Saturday, 6 August 2022

ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಶಿಸ್ತು ತುಂಬಿದ ಸೇವಾದಳ

 -ಮಂಜುನಾಥ ಗದಗಿನ



ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾ.ಸು.ಹರ್ಡೀಕರ(ನಾರಾಯಣ ಸುಬ್ಬರಾವ್ ಹರ್ಡೀಕರ) ಅವರ ಹೆಸರು ಚಿರಸ್ಥಾಯಿ. ಒಂದು ಉತ್ತಮವಾದ ಸಂಘಟನೆ, ಬಲ, ಶಿಸ್ತು ಇಲ್ಲದೇ ಮುನ್ನುಗ್ಗುತ್ತಿದ್ದ ಹೋರಾಟಕ್ಕೆ ಸೇವಾದಳ ಎಂಬ ಸಂಘಟನೆ ಹುಟ್ಟು ಹಾಕಿ ಆ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದರು ನಾ.ಸು.ಹರ್ಡೀಕರ.

ಅದು ೧೯೨೧ರ ಸಮಯ. ರಾಷ್ಟ್ರಾದ್ಯಂತ ಸ್ವಾತಂತ್ರ್ಯದ ಹೋರಾಟದ ಕಾವು ಏರ ತೊಡಗಿತ್ತು. ಬ್ರಿಟಿಷರ ಸರ್ಕಾರ ಕಾಯ್ದೆ, ಕಾನೂನುಗಳನ್ನು ವಿರೋಧಿಸಿ ಅನೇಕ ಹೋರಾಟಗಳು ನಡೆಯುತ್ತಿದ್ದವು. ಇದೇ ಸಮಯದಲ್ಲಿ ಅಂದರೆ, ೧೯೨೧ರಲ್ಲಿ ಧಾರವಾಡದಲ್ಲಿ ಪಿಕೆಟಿಂಗ್ ಮಾಡುವ ಸಂದರ್ಭದಲ್ಲಿ ಬ್ರಿಟಿಷರು ಪೈರಿಂಗ್ ಮಾಡಿದರು. ಈ ವೇಳೆ ಮೂವರು ಅಸುನೀಗಿದರು. ಇದರಿಂದ ೧೯೨೩ರಲ್ಲಿ ನಾಗಪುರದಲ್ಲಿ ರಾಷ್ಟ್ರಧ್ವಜ ಕಟ್ಟುವುದಕ್ಕೆ ಪ್ರತಿಬಂಧಕ ವಿಧಿಸಲಾಯಿತು. ಈ ಆಜ್ಞೆಯನ್ನು ಉಲ್ಲಂಘನೆ ಮಾಡುವುದಕ್ಕೆ ನಾ.ಸು.ಹರ್ಡೀಕರ ಅವರು ನೇತೃತ್ವದಲ್ಲಿ ಜನರ ಗುಂಪು ನಾಗಪುರಕ್ಕೆ ತೆರಳಿ ಆಜ್ಞೆ ಉಲ್ಲಂಘಿಸಿ ಜೈಲು ಸೇರಿದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷರು ಚಿತ್ರಹಿಂಸೆ ನೀಡುತ್ತಿದ್ದರು. ಹೀಗಾಗಿ ಜೈಲಿಂದ ಹೋಗಬೇಕಾದರೆ ಇನ್ಮುಂದೆ ಯಾವುದೇ ಚಳವಳಿ, ಸತ್ಯಾಗ್ರಹ ಮಾಡುವುದಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದುಕೊಟ್ಟು ಹೋಗಬೇಕು ಎಂದು ಹೇಳಿದರು. ನಾ.ಸು.ಹರ್ಡೀಕರ ಅವರು ನಾನು ಬರೆದುಕೊಡುವುದಿಲ್ಲ ಎಂದು ಸಾರಾಸಗಟಾಗಿ ಹೇಳಿದರು. ಈ ಸುದ್ದಿ ರಾಷ್ಟ್ರವ್ಯಾಪ್ತಿ ಹರಡಿತು.
೧೯೨೩ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಮಹಮ್ಮದ ಅಲಿ ಅವರ ಅಧ್ಯಕ್ಷಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಈ ಅಧಿವೇಶನದಲ್ಲಿ ನಾ.ಸು.ಹರ್ಡೀಕರ ಅವರು ಪಾಲ್ಗೊಂಡು, ಸಾತಂತ್ರ್ಯ ಹೋರಾಟಕ್ಕೆ ಅಪ್ಪಟ್ಟ ದೇಶಪ್ರೇಮಿಗಳನ್ನು ನಿರ್ಮಾಣ ಮಾಡುವ ಒಂದು ಶಿಸ್ತಿನ ಸಂಘಟನೆಬೇಕು. ಅದಕ್ಕೆ ಅವರು ಹಿಂದೂಸ್ತಾನ ಸೇವಾದಳ ಆರಂಭ ಮಾಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಮನ್ನಣೆ ಕೊಟ್ಟು ಆ ಅಧಿವೇಶನದಲ್ಲಿ ಹಿಂದೂಸ್ಥಾನ ಸೇವಾದಳ ಸ್ಥಾಪನೆ ಮಾಡಲಾಯಿತು. ಸೇವಾದಳದ ಪ್ರಥಮ ಅಧ್ಯಕ್ಷರಾಗಿ ಜವಾಹರಲಾಲ್ ನೆಹರು ಆಯ್ಕೆಯಾಗಿದರು. ಸಂಸ್ಥಾಪಕ ಸಂಚಾಲಕರಾಗಿ ನಾ.ಸು.ಹರ್ಡೀಕರ ಅವರು ಆಯ್ಕೆಯಾದರು. ನಂತರ ಇದೇ ಸೇವಾದಳ ಆಗಿ ಮುಂದುವರೆಯಿತು.
ಸೇವಾದಳದ ಪಾತ್ರ:
ಸೇವಾದಳ ಸ್ಥಾಪನೆಯಾದ ನಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಬಲ ಬಂದಿತು. ಸಂಘಟನೆ ಮತ್ತು ಶಿಸ್ತು ಇಲ್ಲದೇ ಸಾಗುತ್ತಿದ್ದ ಹೋರಾಟಕ್ಕೆ ಒಂದು ಶಿಸ್ತು ಬಂದಿತು. ನಾ.ಸು.ಹರ್ಡೀಕರ ಅವರು ದೇಶದ ಅನೇಕ ಹಳ್ಳಿಗಳಿಗೆ ತೆರಳಿ ಸೇವಾದಳ ಹುಟ್ಟು ಹಾಕಿ ಯುವ ಜನಾಂಗದಲ್ಲಿ ಸ್ವಾತಂತ್ರ್ಯದ ಬಗ್ಗೆ ಕಿಚ್ಚು ಮೂಡಿಸಿದರು. ಅವರನ್ನು ಸೇವಾದಳಕ್ಕೆ ಕರೆ ತಂದು ರಾಷ್ಟ್ರಪ್ರೇಮ, ಶಿಸ್ತು, ಸಂಘಟನೆ ಹಾಗೂ ದೈಹಿಕ, ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯ ಮಾಡಿದರು. ಹೀಗೆ ಹಿಂದೂಸ್ಥಾನ ಸೇವಾದಳ ವ್ಯಾಪಕವಾಗಿ ಬೆಳೆಯಿತು. ಸೇವಾದಳದಲ್ಲಿ ತಯಾರಾದ ಯುವಪಡೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿತು.
೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಸೇವಾದಳದ ಪಾತ್ರ ದೊಡ್ಡದಾಗಿದೆ. ಈ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿಕೊಂಡಿದ್ದರು. ಅಧಿವೇಶನದ ಸಕಲ ಸಿದ್ಧತೆಗಳನ್ನು ಗಂಗಾಧರರಾವ್ ದೇಶಪಾಂಡೆ ಹಾಗೂ ನಾ.ಸು.ಹರ್ಡೀಕರ ಅವರ ನೇತೃತ್ವದ ಸೇವಾದಳ ನೋಡಿಕೊಂಡಿತ್ತು. ಅಧಿವೇಶನ ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಇದರಿಂದ ಸಂತಸಗೊಂಡ ಗಾಂಧೀಜಿ ಅವರು ಸೇವಾದಳದ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿ ‘ಸೇವಾದಳ’ ಇನ್ನಷ್ಟು ರಾಷ್ಟ್ರವ್ಯಾಪ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಇನ್ನೂ ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ಕರ ವಿರೋಧಿಸಿ ಗಾಂಧೀಜಿ ಅವರು ದಂಡಿಯಾತ್ರೆ ಆರಂಭಿಸಿದರು. ಇದರ ಹಿನ್ನೆಲೆಯಲ್ಲಿ ಕಾರವಾರ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಾ.ಸು.ಹರ್ಡೀಕರ ಅವರು ತಮ್ಮ ಸೇವಾದಳದ ಸಿಬ್ಬಂದಿಯೊಂದಿಗೆ ಅಂಕೋಲಾಕ್ಕೆ ಹೋಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇನ್ನು ಕಾನೂನು ಭಂಗ ಚಳವಳಿ, ಪಿಕೆಟಿಂಗ್, ಅಸಹಕಾರ ಚಳವಳಿ ಹೀಗೆ ಸಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಕಾರ್ಯಕರ್ತರು ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.
ಆದರೆ, ೧೯೩೧ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಒಂದೇ ಸಂಘಟನೆ ಇರಲಿ ಎಂಬ ಉದ್ದೇಶದಿಂದ ಗಾಂಧೀಜಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸೇವಾದಳವನ್ನು ವಿಲೀನ ಮಾಡಿದರು. ನಂತರದ ದಿನಗಳಲ್ಲಿ ಸೇವಾದಳ ಒಂದು ಪಕ್ಷಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ನಾ.ಸು.ಹರ್ಡೀಕರ ಅವರು ೧೯೫೦ರಲ್ಲಿ ಭಾರತೀಯ ಸೇವಾದಳ ಸ್ಥಾಪನೆ ಮಾಡಿದರು. ೧೮೮೯ರಲ್ಲಿ ಧಾರವಾಡದಲ್ಲಿ ಜನಿಸಿದರಾದ್ರು ಸ್ವಾತಂತ್ರ್ಯಾನಂತ ಹರ್ಡೀಕರ ಅವು ಬೆಳಗಾವಿ ಜಿಲ್ಲೆಯ ಘಟಪ್ರಭಾಕ್ಕೆ ಬಂದು ನೆಲೆಸಿದರು. ಇಲ್ಲಿ ಅವರು ಕರ್ನಾಟಕ ಆರೋಗ್ಯ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಸೇವಾನಿರತ ಇರುವಾಗಲೇ ನಾ.ಸು.ಹರ್ಡೀಕರ ಅವರು ಆಗಸ್ಟ್ ೨೬ ೧೯೭೫ರಲ್ಲಿ ಅಸ್ತಗಂತರಾದರು. ಘಟಪ್ರಭಾದಲ್ಲಿ ಅವರ ಸಮಾಧಿ ಇದ್ದು, ಇದು ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ.

