ಹುಚ್ಚು ಮನಸ್ಸಿನ, ಮೌನದ ಮಾತು

Wednesday, 20 February 2019

ಬ್ರಹ್ಮಗಂಟು

ಮಂಜುನಾಥ ಗದಗಿನ

ಅಪರಿಚಿತರಿವರು, ಅಪರಿಚಿತರು
ಎಲ್ಲೋ ಹುಟ್ಟಿ, ಎಲ್ಲೋ
ಬೆಳೆದು ಮೂರು ಗಂಟಲ್ಲಿ
ಒಂದಾದವರು..
!
ಮೂರು ಗಂಟಲ್ಲೆ ನಂಟು ಕಂಡು
ನೆಂಟರಾದವರು,
ಪ್ರೀತಿ, ವಾತ್ಸಲ್ಯ, ಮಮತೆ
ಒಂಚೂರು ಹುಸಿ ಕೋಪ, ಹಟ
ಕಟ್ಟಿಕೊಂಡು ಮುಂದೆ ಸಾಗುವವರು.
!
ಕಷ್ಟ, ಸುಖಃಗಳಲ್ಲಿ ಜೊತೆಯಾಗಿ
ಸಂಸಾರ ಎಂಬ ಸುಂದರ
ಅರಮನೆಯಲ್ಲಿ ಚಂದದ ನಗು
ಚಲ್ಲಿ ಹೆಗಲಿಗೆ ಹೆಗಲು ಕೊಟ್ಟು
ಬಾಳ ನಡೆಸುವವರು, ಅವರೇ
ಬ್ರಹ್ಮ ಹಾಕಿದ ಗಂಟಿನಲ್ಲಿ
ಸತಿ, ಪತಿ ಆದವರು.
#ಎಂಜಿ..💪🏼🌹
- February 20, 2019 No comments:
Email ThisBlogThis!Share to XShare to FacebookShare to Pinterest

ಸ್ನೇಹದ ಕಡಲು


ಮಂಜುನಾಥ ಗದಗಿನ
ಇಂದು-ನಾಳೆ ಮುಗಿಯದೇ,ನಿತ್ಯ ನಿರಂತರ ಹರಿಯುವುದೇ ಸ್ನೇಹದ ಕಡಲು. ಆ ಕಡಲಲ್ಲಿ ನಮ್ಮ ನೆನೆಪುಗಳು ಮಿಂಚು ದೋಣಿಗಳು ಇದ್ದ ಹಾಗೆ, ಬಂದು ಹೀಗೆ ಹೋಗುತ್ತೆ. ಅದರೊಟ್ಟಿಗೆ ಸಾಗರದ ಅಲೆಯ ಹಾಗೆ ಮಧುರಕ್ಷಣಗಳನ್ನು ಹೊತ್ತುಕೊಂಡು ಬಂದು ಎದೆಯಾಳದಲ್ಲಿ ತುಂಟ ನೆನಪುಗಳನ್ನು ಸುರಿಸುತ್ತವೆ.
ಬೆಟ್ಟದಂತಹ ಕನಸುಗಳೊಂದಿಗೆ, ಒಂದು ಭರವಸೆಯೊಂದಿಗೆ ಅದೇಷ್ಟೋ ವಿದ್ಯಾರ್ಥಿಗಳು ತಂದೆ-ತಾಯಿ,ಬಂಧುಬಳಗ, ಬಾಲ್ಯದ ಸ್ನೇಹಿತರುನ್ನು ಬಿಟ್ಟು ಕಾಣದ ಊರಿಗೆ ಬಂದು ಶಿಕ್ಷಣ ಪಡೆಯುತ್ತಾರೆ. ಅದರಲ್ಲೂ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದರೆ ಊರು ಬಿಟ್ಟು ಬರಲೇ ಬೇಕು. ಹ್ಞೂ! ನಾನು ಕೂಡಾ ಒಂದು ಚಿಕ್ಕ ಭರವಸೆಯೊಂದಿಗೆ ನಗರಕ್ಕೆ ಅಂಬೆಗಾಲಿಟ್ಟವನು. ಗೊತ್ತಿಲ್ಲದ ಊರಿಗೆ ಬಂದ ಮೇಲೆ ಪ್ರಾರಂಭದಲ್ಲಿ ಎಡವುದು ಸಹಜ. ಮತ್ತೆ ಚೇತರಿಸಿಕೊಂಡು ಮುನ್ನುಗುವದು ಕಾಲ ಸಹಜ. ನಾನು ಕೂಡಾ ಪ್ರಾರಂಭದ ಎಲ್ಲ ಕಷ್ಟಗಳನ್ನು ಅನುಭವಿಸಿ ಸ್ನಾತಕೋತ್ತರ ಮುಗಿಸಿದವನೇ. ಆದರೆ ನನ್ನ ಆ ಕಷ್ಟಗಳಿಗೆ, ಸುಖಗಳಿಗೆ ಹೇಗಲಾಗಿ ನಿಂತುಕೊಂಡಿದ್ದು ನನ್ನ ಸ್ನೇಹಿತರು.
ಅವು ಕಾಲೇಜಿನ ಆರಂಭದ ದಿನಗಳು. ಕಂಡಷ್ಟು ಬಗೆದಷ್ಟು ಎಲ್ಲವೂ ಹೊಸದು. ಅದರೊಟ್ಟಿಗೆ ಹೊಸ ಮುಖಗಳ ದರ್ಶನ. ಅನಂತರ ಅವೇ ಮುಖಗಳು ಮಾಗದರ್ಶ ನೀಡಿದ್ದು ಈಗ ಇತಿಹಾಸ. ಕಾಲಗಳು ಗತಿಸಿದರು ನೆನಪುಗಳು ಗತಿಸವು ಎಂಬುದಕ್ಕೆ ಕ್ಯಾಂಪಸನ್ ಕೆಲವು ಸ್ನೇಹದ ಸಹಾಯಗಳು,ಕಿಟಲೆಗಳು, ಮುನಿಸು, ದ್ವೇಷ, ಜಗಳ, ಕಾಡು ದಾರಯಲ್ಲಿ ಕಾಡಿಸಿದ್ದು ಎಲ್ಲವೂ ನೆನಪಿನ ದೋಣಿಯಲ್ಲಿ ಸಾಗುವವೇ.

ದಿನದ ಖರ್ಚಿಗೆ ಎಂದು ತಂದಿದ್ದ ಸಾವಿರ ರೂಪಾಯಿ, ಕಾಡುದಾರಿ ಮಧ್ಯೆ ಕಳೆದು ಹೋದಾಗಿ,ಊರಿಗೆ ಹೋಗಲು ದುಡ್ಡು ಇಲ್ಲದಿದ್ದಾಗ, ನನ್ನ ಕಷ್ಟವನ್ನು ಆಲಿಸಿ, ತನ್ನ ಜೇಬಿನಿಂದ ನೂರರ ಮೂರು ನೋಟುಗಳನ್ನು ನನ್ನ ಕೈಗಿಟ್ಟು ಮಂಜು ಈ ದುಡ್ಡು ತೆಗೆದುಕೊಂಡು ಹೋಗು, ನಿನ್ನ ಖರ್ಚಿಗೂ ಆಗುತ್ತದೆ, ನೀನು ಊರಿಂದ ಬಂದ ಮೇಲೆ ಕೊಡುವಂತೆ ಎಂದು ಕಷ್ಟ ಕಾಲದಲ್ಲಿ ಕನಿಕರದಿಂದ ಸಹಾಯ ಮಾಡಿದ ಸುರೇಶಣ್ಣ. ಎಕ್ಸಾಂ ಬಂದಾಗ ವಾರ್ಡನ ಎದುರು ಹಾಕಿಕೊಂಡು ಸ್ನೇಹಕ್ಕೆ ತನ್ನ ಹಾಸ್ಟೇಲ್‌ನಲ್ಲಿ ನೆಲೆಸಲು ಅವಕಾಶ ಕೊಡುತ್ತಿದ್ದ, ಪ್ರತಿದಿನ ಮಧ್ಯಾಹ್ನ ತುತ್ತು ಊಟ ಕೊಡುತ್ತಿದ್ದ ಯಲ್ಲಪ್ಪ, ಪ್ರತಿದಿನ ದುಡ್ಡು ಖರ್ಚು ಮಾಡಿ ಲೇಖನಗಳನ್ನು ಟೈಫ ಮಾಡಲು ಹೋಗುತ್ತಿದ್ದಾಗ ಅಣ್ಣ ನನ್ನ ಲ್ಯಾಫಿ ಇದೆ. ಮನೆಗೆ ತೆಗೆದುಕೊಂಡು ಹೋಗಿ ಟೈಫ್ ಮಾಡು ಎಂದು ಸಹದಯ ತೋರಿದ ಮಧುಶ್ರೀ. ಸ್ಟೋರ್ಟ ಟೀಶರ್ಟಗೆ ಕೊಡಲು ದುಡ್ಡು ಇಲ್ಲದಾದ ತನ್ನ ಕೈಯಿಂದ ದುಡ್ಡು ನೀಡಿದ ಸುಬ್ಬು, ಪ್ರತಿದಿನ ಪ್ರಯಾಣದಲ್ಲಿ ಜತೆಯಾಗಿ ಇರುತ್ತಿದ್ದ ಶ್ರೀ ಹೀಗೆ ಸ್ನೇಹ ಎಂಬ ಸುಂದರ ಕಡಲನ್ನು ತೆರೆಯುತ್ತಾ ಹೋದ ಹಾಗೆ ಅದರ ಹರವು ಹೆಚ್ಚಾಗುತ್ತಾ ಸಾಗುತ್ತದೆ.

