Tuesday, 25 December 2018

ಬದುಕು ಗೆದ್ದ ಸಾಧಕಿಗೆ ಸಲಾಂ

ಮಂಜುನಾಥ ಗದಗಿನ 
ಮದುವೆಯಾಗಿ ಆರು ತಿಂಗಳಿಗೆ ತಾನು ಎಚ್‌ಐವಿ ಸೊಂಕಿತೆ ಎಂದು ಗೊತ್ತಾದರೂ, ಅದನ್ನು ದಿಟ್ಟತನದಿಂದ ಎದುರಿಸಿ, ಬದುಕು ಕಟ್ಟಿಕೊಂಡದ್ದು ಅಷ್ಟೇ ಅಲ್ಲದೇ ತನ್ನೊಡನೆ ಹಲವು ಎಚ್‌ಐವಿ ಸೊಂಕಿತ ಮಕ್ಕಳಿಗೆ ಆಶ್ರಯ ನೀಡಿ ‘ಮಹಾ’ತಾಯಿಯಾಗಿ ಈ ಜಗವೇ ಮೆಚ್ಚುವಂತೆ ಮುನ್ನುಗ್ಗುತ್ತಾ, ಇತರೆ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ ಈ ಮಹಿಳೆ. 
ಹೌದು! ಇವರು ಬೆಳಗಾವಿಯ ನಾಗರತ್ನ ಸುನೀಲ ರಾಮಗೌಡ. ಇವರದ್ದು ಬಾಲ್ಯ ವಿವಾಹ. ಕೇವಲ 16 ವರ್ಷ ವಯಸ್ಸಿನಲ್ಲೆ ಮದುವೆ ಮಾಡಿಕೊಡಲಾಯಿತು. ಸಮಾಜ ಎಂದರೆ ಏನು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ತಿಳಿವಳಿಕೆ ಇಲ್ಲದ ವಯಸ್ಸು. ಇಂತಹ ವಯಸ್ಸಿನಲ್ಲೇ ಮದುವೆಯಾದ ಕಾರಣ ಜೀವನವನ್ನು ಅಷ್ಟೊಂದು ಆನಂದದಿಂದ ಕಳೆಯಲಿಲ್ಲ. ಆಗ ತಾನೇ ಮದುವೆಯಾಗಿ ಗಂಡ ಮನೆಗೆ ಹೋಗಿದ್ದ ಇವರು, ಆರು ತಿಂಗಳ ಬಳಿಕ ಯಾವುದೋ ಕಾರಣಕ್ಕೆ ವೈದ್ಯರನ್ನು ಸಂಪರ್ಕಿಸಿದರೂ, ಈ ಭೇಟಿ ಅವರ ಬಾಳಲ್ಲಿ ಬರ ಸಿಡಿಲ್ಲನೇ ತಂದೊಡ್ಡಿತು. ಹೌದು! ವೈದ್ಯರ ತಪಾಸಣೆ ನಡೆಸಿ ನಿಮಗಿಬ್ಬರಿಗೂ ಎಚ್‌ಐವಿ ಇದೆ  ಜೀವಿತಾವಧಿ ಕಡಿಮೆ ಇದೆ ಎಂದು ಹೇಳಿ ಬಿಟ್ಟರು. ವೈದ್ಯರ ಈ ಮಾತು ಕೇಳಿ ಇವರು ಆಕಾಶವೇ ಕಳಚಿ ಬಿದ್ದಂತಾಗಿತ್ತು ಎಂದು ಹೇಳುವ ನಾಗರತ್ನಾ ಅವರು, ಮುಂದೆ ಬದುಕು ಕಟ್ಟಿಕೊಂಡ ಪರಿ ಮಾತ್ರ ಅದ್ಭುತ್.  
ದೇವರ ರೂಪದಲ್ಲಿ ಸಿಕ್ಕ ವೈದ್ಯ:
ಪತಿ ಹಾಗೂ ಪತ್ನಿ ಇಬ್ಬರಿಗೂ ಎಚ್‌ಐವಿ ಇದೆ ಎಂಬ ಸಂಗತಿ ಗೊತ್ತಾದಾಕ್ಷಣ ಇಬ್ಬರು ಅದೇಷ್ಟೂ ದಿನಗಳ ಕಾಲ ಈ ಜಗತ್ತಿನ ಮುಂದೆ ಕಾಣಿಸಿಕೊಳ್ಳಲಿಲ್ಲ. ಆದರೆ, ಬದುಕ ಬೇಕಲ್ಲ ಎಂಬ ಒಂದೇ ಒಂದು ಆಸೆಯಿಂದ ಇಬ್ಬರು ಗಟ್ಟಿ ಧೈರ್ಯ ಮಾಡಿ ದುಡಿಯಲು ಆರಂಭಿಸಿದೇವು. ಹೀಗೆ ನಾಲ್ಕುಗಳು ಕಳೆದ ಬಳಿಕ ಅದೊಂದು ದಿನ ಮಗುಬೇಕೆಂದು ಒಬ್ಬ ವೈದ್ಯರನ್ನು ಸಂಪರ್ಕ ಮಾಡಿದೇವು. ಆ ವೈದ್ಯರು ಋಣಾತ್ಮಕ ಮಗು ಪಡೆಯಬಹುದು ನೀವು ಯಾವುದೇ ಕಾರಣಕ್ಕೂ ಧೈರ್ಯಗುಂದಬೇಡಿ ಎಂದು ಮತ್ತಷ್ಟು ಆತ್ಮವಿಶ್ವಾಸ ತುಂಬಿದರು. ಹೀಗೆ ಈ ವೈದ್ಯರು ನೀಡಿದ ಸಲಹೆ ನಾವು ಋಣಾತ್ಮಕ ಗಂಡು ಮಗು ಪಡೆದೇವು. ಇದಾದ ನಂತರ ಬದುಕಬೇಕು. ಮಗನಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡಬೇಕು, ಎಚ್‌ಐವಿ ತಿಳಿವಳಿಕೆ ಬಗ್ಗೆ ಈ ಸಾರಿ ಹೇಳಬೇಕೆಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಮುನ್ನುಗ್ಗುತ್ತಾ ಬಂದಿದ್ದೇನೆ. ಕಳೆದ ನಾಲ್ಕು ವರ್ಷದ ಹಿಂದೆ ನನ್ನ ಪತಿ ಇಹಲೋಕ ತ್ಯಜೀಸಿದ್ದಾರೆ. ಯಾರ‌್ಗೊ ಅಪಘಾತ ಆದಾಗ ರಕ್ತ ಕೊಡಾಕ ಹೋದಾಗ ಬೆಡ್ ಟು ಬೆಡ್ ರಕ್ತ ಹಾಕಿದ್ರಂತ. ಆವಾಗ ಈ ಕಾಯಿಲೆ ಬಂದಿತ್ತು ಎಂದು ಹೇಳುತ್ತಾರೆ ನಾಗರತ್ನ. ಈಗ ಆ ಮಗನಿಗೆ 16 ವರ್ಷ 8ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಮಹಾತಾಯಿ:
16 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ತಮ್ಮ ಎಲ್ಲ ನೋವುಗಳನ್ನು ಮರೆತು, ತಮ್ಮೊಟ್ಟಿಗೆ ಎಚ್‌ಐವಿ ಸೊಂಕಿತ 10 ಹೆಣ್ಣು ಮಕ್ಕಳನ್ನು ಆಶ್ರಯ ನೀಡಿ ಸಲಹುತ್ತಿದ್ದಾರೆ. ಈ ಮಕ್ಕಳಿಗೆ ವಸತಿ, ಊಟ, ಬಟ್ಟೆ ಅಷ್ಟೇ ಅಲ್ಲದೇ ಆಸಕ್ತಿ ಇದ್ದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ ಸದ್ಯ ಐದು ಮಕ್ಕಳು ನರ್ಸಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ. ಇನ್ನುಳಿದ ಐದು ಹೆಣ್ಣು ಮಕ್ಕಳಿಗೆ ಜೀವನೋಪಾಯ ಮಾರ್ಗಗಳನ್ನು ಕಲಿಸುತ್ತಾ, ಕರಕುಶಲ ಕಲೆಗಳನ್ನು ಕಲಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೇ ಶಾಲೆ-ಕಾಲೇಜು, ಗ್ರಾಮಗಳಿಗೆ ಹೋಗಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಚ್‌ಐವಿ ಪೀಡಿತ ಮಹಿಳೆಯರಿಗಾಗಿ ಸ್ವಯಂ ಸೇವಾ ಸಂಸ್ಥೆಯೊಂದರನ್ನು ಸ್ಥಾಪಿಸಿ ಕಾರ್ಯೋನ್ಮುಕರಾಗಿದ್ದಾರೆ. ಅರ್ಚನಾ ಪದ್ಮನ್ನವರ ಹಾಗೂ ಪ್ರಮಿಳಾ ಕಂದ್ರೋಲ್ಲಿ ಅವರ ಸಹಾಯದ ಮೂಲಕ ಆಶ್ರಯ ಫೌಂಡೇಶನ್ ಸ್ಥಾಪಿಸಿ ಈ ಮೂಲಕ ನೊಂದವರ ಬಾಳಲ್ಲಿ ಬೆಳಕು ಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷ ಅಂದರೆ ಈ ಪೌಂಡೇಶನ್ ಹದಿಹರೆಯದ ಎಚ್‌ಐವಿ ಸೊಂಕಿತ ಹಾಗೂ ಎಚ್‌ಐವಿ ವಿಧವೆಯರಿಗೆ ಆರೈಕೆ ಮನೆಯಾಗಿ ಕೆಲಸ ಮಾಡುತ್ತಿದೆ. ಇಂತಹ ನೊಂದವರ, ಸಮಾಜ ತಿರಸ್ಕರಿಸಿದವರಿಗೆ ಆಶ್ರಯ ನೀಡುವ ರಾಜ್ಯದ ಏಕೈಕ ಪೌಂಡೇಶನ್ ಎಂಬ ಹೆಗ್ಗಳಿಗೆ ಆಶ್ರಯ ಪೌಂಡೇಶನ್. ಸ್ಥಳೀಯ ದಾನಿಗಳು ನೀಡವ ಹಣವೇ ಇವರಿಗೆ ಆಧಾರ ಹಾಗೂ ಇವರು ಕೆಲವು ಕಂಪನಿಗಳಿಗೆ ಸೆಮಿನಾರ್‌ಗೆ ಹೋದಾಗ ಬರುವ ಗೌರವ ಧನವೇ ಇದಕ್ಕೆಲ್ಲ ಆರ್ಥಿಕ ಬಲ. 
ಬಂದ ಪ್ರಶಸ್ತಿ:
ಇವರು ನಡೆಸುತ್ತಿರುವ ಬದುಕಿನ ಸ್ಫೂರ್ತಿಗೆ ಹಾಗೂ ಮಾಡುತ್ತಿರುವ ಸಮಾಜ ಕಾರ್ಯಕ್ಕೆ 2016ರಲ್ಲಿ ರಾಜ್ಯ ಸರ್ಕಾರದ ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯಪ್ರಶಸ್ತಿ, 2017ರಲ್ಲಿ ನ್ಯಾಶನಲ್ ಆದರ್ಶ ಮಹಿಳೆ, ಅನಾಥ ರಕ್ಷಕಿ ಪ್ರಶಸ್ತಿ, ಉತ್ತಮ ಸಮಾಜಿಕ ಕಾರ್ಯಕರ್ತೆ ಪ್ರಶಸ್ತಿ, ವಿಶೇಷ ಸಾಧಕಿ ಹೀಗೆ 40ಕ್ಕೂ ಹೆಚ್ಚು ಪ್ರಶಸ್ತಿಗಳು ಇವರನ್ನು ಅರಸಿ ಬರುವ ಮೂಲಕ ತಮ್ಮ ಮೌಲ್ಯವನ್ನು ವೃದ್ಧಿಸಿಕೊಂಡಿವೆ. ಅಷ್ಟೇ ಅಲ್ಲದೇ ಇವರ ಈ ಸೇವೆಗೆ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಪುರಸ್ಕರಿಸಿವೆ. 
ಇವರ ಈ ಹೋರಾಟದ ಬದುಕು ಇತರೆ ಮಹಿಳೆಯರಿಗೆ ಆದರ್ಶವಾಗಲಿ, ಇವರು ಇನ್ನೂ ನೂರಾರು ವರ್ಷ ಇದ್ದು, ಸಮಾಜ ಸೇವೆ ಮಾಡಲಿ ಎಂಬುವುದು ಸಮಾಜದ ಆಶಯ.

