯೋ ಆ ದೇವರೆ ಬಲ್ಲ. ಆದರೆ, ಹೆತ್ತ ತಂದೆ ತಾಯಿ ತಮ್ಮ ಮಕ್ಕಳು ಕಲಿತು ದೊಡ್ಡ ಹುದ್ದೆ ಅಲಂಕರಿಸಲಿ ಎಂದು ಕೂಲಿನಾಲಿ ಮಾಡಿ, ಓದಿಸುತ್ತಿರುತ್ತಾರೆ, ಆದರೆ, ಮಕ್ಕಳ ಮಾಡುವ ಗಂಧಾರಿ ಕೆಲಸವೇ ಬೇರೆಯಾರುತ್ತದೆ. ಅಲ್ಲಿ ತಂದೆ-ತಾಯಿಯ ಬೇವರ ಹನಿ ಇಲ್ಲಿ ಮಕ್ಕಳ ಕೈಯಲ್ಲಿ ಬೀರಾಗಿ ಪರಿವರ್ತನೆ ಹೊಂದಿರುತ್ತವೆ. ಕೆಟ್ಟ ಗೆಳೆಯರ ಸಹವಾಸ ಮಾಡಿ ದುಷ್ಟಟಗಳ ಅಡ್ಡಾಗಳಿಗೆ ಜೋತು ಬಿದ್ದು ಇಡೀ ಬದುಕನ್ನೇ ನಾಶ ಮಾಡಿಕೊಳ್ಳುವವರು ಇಲ್ಲಿದ್ದಾರೆ. ಕ್ಯಾಂಪಸ್ ಒಂದು ಬಿಳಿ ಹಾಳೆ ಇದ್ದ ಹಾಗೆ ಇಲ್ಲಿ ನಾವು ಏನನ್ನು ಬರೆಯುತ್ತೇವೆಯೂ ಹಾಗೆ ಬದುಕು ರೂಪಗೊಳ್ಳುತ್ತದೆ. ಅದಕ್ಕೆ ಇಲ್ಲಿ ಪ್ರೀತಿ, ಪ್ರೇಮ, ಕಾಮಗಳಿಗೆ ಫುಲ್‌ಸ್ಟಾಪ್ ಇಟ್ಟು, ಓದುಗೆ ನಾನ್‌ಸ್ಟಾಫ್ ಇಡಬೇಕು. ಅಂದಾಗ ಸುಂದರ ಬದುಕಿಗೆ ಮುನ್ನುಡಿ ಬರೆಯಲೂ ಸಾಧ್ಯ. ಕ್ಯಾಂಪಸ್ ಎಂದರೆ ಕೆಲವ ವಿಶಾಲವಾದ ಜಾಗೆಯಲ್ಲ. ಅದು ಮುಗ್ಧ ಮನಸ್ಸುಗಳ, ತಲೆ ಹರಟೆಗಳ, ಕಾಡಿಸಿ, ಕೆರಳಿಸುವವರ, ನಗು-ಅಳವಿಗೆ ಜೊತೆಯಾಗುವ, ಸ್ನೇಹಕ್ಕೆ ಸಿದ್ಧ ಸಮರಕ್ಕೂ ಬದ್ಧ ಎನ್ನುವ, ಹುಚ್ಚು ಕನಸುಗಳಿಗೆ ಬಣ್ಣ ತುಂಬಿ ತೇಲಾಡಿಸುವ ಬದುಕಿನ ಅವಿಭಾಜ್ಯ ಅಂಗ. ಇಲ್ಲಿ ಇಂದು ಸಾರಿ ಜಾರಿ ಬಿದ್ದರೆ, ಏಳುವುದು ಕಷ್ಟ, ಎದ್ದು ನಡೆದರೆ, ತಡೆಯುವುದು ಕಷ್ಟ. ಆಯ್ಕೆ ನಿಮ್ಮದು. ಬಿಳದೇ ಎದ್ದು ನಡೆಯಲು ಪ್ರಯತ್ನಿ ಅಷ್ಟೇ..

Sunday, 3 February 2019

ಭಾವನೆಗಳು ಮಾರಾಟಕ್ಕಿವೆ..!