ರಾಯಣ್ಣನ ಕಥೆ ಹೇಳುವ ನಂದಗಡ

 ಮಂಜುನಾಥ ಗದಗಿನ



‘ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು’ ಹೀಗೆಂದು ತಾನು ಗಲ್ಲಿಗೇರುವ ಮುನ್ನ ಬಿಟ್ರಿಷರ ವಿರುದ್ಧ ಘರ್ಜಿಸಿ ತಾಯ್ನಾಡಿ ಗಾಗಿ ಪ್ರಾಣ ತ್ಯಾಗ ಮಾಡಿದ ದ ಏಕೈಕ ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

ರಾಯಣ್ಣ ಎಂಬ ಹೆಸರು ಕೇಳಿದರೆ ಸಾಕು ಬ್ರಿಟಿಷ ಸರ್ಕಾರವೇ ನಡಗುತ್ತಿತ್ತು. ಯಾಕೆಂದರೆ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ತನ್ನ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಆಂಗ್ಲರ ನಿದ್ದೆಗೇಡಿಸಿದ್ದ ವೀರ ಪರಾಕ್ರಮಿ, ಕಿತ್ತೂರು ರಾಣಿ ಚೆನ್ನಮ್ಮನ ಬಲಗೈಬಂಟ ಸಂಗೊಳ್ಳಿ ರಾಯಣ್ಣ.
ಇಡೀ ದೇಶದಲ್ಲಿ ಆಂಗ್ಲರ ಅಧಿಪತ್ಯ ಸ್ಥಾಪನೆಯಾಗಿ, ಸಣ್ಣಪುಟ್ಟ ಸಂಸ್ಥಾನಗಳನ್ನು ತಮ್ಮ ಅಧೀನಕ್ಕೆ ಪಡೆಯಬೇಕೆಂದು ಬ್ರಿಟಿಷರು ಕಾಯ್ದುಕುಳಿತ್ತಿದ್ದರು. ಇದೇ ವೇಳೆ ಸಮೃದ್ಧಭರಿತವಾಗಿದ್ದ ಕಿತ್ತೂರು ಸಂಸ್ಥಾನದ ಮೇಲೆ ಅವರ ಕಣ್ಣು ಬೀದಿತು. ಚೆನ್ನಮ್ಮನಿಗೆ ಗಂಡು ಸಂತಾನ ಇಲ್ಲದ ಕಾರಣ ದತ್ತು ತೆಗೆದುಕೊಂಡಿದ್ದಳು. ಇದನ್ನು ತಿಳಿದು ಬ್ರಿಟಿಷರು ದತ್ತುಪುತ್ರನಿಗೆ ಉತ್ತರಾಧಿಕಾರ ಹಕ್ಕಿಲ್ಲ ಎಂಬ ಕಾಯ್ದೆಯಡಿ ನೀವು ನಮಗೆ ಕಪ್ಪ ಕೊಟ್ಟು ಶರಣಾಗಬೇಕು ಎಂದು ತಿಳಿಸಿದಾಗ ಚೆನ್ನಮ್ಮ ನಾವೇಕೆ ನಿಮಗೆ ಕೊಡಬೇಕು ಕಪ್ಪ ಎಂದು ಘರ್ಜಿಸಿದ್ದಳು. ಇದರಿಂದ ಕುಪಿತರಾದ ಆಂಗ್ಲರು ಅಕ್ಟೋಬರ್ ೨೧, ೧೮೨೪ರಂದು ಬ್ರಿಟಿಷ ಅಧಿಕಾರಿ ಥ್ಯಾಕರೆ ಮುಂದಾಳತ್ವದಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ವೀರ ವನಿತೆ ರಾಣಿ ಚೆನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟಳು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ನೇತೃತ್ವದಲ್ಲಿ ಕಿತ್ತೂರಿನ ವೀರ ಸೈನಿಕರು ಮುನ್ನುಗ್ಗಿದ್ದರು. ಇದೇ ವೇಳೆ ಅಮಟೂರು ಬಾಳಪ್ಪನವರು ತಮ್ಮ ಖಡ್ಗದಿಂದ ಥ್ಯಾಕರೆ ರುಂಡ ಚಂಡಾಡಿದರು. ಭಯಗೊಂಡ ಆಂಗ್ಲರು ಅಲ್ಲಿಂದ ಕಾಲ್ಕಿತ್ತರು. ಇಷ್ಟಕ್ಕೆ ಸುಮ್ಮನಾಗದ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಆದರೆ ತಮ್ಮವರ ಮೋಸದಿಂದಲೇ ಕಿತ್ತೂರಿಗೆ ಸೋಲಾಯಿತು. ರಾಯಣ್ಣ, ಚನ್ನಮ್ಮ ಬ್ರಿಟಿಷರ ವಶವಾದರು. ಆದರೆ, ಕೆಲವು ದಿನಗಳ ನಂತರ ರಾಯಣ್ಣ ಬಿಡುಗಡೆಯಾದ.
ಬಂಡಾಯವೆದ್ದ ರಾಯಣ್ಣ:
ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಬ್ರಿಟಿಷರು ಕಿತ್ತುಕೊಂಡಿದ್ದರು. ಇದಷ್ಟೇ ಅಲ್ಲದೇ ಭೂಮಿಯ ಮೇಲಿನ ಕರಭಾರವನ್ನು ಹೆಚ್ಚಿಸಿದ್ದರು. ಇದರ ವಿರುದ್ಧ ರಾಯಣ್ಣ ತನ್ನದೊಂದು ಸೈನ್ಯ ಕಟ್ಟಿಕೊಂಡು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲೀಕರ ವಿರುದ್ಧ ಬಂಡಾವೆದ್ದ. ತನ್ನ ಯುದ್ಧ ತಂತ್ರಗಳಲ್ಲಿ ಒಂದಾದ ಗೆರಿಲ್ಲಾ ತಂತ್ರಗಾರಿಕೆ(ಶತ್ರುವಿಗೆ ಸಿಗದೇ, ಶತ್ರುಗಳ ಚಲನವಲನ ಅರಿತು ಯುದ್ಧ ಮಾಡುವ ತಂತ್ರ) ಬಳಸಿ ಭೂಮಾಲೀಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡು ಸುಟ್ಟುಹಾಕಿದ. ಅಲ್ಲದೇ, ಅವರಿಂದ ಕಿತ್ತುಕೊಂಡ ಹಣವನ್ನು ನಿರ್ಗತಿಕರಿಗೆ ಹಂಚತೊಡಗಿದ.
ಬೆಟ್ಟ ಗುಡ್ಡಗಳೇ ಅಡಗುತಾಣ:
ತನ್ನ ಗೆರಿಲ್ಲಾ ಯುದ್ಧದ ಮೂಲಕವೇ ಬ್ರಿಟಿಷ ಸರ್ಕಾರ ಬಿದ್ದೆಗೇಡಿಸಿದ್ದ ರಾಯಣ್ಣ ಚೆನ್ಮಮ್ಮನ ದತ್ತುಪುತ್ರನನ್ನು ಕಿತ್ತೂರಿನ ಉತ್ತರಾಧಿಕಾರಿಯನ್ನಾಗಿಸುವ ಛಲ ಹಾಗೂ ಬ್ರಿಟಿಷ ಸರ್ಕಾರ ಸೊಕ್ಕಡಗಿಸಲು ತನ್ನ ಸೈನ್ಯದೊಂದಿಗೆ ದಟ್ಟಡವಿಯಲ್ಲಿ ಅಡಗಿಕೊಂಡು ಬ್ರಿಟಿಷ ವಿರುದ್ಧ ರಣತಂತ್ರ ಹೆಣೆದು ಯುದ್ಧ ಸಾರುತ್ತಿದ್ದ. ಅದರಲ್ಲೂ ಖಾನಾಪುರ ತಾಲೂಕಿನ ಹಂಡಿಭಡಗನಾಥ, ಸಂಪಗಾಂವ, ನಂದಗಡ ಕಾನನದಲ್ಲಿ ರಾಯಣ್ಣ ಬಿಡಾರ ಹೂಡಿ ಬ್ರಿಟಿಷರ ವಿರುದ್ಧ ಯುದ್ಧ ಸಾರುತ್ತಿದ್ದ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ರಾಯಣ್ಣ ಸೈನ್ಯ ಹೆಚ್ಚು ಕಾರ್ಯಾಚರಣೆ ಮಾಡುತ್ತಿತ್ತು. ಇದು ಕೂಡಾ ಗೆರಿಲ್ಲಾ ಯುದ್ಧದ ಒಂದು ತಂತ್ರವಾಗಿತ್ತು.
ಮೋಸದಿಂದ ರಾಯಣ್ಣ ಸೆರೆ:
ಯುದ್ಧ ಮಾಡಿ ರಾಯಣ್ಣನ್ನು ಗೆಲಲ್ಲು ಅಸಾಧ್ಯವೆಂದು ತಿಳಿದ ಬ್ರಿಟಿಷರು ಕುತಂತ್ರ ಬುದ್ಧಿ ಪ್ರಯೋಗ ಮಾಡಿದರು. ರಾಯಣ್ಣನ ಸ್ವಂತ ಮಾವನಾಗಿದ್ದ ಲಕ್ಷ್ಮಣನನ್ನು ತಮ್ಮ ಕುತಂತ್ರದ ದಾಳವನ್ನಾಗಿ ಬಳಸಿಕೊಂಡರು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಬ್ರಿಟಿಷ ಸೈನಿಕರು ಆಕ್ರಮಣ ಮಾಡಿದರು. ಆಗ ರಾಯಣ್ಣ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ಕೊಡು ಎಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ಹೀಗಾಗಿ ರಾಯಣ್ಣ ಮೋಸದಿಂದ ಬ್ರಿಟಿಷರ ವಶವಾದನು.
ನಂದಗಡದಲ್ಲಿ ರಾಯಣ್ಣ ಸಮಾಧಿ:
ಸೆರೆಯಾಗಿದ್ದ ರಾಯಣ್ಣ ಆಶಯದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ೧೮೩೧ರ ಜನವರಿ ೨೬ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಗೆಲ್ಲಿಗೇರಿಸುವ ಮುನ್ನ ನಿನ್ನ ಕೊನೆಯಾಸೆ ಏನು ಎಂದು ಕೇಳಿದಾಗ ರಾಯಣ್ಣ ’ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು ಎಂದು ಘರ್ಜಿಸಿದ್ದ. ರಾಯಣ್ಣನನ್ನು ಗಲ್ಲಿಗೇರಿಸಿದ ನಂತರ ನೆಟ್ಟ ಆಲದ ಮರ ಇನ್ನೂ ಇದ್ದು, ಇಲ್ಲಿಗೆ ನಿತ್ಯ ನೂರಾರು ಜನರು ಬಂದು ರಾಯಣ್ಣನ ಸಮಾಧಿ ದರ್ಶನ ಪಡೆದು ನಮಗೂ ರಾಯಣ್ಣನತಹ ಮಗ ಹುಟ್ಟಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Wednesday, 20 July 2022

