Tuesday, 16 August 2022

ಶಿಕ್ಷಣಕ್ಕೆ ವಿದಾಯ ಹೇಳಿದ್ದೆ...

 ಬಡತನಕ್ಕೆ ಮೂರು ಬಾರಿ ಶಿಕ್ಷಣ ನಿಲ್ಲಿಸಿದ್ದೆ > ಮತ್ತೆ ಮೇಲೆದ್ದು ಬಂದೆ



ಸದಾ ಸಿಂಡರಿಸಿಕೊಂಡುತ್ತಿದ್ದ ಅಪ್ಪನನ್ನು ಏನು ಕೇಳುವುದು ಎಂಬ ಮನೋಭಾವಕ್ಕಿಂತ ದುಡಿದ ದುಡ್ಡು ಬದುಕಿಗೆ ಸಾಕಾಗುತ್ತಿಲ್ಲ ಎಂಬ ಬಡತನವೇ ನನ್ನ ಬಾಲ್ಯದ ಅದೇಷ್ಟೋ ಕನಸು, ಆಸೆಗಳನ್ನ ಕಿತ್ತುಕೊಂಡು ಬಿಟ್ಟಿತ್ತು. ಈ ಬಡತನ ನನ್ನ ಶಿಕ್ಷಣವನ್ನೇ ಕಸಿದುಕೊಂಡು ದುಡಿಮೆಗೆ ಹಚ್ಚಿದ್ದು ನೆನೆಸಿಕೊಂಡರೇ ಭಯವಾಗುತ್ತದೆ. “ಸಾಲಿ ಕಲ್ತ ಏನ ಮಾಡ್ತಿ ಮಗ್ಗಾ ನೇಯ್ಯಾಕ ಹೋಗ ಇನ್ನ’ ಎಂಬ ಅಪ್ಪನ ಆ ಮಾತುಗಳು ನನ್ನಲ್ಲಿ ಇನ್ನು ಮಾರ್ದನಿಸುತ್ತಿವೆ. ಹೀಗೆ ಅಪ್ಪನ ಹಠಕ್ಕೆ ಶಿಕ್ಷಣಕ್ಕೆ ವಿದಾಯ ಹೇಳಿ ಮಗ್ಗ ನೇಯಲೂ ಆರಂಭಿಸಿದೆ. 

“ಒಬ್ಬ ಮಗಾ ಅದಾನ ಅವನರ ಚಲೋತಂಗ ಸಾಲಿ ಕಲ್ಸಬಾರದಾ’ ಎಂಬ ಜನರ ಮಾತು ಅಪ್ಪನಿಗೆ ನಾಟಿದ್ದವು ಅನ್ಸುತ್ತೆ. ಮತ್ತೆ ಶಾಲೆಗೆ ಕಳುಹಿಸಲು ಅಣಿಯಾದ. ಆದರೆ, ಅದಾಗಲೇ ಒಂದು ವರ್ಷದ ನನ್ನ ಶಿಕ್ಷಣ ಇತಿಹಾಸದ ಗರ್ಭ ಸೇರಿ ಆಗಿತ್ತು. ಮತ್ತೆ ಶಾಲೆಗೆ ಹೋಗಲು ಮನಸು ಚಡಪಡಿಸುತ್ತಿತ್ತು. ಮತ್ತೆ ಶಾಲೆ ಆರಂಭವಾಯಿತು. ಮತ್ತದೇ ಕಾಯಿಪಲ್ಲೆ ತರುವ ಚೀಲ, ಪಾಠಿ ಜೊತೆಯಾಗಿ ಹೆಜ್ಜೆ ಹಾಕಿದವು. ಅದಾಗಲೇ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಹೆಜ್ಜೆ ಇಟ್ಟಿದ್ದೆ. ಆಗ ಗೊತ್ತಾಗಿದ್ದು ಓಡುವ ಕಾಲದ ಎದುರು ನಾವೇಷ್ಟು ಸಣ್ಣವರು ಎಂದು. ನೂರೆಂಟು ವಿಚಾರ, ಚಿಂತೆ, ವೈದ್ಯರ ಮಾತಿನ ನಿರ್ಲಕ್ಷ್ಯ ಮಾಡಿದ್ದರಿಂದ ಅಪ್ಪನಿಗೆ ಪಾರ್ಶ್ವವಾಯು ಹೊಡೆಯಿತು. ಆಗ ನಾನು ಏಂಟನೇ ತರಗತಿ ಪ್ರವೇಶ ಪಡೆದುಕೊಂಡಿದ್ದೇ ಅಷ್ಟೇ. ಅಪ್ಪನಿಗೆ ಹೀಗಾಗಿದ್ದರಿಂದ ನಾನು ಒಬ್ಬನೇ ಮಗ. ಮನೆಯ ಜವಾಬ್ದಾರಿ ನನ್ನ ಮೇಲೆ ಬಿತ್ತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಿ ಮನೆಯ ನೊಗ ಹೊರಬೇಕು ಎಂದು ನಿರ್ಧರಿಸಿದೆ. ಹೀಗಾಗಿ ಒಂದೆರೆಡು ತಿಂಗಳು ಶಾಲೆಯನ್ನು ಬಿಟ್ಟು ಮಗ್ಗದ ಕಡೆ ಮುಖ ಮಾಡಿದೆ. ಆದರೆ, ಅಕ್ಕ “ನಾನು ನೇಯುತ್ತೇನೆ ನೀನು ಶಾಲೆಗೆ ಹೋಗು’ ಎಂದು ಹೇಳಿದ್ಲು. ಮನಸ್ಸು ಸುತಾರಾಮ ಒಪ್ಪಲಿಲ್ಲ. ಆದರೆ, ಓದಬೇಕು ಎಂಬ ಆಸೆ ಮತ್ತೆ ಶಾಲೆ ಕಡೆಗೆ ಕರೆದುಕೊಂಡು ಹೋಯಿತು. ಬೆಳಿಗ್ಗೆ ಬೇಗ ಎದ್ದು ಮಗ್ಗ ನೇಯ್ದು ಮತ್ತೆ ಶಾಲೆಗೆ ಹೋಗುತ್ತಿದೆ. ಮತ್ತೆ ಶಾಲೆಯಿಂದ ಬಂದ ಮೇಲೆ ನೇಯುತ್ತಿದೆ. ಹಾಗೋ ಹೀಗೋ ಮಾಡಿ ಪ್ರೌಢ ಶಿಕ್ಷಣ ಮುಗಿಸುವ ಹಂತಕ್ಕೆ ಬಂದು ನಿಂತೆ. ಆಗ ಅಕ್ಕನ ಮದುವೆ ಕೂಡಾ ಆಗಿ ಹೋಯಿತು. ಇದೀಗ ನಾನು, ಪಾರ್ಶ್ವವಾಯು ಪೀಡಿತ ಅಪ್ಪ, ಮತ್ತ ಅವ್ವ್ಪ ಅಷ್ಟೇ ಬದುಕಾಯಿತು. 