  ಲೇಖನ ಕಳುಹಿಸಲು ಲ್ಯಾಫಿ ಕೊಡಲಿಲ್ಲ ಎಂದು, ಮಲ್ಲಿಕಾರ್ಜುನ ಜೊತೆ ಮಾತು ಬಿಟ್ಟದ್ದು, ಅಕ್ಕನ ಮದುವೆಗೆ ಕರೆದಿಲ್ಲ ಎಂದು ಮೂನಿಸಿಕೊಂಡದ್ದು, ಕಾಲೇಜಗೆ ನನ್ನ ಬಿಟ್ಟು ಹೋಗಾದ ಗೆಳೆಯನೊಂದಿಗೆ ಸೆಟಗೊಂಡಿದ್ದು, ಎಕ್ಸಾಂ ನಲ್ಲಿ ತೊರಿಸಲಿಲ್ಲ ಎಂದು ಕೋಪಗೊಂಡಿದ್ದು, ಹಾಸ್ಟೇಲ್ ದಾರಿಯಲ್ಲಿ ಮಾವು ಕದ್ದು ತಿನ್ನಂದ್ದು, ರೈಲ್ವೆ ಹಳಿಗಳ ಮೇಲೆ ಬೇಕಾಬಿಟ್ಟಿ ಸೇಲ್ಪಿ ತೆಗೆದುಕೊಂಡದ್ದು, ಶ್ರೀನಗರ ಸರ್ಕಲ್‌ನಲ್ಲಿ ನಿಂತು ಸ್ನೇಹಿತರೊಟ್ಟಿಗೆ ಹುಡ್ಗಿಯರಿಗೆ ಕಾಳಹಾಕಿದ್ದು, ಒಂದೇ ಬೈಕ್ ಮೇಲೆ ಪಂಚಪಾಂಡವರು ಪ್ರಯಾಣಿಸಿದ್ದು, ಒಂದೇ ಪ್ಲೇಟ್‌ನಲ್ಲಿ ಮೂವರು ಊಟ ಮಾಡಿದ್ದು, ನೇರಳೆ ಹಣ್ಣಿಗಾಗಿ ಗಿಡ ನೇತಾಡಿದ್ದು ಎಲ್ಲವು ಸ್ನೇಹದ ಸುಮಧುರ ಕ್ಷಣಗಳೆ. ಆದರೆ ಆ ಸ್ನೇಹಿತರು ಈಗ ನನ್ನೊಟ್ಟಗಿಲ್ಲ. ಆದರೆ ಅವರ ನೆನಪು ಮಾತ್ರ ನನ್ನೊಟ್ಟಿಗೆ ಸದಾ ಇರುತ್ತವೆ. ವತ್ತಿ ಬದುಕಿನಲ್ಲಿ ಎಲ್ಲ ಸ್ನೇಹಿತರು ಒಂದೊಳ್ಳೆ ಹುದ್ದೆ ಪಡೆಕೊಳ್ಳಿ ಎಂದು ಆಶಿಸುವ ನಿಮ್ಮ ಸ್ನೇಹಿತ ಮಂಜು.

- February 20, 2019 No comments:
Email ThisBlogThis!Share to XShare to FacebookShare to Pinterest

Tuesday, 12 February 2019

ಓ ನೇಕಾರ....!!

ನೇಕಾರ, ನೀ ಜಗಕ್ಕೆಲ್ಲ

ವಸ್ತ್ರ ಉಡಿಸುವ ನೇತಾರ,
ಕಷ್ಟಗಳಿಗೆ ಅಂಜದೆ,
ಸುಖಕ್ಕೆ ಹಿಗ್ಗದೆ ಜನರ 
ಮಾನ ರಕ್ಷಿಸುತಿರುವ 
ಸಾಹುಕಾರ.

ನೂಲು ಇಲ್ಲದೇ ನೋವು
ತಿಂದರೂ, ನಲಿವು ಹಂಚುವ
ಮೇಧಾವಿ, ಬೆಲೆ ಎರಿದರು,
ಬೆಲೆ ಇಳಿದರೂ ಎಂದು
ಬೀದಿಗಿಳಿಯದ ಕರುನಾಳು.

ಹಣವನೇ ಬಯಸದೇ
ಮಾನ ರಕ್ಷಣೆಯೇ ಕಾಯಕ
ಎಂದು ತಿಳಿದಿರುವ ಕಾಯಕ
ಯೋಗಿ ನೀ. ನಿನ್ನ ರಕ್ಷಣೆಗೆ
ಇಲ್ಲ ಇಲ್ಲಿ ಯಾವ ಅಸ್ತ್ರ,
ಹೋರಾಡಿ ಜಯಿಸು ನೀ
ವಸ್ತ್ರವೇ ನಿನ್ನ ಅಸ್ತ್ರ..
------------------------

ಹುಟ್ಟಿಸಿ ಬಿಟ್ಟ ಆ ದೇವರು

ಬೆತ್ತಲಾಗಿ,  ಬದುಕು ನೀನೆಂದು
ಬತ್ತದ ಉತ್ಸಾಹದ ನಡುವೆಯೂ
ದುಡಿದರೂ ಧಕ್ಕುತ್ತಿಲ್ಲ
ಹಿಡಿ ನೆಮ್ಮದಿ ಇನ್ನು,

ಧನಿವಿಗೆ ಶರಣಾಗಿ
ಶ್ರಮಕ್ಕೆ ಕೂಲಿಯಾಗಿ
ಹೊತ್ತಿಗೆ ಮೆತ್ತಗಾಗಿ
ದುಡಿದರೂ ಧಕ್ಕುತ್ತಿಲ್ಲ
ಕೈತುಂಬ ದುಡ್ಡು ಇನ್ನು.

ಹೊಟ್ಟೆಯ ಹಿಟ್ಟಿಗಾಗಿ
ಗೇಣು ಬಟ್ಟೆಗಾಗಿ
ರಟ್ಟೆ ಮಣಿಸಿ ತೊಡೆ ತಟ್ಟಲೆ
ಬೇಕು ಬಡತನ ಎಂಬ ವೈರಿಗೆ
ಧಕ್ಕಿಸಿಕೊಳ್ಳಬೇಕು ಸಿರಿತನ
ಎಂಬ ಸುಪತ್ತಿಗೆ.

ಆದರೂ ಬಾಳಲೇ ಬೇಕು
ಕನಸು ಕಣ್ಗಳ ನಡುವೆ.
ಕೊನೆಗೆ ಸೇರಲೆ ಬೇಕು
ಆರಡಿ, ಮೂರಡಿ ಗುಂಡಿಗೆ.

ಇಳಿ ಸಂಜೆ ಇಣುಕುವಾಗ
ಮಗ್ಗಕ್ಕೆ ಕೈ ಮುಗಿದು
ಎಳತಿದ್ದ ಅಪ್ಪ, ಪಕ್ಕದಲ್ಲಿ
ನಾನು ಕುಳಿತಿರುತ್ತಿದ್ದೆ ಗಪ್ಪ.
----------------------------

ಚೂಟುದ್ದ ಕಾಲ ಚಾಚಿ

ಅಣಿ ಹಲಗೆಯ ಒದ್ದು
ಇತ್ತಿಂದ ಅತ್ತ, ಹತ್ತಿಂದ ಇತ್ತ
ಲಾಳಿಯ ಒಗೆದು, ಕಲಿತಿದ್ದೆ
ವೃತ್ತಿಯ ಕೌಶಲ್ಯ. ಅಪ್ಪ
ನೋಡ್ತಿದ್ದ ಗಪ್ಪಚುಪ್ಪ.

ತಿರುಗುವ ರಾಟೆಯ ಮುಂದ
ಕುಂತ ಅವ್ವನ ಮಡಿಲ ಸೇರಿ,
ತಿರುತಿದ್ದೆ, ನೂಲಿಲ್ಲದ್ದ ರಾಟೆ,
ಅವ್ವ ನೂಲಿದ್ರ ನಾ ತಿರುತ್ತಿದೆ
ಗರಗರ ರಾಟೆ. ನೆಟ್ಟ ಕಣ್ಣ 
ಮಿಟಗಸ್ತ ನೋಡ್ತಿದ್ಲ ನಮ್ಮ
ಮಾತೆ.

ಸೀರೆ ಗಳಿಗೆ ಹಾಕೋವಾಗ
ನೋಡ್ತಿದ್ದೆ, ಅವ್ವನ ಬೆನ್ನೇರಿ
ನಲಿತ್ತಿದ್ದೆ, ಅಪ್ಪ ಬೈದ್ರ ಮಗ್ಗದ
ಸಂದ್ಯಾಗ ಓಡಿ ಹೋಗ್ತಿದ್ದೆ. 

ಸೀರಿ ಕೊಡಾಕ ಅಪ್ಪನ ಜೊತೆ
ಓಡ್ತಿದ್ದೆ, ಸೆಡಜೀ ಗಂಜೂಸ್
ನೋಡಿ ಒಳ ಒಳಗ ನೋಡಿ
ನಗ್ತಿದ್ದೆ. ವಾರಾ ಪೂರ್ತಿ ದುಡದ್ರು
ಅಪ್ಪ ತರದಿದ್ದ 50 ರುಪಾಯಿ
ಅದ್ರಾಗ ನಡಿತಿತ್ತು  ಜೀವನ ಯಾತ್ರೆ.

ಈಗ ನಡದೈತಿ ದುಬಾರಿ ಜಾತ್ರಿ, 
ಬದುಕಿಗಿಲ್ಲ ಖಾತ್ರಿ. ಆದ್ರು ಮತ್ತ
ಮತ್ತ ಬರತೈತಿ ನೆನಪಿನ ಜಾತ್ರಿ
ನಾ ಅದಲ್ರಿ ಕಳೆದ ಹೋಗೋದ ಖಾತ್ರಿ.
-------------------

"ಹೇ ನೇಕಾರ"

ನೀ ಏಳು, ಕೊಟ್ಟಿಲ್ಲವೆಂದು
ಕೊರಗಿ ಕೈ ಕಟ್ಟಿ ಕುರದಿರಿ
ನಿನ್ನೊಟ್ಟಿಗೆ ಇನ್ನೊಬ್ಬನನ್ನು
ಎಬ್ಬಿಸು, ಅವನು ಮತ್ತೊಬ್ಬರನು
ಎಬ್ಬಿಸಲಿ.

ಕೇಳದೆ ಕೊಟ್ಟ ಇತಿಹಾಸ
ನಮ್ಮದ, ಕೈ ಜೋಡಿಸಿ
ಕೆರಳಿದಾಗಲೇ ಕೊಟ್ಟ
ಇತಿಹಾಸ ನಮ್ಮದು. 
ಒಗ್ಗಟ್ಡಾಗಿ ಕೈ ಜೋಡಿಸಿ
ಕಣ್ಣಕ್ಕಿದು ಹೋರಾಡು.