ಸ್ವಾತಂತ್ರ್ಯ ಸಿಗೋವರೆಗೂ ಲಗ್ನ ಒಲ್ಲೆ ಎಂದ ಅಣ್ಣೂ ಗುರೂಜಿ

 -


ಮಂಜುನಾಥ ಗದಗಿನ

ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರು ಹಲವರು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಗೋವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರಾನಂತರೂ ಮದುವೆಯಾಗದೇ ದೇಶಕ್ಕಾಗಿ ದುಡಿದು ಮಡಿದ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ ಅಣ್ಣು ಗುರೂಜಿ(ಬಾಳಕೃಷ್ಣ).
ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಎಲ್ಲೆಡೆ ವ್ಯಾಪಕವಾಗಿತ್ತು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ನಾಯಕರು ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸುವ ಭಾಷಣಗಳನ್ನು ಅಲ್ಲಲ್ಲಿ ಮಾಡುತ್ತಿದ್ದರು. ಹೀಗಾಗಿ ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಇಲ್ಲಿಂದ ಅವರು ಖಾದಿಯನ್ನೇ ಉಡಲು ಆರಂಭಿಸಿದರು. ಅವರ ತಾಯಿ ಕೂಡಾ ಖಾದಿ ಸೀರೆ ಮಾತ್ರ ಉಡುತ್ತಿದ್ದರು. ಇವರು ೧೯೦೫ರಲ್ಲಿ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಜನಿಸಿದರು. ೧೫ನೇ ವಯಸ್ಸಿನಲ್ಲೇ ತಂದೆ ಕಳೆದುಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬೆಳಗಾವಿಗೆ ಆಗಮಿಸಿದರು. ಇಲ್ಲಿ ಮರಾಠಿ ಭಾಷೆ ಕಲಿತು ೧೨ ರು.ಗೆ ಕಾರಕೂನ ಆಗಿ ಕೆಲಸ ಆರಂಭಿಸಿದರು. ಇದೇ ವೇಳೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕರ್ನಾಟಕ ಗಂಗಾಧರರಾವ್ ದೇಶಪಾಂಡೆ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು. ಇದರಿಂದ ಕೂಪಿತರಾದ ಅಣ್ಣು ಗುರೂಜಿ ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದರು.

ರಾಷ್ಟ್ರೀಯ ಶಾಲೆ ಆರಂಭ:
                                                                                                                                        

ಸಾತಂತ್ರ್ಯ ಹೋರಾಟಗಾರರಿಗೆ ಧೈರ್ಯ ಹಾಗೂ ರಾಷ್ಟ್ರೀಯ ಮನೋಭಾವ, ನೈತಿಕಗುಣಮಟ್ಟ ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಈ ಶಾಲೆಗೆ ಅವರೇ ಪಾಠ ಮಾಡುತ್ತಿದ್ದರು. ಈ ಶಾಲೆ ಬರೋಬ್ಬರಿ ಮೂರು ವರ್ಷ ಕಾಲ ನಡೆದು ನಂತರ ಸ್ಥಗಿತಗೊಂಡಿತು. ಅಲ್ಲಿವರೆಗೂ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡಿದೆ. ಈ ಶಾಲೆಯಿಂದಲೇ ಬಾಳಕೃಷ್ಣ ಇದ್ದ ಅವರು ಹೆಸರು ಅಣ್ಣು ಗುರೂಜಿ ಎಂದಾಯಿತು. ೧೯೨೪ರಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾರ್ಯಕರ್ತರಾಗಿ ಪಾಲ್ಗೊಂಡಿದ್ದರು. ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದರು.

ಜೈಲುವಾಸ:

ಬ್ರಿಟಿಷ್ ಸರ್ಕಾರದ ನಡೆಗಳನ್ನು ವಿರೋಧಿಸಿದಕ್ಕಾಗಿ ಅಣ್ಣು ಗುರೂಜಿ ಅವರು ಹಿಂಡಲಗಾ, ಯರವಾಡ ಸೇರಿದಂತೆ ಅನೇಕ ಜೈಲುಗಳಲ್ಲಿ ಬಂಧಿಯಾಗಿದ್ದರು. ಇನ್ನೂ ಉಪ್ಪಿನ ಸತ್ಯಾಗ್ರಹಕ್ಕೆ ಗಾಂಧೀಜಿ ಅವರು ಕರೆ ನೀಡಿದಾಗ ಇವರು ಮುಂಚೂಣಿಯಲ್ಲಿ ನಿಂತು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಈ ವೇಳೆ ಬಂಧನಕ್ಕೊಳಗಾಗಿ ಒಂಬತ್ತು ತಿಂಗಳು ಸೆರೆವಾಸ ಕೂಡಾ ಅನುಭವಿಸಿದರು. ಜೈಲಿನಲ್ಲೇ ಇದ್ದುಕೊಂಡು ಇಂಗ್ಲಿಷ್ ಕೂಡಾ ಕಲಿತರು.ನಂತರ ದಿನಗಳಲ್ಲಿ ಬ್ರಿಟಿಷ್ ಸರ್ಕಾರದ ಪ್ರತಿಯೊಂದು ದುರಾಡಳಿತ ನೀತಿಗಳನ್ನು ವಿರೋಧಿಸುತ್ತಾ ಜನಜಾಗೃತಿ ಮೂಡಿಸಲು ಆರಂಭಿಸಿದರು.

ಯುವಕರಲ್ಲಿ ಕಿಚ್ಚು ಹೆಚ್ಚಿಸಿದರು:

ಗಾಂಧೀಜಿ ಅವರ ಅನುಯಾಯಿ ಆಗಿದ್ದ ಇವರು ಗಾಂಧೀಜಿ ಅವರು ಕರೆ ನೀಡುತ್ತಿದ್ದ ಪ್ರತಿಯೊಂದು ಚಳವಳಿಯಲ್ಲೂ ಮುಂದಾಳತ್ವ ವಹಿಸಿಕೊಂಡು ಯಶಸ್ವಿಯಾಗಿಸುತ್ತಿದ್ದರು. ಸ್ವದೇಶಿ ವಸ್ತುಗಳ ಪ್ರಚಾರ, ವಿದೇಶಿ ವಸ್ತುಗಳ ಬಹಿಷ್ಕಾರ, ಶೆರೆ ಅಂಗಡಿಗಳ ಮುಂದೆ ಪಿಕೆಟಿಂಗ್, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ನಾ.ಸು.ಹರ್ಡೇಕರ ಮಂಜಪ್ಪ ಅವರು ಆರಂಭಿಸಿದ್ದ ಹಿಂದುಸ್ತಾನ ಸೇವಾದಳ ಸೇರಿದರು. ಈ ಮೂಲಕ ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಲತುಂಬಿದರು.ಇಷ್ಟೇ ಅಲ್ಲದೇ ೧೯೩೭ರಲ್ಲಿ ಹುದಲಿ  ಗ್ರಾಮದಲ್ಲಿ ಗಾಂಧಿ ಸೇವಾ ಸಂಘವನ್ನು ಸ್ಥಾಪಿಸಿ ಅಸ್ಪಶತೆ ನಿವಾರಣೆಗೆ ಶ್ರಮಿಸಿದರು.