       ಪ್ರಾಪಂಚಿಕ ಜ್ಞಾನವಿಲ್ಲದ ಅವ್ವ, ಮಾತು ಬಾರದ ಅಪ್ಪ. ನಾನು ಹೇಗೆ ಕಾಲೇಜಿಗೆ ಹೋಗಲಿ ಎಂದು ಮನಸ್ಸು ಚಿಂತಿಸಲು ಆರಂಭಿಸಿತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಬೇಕು ಎಂದುಕೊಂಡು ಸಂಪೂರ್ಣವಾಗಿ ಮಗ್ಗದ ಕಡೆ ವಾಲಿದೆ. ಆದರೆ, ಕೆಲವು ಜನರ ಮಾತು ಮತ್ತೆ ಮನಸ್ಸು ಬದಲಿಸಿತು. ಖಾಸಗಿ ಕಾಲೇಜಿಗೆ ದುಡ್ಡು ಕಟ್ಟಲು ಆಗದ ಕಾರಣ ಆಗ ತಾನೇ ಊರಿನಲ್ಲಿ ಸ್ಥಾಪನೆಯಾಗಿದ್ದ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದುಕೊಂಡೆ. ಆಗ ಕಾಲೇಜಿನಲ್ಲಿ ಶಿಕ್ಷಕರು ಇಬ್ಬರೇ, ಅವರು ಎರವಲು ಬೇರೆ. ಊರಿಂದ ಬಂದು ವಾರದಲ್ಲಿ ಎರಡು ಸಾರಿ ಪಾಠ ಮಾಡುತ್ತಿದ್ದರು. ಕಾಲೇಜು ಹಂತದಲ್ಲಿಯೂ ಅದೇ ಮಗ್ಗ ಮತ್ತು ಪಾಠವೇ ನನ್ನ ಬದುಕಾಗಿತ್ತು. ಆಟಕ್ಕೆ ವಿದಾಯ ಹೇಳಿ ಅದೇಷ್ಟೋ ವರ್ಷಗಳೆ ಗತಿಸಿ ಹೋಗಿದ್ದವು. ನಿರೀಕ್ಷೆಗಳು ಹೆಚ್ಚಾದಂತೆ ಪರೀಕ್ಷೆಗಳು ಹೆಚ್ಚಾಗುತ್ತವೆ ಎಂಬುವುದನ್ನು ಅರಿತುಕೊಂಡೆ. ಅದಕ್ಕೆ ಬದುಕಿನಲ್ಲಿ ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡು ಪರೀಕ್ಷೆಗಳನ್ನು ಪಾಸು ಮಾಡುತ್ತಾ ಸಾಗಿದೆ. ಓದಿದೆ. ಇದೇ ಕಾರಣಕ್ಕೆ ಕಾಲೇಜಿಗೆ ಪ್ರಥಮ ಬಂದೆ. ಆಗ ಪೇಪರ್‌ನಲ್ಲಿ ಪೋಟೋ ಬಂದದ್ದು ನೋಡಿ, ಅಪ್ಪ, ಅವ್ವ ಸಂತಸಕೊಂಡರು.

ಮುಂದೆ....ನಡೆದದ್ದು ಬದುಕು ಕಟ್ಟಿಕೊಳ್ಳುವ ದೊಡ್ಡ ಹೋರಾಟ. ಅಪ್ಪ-ಅವ್ವನನ್ನು ಬಿಟ್ಟು ದೂರದ ಹುಬ್ಬಳಿಯತ್ತ ಪಯಣ.....

ನಿರೀಕ್ಷಿಸಿ......!                                        -ಮಂಜುನಾಥ ಗದಗಿನ


Sunday, 14 August 2022

ಹೋರಾಟಗಾರಲ್ಲಿ ಜಾಗೃತಿ ಮೂಡಿಸಿದ ನಾಟಕ ಕಂಪನಿ

ಮಹಾದೇವಪ್ಪ ಪಟ್ಟಣ ಸ್ಥಾಪಿಸಿದ್ದ ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ



-ಮಂಜುನಾಥ ಗದಗಿನ
ಸ್ವಾತಂತ್ರ್ಯ ಹೋರಾಟ ತೀವ್ರಗತಿಯಲ್ಲಿ ಸಾಗಿದ್ದ ಸಮಯ. ಈ ವೇಳೆ ಬ್ರಿಟಿಷರು ಹೆಚ್ಚಿಸಿದ್ದ ಕಂದಾಯಕ್ಕಿಂತ ಜನರ ಮೇಲೆ ಹೆಚ್ಚಿನ ಕಂದಾಯ ಹೇರಿದ್ದ ಸಂಸ್ಥಾನಿಕರ ವಿರುದ್ಧ ಜನರನ್ನು ಒಗ್ಗೂಡಿಸಿ ಬ್ರಿಟಿಷರಿಗೆ ಪರೋಕ್ಷವಾಗಿ ನಡುಕ ಹುಟ್ಟಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ಸ್ಥಾಪನೆ ಮಾಡಿ ಜನರ ಮನಪರಿವರ್ತನೆ ಮಾಡಿ ಜನರಿಗೆ ಮನರಂಜನೆಯ ಜತೆಗೆ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿದ್ದು ರಾಮದುರ್ಗದ ಮಹಾದೇವಪ್ಪ ಪಟ್ಟಣ.
ಮಹಾದೇವಪ್ಪ ಪಟ್ಟಣನವರು ಬಾಯಿಯಲ್ಲಿ ಬಂಗಾರ ಚಮಕ ಇಟ್ಟುಕೊಂಡು ಹುಟ್ಟಿದರು. ಮನೆಯಲ್ಲಿ ಸಾಕಷ್ಟು ಆಸ್ತಿ ಇತ್ತು. ಕುಳಿತು ಉಂಡರೂ ಕರಗದಷ್ಟು ಶ್ರೀಮಂತಿಕೆ ಅವರ ಬಳಿ ಇತ್ತು. ಆದರೆ, ಇದ್ಯಾವುದಕ್ಕೂ ಪಟ್ಟಣ ಅವರು ಮಾರು ಹೋಗದೇ ದೇಶಕ್ಕಾಗಿ, ತಮ್ಮ ಜನರಿಗೆ ಒಳಿತಾದರೆ ಸಾಕು ಎಂಬ ಒಂದೇ ಒಂದು ಮನೋಭಾವ ಅಲ್ಲರಲ್ಲಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಶ್ರೀಮಂತಿಕೆ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.
೧೯೩೪ ರಿಂದ ೧೯೩೭ರ ಅವಧಿಯಲ್ಲಿ ತೀವ್ರ ಬರಗಾಲ ತಲೆದೋರಿತ್ತು. ದುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ದುಸ್ತರವಾಗಿತ್ತು. ಇಂತಹ ಸನ್ನಿವೇಶದಲ್ಲಿ ಜನರ ಕಷ್ಟಗಳಿಗೆ ಮುಂದಾಗುವುದು ಬಿಟ್ಟು ಸಂಸ್ಥಾನದ ರಾಜ ಬ್ರಿಟಿಷ್ ಹದ್ದಿಗಿಂತ ಒಂದೂವರೆ ಪಟ್ಟು ಹೆಚ್ಚಿಗೆ ಭೂಕಂದಾಯ ವಸೂಲಿ ಮಾಡುತ್ತಿದ್ದ. ಸಂಸ್ಥಾನಿಕರ ಹಾಗೂ ಜನರ ಹೋರಾಟಕ್ಕೆ ಹಾದಿ ಮಾಡಿಕೊಟ್ಟಿತು.
ಇಂತಹ ಸಂದರ್ಭದಲ್ಲಿ ಸಂಸ್ಥಾನಿಕರ ವಿರುದ್ಧ ಹೋರಾಟ ನಡೆಸಲು ಜನರು ಮುಂದಾದರು. ಈ ವೇಳೆ ಮಹಾದೇವಪ್ಪ ಪಟ್ಟಣ ಅವರು ಮುಂಚೂಣಿಗೆ ಬಂದು ಬಂಡಾಯದ ನಾಯಕತ್ವ ವಹಿಸಿಕೊಂಡರು. ಇದಾದ ನಂತರ ಪಟ್ಟಣ ಅವರು ಸಂಸ್ಥಾನಿಕ ರಾಜನ ಕೆಂಗಣ್ಣಿಗೆ ಗುರಿಯಾದರು. ಈ ವೇಳೆ ಪಟ್ಟಣ ಅವರನ್ನು ರಾಜ ಬಗ್ಗು ಬಡಿಯಲು ನೋಡಿದ. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಮಹಾದೇವಪ್ಪನವರು ನ್ಯಾಯವಾದಿ ಬಿ.ಎನ್.ಮುನವಳ್ಳಿ ಅವರ ಜತೆಗೂಡಿ ಜನಜಾಗೃತಿ ಮಾಡಿದರು.
ಸ್ಫೂರ್ತಿಗಾಗಿ ರಾಜ ಬೀದಿಯಲ್ಲಿ ಕಾಂಗ್ರೆಸ್ ಧ್ವಜ ಕಂಬ ನೆಟ್ಟರು. ಸ್ವಯಂ ಸೇವಕರ ಪಡೆ ಕಟ್ಟಿದರು. ಬಂಡಾಯದಲ್ಲಿ ಪಾಲ್ಗೊಂಡ ಹೋರಾಟಗಾರರ ಖರ್ಚು-ವೆಚ್ಚ ನೋಡಿಕೊಂಡರು. ಇದೇ ವೇಳೆ ಜನರನ್ನು ಒಂದುಗೂಡಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ರಚಿಸುವ ಮೂಲಕ ಜನರಲ್ಲಿ ಬಂಡಾಯ ಹಾಗೂ ಸ್ವಾತಂತ್ರ್ಯ ಹೋರಾಟ ಬಗ್ಗೆ ಜಾಗೃತಿ ಮೂಡಿಸಿ ಜನರು ಹೋರಾಟಕ್ಕೆ ಕರೆತಂದರು. ಏನಾದರೂ ನಿರ್ಧಾರಗಳನ್ನು ಮಾಡಲು, ಚರ್ಚಿಸಲು ಈ ನಾಟಕ ಕಂಪನಿ ಬಳಸಿಕೊಂಡರು. ನಾಟಕ ನೋಡಲು ಬರುವ ಜನರಿಗೆ ಅರಿವು ಮೂಡಿಸಿದರು.
ಹೋರಾಟದ ಕಾವು ಹೆಚ್ಚಾದಂತೆ ಇವರನ್ನೆಲ್ಲ ಮಟ್ಟ ಹಾಕಲು ರಾಜ ಕೊಲ್ಲಾಪುರದಲ್ಲಿದ್ದ ಬ್ರಿಟಿಷ್ ಪೊಲಿಟಿಕಲ್ ಏಜೆಂಟ್‌ನನ್ನು ಸಂಪರ್ಕಿಸಿ ಸೈನ್ಯ ಕಳುಹಿಸಲು ಕೇಳಿಕೊಂಡ. ಆದರೆ, ಚಳವಳಿ ತೀವ್ರ ಸ್ವರೂಪ ಕಂಡ ಬ್ರಿಟಿಷರು ರಾಜನಿಗೆ ಬುದ್ಧಿವಾದ ಹೇಳಿ ಕಳಹಿಸಿದರು. ಇನ್ನು ಪಟ್ಟಣ ಹಾಗೂ ಮುನವಳ್ಳಿ ಅವರನ್ನು ಕೊಂದರೆ ಬಂಡಾಯ ಶಮನವಾಗುವುದು ಎಂದು ಯೋಚಿಸಿದ್ದ ರಾಜ ಅವರನ್ನು ಕೊಲ್ಲಲು ೧೯೩೯ರಲ್ಲಿ ತೇರ ಬಜಾರದಲ್ಲಿದ್ದ ಕಾಂಗ್ರೆಸ್ ಧ್ವಜ ಸ್ತಂಭ ತೆರವುಗೊಳಿಸಿದ.
ಇದು ಸಂಘರ್ಷಕ್ಕೆ ಕಾರಣವಾಗಿ ಲಾಠಿ ಜಾರ್ಜ್, ಕಲ್ಲು ತೂರಾಟಕ್ಕೆ ಕಾರಣವಾಯಿತು. ಈ ವೇಳೆ ಪರಿಸ್ಥಿತಿ ಗಂಭೀರತೆ ಅರಿತ ಪಟ್ಟಣ ಅವರು ಮನೆಗೆ ಬಂದು ಮನೆಯಲ್ಲಿದ್ದ ಹಣ ತೆಗೆದುಕೊಂಡು ಊರು ಬಿಟ್ಟು ಭೂಗತರಾದರು. ತದನಂತರ ಮುನವಳ್ಳಿ ಅವರ ಬಂಧನವಾಗಿ ಅದು ಹಿಂಸಾಚಾರಕ್ಕೆ ತಿರುಗಿ ಪೊಲೀಸರು, ಹೋರಾಟಗಾರರ ಹತ್ಯೆಯಾಯಿತು. ಈ ಸುದ್ದಿ ತಿಳಿದ ಮಹಾದೇವಪ್ಪ ಪಟ್ಟಣ ಅವರು ನೊಂದುಕೊಂಡರು. ಪಟ್ಟಣ ಅವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ಕೂಡವಾಯಿತು. ಅಲ್ಲದೆ, ಹಿಡಿದು ಕೊಟ್ಟವರಿಗೆ ₹೧೦ ಸಾವಿರ ಕೊಡುವುದಾಗಿ ತಿಳಿಸಲಾಯಿತು. ಇದರಿಂದ ಪಟ್ಟಣ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದರು. ತಮ್ಮ ಸ್ಥಳಗಳನ್ನು ಬದಲಿಸುತ್ತಾ ಅಲೆದಾಡಿದರು. ಇದೇ ವೇಳೆ ಪಟ್ಟಣ ಅವರು ಶರಣಾಗಬೇಕು. ಇಲ್ಲದಿದ್ದರೆ ಅವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಫರ್ಮಾನು ಹೊರಡಿಸಲಾಯಿತು. ಆದರೆ, ಪಟ್ಟಣ ಅವರು ಶರಣಾಗದೇ ಇದ್ದ ಕಾರಣ ಅವರ ೪೦೦ ಎಕರೆ ಜಮೀನನ್ನು ಸಂಸ್ಥಾನಿಕರು ವಶಪಡಿಸಿಕೊಂಡರು. ನಂತರ ದೇಶದ ವಿವಿಧೆಡೆ ಭೂಗತರಾಗಿ ಚಲೇಚಾವ್ ಚಳವಳಿಯಲ್ಲಿ ಪಾಲ್ಗೊಂಡರು.
ಜೈಲು ಸುಟ್ಟು, ಪೊಲೀಸರ ಹತ್ಯೆ ಮಾಡಿದ ಕಾರಣಕ್ಕೆ ಅನೇಕರಿಗೆ ಶಿಕ್ಷೆಯಾಯಿತು. ಈ ವೇಳೆ ಶಿಕ್ಷೆಗೊಳಗಾಗಿದ್ದ ಎಲಿಗಾರ ಬಸಪ್ಪ ನೇಣಿಗೇರುವ ಮುನ್ನ ಕೊನೆಯ ಆಸೆ ಕೇಳಿದಾಗ, ಮಹಾದೇವಪ್ಪ ಹೋರಾಟ ಮುಂದುವರಿಸುತ್ತಾನೆ. ಗುರಿ ಸಾಧಿಸಿ ನಮ್ಮೆಲ್ಲರ ಸಾವಿನ ಸೇಡು ತೀರಿಸಿಕೊಳ್ಳುತ್ತಾನೆ’ ಎಂದು ರಣೋತ್ಸಾಹ ಹೊರಗೆಡವಿದ್ದ. ಅದು ಜನರ ಹೋರಾಟವನ್ನು ಜೀವಂತವಾಗಿ ಇಟ್ಟಿತ್ತು. ಮಹಾತ್ಮ ಗಾಂಧೀಜಿ ಈ ಗಲ್ಲು ಶಿಕ್ಷೆ ರದ್ದುಪಡಿಸಲು ಕೇಳಿದ್ದರು. ರಾಜ ಮನ್ನಿಸಲಿಲ್ಲ. ೧೯೪೬ರಲ್ಲಿ ಮಹಾದೇವಪ್ಪ ಪಟ್ಟಣ ಅವರ ಮೇಲಿದ್ದ ವಾರೆಂಟ್ ಅನ್ನು ಹಿಂಪಡೆಯಲಾಯಿತು. ನಂತರ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಮಹಾದೇವಪ್ಪ ಪಟ್ಟಣವರು ಬಂಡಾಯವೆದ್ದು ಸಂಸ್ಥಾನಿಕರಿಗೆ ಸಿಂಹಸ್ವಪ್ನವಾಗಿ ಪರಿಣಿಮಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇವರ ಕಿಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿತ್ತು. ಅವರು ಸ್ಥಾಪಿಸಿದ್ದ ನಾಟಕ ಕಂಪನಿ ಕೂಡಾ ಬಂಡಾಯದಲ್ಲಿ ಅನನ್ಯ ಪಾತ್ರ ನಿರ್ವಹಿಸಿತ್ತು.