Monday, 24 December 2018

ಜಾತ್ರಿನ ಒಂದ್ ಸಂಗಮ

ಮಂಜುನಾಥ ಗದಗಿನ





ಹೌದ್, ಜಾತ್ರಿ ಅಂದ್ರ ನಮ್ಮ ಕಡೆಯಲ್ಲ ಬಾಳ್ ಖುಷಿ. ಯಾವಾಗ ಯಾವಾಗ ಜಾತ್ರಿ ಬರ್ತಾವ ಅಂತ ಕ್ಯಾಲೆಂಡರನ್ಯಾಗ ಗುರ್ತ ಹಾಕಿ. ಜಾತ್ರಿ ಹದನೈದ ದಿವಸ ಇರ್ತ ಬಿಗರಗ ಪೋನ್ ಹಾಯಿಸಿ, ನೋಡ್ರಿ ಬಿಗ್ರ ನಮ್ಮ ಊರಾಗ ಜಾತ್ರಿ ಐತಿ ತಪ್ಪಸದ ಮನ್ಯಾಗಿನ ಮಂದಿ ಸೇರಿ ಜಾತ್ರಿ ನಾಲ್ಕೈದ ದಿನ ಇರ್ತ ಬರಬೇಕ ಅಂತ ಆಮಂತ್ರಣ ಕೊಟ್ಟ ಮುಗಿಸ್ಸಾತಾರ. ಇನ್ನ ಜಾತ್ರಿ ಇರೋ ಮನ್ಯಾಗ ಬಿಗರ ಬರ್ತಾರ ಅಂತ ಖಡಕ್ ರೊಟ್ಟಿ ಗುರ್ಯಾಳ, ಸಿಂಗಾ ಚಟ್ನಿ ಮಾಡಿ ಇಟ್ಟ ಬಿಡ್ತಾರ. ಜಾತ್ರಿ ಸನಿಕ ಬಂದಾಂಗ ಮನ್ಯಾಗ ಇರೋ ಮಕ್ಳ ಮರಿಗಳು ದೊಡ್ಡ ದೊಡ್ಡ ಪಟ್ಟಿ ಮಾಡ್ಕೊಂಡ ಮನಿ ಬಂದಿಗೇಲ್ಲಾ ನನಗ ಕಾರ್ ಬೇಕ, ಬುಲ್ಡೋಜರ್ ಬೇಕ, ಅದು ದೊಡ್ಡದ ಬೇಕ ಅಂತ ಹೇಳಿ. ರಾತ್ರಿ ನಿದ್ದ್ಯಾಗೂ ಕನವರಿಸ್ಕೊಂತ ಮಕ್ಕೋತಾವ ಮಕ್ಳ. ಇನ್ನ ಜಾತ್ರಿ ಒಂದ ದಿನ ಇದ್ದಾಗ. ಬಿಗರಿಂದ ಮನಿ ತುಂಬಿ ತುಳಕ್ಯಾಡತಾವ್. ಮಕ್ಳ ಮರಿ ಸೇರಿ ತಲಿ ಬಂವ್ ಅನ್ನೊ ತರಾ ಜಗಳಾ ಮಾಡಿ, ತಲಿ ಹಾಫ್ ಮಾಡಿ ಹಾಕ್ತಾರ. ಇನ್ನ ಜಾತ್ರಿ ದಿನಾ ಅಂತು ಜಾತ್ರ್ಯಾಗಿಂತ ಮನ್ಯಾಗ ದೊಡ್ಡ ಜಾತ್ರಿ ನಡಿದರತೈತಿ. ಮನ್ಯಾಗಿಂದ ಹೆಣ್ಮಕ್ಳನ ತಯಾರ ಆಗೋ ಹೊತ್ತಗೆ ತೇರ ಎಳದ ಹೋಗಿರತೈತಿ. ಹಂಗ್ ರಡಿ ಆಗ್ತಾರ. ಜಾತ್ರಿ ಒಳಗ ಹೋದ್ರ ಮುಗಿತ ಸೂರ್ಯ ಈಕಡೆಯಿಂದ ಆ ಕಡೆ ಯಾವಾಗ ಹೋದ, ಕಿಸೆದಾಗಿಂದ್ ರೊಕ್ಕ ಎಲ್ಲಿ ಹೋದು ಎಂಬ ಯಕ್ಷ ಪ್ರಶ್ನೆ ಮಾತ್ರ ತಲೆಯಲ್ಲಿ ಗೂಡ ಕಟ್ಟಿರತೈತಿ. ಇದ ಹೊತ್ನ್ಯಾಗ್ ಅದೆಷ್ಟೋ ವರ್ಷಗಳ ಹಿಂದ್ ನೋಡಿದ ಮುಖಗಳು ಸಡನ್ ಆಗಿ ಪ್ರತ್ಯಕ್ಷ ಆಗಿ ಬಿಡ್ತಾವ್. ಎದ್ಯಾಗ ಏನೋ ಒಂದ್ ಖುಷಿ. ಒಂದಾನೊಂದ ಕಾಲದಲ್ಲಿ ಒಂದ್ ಡೆಸ್ಕನ್ಯಾಗ, ಒಂದ್ ದಾರ್ಯಾಗ, ಒಂದ್ ಟಿಫನ್ ಡೆಬ್ಬ್ಯಾಗ ಊಟ ಮಾಡಿ ಆಡಿದ ನೆನಪ ಬಂದ ಬಿಡ್ತಾವ್ ಹಂಗ್ ಸಲಿಗಿಲೇ ಏನಲೇ ದೋಸ್ಗತ, ಎಷ್ಟ ವರ್ಷ ಆತ ನೋಡಿ, ಮತ್ತ ಹೆಂಗ್ ಅದೀ ಅನ್ನೊ ಸಮಾಚಾರ ಬಂದ ಹೋಗ್ತಾವ. ಕಲಿತ ನೆನಪುಗಳ ಸರಮಾಲೆ ಸದ್ದು ಗದ್ದಲ ಮಾಡಿ ಹೋಗ್ತಾವ್. ಎದಿ ಭಾರ ಆಗಿ ಒಲ್ಲದ ಮನಸ್ಸಿನಿಂದ ಬೈ ಲೇ ಅನ್ನೊಕ್ಕೊಂತ ನಮ್ಮ ದಾರಿ ನಾವ್ ಹಿಡಿತಿವಿ. ಆದ್ರ ದೋಸ್ತ್ರ ಭೇಟ್ಟಿ ಆಗಿದ್ದ ಖುಷಿ ಮಾತ್ರ ಕೋಟಿ ರೊಕ್ಕ ಕೊಟ್ಟು ಬರಂಗಿಲ್ಲ. ಆದ್ರ ಇದ್ಕ ಕಾರಣ ಆಗಿದ್ದ ಮಾತ್ರ ಅದ ಜಾತ್ರಿ. ಅದೇಷ್ಟೋ ವರ್ಷದಿಂದ ಮನೆ ಕಡೆ ಸುಳಿಯದ ಬಿಗರ ಬಂದ ಮುಖ ತೋರಿಸಿದ್ದಕ ಕಾರ ಇದೇ ಜಾತ್ರಿ. ಪಾಗಲ ಪ್ರೇಮಿಗಳ ಮಾಜಿ ಲವರ್ ಅದೇ ಬಳಿ ಸಾಲನ್ಯಾಗ ಕಂಡದ್ದಕ ಕಾರಣ ಇದ ಜಾತ್ರಿ. ಒಟ್ಟ್ನಲ್ಲಿ ಜಾತ್ರಿ ಅಂದ್ರ ಒಂದ್ ಸಂಗಮ. ಯಾವಾಗ್ಲೋ, ಎಲ್ಲೋ, ಎಂತೋ, ಎಂದೋ, ಅದೇಷ್ಟೋ ವರ್ಷಗಳಿಂದ ನೋಡದ, ಭೇಟ್ಟಿಯಾಗದ ಮುಖಗಳ ದರ್ಶನ ಒದಗಿಸುವ ವೇದಿಕೆ. ಭಾವನೆಗಳ ಸಮ್ಮಿಳನದ ಓಂಕಾರವೇ ಈ ಜಾತ್ರಿ.
(ಗೊಡಚಿ ಜಾತ್ರಿ ಕೊಟ್ಡ ಒಂದಿಷ್ಟ ನೆನಪ ಚಂದ ಚಂದ)