ಪಿತೂರಿ ಮೂಲಕ ಬಂಧನ:

೧೯೪೭ರ ಚಲೇಚಾವ ಚಳವಳಿ ಮೂಲಕ ದೇಶದ ಸ್ವಾತಂತ್ರ್ಯದ ಹೋರಾಟ ವೇಗ ಪಡೆದುಕೊಂಡಿತು. ಈ ವೇಳೆ ಸರ್ಕಾರಿ ಕಚೇರಿ, ಪೊಲೀಸ್ ಠಾಣೆಗಳನ್ನು ಸುಡುವುದು, ರೈಲುಗಳ ಧ್ವಂಸ, ಸರ್ಕಾರಿ ಖಜಾನೆ ಲೂಟಿ ಹೀಗೆ ಕಿಚ್ಚು ಹೆಚ್ಚಿತು. ಈ ವೇಳೆ ಅಣ್ಣು ಗುರೂಜಿ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಈ ವೇಳೆ ಅವರ ಕಾರ್ಯಕ್ಷೇತ್ರ ಪಾಶ್ವಾಪುರದಲ್ಲಿ ಅವರ ತಂಡ ಅಡಗಿದೆ ಎಂಬ ಸುದ್ದಿ ತಳಿದು ಬ್ರಿಟಿಷರು ಗುಂಡಿನ ಮಳೆಗರೆದರು. ಈ ವೇಳೆ ಕೆಲವು ಮೃತಪಟ್ಟರು. ಇವರಲ್ಲಿ ಅಣ್ಣು ಗುರೂಜಿ ಅವರು ಮೃತಪಟ್ಟರು ಎಂದು ಬ್ರಿಟಿಷರು ಸಂತಸಪಟ್ಟರು. ಆದರೆ, ಅಣ್ಣು ಗುರುಜಿ ಮತ್ತಿತ್ತರು ಅಲ್ಲಿಂದ ಪರಾರಿಯಾಗಿದ್ದರು. ಈ ಸುದ್ದಿ ತಿಳಿದ ಬ್ರಿಟಿಷರು ಅಣ್ಣು ಗುರೂಜಿ ಹಾಗೂ ಅವರ ಜೊತೆ ಇದ್ದರನ್ನು ಹಿಡಿದುಕೊಟ್ಟರೆ ₹೫ ಸಾವಿರ ಕೊಡುವುದಾಗಿ ಘೋಷಣೆ ಮಾಡಿದರು. ಅನ್ಯರ ಪಿತೂರಿ ಮೂಲಕ ವಿಜಯಪುರದಲ್ಲಿ ಅಣ್ಣು ಗುರೂಜಿ ಬ್ರಿಟಿಷರ್ ಸೆರೆಯಾಗಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ನಂತರ ಬಿಡುಗಡೆಯಾಗಿ ಕೃಷಿ, ಕರ್ನಾಟಕ ಏಕೀಕರಣ, ಕನ್ನಡ ಸಂಘಟನೆ ಮಾಡಿ ೨೪-೦೭-೧೯೯೦ರಲ್ಲಿ ನಿಧನರಾದರು.

Wednesday, 16 December 2020

ಕುಂದಾನಗರಿಯೇ...😍

ಅನುಭವ ತುಂಬಿರೋ ಮನಸ್ಸಿನ ಭಾವನೇ..

ನಾ ಹಾಡುವೇ...ನಾ ಹಾಡುವೇ..

ಕುಂದಾನಗರಿಯೇ..ಕುಂದಾನಗರಿಯೇ..ಕುಂದಾನಗರಿಯೇ..


ಕುಂದಾನಗರಿ ಬಗ್ಗೆ ಹೇಳಲು ನಾ ಹಾಡುತೀರುವೇನು..

ನನಗೆ ವಂಚನೆ ಮಾಡಿಕೊಳ್ಳದೇ ನಾ ಹಾಡುತೀರುವೇನೂ, ಕುಂದಾನಗರಿ ಬಗ್ಗೆ ನಾ ಹೇಳಲು ನಾ ಹಾಡುತ್ತೀರುವೇನು,

ನನಗೆ ವಂಚನೆ ಮಾಡಿಕೊಳ್ಳದೇ ನಾ ಹಾಡುತ್ತೀರುವೇನೂ..

ಹೇಳುವೆ ನಾನಿನ್ನು ಹಾ ಭಾವನೆಗಳನು,

ಕುಂದಾನಗರಿಯೇ...ಕುಂದಾನಗರಿಯೇ...


ಕೇಳಿ ನೀವು ನನ್ನ ಹಾಡನು,

ಭಾವನೆಗಳ ತುಂಬಿ ನಾ ಹಾಡುತಿರುವೇನು,

ಕೇಳಿ ನೀವು ನನ್ನ ಹಾಡನ್ನು, ಭಾವನೆಗಳ ತುಂಬಿ ನಾ ಹಾಡುತೀರುವೇನು..


ಚೆನ್ನಮ್ಮ, ರಾಯಣ್ಣ ಹೆಸರು ಕೇಳಲು

ಕೆಚ್ಚದಿ ನಾ ಹಾಡುತೀರುವೇನು ಆ ಹಾಡನ್ನು..

ಅವರ ನೆನೆಯುವೆ, ನೆನೆದು ಹಾಡುವೆ.

ಕುಂದಾನಗರಿಯೇ.. ಕುಂದಾನಗರಿಯೇ...


ಅನುಭವ ತುಂಬಿರೋ ಮನಸ್ಸಿನ ಭಾವನೆ

ನಾ ಹಾಡುವೆ...ನಾ ಹಾಡುವೆ...


ಭಾವನೆಗಳ ನದಿಯು ಹರಿಯುವ ಸಮಯ, 

ಭಕ್ತಿಯಿಂದ ಹಾಡಿ, ನಾ ಎಲ್ಲ ಮರೆಯುವೆ....


ಕನಸನು ಕಂಡೆ, ಕನ್ನಡಿಗರು ಒಂದೆ.

ನಗು ಮೊಗದಿ ನಾ ಕನ್ನಡಿಗ ಎಂದೇ,

ಕನ್ನಡ ಎಂದು ಈ ಜಗದಲಿ ಸಾಯಬಾರದು,

ಕನ್ನಡಿಗರಿಗೂ ಕಿಚ್ಚಿದೆ, ತಿಳಿಯಿರಿ ನೀವಿನ್ನು...

ಕುಂದಾನಗರಿಯೇ... ಕುಂದಾನಗರಿಯೇ...


