ಮಂಜುನಾಥ ಗದಗಿನ
ಅವು ಕಷ್ಟದ ದಿನಗಳು ದಿನ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಇಂತಹ ಸಮಯದಲ್ಲಿ ನಮ್ಮೂರಿನ ದುರ್ಗಾದೇವಿ ಭಜನಾ ಸಂಘದ ಮೂಲಕ ಜನಪದ, ಭಜನಾ ಪದಗಳನ್ನು ಹಾಡುತ್ತ ಇದ್ದೆ. ಇದೇ ಸಮಯÓÜಕ್ಕೆ ಹರಲಾಪುರದ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಎಸ್.ಎಸ್.ಹಿರೇಮಠ ಎಂಬುವವರು ನನ್ನನ್ನು ಬೀದಿ ನಾಟಕ ಮಾಡಲಿಕ್ಕೆ ಕರೆದರು. ಅಲ್ಲಿಂದ ನನ್ನ ನಟನಾ ಬದುಕು ಆರಂಭವಾಯಿತು. ನಂತರ ವಾರ್ತಾ ಇಲಾಖೆ ಮುಖಾಂತರ ರಾಜ್ಯದ ವಿವಿಧೆಡೆ ಬೀದಿ ನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಾ ಬಂದೆ. ಈ ವೇಳೆ ವಾರ್ತಾ ಇಲಾಖೆಯಿಂದ ದಿನಕ್ಕೆ ಕೊಡುತ್ತಿದ್ದ 200 ನನಗ ದೊಡ್ಡ ಸಂಬಳ ಆಗಿತ್ತು.
ಹೀಗೆ ಊರೂರು ನಾಟಕ ಮಾಡಿಕೊಂಡ ಹೋದ ಸಮಯದಲ್ಲಿ ಸರಿಯಾದ ಊಟ, ನಿದ್ದೆ ಇರುತ್ತಿರಲಿಲ್ಲ. ಆ ವೇಳೆ ಊರಿನ ಅಂಗನವಾಡಿ, ದೇವಾಲಯಗಳೇ ನಮಗೆ ಆಶ್ರಯ ತಾಣಗಳಾಗಿದ್ದವು. ಇನ್ನು ಊರಿನ ಅಧ್ಯಕ್ಷರು, ಉಪಾಧ್ಯಕ್ಷ, ಕಲಾಪ್ರೇಮಿಗಳು ನೀಡುತ್ತಿದ್ದ ತುತ್ತು ಅನ್ನವೇ ನಮಗೆ ಮೃಷ್ಟಾನ್ನವಾಗಿತ್ತು. ಅದೆಷ್ಟೋ ಸಾರಿ ಸ್ನಾನವನ್ನೇ ಮಾಡದೇ ಗಬ್ಬು ವಾಸನೆ ಮೈಯಿಂದ ಊರೂರು ತಿರಗಾಡಿದ್ದೇನೆ. ಇದೇ ವೇಳೆ ಸಾವಿರಕ್ಕೂ ಅಧಿಕ ಬೀದಿ ನಾಟಕಗಳಲ್ಲಿ ನಟಿಸಿದ್ದೇನೆ. ಆ ಕಷ್ಟದ ದಿನಗಳನ್ನ ನೆನೆದರೆ ಕಣ್ಣೀರು ಕಪಾಳಕ್ಕೆ ಬರುತ್ತವೆ. ಆದ್ರೆ ಕಷ್ಟ ಪಟ್ರೆ ಸುಖ ಇದೆ ಎಂಬ ಮಾತು ನನ್ನ ಬದುಕಿನಲ್ಲಿ ನಿಜ ಆಗಿದೆ.
ನನ್ನೂರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುಲ್ತಾನಪುರ. ಬಹಳ ಚಿಕ್ಕ ಹಳ್ಳಿ. ಹೆಸರು ಸದಾನಂದ ಕಾಳಿ. ಸದ್ಯ ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ಎಂಬ ಸ್ಪರ್ಧೆಯಲ್ಲಿ ಎಲ್ಲರನ್ನು ನಕ್ಕು ನಗಿಸುತ್ತಾ ಇದ್ದೇನೆ. ಈಗಿನ ಸದಾನಂದ ಶಾಲಾದಿನಗಳಲ್ಲಿ ದಡ್ಡ ಸದಾನಂದ ಆಗಿದ್ದ. ಹೀಗಾಗಿಯೇ ಎಸ್ಸೆಸ್ಸೆಲ್ಲಿಯಲ್ಲಿ ನಾಲ್ಕು ವಿಷಯಗಳಲ್ಲಿ ಡುಮ್ಕಿ ಹೊಡೆದಿದ್ದೆ. ನಂತರ ವರ್ಷಕ್ಕ ಒಂದ್ರಂತ ಪಾಸ್ ಆದೆ. ನಂತರ ಬಿಎಡ್ ಮಾಡಿಕೊಂಡೆ. ಮುಂದೆ ಕಲಾ ಸೇವೆ ನನ್ನನ್ನು ಕೈಬೀಸಿ ಕರೆಯಿತು. ಜಾನಪದ, ಭಜನಾ ಪದ, ಬೀದಿ ನಾಟಕ ಅಂತ ರಾಜ್ಯದೆಲ್ಲೆಡೆ ಸುತ್ತಿದೆ. ಇದೇ ವೇಳೆ ನಟನೆಯಲ್ಲಿ ಇನ್ನಷ್ಟು ಪಳಗಬೇಕೆಂದು ಚಿತ್ರದುರ್ಗದ ಸಾಣೇಹಳ್ಳಿ ಶಿವಸಂಚಾರ ಮಠದಲ್ಲಿ ಒಂದು ವರ್ಷದ ನಟನಾ ತರಬೇತಿ ಪಡೆದೆ. ಈ ವೇಳೆ ಮೂರ್ನಾಲ್ಕು ನಾಟಕಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಮಲೆಗಳಲ್ಲಿ ಮದುಮಗಳು ಎಂಬ ಅದ್ಭುತ ಹಾಗೂ ದೀರ್ಘ ನಾಟಕದಲ್ಲಿ ಅಭಿನಯಿಸುವ ಭಾಗ್ಯ ನನಗೆ ದೊರೆಯಿತು. ಇದು ಬರೋಬ್ಬರಿ ಒಂಬತ್ತು ತಾಸಿನ ನಾಟಕ. ಇಂತಹ ನಾಟಕದಾಗ ನನ್ಗ 70 ವರ್ಷ ವಯಸ್ಸಿನ ವೆಂಕಟಪ್ಪ ನಾಯಕ ಎಂಬ ಪಾತ್ರ ದೊರೆಯಿತು. ಈ ನಾಟಕ ನನ್ನ ಬಣ್ಣದ ಬದುಕಿಗೆ ಚಿನ್ನದ ದಿನಗಳನ್ನಾಗಿ ಕಲ್ಪಿಸಿತು.
