Sunday, 10 February 2019

ಮಕ್ಕಳ "ಧ್ವನಿ" ಈ ಮಂಜುಳಾ




ಮಂಜುನಾಥ ಗದಗಿನ
‘ಮಲಾಲ’ ಹೆಸರಲ್ಲೇ ಏನೋ ಒಂದು ಕಿಚ್ಚು ಇದೆ. ಉಗ್ರರ ಗುಂಡಿಗೂ ಬಗ್ಗದೇ ಮುನ್ನುಗ್ಗಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಪಣತೊಟ್ಟ ವೀರ ಮಹಿಳೆ ಮಲಾಲ ಯೂಸೂಫ ಝಾಯಿ. ನಮ್ಮ ನಡುವೆಯೂ ಒಬ್ಬರು ಮಲಾಲ ಇದ್ದಾರೆ. ಇವರು ಕೂಡಾ ಮಕ್ಕಳ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಾ, ಸ್ವಿಡ್ಜರ್ಲೆಂಡ್ ಜಿನೆವಾಕ್ಕೆ ಹೋಗಿ ನಮ್ಮ ದೇಶದ ಮಕ್ಕಳ ಹಕ್ಕುಗಳ ಬಗ್ಗೆ ಭಾಷಣ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಹೌದು! ಅವರೇ ಧಾರವಾಡ ಜಿಲ್ಲೆಯ ರಾಮಾಪುರದ ಮಂಜುಳಾ ಮುನವಳ್ಳಿ. ಎಲೆಮರೆಯ ಕಾಯಿಯಂತೆ ಗ್ರಾಮೀಣ ಭಾಗದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಟೊಂಕಕಟ್ಟಿ, ಹಲವಾರು ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುತ್ತಿದ್ದಾರೆ. 2013 ಅ.10 ರಿಂದ ಸ್ವಿಡ್ಜರ್ಲೆಂಡ್‌ನ ಜಿನೆವಾದಲ್ಲಿ ನಡೆದ 66ನೇ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡು ನಿರಾಳವಾಗಿ 20 ನಿಮಿಷಕ್ಕೂ ಹೆಚ್ಚು ಸಮಯ ಭಾರತದ ಮಕ್ಕಳ ಹಕ್ಕುಗಳ ಕುರಿತು ಕನ್ನಡದಲ್ಲಿ ಮಾತನಾಡಿದರು. ಇವರು ಮಾತನಾಡಿದ ವಿಷಯ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ, ಈ ವಿಷಯವಾಗಿಯೇ ಅಂದಿನ ಸಮಾವೇಶದಲ್ಲಿ ಬರೋಬ್ಬರು ಒಂದುವರೆ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಯಿತು. ಇವರ ಮಾತಿಗೆ ಶಬ್ಬಾಷಗಿರಿ ದೊರೆತ್ತಿತ್ತು. ಇಂತಹ ಅದ್ಭುತ್ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನಮ್ಮ ನಡುವೆ ಇದ್ದಾರೆ ಎಂಬುವುದೇ ಒಂದು ಹೆಮ್ಮೆ.

ಗ್ರಾಮೀಣ ಪ್ರತಿಭೆ:

ಧಾರವಾಡ ಜಿಲ್ಲೆಯಿಂದ 15 ಕಿ.ಮೀ ದೂರದ ರಾಮಾಪುರ ಈಕೆಯ ಊರು. ಅಲ್ಲಿಯ ಜನಸಂಖ್ಯೆ 3000ಕ್ಕೂ ಅಧಿಕ ಮಾತ್ರ. ಇಂತಹ ಗ್ರಾಮೀಣ ಮಟ್ಟದ ಒಂದು ಪ್ರತಿಭೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಫತಾಕೆಯನ್ನು ಹಾರಿಸಿದ್ದು ನಿಜಕ್ಕೂ ಶ್ಲಾಘನೀಯ. ರೈತ ಕುಟುಂಬದ ಮಹಾಂತೇಶ ಹಾಗೂ ಮಹಾದೇವಿ ಮಗಳೇ ಮಂಜುಳಾ. ಸದ್ಯ ಇವಳು ಧಾರವಾಡದ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದಲ್ಲಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದಾರೆ. ಕಲಿಕೆಯೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ ಈ ಮಲಾಲ ಅಲಿಯಾಸ್ ಮಂಜುಳಾ.