ಅನುಭವ ತುಂಬಿರೋ, ಮನಸಿನ ಭಾವನೆ, ನಾ ಹಾಡುವೆ..ನಾ ಹಾಡುವೆ....🇮🇳🇮🇳🙏🏼


*ಸಾಹಿತ್ಯ..ಮಂಜುನಾಥ ಗದಗಿನ*

Saturday, 26 September 2020

ಕೊಳ್ಳಗಳ ನಾಡು ಕಣ್ತುಂಬಿಕೊಳ್ಳ ಬನ್ನಿ



ಮಂಜುನಾಥ ಗದಗಿನ

ರಾಮದುರ್ಗ ಹಲವು ಐತಿಹಾಸಿಕ ಸ್ಥಳಗಳ ತವರೂರು. ಕೊಳ್ಳಗಳ ನಾಡು ರಾಮದುರ್ಗ. ಹಲವಾರು ಪೌರಾಣಿಕ ಸ್ಥಳಗಳನ್ನು ಹಾಗೂ ಪ್ರೇಕ್ಷಣಿಯ ಸ್ಥಳಗಳನ್ನು ತನ್ನೊಡಲೊಳಗೆ ಇಟ್ಟುಕೊಂಡಿರುವ ರಾಮದುರ್ಗ ಎಲ್ಲರ ಗಮನ ಸೆಳೆಯುತ್ತಿದೆ. ನೋಡ ಬಯಸಿದಷ್ಟು ಕೌತುಕಗಳು ಇಲ್ಲಿ ಕಾಣ ಸಿಗುತ್ತವೆ.
 ಶಬರಿಕೊಳ್ಳ:
ಬೆಳಗಾವಿ ಅರೆ ಮಲೆನಾಡು. ಸರ್ವಕಾಲಕ್ಕೂ ತಂಪು ಸೂಸುವ ನೆಲ. ಇನ್ನೂ ಮಳೆಗಾಲ ಬಂತೆಂದ್ರೆ ಸಾಕು ಪ್ರಕೃತಿ ತನ್ನ ಒಯ್ಯಾರದಿಂದಲ್ಲೇ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾಳೆ. ಇದಕ್ಕೆ ಕಾರಣ ಸುತ್ತಲ ಇರುವ ಅನೇಕ ಜಲಧಾರೆಗಳು. ಇವುಗಳಲ್ಲಿ ಸುರೇಬಾನದ ಶಬರಿಕೊಳ್ಳವು ಒಂದು.
ಹೌದು! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಇಂತಹದ್ದೊಂದು ಜಲಧಾರೆ ಇದೀಗ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದು. ಶಬರಿ ದೇವಿ ರಾಮನಿಗಾಗಿ ಕಾಯ್ದಳು ಎಂಬ ಪ್ರತೀತಿ ಇದೆ. ಶಬರಿ ರಾಮನಿಗಾಗಿ ಕಾಯ್ದದ್ದು ಇದೇ ಶಬರಿಕೊಳ್ಳದಲ್ಲಿ. ಇದೇ ಕಾರಣಕ್ಕೆ ಈ ಕ್ಷೇತ್ರಕ್ಕೆ ಶಬರಿಕೊಳ್ಳ ಎಂಬ ಹೆಸರು ಬಂದಿದ್ದು.೨೦೦ ಅಡಿಯಿಂದ ಧುಮ್ಮಿಕ್ಕು ಅಂತರಗಂಗೆಯೊಂದ ಈ ಸ್ಥಳದಲ್ಲಿ ಇದೇ ಎಂಬ ಮಾಹಿತಿ ಬಹುತೇಕ ಜನರಿಗೆ ತಿಳಿದಯ ವಿಷಯವಾಗಿದೆ. ಆದರೆ, ಇಲ್ಲೊಮ್ಮಿ ಭೇಟಿ ನೀಡಿದರೆ ಸಾಕು ಎಂಬ ವ್ಯಕ್ತಿ ಕೂಡಾ ಇಲ್ಲಿಯ ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗದೇ ಇರನು. ಏಕೆಂದ್ರೆ ಸುತ್ತಲು ಬೆಟ್ಟಗುಡ್ಡ, ಇದರೊಟ್ಟಿಗೆ ಝಳು,ಝುಳು ಹರಿವ ಜಲಧಾರೆ. ಒಟ್ಟಿನಲ್ಲಿ ಶಬರಿಕೊಳ್ಳ ಸೌಂದರ್ಯ ಮಾತ್ರ ಅನನ್ಯ.
ಇಲ್ಲಿಯ ಶಬರಿ ದೇವಿ ಸುರೇಬಾನ ಗ್ರಾಮದ ಗ್ರಾಮದೇವತೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ನೆಲೆಸಿದ್ದಾಳೆ. ಈ ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯುತ್ತಿವೆ. ಆದರೆ ಬೇಸಿಗೆಕಾಲದಲ್ಲಿ ಈ ಎರಡು ಹೊಂಡಗಳ ನೀರು ನೆಲಕಚ್ಚಿದ್ದವು. ಆದರೆ ಇದೀಗ ಅಧಿಕ ಮಳೆಯಾಗಿದ್ದರಿಂದ ಅಂತರಗಂಗೆ ಹಾಗೂ ಹೊಂಡಗಳು ಭರಪೂರ ನೀರಿನಿಂದ ಕಂಗೊಳಿಸುತ್ತಿವೆ.
ತೋರಗಲ್ಲ ಕೋಟೆ:
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಬಗ್ಗೆ ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಕೋಟೆ ಕೂಡ ಏಳು ಸುತ್ತಿನ ಕೋಟೆ ಆಗಿತ್ತು ಎಂದು ಹೇಳಲಾಗುತ್ತದೆ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ ಕೋಟೆಯ ಕಥೆ. ಏಳು ಸುತ್ತಿನ ಕೋಟೆ ಇದಾಗಿತ್ತಂತೆ. ಈಗ ಐದು ಆವರಣಗಳನ್ನು ಮಾತ್ರ ಕಾಣಲು ಸಾಧ್ಯ. ನಾಲ್ಕು ದಿಕ್ಕಿನಲ್ಲೂ ಒಂದೊಂದು ಬುರುಜು (ಗೊಮ್ಮಟ) ಇದೆ. ಕೋಟೆ ಪ್ರವೇಶಕ್ಕೆ ಮೊದಲು ನಾಲ್ಕು ದ್ವಾರಗಳು ಇದ್ದವಂತೆ. ಸದ್ಯ ಪೂರ್ವದ ದ್ವಾರ ಮಾತ್ರ ಬಳಕೆಯಲ್ಲಿದೆ. ಒಳಭಾಗದಲ್ಲಿ ಕಟ್ಟೆಯಿದ್ದು, ದಣಿದು ಬಂದವರು ಅರೆಕ್ಷಣ ಕುಳಿತರೆ ಸಾಕು, ಜೋಂಪು (ನಿದ್ರೆ) ಆವರಿಸುತ್ತದೆ. ಒಳಗಿನ ಕಟ್ಟಡವೊಂದರ ಮೇಲೆ ಇಬ್ಬರು ಡುಮ್ಮಣ್ಣರ ಕೆತ್ತನೆಗಳಿವೆ. ಕೋಟೆಯ ಒಳಭಾಗ ಸುಮಾರು ನೂರು ಎಕರೆಯಷ್ಟು ವಿಸ್ತಾರವಾಗಿದೆ. ಮಧ್ಯದಲ್ಲಿರುವ ರಾಜವಾಡೆ ಪ್ರದೇಶವೇ ಐದು ಎಕರೆಗಳಷ್ಟು ದೊಡ್ಡದಾಗಿದೆ. ಪಕ್ಕದಲ್ಲೇ ಭೂತಂಕುಶ ಅರಸ ನಿರ್ಮಿಸಿದ ಭೂತನಾಥ ದೇವಾಲಯ ಇಲ್ಲಿನ ಆಕರ್ಷಣೆ. ಇದು ಚಾಲುಕ್ಯ ಶೈಲಿಯಲ್ಲಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಸುಖಾಸನ ಸಭಾಮಂಟಪ, ೧೨ ಕಂಬಗಳ ನವರಂಗ, ಗರ್ಭಗೃಹದಲ್ಲಿರುವ ಶಿವಲಿಂಗ ಅದರ ಎದುರಿಗೆ ನಂದಿ, ಸುತ್ತಲಿನ ಗೋಡೆಯ ಮೇಲಿನ ಶಿಲ್ಪಕಲೆ ಮನಸೂರೆಗೊಳ್ಳುತ್ತವೆ. ಶಿವ ದೇವಾಲಯ, ದುರ್ಗಾದೇವಾಲಯ, ಗಣಪತಿ ವಿಜಯನಗರ ವಾಸ್ತು ಶೈಲಿಯ ಮಾದರಿಯಲ್ಲಿವೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ. ಈ ಕೋಟೆಯಲ್ಲಿ ಕನ್ನಡ ಹಾಗೂ ಪರ್ಶಿಯನ್ ಭಾಷೆಯ ಶಾಸನಗಳನ್ನು ಕಾಣಬಹುದಾಗಿದೆ. ಸುತ್ತಲ ಪರಿಸರವನ್ನು ಮಲಪ್ರಭೆ ಸುಂದರವನ್ನಾಗಿಸಿದ್ದಾಳೆ.