ನಿನಗೆಂದೆ  ಕೊಟ್ಟ
ಯೋಜನೆಗಳು ಬರೀ
ಕಾಗದದ ಹುಲಿಗಳಾಗಿ
ಗರ್ಜಿಸಿ ಸರ್ಕಾರದ ಸಾಧನೆ
ಸೇರಿವೆ. ನಿನ್ನದೆಂಬುದು ಇಲ್ಲಿ
ಬರೀ ವಸ್ತ್ರ ಮಾತ್ರ, ಇದ್ನೆ
ನೀ ಜಗಕ್ಕೆಲ್ಲ ಉಡಿಸಿ 
ಹೇಳು ನಾ ನೇಕಾರನೆಂದು.

ನೀ ಏಳದಿದ್ದರೆ, ನಿನ್ನ ಅಳಿವು
ನಿನ್ನ ಮರಿಮೊಮ್ಮಕಳಿಗೆ
ನಿನ್ನ ಬಟ್ಟೆಯಲ್ಲೆ ಚಿತ್ರ ಬಿಡಿಸಿ
ಇದು ನೇಕಾರ ಎನ್ನಬೇಕಾಗುತ್ತೆ
ಎದ್ದೇಳು, ಎದುರಿಗೆ ಗುರಿ ಇರಲಿ
ಹಿಂದೆ ಪಣ ಇರಲಿ ಜಯ ಸದಾ
ನಿನ್ನದಾಗಲಿ. ಜೈ ನೇಕಾರ.
---------------------

ಹಿಡಿ ಜೀವದ ಬದುಕಲ್ಲಿ

ಚಲಿಸುತ್ತಿಲ್ಲ ಲಾಳಿ,
ಜಿಡ್ಡು ಗಟ್ಟಿದ ಹಗ್ಗಕ್ಕಿಲ್ಲ
ಮೊದಲಿನ ಚಾಳಿ.

ಜಂಗು ಹಿಡಿದು, ಜೋತು
ಬಿದ್ದಾವೂ ತಂತಿ. ಮನಿ
ಮಾಳಿಗೆ ಮ್ಯಾಲೆ ಬಿದ್ದಾವೂ
ಕುಂಟಿ, ಕೋಲು, ಶೇಟಲ್.

ಕುಣಿ ಇಲ್ಲದ ಮನಿ
ಕಾಣತೈತಿ ಗುರುವಿಲ್ಲ
ಮಠದ ಹಂಗ್, ದಾರಿ
ಸವೆಸಿ ಬಂದು ನಿಂತೇವ್
ವಿದ್ಯುತ್ ಕೆಳಗ.

ರಟ್ಟಿಗೆ ಇಲ್ಲ ಮೊದಲಿನ
ಗಟ್ಟಿ, ರೊಟ್ಟಿ ತಿಂದು 
ಕುಳಿತರೆ, ಖಣ ಆಗತ್ತಿತ್ತ
ಗಟ್ಟಿಮುಟ್ಟಿ.

ಬಣ್ಣದ ಬದುಕಿನ್ಯಾಗ 
ನಡದೈತಿ ಜೀವನ
ಸಂತಿ, ಯಾರಿಗೆ ಬೇಕೇಳಿ
ನೇಕಾರನ ಚಿಂತಿ. ಇದ್ಕ
ಆಗೈತಿ ನೇಕಾರನ ಜೀವನ
ಹರಿದ ತಂತಿ.

Written by-Manjunath Gadagin 
ReplyForward
- February 12, 2019 No comments:
Email ThisBlogThis!Share to XShare to FacebookShare to Pinterest

Sunday, 10 February 2019

ಮಕ್ಕಳ "ಧ್ವನಿ" ಈ ಮಂಜುಳಾ




ಮಂಜುನಾಥ ಗದಗಿನ
‘ಮಲಾಲ’ ಹೆಸರಲ್ಲೇ ಏನೋ ಒಂದು ಕಿಚ್ಚು ಇದೆ. ಉಗ್ರರ ಗುಂಡಿಗೂ ಬಗ್ಗದೇ ಮುನ್ನುಗ್ಗಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಪಣತೊಟ್ಟ ವೀರ ಮಹಿಳೆ ಮಲಾಲ ಯೂಸೂಫ ಝಾಯಿ. ನಮ್ಮ ನಡುವೆಯೂ ಒಬ್ಬರು ಮಲಾಲ ಇದ್ದಾರೆ. ಇವರು ಕೂಡಾ ಮಕ್ಕಳ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಾ, ಸ್ವಿಡ್ಜರ್ಲೆಂಡ್ ಜಿನೆವಾಕ್ಕೆ ಹೋಗಿ ನಮ್ಮ ದೇಶದ ಮಕ್ಕಳ ಹಕ್ಕುಗಳ ಬಗ್ಗೆ ಭಾಷಣ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಹೌದು! ಅವರೇ ಧಾರವಾಡ ಜಿಲ್ಲೆಯ ರಾಮಾಪುರದ ಮಂಜುಳಾ ಮುನವಳ್ಳಿ. ಎಲೆಮರೆಯ ಕಾಯಿಯಂತೆ ಗ್ರಾಮೀಣ ಭಾಗದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಟೊಂಕಕಟ್ಟಿ, ಹಲವಾರು ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುತ್ತಿದ್ದಾರೆ. 2013 ಅ.10 ರಿಂದ ಸ್ವಿಡ್ಜರ್ಲೆಂಡ್‌ನ ಜಿನೆವಾದಲ್ಲಿ ನಡೆದ 66ನೇ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡು ನಿರಾಳವಾಗಿ 20 ನಿಮಿಷಕ್ಕೂ ಹೆಚ್ಚು ಸಮಯ ಭಾರತದ ಮಕ್ಕಳ ಹಕ್ಕುಗಳ ಕುರಿತು ಕನ್ನಡದಲ್ಲಿ ಮಾತನಾಡಿದರು. ಇವರು ಮಾತನಾಡಿದ ವಿಷಯ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ, ಈ ವಿಷಯವಾಗಿಯೇ ಅಂದಿನ ಸಮಾವೇಶದಲ್ಲಿ ಬರೋಬ್ಬರು ಒಂದುವರೆ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಯಿತು. ಇವರ ಮಾತಿಗೆ ಶಬ್ಬಾಷಗಿರಿ ದೊರೆತ್ತಿತ್ತು. ಇಂತಹ ಅದ್ಭುತ್ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನಮ್ಮ ನಡುವೆ ಇದ್ದಾರೆ ಎಂಬುವುದೇ ಒಂದು ಹೆಮ್ಮೆ.

ಗ್ರಾಮೀಣ ಪ್ರತಿಭೆ:

ಧಾರವಾಡ ಜಿಲ್ಲೆಯಿಂದ 15 ಕಿ.ಮೀ ದೂರದ ರಾಮಾಪುರ ಈಕೆಯ ಊರು. ಅಲ್ಲಿಯ ಜನಸಂಖ್ಯೆ 3000ಕ್ಕೂ ಅಧಿಕ ಮಾತ್ರ. ಇಂತಹ ಗ್ರಾಮೀಣ ಮಟ್ಟದ ಒಂದು ಪ್ರತಿಭೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಫತಾಕೆಯನ್ನು ಹಾರಿಸಿದ್ದು ನಿಜಕ್ಕೂ ಶ್ಲಾಘನೀಯ. ರೈತ ಕುಟುಂಬದ ಮಹಾಂತೇಶ ಹಾಗೂ ಮಹಾದೇವಿ ಮಗಳೇ ಮಂಜುಳಾ. ಸದ್ಯ ಇವಳು ಧಾರವಾಡದ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದಲ್ಲಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದಾರೆ. ಕಲಿಕೆಯೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ ಈ ಮಲಾಲ ಅಲಿಯಾಸ್ ಮಂಜುಳಾ.

ಆಯ್ಕೆಯಾದಾಕ 16 ವರ್ಷ:

2013ರಲ್ಲಿ ಕಿಡ್ಸ್ ಸಂಸ್ಥೆಯ ಗುಬ್ಬಚ್ಚಿ ಮಕ್ಕಳ ಮಹಾ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಅವರು ಮಕ್ಕಳ ಹಕ್ಕುಗಳ ಕುರಿತಾಗಿ ವಿಷಯಗಳನ್ನು ಮಂಡನೆ ಮಾಡುತ್ತಾ, ತಾಲೂಕು, ರಾಜ್ಯ, ದೇಶದಲ್ಲಿ ಸಂಚರಿಸಿದರು. ಇದೇ ಅವರಿಗೆ ವರದಾನವಾಯಿತು. ನಂತರ ಇವರ ಮಕ್ಕಳ ಹಕ್ಕುಗಳ ಬಗ್ಗೆ ಇರುವ ಆಸಕ್ತಿ ನೋಡಿ ಜಿನೇವಾದಲ್ಲಿ ನಡೆದ ಸಮಾವೇಶಕ್ಕೆ ಆಯ್ಕೆ ಮಾಡಲಾಯಿತು. ಆಗ ಮಂಜುಳಾ ಅವರಿಗೆ 16 ವರ್ಷ ಈಗ 20 ವರ್ಷ. ಈ ಸಂದರ್ಭದಲ್ಲಿ ಮಂಜುಳಾ ಅವರ ಜೊತೆ ಗುಜರಾತ್‌ನ ಅಫ್ಸಾನಾ ನೋಯಿಡಾ ಕೂಡಾ ಆಯ್ಕೆಯಾಗಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ಈ ವೇಳೆ ಕನ್ನಡವನ್ನು ಭಾಷಾಂತರಿಸಿದ್ದು ಮುಂಬೈ ಮೂಲದ ಮೇರಿ ಎಂಬುವವರು.
ಸದ್ಯ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ‘ಮಕ್ಕಳ ಧ್ವನಿ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಯೋಜನೆಯಿಡಿಯಲ್ಲಿ ಮಂಜುಳಾ ಅವರು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ಹೋಗಿ ಉಪನ್ಯಾಸಗಳನ್ನು ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಹಲವಾರು ವೇದಿಕೆಗಳಲ್ಲಿ ತಮ್ಮ ವಾಕ್‌ಚಾತುರ್ಯವನ್ನು ತೊರಿಸಿದ್ದಾರೆ. ಇಲ್ಲಿವರೆಗೂ ಅನೇಕ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳ ವಿರುದ್ಧ ಹೋರಾಡಿ ತಡೆ ಗಟ್ಟಿದ್ದ ಗರಿ ಮಂಜುಳಾ ಅವರಿಗೆ ಸಲ್ಲುತ್ತದೆ.
ಒಲಿದ ಪ್ರಶಸ್ತಿಗಳ ಗರಿ:
ಬಸವರಾಜ ಹೊರಟ್ಟಿ ಅವರ ಅವ್ವ ಸೇವಾ ಸಂಸ್ಥೆಯಿಂದ 2013ರಲ್ಲಿ ‘ಅವ್ವ’ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿಯಿಂದ 2012-14ನೇ ಸಾಲಿನ ಪ್ರಶಸ್ತಿ, ಕರ್ನಾಟ ನವ ನಿರ್ಮಾಣ ವೇದಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ, 2015ರಲ್ಲಿ ಬೆಳಗಾವಿ ಕೆಎಲ್‌ಇಯಿಂದ ಪ್ರೈಡ್ ಆಫ್ ಕೆಎಲ್‌ಇ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಬೇಂದ್ರ ಪುರಸ್ಕಾರ, ಕನಕ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಮಕ್ಕಳ ಹಕ್ಕುಗಳ ರಕ್ಷಣೆಗೆ ಅರಸಿ ಬಂದು, ಇವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿವೆ.
ಮಕ್ಕಳ ಹಕ್ಕುಗಳ ರಕ್ಷಣೆಗೆ ಕೆಚ್ಚೆದೆಯಿಂದ ಹೋರಾಡುತ್ತಿರುವ ಮಂಜುಳಾ ಮುನವಳ್ಳಿಯವ ಕಾರ್ಯ ಇತರೆ ಹೆಣ್ಣು ಮಕ್ಕಳಿಗೂ ಮಾದರಿಯಾಗಿದೆ. ಇದೇ ರೀತಿ ಇವರ ಸಮಾಜ ಕಾರ್ಯ ಮುಂದುವರೆಯಲಿ, ಸಮಾಜಕ್ಕೆ ಮತ್ತಷ್ಟು, ಮಗದಷ್ಟು ಒಳಿತಾಗಲಿ, ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸಿ ಬರಲಿ ಎಂಬುವುದು ಜನತೆಯ ಹಾರೈಕೆ.
---
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದು ನನಗೆ ಸಂತಸದ ಸಂಗತಿ. ಅದೇಷ್ಟೋ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಗೊತ್ತಿರುವುದಿಲ್ಲ. ಈ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎನ್‌ಜಿಒ ಮೂಲಕ ಕಾರ್ಯ ಮಾಡುತ್ತೇನೆ.
-ಮಂಜುಳಾ ಮುನವಳ್ಳಿ, ಮಕ್ಕಳ ಹಕ್ಕುಗಳ ಹೋರಾಟಗಾರ್ತಿ.
- February 10, 2019 No comments:
Email ThisBlogThis!Share to XShare to FacebookShare to Pinterest

Saturday, 9 February 2019

ಕ್ಯಾಂಪಸ್‌ನಲ್ಲಿ ಜಾರಿ ಬಿದ್ದಿರಿ ಜೋಕೆ..!

ಮಂಜುನಾಥ ಗದಗಿನ
ಕ್ಯಾಂಪಸ್ ಬಣ್ಣದ ಬದುಕಿನ ಚಿನ್ನದ ದಿನಗಳಿಗೆ ಕಾರಣವಾಗುವ ಕಲರ್ ಕಲರ್ ಲೋಕ. ಇಲ್ಲಿ ಹುಟ್ಟುವ ಅದೇಷ್ಟೋ ಆಸೆ, ಆಕಾಂಕ್ಷೆಗಳು ಬದುಕಿನ ಕೊನೆ ದಿನಗಳವರೆಗೂ ಜೊತೆಯಾಗಿಯೇ ಇರುತ್ತವೆ. ಇಂತಹ ಕ್ಯಾಂಪಸ್ ಎಂಬ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಲೆ ಜಾಗ್ರತರಾಗಿರುವುದು ಮುಖ್ಯ. ಓದು ಬಿಟ್ಟು ಇತರೆ ಖಯಾಲಿಗಳಿಗೆ ಅಂಟಿಕೊಂಡೆ ಬದುಕು ಜಾರಿ ಬಿದ್ದಿತು ಜೋಕೆ..!
ಕ್ಯಾಂಪಸ್ ಹದಿಹರೆಯದ ಯುವಕ, ಯುವತಿಯರ ಕನಸುಗಳ ಲೋಕ. ಹಳ್ಳಿ ಹುಂಬ ಕೂಡಾ ಇಲ್ಲಿಯ ಮಾಯಗೆ ಜೋತು ಬಿದ್ದು, ರಜನಿಕಾಂತನನ್ನೇ ಮಿರಿಸುವ ಸ್ಟೈಲ್‌ಕಿಂಗ್ ಆಗಿ ಬದಲಾಗತಾನೆ. ಪುಟ್ಟ ಗೌರಿ ತರಹ ಗರ್ತಿ ಗೌರಮ್ಮನ ಹಾಗೆ ಲಂಗಾ ದಾವಣಿ ಹಾಕ್ಕೊಂಡು ಹಳ್ಳಿಯಲ್ಲಿ ಹವಾ ಮೆಂಟೇನ್ ಮಾಡೋ ಹುಡುಗಿಯೂ ಇಲ್ಲಿ ಬಂದು ಜೀನ್ಸ, ಟೀಶರ್ಟ ಹಾಕ್ಕೊಂಡು ರ‌್ಯಾಂಪ್ ಮೇಲೆ ಬಂದು ವಾಕ್ ಮಾಡತಾಳೆ. ಹೌದು! ಕ್ಯಾಂಪಸ್ ಮಹಿಮೆಯ ಅಂತಹದ್ದು, ಎಲ್ಲರನ್ನು ಒಗ್ಗಿ, ತಗ್ಗಿ, ಬಗ್ಗಿಸಿ ತನ್ನ ದಾಸರನ್ನಾಗಿಸಿಕೊಳ್ಳುತ್ತದೆ. ಹೀಗಂತ ನಾವು ಮೈ ಮರೆತು ಕ್ಯಾಂಪಸ್‌ಗೆ ಮೈಕೊಟ್ಟರೆ ಬದುಕು ಗೋವಿಂದ..ಗೋವಿಂದ.
ಹರೆಯದ ವಯಸ್ಸು ನೂರಾರು ಕನಸು ಎಂಬಂತೆ ಈ ನೂರಾರು ಕನಸುಗಳು ಬಹುತೇಕ ಹುಟ್ಟಿಕೊಳ್ಳುವುದು ಈ ಕ್ಯಾಂಪಸ್ ಎಂಬ ಅಖಾಡದಲ್ಲಿಯೇ. ಈ ಆಸೆಗಳ ಈಡೇರಿಕೆಗೆ ಯುವಕ, ಯುವತಿಯರು ಪಡುವ ಪಾಡು ಆ ದೇವರಿಗೆ ಪ್ರೀತಿ. ಸುಳ್ಳು, ಮೋಸ, ಕಾಮ, ಕ್ರೋದ, ಮದ, ಮತ್ಸರಗಳೆ ಆ ಆಸೆಗಳಿಗೆ ಬೆನ್ನೇಲುಬಾಗಿ ನಿಂತಿರುತ್ತವೆ. ನಾವೇಷ್ಟೇ ಪ್ರಾಮಾಣಿಕವಾಗಿ ಇರಬೇಕೆಂದು ಕೊಂಡರು ಕ್ಯಾಂಪಸನ್ ಕೆಲವೊಂದು ವಿಕೃತ ಮನಸ್ಸುಗಳು ಸುಮ್ಮನೆ ಬಿಡುವುದಿಲ್ಲ. ಕೆರಳಿಸಿ, ಕಾಡಿಸುತ್ತಲೇ ಇರುತ್ತವೆ. ಆದರೆ, ಅದನ್ನು ಮೀರಿ ನಮ್ಮ ಸುಂದರ ಬದುಕು ಕಟ್ಟಿಕೊಳ್ಳುವುದು ಇಲ್ಲಿ ಮುಖ್ಯವಾಗಿದೆ.
ನನಗೂ ಒಬ್ಬ ಗೆಳೆಯಬೇಕು ಎಂಬ ಸಾಲುಗಳು ಕ್ಯಾಂಪಸ್ ಮೆಟ್ಟಿಲು ಹತ್ತಿದ ಪ್ರತಿಯೊಬ್ಬ ಹುಡಗಿಯ ರಾಷ್ಟ್ರಗೀತೆಯಾಗಿ ಮನಸ್ಸಿನಾಳದಲ್ಲಿ ಪ್ರತಿದಿನ ಪ್ರತಿಧ್ವನಿಸುತ್ತಲೇ ಇರುತ್ತದೆ. ಕ್ಯಾಂಪಸ್‌ನ ಪ್ರತಿಯೊಂದು ಸಂದಿಗೊಂದಿಗಳು ಕೂಡಾ ಪ್ರೇಮಿಗಳ ಫೇವರೇಟ್ ಅಡ್ಡಾಗಳಾಗಿರುತ್ತವೆ. ಹೀಗೆ ಕ್ಯಾಂಪಸನ್ ಕಾರಿಡಾರ್‌ಗಳಲ್ಲಿ ಪ್ರೇಮಿಗಳು ಕೈ ಕೈ ಹಿಡಿಕೊಂಡು, ಹಣೆಗೆ ಮುತ್ತಿಕ್ಕೂತ್ತಾ ಸರಸ ತಲ್ಲಾಪಗಳಲ್ಲಿ ತಲ್ಲೀನರಾಗಿರುತ್ತಾರೆ. ಇಂತಹ ಸಮಯದಲ್ಲಿ ಹುಡುಗಿಯೊಬ್ಬಳು ತನಗೂ ಸುತ್ತಾಡಲೂ, ಹಣೆ ಮುತ್ತಿಕ್ಕೂವ ಗೆಳೆಯಬೇಕು ಎಂದು ಹಂಬಲಿಸದೇ ಇರಳು. ಇದೇ ಆಸೆಗೆ ಬಿದ್ದು ಅವಳು ಕೂಡಾ ಪ್ರೀತಿ, ಪ್ರೇಮ ಎಂಬ ಮೋಸದಾಟಕ್ಕೆ ಬಿದ್ದು, ಒದ್ದಾಡಲು ಶುರು ಮಾಡುತ್ತಾಳೆ. ಓದು, ಬರಹ ಬಿಟ್ಟು ಡೇಟಿಂಗ್, ಚಾಟಿಂಗ್ ಅಂತ ಸಿನಿಮಾ, ಗಾರ್ಡನ್ ಸುತ್ತಾಡಿ, ಹೆತ್ತವರ ಕಷ್ಟಗಳಿಗೆ ಬೆಲೆ ಇಲ್ಲದಂತೆ ಮಾಡುತ್ತಾರೆ. ಆದರೆ, ಈ ಪ್ರೀತಿ ಪ್ರೇಮ, ಕಾಮಕ್ಕೆ ಅಷ್ಟೇ ಸಿಮೀತವೋ..ಮದುವೆವರೆಗೂ ಮುಂದುವರೆಯುತ್ತದೇಯೋ ಆ ದೇವರೆ ಬಲ್ಲ. ಆದರೆ, ಹೆತ್ತ ತಂದೆ ತಾಯಿ ತಮ್ಮ ಮಕ್ಕಳು ಕಲಿತು ದೊಡ್ಡ ಹುದ್ದೆ ಅಲಂಕರಿಸಲಿ ಎಂದು ಕೂಲಿನಾಲಿ ಮಾಡಿ, ಓದಿಸುತ್ತಿರುತ್ತಾರೆ, ಆದರೆ, ಮಕ್ಕಳ ಮಾಡುವ ಗಂಧಾರಿ ಕೆಲಸವೇ ಬೇರೆಯಾರುತ್ತದೆ. ಅಲ್ಲಿ ತಂದೆ-ತಾಯಿಯ ಬೇವರ ಹನಿ ಇಲ್ಲಿ ಮಕ್ಕಳ ಕೈಯಲ್ಲಿ ಬೀರಾಗಿ ಪರಿವರ್ತನೆ ಹೊಂದಿರುತ್ತವೆ. ಕೆಟ್ಟ ಗೆಳೆಯರ ಸಹವಾಸ ಮಾಡಿ ದುಷ್ಟಟಗಳ ಅಡ್ಡಾಗಳಿಗೆ ಜೋತು ಬಿದ್ದು ಇಡೀ ಬದುಕನ್ನೇ ನಾಶ ಮಾಡಿಕೊಳ್ಳುವವರು ಇಲ್ಲಿದ್ದಾರೆ. ಕ್ಯಾಂಪಸ್ ಒಂದು ಬಿಳಿ ಹಾಳೆ ಇದ್ದ ಹಾಗೆ ಇಲ್ಲಿ ನಾವು ಏನನ್ನು ಬರೆಯುತ್ತೇವೆಯೂ ಹಾಗೆ ಬದುಕು ರೂಪಗೊಳ್ಳುತ್ತದೆ. ಅದಕ್ಕೆ ಇಲ್ಲಿ ಪ್ರೀತಿ, ಪ್ರೇಮ, ಕಾಮಗಳಿಗೆ ಫುಲ್‌ಸ್ಟಾಪ್ ಇಟ್ಟು, ಓದುಗೆ ನಾನ್‌ಸ್ಟಾಫ್ ಇಡಬೇಕು. ಅಂದಾಗ ಸುಂದರ ಬದುಕಿಗೆ ಮುನ್ನುಡಿ ಬರೆಯಲೂ ಸಾಧ್ಯ. ಕ್ಯಾಂಪಸ್ ಎಂದರೆ ಕೆಲವ ವಿಶಾಲವಾದ ಜಾಗೆಯಲ್ಲ. ಅದು ಮುಗ್ಧ ಮನಸ್ಸುಗಳ, ತಲೆ ಹರಟೆಗಳ, ಕಾಡಿಸಿ, ಕೆರಳಿಸುವವರ, ನಗು-ಅಳವಿಗೆ ಜೊತೆಯಾಗುವ, ಸ್ನೇಹಕ್ಕೆ ಸಿದ್ಧ ಸಮರಕ್ಕೂ ಬದ್ಧ ಎನ್ನುವ, ಹುಚ್ಚು ಕನಸುಗಳಿಗೆ ಬಣ್ಣ ತುಂಬಿ ತೇಲಾಡಿಸುವ ಬದುಕಿನ ಅವಿಭಾಜ್ಯ ಅಂಗ. ಇಲ್ಲಿ ಇಂದು ಸಾರಿ ಜಾರಿ ಬಿದ್ದರೆ, ಏಳುವುದು ಕಷ್ಟ, ಎದ್ದು ನಡೆದರೆ, ತಡೆಯುವುದು ಕಷ್ಟ. ಆಯ್ಕೆ ನಿಮ್ಮದು. ಬಿಳದೇ ಎದ್ದು ನಡೆಯಲು ಪ್ರಯತ್ನಿ ಅಷ್ಟೇ..
- February 09, 2019 No comments:
Email ThisBlogThis!Share to XShare to FacebookShare to Pinterest