Saturday, 22 December 2018

ಓ ರೈತ

ಮಂಜುನಾಥ ಗದಗಿನ

ಉತ್ತುವ ಕೈಗಳ
ಹಿಂದೆ ಬಿಚ್ಚಿ
ಹೇಳಲಾರದ ನೋವಿದೆ,
ಬತ್ತಿ ಬರಡಾಗುವ
ಮುನ್ನ ಬೆಳಕಾಗ ಬಾರದೇ
ರೈತರ ಬಾಳಲೊಮ್ಮೆ.

ಎಷ್ಟೇ ಒತ್ತಿ ಹೇಳಿದರೂ
ಬಿಚ್ಚುತ್ತಿಲ್ಲ ಸರ್ಕಾರಗಳು
ಬಾಯನ್ನು, ಭೂ ತಾಯಿ
ಮಾತ್ರ ಮರೆತಿಲ್ಲ ರೈತರನ್ನು.

ಸಾಲಕ್ಕೆ ಹೆದರಿ ಸಾಯದಿರು,
 ಸತ್ತು ಹೆಂಡತಿ, ಮಕ್ಕಳ
ಅನಾಥರನ್ನಾಗಿಸದಿರು,
ಸಾವೇ ಶಾಶ್ವತವಲ್ಲ ಕಷ್ಟಗಳಿಗೆ
ಇದ್ದು ಜಯಸು ನೀ ಕಷ್ಟಗಳ
ಕೋಟೆಗಳನೊಮ್ಮೆ.

ನೀ ಬದುಕಿ ಬೆರಗಾಗಿಸು
ನೋಡುವ ಕಣ್ಣುಗಳನೊಮ್ಮೆ.

Wednesday, 19 December 2018

ಬಡತನದಲ್ಲಿ ಅರಳಿದ ಕಲಾ ಪ್ರವೀಣ ಈ "ಚಿಲ್ಲರೆ ಮಂಜ"