ಮೇಗುಂಡೇಶ್ವರಕೊಳ್ಳ:
ಇದು ಕೂಡಾ ರಾಮದುರ್ಗ ತಾಲೂಕಿನ ಐತಿಹಾಸಿಕ ಪ್ರೇಕ್ಷಣಿಯ ಸ್ಥಳವಾಗಿದೆ. ರಾಮದುರ್ಗ ಪಟ್ಟಣದಿಂದ ೫-೬ ಕಿಮೀ ದೂರದಲ್ಲಿದೆ ಈ ಸ್ಥಳ. ಇಲ್ಲಿಯೂ ಸರ್ವ ಕಾಲಕ್ಕೂ ಬತ್ತದ ಹೊಂಡವೊಂದಿದೆ. ಇದಕ್ಕೆ ಮೇಗುಂಡೇಶ್ವರಕೊಳ್ಳ ಎಂದು ಕರೆಯುತ್ತಾರೆ. ಇಲ್ಲಿಯ ಜಲವನ್ನು ತೀರ್ಥರೂಪವಾಗಿ ಜನರಿಗೆ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ಇಲ್ಲಿಗೆ ಬಂದ ಜನತೆ ಈ ನೀರನ್ನು ಕೊಡ ಅಥವಾ ಬಾಟಲ್ ಗಳಲ್ಲಿ ತುಂಬಿಕೊಂಡು ತೀರ್ಥ ರೂಪದಲ್ಲಿ ನಿತ್ಯ ಸೇವಿಸುತ್ತಾರೆ.
ಸಿದ್ಧೇಶ್ವರಕೊಳ್ಳ:
ಇಲ್ಲಿರುವ ದೇವಾಲಯ ಚಾಲುಕ್ಯರ ಕಾಲದ್ದು ಎಂದು ಹೇಳಲಾಗುತ್ತಿದೆ. ಹಲವಾರು ಪವಾಡಗಳು ನಡೆದ ಸ್ಥಳ ಇದು. ದೇವಸ್ಥಾನದ ಹಿಂದಗಡೆ ಒಂದು ಜಲಮೂಲವಿದೆ. ಈ ಜಲಮೂಲ ಅನಾದಿ ಕಾಲದಿಂದಲೂ ಬತ್ತಿಲ್ಲ. ಈ ಜಲಮೂಲಕ್ಕೆ ಸಿದ್ದಪ್ಪಜ್ಜನಕೊಳ್ಳ, ಮೇಗುಂಡಪ್ಪನಕೊಳ್ಳ ಎಂದು ಕರೆಯಲಾಗುತ್ತಿದೆ. ಇಲ್ಲಿಯ ನೀರನ್ನೇ ದೇವರ ಅಭಿಷೇಕ, ತೀರ್ಥವನ್ನಾಗಿ ನೀಡಲಾಗುತ್ತಿದೆ.
ಗೊಡಚಿ ವೀರಭದ್ರೇಶ್ವ:
ಬೆಳಗಾವಿಯಿಂದ ೮೦ ಕಿಮೀ ದೂರದ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ದೇವಾಲಯ ನಾಡಿನ ಮನೆ,ಮನದ ಮಾತಾಗಿದೆ. ನಾಡಿನ ಅನೇಕ ಪುಣ್ಯಕ್ಷೇತ್ರಗಳ ಪೈಕಿ ಈ ಗೊಡಚಿ ಕ್ಷೇತ್ರವು ಒಂದು. ತನ್ನದೇ ಇತಿಹಾಸ, ಪರಂಪರೆಯ ಮೂಲಕ ರಾಜ್ಯಾದ್ಯಂತ ಭಕ್ತವೃಂದವನ್ನು ಹೊಂದಿ ಗಮನ ಸೆಳೆಯುತ್ತಿದೆ.ಉತ್ತರಕರ್ನಾಟಕದಲ್ಲಿ ಹಲವಾರು ಪ್ರಮುಖ ಜಾತ್ರೆಗಳು ನಡೆಯುತ್ತಿವೆ ಅವುಗಳಲ್ಲಿ ಉತ್ತರ ಕರ್ನಾಟಕದ ಧರ್ಮಸ್ಥಳ ಎಂದು ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಗೋಡಚಿಯ ವೀರಭದ್ರೇಶ್ವರ ಜಾತ್ರೆಯು ಡಿಸೆಂಬರ ೨೨ರಿಂದ ೫ ದಿನಗಳ ಕಾಲ ನಡೆಯಲಿದೆ. ಗೊಡಚಿ ಕ್ಷೇತ್ರವು ಕರ್ನಾಟಕದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು ಈ ಕ್ಷೇತ್ರದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಅದು ನಮ್ಮ ಅರಿವಿಗೆ ಬರುತ್ತದೆ. ಅದಕ್ಕಾಗಿ ಜಾತ್ರೆಯ ವಿಷಯಕ್ಕಿಂತ ಮೊದಲು ಗೋಡಚಿ ಕ್ಷೇತ್ರದ ಬಗ್ಗೆ ತಿಳಿಸದೆ ಹೋದರೆ ಪ್ರಮಾದವಾಗುತ್ತದೆ. ಗೋಡಚಿ ಕ್ಷೇತ್ರವು ಬಾದಾಮಿ ಚಾಲುಕ್ಯರ ಕೀರ್ತಿವರ್ಮನಿಂದ ಹಿಡಿದು ಕೊಲ್ಹಾಪೂರ ಸಂಸ್ಥಾನದ ಭಾಗಕ್ಕೆ ಶಿ ಕರವೀರಷಿರ ನಾಡೆಂದು ಹೆಸರು ಬಂದಿದೆ ಎಂದು ಗೋಡಚಿ ಗ್ರಾಮದಲ್ಲಿ ದೊರೆತ ತಾಮ್ರಪಟದಲ್ಲಿ ಶಿಕೆತ್ತಿಅರಸಷಿ ಎಂಬುದರಿಂದ ಬಂದಿದೆ ಎಂಬುದು ಇತಿಹಾಸಕಾರರ ಅನಿಸಿಕೆಯಾಗಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಸೇರುವ ಗೋಡಚಿಯ ವೀರಭದ್ರೇಶ್ವರ ಜಾತ್ರೆಯ ವಿಶೇಷವೆಂದರೆ ಬೆಳವಲು(ಬಳೂಲ)ಕಾಯಿ, ಬೋರೆ (ಬಾರಿ) ಹಾಗೂ ಬಾಳೆಹಣ್ಣುಗಳ ಮಾರಾಟ ಈ ಜಾತ್ರೆಯ ವಿಶೇಷವಾಗಿದೆ.
ಶಿವನಮೂರ್ತಿ:
ರಾಮದುರ್ಗ ತಾಲೂಕಿನ ಮೂಳ್ಳೂರ ಬೆಟ್ಟದಲ್ಲಿ ಮೇಲೆ ನಿರ್ಮಾಣ ಗೊಂಡ ೭೮ ಅಡಿ ಎತ್ತರದ ಶಿವನ ಮೂರ್ತಿ ರಾಜ್ಯದ ಎರಡನೇ ದೊಡ್ಡ ಶಿವನಮೂರ್ತಿಯಾಗಿದೆ. ಮುರಡೇಶ್ವರ ಮಾದರಿಯಲ್ಲಿ೧.೫ ಕೋಟಿ ವೆಚ್ಚದಲ್ಲಿ ಬೃಹತ ಶಿವನಮೂರ್ತಿ ಹಾಗೂ ಉದ್ಯಾನವನ ನಿರ್ಮಿಸಿ  ೨೦೧೮ರ  ಶಿವರಾತ್ರಿ ದಿನದಂದು ಲೋಕಾರ್ಪಣೆ ಮಾಡಲಾಗಿದೆ.ಶಿವನಮೂರ್ತಿ ಕೆಳ ಮಹಡಿಯಲ್ಲಿ ಈಶ್ವರಲಿಂಗುವನ್ನು ಮಧ್ಯಪ್ರದೇಶದ ನರ್ಮಾದ ನದಿಯ ದಡದಲ್ಲಿರುವ ಓಂಕಾರೇಶ್ವರ ದೇವಸ್ಥಾನದಿಂದ ತಂದು ಕೂಡಿಸಲಾಗಿದೆ. ಇದು ಕೂಡಾ ಉತ್ತಮ ಪ್ರೇಕ್ಷಣಿಯ ಸ್ಥಳವಾಗಿದೆ.
---
ಹೋಗುವುದು ಹೇಗೆ?
ಬೆಳಗಾವಿಯಿಂದ ೧೧೦ ಕಿಮೀ ರಾಮದುರ್ಗ ಇದೆ. ಅಲ್ಲಿಂದ ಶಬರಿಕೊಳ್ಳ ೧೪ ಕಿಮೀ ಇದೆ. ರಾಮದುರ್ಗದಿಂದ ಸುರೇಬಾನಕ್ಕೆ ಬಸ್ ಮೂಲಕ ಹಾಗೂ ಬೈಕ್ ಮೂಲಕವೂ ಹೋಗಬಹುದು. ರಾಮದುರ್ಗದಿಂದ ಸುರೇಬಾನದಿಂದ ಶಬರಿಕೊಳ್ಳಕ್ಕೆ ಟಂಟಂ ಇರುತ್ತವೆ. ಆದರೆ, ಶಬರಿಕೊಳ್ಳದಲ್ಲಿ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಊಟದ ವ್ಯವಸ್ಥೆ ಕೂಡಾ ಇಲ್ಲ. ಇನ್ನೂ ರಾಮದುರ್ಗದಿಂದ ತೋರಗಲ್ಲ ಕೋಟೆ ೧೫ ಕಿಮೀ ಇದೆ. ಗೊಡಚಿ ಕೂಡಾ ೧೭ ಕಿಮೀ ಆಗುತ್ತದೆ. ಸಿದ್ಧೇಶ್ವಕೊಳ್ಳ, ಮೇಗುಂಡೇಶ್ವರಕೊಳ್ಳ ೧೦ ಕಿಮಿ ಆಗುತ್ತದೆ. ಆದರೆ, ಎಲ್ಲಿವೂ ಉಳಿದುಕೊಳ್ಳುವ ಹಾಗೂ ಊಟದ ವ್ಯವಸ್ಥೆ ಇಲ್ಲ.