ಮಂಜುನಾಥ ಗದಗಿನ 

ಭವ ಬಂಧನದಲ್ಲಿ ಭಾವನೆಗಳದ್ದೇ ಮೆರೆದಾಟ. ಆ ತುಂಟ ನೆನೆಪಿನೊಂದಿಗೆ ತಂಟೆ ತೆಗೆಯುವುದೆರೆಂದರೆ ಅದೇನು ಇಷ್ಟವೋ ಈ ಭಾವನೆಗಳಿಗೆ. ಕಾಲು ಕೆದರಿ ಕೆಣಕುತ್ತವೆ, ಕೆರಳಿಸುತ್ತವೆ. ಮತ್ತೇ ಸಾವೇ ಇಲ್ಲ ಎಂಬಂತೆ ಪುಟಿದ್ದೇದ್ದು ನಕ್ಕು, ಅಳಿಸುತ್ತವೆ. ಇಂತಹ ಭಾವನೆಗಳಿಗ ಮಾರಾಟಕ್ಕಿವೆ. ಆದರೆ, ಸೂಕ್ತ ಬೆಲೆ ದೊರೆಯದೇ ಹಾಗೆಯೇ ಉಳಿದುಕೊಂಡು ನೆನೆಪಿನ ಅಲೆಯೊಂದಿಗೆ ಚಲ್ಲಾಟವಾಡುತ್ತಿವೆ.
ಅವು ಅಳಿದುಳಿದ ನೆನಪುಗಳು. ಆ ನೆನೆಪುಗಳಲ್ಲಿ ಅದೇಷ್ಟೂ ವರ್ಷದ ಭಾವನೆಗಳು ತುಂಬಿಕೊಂಡಿವೆಯೋ ನಾ ಕಾಣೆ. ಒಂದಕ್ಕಿಂತ ಒಂದು ವಿಭಿನ್ನ,  ವಿಶಿಷ್ಟ. ಎಲ್ಲವೂ ಬದುಕು ಕೂಡಿಟ್ಟ ಬಣ್ಣದ ಭಾವನೆಗಳು. ಬೇಡವೆಂದರೂ ಬಂದು ಎದೆಯಾಳದಲ್ಲಿ ಮತ್ತೆ ಬಣ್ಣದ ಕನಸುಗಳನ್ನು ಕಟ್ಟಿಕೊಡುತ್ತವೆ. ಕೆಲವು ತಿಂಗಳ ಹಿಂದೆ ಮನೆಯ ಸಮಾರಂಭಕ್ಕೆಂದು ಇಡೀ ಮನೆಯನ್ನು ಸ್ವಚ್ಛಗೊಳಿಸಲು ನಾನು, ಅವ್ವ ಮನೆಯ ಸಂಧಿಗೊಂದಿಗಳಲ್ಲಿ ಹೊಕ್ಕು ಮನೆಗೆ ಅಂಟಿಕೊಂಡಿದ್ದ ಧೂಳ್‌ನ್ನು ತೆಗೆದು ಸ್ವಚ್ಛ ಮಾಡುತ್ತಿದ್ದೇವು. ಅದೇಷ್ಟು ವರ್ಷದ ಧೂಳಿತ್ತೋ ತೆಗೆದಷ್ಟು ಹರವು ಜಾಸ್ತಿ ಆಗುತ್ತಲ್ಲೇ ಇತ್ತು. ಯಾಕಂದ್ರೆ ಅಪ್ಪನ ಚಾಕ್ರಿ ಮಧ್ಯೆ ಅವ್ವನಿಗೆ ಮನೆಯ ಸ್ವಚ್ಛತೆ ಕಡೆ ಗಮನ ಹರಿಸಲು ಆಗಿರಿಲ್ಲ. ಒಂದು ಕಡೆ ಅವ್ವ ಮನೆಯ ಒಳ ಕೋಣೆಯ ಧೂಳು ತೆಗೆಯುತ್ತಿದ್ದರೆ, ನಾನು ನಮ್ಮ ಅಜ್ಜನ ಕಾಲದ ಅಂಗಡಿ(ಕಪಾಟ)ನ್ನು ಸ್ವಚ್ಛ ಮಾಡುವ ಕಾರ್ಯ ಕೈಗೆತ್ತುಕೊಂಡೆ, ಬಹಳ ದಿನಗಳಿಂದ ಆ ಕಪಾಟನ್ನು ತೆಗೆದಿದಲಿಲ್ಲ ಅನ್ಸಿರುತ್ತದೆ. ಒಳಗೆ ಜೇಡರ ತನ್ನ ಬಲೆ ಹೆಣೆದುಕೊಂಡು ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿತ್ತು.
ಹೀಗೆ ಕಪಾಟಿನ ಒಂದೊಂದೆ ಕಾಣೆಗಳನ್ನು ಸ್ವಚ್ಛ ಮಾಡುತ್ತಿದ್ದಂತೆ ಬಾಲ್ಯದಲ್ಲಿ ನನ್ನೊಟ್ಟಿಗೆ ಜೊತೆಯಾಗಿದ್ದ, ನನ್ನ ಅಳುವಿನಲ್ಲಿ ನಗುವಾಗಿ ಸಂತೈಸುತ್ತಿದ್ದ ಆಟಕಿ ಸಾಮಾನುಗಳು ಪ್ರತ್ಯೇಕ್ಷವಾಗಿ ಬಿಟ್ಟವು. ಮತ್ತೊಂದೆಡೆ ಪ್ರಾಥಮಿಕ ಶಾಲೆಯಲ್ಲಿ ಕಲಿತ ನೋಟ್ ಬುಕ್‌ಗಳ ಮೂಟೆಯೇ ಕಣ್ಣೇದುರು ಬಂದು ನಿಂತಿತು. ಒಂದೊಂದು ವಸ್ತುವಿನಲ್ಲೂ ಭಾವನೆಗಳ ಮಹಾಪೂರವೇ ತುಂಬಿದೆ. ಬನಶಂಕರಿ ಜಾತ್ರೆಯಲ್ಲಿ ಅಪ್ಪ ತಂದ ಆ ದೀಪದ ಸಣ್ಣ ಹಡಗು, ಗೊಡಚಿ ಜಾತ್ರೆಯಲ್ಲಿ ರಚ್ಚೆ ಹಿಡುದ ಅತ್ತು ಕೊಡಿಸಿಕೊಂಡ ಆ ಬಸ್, ಗನ್ನು, ಗೋಲಿ ಆಟದಲ್ಲಿ ಗೆದ್ದು ತಂದ ಗೋಲಿಗಳನ್ನು ಹಾಕಿಡಲು ಬಳಸುತ್ತಿದ್ದ ನಮ್ಮಜ್ಜನ ಆ ಸಣ್ಣ ಟ್ರಂಕ್, ಕ್ರಿಕೆಟ್ ಆಟದಲ್ಲಿ ಬೌಂಡ್ರಿ ಸಿಕ್ಸರ್‌ಗಳಿಗೆ ಸಾಥ್‌ಕೊಟ್ಟ ಆ ಬ್ಯಾಟ್, ನೋಟ್‌ಬುಕ್‌ನ ಪ್ರತಿ ಪೇಜ್‌ನಲ್ಲಿ ಹಾಕಿದ್ದ ರೆಡ್ ಮಾರ್ಕನ ಆ ಸಹಿ, ಕೊನೆಯ ಹಾಳೆಯಲ್ಲಿ ಪೆನ್ನು ಮೂಡಿಲ್ಲವೆಂದು ಗೀಜಿದ್ದು, ಒಂದೇ ಎರಡೇ ಹತ್ತು ಹಲವು ವಸ್ತುಗಳು ಸ್ವಚ್ಛತಾ ಕಾರ್ಯದ ವೇಳೆ ಸಿಕ್ಕು ಬಾಲ್ಯದ ಭಾವನಾ ಲೋಕದಲ್ಲಿ ಕರೆದುಕೊಂಡು ಹೋಗಿ ಮತ್ತೆ ಮಗುವಾಗಿಸಿದ್ದು ಮಾತ್ರ ಸುಳ್ಳಲ್ಲ.
ಮಾರನೇ ದಿನ ಓಣಿಯಲ್ಲಿ ಗುಜರಿ ವ್ಯಾಪಾರಿಯೊಬ್ಬ ಕೂಗುತ್ತಾ ತಳ್ಳು ಗಾಡಿಯಲ್ಲಿ ಹೋಗುತ್ತಿದ್ದ ಸಡನ್ ಆಗಿ ಅವ್ವ ಆ ಆಸಾಮಿಯನ್ನು ಕೆರೆದು ಬರಲು ಹೇಳಿದ್ಳು. ನಾನು ಯಾಕಿರಬಹುದು ಎಂದು ಯೋಚನೆ ಮಾಡುವಷ್ಟರಲ್ಲಿ, ಅವ್ವ ಒಳಗಡೆ ಇದ್ದ ನನ್ನ ಬಾಲ್ಯದ ಭಾವನೆಗಳನ್ನು ಹೊತ್ತ ಆಟಕಿ ಹಾಗೂ ಪುಸ್ತಕಗಳನ್ನು ತಂದು ಆ ಗುಜರಿ ಆಸಾಮಿ ಮುಂದೆ ಮಾರಾಟಕ್ಕಿಟ್ಟಳು. ಅರೇ ಕ್ಷಣ ಭಾವನೆಗಳು ಚೂರಾದ ಹಾಗೆ ಆಯಿತು. ತಕ್ಷಣ ಅವ್ವನಿಗೆ ಹೇಳಿದೆ, ಇವುಗಳನ್ನು ಮಾರಾವುದು ಬೇಡ ಎಂದು, ಅವ್ವ ಮಾತ್ರ ಲೇ ಬಾಡ್ಯಾ ಇವ ಎದ್ಕ ಬೇಕ ನಿಂಗ್. ಮನ್ಯಾಗಿಟ್ರ ಮೂಲಿಗೆ ದಂಡ ಅಂತ, ಮತ್ತೇ ಆ ಗುಜರಿ ಆಸಾಮಿಯೊಂದೆ ವ್ಯವಹಾರ ಮುಂದುವರೆಸಿದಲು. ಆದರೆ, ಇಬ್ಬರ ಚೌಕಾಸಿ ವ್ಯವಹಾರ ಹೊಂದಲಿಲ್ಲ ಅನಿಸುತ್ತೆ. ನಮ್ಮವ್ವ ಮತ್ತದೆ ಗತ್ತಿನಿಂದ ತಂದ ವಸ್ತುಗಳನ್ನು ಒಳಗೆ ತೆಗೆದುಕೊಂಡು  ಹೋದಳು. ನನಗೆ ಮಾತ್ರ ಎಲ್ಲಿಲ್ಲ್ಲದ ಸಂತಸ. ಒಳ ಒಳಗೆ ಬಾಲ್ಯದ ಮುಗುಳ್ನಗೆ ಕೇಕೆ ಹಾಕಿತು. ಆದರೆ, ಬಾಲ್ಯ ಕೂಡಿಟ್ಟ ಭಾವನೆಗಳು ಮಾತ್ರ ಇದೀಗ ಮಾರಾಟಕ್ಕಿವೆ. ಯಾವಾಗ ಮಾರಾಟವಾಗುತ್ತವೇಯೋ ಆ ದೇವರೆ ಬಲ್ಲ. ಆದರೆ, ಸದ್ಯ ಮಾತ್ರ ಸೂಕ್ತ ಬೆಲೆ ಇಲ್ಲದೆ ಭಾವನೆಗಳು ಉಳಿದುಕೊಂಡಿವೆ.

Saturday, 2 February 2019

ಹ್ಯಾಂಡಲ್ ಇಲ್ಲದ ಬೈಕ್ ಮೂಲಕ ಜಾಗೃತಿ!