ಮಂಜುನಾಥ ಗದಗಿನ
ಕಲಿಯುವ ಆಸಕ್ತಿ ಇದ್ರೆ, ಮನುಷ್ಯ ಎತ್ತರಕ್ಕೆರಬಲ್ಲ. ಸಾಧಿಸುವ ಮನಸ್ಸಿದ್ದರೆ 
ಬಡತನ ಕೂಡಾ ಸಾಥ್ ನೀಡ ಬಲ್ಲದು ಎಂಬುದಕ್ಕೆ ಇಲ್ಲೋಬ್ಬ ಕಲಾವಿದ ನಿದರ್ಶನವಾಗಿದ್ದಾರೆ.
ಹೌದು! ಅವರೇ ಹಾವೇರಿ ಜಿಲ್ಲೆಯ ಮಲಗುಂದ ಎಂಬ ಪುಟ್ಟ ಹಳ್ಳಿಯ ಮಂಜುನಾಥ ಗುಡ್ಡದವರ. ಯಾವುದೇ ಕಲಾ ತರಬೇತಿ ಇಲ್ಲದ ಆಸಕ್ತಿಯಿಂದ ಕಲಿತ ನಟನಾ ಕಲೆಯ ಮೂಲ ಇಂದು ಕಿರುತೆರೆಯ ಮೇಲೆ ನಟನೆ ಮಾಡುತ್ತಾ ನಾಡಿನ ಮನೆ-ಮನದ ಮಾತಾಗಿದ್ದಾರೆ ಮಂಜುನಾಥ ಅಲಿಯಾಸ್ ಚಿಲ್ಲರೆ ಮಂಜಾ. 
ಬಡತನ:
ಇಂದು ಮಂಜಾಭಾರತದಲ್ಲಿ ತಮ್ಮ ನಟನೆ ಮೂಲಕ ಲಕ್ಷಾಂತರ ಜನರನ್ನು ನಕ್ಕು ನಗಿಸುತ್ತಿರುವ ಇವರ ಹಿಂದೆ ಹೇಳಲಾರದಷ್ಟು ನೋವಿನಯಾತನೆ‌ ಇದೆ. ತಾಯಿ ಗಂಗಮ್ಮ. ತಂದೆ ಬಸಪ್ಪ. ಇವರಿಗೆ ನಾಲ್ಕು ಜನ ಮಕ್ಕಳು. ಮೂರು ಗಂಡು, ಒಂದು ಹೆಣ್ಣು. ಮಂಜುನಾಥ ಮೊದಲನೇ ಮಗ. ಮನೆಯಲ್ಲಿ ಬಡತನ ಇದ್ದ ಕಾರಣ ತಾಯಿ ಗಂಗಮ್ಮ ಪ್ರತಿದಿನ ಕೂಲಿನಾಲಿ‌ ಮಾಡಿ ಈ ಮಕ್ಕಳನ್ನು ಸಾಕಿ ಸಲುಹಿದ್ದಾಳೆ. ಮಂಜುನಾಥ ಅವರಿಗೆ ಚಿಕ್ಕ ವಯಸ್ಸಿನಲ್ಲೇ ನಾಟಕ,ಸಿನಿಮಾ ನೋಡುವ ಕಯಾಲಿ. ಈ ಕಯಾಲಿಯೇ ಮುಂದೊಂದು ದಿನ ದೊಡ್ಡ ನಟನಾಗಿಸಿದ್ದು ಈ ಇತಿಹಾಸ.
ಬದುಕು ಬದಲಿಸಿದ ಧಾರವಾಡಃ
ಮಂಜುನಾಥ ಅವರು ಹೆಚ್ಚಿನ ಶಿಕ್ಷಣ ಕಲಿಯಲು ಶಿಕ್ಷಣ ಕಾಶಿ ಧಾರವಾಡಕ್ಕೆ ಬಂದರು. ಇಲ್ಲಿ ಬಿಎ ಪದವಿಯಲ್ಲಿ ಓದುತ್ತಿದ್ದಾಗ. ಆಗಾಗಾ ಇಲ್ಲಿಯ ರಂಗಾಯಣಕ್ಕೆ ಭೇಟಿ ನೀಡುತ್ತಿದ್ದರೂ,ಇಂತಹ ಭೇಟಿಯಿಂದ ಇವರಿಗೆ ಹಲವು ರಂಗ ಕಲಾವಿದರ ಪರಿಚಯವಾಯಿತು. ನಂತರ ದಿನಗಳಲ್ಲಿ ಶಿಕ್ಷಣದೊಟ್ಟಿಗೆ ಹವ್ಯಾಸಿ ರಂಗ ತಂಡಗಳೊಟ್ಟಿಗೆ ಸೇರಿ ನಟನೆ ಕಲಿತು ಅದರಲ್ಲಿ ಪಾರಂಗತರಾದರು. ಮನೆಯಲ್ಲು ಬಡತನ ಇದ್ದ ಕಾರಣ ಶಿಕ್ಷಣ, ರೂಮ್ ಬಾಡಿಗೆ ಹೀಗೆ ದಿನನಿತ್ಯದ ಹತ್ತು ಹಲವು ಖರ್ಚುಗಳಿಗೆ ದುಡ್ಡು ಹೊಂದಿಸಬೇಕಾಗಿತ್ತು. ಇದಕ್ಕಾಗಿಯೇ ಮಂಜುನಾಥ ಅವರು ಶಿಕ್ಷಣ, ನಟನೆಯೊಂದಿಗೆ ಬಿಡುವಿನ ವೇಳೆಯಲ್ಲಿ ಅಲ್ಲಲ್ಲಿ ಕೆಲಸ ಮಾಡಿ ತಮ್ಮ ಖರ್ಚು ವೆಚ್ಚ ನಿಗಿಸಿಕೊಳ್ಳುತ್ತಿದ್ದರು.

ಸಕಲ ಕಲಾವಲ್ಲಭ:
ಮಂಜುನಾಥ ಸಕಲ ಕಲಾವಲ್ಲಭರು. ಶಿಕ್ಷಣ, ನಟನೆ, ಕೆಲಸ ಇದರೊಟ್ಟಿಗೆ ಇವರು ಉತ್ತಮ ಬರಹಗಾರ ಕೂಡಾ. ಇವರೊಲ್ಲೊಬ್ಬ ಕವಿ ಕೂಡಾ ಇದ್ದಾನೆ. ಇದೇ ಕಾರಣ ಇವರು ಬರೆದ ಹಲವು ಕವನ, ಲೇಖನಗಳು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಹಾಗೂ ವೆಬ್ ತಾಣಗಳಲ್ಲಿ ಪ್ರಕಟಗೊಂಡಿವೆ. ಇದೇ ಹವ್ಯಾಸದಿಂದಲೇ ಮಂಜುನಾಥ ಅವರು www.ಡಾಕ್ಟರ್.com ಎಂಬ ಹಾಸ್ಯಮಿಶ್ರಿತ ನಾಟಕವನ್ನು ರಚನೆ ಮಾಡಿದ್ದಾರೆ. ಈ ನಾಟಕವನ್ನು ರಾಜ್ಯದ ಹಲವೆಡೆ ಪ್ರದರ್ಶನ ಮಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದಾರೆ. ಈ ನಾಟಕ ೩೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ಕೈ ಹಿಡಿದ ನಟನೆ:
ಹೀಗೆ ಯಾವುದೇ ರಂಗ ತರಬೇತಿಯೂ ಇಲ್ಲದೇ ಬರೀ ಆಸಕ್ತಿ ಹಾಗೂ ಶ್ರದ್ಧೆಯಿಂದ ಕಲಿತ ನಟನೆ ಇವರ ಬದುಕನ್ನೇ ಬದಲಾಯಿಸಿದೆ. ಅದೊಂದು ದಿನ ಹುಬ್ಬಳ್ಳಿಯಲ್ಲಿ ನಡೆದ ಮಜಾಭಾರತ ಆಡಿಷನ್ ನಲ್ಲಿ ಪಾಲ್ಗೊಂಡರು. ಇವರ ನಟನೆ ನೋಡಿ ಅಲ್ಲಿ ಜಡ್ಜ್ ಶಬ್ಬಾಶಗಿರಿ ಕೊಟ್ಟು ಸೆಲೆಕ್ಷನ್ ಮಾಡಿದರು. ನಂತರ ಇವರ ನಟನೆ ಎಷ್ಟು ಪರಿಪಕ್ವವಾಯಿತು ಎಂದರೆ, ಮಜಾಭಾರತ ೨, ಕಾಮಿಡಿ ಟಾಕೀಸ್, ಸದ್ಯ ಮಜಾಭಾರತ-೨ರಲ್ಲಿಯೂ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಇವರ ನಟನೆ ಮೆಚ್ಚಿ ಹಲವು ಸಿನಿಮಾಗಳಿಗೆ ಅವಕಾಶಗಳು ಒದಗಿ ಬಂದಿವರ. ಆದರೆ, ಸಮಯದ ಅಭಾವ ಹಾಗೂ ಇನ್ನಷ್ಟು ನಟನೆಯಲ್ಲಿ ಫಳಗಬೇಕೆಂಬ ಆಸೆಯಿಂದ ಬಂದ ಅವಕಾಶಗಳನ್ನು ತಳ್ಳಿ ಹಾಕಿ, ನಟನೆಯಲ್ಲಿ ಮತ್ತಷ್ಟು ಪರಕಾಯ ಪ್ರವೇಶ ಮಾಡುತ್ತಿದ್ದಾರೆ. ಬೆಳ್ಳಿತೆರೆಗೆ ಬಂದು ಅಲ್ಲಿಯೂ ಕಥೆ ಹಾಗೂ ಡೈರಕ್ಷನ್ ಮಾಡಬೇಕು ಎಂಬ ಹೆಬ್ಬಕೆ ಇದೆ ಎಂದು ಹೇಳುತ್ತಾರೆ ಮಂಜುನಾಥ. ಬಡತನದಲ್ಲೇ ಪ್ರತಿಭೆಗಳಿರಿದೂ ಎಂಬ ವಾದಕ್ಕೆ ಮಂಜುನಾಥನ ಕಲಾಪ್ರತಿಭೆಯೆ ಸಾಕ್ಷಿ. ಇಂತಹ ಹಳ್ಳಿ ಹಾಗೂ ಬಡತನದಲ್ಲಿ ಬೆಳೆದ ಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬರಲಿ. ಮಂಜುನಾಥ ಅವರು ಮತ್ತಷ್ಟು ಮಗದಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಆಶಯ ಕಲಾಪ್ರಿಯರದ್ದು.



