Sunday, 3 February 2019

ಭಾವನೆಗಳು ಮಾರಾಟಕ್ಕಿವೆ..!


ಮಂಜುನಾಥ ಗದಗಿನ 

ಭವ ಬಂಧನದಲ್ಲಿ ಭಾವನೆಗಳದ್ದೇ ಮೆರೆದಾಟ. ಆ ತುಂಟ ನೆನೆಪಿನೊಂದಿಗೆ ತಂಟೆ ತೆಗೆಯುವುದೆರೆಂದರೆ ಅದೇನು ಇಷ್ಟವೋ ಈ ಭಾವನೆಗಳಿಗೆ. ಕಾಲು ಕೆದರಿ ಕೆಣಕುತ್ತವೆ, ಕೆರಳಿಸುತ್ತವೆ. ಮತ್ತೇ ಸಾವೇ ಇಲ್ಲ ಎಂಬಂತೆ ಪುಟಿದ್ದೇದ್ದು ನಕ್ಕು, ಅಳಿಸುತ್ತವೆ. ಇಂತಹ ಭಾವನೆಗಳಿಗ ಮಾರಾಟಕ್ಕಿವೆ. ಆದರೆ, ಸೂಕ್ತ ಬೆಲೆ ದೊರೆಯದೇ ಹಾಗೆಯೇ ಉಳಿದುಕೊಂಡು ನೆನೆಪಿನ ಅಲೆಯೊಂದಿಗೆ ಚಲ್ಲಾಟವಾಡುತ್ತಿವೆ.
ಅವು ಅಳಿದುಳಿದ ನೆನಪುಗಳು. ಆ ನೆನೆಪುಗಳಲ್ಲಿ ಅದೇಷ್ಟೂ ವರ್ಷದ ಭಾವನೆಗಳು ತುಂಬಿಕೊಂಡಿವೆಯೋ ನಾ ಕಾಣೆ. ಒಂದಕ್ಕಿಂತ ಒಂದು ವಿಭಿನ್ನ,  ವಿಶಿಷ್ಟ. ಎಲ್ಲವೂ ಬದುಕು ಕೂಡಿಟ್ಟ ಬಣ್ಣದ ಭಾವನೆಗಳು. ಬೇಡವೆಂದರೂ ಬಂದು ಎದೆಯಾಳದಲ್ಲಿ ಮತ್ತೆ ಬಣ್ಣದ ಕನಸುಗಳನ್ನು ಕಟ್ಟಿಕೊಡುತ್ತವೆ. ಕೆಲವು ತಿಂಗಳ ಹಿಂದೆ ಮನೆಯ ಸಮಾರಂಭಕ್ಕೆಂದು ಇಡೀ ಮನೆಯನ್ನು ಸ್ವಚ್ಛಗೊಳಿಸಲು ನಾನು, ಅವ್ವ ಮನೆಯ ಸಂಧಿಗೊಂದಿಗಳಲ್ಲಿ ಹೊಕ್ಕು ಮನೆಗೆ ಅಂಟಿಕೊಂಡಿದ್ದ ಧೂಳ್‌ನ್ನು ತೆಗೆದು ಸ್ವಚ್ಛ ಮಾಡುತ್ತಿದ್ದೇವು. ಅದೇಷ್ಟು ವರ್ಷದ ಧೂಳಿತ್ತೋ ತೆಗೆದಷ್ಟು ಹರವು ಜಾಸ್ತಿ ಆಗುತ್ತಲ್ಲೇ ಇತ್ತು. ಯಾಕಂದ್ರೆ ಅಪ್ಪನ ಚಾಕ್ರಿ ಮಧ್ಯೆ ಅವ್ವನಿಗೆ ಮನೆಯ ಸ್ವಚ್ಛತೆ ಕಡೆ ಗಮನ ಹರಿಸಲು ಆಗಿರಿಲ್ಲ. ಒಂದು ಕಡೆ ಅವ್ವ ಮನೆಯ ಒಳ ಕೋಣೆಯ ಧೂಳು ತೆಗೆಯುತ್ತಿದ್ದರೆ, ನಾನು ನಮ್ಮ ಅಜ್ಜನ ಕಾಲದ ಅಂಗಡಿ(ಕಪಾಟ)ನ್ನು ಸ್ವಚ್ಛ ಮಾಡುವ ಕಾರ್ಯ ಕೈಗೆತ್ತುಕೊಂಡೆ, ಬಹಳ ದಿನಗಳಿಂದ ಆ ಕಪಾಟನ್ನು ತೆಗೆದಿದಲಿಲ್ಲ ಅನ್ಸಿರುತ್ತದೆ. ಒಳಗೆ ಜೇಡರ ತನ್ನ ಬಲೆ ಹೆಣೆದುಕೊಂಡು ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿತ್ತು.