ಸಾಹಸ ಸಾಮಾನ್ಯರಿಗೆ ಅಲ್ಲ, ಅದು ಏನಿದ್ದರೂ ಎಂಟೆದೆ ಬಂಟರಿಗೆ ಮಾತ್ರ. ಆದರೆ, ಈ ಸಾಹಸದಲ್ಲೂ ಒಂದು ದಾಖಲೆ ಮಾಡಬೇಕು ಎಂಬುವುದು ಎಲ್ಲರ ಕನಸು. ಹೀಗೆ ದಾಖಲೆಗಾಗಿ ಆರಂಭವಾದ ಸಾಹಸಿಗನ ಯಶೋಗಾಧೆ ಇದೀಗ ಸಾಮಾಜಿಕ ಜಾಗೃತಿ, ಧರ್ಮ ಜಾಗೃತಿಗಾಗಿ ತೆರೆದುಕೊಂಡಿದೆ. ಅಷ್ಟೇ ಅಲ್ಲದೇ ಈ ಸಾಹಸದ ಮೂಲಕ ಅನೇಕ ರೇಕಾರ್ಡ್ ಹಾಗೂ ಪ್ರಶಸ್ತಿ, ಸನ್ಮಾನಗಳನ್ನು ಬಿಗಿದಪ್ಪಿಕೊಂಡು ಮುನ್ನುಗ್ಗುತ್ತಿದ್ದಾರೆ.
ಹೌದು! ಅವರೇ ಬೈಕ್ ಸಾಹಸಿ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ ಈರಣ್ಣ ಜಿ. ಕುಂದರಗಿಮಠ. ಕಾರ್ ಹಾಗೂ ಬೈಕ್ ರೈಡಿಂಗ್ ಇಂದಿನ ಯುವಜನತೆಯ ಕ್ರೇಜ್. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳಿಗೆ ಹೆಸರಾಗಿರುವ ಉತ್ತರ ಕರ್ನಾಟಕದಲ್ಲಿ ಕಾರ್ ಹಾಗೂ ಬೈಕ್ ರೈಡಿಂಗ್ ಸಾಹಸಕ್ಕೆ ಸದ್ದು ಇದ್ದಿಲ್ಲ. ಆದರೆ, ದಾಖಲೆ ನಿರ್ಮಾಣದ ಬೆನ್ನು ಹತ್ತಿ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಸಾಹಸದಲ್ಲಿ ಎರಡು ಬಾರಿ ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ದಾಖಲೆ ಮಾಡಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ ಸಾಹಸಿ ಈ ಈರಣ್ಣ.
ಕಳೆದ 15 ವರ್ಷಗಳಿಂದ ಕಾರ್ ಹಾಗೂ ಬೈಕ್ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಕೃಷಿ ಕುಟುಂಬದಿಂದ ಬಂದ ಸಾಹಸಿ ಯುವಕ. ಈ ಸಾಹಸಿಗೆ 15ನೇ ವಯಸ್ಸಿನಲ್ಲಿಯೇ ಕಾರ್ ಹಾಗೂ ಬೈಕ್ ರೈಡಿಂಗ್ ಮಾಡುವ ಹವ್ಯಾಸ. ಈ ಹವ್ಯಾಸ ಇವತ್ತು ಸಾಧನೆಯ ಕಡೆಗೆ ಕರೆದೊಯ್ದು ದಾಖಲೆ ಮಾಡುವಂತೆ ಮಾಡಿದೆ. ಇವರು ಒದಿದ್ದು ಪಿಯುಸಿ ಮಾತ್ರ. ಸಾಧನೆ ಮಾತ್ರ ಇಡೀ ದೇಶವೇ ಮೆಚ್ಚಿ ಹೌದ ಹೌದ ಅನ್ನುವಂತಹದ್ದು.
ಇಂಡಿಯಾ ಬುಕ್ ಆಫ್ ರೆಕಾರ್ಡ್:
ಈ ಬೈಕ್ ನೋಡೋಕೆ ಎಲ್ಲ ಬೈಕ್‌ಗಳಂತೆ ಕಾಣುತ್ತದೆ. ಅಚ್ಚರಿ ಎಂದರೆ ಈ ಬೈಕ್‌ಗೆ ಹ್ಯಾಂಡಲ್ ಇಲ್ಲ! ಹ್ಯಾಂಡ್ಲ್ ಇಲ್ಲದ ಬೈಕ್ ಅಂತ ಕೇಳಿದರೆ ಸಾಕು ಮೈ ಕೈಯೆಲ್ಲಾ ಜುಂ ಎಂದು ರೋಮಗಳೆಲ್ಲ ಎದ್ದು ನಿಲ್ಲುತ್ತವೆ, ಹ್ಯಾಂಡಲ್ ಇರುವ ಬೈಕ್‌ನ್ನು ಓಡಿಸುವುದೇ ಕಷ್ಟ! ಹ್ಯಾಂಡಲ್ ಇರುವ ಬೈಕನ್ನೇರಿ ಹ್ಯಾಂಡಲ್ ಹಿಡಿದುಕೊಂಡೇ ಬೈಕ್ ಓಡಿಸಿದರೂ ಅಪಘಾತಗಳಾಗುವ ಇಂದಿನ ದಿನಗಳಲ್ಲಿ ಈ ಸಾಹಸಿ ಬೈಕ್‌ಗೆ ಇದ್ದ ಹ್ಯಾಂಡಲ್‌ನ್ನು ಸಂಪೂರ್ಣವಾಗಿ ತೆಗೆದು ಹಾಕಿ ರಾಜ್ಯ ರಾಷ್ಟ್ರದಲ್ಲೆ ಪ್ರಥಮ ಬಾರಿ ಯಾರು ಮಾಡಿರದಂತಹ ಅತ್ಯಂತ ಕಠಿಣವಾದ ಬೈಕ್ ಸಾಹಸ ಕ್ರೀಡೆಗೆ ಸಜ್ಜಾಗಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ಬಾಗಲಕೋಟೆ ಜಿಲ್ಲಾ ಭವನದಿಂದ ಬೆಂಗಳೂರಿನ ಶಕ್ತಿ ಕೇಂದ್ರ ವಿಧಾನಸೌಧದವರಗೆ ಸುಮಾರು 500 ಕಿಮೀಗಳನ್ನು 14 ಗಂಟೆಗಳಲ್ಲಿ ಮೈಜುಮ್ಮೆನ್ನಿಸುವಂತೆ ಪ್ರಾಣವನ್ನೆ ಪಣಕ್ಕಿಟ್ಟು ಬೈಕ್‌ನ್ನು ರೈಡಿಂಗ್ ಮಾಡಿದ್ದಾರೆ. ಅತ್ಯಂತ ಅಪಾಯಕಾರಿ ಹಾಗೂ ರೋಚಕವಾದ ಮಾರಣಾಂತಿಕ ಬೈಕ್ ರೈಡಿಂಗ್ ಸಾಹಸದಲ್ಲಿ ರೋಮಾಂಚನ ಮೂಡಿಸಿ ರಾಜ್ಯದ ಜನರಿಗೆ ಅಚ್ಚರಿ ಮೂಡಿಸಿದ ವೈಶಿಷ್ಟ್ಯಪೂರ್ಣವಾದ ಸಾಧನೆಗೈದ ಸಾಹಸ 2015ರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿ ಐತಿಹಾಸಿಕ ರಾಷ್ಟ್ರಮಟ್ಟದ ನೂತನ ದಾಖಲೆ ಸೃಷ್ಟಿಸಿ ಜಗತ್ತಿನ ಜನರ ಚಿತ್ತವನ್ನು ಗಮನ ಸೆಳೆದ ಬೈಕ್ ಕಿಂಗ್.
ಧಾರ್ಮಿಕ, ಸಾಮಾಜಿಕ ಒಳಿತಿಗೆ:
2017ರಲ್ಲಿ ಧರ್ಮ ಶಾಂತಿ ಹಾಗೂ ಜನ ಜಾಗೃತಿಗಾಗಿ ರಾಷ್ಟ್ರದಲ್ಲೇ ಪ್ರಥಮಬಾರಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ರೈಡಿಂಗ್ ಮಾಡುತ್ತಾ ಕೈಯಲ್ಲಿ ವೀರಶೈವ ಲಿಂಗಾಯತ ಧರ್ಮಧ್ವಜ ಹಾಗೂ ಓಂಕಾರದ ಧ್ವಜವನ್ನು ಹಿಡಿದುಕೊಂಡು ಕೂಡಲಸಂಗಮದಿಂದ ಗದಗದವರೆಗೆ ಇಲಕಲ್ಲ, ಹುನಗುಂದ, ಶಿರೂರ, ಬಾಗಲಕೋಟೆ, ಲೋಕಾಪೂರ, ಸಾಲಹಳ್ಳಿ, ಚಂದರಿಗಿ, ಯರಗಟ್ಟಿ, ಮುರಗೋಡ, ಬೈಲಹೊಂಗಲ, ದೇವಲಾಪುರ, ಯಡಾಲ, ನೇಗಿನಹಾಳ, ಎಮ್.ಕೆ ಹುಬ್ಬಳಿ, ಕಿತ್ತೂರ, ಧಾರವಾಡ, ಹುಬ್ಬಳ್ಳಿ, ಮಾರ್ಗವಾಗಿ ಸುಮಾರು 400 ಕಿ.ಮಿಗಳನ್ನು ಕೇವಲ 13 ಗಂಟೆಗಳಲ್ಲಿ ಗುರಿ ತಲುಪಿ ಮಾರ್ಗದುದ್ದಕ್ಕೂ ಧರ್ಮಶಾಂತಿ ಹಾಗೂ ಜನಜಾಗೃತಿಯನ್ನು ಮೂಡಿಸಿದ್ದಾರೆ.
