Saturday, 2 February 2019

ಹ್ಯಾಂಡಲ್ ಇಲ್ಲದ ಬೈಕ್ ಮೂಲಕ ಜಾಗೃತಿ!



ಸಾಹಸ ಸಾಮಾನ್ಯರಿಗೆ ಅಲ್ಲ, ಅದು ಏನಿದ್ದರೂ ಎಂಟೆದೆ ಬಂಟರಿಗೆ ಮಾತ್ರ. ಆದರೆ, ಈ ಸಾಹಸದಲ್ಲೂ ಒಂದು ದಾಖಲೆ ಮಾಡಬೇಕು ಎಂಬುವುದು ಎಲ್ಲರ ಕನಸು. ಹೀಗೆ ದಾಖಲೆಗಾಗಿ ಆರಂಭವಾದ ಸಾಹಸಿಗನ ಯಶೋಗಾಧೆ ಇದೀಗ ಸಾಮಾಜಿಕ ಜಾಗೃತಿ, ಧರ್ಮ ಜಾಗೃತಿಗಾಗಿ ತೆರೆದುಕೊಂಡಿದೆ. ಅಷ್ಟೇ ಅಲ್ಲದೇ ಈ ಸಾಹಸದ ಮೂಲಕ ಅನೇಕ ರೇಕಾರ್ಡ್ ಹಾಗೂ ಪ್ರಶಸ್ತಿ, ಸನ್ಮಾನಗಳನ್ನು ಬಿಗಿದಪ್ಪಿಕೊಂಡು ಮುನ್ನುಗ್ಗುತ್ತಿದ್ದಾರೆ.
ಹೌದು! ಅವರೇ ಬೈಕ್ ಸಾಹಸಿ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ ಈರಣ್ಣ ಜಿ. ಕುಂದರಗಿಮಠ. ಕಾರ್ ಹಾಗೂ ಬೈಕ್ ರೈಡಿಂಗ್ ಇಂದಿನ ಯುವಜನತೆಯ ಕ್ರೇಜ್. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳಿಗೆ ಹೆಸರಾಗಿರುವ ಉತ್ತರ ಕರ್ನಾಟಕದಲ್ಲಿ ಕಾರ್ ಹಾಗೂ ಬೈಕ್ ರೈಡಿಂಗ್ ಸಾಹಸಕ್ಕೆ ಸದ್ದು ಇದ್ದಿಲ್ಲ. ಆದರೆ, ದಾಖಲೆ ನಿರ್ಮಾಣದ ಬೆನ್ನು ಹತ್ತಿ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಸಾಹಸದಲ್ಲಿ ಎರಡು ಬಾರಿ ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ದಾಖಲೆ ಮಾಡಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ ಸಾಹಸಿ ಈ ಈರಣ್ಣ.
ಕಳೆದ 15 ವರ್ಷಗಳಿಂದ ಕಾರ್ ಹಾಗೂ ಬೈಕ್ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಕೃಷಿ ಕುಟುಂಬದಿಂದ ಬಂದ ಸಾಹಸಿ ಯುವಕ. ಈ ಸಾಹಸಿಗೆ 15ನೇ ವಯಸ್ಸಿನಲ್ಲಿಯೇ ಕಾರ್ ಹಾಗೂ ಬೈಕ್ ರೈಡಿಂಗ್ ಮಾಡುವ ಹವ್ಯಾಸ. ಈ ಹವ್ಯಾಸ ಇವತ್ತು ಸಾಧನೆಯ ಕಡೆಗೆ ಕರೆದೊಯ್ದು ದಾಖಲೆ ಮಾಡುವಂತೆ ಮಾಡಿದೆ. ಇವರು ಒದಿದ್ದು ಪಿಯುಸಿ ಮಾತ್ರ. ಸಾಧನೆ ಮಾತ್ರ ಇಡೀ ದೇಶವೇ ಮೆಚ್ಚಿ ಹೌದ ಹೌದ ಅನ್ನುವಂತಹದ್ದು.