Saturday, 6 August 2022

 ಕರ ಹೆಚ್ಚಳ ವಿರೋಧಿಸಿ ಹೋರಾಟ | ಜೈಲು ಸುಟ್ಟು, ಎಂಟು ಪೊಲೀಸರ ಹತ್ಯೆ| ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಬಂಡಾಯ


-ಮಂಜುನಾಥ ಗದಗಿನ 
ಜೈಲು ಧ್ವಂಸ ಮಾಡಿ, ಎಂಟು ಜನ ಪೊಲೀಸರನ್ನು ಕೊಚ್ಚಿಕೊಂದರು. ನಂತರ ಪೊಲೀಸರ ಗೋಲಿಬಾರ್‌ಗೆ ನಾಲ್ಕು ಜನ ಹೋರಾಟಗಾರರು ಪ್ರಾಣ ತ್ಯಾಗ ಮಾಡಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ, ಚಳವಳಿಗಾರರಿಗೆ ಹುಮ್ಮಸ್ಸು, ಕಿಚ್ಚು ತುಂಬಿದ್ದು ರಾಮದುರ್ಗ ಸಂಸ್ಥಾನದ ಬಂಡಾಯ. ಈ ಬಂಡಾಯ ನಡೆದದ್ದು ಪ್ರಜಾಸಂಘದ ನೇತೃತ್ವದಲ್ಲಿ ಎನ್ನುವುದು ಸ್ವಾರಸ್ಯಕರ.
ದೇಶದಲ್ಲಿ ಬ್ರಿಟಿಷರು ವಿಧಿಸಿದ ಕರ ನಿರಾಕಣೆ ಸತ್ಯಾಗ್ರಹ ನಂತರ ಸಂಸ್ಥಾನವೊಂದರ ಕರನಿರಾಕಣೆ ಬಂಡಾಯ ಸ್ವಾತಂತ್ರ್ಯ ಹೋರಾಟದ ಕಾವಿಗೆ ಮತ್ತಷ್ಟು ಇಂಬು ನೀಡಿತ್ತು. ಅದು ೧೯೩೭ರ ಸಮಯ. ದೇಶದಲ್ಲಿ ಕಾನೂನು ಭಂಗ ಚಳವಳಿ ನಡೆಯುತ್ತಿತ್ತು. ಈ ವೇಳೆ ರಾಮದುರ್ಗ ಸಂಸ್ಥಾನದ ಆಳ್ವಿಕೆ ಮಾಡುತ್ತಿದ್ದ ರಾಜಾಸಾಹೇಬರು ದೇಶದಲ್ಲಿದ್ದ ತೆರಿಗೆಗಿಂತ ಹೆಚ್ಚಿನ ತೆರಿಗೆಯನ್ನು ಸಂಸ್ಥಾನದ ಜನರ ಮೇಲೆ ಹೇರಿದ್ದರು. ಆಗ ಬರಗಾಲ ಎದುರಾಗಿತ್ತು. ಹೀಗಾಗಿ ಜನರು ತೆರಿಗೆ ಕಡಿತಗೊಳಿಸಿ ಎಂದು ರಾಜಾಸಾಹೇಬರ ಹತ್ತಿರ ವಿನಂತಿಸಿಕೊಂಡರು. ಇದಕ್ಕೆ ರಾಜಾಸಾಹೇಬರು ಸೊಪ್ಪು ಹಾಕಲಿಲ್ಲ. ಹೀಗಾಗಿ ರಾಮದುರ್ಗ ಸಂಸ್ಥಾನದಲ್ಲಿ ಕರನಿರಾಕರಣೆ ಸತ್ಯಾಗ್ರಹ ಆರಂಭಗೊಂಡಿತು. ಈ ವೇಳೆ ಪ್ರಜಾಸಂಘ ಹುಟ್ಟಿಕೊಂಡಿತು. ಇದರ ಅಧ್ಯಕ್ಷರಾಗಿ ವಕೀಲ ಬಿ.ಎನ್.ಮುನವಳ್ಳಿಯವರು ಆಯ್ಕೆಯಾದರು.
ಪ್ರಜಾಸಂಘ ಸ್ಥಾಪನೆಯಾದ ನಂತರ ರಾಮದುರ್ಗ ಗ್ರೂಪ್, ಸುರೇಬಾನ ಗ್ರೂಪ್, ಮೆಣಸಗಿ ಗ್ರೂಪ್ ಎಂದು ಮೂರು ಸ್ವಯಂ ಸೇವಕರ ಸಂಘಟನೆಗಳನ್ನು ಮಾಡಿಕೊಂಡು ಒಂದೊಂದು ಸಂಘಟನೆ ವಸ್ತ್ರಸಂಹಿತೆ ಮಾಡಿಕೊಂಡು ಹಳ್ಳಿಹಳ್ಳಿಗಳಲ್ಲಿ ತಿರುಗಾಡಿ ಪೊಲೀಸರು ಊರೊಳಗೆ ಹೋಗದಂತೆ ಬಹಿಷ್ಕಾರ ಹಾಕಿದರು. ಪೊಲೀಸರು ಊರಲ್ಲಿ ಬಂದರೆ ಚಹ ಸಹ ನೀಡದಂತೆ ತಿಳಿಸಿ ತಡೆದು ಬಂದರು. ಹಳ್ಳಿಗಳಲ್ಲಿಯ ಸಮಸ್ಯೆಗಳನ್ನು ಪ್ರಜಾಸಂಘದ ಸ್ವಯಂ ಸೇವಕರೇ ಪರಿಹರಿಸುತ್ತಿದ್ದರು. ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ಕೂಡ ನೀಡುತ್ತಿದ್ದರು. ಈ ಹೋರಾಟ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿತು. ನಾ.ಸು.ಹರ್ಡಿಕರ, ಗಂಗಾಧರರಾವ್ ದೇಶಪಾಂಡೆ ಅವರು ಇಲ್ಲಿಗೆ ಬಂದು ಅವಲೋಕನ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿಯೂ ಇದನ್ನು ಅನುಸರಿಸುತ್ತಿದ್ದರು.
ಸಂಸ್ಥಾನವೂ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದಿದ್ದಾಗ ಪ್ರಜಾಸಂಘ ಉಗ್ರ ಹೋರಾಟಕ್ಕೆ ಅಣಿಯಾಯಿತು. ಈ ವೇಳೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿತು. ಭೂ ಕಂದಾಯವನ್ನು ಅರ್ಧದಷ್ಟು ಹಿಂದಕ್ಕೆ ಪಡೆಯಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಬಳಸಬೇಕು. ಕನ್ನಡ ಬಾರದ ಅಧಿಕಾರಿಗಳನ್ನು ಕಿತ್ತುಹಾಕಬೇಕು. ವರಮಾನ ತೆರಿಗೆ ತಗ್ಗಿಸಬೇಕು. ಅನವಶ್ಯಕ ತೆರಿಗೆ ಹಿಂಪಡೆಯಬೇಕೆಂದು ಷರತ್ತು ಹಾಕಿತು. ಇದಕ್ಕೆ ಸಂಸ್ಥಾನಿಕರು ಒಪ್ಪಲಿಲ್ಲ. ಸಂಸ್ಥಾನದಲ್ಲಿ ೧೪೪ ಸೆಕ್ಷನ್ ಜಾರಿ ಮಾಡಿದರು. ಇದನ್ನು ಉಲ್ಲಂಘಿಸಿ ಪ್ರಜಾಸಂಘದವರು ಜೈಲು ಸೇರಿದರು.
ಅದೊಂದು ದಿನ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರನ್ನು ಪೊಲೀಸರು ಬಂಧಿಸಿದರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟಗಾರರು ಜೈಲಿಗೆ ಮುತ್ತಿಗೆ ಹಾಕಿದರು. ಆದರೆ, ಪೊಲೀಸರು ಮಾತ್ರ ಮುನವಳ್ಳಿ ಅವರನ್ನು ನೋಡುವುದಕ್ಕೂ ಅವಕಾಶ ಕೊಡಲಿಲ್ಲ. ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಜೈಲಿಗೆ ಬೆಂಕಿ ಇಟ್ಟು, ಅಲ್ಲಿದ್ದ ಎಂಟು ಜನ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದರು. ಇದರಿಂದ ರೊಚ್ಚಿಗೆದ್ದ ಪೊಲೀಸರು ಗೋಲಿಬಾರ್ ಮಾಡಿದರು. ಈ ವೇಳೆ ನಾಲ್ಕು ಜನ ಹೋರಾಟಗಾರರು ಅಸುನೀಗಿದರು. ಆನಂತರ ಈ ಸಂಬಂಧ ವಿಚಾರಣೆ ನಡೆಯಲ್ಪಟ್ಟು ಎಂಟು ಜನಕ್ಕೆ ಫಾಶಿ (ಗಲ್ಲು) ಶಿಕ್ಷೆಯಾಗಿ, ಅನೇಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇನ್ನೂ ಕೆಲವರು ಜೈಲಿನಲ್ಲೇ ಸಾವನ್ನಪ್ಪಿದರು.
ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಸ್ಫೂರ್ತಿ ತುಂಬಿದ ಪ್ರಜಾಸಂಘದ ಹೋರಾಟದಲ್ಲಿ ಮಹಾದೇವಪ್ಪ ಪಟ್ಟಣ, ಲಿಂಗನಗೌಡ ಪಾಟೀಲ, ಮರುಳಾರಾಧ್ಯ ಶಾಸ್ತ್ರಿಗಳು, ಮಹಾದೇವಪ್ಪ ಬಡಕಲಿ, ಗಿರಿಧರಲಾಲ ಲಾಠಿ, ಸಿದ್ಧಪ್ಪ ಮೇಟಿ, ರಾಮಪ್ಪ ಶಾಡ್ಲಗೇರಿ, ಈರಪ್ಪ ಡೋಣಿ, ನಿಂಗಪ್ಪ ಮೇಟಿ, ಮರಿಯಪ್ಪ ಪೂಜಾರಿ, ಟೀಕಪ್ಪ ಜಾಲೋಜಿ, ಫಕೀರಸಾಬ ಅಗಸರ, ಮಾನಪ್ಪ ಕೊಳ್ಳಿ, ಲಕ್ಕಪ್ಪ ಮುರುಡಿ, ಮಲ್ಲಪ್ಪ ಕುಂಬಾರ, ಮಹಾಲಿಂಗಯ್ಯ ಹಿರೇಮಠ ಹೀಗೆ ಅನೇಕ ಜನರು ಪಾಲ್ಗೊಂಡು ಸಂಸ್ಥಾನ ನಡುಗಿಸಿದ್ದು ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈಯ, ಸ್ಥೈರ್ಯ, ಕಿಚ್ಚು ತುಂಬಿದರು. ಇವರೆಲ್ಲರ ಸ್ಮರಣೆ ನಿಮಿತ್ತವಾಗಿ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರ ಪುತ್ಥಳಿಯನ್ನು ರಾಮದುರ್ಗದ ತೇರು ಬಜಾರ್‌ನಲ್ಲಿ ಪುತ್ಥಳಿಯನ್ನು ನಿರ್ಮಿಸಲಾಗಿದೆ.
---
ಹೋಗುವುದು ಹೇಗೆ?
ಬೆಳಗಾವಿಯಿಂದ ರಾಮದುರ್ಗ ೧೧೦ ಕಿಮೀ ಇದೆ. ಬೆಳಗಾವಿಯಿಂದ ನೇರವಾಗಿ ರಾಮದುರ್ಗಕ್ಕೆ ಬಸ್ ಸೌಲಭ್ಯವಿದೆ. ರಾಮದುರ್ಗ ಬಸ್ ನಿಲ್ದಾಣದಿಂದ ೨ ಕಿಮೀ ದೂರದಲ್ಲಿ ಈ ಪುತ್ಥಳಿ ಇದೆ.