2018ರಲ್ಲಿ ಯುವ ಶಕ್ತಿ ಜಾಗೃತಿ ಹಾಗೂ ವ್ಯಸನ ಮುಕ್ತ ಜಾಗೃತಿಗಾಗಿ ಗಡಿನಾಡು ಬೆಳಗಾವಿ ಜಿಲ್ಲೆಯ ನಿಡಸೋಸಿಯ ಶ್ರೀ ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠಕ್ಕೆ ಮಹಾ ಶಿವರಾತ್ರಿಯ ಮಹೋತ್ಸವದ ಅಂಗವಾಗಿ ಕೂಡಲಸಂಗಮದಿಂದ ನಿಡಸೋಸಿ ಶ್ರೀದುರದುಂಡೀಶ್ವರ ಮಠದವರೆಗೆ ರಾಷ್ಟ್ರಧ್ವಜ ಹಾಗೂ ಕನ್ನಡಧ್ವಜ ಹಿಡಿದುಕೊಂಡು ಯುವ ಶಕ್ತಿ ಜಾಗೃತಿ ಹಾಗೂ ವ್ಯಸನ ಮುಕ್ತ ಜಾಗೃತಿಗಾಗಿ ರಾಜ್ಯರಾಷ್ಟ್ರದಲ್ಲೇ ಪ್ರಥಮಬಾರಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ಕೂಡಲಸಂಗಮದಿಂದ ನಿಡಸೋಸಿ ಮಠದವರೆಗೆ ಜಾಗೃತಿ ಮೂಡಿಸಿದ್ದಾರೆ.
ದಾಖಲೆಗಳ ಅರಸ:
ರಾಷ್ಟ್ರದಲ್ಲೇ ಪ್ರಥಮಬಾರಿ ಎರಡು ಕೈ-ಕಾಲುಗಳನ್ನು ಕತ್ತರಿಯಾಗಿಸಿಕೊಂಡು ಹಗ್ಗದಿಂದ ಕಟ್ಟಿಕೊಂಡು ಜಿಲ್ಲೆಯ ಜಿಲ್ಲಾಭವನದಿಂದ ಬಾಗಲಕೋಟೆ, ಇಲಕಲ್ಲ, ವಿಜಯಪುರ, ಸೊಲ್ಲಾಪೂರ, ಪುಣೆ, ಕೊಲ್ಲಾಪೂರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ರಾಜಧಾನಿ ಬೆಂಗಳೂರಿನವರೆಗೆ ಅಪಾಯಕಾರಿ ಹಾಗೂ ರೋಮಾಂಚನಭರಿತವಾಗಿ ಹಗ್ಗಕಟ್ಟಿದ ಕೈ-ಕಾಲುಗಳಿಂದಲೆ ಕಾರ್‌ನ್ನು ಡ್ರೈವಿಂಗ್ ಮಾಡಿ 1341 ಕಿ.ಮಿಗಳನ್ನು ಕೇವಲ 48 ಗಂಟೆಯಲ್ಲಿ ಗುರಿತಲುಪಿದ ಸಾಧನೆಯ ಸಾಹಸ 2014ರ ಲಿಮ್ಕಾ ದಾಖಲೆ ಸೇರಿದೆ.
2009ರಲ್ಲಿ ಬೈಕ್ ಸಾಹಸದಲ್ಲಿ ರಾಷ್ಟ್ರದಲ್ಲೆ ಪ್ರಥಮ ಬಾರಿ ಬೈಕಿನ ಹ್ಯಾಂಡಲ್ ಹಿಡಿಯದೆ ಎರಡು ಕೈ ಬಿಟ್ಟು ಬೆಂಗಳೂರಿನ ವಿಧಾನಸೌಧದಿಂದ ದೆಹಲಿಯವರೆಗೆ 2500 ಕಿ.ಮೀಗಳನ್ನು ಕೇವಲ 5 ದಿನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್. ರಾಜಸ್ತಾನ, ಹರಿಯಾಣ ರಾಜ್ಯಗಳ ಮೂಲಕ ಬೆಂಗಳೂರು, ತುಮಕೂರ, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮುಂಬೈ, ಸೂರತ್, ಜೈಪುರ್ ಮಾರ್ಗವಾಗಿ ದೆಹಲಿವರೆಗೆ ಎರಡು ಕೈ ಬಿಟ್ಟು ಬೈಕ್ ಓಡಿಸಿ ಗುರಿ ತಲುಪಿ ದಾಖಲೆ ಮಾಡಿ ರಾಷ್ಟ್ರಾದ್ಯಂತ ಗಮನ ಸೆಳೆದಿದ್ದಾರೆ.
ಅರಸಿ ಬಂದ ಪ್ರಶಸ್ತಿಗಳು:
ಜಿಲ್ಲಾಡಳಿತದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ(2008), ಜಿಲ್ಲಾ ಕ್ರೀಡಾ ಇಲಾಖೆಯಿಂದ ಜಿಲ್ಲಾ ಯುವ ಪ್ರಶಸ್ತಿ(2008), ಹುನಗುಂದ ತಾಲೂಕಾಡಳಿತದಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಶಸ್ತಿ(2009) ಬಾಗಲಕೋಟೆ ಜಿಲ್ಲೆ ಜೇ.ಸಿ.ಐ.ಇಲಕಲ್ಲ ವಲಯದಿಂದ ಸಾಹಸಿ ಬೈಕ್ ಸವಾರಿ ಪ್ರಶಸ್ತಿ(2009), ಜಿಲ್ಲಾ ಕನ್ನಡಸಾಹಿತ್ಯ ಪರಿಷತ್‌ನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ (2011), ಉಡುಪಿ ಜಿಲ್ಲೆ ಹೆಬ್ರಿ ಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಾಹಸರತ್ನ ರಾಜ್ಯಪ್ರಶಸ್ತಿ (2012), ಕೊಪ್ಪಳ ಜಿಲ್ಲೆ ಚಳಗೇರಿ ಶ್ರೀರುದ್ರಮುನಿ ಶಿವಾಚಾರ್ಯ ಮಠದಿಂದ ವಾಹನ ಭಾಸ್ಕರ ಪ್ರಶಸ್ತಿ ರಾಜ್ಯಪ್ರಶಸ್ತಿ(2014), ಗದಗ ಜಿಲ್ಲೆ ನರೇಗಲ್ ಬಾಲಕೃಷ್ಣ ಸಾಹಿತ್ಯ ವೇದಿಕೆಯಿಂದ  ಸಾಹಸವೀರ ರಾಜ್ಯಪ್ರಶಸ್ತಿ (2015), ಕರ್ನಾಟಕ ಸರ್ಕಾರದ ಪೌರಾಡಳಿತ ಇಲಾಖೆಯ ನಗರಸಭೆಯಿಂದ ಕನ್ನಡ ರಾಜ್ಯೋತ್ಸವ ಗೌರವ(2015) ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯಿಂದ  ಕರ್ನಾಟಕ ಭೂಷಣ ರಾಜ್ಯಪ್ರಶಸ್ತಿ(2016), ಬೆಳಗಾವಿಜಿಲ್ಲೆ ನಿಡಸೋಸಿ ಶ್ರೀ ದುರುದುಂಡೀಶ್ವರ ಮಠದಿಂದ ರೈಡರ್ ರತ್ನ ರಾಜ್ಯಪ್ರಶಸ್ತಿ (2017), ತುಮಕೂರಿನ ಶ್ರೀ ಸಿದ್ದಗಂಗಾ ಮಠದಿಂದ ಸಾಧನಾ ರತ್ನ ಪ್ರಶಸಿ(2017), ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಿಂದ ಸಾಧನ ಸಿರಿ ರಾಜ್ಯ ಪ್ರಶಸ್ತಿ(2017) ಹೀಗೆ ಇನ್ನು ಅನೇಕ ಪ್ರಶಸ್ತಿ ಸನ್ಮಾನಗಳು ಇವರ ಜಾಗೃತಿ ಕಾರ್ಯ, ಹಾಗೂ ಸಾಹಕ್ಕೆ ಒಲಿದು ಬಂದಿವೆ.
ಇವರ ಈ ಸಾಧನೆ ಹೀಗೆ ಮುಂದುವರೆಯಲಿ, ರಾಜ್ಯಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂಬುವುದು ಜನರ ಆಶಯ. ಈರಣ್ಣ ಕುಂದರಗಿಮಠ ಅವರನ್ನು ಸಂಪರ್ಕಿಸಲು 99023 47392 ಕರೆ ಮಾಡಿ.
---