ಆಯ್ಕೆಯಾದಾಕ 16 ವರ್ಷ:

2013ರಲ್ಲಿ ಕಿಡ್ಸ್ ಸಂಸ್ಥೆಯ ಗುಬ್ಬಚ್ಚಿ ಮಕ್ಕಳ ಮಹಾ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಅವರು ಮಕ್ಕಳ ಹಕ್ಕುಗಳ ಕುರಿತಾಗಿ ವಿಷಯಗಳನ್ನು ಮಂಡನೆ ಮಾಡುತ್ತಾ, ತಾಲೂಕು, ರಾಜ್ಯ, ದೇಶದಲ್ಲಿ ಸಂಚರಿಸಿದರು. ಇದೇ ಅವರಿಗೆ ವರದಾನವಾಯಿತು. ನಂತರ ಇವರ ಮಕ್ಕಳ ಹಕ್ಕುಗಳ ಬಗ್ಗೆ ಇರುವ ಆಸಕ್ತಿ ನೋಡಿ ಜಿನೇವಾದಲ್ಲಿ ನಡೆದ ಸಮಾವೇಶಕ್ಕೆ ಆಯ್ಕೆ ಮಾಡಲಾಯಿತು. ಆಗ ಮಂಜುಳಾ ಅವರಿಗೆ 16 ವರ್ಷ ಈಗ 20 ವರ್ಷ. ಈ ಸಂದರ್ಭದಲ್ಲಿ ಮಂಜುಳಾ ಅವರ ಜೊತೆ ಗುಜರಾತ್‌ನ ಅಫ್ಸಾನಾ ನೋಯಿಡಾ ಕೂಡಾ ಆಯ್ಕೆಯಾಗಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ಈ ವೇಳೆ ಕನ್ನಡವನ್ನು ಭಾಷಾಂತರಿಸಿದ್ದು ಮುಂಬೈ ಮೂಲದ ಮೇರಿ ಎಂಬುವವರು.
ಸದ್ಯ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ‘ಮಕ್ಕಳ ಧ್ವನಿ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಯೋಜನೆಯಿಡಿಯಲ್ಲಿ ಮಂಜುಳಾ ಅವರು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ಹೋಗಿ ಉಪನ್ಯಾಸಗಳನ್ನು ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಹಲವಾರು ವೇದಿಕೆಗಳಲ್ಲಿ ತಮ್ಮ ವಾಕ್‌ಚಾತುರ್ಯವನ್ನು ತೊರಿಸಿದ್ದಾರೆ. ಇಲ್ಲಿವರೆಗೂ ಅನೇಕ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳ ವಿರುದ್ಧ ಹೋರಾಡಿ ತಡೆ ಗಟ್ಟಿದ್ದ ಗರಿ ಮಂಜುಳಾ ಅವರಿಗೆ ಸಲ್ಲುತ್ತದೆ.
ಒಲಿದ ಪ್ರಶಸ್ತಿಗಳ ಗರಿ:
ಬಸವರಾಜ ಹೊರಟ್ಟಿ ಅವರ ಅವ್ವ ಸೇವಾ ಸಂಸ್ಥೆಯಿಂದ 2013ರಲ್ಲಿ ‘ಅವ್ವ’ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿಯಿಂದ 2012-14ನೇ ಸಾಲಿನ ಪ್ರಶಸ್ತಿ, ಕರ್ನಾಟ ನವ ನಿರ್ಮಾಣ ವೇದಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ, 2015ರಲ್ಲಿ ಬೆಳಗಾವಿ ಕೆಎಲ್‌ಇಯಿಂದ ಪ್ರೈಡ್ ಆಫ್ ಕೆಎಲ್‌ಇ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಬೇಂದ್ರ ಪುರಸ್ಕಾರ, ಕನಕ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಮಕ್ಕಳ ಹಕ್ಕುಗಳ ರಕ್ಷಣೆಗೆ ಅರಸಿ ಬಂದು, ಇವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿವೆ.
ಮಕ್ಕಳ ಹಕ್ಕುಗಳ ರಕ್ಷಣೆಗೆ ಕೆಚ್ಚೆದೆಯಿಂದ ಹೋರಾಡುತ್ತಿರುವ ಮಂಜುಳಾ ಮುನವಳ್ಳಿಯವ ಕಾರ್ಯ ಇತರೆ ಹೆಣ್ಣು ಮಕ್ಕಳಿಗೂ ಮಾದರಿಯಾಗಿದೆ. ಇದೇ ರೀತಿ ಇವರ ಸಮಾಜ ಕಾರ್ಯ ಮುಂದುವರೆಯಲಿ, ಸಮಾಜಕ್ಕೆ ಮತ್ತಷ್ಟು, ಮಗದಷ್ಟು ಒಳಿತಾಗಲಿ, ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸಿ ಬರಲಿ ಎಂಬುವುದು ಜನತೆಯ ಹಾರೈಕೆ.
---
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದು ನನಗೆ ಸಂತಸದ ಸಂಗತಿ. ಅದೇಷ್ಟೋ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಗೊತ್ತಿರುವುದಿಲ್ಲ. ಈ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎನ್‌ಜಿಒ ಮೂಲಕ ಕಾರ್ಯ ಮಾಡುತ್ತೇನೆ.
-ಮಂಜುಳಾ ಮುನವಳ್ಳಿ, ಮಕ್ಕಳ ಹಕ್ಕುಗಳ ಹೋರಾಟಗಾರ್ತಿ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...