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ ಹಿಂಡಲಗಾ ಜೈಲ್

೧೯೨೩ರಲ್ಲಿ ಬ್ರಿಟಿಷರಿಂದ ಸ್ಥಾಪನೆಗೊಂಡ ಜೈಲು | ಕರ್ನಾಟಕದ ಅನೇಕ ಹೋರಾಟಗಾರರು ಇಲ್ಲಿ ಬಂಧಿಸಿ ಇಡಲಾಗಿತ್ತು



-ಮಂಜುನಾಥ ಗದಗಿನ 

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡುತ್ತಿದ್ದ ಹೋರಾಟಗಾರರನ್ನು ಹತ್ತಿಕ್ಕಲು ಅವರನ್ನು ಬಂಧಿಸಿ ಸೆರೆವಾಸ ನೀಡುತ್ತಿದ್ದರು. ಆದರೆ, ಇದಕ್ಕೂ ಬಗ್ಗದೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲೇಬೇಕು ಎಂದು ಹೋರಾಡಿ ಪ್ರಾಣಬಿಟ್ಟ ವೀರರು ನಮ್ಮ ರಾಜ್ಯದಲ್ಲಿ ಅನೇಕರಿದ್ದಾರೆ. ಹೀಗೆ ಬಂಧಿಸಲ್ಪಟ್ಟ ಹೋರಾಟಗಾರರನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಹಾಗೂ ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರದ ಪುಣೆಯ ಯರವಾಡ ಜೈಲಿನಲ್ಲಿ ಇಡುತ್ತಿದ್ದರು.

ಬಂಧನ, ಸೆರೆವಾಸ ಇವು ಭಾರತದ ಸ್ವಾತಂತ್ರ್ಯ ಹೋರಾಟವನ್ನು ನಿಯಂತ್ರಿಸಲು ಬ್ರಿಟಿಷರು ಅನುಸರಿಸಿದ ಅಸ್ತ್ರಗಳು. ದೇಶದಲ್ಲಿ ಆಂಗ್ಲರು ತಮ್ಮ ಅಧಿಪತ್ಯ ವಿಸ್ತರಿಸಬೇಕು ಎಂಬ ಉದ್ದೇಶದಿಂದ ತಮಗೆ ತಿಳಿದಂತೆ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದು ಜನರ ಮೇಲೆ ಹೇರಲು ಆರಂಭಿಸಿದರು. ಹೀಗೆ ಜನರ ಮೇಲೆ ವಿಧಿಸಲ್ಪಟ್ಟ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿ, ಅವರಿಗೆ ದಂಡ ವಿಧಿಸುತ್ತಿದ್ದರು. ಆದರೆ, ನಮ್ಮ ಹೋರಾಟಗಾರರು ಮಾತ್ರ ಇದ್ಯಾವುಕ್ಕೂ ಜಗ್ಗದೇ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು.

ಹಿಂಡಲಗಾ ಜೈಲು:

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು. ಹೀಗಾಗಿ ಜೈಲಿಗೆ ಸೇರುವವರ ಸಂಖ್ಯೆ ಕೂಡ ಹೆಚ್ಚಾಯಿತು. ಹೀಗಾಗಿ ೧೯೨೩ರಲ್ಲಿ ಬೆಳಗಾವಿಯ ಹಿಂಡಲಗಾದಲ್ಲಿ ಜೈಲು ನಿರ್ಮಾಣ ಮಾಡಿದರು. ಈ ಸಮಯದಲ್ಲಿ ಭಾರತದಲ್ಲಿ ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹ ಚಳವಳಿಗಳ ಕಾವು ಜೋರಾಗಿತ್ತು. ಈ ವೇಳೆಯಲ್ಲಿ ಬ್ರಿಟಿಷರ ಸರ್ಕಾರಿ ಕಚೇರಿಗಳ ಲೂಟಿ, ಪಿಕೆಟಿಂಗ್, ರೈಲ್ವೆ ಹಳಿಗಳನ್ನು ಕೀಳುವುದು ಹೀಗೆ ನಾನಾ ಬಗೆಯ ಹೋರಾಟಗಳು ನಡೆದಿದ್ದವು. ಹೀಗೆ ಬ್ರಿಟಿಷರ ವಿರೋಧದಿಂದ ರಾಜ್ಯದ ಮೈಲಾರ ಮಹಾದೇವಪ್ಪ, ಅಂದಾನೆಪ್ಪ ದೊಡ್ಡಮೇಟಿ, ಮಹಾತ್ಮ ಗಾಂಧೀಜಿ ಅವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿ, ಕೊಟ್ಟೂರಿನ ಭದ್ರಶೆಟ್ಟಿಸಣ್ಣ ರುದ್ರಪ್ಪ, ಅಡವಿ ಬಸಪ್ಪ, ಅಣ್ಣು ಗುರೂಜಿ, ವೆಂಕೋಸಾ ಭಾಂಡಗೆ, ಹಳೇ ಹಗರಿಬೊಮ್ಮನಹಳ್ಳಿ ಹಾಲ್ದಾಳ್ ಕೊಟ್ರಪ್ಪ, ತಮ್ಮಾಜಿ ಮಿರಜಕರ, ವಾಲಿ ಚೆನ್ನಬಸಪ್ಪ ಹೀಗೆ ರಾಜ್ಯದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಿಂಡಲಗಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯ ನಂತರ ವೀರ ಸಾರ್ವಕರ್ ಅವರನ್ನು ಇದೇ ಜೈಲಿನಲ್ಲಿ ಬಂಧಿಯಾಗಿಸಿದ್ದರು. ಗಲ್ಲು ಶಿಕ್ಷೆ ವಿಧಿಸುವ ರಾಜ್ಯದ ಏಕೈಕ ಜೈಲು ಎಂಬ ಖ್ಯಾತಿಗೆ ಈ ಕಾರಾಗೃಹ ಪಾತ್ರವಾಗಿದೆ. ಈ ಜೈಲು ಅಂದಾಜು ೯೯ ಎಕರೆ ಇದ್ದು, ೧೧೬೨ ಕೈದಿಗಳನ್ನು ಇಲ್ಲಿ ಇಡಬಹುದಾಗಿದೆ. ೧೯೨೩ರಿಂದ ಇಲ್ಲಿವರೆಗೂ ೧೩೭ ಜನರನ್ನು ಇಲ್ಲಿ ಗಲ್ಲಿಗೇರಿಸಲಾಗಿದೆ. ಇದೀಗ ಈ ಜೈಲು ಶತಮಾನೋತ್ಸವದ ಸಂಭ್ರಮದಲ್ಲಿದೆ.

ಇನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶ ಹಾಗೂ ಕರ್ನಾಟಕ ಅನೇಕ ಹೋರಾಟಗಾರರನ್ನು ಮಹಾರಾಷ್ಟ್ರದ ಯರವಾಡ ಜೈಲಿನಲ್ಲೂ ಇರಿಸಲಾಗಿತ್ತು. ಇದು ೧೮೭೧ರಲ್ಲಿ ಬ್ರಿಟಿಷರು ಈ ಕಾರಾಗೃಹವನ್ನು ಸ್ಥಾಪನೆ ಮಾಡಿದ್ದರು. ಕರ್ನಾಟಕ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಬಂಧಿಯಾಗಿ ಇಡಲಾಗಿತ್ತು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಬಾಲಗಂಗಾಧರ ತಿಲಕ, ಸುಭಾಷಚಂದ್ರ ಭೋಸ್, ವೀರ ಸಾರ್ವಕರ ಹೀಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಈ ಕಾಗಾಗೃಹದಲ್ಲಿ ಬಂಧಿಯಾಗಿದ್ದಿರು. ಈ ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳನ್ನು ಇಡಬಹುದಾಗಿದೆ. 

---

ತಲುಪುವುದು ಹೇಗೆ?

ಹಿಂಡಗಾ ಕಾಗಾಗೃಹ ಬೆಳಗಾವಿ ನಗರದಿಂದ ೭ ಕಿಮೀ ಇದೆ. ಬೆಳಗಾವಿ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಇದೆ.

---

ಪೋಟೋ 

ಹಿಂಡಲಗಾ ಜೈಲ್

 

ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಶಿಸ್ತು ತುಂಬಿದ ಸೇವಾದಳ

 -ಮಂಜುನಾಥ ಗದಗಿನ



ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾ.ಸು.ಹರ್ಡೀಕರ(ನಾರಾಯಣ ಸುಬ್ಬರಾವ್ ಹರ್ಡೀಕರ) ಅವರ ಹೆಸರು ಚಿರಸ್ಥಾಯಿ. ಒಂದು ಉತ್ತಮವಾದ ಸಂಘಟನೆ, ಬಲ, ಶಿಸ್ತು ಇಲ್ಲದೇ ಮುನ್ನುಗ್ಗುತ್ತಿದ್ದ ಹೋರಾಟಕ್ಕೆ ಸೇವಾದಳ ಎಂಬ ಸಂಘಟನೆ ಹುಟ್ಟು ಹಾಕಿ ಆ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದರು ನಾ.ಸು.ಹರ್ಡೀಕರ.