Sunday, 3 February 2019

ಭಾವನೆಗಳು ಮಾರಾಟಕ್ಕಿವೆ..!


ಮಂಜುನಾಥ ಗದಗಿನ 

ಭವ ಬಂಧನದಲ್ಲಿ ಭಾವನೆಗಳದ್ದೇ ಮೆರೆದಾಟ. ಆ ತುಂಟ ನೆನೆಪಿನೊಂದಿಗೆ ತಂಟೆ ತೆಗೆಯುವುದೆರೆಂದರೆ ಅದೇನು ಇಷ್ಟವೋ ಈ ಭಾವನೆಗಳಿಗೆ. ಕಾಲು ಕೆದರಿ ಕೆಣಕುತ್ತವೆ, ಕೆರಳಿಸುತ್ತವೆ. ಮತ್ತೇ ಸಾವೇ ಇಲ್ಲ ಎಂಬಂತೆ ಪುಟಿದ್ದೇದ್ದು ನಕ್ಕು, ಅಳಿಸುತ್ತವೆ. ಇಂತಹ ಭಾವನೆಗಳಿಗ ಮಾರಾಟಕ್ಕಿವೆ. ಆದರೆ, ಸೂಕ್ತ ಬೆಲೆ ದೊರೆಯದೇ ಹಾಗೆಯೇ ಉಳಿದುಕೊಂಡು ನೆನೆಪಿನ ಅಲೆಯೊಂದಿಗೆ ಚಲ್ಲಾಟವಾಡುತ್ತಿವೆ.
ಅವು ಅಳಿದುಳಿದ ನೆನಪುಗಳು. ಆ ನೆನೆಪುಗಳಲ್ಲಿ ಅದೇಷ್ಟೂ ವರ್ಷದ ಭಾವನೆಗಳು ತುಂಬಿಕೊಂಡಿವೆಯೋ ನಾ ಕಾಣೆ. ಒಂದಕ್ಕಿಂತ ಒಂದು ವಿಭಿನ್ನ,  ವಿಶಿಷ್ಟ. ಎಲ್ಲವೂ ಬದುಕು ಕೂಡಿಟ್ಟ ಬಣ್ಣದ ಭಾವನೆಗಳು. ಬೇಡವೆಂದರೂ ಬಂದು ಎದೆಯಾಳದಲ್ಲಿ ಮತ್ತೆ ಬಣ್ಣದ ಕನಸುಗಳನ್ನು ಕಟ್ಟಿಕೊಡುತ್ತವೆ. ಕೆಲವು ತಿಂಗಳ ಹಿಂದೆ ಮನೆಯ ಸಮಾರಂಭಕ್ಕೆಂದು ಇಡೀ ಮನೆಯನ್ನು ಸ್ವಚ್ಛಗೊಳಿಸಲು ನಾನು, ಅವ್ವ ಮನೆಯ ಸಂಧಿಗೊಂದಿಗಳಲ್ಲಿ ಹೊಕ್ಕು ಮನೆಗೆ ಅಂಟಿಕೊಂಡಿದ್ದ ಧೂಳ್‌ನ್ನು ತೆಗೆದು ಸ್ವಚ್ಛ ಮಾಡುತ್ತಿದ್ದೇವು. ಅದೇಷ್ಟು ವರ್ಷದ ಧೂಳಿತ್ತೋ ತೆಗೆದಷ್ಟು ಹರವು ಜಾಸ್ತಿ ಆಗುತ್ತಲ್ಲೇ ಇತ್ತು. ಯಾಕಂದ್ರೆ ಅಪ್ಪನ ಚಾಕ್ರಿ ಮಧ್ಯೆ ಅವ್ವನಿಗೆ ಮನೆಯ ಸ್ವಚ್ಛತೆ ಕಡೆ ಗಮನ ಹರಿಸಲು ಆಗಿರಿಲ್ಲ. ಒಂದು ಕಡೆ ಅವ್ವ ಮನೆಯ ಒಳ ಕೋಣೆಯ ಧೂಳು ತೆಗೆಯುತ್ತಿದ್ದರೆ, ನಾನು ನಮ್ಮ ಅಜ್ಜನ ಕಾಲದ ಅಂಗಡಿ(ಕಪಾಟ)ನ್ನು ಸ್ವಚ್ಛ ಮಾಡುವ ಕಾರ್ಯ ಕೈಗೆತ್ತುಕೊಂಡೆ, ಬಹಳ ದಿನಗಳಿಂದ ಆ ಕಪಾಟನ್ನು ತೆಗೆದಿದಲಿಲ್ಲ ಅನ್ಸಿರುತ್ತದೆ. ಒಳಗೆ ಜೇಡರ ತನ್ನ ಬಲೆ ಹೆಣೆದುಕೊಂಡು ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿತ್ತು.
ಹೀಗೆ ಕಪಾಟಿನ ಒಂದೊಂದೆ ಕಾಣೆಗಳನ್ನು ಸ್ವಚ್ಛ ಮಾಡುತ್ತಿದ್ದಂತೆ ಬಾಲ್ಯದಲ್ಲಿ ನನ್ನೊಟ್ಟಿಗೆ ಜೊತೆಯಾಗಿದ್ದ, ನನ್ನ ಅಳುವಿನಲ್ಲಿ ನಗುವಾಗಿ ಸಂತೈಸುತ್ತಿದ್ದ ಆಟಕಿ ಸಾಮಾನುಗಳು ಪ್ರತ್ಯೇಕ್ಷವಾಗಿ ಬಿಟ್ಟವು. ಮತ್ತೊಂದೆಡೆ ಪ್ರಾಥಮಿಕ ಶಾಲೆಯಲ್ಲಿ ಕಲಿತ ನೋಟ್ ಬುಕ್‌ಗಳ ಮೂಟೆಯೇ ಕಣ್ಣೇದುರು ಬಂದು ನಿಂತಿತು. ಒಂದೊಂದು ವಸ್ತುವಿನಲ್ಲೂ ಭಾವನೆಗಳ ಮಹಾಪೂರವೇ ತುಂಬಿದೆ. ಬನಶಂಕರಿ ಜಾತ್ರೆಯಲ್ಲಿ ಅಪ್ಪ ತಂದ ಆ ದೀಪದ ಸಣ್ಣ ಹಡಗು, ಗೊಡಚಿ ಜಾತ್ರೆಯಲ್ಲಿ ರಚ್ಚೆ ಹಿಡುದ ಅತ್ತು ಕೊಡಿಸಿಕೊಂಡ ಆ ಬಸ್, ಗನ್ನು, ಗೋಲಿ ಆಟದಲ್ಲಿ ಗೆದ್ದು ತಂದ ಗೋಲಿಗಳನ್ನು ಹಾಕಿಡಲು ಬಳಸುತ್ತಿದ್ದ ನಮ್ಮಜ್ಜನ ಆ ಸಣ್ಣ ಟ್ರಂಕ್, ಕ್ರಿಕೆಟ್ ಆಟದಲ್ಲಿ ಬೌಂಡ್ರಿ ಸಿಕ್ಸರ್‌ಗಳಿಗೆ ಸಾಥ್‌ಕೊಟ್ಟ ಆ ಬ್ಯಾಟ್, ನೋಟ್‌ಬುಕ್‌ನ ಪ್ರತಿ ಪೇಜ್‌ನಲ್ಲಿ ಹಾಕಿದ್ದ ರೆಡ್ ಮಾರ್ಕನ ಆ ಸಹಿ, ಕೊನೆಯ ಹಾಳೆಯಲ್ಲಿ ಪೆನ್ನು ಮೂಡಿಲ್ಲವೆಂದು ಗೀಜಿದ್ದು, ಒಂದೇ ಎರಡೇ ಹತ್ತು ಹಲವು ವಸ್ತುಗಳು ಸ್ವಚ್ಛತಾ ಕಾರ್ಯದ ವೇಳೆ ಸಿಕ್ಕು ಬಾಲ್ಯದ ಭಾವನಾ ಲೋಕದಲ್ಲಿ ಕರೆದುಕೊಂಡು ಹೋಗಿ ಮತ್ತೆ ಮಗುವಾಗಿಸಿದ್ದು ಮಾತ್ರ ಸುಳ್ಳಲ್ಲ.
ಮಾರನೇ ದಿನ ಓಣಿಯಲ್ಲಿ ಗುಜರಿ ವ್ಯಾಪಾರಿಯೊಬ್ಬ ಕೂಗುತ್ತಾ ತಳ್ಳು ಗಾಡಿಯಲ್ಲಿ ಹೋಗುತ್ತಿದ್ದ ಸಡನ್ ಆಗಿ ಅವ್ವ ಆ ಆಸಾಮಿಯನ್ನು ಕೆರೆದು ಬರಲು ಹೇಳಿದ್ಳು. ನಾನು ಯಾಕಿರಬಹುದು ಎಂದು ಯೋಚನೆ ಮಾಡುವಷ್ಟರಲ್ಲಿ, ಅವ್ವ ಒಳಗಡೆ ಇದ್ದ ನನ್ನ ಬಾಲ್ಯದ ಭಾವನೆಗಳನ್ನು ಹೊತ್ತ ಆಟಕಿ ಹಾಗೂ ಪುಸ್ತಕಗಳನ್ನು ತಂದು ಆ ಗುಜರಿ ಆಸಾಮಿ ಮುಂದೆ ಮಾರಾಟಕ್ಕಿಟ್ಟಳು. ಅರೇ ಕ್ಷಣ ಭಾವನೆಗಳು ಚೂರಾದ ಹಾಗೆ ಆಯಿತು. ತಕ್ಷಣ ಅವ್ವನಿಗೆ ಹೇಳಿದೆ, ಇವುಗಳನ್ನು ಮಾರಾವುದು ಬೇಡ ಎಂದು, ಅವ್ವ ಮಾತ್ರ ಲೇ ಬಾಡ್ಯಾ ಇವ ಎದ್ಕ ಬೇಕ ನಿಂಗ್. ಮನ್ಯಾಗಿಟ್ರ ಮೂಲಿಗೆ ದಂಡ ಅಂತ, ಮತ್ತೇ ಆ ಗುಜರಿ ಆಸಾಮಿಯೊಂದೆ ವ್ಯವಹಾರ ಮುಂದುವರೆಸಿದಲು. ಆದರೆ, ಇಬ್ಬರ ಚೌಕಾಸಿ ವ್ಯವಹಾರ ಹೊಂದಲಿಲ್ಲ ಅನಿಸುತ್ತೆ. ನಮ್ಮವ್ವ ಮತ್ತದೆ ಗತ್ತಿನಿಂದ ತಂದ ವಸ್ತುಗಳನ್ನು ಒಳಗೆ ತೆಗೆದುಕೊಂಡು  ಹೋದಳು. ನನಗೆ ಮಾತ್ರ ಎಲ್ಲಿಲ್ಲ್ಲದ ಸಂತಸ. ಒಳ ಒಳಗೆ ಬಾಲ್ಯದ ಮುಗುಳ್ನಗೆ ಕೇಕೆ ಹಾಕಿತು. ಆದರೆ, ಬಾಲ್ಯ ಕೂಡಿಟ್ಟ ಭಾವನೆಗಳು ಮಾತ್ರ ಇದೀಗ ಮಾರಾಟಕ್ಕಿವೆ. ಯಾವಾಗ ಮಾರಾಟವಾಗುತ್ತವೇಯೋ ಆ ದೇವರೆ ಬಲ್ಲ. ಆದರೆ, ಸದ್ಯ ಮಾತ್ರ ಸೂಕ್ತ ಬೆಲೆ ಇಲ್ಲದೆ ಭಾವನೆಗಳು ಉಳಿದುಕೊಂಡಿವೆ.

- February 03, 2019 No comments:
Email ThisBlogThis!Share to XShare to FacebookShare to Pinterest

Saturday, 2 February 2019

ಹ್ಯಾಂಡಲ್ ಇಲ್ಲದ ಬೈಕ್ ಮೂಲಕ ಜಾಗೃತಿ!