Tuesday, 18 December 2018

ಉಕದಲ್ಲೆ ಹೆಚ್ಚು ಸ್ವಾಗತ ಕಮಾನು ಹೊಂದಿದ ವೀರಭದ್ರೇಶ್ವರ



ಮಂಜುನಾಥ ಗದಗಿನ 
ನಾಡಿನ ಹಲವು ಧಾರ್ಮಿಕ ಕ್ಷೇತ್ರಗಳು ತಮ್ಮದೆಯಾದ ವಿಶಿಷ್ಟ, ವಿಭಿನ್ನ ಇತಿಹಾಸ, ಆಚರಣೆಗಳಿಂದ ಎಲ್ಲರ ಮನೆ-ಮನದ ಮಾತಾಗಿವೆ. ಅದೇ ರೀತಿ ಇಲ್ಲೊಂದು ಪುಣ್ಯಕ್ಷೇತ್ರ ಕೂಡಾ 11 ಸ್ವಾಗತ ಕಮಾನುಗಳನ್ನು ಹೊಂದಿದೆ. ಈ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಸ್ವಾಗತ ಕಮಾನು ಹೊಂದಿದ ಹೆಗ್ಗಳಿಕೆ ಪಾತ್ರವಾಗಿದೆ. 
ಹೌದು! ಅದುವೇ ಬೆಳಗಾವಿಯಿಂದ 80 ಕಿಮೀ ದೂರದ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ದೇವಾಲಯ. ನಾಡಿನ ಅನೇಕ ಪುಣ್ಯಕ್ಷೇತ್ರಗಳ ಪೈಕಿ ಈ ಗೊಡಚಿ ಕ್ಷೇತ್ರವು ಒಂದು. ತನ್ನದೇ ಇತಿಹಾಸ, ಪರಂಪರೆಯ ಮೂಲಕ ರಾಜ್ಯಾದ್ಯಂತ ಭಕ್ತವೃಂದವನ್ನು ಹೊಂದಿ ಗಮನ ಸೆಳೆಯುತ್ತಿದೆ. ಕಟಕೋಳ, ರಾಮದುರ್ಗ, ಸುನ್ನಾಳ, ಚಂದರಗಿ, ಮುನವಳ್ಳಿ, ಸವದತ್ತಿ, ಗೊಡಚಿಯಲ್ಲೇ ಮೂರು ಕಮಾನಗಳನ್ನು ಹೊಂದಿದೆ. ಈ ಮೂಲಕ ಉಕದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.
ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ದ್ವಾರವು  ಪೂರ್ವದಿಕ್ಕಿಗಿದೆ. ಇದರ ಮುಂಭಾಗದಲ್ಲಿ ಹಳ್ಳವೊಂದು ಹರಿದಿದೆ. ವೀರಭದ್ರನ ದೇವಸ್ಥಾನದ ಮುಂದೆ ವಿಶಾಲವಾದ ಮೈದಾನವಿದೆ. ಈ ಮೈದಾನಕ್ಕೆ ಲಿರಣಬಾಜಿಳಿ ಪ್ರದೇಶವೆಂದು ಹಳ್ಳಕ್ಕೆ ಲಿಹಿರೇಹಳ್ಳವೆಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಶರಣರು ಯುದ್ಧ ಸಮಯದಲ್ಲಿ ವಿಜಯಶಾಲಿಗಳಗಿದ್ದರಿಂದ ಈ ಹಳ್ಳದಲ್ಲಿ ವಿಜಯಿಯಾದ ಶರಣರ ಪಾದದೂಳಿಯಿಂದ ಹರಿದು ಬಂದ ಜಲ ಪವಿತ್ರ ಪಾದೋದಕದ ಮಹಿಮೆಯನ್ನು ಹೊಂದಿದೆ ಎಂಬುವುದು ಭಕ್ತರ ನಂಬಿಕೆ. ಕಾರಣ ಈ ಕ್ಷೇತ್ರಕ್ಕೆ ಬಂದ ಭಕ್ತರೆಲ್ಲ ಈ ಜಲದಲ್ಲಿ ಮಿಂದ ಬಳಿಕವೆ ವೀರಭದ್ರನ ದರ್ಶನಕ್ಕೆ ಹೋಗುವುದು ವಾಡಿಕೆ ಇತ್ತು ಆದರೆ, ಇಂದು ಈ ಹಳ್ಳದಲ್ಲಿ ನೀರು ಇಲ್ಲದ ಕಾರಣ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ನಲ್ಲಿಗಳಲ್ಲಿ ಅಥವಾ ಸ್ನಾನ ಗೃಹಗಳಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವೀರಭದ್ರನ ದೇವಸ್ಥಾನದ ಹಿಂದೆ ಮಡಿವಾಳ ಮಾಚಿದೇವ(ಮುದೀವೀರಣ್ಣ)ನ ದೇವಸ್ಥಾನ, ಎಡಗಡೆ ಭದ್ರಕಾಳಿ ದೇವಸ್ಥಾನ ಇರುವುದರಿಂದ ಕ್ಷೇತ್ರಕ್ಕೆ ಮತ್ತಷ್ಟು ಮೆರಗು ಬಂದಿದೆ.
ಆಗ ಶಿಕರವೀರಷಿರ:
ಗೊಡಚಿ ಕ್ಷೇತ್ರವು ಬಾದಾಮಿ ಚಾಲುಕ್ಯರ ಕೀರ್ತಿವರ್ಮನಿಂದ ಹಿಡಿದು ಕೊಲ್ಹಾಪೂರ ಸಂಸ್ಥಾನದ ಭಾಗಕ್ಕೆ ಶಿಕರವೀರಷಿರ ನಾಡೆಂದು ಹೆಸರು ಬಂದಿದೆ ಎಂದು ಗೊಡಚಿ ಗ್ರಾಮದಲ್ಲಿ ದೊರೆತ ತಾಮ್ರಪಟದಲ್ಲಿ ಶಿಕೆತ್ತಿಅರಸಷಿ ಎಂಬುವುದರಿಂದ ತಿಳಿದು ಬಂದಿದೆ ಎಂಬುದು ಇತಿಹಾಸಕಾರರ ಅನಿಸಿಕೆ. ಕೊಲ್ಹಾಪೂರ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಈ ಕ್ಷೇತ್ರದಲ್ಲಿ ಕಲ್ಯಾಣದ ಕ್ರಾಂತಿಯು ನಿರಂತರವಾಗಿ ನಡೆದ ಶರಣರು ಉಳವಿ ಕ್ಷೇತರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜ್ಜಳನ ಸೈನ್ಯ ಶರಣರನ್ನು ಪುನಃ ಬೆನ್ನಟ್ಟಿದ ಸಮಯದಲ್ಲಿ ಶರಣರು ಕತ್ತಿಹಿಡಿದು ಹೋರಾಟ ಮಾಡಿ ಬಿಜ್ಜಳನ ಸೈನ್ಯವನ್ನು ಎದುರಿಸಿದ ಸ್ಥಳ ಈ ಕ್ಷೇತ್ರದಲ್ಲಿ, ಶರಣರಿಗೆ ವಿಜಯಲಭಿಸಿದ್ದರಿಂದ ಇದನ್ನು ಶಿಕರವೀರಷಿರ ನಾಡೆಂದು ಕರೆಯಲಾಗುತ್ತಿದೆ ಎಂಬುವುದನ್ನು ಇತಿಹಾಸ ಸಾರಿ ಹೇಳುತ್ತಿದೆ.
ಗೊಡಚಿ ಹೆಸರು ಹೇಗೆ ಬಂತು:
ಗೊಡಚಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀವೀರಭದ್ರನ ದೇವಸ್ಥಾನವು ಅಂದು ಗಿಡಕಂಟೆಗಳಿಂದ ತುಂಬಿಕೊಂಡಿತ್ತು. ಅದರಲ್ಲಿಯೂ ವಿಶೇಷವಾಗಿ ಕೊಡಚಿಕಂಟೆಗಳಿಂದ ತುಂಬಿಕೊಂಡಿತ್ತು. ಅದಕ್ಕೆ ಇದು ಮೊದಲು ಕೊಡಚಿಕ್ಷೇತ್ರವೆಂದಾಯಿತು. ಕೊಡಚಿಯೇ ಇಂದು ರೂಢಿಯಲ್ಲಿ ಲಿಕಳಿಕಾರ ಮಾಯವಾಗಿ ಲಿಗಳಿಕಾರ ಆಗಮನದಿಂದಾಗಿ ಗೊಡಚಿ ಕ್ಷೇತ್ರವಾಗಿ ಮಾರ್ಪಟ್ಟಿದೆ. ಗೊಡಚಿಯ ವೀರಭದ್ರನ ಕ್ಷೇತ್ರವು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವರ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ಅಲ್ಲದೆ ಬಹುಜನರಿಗೆ ವೀರಭದ್ರನು ಮನೆದೇವರು, ಕುಲದೇವರು ಅಲ್ಲದೆ ಆರಾಧ್ಯ ದೇವರಾಗಿ ವೀರಭದ್ರನಿದ್ದಾನೆ.  ಉತ್ತರಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಇಲ್ಲಿ ದರ್ಶನಕ್ಕೆ ಬಂದು ಹೋಗುತ್ತಾರೆ.
ಕಟ್ಟಡದ ವೈಶಿಷ್ಟ್ಯ:
ವೀರಭದ್ರೇಶ್ವರ ದೇವಸ್ಥಾನದ ಕಟ್ಟಡವು ದ್ರಾವಿಡ ಮಾದರಿ ಹೋಲುತ್ತಿದ್ದು, ಚಾಲುಕ್ಯರ ಮಾದರಿಯ ಶಿಲ್ಪವನ್ನು ಕಾಣಬಹುದಾಗಿದೆ. ಅಲ್ಲದೆ ದೇವಸ್ಥಾನಕ್ಕೆ ಆಕರ್ಷಕ ಕಳಸವನ್ನು ಮಾಡಲಾಗಿದೆ. ಅಲ್ಲದೆ ದೇವಸ್ಥಾನದ ಒಳಾಂಗಣದಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿರುವ ಎತ್ತರವಾದ ದೀಪಸ್ತಂಭವನ್ನು ನೋಡಬಹುದು. ಇದೆಲ್ಲವನ್ನು ಗಮನಿಸಿದಾಗ ಈ ಕಟ್ಟಡ 17ನೇ ಶತಮಾನದಲ್ಲಿ ಕಟ್ಟಿದ ದೇವಸ್ಥಾನವೆಂದು ಪ್ರಾಚ್ಯವಸ್ತು ಸಂಶೋಧಕರ ಅಭಿಪ್ರಾಯ.
---
22 ರಿಂದು ಜಾತ್ರೆ:
ಹೊಸ್ತಲ ಹುಣ್ಣಿಮೆಯ ದಿನವಾದ ಡಿ.22ರಿಂದ ಐದು ದಿನಗಳ ಕಾಲ ಗೊಡಚಿ ವೀರಭದ್ರ ದೇವರ ಜಾತ್ರೆ ವಿಜೃಂಭನೆಯಿಂದ ನಡೆಯಲಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಜಾತ್ರೆಗೆ ಆಗಮಿಸಿ ಪುನೀತರಾಗುತ್ತಾರೆ. ಜಾತ್ರೆಯ ವಿಶೇಷವೆಂದರೆ ಬೆಳವಲು(ಬಳೂಲ)ಕಾಯಿ, ಬೋರೆ (ಬಾರಿ) ಹಾಗೂ ಬಾಳೆಹಣ್ಣುಗಳ ಮಾರಾಟ ಈ ಜಾತ್ರೆಯ ವಿಶೇಷವಾಗಿದೆ. ಈ ಜಾತ್ರೆಯಲ್ಲಿ ಮಾರುವಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಜಾತ್ರೆಯಲ್ಲಿಯೂ ಈ ಹಣ್ಣುಗಳು ಮಾರಾಟವಾಗುವದಿಲ್ಲ. ಹಣ್ಣುಗಳಲ್ಲದೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ವಿಭೂತಿ, ರುದ್ರಾಕ್ಷಿ ಹಾಗೂ ಕುಂಕುಮದ ಮಾರಾಟ ಕೂಡಾ ಆಗುತ್ತದೆ.