ನನ್ನ ಈ ಸಾಧನೆಗೆ ನನ್ನ ಜನರೆ ಕಾರಣ. ನನ್ನ ಎಲ್ಲ ಸಾಧನೆಗಳಿಗೆ ಆರ್ಥಿಕ ಸಹಾಯ ಮಾಡೋದು ಇದೆ ಜನ. ಇವರ ಋಣ ತೀರಿಸಲು ನನ್ನಿಂದ ಅಸಾಧ್ಯ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇನೆ. ಹ್ಯಾಂಡಲ್ ಇಲ್ಲದ ಬೈಕ್ ಸಾಹಸಕ್ಕೆ ಪರಿಶ್ರಮ ಬೇಕು. ಪ್ರ್ಯಾಕ್ಟಿಸ್ ಇಲ್ಲದೆ ಯಾರು ಮಾಡಬೇಡಿ.
-ಈರಣ್ಣ ಕುಂದರಗಿಮಠ, ಬೈಕ್ ಸಾಹಸಿ.

Monday, 28 January 2019

ಫೆಸ್ಬುಕ್ ಲೈಫ್ ಇಷ್ಟೇನೆ..!


ಆ..ಗಿಜಿಗಿಜಿಗಿಜಿ...ಅಯ್ಯೋ...ಅಯ್ಯೋ..ಲೈಪು ಇಷ್ಟೇನೆ
ಕಿರಿಕಿರಿ ಕಯ ಕಯ ಕೂ ಕೋ..ಲೈಪು ಹಂಗೇನೆ...

ಹೋ....
ಫೆಸ್ಬುಕ್ನಲ್ಲಿ ಎಂಟ್ರಿ ಕೊಟ್ಟು ಪ್ರೋಪೈಲ್ಗೆ ಒಳ್ಳೆ ಪೋಟೋ ಹಾಕಿ ಲೈಕು, ಕಂಮೆಂಟು ಪಡಕೋ..
ಲೈಪು ಇಷ್ಟೇನೆ

ಹಂಗು ಹಿಂಗು ಎಡಿಟು ಮಾಡಿ, ಗೆಳೆಯರು ಹೇಳೋ ಪೋಟೋ ಹಾಕಿ ಭೇಷ ಅನಿಸ್ಕೋ
ಲೈಪು ಇಷ್ಟೇನೆ.

ಹುಡ್ಗಿರ ಇಷ್ಟ ಪಡುವ ಹಾಗೆ ಡ್ರೆಸು ಮಾಡ್ಕೋ, ಒಳ್ಳೋಳ್ಳೆ ಫೋಟೋ ತೆಗೆದು ಫೆಸ್ಬುಕಗೆ ಹಾಕ್ತಾ ಇರು, ಲೈಪು ಇಷ್ಟೇನೆ..

ನಮ್ಮ ಫ್ರೆಂಡ್ಸು ಸ್ವಲ್ಪ ಪಾಪದವರು, ಲೈಕು, ಕಮೆಂಟು ಕೊಡೋಕೆ ಯೋಚಿಸ್ತಾರೆ
ಆದ್ರು ಪೋಟೋಹಾಕ್ತಾ ಇರು,
ಲೈಪು ಇಷ್ಟೇನೆ...

ಆ ಗಿಜಿಬಿಜಿಗಿಜಿ ಓ..ಓ..ಓ
ಕಿರಿಕಿರಿ ಕಯ ಕಯ ಕೊ ಕೂ ಕೋ
ಕಿರಿಯರ ಸರಿಗಮ ಅ ಆ ಇ ಉ ಊ ಎ ಏ ಒ ಓ ಓ

ಗೆಳೆಯಾ ನಿನಗೆ ಟೆನ್ಶನ್ ಯಾಕೊ, ಬೇಕಾದ್ರೆ ನೀನು ಪೋಟೋ ಹಾಕೋ, ಊರಲ್ಲಿ ಹೋದ ಮಾನ ಫೆಸ್ಬುಕ್ನಲ್ಲಿ ಪಡಕೋ ಲೈಪು ಇಷ್ಟೇನೆ.

ಗೆಳೆಯಾ ನೋಡು ಬರವಣಿಗೆ ಬಿಗಿಯಾಗ್ ಹಿಡ್ಕೊ ವೈರಿಗಳು
ಕೈಯ ಮುಗಿಯಲಿ ನಿಂಗೆ ಲೃಪು ಇಷ್ಟೇನೆ
ಹುಡ್ಗಾ ಹುಡ್ಗಿ ಚಾಟು ಮಾಡಿ, ಪ್ರೀತಿ ಪ್ರೇಮ ಅಂತ ಸುತ್ತಾಡಿ ಲವ್ವರ ಎಲ್ಲ್ ಹೋದ್ಲಂತ ಗೂಗಲ್ನಲ್ಲಿ ಹುಡುಕು ಲೈಪು ಇಷ್ಟೇನೆ

ಲಾಗೌಟ್ ಆಗ್ಬೇಡ ಫೆಸ್ಬುಕ್ ನಿಂದ ಪ್ರೋಪೈಲ್ ನಿಂದೇನೆ ಎಂಟ್ರಿ ಆದ ಮೇಲೆ ಲೈಪು ಇಷ್ಟೇನೆ..

ನೀ ಹಾಕಿದ್ದ ಫೋಸ್ಟಗೆ ಲೈಕ್
ಬರಲಿಲ್ಲ ಅಂತ ಬೇಜಾರ ಆಗಬ್ಯಾಡ, ಮುಂದ ಅವರ ಕಮೆಂಟು ಮಾಡ್ಯಾರು ಲೈಪು ಇಷ್ಟೇನೆ

ಲವ್ ಬಗ್ಗೆ ಯದ್ವಾ ತದ್ವಾ ಬರೆದು ನೀನು ಹಚ್ಚನಾಗಿ ತೀರುಗಬ್ಯಾಡ ಜೀವನ ಮುಂದ
ಒಜ್ಜಿ ಅಕೈತಿ ಲೈಪು ಇಷ್ಟೇನೆ

ಹಗಲೋತ್ತಲೆ ಮೊಬೈಲ್ಗೆ ಪವರ
ಬ್ಯಾಂಕ್ ಹಾಕಿ ಹುಡ್ಗಿಗೆ ಚಾಟ್ ಮಾಡ್ಬ್ಯಾಡ, ಪವರ್ ಬ್ಯಾಂಕ್ ಖಾಲಿ ಆದ್ರ ಲೈಪು ಕಷ್ಟನೇ

ಇಷ್ಟ ಇದ್ರು ಲೈಕು ಮಾಡು
ಕಷ್ಟ ಆದ್ರು ಕಮೆಂಟು ಮಾಡು
ಒಮ್ಮೆ ಎದುರಿಗೆ ಬಂದ್ರೆ ಮಾತಾಡ್ಸು ಲೈಪು ಇಷ್ಟೇನೆ...ಲೈಪು ಹಿಂಗೇನೆ
*ಮಂಜುನಾಥ ಗದಗಿನ*💐