Tuesday, 29 October 2019

ಸರಿಗಮಪದಲ್ಲಿ "'ಓಂಕಾರ''



ಮಂಜುನಾಥ ಗದಗಿನ
ಯಾವುದೇ ದೊಡ್ಡ ಮಟ್ಟದ ವೇದಿಕೆ ಅಲಂಕರಿಸದೇ ಘಟಾನುಘಟಿ ಸ್ಪರ್ಧಾಳುಗಳ ಮಧ್ಯೆ ಹಾಡಿ ವಿಜೇತರಾಗುವುದು ಸಾಮಾನ್ಯದ ಮಾತಲ್ಲ. ಆದರೆ, ಶ್ರದ್ಧೆ ಮತ್ತು ಗೆಲ್ಲಬೇಕು ಎಂಬ ಹಂಬಲ ಇದ್ದರೆ ಯಾವುದು ಅಸಾಧ್ಯವಲ್ಲ ಎಂದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರನ್ನು ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ಬಾಲಕ.
ಹೌದು! ಆತ ಗೋಕಾಕದ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರ ವಿಜೇತ ಓಂಕಾರ ಪತ್ತಾರ. ಮನೆಯಲ್ಲಿ ಯಾರಿಗೂ ಸಂಗೀತದ ಗಂಧ ಗಾಳಿಯು ಗೊತ್ತಿಲ್ಲ. ಆದರೆ, ಈತ ಮಾತ್ರ ಸಂಗೀತ ದಿಗಜ್ಜರನ್ನು ಮೆಚ್ಚಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಮಾತ್ರ ಆಶ್ಚರ್ಯವೇ ಸರಿ.
ಶಿಕ್ಷಕರೇ ಕಾರಣ:
ಓಂಕಾರ ಪತ್ತಾರ ಮೂರನೇ ತರಗತಿಯಲ್ಲಿ ಓದುತ್ತಿರಬೇಕಾದರ, ಅದೇ ಶಾಲೆ ಶಶಿಕಲಾ ಎಂಬ ಶಿಕ್ಷಕರು ಓಂಕಾರ ಅವರಲ್ಲಿರುವ ಸಂಗೀತ ಪ್ರತಿಭೆಯನ್ನು ಮೊಟ್ಟಮೊದಲ ಬಾರಿ ಗುರುತಿಸಿದರು. ಅದು ಓಂಕಾರ ಅದೊಂದು ಕಾರ್ಯಕ್ರಮದಲ್ಲಿ ಅಮೋಘವಾಗಿ ಹಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದನು. ಶಶಿಕಲಾ ಮೇಡಂ ಓಂಕಾರನಲ್ಲಿ ಏನೊಂದು ವಿಶೇಷವಾದ ಪ್ರತಿಭೆಯಿದೆ. ಅದನ್ನು ಸೂಕ್ತವಾಗಿ ಗುರುತಿಸಬೇಕು ಎಂದುಕೊಂಡು ಈ ವಿಷಯವನ್ನು ಓಂಕಾರ ಪಾಲಕರಿಗೆ ತಿಳಿಸಿದರು. ಆದರೆ, ಓಂಕಾರ ಪಾಲಕರು ಇದನ್ನು ಅಷ್ಟೊಂದು ತಲೆಗೆ ಹಾಕಿಕೊಳ್ಳದೇ ಅಸಡ್ಡೆ ತೋರಿದರು. ಆದರೆ, ಶಶಿಕಲಾ ಮೇಡಂ ಮಾತ್ರ ಓಂಕಾರನಲ್ಲಿ ಇರುವ ಪ್ರತ್ರಿಭೆಯನ್ನು ಗಮನಿಸುತ್ತಾ ಅವನ ಪಾಲಕೆ ಮೇಲೆ ಒತ್ತಡ ಹಾಕಿದರು. ಇದರಿಂದ ಓಂಕಾರ ಪಾಲಕರು ಸಂಗೀತ ಶಾಲೆಗೆ ಸೇರಿಸಿದರು. ಆವಾಗಿನಿಂದ ಓಂಕಾರ ಶಿಸ್ತು ಬದ್ಧ ಸಂಗೀತ ಮಾಡಲು ಪ್ರಾರಂಭಿಸಿದ. ಹೀಗಾಗಿ ಗೋಕಾಕ ಸುತ್ತಲ ಅನೇಕ ಕಡೆಗಳಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಸಾಗಿದ.
ಸಿದ್ಧಾರೂಡರ ಕೃಪೆ:
ಓಂಕಾರ ತಾಯಿ ಊರು ಹುಬ್ಬಳ್ಳಿ. ಸಿದ್ಧಾರೂಡ ಮಠದ ಹಿಂದೆ ಇವರ ಮನೆ ಇದ್ದ ಕಾರಣ ಓಂಕಾರ ಹುಬ್ಬಳ್ಳಿಗೆ ಭೇಟಿ ನೀಡಿದಾಗೊಮ್ಮೆ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುತ್ತಿದ್ದ. ಈ ವೇಳೆ ಅಲ್ಲಿಯೇ ಕೆಲವು ಗಂಟೆಗಳ ಕಾಲ ಇರುತ್ತದ್ದ. ಈ ವೇಳೆ ಅಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ಹಾಗೂ ಪ್ರವಚನಗಳನ್ನು ಆಲಿಸುತ್ತಾ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ. ಹೀಗಾಗಿ ಶಾಲೆಯಲ್ಲಿ ಅತ್ಯುತ್ತಮವಾಗಿ ಹಾಡಲು ಆರಂಭಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಿದ್ದ.
ದೊಡ್ಡ ವೇದಿಕೆ ಇಲ್ಲ:
ಓಂಕಾರ ಒಬ್ಬ ಉತ್ತಮ ಹಾಡುಗಾರ ಎಂದು ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಗೋಕಾಕ ಸುತ್ತಲ ಕಾರ್ಯಕ್ರಮಗಳು ನಡೆದರೆ ಓಂಕಾರನನ್ನು ಹಾಡುಗಾರನನ್ನಾಗಿ ಕರೆಸುತ್ತಿದ್ದರು. ಆದರೆ, ಈತ ಪಾಲ್ಗೊಳ್ಳುತ್ತಿದ್ದದ್ದು ಜಾತ್ರಾ ಮಹೋತ್ಸವ, ಬೀಳ್ಕೊಡುಗೆ ಸಮಾರಂಭಗಲ್ಲಿ ಮಾತ್ರ ಹಾಡುತ್ತಿದ್ದ. ಅತೀ ದೊಡ್ಡ ವೇದಿಕೆ ಎಂದರೆ ಪ್ರತಿ ವರ್ಷ ನಡೆಯುವ ಸತೀಶ ಶುಗರ್ಸ್‌ ಅವಾರ್ಡ್. ಈ ಕಾರ್ಯಕ್ರಮದಲ್ಲಿ ಹಲವು ಬಾರಿ ವಿಜೇತ ಕೂಡಾ ಆಗಿದ್ದಾರೆ.
ದೊಡ್ಡ ಗೆಲವು:
ಗೋಕಾಕನಲ್ಲಿ ನಡೆದ ಆಡಿಷನ್‌ನಲ್ಲಿ ಓಂಕಾರ ಪಾಲ್ಗೊಂಡಾಗ ಅವನಿಗೆ ಗೊತ್ತಿರಲಿಲ್ಲ. ನಾನು ಸೆಲೆಕ್ಷನ್ ಆಗುತ್ತೇನೆ ಎಂದು. ಆದರೆ, ಎರಡು ಸುತ್ತಗಳನ್ನು ಯಶಸ್ವಿಯಾಗಿ ಪೂರೈಸಿ ಕೊನೆಗೆ ಸರಿಗಮಪಕ್ಕೆ ಆಯ್ಕೆಯಾದ. ನಂತರ ಸರಿಗಮಪದಲ್ಲಿ ಪ್ರತಿಸಾರಿಯೂ ಗೊಲ್ಡನ್ ಬಜರ್ ಪಡೆದುಕೊಳ್ಳಲು ಪ್ರಾರಂಭಿಸಿದ. ಅಲ್ಲಿ ಎಲ್ಲರೂ ದೊಡ್ಡ ದೊಡ್ಡ ಸಂಗೀತ ಗುರುಗಳಿಂದ ಕಲಿತವರೇ ಇದ್ದರೂ, ನಾನು ಮಾತ್ರ ಅಷ್ಟೊಂದು ಸಂಗೀತ ಕಲಿತಿರಲ್ಲಿ. ಆದರೆ, ನನ್ನಲ್ಲಿ ಕಲಿಬೇಕು ಎಂಬ ಛಲ ಇತ್ತು. ಹೀಗಾಗಿ ನಾನು ದಿನನಿತ್ಯ ಸರಿಗಮಪ ವೇದಿಕೆಯಲ್ಲೇ ಅಭ್ಯಾಸ ಮಾಡಿ ವೇದಿಕೆ ಮೇಲೆ ದೃಢವಾಗಿ ಹಾಡುತ್ತಿದ್ದೇ ಹೀಗಾಗಿ ಈ ಸಾರಿಯ ಚಾಂಪಿಯನ್ ಆಗಲು ಕಾರಣವಾಯಿತು ಎಂದು ಹೇಳುತ್ತಾನೆ ಓಂಕಾರ.
ಪೈನಲನಲ್ಲಿ ತೀವ್ರವಾದ ಪೈಪೋಟಿ ಇತ್ತು. ಆದರೆ, ಕರುನಾಡಿನ ಜನರ ಓಂಕಾರ ಕೈ ಹಿಡಿದಿದ್ದರಿಂದ ಪೈನಲ್‌ನಲ್ಲಿ ವಿಜೇತದ ಮಾಲೆ ಧರಿಸಿ ₹೩೦ ಲಕ್ಷ ಬೆಲೆ ಬಾಳುವ ಸೈಟ್ ತನ್ನದಾಗಿಸಿಕೊಂಡ. ಗುರು ಕಿರಣ್ ಎರಡನೇ ಸ್ಥಾನ ಪಡೆದುಕೊಂಡ.ಸುನಾದ್ ಮೂರನೇ ಸ್ಥಾನ ಪಡೆದುಕೊಂಡ. ಒಟ್ಟಿನಲ್ಲಿ ತಂದರೆ ಪತ್ತಾರಿಕೆ, ತಾಯಿ ಗೃಹಣಿ ಇದ್ದರೂ, ಓಂಕಾರ ಪಾತ್ರ ಸಂಗೀತದಲ್ಲಿ ಚಾಂಪಿಯನ್ ಆಗಿದ್ದು ಮಾತ್ರ. ಇತರೆ ಬಾಲಕರಿಗೆ ಸ್ಫೂರ್ತಿಯಾಗಿದೆ. ಓಂಕಾರನ ಸಂಗೀತನ ನಿನಾನ ಇನ್ನಷ್ಟು ಹೊರ ಹೊಮ್ಮಲಿ ಎಂಬ ಆಶಯ ಎಲ್ಲರದ್ದು.

Saturday, 26 October 2019

ನೋಡ ಬನ್ನಿ ಬೆಳಗಾವಿ ರಾಜ್ಯೋತ್ಸವ!