ಇಂಡಿಯಾ ಬುಕ್ ಆಫ್ ರೆಕಾರ್ಡ್:
ಈ ಬೈಕ್ ನೋಡೋಕೆ ಎಲ್ಲ ಬೈಕ್‌ಗಳಂತೆ ಕಾಣುತ್ತದೆ. ಅಚ್ಚರಿ ಎಂದರೆ ಈ ಬೈಕ್‌ಗೆ ಹ್ಯಾಂಡಲ್ ಇಲ್ಲ! ಹ್ಯಾಂಡ್ಲ್ ಇಲ್ಲದ ಬೈಕ್ ಅಂತ ಕೇಳಿದರೆ ಸಾಕು ಮೈ ಕೈಯೆಲ್ಲಾ ಜುಂ ಎಂದು ರೋಮಗಳೆಲ್ಲ ಎದ್ದು ನಿಲ್ಲುತ್ತವೆ, ಹ್ಯಾಂಡಲ್ ಇರುವ ಬೈಕ್‌ನ್ನು ಓಡಿಸುವುದೇ ಕಷ್ಟ! ಹ್ಯಾಂಡಲ್ ಇರುವ ಬೈಕನ್ನೇರಿ ಹ್ಯಾಂಡಲ್ ಹಿಡಿದುಕೊಂಡೇ ಬೈಕ್ ಓಡಿಸಿದರೂ ಅಪಘಾತಗಳಾಗುವ ಇಂದಿನ ದಿನಗಳಲ್ಲಿ ಈ ಸಾಹಸಿ ಬೈಕ್‌ಗೆ ಇದ್ದ ಹ್ಯಾಂಡಲ್‌ನ್ನು ಸಂಪೂರ್ಣವಾಗಿ ತೆಗೆದು ಹಾಕಿ ರಾಜ್ಯ ರಾಷ್ಟ್ರದಲ್ಲೆ ಪ್ರಥಮ ಬಾರಿ ಯಾರು ಮಾಡಿರದಂತಹ ಅತ್ಯಂತ ಕಠಿಣವಾದ ಬೈಕ್ ಸಾಹಸ ಕ್ರೀಡೆಗೆ ಸಜ್ಜಾಗಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ಬಾಗಲಕೋಟೆ ಜಿಲ್ಲಾ ಭವನದಿಂದ ಬೆಂಗಳೂರಿನ ಶಕ್ತಿ ಕೇಂದ್ರ ವಿಧಾನಸೌಧದವರಗೆ ಸುಮಾರು 500 ಕಿಮೀಗಳನ್ನು 14 ಗಂಟೆಗಳಲ್ಲಿ ಮೈಜುಮ್ಮೆನ್ನಿಸುವಂತೆ ಪ್ರಾಣವನ್ನೆ ಪಣಕ್ಕಿಟ್ಟು ಬೈಕ್‌ನ್ನು ರೈಡಿಂಗ್ ಮಾಡಿದ್ದಾರೆ. ಅತ್ಯಂತ ಅಪಾಯಕಾರಿ ಹಾಗೂ ರೋಚಕವಾದ ಮಾರಣಾಂತಿಕ ಬೈಕ್ ರೈಡಿಂಗ್ ಸಾಹಸದಲ್ಲಿ ರೋಮಾಂಚನ ಮೂಡಿಸಿ ರಾಜ್ಯದ ಜನರಿಗೆ ಅಚ್ಚರಿ ಮೂಡಿಸಿದ ವೈಶಿಷ್ಟ್ಯಪೂರ್ಣವಾದ ಸಾಧನೆಗೈದ ಸಾಹಸ 2015ರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿ ಐತಿಹಾಸಿಕ ರಾಷ್ಟ್ರಮಟ್ಟದ ನೂತನ ದಾಖಲೆ ಸೃಷ್ಟಿಸಿ ಜಗತ್ತಿನ ಜನರ ಚಿತ್ತವನ್ನು ಗಮನ ಸೆಳೆದ ಬೈಕ್ ಕಿಂಗ್.