Sunday, 8 April 2018

ಬಣಗುಡುತ್ತಿರುವ ಬನಶಂಕರಿ..!

ಮಂಜುನಾಥ ಗದಗಿನ

ಹುಬ್ಬಳ್ಳಿ ಇತಿಹಾಸದ ಮಜಲೂಗಳನ್ನು ಕೆದಕಿದಷ್ಟು ಗತ ಇತಿಹಾಸದೊಂದಿಗೆ ಇಲ್ಲಿನ ಕಲಾ ಸಿರಿವಂತಿಕೆ ಬಿಚ್ಚುತ್ತಾ ಸಾಗುತ್ತಿವೆ. ಆದರೆ ಇವುಗಳ ಸೂಕ್ತ ನಿರ್ವಹಣೆ ಹಾಗೂ ಪ್ರಚಾರದ ಕೊರತೆಯಿಂದ ಅವಸಾನದತ್ತ ಸಾಗುತ್ತಿರುವುದು ಕೆದಕರ ಸಂಗತಿ.
ಬಾದಾಮಿ ಚಾಲುಕ್ಯರ ಕಾಲದ 11ನೇ ಶತಮಾನದ ದೇವಾಲವೊಂದು ಹುಬ್ಬಳ್ಳಿಯಿಂದ 8 ಕಿ.ಮಿ ದೂರದ ಅಮರಗೋಳದಲ್ಲಿದೆ. ಅಮರಗೋಳ ಬಸ್ಟಾಫ್‌ಯಿಂದ ಸ್ಟೇಶನ್ ರೋಡ ಮಾರ್ಗವಾಗಿ ದಾಟಿ, ದುಂಡಿ ಬಸವೇಶ್ವರ ಗುಡಿಯ ಬಲಕ್ಕೆ ಹೋದರೆ ಮಾರುತಿ ದೇವಸ್ಥಾನ ಸಿಗುತ್ತದೆ ಇದನ್ನು ಸಾಗಿ ಮುಂದೆ ಬಂದರೆ ಮರಿಗೌಡರ ಓಣಿಯ ವಿಶಾಲ ಅಂಗಳದಲ್ಲಿ ಕಾಣ ಸಿಗುವುದೇ ಶಿಥಿಲಾವಸ್ಥೆ ತಲುಪಿರುವ ಐತಿಹಾಸಿಕ ಕಲಾ ಶ್ರೀಮಂತಿಕೆಯಿಂದ ಕೂಡಿರುವ ಬನಶಂಕರಿ ದೇವಾಲಯ.
ಅನಾಧರ, ಅನಾಥ..!
ಈ ದೇವಾಲಯ ಭಾರತೀಯ ಪುರಾತತ್ವ ಇಲಾಖೆಯ ಅಧಿನಕ್ಕೆ ಒಳಪಟ್ಟಿದೆ. ಆದರೆ ಇಲಾಖೆಯ ಅನಾಧರ ವರ್ತನೆಯಿಂದ ದೇವಸ್ಥಾನ ಅನಾಥವಾಗಿರುವುದು ಆರಂಭದಲ್ಲೇ ಗೊತ್ತಾಗುತ್ತದೆ. ಐತಿಹಾಸಿಕ ದೇವಾಲಯ ಇದೇ ಎಂಬ ಒಂದೇ ಒಂದು ಮಾರ್ಗಸೂಚಿಯಾಗಲಿ, ಫಲಕವಾಗಲಿ ಕಾಣಸಿಗುವುದಿಲ್ಲ. ಹುಬ್ಬಳ್ಳಿ-ಧಾರವಾಡ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ದಾಟಿಯೇ ಈ ದೇವಾಲಯಕ್ಕೆ ಸಾಗಬೇಕು. ಇಲ್ಲಿ ಒಂದು ಐತಿಹಾಸಿಕ ದೇವಾಲಯ ಇದೆ ಎಂದು ಫಲಕ ಹಾಕಿದ್ದರೆ, ದಿನ ನಿತ್ಯ ಓಡಾಡುವ ಲಕ್ಷ್ಯಾಂತರ ಪ್ರಯಾಣಿಕರಿಗೆ ದೇವಾಲಯ ಇರುವಿಕೆ ಗೊತ್ತಾಗುತ್ತಿತ್ತು. ಇದರಿಂದ ದೇವಾಲಯ ಪ್ರೇಕ್ಷಣಿಯ ಸ್ಥಳವಾಗುತ್ತಿತ್ತು ಎಂಬ ಮಾತಿನಲ್ಲಿ ಅನುಮಾನವಿಲ್ಲ. ಆದರೆ ಭಾರತೀಯ ಪ್ರಾಚ್ಯ ವಸ್ತು ಇಲಾಖೆಯ ನಿರ್ಲಕ್ಷದಿಂದ ಈ ದೇವಾಲಯ ಅನಾಥವಾಗಿದೆ.
ಕಣ್ಣು ಕೊರೈಸುವ ವಾಸ್ತು ಶೈಲಿ.
ಕ್ರಿ.ಶ 1120ರಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಸೌಧೂರೆ ಜಕ್ಕರಸ ದೊರೆ ನಿರ್ಮಿಸಿದ್ದಾನೆಂದು ದೇವಾಲಯದ ಒಳಗಿರುವ ಶಿಲಾಶಾಸನ ಉಲ್ಲೇಖಿಸಿದೆ.ಪೂರ್ವಾಭಿಮುಖವಾಗಿ ಮರಳುಗಲ್ಲಿನಿಂದ ಈ ದೇವಾಯಲವನ್ನು ನಿರ್ಮಿಸಲಾಗಿದೆ. ದೇವಾಲಯವು ದ್ವಿಕೂಟವಾಗಿದ್ದು, ಪೂರ್ವ ಮತ್ತು ದಕ್ಷಿಣಕ್ಕೆ ಮುಖ ಮಾಡಿದ ಗರ್ಭ ಗುಡಿಯನ್ನು ಹೊಂದಿದೆ. ಒಂದು ಗರ್ಭಗುಡಿಯಲ್ಲಿ ಬನಶಂಕರಿ, ಮತ್ತೊಂದು ಗರ್ಭಗುಡಿಯಲ್ಲಿ ಶಂಕರಲಿಂಗವನ್ನು ಕಾಣಬಹುದು. ಗರ್ಭಗೃಹದ ಬಾಗಿಲುಗಳ ಮೇಲೆ ಅರ್ಧಗಂಬಗಳ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಕಾಣಬಹುದು. ಲಲಾಟಬಿಂಬದಲ್ಲಿ ಗಜಲಕ್ಷ್ಮೀಯ ಉಬ್ಬುಶಿಲ್ಪವಿದ್ದು, ಮೇಲಿನ ಶಿಲಾಫಲಕದಲ್ಲಿ ಐದು ಮಂಟಪಗಳ ಸೂಕ್ಷ್ಮ ಉಬ್ಬು ರಚನೆಗಳಿವೆ. ಮಧ್ಯದ ಮಂಟಪವು ಗಣಪತಿಯ ಉಬ್ಬು ಶಿಲ್ಪವನ್ನು ಹೊಂದಿದೆ.