ಹೀಗೆ ಕಪಾಟಿನ ಒಂದೊಂದೆ ಕಾಣೆಗಳನ್ನು ಸ್ವಚ್ಛ ಮಾಡುತ್ತಿದ್ದಂತೆ ಬಾಲ್ಯದಲ್ಲಿ ನನ್ನೊಟ್ಟಿಗೆ ಜೊತೆಯಾಗಿದ್ದ, ನನ್ನ ಅಳುವಿನಲ್ಲಿ ನಗುವಾಗಿ ಸಂತೈಸುತ್ತಿದ್ದ ಆಟಕಿ ಸಾಮಾನುಗಳು ಪ್ರತ್ಯೇಕ್ಷವಾಗಿ ಬಿಟ್ಟವು. ಮತ್ತೊಂದೆಡೆ ಪ್ರಾಥಮಿಕ ಶಾಲೆಯಲ್ಲಿ ಕಲಿತ ನೋಟ್ ಬುಕ್‌ಗಳ ಮೂಟೆಯೇ ಕಣ್ಣೇದುರು ಬಂದು ನಿಂತಿತು. ಒಂದೊಂದು ವಸ್ತುವಿನಲ್ಲೂ ಭಾವನೆಗಳ ಮಹಾಪೂರವೇ ತುಂಬಿದೆ. ಬನಶಂಕರಿ ಜಾತ್ರೆಯಲ್ಲಿ ಅಪ್ಪ ತಂದ ಆ ದೀಪದ ಸಣ್ಣ ಹಡಗು, ಗೊಡಚಿ ಜಾತ್ರೆಯಲ್ಲಿ ರಚ್ಚೆ ಹಿಡುದ ಅತ್ತು ಕೊಡಿಸಿಕೊಂಡ ಆ ಬಸ್, ಗನ್ನು, ಗೋಲಿ ಆಟದಲ್ಲಿ ಗೆದ್ದು ತಂದ ಗೋಲಿಗಳನ್ನು ಹಾಕಿಡಲು ಬಳಸುತ್ತಿದ್ದ ನಮ್ಮಜ್ಜನ ಆ ಸಣ್ಣ ಟ್ರಂಕ್, ಕ್ರಿಕೆಟ್ ಆಟದಲ್ಲಿ ಬೌಂಡ್ರಿ ಸಿಕ್ಸರ್‌ಗಳಿಗೆ ಸಾಥ್‌ಕೊಟ್ಟ ಆ ಬ್ಯಾಟ್, ನೋಟ್‌ಬುಕ್‌ನ ಪ್ರತಿ ಪೇಜ್‌ನಲ್ಲಿ ಹಾಕಿದ್ದ ರೆಡ್ ಮಾರ್ಕನ ಆ ಸಹಿ, ಕೊನೆಯ ಹಾಳೆಯಲ್ಲಿ ಪೆನ್ನು ಮೂಡಿಲ್ಲವೆಂದು ಗೀಜಿದ್ದು, ಒಂದೇ ಎರಡೇ ಹತ್ತು ಹಲವು ವಸ್ತುಗಳು ಸ್ವಚ್ಛತಾ ಕಾರ್ಯದ ವೇಳೆ ಸಿಕ್ಕು ಬಾಲ್ಯದ ಭಾವನಾ ಲೋಕದಲ್ಲಿ ಕರೆದುಕೊಂಡು ಹೋಗಿ ಮತ್ತೆ ಮಗುವಾಗಿಸಿದ್ದು ಮಾತ್ರ ಸುಳ್ಳಲ್ಲ.
