ನೇಕಾರ, ನೀ ಜಗಕ್ಕೆಲ್ಲ
ವಸ್ತ್ರ ಉಡಿಸುವ ನೇತಾರ,
ಕಷ್ಟಗಳಿಗೆ ಅಂಜದೆ,
ಸುಖಕ್ಕೆ ಹಿಗ್ಗದೆ ಜನರ
ಮಾನ ರಕ್ಷಿಸುತಿರುವ
ಸಾಹುಕಾರ.
ನೂಲು ಇಲ್ಲದೇ ನೋವು
ತಿಂದರೂ, ನಲಿವು ಹಂಚುವ
ಮೇಧಾವಿ, ಬೆಲೆ ಎರಿದರು,
ಬೆಲೆ ಇಳಿದರೂ ಎಂದು
ಬೀದಿಗಿಳಿಯದ ಕರುನಾಳು.
ಹಣವನೇ ಬಯಸದೇ
ಮಾನ ರಕ್ಷಣೆಯೇ ಕಾಯಕ
ಎಂದು ತಿಳಿದಿರುವ ಕಾಯಕ
ಯೋಗಿ ನೀ. ನಿನ್ನ ರಕ್ಷಣೆಗೆ
ಇಲ್ಲ ಇಲ್ಲಿ ಯಾವ ಅಸ್ತ್ರ,
ಹೋರಾಡಿ ಜಯಿಸು ನೀ
ವಸ್ತ್ರವೇ ನಿನ್ನ ಅಸ್ತ್ರ..
------------------------
ಹುಟ್ಟಿಸಿ ಬಿಟ್ಟ ಆ ದೇವರು
ಬೆತ್ತಲಾಗಿ, ಬದುಕು ನೀನೆಂದು
ಬತ್ತದ ಉತ್ಸಾಹದ ನಡುವೆಯೂ
ದುಡಿದರೂ ಧಕ್ಕುತ್ತಿಲ್ಲ
ಹಿಡಿ ನೆಮ್ಮದಿ ಇನ್ನು,
ಧನಿವಿಗೆ ಶರಣಾಗಿ
ಶ್ರಮಕ್ಕೆ ಕೂಲಿಯಾಗಿ
ಹೊತ್ತಿಗೆ ಮೆತ್ತಗಾಗಿ
ದುಡಿದರೂ ಧಕ್ಕುತ್ತಿಲ್ಲ
ಕೈತುಂಬ ದುಡ್ಡು ಇನ್ನು.
ಹೊಟ್ಟೆಯ ಹಿಟ್ಟಿಗಾಗಿ
ಗೇಣು ಬಟ್ಟೆಗಾಗಿ
ರಟ್ಟೆ ಮಣಿಸಿ ತೊಡೆ ತಟ್ಟಲೆ
ಬೇಕು ಬಡತನ ಎಂಬ ವೈರಿಗೆ
ಧಕ್ಕಿಸಿಕೊಳ್ಳಬೇಕು ಸಿರಿತನ
ಎಂಬ ಸುಪತ್ತಿಗೆ.
ಆದರೂ ಬಾಳಲೇ ಬೇಕು
ಕನಸು ಕಣ್ಗಳ ನಡುವೆ.
ಕೊನೆಗೆ ಸೇರಲೆ ಬೇಕು
ಆರಡಿ, ಮೂರಡಿ ಗುಂಡಿಗೆ.
ಇಳಿ ಸಂಜೆ ಇಣುಕುವಾಗ
ಮಗ್ಗಕ್ಕೆ ಕೈ ಮುಗಿದು
ಎಳತಿದ್ದ ಅಪ್ಪ, ಪಕ್ಕದಲ್ಲಿ
ನಾನು ಕುಳಿತಿರುತ್ತಿದ್ದೆ ಗಪ್ಪ.
----------------------------
ಚೂಟುದ್ದ ಕಾಲ ಚಾಚಿ
ಅಣಿ ಹಲಗೆಯ ಒದ್ದು
ಇತ್ತಿಂದ ಅತ್ತ, ಹತ್ತಿಂದ ಇತ್ತ
ಲಾಳಿಯ ಒಗೆದು, ಕಲಿತಿದ್ದೆ
ವೃತ್ತಿಯ ಕೌಶಲ್ಯ. ಅಪ್ಪ
ನೋಡ್ತಿದ್ದ ಗಪ್ಪಚುಪ್ಪ.