ಧಾರ್ಮಿಕ, ಸಾಮಾಜಿಕ ಒಳಿತಿಗೆ:
2017ರಲ್ಲಿ ಧರ್ಮ ಶಾಂತಿ ಹಾಗೂ ಜನ ಜಾಗೃತಿಗಾಗಿ ರಾಷ್ಟ್ರದಲ್ಲೇ ಪ್ರಥಮಬಾರಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ರೈಡಿಂಗ್ ಮಾಡುತ್ತಾ ಕೈಯಲ್ಲಿ ವೀರಶೈವ ಲಿಂಗಾಯತ ಧರ್ಮಧ್ವಜ ಹಾಗೂ ಓಂಕಾರದ ಧ್ವಜವನ್ನು ಹಿಡಿದುಕೊಂಡು ಕೂಡಲಸಂಗಮದಿಂದ ಗದಗದವರೆಗೆ ಇಲಕಲ್ಲ, ಹುನಗುಂದ, ಶಿರೂರ, ಬಾಗಲಕೋಟೆ, ಲೋಕಾಪೂರ, ಸಾಲಹಳ್ಳಿ, ಚಂದರಿಗಿ, ಯರಗಟ್ಟಿ, ಮುರಗೋಡ, ಬೈಲಹೊಂಗಲ, ದೇವಲಾಪುರ, ಯಡಾಲ, ನೇಗಿನಹಾಳ, ಎಮ್.ಕೆ ಹುಬ್ಬಳಿ, ಕಿತ್ತೂರ, ಧಾರವಾಡ, ಹುಬ್ಬಳ್ಳಿ, ಮಾರ್ಗವಾಗಿ ಸುಮಾರು 400 ಕಿ.ಮಿಗಳನ್ನು ಕೇವಲ 13 ಗಂಟೆಗಳಲ್ಲಿ ಗುರಿ ತಲುಪಿ ಮಾರ್ಗದುದ್ದಕ್ಕೂ ಧರ್ಮಶಾಂತಿ ಹಾಗೂ ಜನಜಾಗೃತಿಯನ್ನು ಮೂಡಿಸಿದ್ದಾರೆ.
2018ರಲ್ಲಿ ಯುವ ಶಕ್ತಿ ಜಾಗೃತಿ ಹಾಗೂ ವ್ಯಸನ ಮುಕ್ತ ಜಾಗೃತಿಗಾಗಿ ಗಡಿನಾಡು ಬೆಳಗಾವಿ ಜಿಲ್ಲೆಯ ನಿಡಸೋಸಿಯ ಶ್ರೀ ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠಕ್ಕೆ ಮಹಾ ಶಿವರಾತ್ರಿಯ ಮಹೋತ್ಸವದ ಅಂಗವಾಗಿ ಕೂಡಲಸಂಗಮದಿಂದ ನಿಡಸೋಸಿ ಶ್ರೀದುರದುಂಡೀಶ್ವರ ಮಠದವರೆಗೆ ರಾಷ್ಟ್ರಧ್ವಜ ಹಾಗೂ ಕನ್ನಡಧ್ವಜ ಹಿಡಿದುಕೊಂಡು ಯುವ ಶಕ್ತಿ ಜಾಗೃತಿ ಹಾಗೂ ವ್ಯಸನ ಮುಕ್ತ ಜಾಗೃತಿಗಾಗಿ ರಾಜ್ಯರಾಷ್ಟ್ರದಲ್ಲೇ ಪ್ರಥಮಬಾರಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ಕೂಡಲಸಂಗಮದಿಂದ ನಿಡಸೋಸಿ ಮಠದವರೆಗೆ ಜಾಗೃತಿ ಮೂಡಿಸಿದ್ದಾರೆ.