ದಕ್ಷಿಣಾಭಿಮುಖವಾಗಿರುವ ಗರ್ಭಗುಡಿಯ ಮೇಲೂ ಸೂಕ್ಷ್ಮ ಕೆತ್ತನ ಕಲಾ ಕುಸುರಿಯನ್ನು ಕಾಣಬಹುದು. ಇನ್ನು ಈ ದೇವಾಲಯದ ವಿಶೇಷವೆಂದರೆ ಇದರ ನವರಂಗ ಮಂಟಪ. ಇಲ್ಲಿ ನಾಲ್ಕು ಕಂಬಗಳಿದ್ದು. ಈ ಕಂಬಗಳ ಮೇಲೆ ವಿಷ್ಣು,ನಟರಾಜ, ಗಣಪತಿ, ಭೈರವ,ಭೈರವಿ, ಶಿವ, ವರಹಾ, ಉಗ್ರನರಸಿಂಹ, ಚಂದ್ರ, ವೀರಭ್ರದ, ಮೊದಲಾದ ದೇವಾನುದೇವತೆಗಳ ಅದ್ಭುತ್ ಕೆತ್ತನೆಗಳನ್ನು ಕಾಣಬಹುದು. ನವರಂಗದ ಕಂಬಗಳ ಮೇಲೆ ಕೆತ್ತಿದ ದೇವಾಯಲಗಳು ಕಾಣ ಸಿಗುವುದು ಅಪರೂಪ.ಇನ್ನೂ ದೇವಾಲಯದ ಹೊರಭಿತ್ತಿಯು ಗೋಡೆಕಂಬ,ಅರ್ಧಕಂಬ, ಮತ್ತು ದೇವಕೊಷ್ಟಕಗಳ ಅಲಂಕಾರದಿಂದ ಕೂಡಿದೆ. ನಕ್ಷತ್ರಾಕಾರದ ತಲವಿನ್ಯಾಸವನ್ನು ಹೊಂದಿದೆ.
ಸೂಕ್ತ ರಕ್ಷಣೆಯಿಲ್ಲ..
ದೇವಸ್ಥಾನದ  ಸುತ್ತಲೂ ಬೇಲಿ ಹಾಕಲಾಗಿದೇ, ಆ ಬೇಲಿಯನ್ನು ಈಗಾಗಳೆ ಬೇಧಿಸಲಾಗಿದೆ. ಇನ್ನೂ ದೇವಸ್ಥಾನದ ಒಳಗೆ ಯಾರು ಬೇಕಾದರೂ ರಾಜಾರೋಷವಾಗಿ ಪ್ರವೇಶಿಸಬಹುದು. ಇನ್ನೂ ದೇವಸ್ಥಾನದ ಸುತ್ತಲೂ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೀಗಾಗಿ ಜೀರ್ಣೋದ್ಧಾರ ಸಮಯದಲ್ಲಿ ತೆಗೆದ ಕಲ್ಲುಗಳಿಗೆ ಹಾಗೂ ದೇವಸ್ಥಾನಕ್ಕೆ ಯಾವುದೇ ರಕ್ಷಣೆ ಇಲ್ಲ. ಅಷ್ಟೇ ಅಲ್ಲದೇ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಇದಕ್ಕೆ ಅರ್ಚಕರು ಸಹಿತ ಇಲ್ಲ. ಓಣಿಯ ಮಹಿಳೆಯರೆ ಈ ದೇವಸ್ಥಾನದ ಪೂಜೆ ಮಾಡುತ್ತಿದ್ದಾರೆ. ದೇವಸ್ಥಾನದ ಮೇಲೂಸ್ತುವಾರಗೆ ಸರಕಾರ ಒಬ್ಬ ನೌಕರರನ್ನು ಹಾಗೂ ಒಬ್ಬ ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಆದರೆ ಸರಕಾರಿ ನೌಕರ ಧಾರವಾಡದಲ್ಲಿ ಇರುವುದರಿಂದ ಈ ದೇವಾಲಯ ರಕ್ಷಣೆಯ ಹೊಣೆ ಅಲಿಯ್ಲ ಕಾವಲುಗಾರನ್ನದೆ. ಅವನು ಇಲ್ಲದೇ ಇದ್ದಾಗ ಇದಕ್ಕೆ ರಕ್ಷಣೆ ನೀಡುವವರು ಯಾರು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಉತ್ಸವ ಸಾರ್ಥಕತೆ 

ಲಕ್ಷಾಂತರ ಹಣ ಖರ್ಚು ಮಾಡಿ ಪ್ರತಿ ವರ್ಷ ಜಿಲ್ಲಾಡಳಿತ ಜಿಲ್ಲಾ ಉತ್ಸವವನ್ನು ಗಾರ್ಡ್‌ನ್‌ಗಳು , ರಂಗಮಂದಿರಗಳಲ್ಲಿ, ಕೆಸಿಡಿ ಕಾಲೇಜು, ಮಠಗಳಲ್ಲಿ ಮಾತ್ರ ಆಯೋಜಿಸುತ್ತಿದೆ. ಇತಿಹಾಸ ಬಂಬಿಸುವ ಚಂದ್ರಮೌಳೇಶ್ವರ, ಭವಾನಿ ಶಂಕರ,ಬನಶಂಕರೀ ದೇವಾಲಯ ಸೇರಿದಂತೆ ಹಲವು ಐತಿಹ್ಯದ ದೇವಾಲಯಗಳನ್ನು ಆಯ್ಕೆ ಮಾಡಿ ಸುಸಜ್ಜಿತ ಕಾರ್ಯಕ್ರಮ ಆಯೋಜಿಸಿದರೆ ಉತ್ಸವ ಸಾರ್ಥಕತೆ





Saturday, 7 April 2018

ಹೊಟ್ಟೆಯ ಹಿಟ್ಟಿಗಾಗಿ ಕಟ್ಟಿಗೆ ಹೊರುವ ಕಸರತ್ತು.