ಮಾರನೇ ದಿನ ಓಣಿಯಲ್ಲಿ ಗುಜರಿ ವ್ಯಾಪಾರಿಯೊಬ್ಬ ಕೂಗುತ್ತಾ ತಳ್ಳು ಗಾಡಿಯಲ್ಲಿ ಹೋಗುತ್ತಿದ್ದ ಸಡನ್ ಆಗಿ ಅವ್ವ ಆ ಆಸಾಮಿಯನ್ನು ಕೆರೆದು ಬರಲು ಹೇಳಿದ್ಳು. ನಾನು ಯಾಕಿರಬಹುದು ಎಂದು ಯೋಚನೆ ಮಾಡುವಷ್ಟರಲ್ಲಿ, ಅವ್ವ ಒಳಗಡೆ ಇದ್ದ ನನ್ನ ಬಾಲ್ಯದ ಭಾವನೆಗಳನ್ನು ಹೊತ್ತ ಆಟಕಿ ಹಾಗೂ ಪುಸ್ತಕಗಳನ್ನು ತಂದು ಆ ಗುಜರಿ ಆಸಾಮಿ ಮುಂದೆ ಮಾರಾಟಕ್ಕಿಟ್ಟಳು. ಅರೇ ಕ್ಷಣ ಭಾವನೆಗಳು ಚೂರಾದ ಹಾಗೆ ಆಯಿತು. ತಕ್ಷಣ ಅವ್ವನಿಗೆ ಹೇಳಿದೆ, ಇವುಗಳನ್ನು ಮಾರಾವುದು ಬೇಡ ಎಂದು, ಅವ್ವ ಮಾತ್ರ ಲೇ ಬಾಡ್ಯಾ ಇವ ಎದ್ಕ ಬೇಕ ನಿಂಗ್. ಮನ್ಯಾಗಿಟ್ರ ಮೂಲಿಗೆ ದಂಡ ಅಂತ, ಮತ್ತೇ ಆ ಗುಜರಿ ಆಸಾಮಿಯೊಂದೆ ವ್ಯವಹಾರ ಮುಂದುವರೆಸಿದಲು. ಆದರೆ, ಇಬ್ಬರ ಚೌಕಾಸಿ ವ್ಯವಹಾರ ಹೊಂದಲಿಲ್ಲ ಅನಿಸುತ್ತೆ. ನಮ್ಮವ್ವ ಮತ್ತದೆ ಗತ್ತಿನಿಂದ ತಂದ ವಸ್ತುಗಳನ್ನು ಒಳಗೆ ತೆಗೆದುಕೊಂಡು  ಹೋದಳು. ನನಗೆ ಮಾತ್ರ ಎಲ್ಲಿಲ್ಲ್ಲದ ಸಂತಸ. ಒಳ ಒಳಗೆ ಬಾಲ್ಯದ ಮುಗುಳ್ನಗೆ ಕೇಕೆ ಹಾಕಿತು. ಆದರೆ, ಬಾಲ್ಯ ಕೂಡಿಟ್ಟ ಭಾವನೆಗಳು ಮಾತ್ರ ಇದೀಗ ಮಾರಾಟಕ್ಕಿವೆ. ಯಾವಾಗ ಮಾರಾಟವಾಗುತ್ತವೇಯೋ ಆ ದೇವರೆ ಬಲ್ಲ. ಆದರೆ, ಸದ್ಯ ಮಾತ್ರ ಸೂಕ್ತ ಬೆಲೆ ಇಲ್ಲದೆ ಭಾವನೆಗಳು ಉಳಿದುಕೊಂಡಿವೆ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...