ಅದು ೧೯೨೧ರ ಸಮಯ. ರಾಷ್ಟ್ರಾದ್ಯಂತ ಸ್ವಾತಂತ್ರ್ಯದ ಹೋರಾಟದ ಕಾವು ಏರ ತೊಡಗಿತ್ತು. ಬ್ರಿಟಿಷರ ಸರ್ಕಾರ ಕಾಯ್ದೆ, ಕಾನೂನುಗಳನ್ನು ವಿರೋಧಿಸಿ ಅನೇಕ ಹೋರಾಟಗಳು ನಡೆಯುತ್ತಿದ್ದವು. ಇದೇ ಸಮಯದಲ್ಲಿ ಅಂದರೆ, ೧೯೨೧ರಲ್ಲಿ ಧಾರವಾಡದಲ್ಲಿ ಪಿಕೆಟಿಂಗ್ ಮಾಡುವ ಸಂದರ್ಭದಲ್ಲಿ ಬ್ರಿಟಿಷರು ಪೈರಿಂಗ್ ಮಾಡಿದರು. ಈ ವೇಳೆ ಮೂವರು ಅಸುನೀಗಿದರು. ಇದರಿಂದ ೧೯೨೩ರಲ್ಲಿ ನಾಗಪುರದಲ್ಲಿ ರಾಷ್ಟ್ರಧ್ವಜ ಕಟ್ಟುವುದಕ್ಕೆ ಪ್ರತಿಬಂಧಕ ವಿಧಿಸಲಾಯಿತು. ಈ ಆಜ್ಞೆಯನ್ನು ಉಲ್ಲಂಘನೆ ಮಾಡುವುದಕ್ಕೆ ನಾ.ಸು.ಹರ್ಡೀಕರ ಅವರು ನೇತೃತ್ವದಲ್ಲಿ ಜನರ ಗುಂಪು ನಾಗಪುರಕ್ಕೆ ತೆರಳಿ ಆಜ್ಞೆ ಉಲ್ಲಂಘಿಸಿ ಜೈಲು ಸೇರಿದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷರು ಚಿತ್ರಹಿಂಸೆ ನೀಡುತ್ತಿದ್ದರು. ಹೀಗಾಗಿ ಜೈಲಿಂದ ಹೋಗಬೇಕಾದರೆ ಇನ್ಮುಂದೆ ಯಾವುದೇ ಚಳವಳಿ, ಸತ್ಯಾಗ್ರಹ ಮಾಡುವುದಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದುಕೊಟ್ಟು ಹೋಗಬೇಕು ಎಂದು ಹೇಳಿದರು. ನಾ.ಸು.ಹರ್ಡೀಕರ ಅವರು ನಾನು ಬರೆದುಕೊಡುವುದಿಲ್ಲ ಎಂದು ಸಾರಾಸಗಟಾಗಿ ಹೇಳಿದರು. ಈ ಸುದ್ದಿ ರಾಷ್ಟ್ರವ್ಯಾಪ್ತಿ ಹರಡಿತು.
೧೯೨೩ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಮಹಮ್ಮದ ಅಲಿ ಅವರ ಅಧ್ಯಕ್ಷಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಈ ಅಧಿವೇಶನದಲ್ಲಿ ನಾ.ಸು.ಹರ್ಡೀಕರ ಅವರು ಪಾಲ್ಗೊಂಡು, ಸಾತಂತ್ರ್ಯ ಹೋರಾಟಕ್ಕೆ ಅಪ್ಪಟ್ಟ ದೇಶಪ್ರೇಮಿಗಳನ್ನು ನಿರ್ಮಾಣ ಮಾಡುವ ಒಂದು ಶಿಸ್ತಿನ ಸಂಘಟನೆಬೇಕು. ಅದಕ್ಕೆ ಅವರು ಹಿಂದೂಸ್ತಾನ ಸೇವಾದಳ ಆರಂಭ ಮಾಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಮನ್ನಣೆ ಕೊಟ್ಟು ಆ ಅಧಿವೇಶನದಲ್ಲಿ ಹಿಂದೂಸ್ಥಾನ ಸೇವಾದಳ ಸ್ಥಾಪನೆ ಮಾಡಲಾಯಿತು. ಸೇವಾದಳದ ಪ್ರಥಮ ಅಧ್ಯಕ್ಷರಾಗಿ ಜವಾಹರಲಾಲ್ ನೆಹರು ಆಯ್ಕೆಯಾಗಿದರು. ಸಂಸ್ಥಾಪಕ ಸಂಚಾಲಕರಾಗಿ ನಾ.ಸು.ಹರ್ಡೀಕರ ಅವರು ಆಯ್ಕೆಯಾದರು. ನಂತರ ಇದೇ ಸೇವಾದಳ ಆಗಿ ಮುಂದುವರೆಯಿತು.
ಸೇವಾದಳದ ಪಾತ್ರ:
ಸೇವಾದಳ ಸ್ಥಾಪನೆಯಾದ ನಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಬಲ ಬಂದಿತು. ಸಂಘಟನೆ ಮತ್ತು ಶಿಸ್ತು ಇಲ್ಲದೇ ಸಾಗುತ್ತಿದ್ದ ಹೋರಾಟಕ್ಕೆ ಒಂದು ಶಿಸ್ತು ಬಂದಿತು. ನಾ.ಸು.ಹರ್ಡೀಕರ ಅವರು ದೇಶದ ಅನೇಕ ಹಳ್ಳಿಗಳಿಗೆ ತೆರಳಿ ಸೇವಾದಳ ಹುಟ್ಟು ಹಾಕಿ ಯುವ ಜನಾಂಗದಲ್ಲಿ ಸ್ವಾತಂತ್ರ್ಯದ ಬಗ್ಗೆ ಕಿಚ್ಚು ಮೂಡಿಸಿದರು. ಅವರನ್ನು ಸೇವಾದಳಕ್ಕೆ ಕರೆ ತಂದು ರಾಷ್ಟ್ರಪ್ರೇಮ, ಶಿಸ್ತು, ಸಂಘಟನೆ ಹಾಗೂ ದೈಹಿಕ, ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯ ಮಾಡಿದರು. ಹೀಗೆ ಹಿಂದೂಸ್ಥಾನ ಸೇವಾದಳ ವ್ಯಾಪಕವಾಗಿ ಬೆಳೆಯಿತು. ಸೇವಾದಳದಲ್ಲಿ ತಯಾರಾದ ಯುವಪಡೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿತು.
೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಸೇವಾದಳದ ಪಾತ್ರ ದೊಡ್ಡದಾಗಿದೆ. ಈ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿಕೊಂಡಿದ್ದರು. ಅಧಿವೇಶನದ ಸಕಲ ಸಿದ್ಧತೆಗಳನ್ನು ಗಂಗಾಧರರಾವ್ ದೇಶಪಾಂಡೆ ಹಾಗೂ ನಾ.ಸು.ಹರ್ಡೀಕರ ಅವರ ನೇತೃತ್ವದ ಸೇವಾದಳ ನೋಡಿಕೊಂಡಿತ್ತು. ಅಧಿವೇಶನ ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಇದರಿಂದ ಸಂತಸಗೊಂಡ ಗಾಂಧೀಜಿ ಅವರು ಸೇವಾದಳದ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿ ‘ಸೇವಾದಳ’ ಇನ್ನಷ್ಟು ರಾಷ್ಟ್ರವ್ಯಾಪ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಇನ್ನೂ ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ಕರ ವಿರೋಧಿಸಿ ಗಾಂಧೀಜಿ ಅವರು ದಂಡಿಯಾತ್ರೆ ಆರಂಭಿಸಿದರು. ಇದರ ಹಿನ್ನೆಲೆಯಲ್ಲಿ ಕಾರವಾರ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಾ.ಸು.ಹರ್ಡೀಕರ ಅವರು ತಮ್ಮ ಸೇವಾದಳದ ಸಿಬ್ಬಂದಿಯೊಂದಿಗೆ ಅಂಕೋಲಾಕ್ಕೆ ಹೋಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇನ್ನು ಕಾನೂನು ಭಂಗ ಚಳವಳಿ, ಪಿಕೆಟಿಂಗ್, ಅಸಹಕಾರ ಚಳವಳಿ ಹೀಗೆ ಸಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಕಾರ್ಯಕರ್ತರು ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.
ಆದರೆ, ೧೯೩೧ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಒಂದೇ ಸಂಘಟನೆ ಇರಲಿ ಎಂಬ ಉದ್ದೇಶದಿಂದ ಗಾಂಧೀಜಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸೇವಾದಳವನ್ನು ವಿಲೀನ ಮಾಡಿದರು. ನಂತರದ ದಿನಗಳಲ್ಲಿ ಸೇವಾದಳ ಒಂದು ಪಕ್ಷಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ನಾ.ಸು.ಹರ್ಡೀಕರ ಅವರು ೧೯೫೦ರಲ್ಲಿ ಭಾರತೀಯ ಸೇವಾದಳ ಸ್ಥಾಪನೆ ಮಾಡಿದರು. ೧೮೮೯ರಲ್ಲಿ ಧಾರವಾಡದಲ್ಲಿ ಜನಿಸಿದರಾದ್ರು ಸ್ವಾತಂತ್ರ್ಯಾನಂತ ಹರ್ಡೀಕರ ಅವು ಬೆಳಗಾವಿ ಜಿಲ್ಲೆಯ ಘಟಪ್ರಭಾಕ್ಕೆ ಬಂದು ನೆಲೆಸಿದರು. ಇಲ್ಲಿ ಅವರು ಕರ್ನಾಟಕ ಆರೋಗ್ಯ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಸೇವಾನಿರತ ಇರುವಾಗಲೇ ನಾ.ಸು.ಹರ್ಡೀಕರ ಅವರು ಆಗಸ್ಟ್ ೨೬ ೧೯೭೫ರಲ್ಲಿ ಅಸ್ತಗಂತರಾದರು. ಘಟಪ್ರಭಾದಲ್ಲಿ ಅವರ ಸಮಾಧಿ ಇದ್ದು, ಇದು ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ.

ರಾಯಣ್ಣನ ಕಥೆ ಹೇಳುವ ನಂದಗಡ

 ಮಂಜುನಾಥ ಗದಗಿನ



‘ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು’ ಹೀಗೆಂದು ತಾನು ಗಲ್ಲಿಗೇರುವ ಮುನ್ನ ಬಿಟ್ರಿಷರ ವಿರುದ್ಧ ಘರ್ಜಿಸಿ ತಾಯ್ನಾಡಿ ಗಾಗಿ ಪ್ರಾಣ ತ್ಯಾಗ ಮಾಡಿದ ದ ಏಕೈಕ ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