ಸಾಹಸ ಸಾಮಾನ್ಯರಿಗೆ ಅಲ್ಲ, ಅದು ಏನಿದ್ದರೂ ಎಂಟೆದೆ ಬಂಟರಿಗೆ ಮಾತ್ರ. ಆದರೆ, ಈ ಸಾಹಸದಲ್ಲೂ ಒಂದು ದಾಖಲೆ ಮಾಡಬೇಕು ಎಂಬುವುದು ಎಲ್ಲರ ಕನಸು. ಹೀಗೆ ದಾಖಲೆಗಾಗಿ ಆರಂಭವಾದ ಸಾಹಸಿಗನ ಯಶೋಗಾಧೆ ಇದೀಗ ಸಾಮಾಜಿಕ ಜಾಗೃತಿ, ಧರ್ಮ ಜಾಗೃತಿಗಾಗಿ ತೆರೆದುಕೊಂಡಿದೆ. ಅಷ್ಟೇ ಅಲ್ಲದೇ ಈ ಸಾಹಸದ ಮೂಲಕ ಅನೇಕ ರೇಕಾರ್ಡ್ ಹಾಗೂ ಪ್ರಶಸ್ತಿ, ಸನ್ಮಾನಗಳನ್ನು ಬಿಗಿದಪ್ಪಿಕೊಂಡು ಮುನ್ನುಗ್ಗುತ್ತಿದ್ದಾರೆ.
ಹೌದು! ಅವರೇ ಬೈಕ್ ಸಾಹಸಿ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ ಈರಣ್ಣ ಜಿ. ಕುಂದರಗಿಮಠ. ಕಾರ್ ಹಾಗೂ ಬೈಕ್ ರೈಡಿಂಗ್ ಇಂದಿನ ಯುವಜನತೆಯ ಕ್ರೇಜ್. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳಿಗೆ ಹೆಸರಾಗಿರುವ ಉತ್ತರ ಕರ್ನಾಟಕದಲ್ಲಿ ಕಾರ್ ಹಾಗೂ ಬೈಕ್ ರೈಡಿಂಗ್ ಸಾಹಸಕ್ಕೆ ಸದ್ದು ಇದ್ದಿಲ್ಲ. ಆದರೆ, ದಾಖಲೆ ನಿರ್ಮಾಣದ ಬೆನ್ನು ಹತ್ತಿ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಸಾಹಸದಲ್ಲಿ ಎರಡು ಬಾರಿ ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ದಾಖಲೆ ಮಾಡಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ ಸಾಹಸಿ ಈ ಈರಣ್ಣ.
ಕಳೆದ 15 ವರ್ಷಗಳಿಂದ ಕಾರ್ ಹಾಗೂ ಬೈಕ್ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಕೃಷಿ ಕುಟುಂಬದಿಂದ ಬಂದ ಸಾಹಸಿ ಯುವಕ. ಈ ಸಾಹಸಿಗೆ 15ನೇ ವಯಸ್ಸಿನಲ್ಲಿಯೇ ಕಾರ್ ಹಾಗೂ ಬೈಕ್ ರೈಡಿಂಗ್ ಮಾಡುವ ಹವ್ಯಾಸ. ಈ ಹವ್ಯಾಸ ಇವತ್ತು ಸಾಧನೆಯ ಕಡೆಗೆ ಕರೆದೊಯ್ದು ದಾಖಲೆ ಮಾಡುವಂತೆ ಮಾಡಿದೆ. ಇವರು ಒದಿದ್ದು ಪಿಯುಸಿ ಮಾತ್ರ. ಸಾಧನೆ ಮಾತ್ರ ಇಡೀ ದೇಶವೇ ಮೆಚ್ಚಿ ಹೌದ ಹೌದ ಅನ್ನುವಂತಹದ್ದು.
ಇಂಡಿಯಾ ಬುಕ್ ಆಫ್ ರೆಕಾರ್ಡ್:
ಈ ಬೈಕ್ ನೋಡೋಕೆ ಎಲ್ಲ ಬೈಕ್‌ಗಳಂತೆ ಕಾಣುತ್ತದೆ. ಅಚ್ಚರಿ ಎಂದರೆ ಈ ಬೈಕ್‌ಗೆ ಹ್ಯಾಂಡಲ್ ಇಲ್ಲ! ಹ್ಯಾಂಡ್ಲ್ ಇಲ್ಲದ ಬೈಕ್ ಅಂತ ಕೇಳಿದರೆ ಸಾಕು ಮೈ ಕೈಯೆಲ್ಲಾ ಜುಂ ಎಂದು ರೋಮಗಳೆಲ್ಲ ಎದ್ದು ನಿಲ್ಲುತ್ತವೆ, ಹ್ಯಾಂಡಲ್ ಇರುವ ಬೈಕ್‌ನ್ನು ಓಡಿಸುವುದೇ ಕಷ್ಟ! ಹ್ಯಾಂಡಲ್ ಇರುವ ಬೈಕನ್ನೇರಿ ಹ್ಯಾಂಡಲ್ ಹಿಡಿದುಕೊಂಡೇ ಬೈಕ್ ಓಡಿಸಿದರೂ ಅಪಘಾತಗಳಾಗುವ ಇಂದಿನ ದಿನಗಳಲ್ಲಿ ಈ ಸಾಹಸಿ ಬೈಕ್‌ಗೆ ಇದ್ದ ಹ್ಯಾಂಡಲ್‌ನ್ನು ಸಂಪೂರ್ಣವಾಗಿ ತೆಗೆದು ಹಾಕಿ ರಾಜ್ಯ ರಾಷ್ಟ್ರದಲ್ಲೆ ಪ್ರಥಮ ಬಾರಿ ಯಾರು ಮಾಡಿರದಂತಹ ಅತ್ಯಂತ ಕಠಿಣವಾದ ಬೈಕ್ ಸಾಹಸ ಕ್ರೀಡೆಗೆ ಸಜ್ಜಾಗಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ಬಾಗಲಕೋಟೆ ಜಿಲ್ಲಾ ಭವನದಿಂದ ಬೆಂಗಳೂರಿನ ಶಕ್ತಿ ಕೇಂದ್ರ ವಿಧಾನಸೌಧದವರಗೆ ಸುಮಾರು 500 ಕಿಮೀಗಳನ್ನು 14 ಗಂಟೆಗಳಲ್ಲಿ ಮೈಜುಮ್ಮೆನ್ನಿಸುವಂತೆ ಪ್ರಾಣವನ್ನೆ ಪಣಕ್ಕಿಟ್ಟು ಬೈಕ್‌ನ್ನು ರೈಡಿಂಗ್ ಮಾಡಿದ್ದಾರೆ. ಅತ್ಯಂತ ಅಪಾಯಕಾರಿ ಹಾಗೂ ರೋಚಕವಾದ ಮಾರಣಾಂತಿಕ ಬೈಕ್ ರೈಡಿಂಗ್ ಸಾಹಸದಲ್ಲಿ ರೋಮಾಂಚನ ಮೂಡಿಸಿ ರಾಜ್ಯದ ಜನರಿಗೆ ಅಚ್ಚರಿ ಮೂಡಿಸಿದ ವೈಶಿಷ್ಟ್ಯಪೂರ್ಣವಾದ ಸಾಧನೆಗೈದ ಸಾಹಸ 2015ರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿ ಐತಿಹಾಸಿಕ ರಾಷ್ಟ್ರಮಟ್ಟದ ನೂತನ ದಾಖಲೆ ಸೃಷ್ಟಿಸಿ ಜಗತ್ತಿನ ಜನರ ಚಿತ್ತವನ್ನು ಗಮನ ಸೆಳೆದ ಬೈಕ್ ಕಿಂಗ್.
ಧಾರ್ಮಿಕ, ಸಾಮಾಜಿಕ ಒಳಿತಿಗೆ:
2017ರಲ್ಲಿ ಧರ್ಮ ಶಾಂತಿ ಹಾಗೂ ಜನ ಜಾಗೃತಿಗಾಗಿ ರಾಷ್ಟ್ರದಲ್ಲೇ ಪ್ರಥಮಬಾರಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ರೈಡಿಂಗ್ ಮಾಡುತ್ತಾ ಕೈಯಲ್ಲಿ ವೀರಶೈವ ಲಿಂಗಾಯತ ಧರ್ಮಧ್ವಜ ಹಾಗೂ ಓಂಕಾರದ ಧ್ವಜವನ್ನು ಹಿಡಿದುಕೊಂಡು ಕೂಡಲಸಂಗಮದಿಂದ ಗದಗದವರೆಗೆ ಇಲಕಲ್ಲ, ಹುನಗುಂದ, ಶಿರೂರ, ಬಾಗಲಕೋಟೆ, ಲೋಕಾಪೂರ, ಸಾಲಹಳ್ಳಿ, ಚಂದರಿಗಿ, ಯರಗಟ್ಟಿ, ಮುರಗೋಡ, ಬೈಲಹೊಂಗಲ, ದೇವಲಾಪುರ, ಯಡಾಲ, ನೇಗಿನಹಾಳ, ಎಮ್.ಕೆ ಹುಬ್ಬಳಿ, ಕಿತ್ತೂರ, ಧಾರವಾಡ, ಹುಬ್ಬಳ್ಳಿ, ಮಾರ್ಗವಾಗಿ ಸುಮಾರು 400 ಕಿ.ಮಿಗಳನ್ನು ಕೇವಲ 13 ಗಂಟೆಗಳಲ್ಲಿ ಗುರಿ ತಲುಪಿ ಮಾರ್ಗದುದ್ದಕ್ಕೂ ಧರ್ಮಶಾಂತಿ ಹಾಗೂ ಜನಜಾಗೃತಿಯನ್ನು ಮೂಡಿಸಿದ್ದಾರೆ.