Sunday, 20 January 2019

ಬನಶಂಕರಿ ಜಾತ್ರ್ಯಾಗ ನಾಟಕ ಗುಂಗು

ಮಂಜುನಾಥ ಗದಗಿನ

ಬಾದಾಮಿ ಬನಂಕರಿ ಜಾತ್ರೆ ಅಂದ್ರ,ಬಾಲಕರಿಂದ ಹಿಡಿದು ಹಣ್ಣ ಹಣ್ಣ ಮುದುಕರವರೆಗೂ ಶ್ಯಾನಾ ಪ್ರೀತಿ. ಯಾಕಂದ್ರ ತಂದೆ-ತಾಯಿ ಬಿಟ್ಟ ಈ ಜಾತ್ರೆನಲ್ಲಿ ಎಲ್ಲವೂ ದೊರೆಯುತ್ತದೆ ಎಂಬ ಲೋಕಾರೂಢಿ ಮಾತಿದೆ. ಅದು ಕರೇ ಕೂಡಾ ಹೌದು, ಇನ್ನ ಜಾತ್ರೆಯಲ್ಲಿ ಮನರಂಜನೆಗೆನೂ ಕಡಿಮೆ ಇಲ್ಲ ಈ ಸಾರಿ ಭರ್ಜರಿ ನಾಟಕಗಳು ಬಂದಿವೆ. ಅದರಲ್ಲೂ ಕಾಮಿಡಿ ಕಿಲಾಡಿ, ಮಜಾಭಾರತನಲ್ಲಿ ಮಿಂಚು ಹರಿಸಿದ ಸ್ಟಾರ್ ನಟರ ದಂಡೆ ಇದೆ. ಉದಾ. ನಮ್ಮ ರಾಮದುರ್ಗ ಅಪ್ಪಣ್ಣ ರಾಮದುರ್ಗ, ಸಂದಾನಂದ ಕಾಳೆ, ನೀಲಾ ಜೇವರ್ಗಿ, ಚಿಲ್ಲರೇ ಮಂಜ ಅಲಿಯಾಸ ಮಂಜುನಾಥ ಗುಡ್ಡದವರ, ರಾಮದುರ್ಗದ ಸದ್ಯ ದಂಡುಪಾಳ್ಯದಲ್ಲಿ ನಟನಾ ಪಾರಮ್ಯ ಮೇರೆದ ವಿಠ್ಠಲ್ ಪರೀಟ ಹೀಗಾ ಸ್ಟಾರ್ ನಟರು ನಗುವಿನ ಕಚಗುಳಿ ಇಡಲು ಅಣಿಯಾಗಿದ್ದಾರೆ. ಒಟ್ಟನಲ್ಲಿ ಈ ಬಾರಿ ಜಾತ್ರಿನಲ್ಲಿ ನಾಟಕ ಗುಂಗ ಜೋರ್ ಐತಿ.
ಹಿಂದೊಮ್ಮೆ ನಾಟಕ ರತ್ನ ಗುಬ್ಬಿ ವೀರಣ್ಣ, ಏಳಗಿ ಬಾಳಪ್ಪ, ಕಂದಗಲ್ಲ ಹಣಮಂತರಾಯ, ಚಿತ್ತರಗಿ ಗಂಗಾಧರ ಶಾಸ್ತ್ರಿ, ಡಾ. ರಾಜಕುಮಾರ ಹಾಸ್ಯ ಕಲಾವಿದ ನರಸಿಂಹರಾಜು, ಸೇರಿದಂತೆ ಮುಂತಾದವರು ಈ ಜಾತ್ರೆಯಲ್ಲಿ ಬಂದು ನಾಟಕವನ್ನಾಡಿ ಹೋಗಿರುವುದು ಒಂದು ವಿಶೇಷ. ಇವರ ಪೌರಾಣಿಕ, ಭಕ್ತಿ ಪ್ರಧಾನ ನಾಟಕಗಳನ್ನು ಹಿರಿಯರು ಇಂದಿಗೂ ಮೆಲಕು ಹಾಕುತ್ತಾರೆ.
ಚಲನಚಿತ್ರ ನಟ, ನಟಿಯರಾದ ವಿನಯಾಪ್ರಸಾದ, ಪ್ರೇಮಾ, ಉಮಾಶ್ರೀ, ಟೈಗರ್ ಪ್ರಭಾಕರ, ಬಿರಾದಾರ, ಶ್ರುತಿ, ಟೆನ್ನಿಸ್ ಕೃಷ್ಣ, ದಾಮಿನಿ, ಇನ್ನು ಅನೇಕ ಧಾರಾವಾಹಿ ಕಲಾವಿದರು ಸೇರಿದಂತೆ ಕಿರು ತೆರೆಯ ನಟ ನಟಿಯರು ಬಂದು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರೊಂದಿಗೆ ಇದೀಗ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ, ಸೇರಿದಂತೆ ಅನೇಕ ನಟರು ಇಲ್ಲಿ ಕಲೆ ಪ್ರದರ್ಶನ ನೀಡಿದ್ದನನ್ನು ನೆನೆಸಿಕೊಳ್ಳಲೇ ಬೇಕು.
----
ಈ ಬಾರಿ ಬಂದ ನಾಟಕಗಳು..

1. ಹೆಣ್ಣು ಹೆತ್ತವಳು.
2. ಪ್ಯಾಟಿ ಹುಡಿಗ್ಯಾರ.
3. ಬಂದರ ನೊಡ ಬಂಗಾರಿ.
4. ತೊದಲ ಗಂಗಿ ಹರಿದಾಳ ಅಂಗಿ.
5. ನಿದ್ದಿಗೆಡಿಶ್ಯಾಳ ಬಸಲಿಂಗಿ.
6. ಹುಚ್ಚ ಹಿಡಿಶ್ಯಾಳ ಹುಚ್ಚಮಂಗಿ.
7. ಅವ್ವ ಬಂಗಾರಿ ಮಗಳ ಸಿಂಗಾರಿ.
8. ಮಂಗಳೂರು ಮಾಣಿ ಹುಬ್ಬಳ್ಳಿ ರಾಣಿ.
9. ಕೈ ಕೊಟ್ಟ ಹುಡಗಿ ತಲೆ ಕೆಟ್ಟ ಹುಡುಗ.
10. ಅಪ್ಪ ಮನ್ಯಾಗ ಮಗಳ ಸಂತ್ಯಾಗ.
11. ಅತ್ತಿ ಅಟ್ಟದ ಮ್ಯಾಗ ಮಾವ ಕಟ್ಟಿಮ್ಯಾಗ.
12. ಬಂಡ ಬಡ್ಡಿ ಮಗ

Friday, 4 January 2019

ನಟನೆಯಲ್ಲಿ ಅಪ್ಪಟ್ಟ ಅಪರಂಜಿ ಈ ಅಪ್ಪಣ್ಣ



ಮಂಜುನಾಥ ಗದಗಿನ
ನಾವು ಮಾಡುವ ಅದೇಷ್ಟೋ ತರ‌್ಲೆ ತುಂಟಾಟಗಳು ನಮ್ಮ ಭವಿಷ್ಯದ ಭದ್ರ ಬುನಾದಿಗೆ ಕಾರಣವಾಗುತ್ತದೆ. ಅದೇ ನಮ್ಮ ಏಳ್ಗೆಗೆ ಕಾರಣವಾಗುತ್ತದೆ ಎಂದರೆ ನಂಬಲೆ ಬೇಕು. ಹೌದು! ಇವರು ಮಾಡುತ್ತಿದ್ದ ಕೋತಿ ಚೇಷ್ಠೆ, ತಂಟಾಟಗಳೆ ಇವರಿಗೆ ವರವಾಗಿ ಇಂದು ದೊಡ್ಡ ಕಲಾವಿದರಾಗಿ ಬೆಳೆಯಲು ಕಾರಣವಾಗಿದೆ.
ಅವರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಅಪ್ಪಣ್ಣ(ಅಪ್ಪು) ರಾಮದುರ್ಗ. ಅಪ್ಪಣ್ಣ ನಾಲ್ಕು ವರ್ಷವರಿದ್ದಾಗ ಅವರ ತಂದೆ ತೀರಿಕೊಂಡರು. ಆವಾಗ ಅಪ್ಪಣ್ಣ ಅವರ ತಾಯಿಗೆ ಪ್ರಪಂಚ ಎಂದರೆ ಏನು ಎಂಬ ಅರಿವೇ ಇರಲಿಲ್ಲ. ಇಂತಹ ಸಮಯದಲ್ಲೂ ಆ ತಾಯಿ ನಾಲ್ಕು ಜನರ ಮನೆಯ ಮುಸುರೆ ತಿಕ್ಕಿ ತನ್ನ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಸಾಕಿ ಸಲುಹಿದರು. ಆದರೆ, ಅಪ್ಪಣ್ಣ ಮಾತ್ರ ತರ‌್ಲೆ ಮಾಡಿಕೊಂಡು, ಅವರಿವರನ್ನು ನಗಿಸುತ್ತಾ ಇದ್ದರು. ಆದರೆ, ಅಪ್ಪಣ್ಣ ಅವರ ತಾಯಿಗೆ ಮಾತ್ರ ಇದು ಇಷ್ಟವಾಗದೇ ಪ್ರತಿದಿನ ಬೈಯುತ್ತಿದ್ದರು. ಆದರೆ, ರಾಮದುರ್ಗ ಕಲಾವಿದರಾದ ಅಂತಾಪುರ ಬಾಬು ಹಾಗೂ ಅಶೋಕ ಗೋನಬಾಳ ಅವರು, ಅಪ್ಪಣ್ಣವರ ಈ ತರ‌್ಲೆ ತುಂಟಾಟದಲ್ಲಿ ಇದ್ದ ಆ ಒಂದು ಹಾಸ್ಯವನ್ನು ಗುರುತಿಸಿ, ಅಪ್ಪಣ್ಣನ ನಿನ್ನಲ್ಲಿ ಒಂದು ಅಗಾಧ ಹಾಸ್ಯ ಕಲೆ ಇದೆ. ಈ ಕಲೆಯನ್ನು ಹಾಳು ಮಾಡಿಕೊಳ್ಳಬೇಡ ಎಂದು ಪ್ರೋತ್ಸಾಹಿಸಿದರು. ಆವಾಗ ಅಪ್ಪಣ್ಣ ಅವರಿಗೆ ಒಳಿತು ಎಂದು ಕಾಣಿಸಿತು. ನಂತರ ಗುರುಗಳಾದ ಅಂತಾಪುರ ಬಾಬು ಅವರ ಸಹಾಯದಿಂದ 2015ರಲ್ಲಿ ನಿನಾಸಂನಲ್ಲಿ ಡಿಪ್ಲೋಮಾ ಇನ್ ಆರ್ಟ್ ತರಬೇತಿಗೆ ಸೇರಿಕೊಂಡರು. ಅಲ್ಲಿ ಉತ್ತಮ ತರಬೇತಿ ಪಡೆದುಕೊಂಡು ಅದ್ಭುತ ಕಲಾವಿದರಾಗಿ ಹೊರಹೊಮ್ಮಿದರು. ನಂತರ ಆಟಮಾಟ ಆಶ್ರಯದಲ್ಲಿ ಅಕ್ರಮ ಸಂತಾನ ಎಂಬ ನಾಟಕ ಪ್ರದರ್ಶನ ಮಾಡಿದರು. ಇದು ಭರ್ಜರಿ ಹಿಟ್ ಆಗಿ ಅಪ್ಪಣ್ಣ ಅವರಿಗೆ ಹೆಸರು ತಂದು ಕೊಟ್ಟಿತು. ಅನಂತರ ಅಪ್ಪು ಅವರ ಹಿಂದೆಯೇ ಅದೃಷ್ಟದ ಬಾಗಿಲು ತೆರೆಯುತ್ತಾ ಬಂದಿತು. ಇದು ಸಾಧ್ಯವಾಗಿದ್ದು ಕಲಾ ದೇವತೆಯಿಂದ ಎನ್ನುತ್ತಾರೆ ಅಪ್ಪು ರಾಮದುರ್ಗ. ಆದರೆ, ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಬಡತನ ಕಲಿಸುತ್ತದೆ ಎಂಬ ಮಾತು ಅಪ್ಪಣ್ಣ ಅವರಿಗೆ ಒಪ್ಪುವಂತಹದ್ದು, ಯಾಕಂದರೆ ಇವರು ಬಡತನದಲ್ಲಿ ಬೆಳೆದ ಪ್ರತಿಭೆ.