ತಿರುಗುವ ರಾಟೆಯ ಮುಂದ
ಕುಂತ ಅವ್ವನ ಮಡಿಲ ಸೇರಿ,
ತಿರುತಿದ್ದೆ, ನೂಲಿಲ್ಲದ್ದ ರಾಟೆ,
ಅವ್ವ ನೂಲಿದ್ರ ನಾ ತಿರುತ್ತಿದೆ
ಗರಗರ ರಾಟೆ. ನೆಟ್ಟ ಕಣ್ಣ
ಮಿಟಗಸ್ತ ನೋಡ್ತಿದ್ಲ ನಮ್ಮ
ಮಾತೆ.
ಸೀರೆ ಗಳಿಗೆ ಹಾಕೋವಾಗ
ನೋಡ್ತಿದ್ದೆ, ಅವ್ವನ ಬೆನ್ನೇರಿ
ನಲಿತ್ತಿದ್ದೆ, ಅಪ್ಪ ಬೈದ್ರ ಮಗ್ಗದ
ಸಂದ್ಯಾಗ ಓಡಿ ಹೋಗ್ತಿದ್ದೆ.
ಸೀರಿ ಕೊಡಾಕ ಅಪ್ಪನ ಜೊತೆ
ಓಡ್ತಿದ್ದೆ, ಸೆಡಜೀ ಗಂಜೂಸ್
ನೋಡಿ ಒಳ ಒಳಗ ನೋಡಿ
ನಗ್ತಿದ್ದೆ. ವಾರಾ ಪೂರ್ತಿ ದುಡದ್ರು
ಅಪ್ಪ ತರದಿದ್ದ 50 ರುಪಾಯಿ
ಅದ್ರಾಗ ನಡಿತಿತ್ತು ಜೀವನ ಯಾತ್ರೆ.
ಈಗ ನಡದೈತಿ ದುಬಾರಿ ಜಾತ್ರಿ,
ಬದುಕಿಗಿಲ್ಲ ಖಾತ್ರಿ. ಆದ್ರು ಮತ್ತ
ಮತ್ತ ಬರತೈತಿ ನೆನಪಿನ ಜಾತ್ರಿ
ನಾ ಅದಲ್ರಿ ಕಳೆದ ಹೋಗೋದ ಖಾತ್ರಿ.
-------------------
"ಹೇ ನೇಕಾರ"
ನೀ ಏಳು, ಕೊಟ್ಟಿಲ್ಲವೆಂದು
ಕೊರಗಿ ಕೈ ಕಟ್ಟಿ ಕುರದಿರಿ
ನಿನ್ನೊಟ್ಟಿಗೆ ಇನ್ನೊಬ್ಬನನ್ನು
ಎಬ್ಬಿಸು, ಅವನು ಮತ್ತೊಬ್ಬರನು
ಎಬ್ಬಿಸಲಿ.
ಕೇಳದೆ ಕೊಟ್ಟ ಇತಿಹಾಸ
ನಮ್ಮದ, ಕೈ ಜೋಡಿಸಿ
ಕೆರಳಿದಾಗಲೇ ಕೊಟ್ಟ
ಇತಿಹಾಸ ನಮ್ಮದು.
ಒಗ್ಗಟ್ಡಾಗಿ ಕೈ ಜೋಡಿಸಿ
ಕಣ್ಣಕ್ಕಿದು ಹೋರಾಡು.
ನಿನಗೆಂದೆ ಕೊಟ್ಟ
ಯೋಜನೆಗಳು ಬರೀ
ಕಾಗದದ ಹುಲಿಗಳಾಗಿ
ಗರ್ಜಿಸಿ ಸರ್ಕಾರದ ಸಾಧನೆ
ಸೇರಿವೆ. ನಿನ್ನದೆಂಬುದು ಇಲ್ಲಿ
ಬರೀ ವಸ್ತ್ರ ಮಾತ್ರ, ಇದ್ನೆ
ನೀ ಜಗಕ್ಕೆಲ್ಲ ಉಡಿಸಿ
ಹೇಳು ನಾ ನೇಕಾರನೆಂದು.