ರಾಯಣ್ಣ ಎಂಬ ಹೆಸರು ಕೇಳಿದರೆ ಸಾಕು ಬ್ರಿಟಿಷ ಸರ್ಕಾರವೇ ನಡಗುತ್ತಿತ್ತು. ಯಾಕೆಂದರೆ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ತನ್ನ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಆಂಗ್ಲರ ನಿದ್ದೆಗೇಡಿಸಿದ್ದ ವೀರ ಪರಾಕ್ರಮಿ, ಕಿತ್ತೂರು ರಾಣಿ ಚೆನ್ನಮ್ಮನ ಬಲಗೈಬಂಟ ಸಂಗೊಳ್ಳಿ ರಾಯಣ್ಣ.
ಇಡೀ ದೇಶದಲ್ಲಿ ಆಂಗ್ಲರ ಅಧಿಪತ್ಯ ಸ್ಥಾಪನೆಯಾಗಿ, ಸಣ್ಣಪುಟ್ಟ ಸಂಸ್ಥಾನಗಳನ್ನು ತಮ್ಮ ಅಧೀನಕ್ಕೆ ಪಡೆಯಬೇಕೆಂದು ಬ್ರಿಟಿಷರು ಕಾಯ್ದುಕುಳಿತ್ತಿದ್ದರು. ಇದೇ ವೇಳೆ ಸಮೃದ್ಧಭರಿತವಾಗಿದ್ದ ಕಿತ್ತೂರು ಸಂಸ್ಥಾನದ ಮೇಲೆ ಅವರ ಕಣ್ಣು ಬೀದಿತು. ಚೆನ್ನಮ್ಮನಿಗೆ ಗಂಡು ಸಂತಾನ ಇಲ್ಲದ ಕಾರಣ ದತ್ತು ತೆಗೆದುಕೊಂಡಿದ್ದಳು. ಇದನ್ನು ತಿಳಿದು ಬ್ರಿಟಿಷರು ದತ್ತುಪುತ್ರನಿಗೆ ಉತ್ತರಾಧಿಕಾರ ಹಕ್ಕಿಲ್ಲ ಎಂಬ ಕಾಯ್ದೆಯಡಿ ನೀವು ನಮಗೆ ಕಪ್ಪ ಕೊಟ್ಟು ಶರಣಾಗಬೇಕು ಎಂದು ತಿಳಿಸಿದಾಗ ಚೆನ್ನಮ್ಮ ನಾವೇಕೆ ನಿಮಗೆ ಕೊಡಬೇಕು ಕಪ್ಪ ಎಂದು ಘರ್ಜಿಸಿದ್ದಳು. ಇದರಿಂದ ಕುಪಿತರಾದ ಆಂಗ್ಲರು ಅಕ್ಟೋಬರ್ ೨೧, ೧೮೨೪ರಂದು ಬ್ರಿಟಿಷ ಅಧಿಕಾರಿ ಥ್ಯಾಕರೆ ಮುಂದಾಳತ್ವದಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ವೀರ ವನಿತೆ ರಾಣಿ ಚೆನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟಳು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ನೇತೃತ್ವದಲ್ಲಿ ಕಿತ್ತೂರಿನ ವೀರ ಸೈನಿಕರು ಮುನ್ನುಗ್ಗಿದ್ದರು. ಇದೇ ವೇಳೆ ಅಮಟೂರು ಬಾಳಪ್ಪನವರು ತಮ್ಮ ಖಡ್ಗದಿಂದ ಥ್ಯಾಕರೆ ರುಂಡ ಚಂಡಾಡಿದರು. ಭಯಗೊಂಡ ಆಂಗ್ಲರು ಅಲ್ಲಿಂದ ಕಾಲ್ಕಿತ್ತರು. ಇಷ್ಟಕ್ಕೆ ಸುಮ್ಮನಾಗದ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಆದರೆ ತಮ್ಮವರ ಮೋಸದಿಂದಲೇ ಕಿತ್ತೂರಿಗೆ ಸೋಲಾಯಿತು. ರಾಯಣ್ಣ, ಚನ್ನಮ್ಮ ಬ್ರಿಟಿಷರ ವಶವಾದರು. ಆದರೆ, ಕೆಲವು ದಿನಗಳ ನಂತರ ರಾಯಣ್ಣ ಬಿಡುಗಡೆಯಾದ.
ಬಂಡಾಯವೆದ್ದ ರಾಯಣ್ಣ:
ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಬ್ರಿಟಿಷರು ಕಿತ್ತುಕೊಂಡಿದ್ದರು. ಇದಷ್ಟೇ ಅಲ್ಲದೇ ಭೂಮಿಯ ಮೇಲಿನ ಕರಭಾರವನ್ನು ಹೆಚ್ಚಿಸಿದ್ದರು. ಇದರ ವಿರುದ್ಧ ರಾಯಣ್ಣ ತನ್ನದೊಂದು ಸೈನ್ಯ ಕಟ್ಟಿಕೊಂಡು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲೀಕರ ವಿರುದ್ಧ ಬಂಡಾವೆದ್ದ. ತನ್ನ ಯುದ್ಧ ತಂತ್ರಗಳಲ್ಲಿ ಒಂದಾದ ಗೆರಿಲ್ಲಾ ತಂತ್ರಗಾರಿಕೆ(ಶತ್ರುವಿಗೆ ಸಿಗದೇ, ಶತ್ರುಗಳ ಚಲನವಲನ ಅರಿತು ಯುದ್ಧ ಮಾಡುವ ತಂತ್ರ) ಬಳಸಿ ಭೂಮಾಲೀಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡು ಸುಟ್ಟುಹಾಕಿದ. ಅಲ್ಲದೇ, ಅವರಿಂದ ಕಿತ್ತುಕೊಂಡ ಹಣವನ್ನು ನಿರ್ಗತಿಕರಿಗೆ ಹಂಚತೊಡಗಿದ.
ಬೆಟ್ಟ ಗುಡ್ಡಗಳೇ ಅಡಗುತಾಣ:
ತನ್ನ ಗೆರಿಲ್ಲಾ ಯುದ್ಧದ ಮೂಲಕವೇ ಬ್ರಿಟಿಷ ಸರ್ಕಾರ ಬಿದ್ದೆಗೇಡಿಸಿದ್ದ ರಾಯಣ್ಣ ಚೆನ್ಮಮ್ಮನ ದತ್ತುಪುತ್ರನನ್ನು ಕಿತ್ತೂರಿನ ಉತ್ತರಾಧಿಕಾರಿಯನ್ನಾಗಿಸುವ ಛಲ ಹಾಗೂ ಬ್ರಿಟಿಷ ಸರ್ಕಾರ ಸೊಕ್ಕಡಗಿಸಲು ತನ್ನ ಸೈನ್ಯದೊಂದಿಗೆ ದಟ್ಟಡವಿಯಲ್ಲಿ ಅಡಗಿಕೊಂಡು ಬ್ರಿಟಿಷ ವಿರುದ್ಧ ರಣತಂತ್ರ ಹೆಣೆದು ಯುದ್ಧ ಸಾರುತ್ತಿದ್ದ. ಅದರಲ್ಲೂ ಖಾನಾಪುರ ತಾಲೂಕಿನ ಹಂಡಿಭಡಗನಾಥ, ಸಂಪಗಾಂವ, ನಂದಗಡ ಕಾನನದಲ್ಲಿ ರಾಯಣ್ಣ ಬಿಡಾರ ಹೂಡಿ ಬ್ರಿಟಿಷರ ವಿರುದ್ಧ ಯುದ್ಧ ಸಾರುತ್ತಿದ್ದ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ರಾಯಣ್ಣ ಸೈನ್ಯ ಹೆಚ್ಚು ಕಾರ್ಯಾಚರಣೆ ಮಾಡುತ್ತಿತ್ತು. ಇದು ಕೂಡಾ ಗೆರಿಲ್ಲಾ ಯುದ್ಧದ ಒಂದು ತಂತ್ರವಾಗಿತ್ತು.
ಮೋಸದಿಂದ ರಾಯಣ್ಣ ಸೆರೆ:
ಯುದ್ಧ ಮಾಡಿ ರಾಯಣ್ಣನ್ನು ಗೆಲಲ್ಲು ಅಸಾಧ್ಯವೆಂದು ತಿಳಿದ ಬ್ರಿಟಿಷರು ಕುತಂತ್ರ ಬುದ್ಧಿ ಪ್ರಯೋಗ ಮಾಡಿದರು. ರಾಯಣ್ಣನ ಸ್ವಂತ ಮಾವನಾಗಿದ್ದ ಲಕ್ಷ್ಮಣನನ್ನು ತಮ್ಮ ಕುತಂತ್ರದ ದಾಳವನ್ನಾಗಿ ಬಳಸಿಕೊಂಡರು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಬ್ರಿಟಿಷ ಸೈನಿಕರು ಆಕ್ರಮಣ ಮಾಡಿದರು. ಆಗ ರಾಯಣ್ಣ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ಕೊಡು ಎಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ಹೀಗಾಗಿ ರಾಯಣ್ಣ ಮೋಸದಿಂದ ಬ್ರಿಟಿಷರ ವಶವಾದನು.
ನಂದಗಡದಲ್ಲಿ ರಾಯಣ್ಣ ಸಮಾಧಿ:
ಸೆರೆಯಾಗಿದ್ದ ರಾಯಣ್ಣ ಆಶಯದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ೧೮೩೧ರ ಜನವರಿ ೨೬ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಗೆಲ್ಲಿಗೇರಿಸುವ ಮುನ್ನ ನಿನ್ನ ಕೊನೆಯಾಸೆ ಏನು ಎಂದು ಕೇಳಿದಾಗ ರಾಯಣ್ಣ ’ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು ಎಂದು ಘರ್ಜಿಸಿದ್ದ. ರಾಯಣ್ಣನನ್ನು ಗಲ್ಲಿಗೇರಿಸಿದ ನಂತರ ನೆಟ್ಟ ಆಲದ ಮರ ಇನ್ನೂ ಇದ್ದು, ಇಲ್ಲಿಗೆ ನಿತ್ಯ ನೂರಾರು ಜನರು ಬಂದು ರಾಯಣ್ಣನ ಸಮಾಧಿ ದರ್ಶನ ಪಡೆದು ನಮಗೂ ರಾಯಣ್ಣನತಹ ಮಗ ಹುಟ್ಟಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...