2018ರಲ್ಲಿ ಯುವ ಶಕ್ತಿ ಜಾಗೃತಿ ಹಾಗೂ ವ್ಯಸನ ಮುಕ್ತ ಜಾಗೃತಿಗಾಗಿ ಗಡಿನಾಡು ಬೆಳಗಾವಿ ಜಿಲ್ಲೆಯ ನಿಡಸೋಸಿಯ ಶ್ರೀ ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠಕ್ಕೆ ಮಹಾ ಶಿವರಾತ್ರಿಯ ಮಹೋತ್ಸವದ ಅಂಗವಾಗಿ ಕೂಡಲಸಂಗಮದಿಂದ ನಿಡಸೋಸಿ ಶ್ರೀದುರದುಂಡೀಶ್ವರ ಮಠದವರೆಗೆ ರಾಷ್ಟ್ರಧ್ವಜ ಹಾಗೂ ಕನ್ನಡಧ್ವಜ ಹಿಡಿದುಕೊಂಡು ಯುವ ಶಕ್ತಿ ಜಾಗೃತಿ ಹಾಗೂ ವ್ಯಸನ ಮುಕ್ತ ಜಾಗೃತಿಗಾಗಿ ರಾಜ್ಯರಾಷ್ಟ್ರದಲ್ಲೇ ಪ್ರಥಮಬಾರಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ಕೂಡಲಸಂಗಮದಿಂದ ನಿಡಸೋಸಿ ಮಠದವರೆಗೆ ಜಾಗೃತಿ ಮೂಡಿಸಿದ್ದಾರೆ.
ದಾಖಲೆಗಳ ಅರಸ:
ರಾಷ್ಟ್ರದಲ್ಲೇ ಪ್ರಥಮಬಾರಿ ಎರಡು ಕೈ-ಕಾಲುಗಳನ್ನು ಕತ್ತರಿಯಾಗಿಸಿಕೊಂಡು ಹಗ್ಗದಿಂದ ಕಟ್ಟಿಕೊಂಡು ಜಿಲ್ಲೆಯ ಜಿಲ್ಲಾಭವನದಿಂದ ಬಾಗಲಕೋಟೆ, ಇಲಕಲ್ಲ, ವಿಜಯಪುರ, ಸೊಲ್ಲಾಪೂರ, ಪುಣೆ, ಕೊಲ್ಲಾಪೂರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ರಾಜಧಾನಿ ಬೆಂಗಳೂರಿನವರೆಗೆ ಅಪಾಯಕಾರಿ ಹಾಗೂ ರೋಮಾಂಚನಭರಿತವಾಗಿ ಹಗ್ಗಕಟ್ಟಿದ ಕೈ-ಕಾಲುಗಳಿಂದಲೆ ಕಾರ್‌ನ್ನು ಡ್ರೈವಿಂಗ್ ಮಾಡಿ 1341 ಕಿ.ಮಿಗಳನ್ನು ಕೇವಲ 48 ಗಂಟೆಯಲ್ಲಿ ಗುರಿತಲುಪಿದ ಸಾಧನೆಯ ಸಾಹಸ 2014ರ ಲಿಮ್ಕಾ ದಾಖಲೆ ಸೇರಿದೆ.
2009ರಲ್ಲಿ ಬೈಕ್ ಸಾಹಸದಲ್ಲಿ ರಾಷ್ಟ್ರದಲ್ಲೆ ಪ್ರಥಮ ಬಾರಿ ಬೈಕಿನ ಹ್ಯಾಂಡಲ್ ಹಿಡಿಯದೆ ಎರಡು ಕೈ ಬಿಟ್ಟು ಬೆಂಗಳೂರಿನ ವಿಧಾನಸೌಧದಿಂದ ದೆಹಲಿಯವರೆಗೆ 2500 ಕಿ.ಮೀಗಳನ್ನು ಕೇವಲ 5 ದಿನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್. ರಾಜಸ್ತಾನ, ಹರಿಯಾಣ ರಾಜ್ಯಗಳ ಮೂಲಕ ಬೆಂಗಳೂರು, ತುಮಕೂರ, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮುಂಬೈ, ಸೂರತ್, ಜೈಪುರ್ ಮಾರ್ಗವಾಗಿ ದೆಹಲಿವರೆಗೆ ಎರಡು ಕೈ ಬಿಟ್ಟು ಬೈಕ್ ಓಡಿಸಿ ಗುರಿ ತಲುಪಿ ದಾಖಲೆ ಮಾಡಿ ರಾಷ್ಟ್ರಾದ್ಯಂತ ಗಮನ ಸೆಳೆದಿದ್ದಾರೆ.
ಅರಸಿ ಬಂದ ಪ್ರಶಸ್ತಿಗಳು:
ಜಿಲ್ಲಾಡಳಿತದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ(2008), ಜಿಲ್ಲಾ ಕ್ರೀಡಾ ಇಲಾಖೆಯಿಂದ ಜಿಲ್ಲಾ ಯುವ ಪ್ರಶಸ್ತಿ(2008), ಹುನಗುಂದ ತಾಲೂಕಾಡಳಿತದಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಶಸ್ತಿ(2009) ಬಾಗಲಕೋಟೆ ಜಿಲ್ಲೆ ಜೇ.ಸಿ.ಐ.ಇಲಕಲ್ಲ ವಲಯದಿಂದ ಸಾಹಸಿ ಬೈಕ್ ಸವಾರಿ ಪ್ರಶಸ್ತಿ(2009), ಜಿಲ್ಲಾ ಕನ್ನಡಸಾಹಿತ್ಯ ಪರಿಷತ್‌ನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ (2011), ಉಡುಪಿ ಜಿಲ್ಲೆ ಹೆಬ್ರಿ ಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಾಹಸರತ್ನ ರಾಜ್ಯಪ್ರಶಸ್ತಿ (2012), ಕೊಪ್ಪಳ ಜಿಲ್ಲೆ ಚಳಗೇರಿ ಶ್ರೀರುದ್ರಮುನಿ ಶಿವಾಚಾರ್ಯ ಮಠದಿಂದ ವಾಹನ ಭಾಸ್ಕರ ಪ್ರಶಸ್ತಿ ರಾಜ್ಯಪ್ರಶಸ್ತಿ(2014), ಗದಗ ಜಿಲ್ಲೆ ನರೇಗಲ್ ಬಾಲಕೃಷ್ಣ ಸಾಹಿತ್ಯ ವೇದಿಕೆಯಿಂದ  ಸಾಹಸವೀರ ರಾಜ್ಯಪ್ರಶಸ್ತಿ (2015), ಕರ್ನಾಟಕ ಸರ್ಕಾರದ ಪೌರಾಡಳಿತ ಇಲಾಖೆಯ ನಗರಸಭೆಯಿಂದ ಕನ್ನಡ ರಾಜ್ಯೋತ್ಸವ ಗೌರವ(2015) ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯಿಂದ  ಕರ್ನಾಟಕ ಭೂಷಣ ರಾಜ್ಯಪ್ರಶಸ್ತಿ(2016), ಬೆಳಗಾವಿಜಿಲ್ಲೆ ನಿಡಸೋಸಿ ಶ್ರೀ ದುರುದುಂಡೀಶ್ವರ ಮಠದಿಂದ ರೈಡರ್ ರತ್ನ ರಾಜ್ಯಪ್ರಶಸ್ತಿ (2017), ತುಮಕೂರಿನ ಶ್ರೀ ಸಿದ್ದಗಂಗಾ ಮಠದಿಂದ ಸಾಧನಾ ರತ್ನ ಪ್ರಶಸಿ(2017), ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಿಂದ ಸಾಧನ ಸಿರಿ ರಾಜ್ಯ ಪ್ರಶಸ್ತಿ(2017) ಹೀಗೆ ಇನ್ನು ಅನೇಕ ಪ್ರಶಸ್ತಿ ಸನ್ಮಾನಗಳು ಇವರ ಜಾಗೃತಿ ಕಾರ್ಯ, ಹಾಗೂ ಸಾಹಕ್ಕೆ ಒಲಿದು ಬಂದಿವೆ.
ಇವರ ಈ ಸಾಧನೆ ಹೀಗೆ ಮುಂದುವರೆಯಲಿ, ರಾಜ್ಯಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂಬುವುದು ಜನರ ಆಶಯ. ಈರಣ್ಣ ಕುಂದರಗಿಮಠ ಅವರನ್ನು ಸಂಪರ್ಕಿಸಲು 99023 47392 ಕರೆ ಮಾಡಿ.
---