ಧಾರಾವಾಹಿ, ಸಿನಿಮಾದಲ್ಲಿ ನಟನೆ:

ತರ‌್ಲೆ ತುಂಟಾಟಗಳಿಂದ ಎಲ್ಲರ ಕಾಲೆಳೆಯುತ್ತಾ, ಎಲ್ಲರಿಂದಲೂ ತಿರಸ್ಕಾರಕ್ಕೊಳಗಾಗಿದ್ದ ಒಬ್ಬ ಯುವಕ ಧಾರವಾಹಿ, ಸಿನಿಮಾದಲ್ಲಿ ನಟನೆ ಮಾಡುವುದು ಎಂದರೆ ಸಾಮಾನ್ಯದ ಮಾತಲ್ಲ. ಆದರೆ, ಅಪ್ಪಣ್ಣ ಮಾತ್ರ ಇದಕ್ಕೆ ವಿರುದ್ಧ. ತನ್ನ ಋಣಾತ್ಮಕ ಶಕ್ತಿಯನ್ನೇ ಧನಾತ್ಮಕ ಶಕ್ತಿಯನ್ನಾಗಿಸಿಕೊಂಡು ಪ್ರಿನ್ಸ್‌ನಂತೆ ಮೇಲೆದ್ದು ಇಂದು ಸಿನಿಮಾ, ಧಾರಾವಾಹಿಗಳಲ್ಲಿ ಮಿಂಚು ಹರಿಸುತ್ತಾ, ಎಲ್ಲರನ್ನು ನಕ್ಕು ನಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಮಿಡಿ ಕಿಲಾಡಿಗಳಲ್ಲಿ ರಾಮದುರ್ಗದ ಕೀರ್ತಿ ಪತಾಕೆಯನ್ನು ಬಾನೆತ್ತಕ್ಕೆ ಹಾರಿಸುತ್ತಿದ್ದಾರೆ. ಅಪ್ಪಣ್ಣ ಆಕಾಶದೀಪ, ಮೀನಾಕ್ಷಿ ಮದುವೆ, ಪಾರ್ವತಿ ಪರಮೇಶ್ವರ ಎಂಬ ಸಿರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಧ್ವಜ, ರವಿಹಿಸ್ಟ್ರಿ ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಆದರೆ, ಈ ಮೂರು ಚಿತ್ರಗಳು ಮುಂದಿನ ತಿಂಗಳು ಬಿಡುಗಡೆಯಾಗಲಿವೆ.

ಈಗಲು ತಾಯಿ ಬಾಳೆಹಣ್ಣ ಮಾರಾಟ:

ಅಪ್ಪಣ್ಣ ಅವರ ತಾಯಿ ಖಾಲಿ ಕುಳಿತುಕೊಳ್ಳುವವರು ಅಲ್ಲ. ಸದಾ ಒಂದಿಲ್ಲೊಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು. ಅಪ್ಪಣ್ಣ ದೊಡ್ಡ ಕಲಾವಿದರಾಗಿದ್ದು ಸಹಿತ ಅವರ ಬಡತನ ಮಾತ್ರ ದೂರವಾಗಿಲ್ಲ. ತಾಯಿ ಮಾತ್ರ ಈಗಲೂ ರಾಮದುರ್ಗದಲ್ಲಿ ಬಾಳೇಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ(ಸಹೋದರ) ಗೌಂಡಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಪ್ಪಣ್ಣ ಅವರು ಮಾತ್ರ ಕಲಾ ಪೋಷಕರಾಗಿ ಎಲ್ಲರನ್ನು ನಕ್ಕು-ನಗಿಸುತ್ತಾ ಬಣ್ಣದ ಬದುಕಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಈ ನಟನೆ ಇನ್ನು ಹೆಚ್ಚು ಬೆಳೆಯಲಿ ಕುಂದಾನಗರಿಯ ಹೆಸರು ಪಸರಿಸಲಿ ಎಂಬುವುದು ಕಲಾಪ್ರೇಕ್ಷಕರ ಆಶಯ.

Monday, 31 December 2018

ಸಾಕ್ಸ್ ಮಾರುತ್ತಿದ್ದವ, ದೊಡ್ಡ ಕಲಾವಿದನಾದ ಕಹಾನಿ!