ಮಂಜುನಾಥ ಗದಗಿನ

  ಆಧುನಿಕ ಜೀವನ ಶೈಲಿಗೆ ಕಾಲಿಕಟ್ಟಿಕೊಂಡು ಯಾವ ದಿಕ್ಕು ದೆಸೆಯು ಗೊತ್ತಿಲ್ಲದೆ ಕೇವಲ ದುಡ್ಡು ಸಂಪಾದನೆಗಾಗಿ, ಜೀವನದ ಅಮೂಲ್ಯ ಕ್ಷಣಗಳನ್ನು ಯಾಂತ್ರಿಕ ವಸ್ತುಗಳೊಂದಿಗೆ ನಮ್ಮದೇ ಹಮ್ಮು-ಬಿಮ್ಮಿನಲ್ಲಿ ಕಳೆಯುತ್ತಿದ್ದೇವೆ. ಆದರೆ ಕೆಲವೊಂದಿಷ್ಟು ಜನರು ಯಾಂತ್ರಿಕ ಬದುಕಿನಿಂದ ದೂರವೇ ಇದ್ದು ತಮ್ಮದೇ ಪುಟ್ಟ ಪ್ರಪಂಚದಲ್ಲಿ ಆಸೆ, ಆಕಾಂಕ್ಷೆಗಳೊಂದಿಗೆ ಹೊಟ್ಟೆಯ ಹಿಟ್ಟಿಗಾಗಿ, ದಿನನಿತ್ಯ ಕಟ್ಟಿಗೆ ಹೊರುವ ಕೆಲಸವನ್ನು ಮಾಡುತ್ತಿದ್ದಾರೆ.
  ಸೂರ್ಯ ಹುಟ್ಟುವುದಕ್ಕೂ ಮುನ್ನ, ಎದ್ದು ಮನೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಟ್ಟು. ತಮ್ಮ ಹೊಟ್ಟೆಗೆ ಸ್ಪಲ್ಪ ಬುತ್ತಿಕಟ್ಟಿಕೊಂಡು ಹೋಗುವ ಈ ಮಹಿಳೆಯರು ಮತ್ತೆ ಮನೆ ಸೇರುವುದು ಅದೇ ಸೂರ್ಯನೊಂದಿಗೆ. ಈ ಮಹಿಳೆಯರದ್ದು ದಿನನಿತ್ಯದ ಕಾಯಕವೇ ಇದು.
 ಬದುಕಿನ ಬಡತನ ಎಂತಹ ಕೆಲಸಕ್ಕಾದರು ಪ್ರೇರೆಪಿಸುತ್ತದೆ ಎಂಬುದಕ್ಕೆ ಅಂದು ದಾರಿಯಲ್ಲಿ ಕಂಡ ಈ ಮಹಿಳೆಯರೇ ಜ್ವಲಂತ ಸಾಕ್ಷಿಯಾಗಿದ್ದರು. ತುತ್ತು ಅನ್ನಕ್ಕಾಗಿ ಸುಡು ಬಿಸಿಲನ್ನು ಲೆಕ್ಕಿಸದೇ ಕಾಣದ ಯಾವುದೋ ಒಂದು ದಾರಿಗುಂಟ ಅದೇಷ್ಟೋ ಕೀ.ಮಿಗಳನ್ನು ನಡೆದುಕೊಂಡು ಕಟ್ಟಿಗೆ ತರುತ್ತಿದ್ದರು. ಮಾಸಿದ ಬಟ್ಟೆ, ಅವರ ಕಾಲಲ್ಲಿನ ಚಪ್ಪಲಿಗಳು ಅವರ ಬದುಕಿನ ಬಡತನವನ್ನು ಅಣಕಿಸುತ್ತಿದ್ದವು.
ಇವರ ಆ ಗಟ್ಟಿತನ ಅದೆಂತಹ ಗಂಡೆದೆಯನ್ನು ಗದರಿಸುವಂತಿತ್ತು.
  ನಾವುಗಳು ಮನೆಯಲ್ಲಿ ಇದ್ದಾಗ ಒಂದು ಕಡ್ಡಿಯನ್ನು ತೆಗೆದು ಈ ಕಡೆಯಿಂದ ಆ ಕಡೆಗೆ ಹಾಕುವುದಿಲ್ಲ. ಒಂದು ವೇಳೆ ಹಾಕಿದ್ರು ಆ ಮೇಲೆ ಸೊಂಟನೋವು ಎಂದು ಹಾಸಿಗೆ ಹಿಡಿಯುವುದು ಗ್ಯಾರಂಟಿ. ಹೌದು! ಇದು ನಮ್ಮ ಆಧುನಿಕ ಜೀವನ ಶೈಲಿಯ ಯಾಂತ್ರಿಕ ಬದುಕಿನ ಬಹು ದೊಡ್ಡ ಉಡುಗರೆ ಎಂದರೆ ತಪ್ಪಾಗಲಾರದು. ಇಂತಹ ಪರಸ್ಥಿಯಲ್ಲಿ ಈ ಮಹಿಳೆಯರು ದಿನ ನಿತ್ಯ ತಮಗೆ ತಿಳಿಯದಷ್ಟು ದೂರವನ್ನು ಸಾಗಿ, ಭಾರವಾದ ಕಟ್ಟಿಗಳನ್ನು ಕಡೆದುಕೊಂಡು, ಅವುಗಳನ್ನು ವ್ಯವಸ್ಥಿತವಾಗಿ ಕಟ್ಟಿಕೊಂಡು, ತಲೆಯ ಮೇಲೆ ಹೊತ್ತುಕೊಂಡು ಬರುತ್ತಾರಲ್ಲಾ! ಅವರ ಗಟ್ಟಿತನಕ್ಕೆ ಗಟ್ಟಿಯಾಗಿ ಕೂಗಿ ಹೇಳಲೇ ಬೇಕು ಶಬ್ಬಾಸ್ ಎಂದು.
   ನಾವ್ ಏನ ಮಾಡೋನ್ರಿ, ಈಗಿನ್ ಸಿಲಿಂಡರ ತಗೋಳಾಕ್ ನಮ್ಮ ಹತ್ರ ದುಡ್ಡಿಲ್ಲ. ತುತ್ತು ಅನ್ನ ತಿನ್ನಬೇಕಂದ್ರೆ ದಿನನಿತ್ಯ ಕಟ್ಟಿಗೆ ಹೊರಲೇ ಬೇಕು. ಇದನ್ನ ಮಾಡದೇ ಹೋದ್ರ ಹೊಟ್ಟೆಗೆ ತಣ್ಣಿರ ಬಟ್ಟೆನೆಗತಿ. ಇನ್ನ ಸರಕಾರ ನಮ್ಗ ಚುಮಣಿ ಎಣ್ಣೆ ಬಂದ್ ಮಾಡಿದೆ. ಹೀಂಗಾದ್ರ ನಮ್ಮ ಜೀವನ ಹೇಂಗ್ ನಡೆಸೋದು ಎಂದು ಮಲ್ಲವ್ವ ತನ್ನ ಅಳಲನ್ನು ತೊಡಿಕೊಂಡಳು.
  ಅಷ್ಟೂ ದೂರ ಹೋಗಿ, ತ್ರಾಸಪಟ್ಟು ತಂದರು ಒಂದು ಹೋರೆಗೆ ಸಿಗುವುದು ಕೇವಲ್ 30-40 ರೂ.ಗಳು ಮಾತ್ರ. ಇನ್ನೂ ಕೆಲವೊಂದಿಷ್ಟು ಸಾರಿ ಆ ಕಟ್ಟಿಗಳು ಮಾರದೇ ಹೋದ್ರೆ ಅವರು ಪಟ್ಟ ಶ್ರಮ ಹೋಳೆಯಲ್ಲಿ ಹುಣಸೆ ಹಣ್ಣು ತೋಳೆದ ಹಾಗೆ ಆಗುತ್ತೆ. ಇದರ ಜತೆ ಅವರ ಮನೆಯ ಒಲೆಗೂ ಇದೇ ಕಟ್ಟಿಯನ್ನು ಒಳಸುತ್ತಾರೆ. ಈ ದೃಶ ನೋಡಿದಾಕ್ಷಣ ನಮ್ಮ ಊರು ನನ್ಗೆ ನೆನಪಾಯಿತು. ನಮ್ಮ ಅವ್ವ ಕೂಡಾ ಕಟ್ಟಿಗೆ ತರಲು ಗುಡ್ಡಕ್ಕೆ ಹೋಗುತ್ತಿದದ್ದು ನೆನೆದು ಜೀವ ಹಿಂಡಿದಾಂತಾಯಿತು. ಇವರ ಈ ಕಾಯಕಕ್ಕೆ ಬೆಲೆ ಸಿಗುವುದು ಯಾವಾಗ? ಇವರ ಬದುಕು ಹಸನಾಗುವುದು ಯಾವಾಗ? ಎಂಬುದು ನಮ್ಮೆಲ್ಲರ ಪ್ರಶ್ನೆ.



ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...