ಮಂಜುನಾಥ ಗದಗಿನ
ರಾಜಕೀಯ ಶಕ್ತಿ ಎಂದೇ ಬಿಂಬಿತವಾಗಿರುವ ಬೆಳಗಾವಿ ಭಾಷೆ ಹಾಗೂ ಗಡಿ ವಿವಾದಿಂದ ಒಂದಿಲ್ಲವೊಂದು ರೀತಿಯಲ್ಲಿ ರಾಜ್ಯದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಆದರೆ, ನವೆಂಬರ್ ೧ ಬಂತೆಂದರೆ ಸಾಕು ರಾಜ್ಯದ ಮನೆ, ಮನದ ಮಾತಾಗಿ ಬಿಡುತ್ತದೆ ಕುಂದಾನಗರಿ ಬೆಳಗಾವಿ. ಇದಕ್ಕೆ ಕಾರಣ ಅದ್ಧೂರಿ ರಾಜ್ಯೋತ್ಸವ.
ಹೌದು! ಇಡೀ ರಾಜ್ಯದಲ್ಲೇ ಕನ್ನಡ ರಾಜ್ಯೋತ್ಸವವನ್ನು ಒಂದು ದೊಡ್ಡ ಹಬ್ಬ ಎಂಬಂತೆ ಆಚರಿಸುವುದು ಅದು ಬೆಳಗಾವಿಯಲ್ಲಿ ಮಾತ್ರ. ಪ್ರತಿ ವರ್ಷ ಬರುವ ಹಬ್ಬಗಳನ್ನು ಕೂಡಿ ಆಚರಿಸುತ್ತಾರೋ ಇಲ್ಲ, ಆದ್ರೆ ರಾಜ್ಯೋತ್ಸವ ಬಂತು ಎಂದರೆ ಸಾಕು ಜಿಲ್ಲೆಯಲ್ಲಿ ಕನ್ನಡ. ಕನ್ನಡ ಎಂಬುವುದು ಘೋಷ ವ್ಯಾಕ್ಯವಾಗಿ ಬಿಡುತ್ತದೆ. ಅಷ್ಟರ ಮಟ್ಟಿಗೆ ಬೆಳಗಾವಿ ರಾಜ್ಯೋತ್ಸವ ಎಲ್ಲರ ಹಬ್ಬವಾಗಿ ಬಿಟ್ಟಿದೆ.
ಯಾಕೆ ಇಷ್ಟೊಂದು ಅದ್ಧೂರಿ?:
ಬೆಳಗಾವಿ ಗಡಿ ಪ್ರದೇಶ. ಇದೇ ಕಾರಣಕ್ಕ ನೆರೆ ಮಹಾರಾಷ್ಟ್ರ ಪದೇಪದೇ ಕಾಲು ಕೆದರಿಕೊಂಡು ಗಡಿ ವಿವಾದ ಹುಟ್ಟು ಹಾಕಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಲೇ ಇರುತ್ತದೆ. ಇನ್ನು ಭಾಷಾವಾರು ರಾಜ್ಯ ರಚನೆ ಮುಂದಾದಾಗ ನಮ್ಮನ್ನು ಕಡೆಗಣಿಸಿ ರಾಜ್ಯ ರಚನೆ ಮಾಡಲಾಗಿದೆ ಎಂದು ಬೆಳಗಾವಿಯ ಮರಾಠಿ ಭಾಷಿಕರು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ವತಿಯಿಂದ ರಾಜ್ಯೋತ್ಸವ ದಿನದಂದು ಪ್ರತಿವರ್ಷ ಕಪ್ಪು ಪಟ್ಟಿ ಧರಿಸಿಕೊಂಡು ಕರಾಳ ದಿನ ಆಚರಿಸುತ್ತಾ ಬಂದಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಹಲವು ಕಟ್ಟುನಿಟ್ಟಿನ ಸೂಚನೆ ಮೇರೆ ಅನುಮತಿ ನೀಡುತ್ತಾ ಬಂದಿದೆ. ಆದರೆ, ಎಂಇಎಸ್ ಮಾತ್ರ ಕೆಲವು ಸಾರಿ ಜಿಲ್ಲಾಡಳಿತದ ಷರತ್ತುಗಳನ್ನು ಮುರಿದು ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದೆ. ಎಂಇಎಸ್ ಹಾಗೂ ಮಹಾರಾಷ್ಟ್ರಕ್ಕೆ ಸೆಡ್ಡು ಹೊಡೆಯಬೇಕೆಂಬ ಕಾರಣ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿವೆ.
ಕನ್ನಡಮಯ:                                                                              
ನವೆಂಬರ್ ೧ ಬೆಳಗಾವಿಗರ ಪಾಲಿಗೆ ಅವಿಸ್ಮರಣೀಯ ದಿನ. ರಾಜ್ಯೋತ್ಸವ ಒಂದು ತಿಂಗಳು ಇರುವಾಗಲೇ ಕನ್ನಡ ರಾಜ್ಯೋತ್ಸವದ ತಯಾರಿಗಳು ಆರಂಭಗೊಂಡಿವೆ. ಹಲವು ಕನ್ನಡಪರ ಸಂಘಟನೆಗಳು ಯೋಜನೆಗಳನ್ನು ಹಾಕಿಕೊಂಡು ಕನ್ನಡಹಬ್ಬಕ್ಕೆ ತಯಾರಿ ನಡೆಸಿವೆ. ಇನ್ನು ನಗರದ ತುಂಬೆಲ್ಲ ಕನ್ನಡದ ಬಾವುಟಗಳು, ಕನ್ನಡಕ್ಕಾಗಿ ದುಡಿದ ಮಹನೀಯರ ಕಟೌಟ್‌ಗಳನ್ನು ಹಾಕಿ ಕನ್ನಡತನ ಮೆರೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿ ಹೃದಯ ಭಾಗ ಚೆನ್ನಮ್ಮ ಸರ್ಕಲ್ ರಾಜ್ಯೋತ್ಸವದ ಪ್ರಮುಖ ಕೇಂದ್ರವಾಗಿ ಬಿಟ್ಟಿದೆ.
ರಿಯಾಯಿತಿ, ಕಲಾತಂಡ:
ರಾಜ್ಯದ ಜನತೆಗೆ ದಸರಾ ನಾಡ ಹಬ್ಬವಾದರೆ ಬೆಳಗಾವಿಗರಿಗೆ ರಾಜ್ಯೋತ್ಸವ ನಾಡಹಬ್ಬವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ನ.೧ರಂದು ನಗರದ ಬಹುತೇಕ ಅಂಗಡಿ, ಮಾಲಗಳು ರಿಯಾಯಿತಿಗಳನ್ನು ಘೋಷಿಸಿ ಕನ್ನಡ ರಾಜ್ಯೋತ್ಸಕ್ಕೆ ತಮ್ಮ ಕೊಡುಗೆ ನೀಡುತ್ತಿವೆ. ಕಳೆದ ಸಾರಿ ಶೇ.೨೦ರಷ್ಟು ರಿಯಾಯಿತಿ ಘೋಷಿಸುವ ಮೂಲಕ ರಾಜ್ಯೋತ್ಸವಕ್ಕೆ ಇಂಬು ನೀಡಿದ್ದರು. ಇನ್ನೂ ರಾಜ್ಯೋತ್ಸವ ಚೆನಮ್ಮ ಸರ್ಕಲ್‌ನಲ್ಲಿ ಜನಜಾತ್ರೆ ನೆರೆದಿರುತ್ತದೆ. ಎಲ್ಲರ ಬಾಯಲ್ಲೂ ಕನ್ನಡದ ಮಾತು, ಕನ್ನಡದ ಬಾವುಟಗಳು ರಾರಾಜಿಸುತ್ತಿರುವುತ್ತವೆ. ಮತ್ತೊಂದೆಡೆ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳ ಮೆರೆವಣಿಗೆ ರಾಜ್ಯೋತ್ಸವಕ್ಕೆ ಕಳೆ ತಂದಿರುತ್ತದೆ. ಜಿಲ್ಲಾಡಳಿತ ಮುಂಚಿತವಾಗಿವೆ. ತಾಲೂಕುವಾರು ಸ್ತಬ್ಧ ಚಿತ್ರ ಹಾಗೂ ಕಲಾತಂಡಗಳಿಗೆ ಆಹ್ವಾನ ನೀಡಿರುತ್ತದೆ. ಅಂದಾಜು ೫೦ಕ್ಕೂ ಅಧಿಕ ಕಲಾ ತಂಡಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡಿಗರ ಮನ ತಣಿಸುತ್ತವೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಉತ್ತಮ ಸ್ತಬ್ಧ ಚಿತ್ರ ಹಾಗೂ ಕಲಾ ತಂಡಗಳಿಗೆ ಸೂಕ್ತ ಬಹುಮಾನ ಕೂಡ ನೀಡಲಾಗುತ್ತಿದೆ.
ಸಂಗೀತ, ಹೋಳಿಗೆ, ಡ್ರೋಣ:
ಗಣೇಶ ಹಬ್ಬ ಬಿಟ್ಟರೆ ಮತ್ತೆ ಡಿಜೆ ಸದ್ದು ಕೇಳುವುದು ರಾಜ್ಯೋತ್ಸವ ದಿನದಂದು. ನಗರದ ಪ್ರಮುಖ ಓಣಿಯಿಂದ ಡಿಜೆಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಹಚ್ಚಿಕೊಂಡು ಬರುತ್ತಾರೆ. ಇದರೊಟ್ಟಿ ಪ್ರತಿಯೊಬ್ಬರ ಕನ್ನಡ ಧ್ವಜ ಹಿಡಿ ಕನ್ನಡ ಹಾಡುಗಳಿಗೆ ಹುಚ್ಚೆದ್ದು ಹೆಜ್ಜೆ ಹಾಕುತ್ತಾ ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಇದಷ್ಟೇ ಅಲ್ಲದೇ ಹುಕ್ಕೇರಿ ಹಿರೇಮಠದಿಂದ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಹೋಳಿಗೆ ಊಟವನ್ನು ಊಣಬಡಿಸಲಾಗುತ್ತಿದೆ. ಇನ್ನೂ ರಾಜ್ಯೋತ್ಸವನ್ನು ಸೆರೆ ಹಿಡಿಯಲೂ ಡ್ರೋಣ ಕ್ಯಾಮೆರ್‌ಗಳು ಹದ್ದಿನಂತೆ ಆಕಾಶದಲ್ಲಿ ತೇಲುತ್ತಿರುತ್ತವೆ.
ಟೀ ಶರ್ಟ್, ಸ್ಲೋಗನ್:
ಬೆಳಗಾವಿ ರಾಜ್ಯೋತ್ಸವ ಸಾಮಾಜಿಕ ಜಲತಾಣದಲ್ಲೂ ಭಾರಿ ಸದ್ದು ಮಾಡುತ್ತಿದೆ. ಕಳೆದ ಸಾರಿ ನಮ್ಮ ಬೆಳಗಾವಿ ಫೇಸ್ಬುಕ್ ಪೇಜ್‌ನಿಂದ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಅನ್ನುವ ಟೀಶರ್ಟ್ ಹಾಗೂ ಹಾಡು ಭಾರಿ ಸದ್ದು ಮಾಡುತ್ತಿದೆ. ಅಂದಾಜು ೩ ಸಾವಿರಕ್ಕೂ ಅಧಿಕ ಜನರು ಈ ಟೀ ಶರ್ಟ್ ಖರೀದಿಸಿ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಕೂಡಾ ‘ಏನ್ ಮಾಡ್ಕೋತಿ ಮಾಡ್ಕೋ, ಬೆಳಗಾವಿ ನಮ್ದೈತಿ ಬರ್ಕೋ’ ಎಂಬ ಸ್ಲೋಗನ್ ಸದ್ದು ಮಾಡುತ್ತಿದೆ. ಈಗಾಗಲೇ ಈ ಸ್ಲೋಗನ್ ಟೀಶರ್ಟ್‌ಗಳು ತಯಾರಿದ್ದು ರಾಜ್ಯೋತ್ಸವ ದಿನದಂದು ರಾರಾಜಿಸಲು ಅಣಿಯಾಗಿವೆ.
ರಾಜ್ಯೋತ್ಸವದ ಸವಿ ಸವಿಯ ಬೇಕಾದರೆ ನೀವು ರಾಜ್ಯೋತ್ಸವ ದಿನದಂದು ಬೆಳಗಾವಿಗೆ ಬರಲೇ ಬೇಕು. ಯಾಕಂದ್ರೆ ಇಲ್ಲಿಯ ರಾಜ್ಯೋತ್ಸವ ಸಂಭ್ರಮ ಮತ್ತೇಲ್ಲೂ ಕಾಣ ಸಿಗುವುದಿಲ್ಲ. ಈ ಬಾರೀ ರಾಜ್ಯೋತ್ಸವಕ್ಕೂ ಬೆಳಗಾವಿ ಮಂದಿ ಸನ್ನದ್ಧರಾಗಿ ಕನ್ನಡ ಡಿಂಡಿಂ ಬಾರಿಸಲು ಕಾಯ್ದು ಕುಳಿತಿದ್ದಾರೆ. 

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...