ಮಂಜುನಾಥ ಗದಗಿನ 
ಅವು ಕಷ್ಟದ ದಿನಗಳು ದಿನ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಇಂತಹ ಸಮಯದಲ್ಲಿ ನಮ್ಮೂರಿನ ದುರ್ಗಾದೇವಿ ಭಜನಾ ಸಂಘದ ಮೂಲಕ ಜನಪದ, ಭಜನಾ ಪದಗಳನ್ನು ಹಾಡುತ್ತ ಇದ್ದೆ. ಇದೇ ಸಮಯÓÜಕ್ಕೆ ಹರಲಾಪುರದ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಎಸ್.ಎಸ್.ಹಿರೇಮಠ ಎಂಬುವವರು ನನ್ನನ್ನು ಬೀದಿ ನಾಟಕ ಮಾಡಲಿಕ್ಕೆ ಕರೆದರು. ಅಲ್ಲಿಂದ ನನ್ನ ನಟನಾ ಬದುಕು ಆರಂಭವಾಯಿತು. ನಂತರ ವಾರ್ತಾ ಇಲಾಖೆ ಮುಖಾಂತರ ರಾಜ್ಯದ ವಿವಿಧೆಡೆ ಬೀದಿ ನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಾ ಬಂದೆ. ಈ ವೇಳೆ ವಾರ್ತಾ ಇಲಾಖೆಯಿಂದ ದಿನಕ್ಕೆ ಕೊಡುತ್ತಿದ್ದ 200 ನನಗ ದೊಡ್ಡ ಸಂಬಳ ಆಗಿತ್ತು.
ಹೀಗೆ ಊರೂರು ನಾಟಕ ಮಾಡಿಕೊಂಡ ಹೋದ ಸಮಯದಲ್ಲಿ ಸರಿಯಾದ ಊಟ, ನಿದ್ದೆ ಇರುತ್ತಿರಲಿಲ್ಲ. ಆ ವೇಳೆ ಊರಿನ ಅಂಗನವಾಡಿ, ದೇವಾಲಯಗಳೇ ನಮಗೆ ಆಶ್ರಯ ತಾಣಗಳಾಗಿದ್ದವು. ಇನ್ನು ಊರಿನ ಅಧ್ಯಕ್ಷರು, ಉಪಾಧ್ಯಕ್ಷ, ಕಲಾಪ್ರೇಮಿಗಳು ನೀಡುತ್ತಿದ್ದ ತುತ್ತು ಅನ್ನವೇ ನಮಗೆ ಮೃಷ್ಟಾನ್ನವಾಗಿತ್ತು. ಅದೆಷ್ಟೋ ಸಾರಿ ಸ್ನಾನವನ್ನೇ ಮಾಡದೇ ಗಬ್ಬು ವಾಸನೆ ಮೈಯಿಂದ ಊರೂರು ತಿರಗಾಡಿದ್ದೇನೆ. ಇದೇ ವೇಳೆ ಸಾವಿರಕ್ಕೂ ಅಧಿಕ ಬೀದಿ ನಾಟಕಗಳಲ್ಲಿ ನಟಿಸಿದ್ದೇನೆ. ಆ ಕಷ್ಟದ ದಿನಗಳನ್ನ ನೆನೆದರೆ ಕಣ್ಣೀರು ಕಪಾಳಕ್ಕೆ ಬರುತ್ತವೆ. ಆದ್ರೆ ಕಷ್ಟ ಪಟ್ರೆ ಸುಖ ಇದೆ ಎಂಬ ಮಾತು ನನ್ನ ಬದುಕಿನಲ್ಲಿ ನಿಜ ಆಗಿದೆ.
ನನ್ನೂರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುಲ್ತಾನಪುರ. ಬಹಳ ಚಿಕ್ಕ ಹಳ್ಳಿ. ಹೆಸರು ಸದಾನಂದ ಕಾಳಿ. ಸದ್ಯ ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ಎಂಬ ಸ್ಪರ್ಧೆಯಲ್ಲಿ ಎಲ್ಲರನ್ನು ನಕ್ಕು ನಗಿಸುತ್ತಾ ಇದ್ದೇನೆ. ಈಗಿನ ಸದಾನಂದ ಶಾಲಾದಿನಗಳಲ್ಲಿ ದಡ್ಡ ಸದಾನಂದ ಆಗಿದ್ದ. ಹೀಗಾಗಿಯೇ ಎಸ್ಸೆಸ್ಸೆಲ್ಲಿಯಲ್ಲಿ ನಾಲ್ಕು ವಿಷಯಗಳಲ್ಲಿ ಡುಮ್ಕಿ ಹೊಡೆದಿದ್ದೆ. ನಂತರ ವರ್ಷಕ್ಕ ಒಂದ್ರಂತ ಪಾಸ್ ಆದೆ. ನಂತರ ಬಿಎಡ್ ಮಾಡಿಕೊಂಡೆ. ಮುಂದೆ ಕಲಾ ಸೇವೆ ನನ್ನನ್ನು ಕೈಬೀಸಿ ಕರೆಯಿತು. ಜಾನಪದ, ಭಜನಾ ಪದ, ಬೀದಿ ನಾಟಕ ಅಂತ ರಾಜ್ಯದೆಲ್ಲೆಡೆ ಸುತ್ತಿದೆ. ಇದೇ ವೇಳೆ ನಟನೆಯಲ್ಲಿ ಇನ್ನಷ್ಟು ಪಳಗಬೇಕೆಂದು ಚಿತ್ರದುರ್ಗದ ಸಾಣೇಹಳ್ಳಿ ಶಿವಸಂಚಾರ ಮಠದಲ್ಲಿ ಒಂದು ವರ್ಷದ ನಟನಾ ತರಬೇತಿ ಪಡೆದೆ. ಈ ವೇಳೆ ಮೂರ್ನಾಲ್ಕು ನಾಟಕಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಮಲೆಗಳಲ್ಲಿ ಮದುಮಗಳು ಎಂಬ ಅದ್ಭುತ ಹಾಗೂ ದೀರ್ಘ ನಾಟಕದಲ್ಲಿ ಅಭಿನಯಿಸುವ ಭಾಗ್ಯ ನನಗೆ ದೊರೆಯಿತು. ಇದು ಬರೋಬ್ಬರಿ ಒಂಬತ್ತು ತಾಸಿನ ನಾಟಕ. ಇಂತಹ ನಾಟಕದಾಗ ನನ್ಗ 70 ವರ್ಷ ವಯಸ್ಸಿನ ವೆಂಕಟಪ್ಪ ನಾಯಕ ಎಂಬ ಪಾತ್ರ ದೊರೆಯಿತು. ಈ ನಾಟಕ ನನ್ನ ಬಣ್ಣದ ಬದುಕಿಗೆ ಚಿನ್ನದ ದಿನಗಳನ್ನಾಗಿ ಕಲ್ಪಿಸಿತು.
ಮನೆಗೆಲಸ ಮಾಡಿದ್ದೇನೆ:
ಆರಂಭದ ದಿನಗಳಲ್ಲಿ ಬೆಂಗಳೂರು ನನಗೆ ಹೊಸತು. ಇಲ್ಲಿ ಬಂದಾಗ ಎಲ್ಲವನ್ನು ಅಚ್ಚರಿಯ ಕಂಗಳಲ್ಲಿ ನೋಡುತ್ತಿದ್ದೆ. ಈ ವೇಳೆ ಹೊಟ್ಟೆ ಪಾಡಿಗಾಗಿ ಒಬ್ಬ ಶ್ರೀಮಂತರ ಮನೆಯಲ್ಲಿ ಕೆಲಸದಾಳು ಆಗಿ ದುಡಿಯುತ್ತಿದ್ದೆ. ಅವರ ಮನೆ ಕ್ಲೀನ್ ಮಾಡುವುದು. ಅವರ ಕಾರ್ ತೊಳೆಯುವುದು. ಅವರು ಕಾಲು ಒತ್ತು ಅಂದಾಗ ಕಾಲ ಒತ್ತುವುದು ಮಾಡುತ್ತಿದೆ. ಇದಷ್ಟೇ ಅಲ್ಲದೇ ಬೆಂಗಳೂರು ಮಹಾನಗರದಲ್ಲಿ ಗೊತ್ತಿಲ್ಲದ ಸಂಧಿ ಗೊಂದಿಗಳಲ್ಲಿ ತಿರುಗಾಡಿ ಹೆಲ್ಮೆಟ್, ಗ್ಲಾಸ್, ಸಾಕ್ಸ್‌ಗಳನ್ನು ಮಾರಿ ಜೀವನ ಕಂಡುಕೊಂಡಿದ್ದೇನೆ. 20 ಲೀಟರ್‌ನ ವಾಟರ್ ಕ್ಯಾನ್‌ಗಳನ್ನು ಸೇಲ್ ಮಾಡಿದ್ದೇನೆ. ಇಂದು ಅದೇ ರಸ್ತೆಯಲ್ಲಿ ಓಡಾಡುವಾಗ ಹಿಂದಿನ ದಿನಗಳು ಕಣ್ಣುಂದೆ ಬರುತ್ತವೆ. ನನ್ನ ಈ ಎಲ್ಲ ಕಷ್ಟಗಳು ನನ್ನೊಬ್ಬನಿಗೆ ಗೊತ್ತು. ಈ ನೋವುಗಳನ್ನು ಮತ್ಯಾರ ಮುಂದೆಯೂ ನಾನು ತೋಡಿಕೊಂಡಿಲ್ಲ. ಆದರೆ, ಆ ದೇವರು ನನ್ನ ಕಷ್ಟಗಳಿಗೆ ಸದ್ಯ ಉತ್ತಮ ಪ್ರತಿಫಲ ನೀಡಿದ್ದಾನೆ ಅನಿಸುತ್ತಿದೆ. 
ಮಾಸ್ಟರ್ ಆನಂದ ಕೈ ಹಿಡಿದರು:
ನನ್ನ ನಟನೆ ನೋಡಿ ಮಾಸ್ಟರ್ ಆನಂದ ತಮ್ಮ ಧಾರಾವಾಹಿ ರೋಬೋ ಫ್ಯಾಮಿಲಿಯಲ್ಲಿ ಒಂದು ಅವಕಾಶ ಒದಗಿಸಿಕೊಟ್ಟರು. ನಂತರ ದಿನಗಳಲ್ಲಿ ಮತ್ತಷ್ಟು ಅವಕಾಶಗಳು ನನ್ನನ್ನು ಅರಸಿ ಬಂದವು. ಶ್ರೀಮಾನ ಶ್ರೀಮತಿ ಮತ್ತಿತರ ಧಾರವಾಹಿಗಳಲ್ಲಿ ಅಭಿನಯಿಸಿ ನಾಡಿನ ಜನರ ಹೃದಯಲ್ಲಿ ಒಂದು ಸ್ಥಾನ ಪಡೆದ ಹೆಮ್ಮೆ ನನಗಿದೆ. ಅಷ್ಟೇ ಅಲ್ಲದೇ ಪಟಾಕಿ, ನನ್ನ ನಿನ್ನ ಪ್ರೇಮಕಥೆ, ಮಟಾಶ್, ನರಗುಂದ ಬಂಡಾಯ, ಚರಂತಿ, ಪ್ರಯಾಣಿಕರ ಗಮನಕ್ಕೆ ಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ಅವುಗಳಲ್ಲಿ ಪಟಾಕಿ, ನನ್ನ ನಿನ್ನ ಪ್ರೇಮಕಥೆ ಬಿಡುಗಡೆಯಾಗಿವೆ. ಉಳಿದ ಸಿನೆಮಾಗಳು ಬಿಡುಗಡೆಯಾಗಲು ಸನ್ನದ್ಧ ಇವೆ. ಕಲಾ ಪ್ರೇಮಿಗಳು ಇಲ್ಲಿವರೆಗೂ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲ ನೀಡಿ ಪೋಷಿಸುತ್ತಾರೆ ಎಂಬ ನಂಬಿಕೆ ನನ್ನದು.

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...