ದಾಖಲೆಗಳ ಅರಸ:
ರಾಷ್ಟ್ರದಲ್ಲೇ ಪ್ರಥಮಬಾರಿ ಎರಡು ಕೈ-ಕಾಲುಗಳನ್ನು ಕತ್ತರಿಯಾಗಿಸಿಕೊಂಡು ಹಗ್ಗದಿಂದ ಕಟ್ಟಿಕೊಂಡು ಜಿಲ್ಲೆಯ ಜಿಲ್ಲಾಭವನದಿಂದ ಬಾಗಲಕೋಟೆ, ಇಲಕಲ್ಲ, ವಿಜಯಪುರ, ಸೊಲ್ಲಾಪೂರ, ಪುಣೆ, ಕೊಲ್ಲಾಪೂರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ರಾಜಧಾನಿ ಬೆಂಗಳೂರಿನವರೆಗೆ ಅಪಾಯಕಾರಿ ಹಾಗೂ ರೋಮಾಂಚನಭರಿತವಾಗಿ ಹಗ್ಗಕಟ್ಟಿದ ಕೈ-ಕಾಲುಗಳಿಂದಲೆ ಕಾರ್‌ನ್ನು ಡ್ರೈವಿಂಗ್ ಮಾಡಿ 1341 ಕಿ.ಮಿಗಳನ್ನು ಕೇವಲ 48 ಗಂಟೆಯಲ್ಲಿ ಗುರಿತಲುಪಿದ ಸಾಧನೆಯ ಸಾಹಸ 2014ರ ಲಿಮ್ಕಾ ದಾಖಲೆ ಸೇರಿದೆ.
2009ರಲ್ಲಿ ಬೈಕ್ ಸಾಹಸದಲ್ಲಿ ರಾಷ್ಟ್ರದಲ್ಲೆ ಪ್ರಥಮ ಬಾರಿ ಬೈಕಿನ ಹ್ಯಾಂಡಲ್ ಹಿಡಿಯದೆ ಎರಡು ಕೈ ಬಿಟ್ಟು ಬೆಂಗಳೂರಿನ ವಿಧಾನಸೌಧದಿಂದ ದೆಹಲಿಯವರೆಗೆ 2500 ಕಿ.ಮೀಗಳನ್ನು ಕೇವಲ 5 ದಿನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್. ರಾಜಸ್ತಾನ, ಹರಿಯಾಣ ರಾಜ್ಯಗಳ ಮೂಲಕ ಬೆಂಗಳೂರು, ತುಮಕೂರ, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮುಂಬೈ, ಸೂರತ್, ಜೈಪುರ್ ಮಾರ್ಗವಾಗಿ ದೆಹಲಿವರೆಗೆ ಎರಡು ಕೈ ಬಿಟ್ಟು ಬೈಕ್ ಓಡಿಸಿ ಗುರಿ ತಲುಪಿ ದಾಖಲೆ ಮಾಡಿ ರಾಷ್ಟ್ರಾದ್ಯಂತ ಗಮನ ಸೆಳೆದಿದ್ದಾರೆ.