ನೀ ಏಳದಿದ್ದರೆ, ನಿನ್ನ ಅಳಿವು
ನಿನ್ನ ಮರಿಮೊಮ್ಮಕಳಿಗೆ
ನಿನ್ನ ಬಟ್ಟೆಯಲ್ಲೆ ಚಿತ್ರ ಬಿಡಿಸಿ
ಇದು ನೇಕಾರ ಎನ್ನಬೇಕಾಗುತ್ತೆ
ಎದ್ದೇಳು, ಎದುರಿಗೆ ಗುರಿ ಇರಲಿ
ಹಿಂದೆ ಪಣ ಇರಲಿ ಜಯ ಸದಾ
ನಿನ್ನದಾಗಲಿ. ಜೈ ನೇಕಾರ.
---------------------
ಹಿಡಿ ಜೀವದ ಬದುಕಲ್ಲಿ
ಚಲಿಸುತ್ತಿಲ್ಲ ಲಾಳಿ,
ಜಿಡ್ಡು ಗಟ್ಟಿದ ಹಗ್ಗಕ್ಕಿಲ್ಲ
ಮೊದಲಿನ ಚಾಳಿ.
ಜಂಗು ಹಿಡಿದು, ಜೋತು
ಬಿದ್ದಾವೂ ತಂತಿ. ಮನಿ
ಮಾಳಿಗೆ ಮ್ಯಾಲೆ ಬಿದ್ದಾವೂ
ಕುಂಟಿ, ಕೋಲು, ಶೇಟಲ್.
ಕುಣಿ ಇಲ್ಲದ ಮನಿ
ಕಾಣತೈತಿ ಗುರುವಿಲ್ಲ
ಮಠದ ಹಂಗ್, ದಾರಿ
ಸವೆಸಿ ಬಂದು ನಿಂತೇವ್
ವಿದ್ಯುತ್ ಕೆಳಗ.
ರಟ್ಟಿಗೆ ಇಲ್ಲ ಮೊದಲಿನ
ಗಟ್ಟಿ, ರೊಟ್ಟಿ ತಿಂದು
ಕುಳಿತರೆ, ಖಣ ಆಗತ್ತಿತ್ತ
ಗಟ್ಟಿಮುಟ್ಟಿ.
ಬಣ್ಣದ ಬದುಕಿನ್ಯಾಗ
ನಡದೈತಿ ಜೀವನ
ಸಂತಿ, ಯಾರಿಗೆ ಬೇಕೇಳಿ
ನೇಕಾರನ ಚಿಂತಿ. ಇದ್ಕ
ಆಗೈತಿ ನೇಕಾರನ ಜೀವನ
ಹರಿದ ತಂತಿ.
Written by-Manjunath Gadagin
|
Tuesday, 12 February 2019
Subscribe to:
Post Comments (Atom)
ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ
ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...
.jpeg)
-
ಮಂಜುನಾಥ ಗದಗಿನ ನಾಡಾಗಲಿ, ನುಡಿಯಾಗಲಿ ಎಂದೆಂದೂ ಕನ್ನಡ ಅಭಿಮಾನ ನಮ್ಮದಾಗಿರಲಿ. ತನು, ಮನ ನಿಮ್ಮದಾಗಲಿ ಕನ್ನಡ ಉಸಿರಾಗಲಿ, ನಮ್ಮೂರ ನುಡಿ ಹಬ್...
-
ಮಂಜುನಾಥ ಗದಗಿನ ಆಟದೊಂದಿಗೆ ಪಾಠ ಕೇಳುತ್ತಿದ್ದರೆ, ಅದೆನೋ, ಹರುಷ. ಮತ್ತಷ್ಟು ಕಲಿಬೇಕು, ತಿಳಿದುಕೊಳ್ಳಬೇಕು ಎಂಬ ಹಂಬಲ ವ್ಯಕ್ತಿಗತವಾಗಿ ಪರಕಾಯ ಪ್ರವೇಶ ಮಾಡುತ್...
-
ಮಂಜುನಾಥ ಗದಗಿನ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀ...
No comments:
Post a Comment