ನನ್ನ ಈ ಸಾಧನೆಗೆ ನನ್ನ ಜನರೆ ಕಾರಣ. ನನ್ನ ಎಲ್ಲ ಸಾಧನೆಗಳಿಗೆ ಆರ್ಥಿಕ ಸಹಾಯ ಮಾಡೋದು ಇದೆ ಜನ. ಇವರ ಋಣ ತೀರಿಸಲು ನನ್ನಿಂದ ಅಸಾಧ್ಯ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇನೆ. ಹ್ಯಾಂಡಲ್ ಇಲ್ಲದ ಬೈಕ್ ಸಾಹಸಕ್ಕೆ ಪರಿಶ್ರಮ ಬೇಕು. ಪ್ರ್ಯಾಕ್ಟಿಸ್ ಇಲ್ಲದೆ ಯಾರು ಮಾಡಬೇಡಿ.
-ಈರಣ್ಣ ಕುಂದರಗಿಮಠ, ಬೈಕ್ ಸಾಹಸಿ.

- February 02, 2019 No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...

  • ನುಡಿ ತೇರ ಎಳೆಯೋಣ ಬನ್ನಿ....
    ಮಂಜುನಾಥ ಗದಗಿನ ನಾಡಾಗಲಿ, ನುಡಿಯಾಗಲಿ ಎಂದೆಂದೂ ಕನ್ನಡ ಅಭಿಮಾನ ನಮ್ಮದಾಗಿರಲಿ. ತನು, ಮನ ನಿಮ್ಮದಾಗಲಿ ಕನ್ನಡ ಉಸಿರಾಗಲಿ, ನಮ್ಮೂರ ನುಡಿ ಹಬ್...
  • ಆಟಗಳು ಉಂಟು ಲೆಕ್ಕಕ್ಕಿಲ್ಲ..!
    ಮಂಜುನಾಥ ಗದಗಿನ   ಆಟದೊಂದಿಗೆ ಪಾಠ ಕೇಳುತ್ತಿದ್ದರೆ, ಅದೆನೋ, ಹರುಷ. ಮತ್ತಷ್ಟು ಕಲಿಬೇಕು, ತಿಳಿದುಕೊಳ್ಳಬೇಕು ಎಂಬ ಹಂಬಲ ವ್ಯಕ್ತಿಗತವಾಗಿ ಪರಕಾಯ ಪ್ರವೇಶ ಮಾಡುತ್...
  • ಹೋರಾಟಗಾರಲ್ಲಿ ಜಾಗೃತಿ ಮೂಡಿಸಿದ ನಾಟಕ ಕಂಪನಿ
    ಮಹಾದೇವಪ್ಪ ಪಟ್ಟಣ ಸ್ಥಾಪಿಸಿದ್ದ ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ -ಮಂಜುನಾಥ ಗದಗಿನ ಸ್ವಾತಂತ್ರ್ಯ ಹೋರಾಟ ತೀವ್ರಗತಿಯಲ್ಲಿ ಸಾಗಿದ್ದ ಸಮಯ. ಈ ವೇಳೆ ಬ್ರಿಟಿಷರು ಹೆಚ...

Search This Blog

  • Home

About Me

manjunath Gadagin
View my complete profile

Report Abuse

Blog Archive

  • ►  2024 (1)
    • ►  March (1)
  • ►  2023 (2)
    • ►  July (2)
  • ►  2022 (7)
    • ►  August (6)
    • ►  July (1)
  • ►  2020 (2)
    • ►  December (1)
    • ►  September (1)
  • ▼  2019 (20)
    • ►  October (2)
    • ►  September (2)
    • ►  July (3)
    • ►  March (3)
    • ▼  February (7)
      • ಬ್ರಹ್ಮಗಂಟು
      • ಸ್ನೇಹದ ಕಡಲು
      • ಓ ನೇಕಾರ....!!
      • ಮಕ್ಕಳ "ಧ್ವನಿ" ಈ ಮಂಜುಳಾ
      • ಕ್ಯಾಂಪಸ್‌ನಲ್ಲಿ ಜಾರಿ ಬಿದ್ದಿರಿ ಜೋಕೆ..!
      • ಭಾವನೆಗಳು ಮಾರಾಟಕ್ಕಿವೆ..!
      • ಹ್ಯಾಂಡಲ್ ಇಲ್ಲದ ಬೈಕ್ ಮೂಲಕ ಜಾಗೃತಿ!
    • ►  January (3)
  • ►  2018 (22)
    • ►  December (9)
    • ►  April (2)
    • ►  March (6)
    • ►  February (2)
    • ►  January (3)
  • ►  2017 (6)
    • ►  September (1)
    • ►  January (5)
  • ►  2016 (17)
    • ►  November (1)
    • ►  October (2)
    • ►  September (1)
    • ►  July (1)
    • ►  June (2)
    • ►  May (2)
    • ►  April (2)
    • ►  March (2)
    • ►  February (4)
  • ►  2015 (8)
    • ►  September (1)
    • ►  August (1)
    • ►  July (3)
    • ►  April (2)
    • ►  January (1)
Awesome Inc. theme. Powered by Blogger.