ಅರಸಿ ಬಂದ ಪ್ರಶಸ್ತಿಗಳು:
ಜಿಲ್ಲಾಡಳಿತದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ(2008), ಜಿಲ್ಲಾ ಕ್ರೀಡಾ ಇಲಾಖೆಯಿಂದ ಜಿಲ್ಲಾ ಯುವ ಪ್ರಶಸ್ತಿ(2008), ಹುನಗುಂದ ತಾಲೂಕಾಡಳಿತದಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಶಸ್ತಿ(2009) ಬಾಗಲಕೋಟೆ ಜಿಲ್ಲೆ ಜೇ.ಸಿ.ಐ.ಇಲಕಲ್ಲ ವಲಯದಿಂದ ಸಾಹಸಿ ಬೈಕ್ ಸವಾರಿ ಪ್ರಶಸ್ತಿ(2009), ಜಿಲ್ಲಾ ಕನ್ನಡಸಾಹಿತ್ಯ ಪರಿಷತ್‌ನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ (2011), ಉಡುಪಿ ಜಿಲ್ಲೆ ಹೆಬ್ರಿ ಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಾಹಸರತ್ನ ರಾಜ್ಯಪ್ರಶಸ್ತಿ (2012), ಕೊಪ್ಪಳ ಜಿಲ್ಲೆ ಚಳಗೇರಿ ಶ್ರೀರುದ್ರಮುನಿ ಶಿವಾಚಾರ್ಯ ಮಠದಿಂದ ವಾಹನ ಭಾಸ್ಕರ ಪ್ರಶಸ್ತಿ ರಾಜ್ಯಪ್ರಶಸ್ತಿ(2014), ಗದಗ ಜಿಲ್ಲೆ ನರೇಗಲ್ ಬಾಲಕೃಷ್ಣ ಸಾಹಿತ್ಯ ವೇದಿಕೆಯಿಂದ  ಸಾಹಸವೀರ ರಾಜ್ಯಪ್ರಶಸ್ತಿ (2015), ಕರ್ನಾಟಕ ಸರ್ಕಾರದ ಪೌರಾಡಳಿತ ಇಲಾಖೆಯ ನಗರಸಭೆಯಿಂದ ಕನ್ನಡ ರಾಜ್ಯೋತ್ಸವ ಗೌರವ(2015) ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯಿಂದ  ಕರ್ನಾಟಕ ಭೂಷಣ ರಾಜ್ಯಪ್ರಶಸ್ತಿ(2016), ಬೆಳಗಾವಿಜಿಲ್ಲೆ ನಿಡಸೋಸಿ ಶ್ರೀ ದುರುದುಂಡೀಶ್ವರ ಮಠದಿಂದ ರೈಡರ್ ರತ್ನ ರಾಜ್ಯಪ್ರಶಸ್ತಿ (2017), ತುಮಕೂರಿನ ಶ್ರೀ ಸಿದ್ದಗಂಗಾ ಮಠದಿಂದ ಸಾಧನಾ ರತ್ನ ಪ್ರಶಸಿ(2017), ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಿಂದ ಸಾಧನ ಸಿರಿ ರಾಜ್ಯ ಪ್ರಶಸ್ತಿ(2017) ಹೀಗೆ ಇನ್ನು ಅನೇಕ ಪ್ರಶಸ್ತಿ ಸನ್ಮಾನಗಳು ಇವರ ಜಾಗೃತಿ ಕಾರ್ಯ, ಹಾಗೂ ಸಾಹಕ್ಕೆ ಒಲಿದು ಬಂದಿವೆ.
ಇವರ ಈ ಸಾಧನೆ ಹೀಗೆ ಮುಂದುವರೆಯಲಿ, ರಾಜ್ಯಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂಬುವುದು ಜನರ ಆಶಯ. ಈರಣ್ಣ ಕುಂದರಗಿಮಠ ಅವರನ್ನು ಸಂಪರ್ಕಿಸಲು 99023 47392 ಕರೆ ಮಾಡಿ.
---

ನನ್ನ ಈ ಸಾಧನೆಗೆ ನನ್ನ ಜನರೆ ಕಾರಣ. ನನ್ನ ಎಲ್ಲ ಸಾಧನೆಗಳಿಗೆ ಆರ್ಥಿಕ ಸಹಾಯ ಮಾಡೋದು ಇದೆ ಜನ. ಇವರ ಋಣ ತೀರಿಸಲು ನನ್ನಿಂದ ಅಸಾಧ್ಯ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇನೆ. ಹ್ಯಾಂಡಲ್ ಇಲ್ಲದ ಬೈಕ್ ಸಾಹಸಕ್ಕೆ ಪರಿಶ್ರಮ ಬೇಕು. ಪ್ರ್ಯಾಕ್ಟಿಸ್ ಇಲ್ಲದೆ ಯಾರು ಮಾಡಬೇಡಿ.
-ಈರಣ್ಣ ಕುಂದರಗಿಮಠ, ಬೈಕ್ ಸಾಹಸಿ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...