ಮನೆಗೆಲಸ ಮಾಡಿದ್ದೇನೆ:
ಆರಂಭದ ದಿನಗಳಲ್ಲಿ ಬೆಂಗಳೂರು ನನಗೆ ಹೊಸತು. ಇಲ್ಲಿ ಬಂದಾಗ ಎಲ್ಲವನ್ನು ಅಚ್ಚರಿಯ ಕಂಗಳಲ್ಲಿ ನೋಡುತ್ತಿದ್ದೆ. ಈ ವೇಳೆ ಹೊಟ್ಟೆ ಪಾಡಿಗಾಗಿ ಒಬ್ಬ ಶ್ರೀಮಂತರ ಮನೆಯಲ್ಲಿ ಕೆಲಸದಾಳು ಆಗಿ ದುಡಿಯುತ್ತಿದ್ದೆ. ಅವರ ಮನೆ ಕ್ಲೀನ್ ಮಾಡುವುದು. ಅವರ ಕಾರ್ ತೊಳೆಯುವುದು. ಅವರು ಕಾಲು ಒತ್ತು ಅಂದಾಗ ಕಾಲ ಒತ್ತುವುದು ಮಾಡುತ್ತಿದೆ. ಇದಷ್ಟೇ ಅಲ್ಲದೇ ಬೆಂಗಳೂರು ಮಹಾನಗರದಲ್ಲಿ ಗೊತ್ತಿಲ್ಲದ ಸಂಧಿ ಗೊಂದಿಗಳಲ್ಲಿ ತಿರುಗಾಡಿ ಹೆಲ್ಮೆಟ್, ಗ್ಲಾಸ್, ಸಾಕ್ಸ್‌ಗಳನ್ನು ಮಾರಿ ಜೀವನ ಕಂಡುಕೊಂಡಿದ್ದೇನೆ. 20 ಲೀಟರ್‌ನ ವಾಟರ್ ಕ್ಯಾನ್‌ಗಳನ್ನು ಸೇಲ್ ಮಾಡಿದ್ದೇನೆ. ಇಂದು ಅದೇ ರಸ್ತೆಯಲ್ಲಿ ಓಡಾಡುವಾಗ ಹಿಂದಿನ ದಿನಗಳು ಕಣ್ಣುಂದೆ ಬರುತ್ತವೆ. ನನ್ನ ಈ ಎಲ್ಲ ಕಷ್ಟಗಳು ನನ್ನೊಬ್ಬನಿಗೆ ಗೊತ್ತು. ಈ ನೋವುಗಳನ್ನು ಮತ್ಯಾರ ಮುಂದೆಯೂ ನಾನು ತೋಡಿಕೊಂಡಿಲ್ಲ. ಆದರೆ, ಆ ದೇವರು ನನ್ನ ಕಷ್ಟಗಳಿಗೆ ಸದ್ಯ ಉತ್ತಮ ಪ್ರತಿಫಲ ನೀಡಿದ್ದಾನೆ ಅನಿಸುತ್ತಿದೆ.
ಮಾಸ್ಟರ್ ಆನಂದ ಕೈ ಹಿಡಿದರು:
ನನ್ನ ನಟನೆ ನೋಡಿ ಮಾಸ್ಟರ್ ಆನಂದ ತಮ್ಮ ಧಾರಾವಾಹಿ ರೋಬೋ ಫ್ಯಾಮಿಲಿಯಲ್ಲಿ ಒಂದು ಅವಕಾಶ ಒದಗಿಸಿಕೊಟ್ಟರು. ನಂತರ ದಿನಗಳಲ್ಲಿ ಮತ್ತಷ್ಟು ಅವಕಾಶಗಳು ನನ್ನನ್ನು ಅರಸಿ ಬಂದವು. ಶ್ರೀಮಾನ ಶ್ರೀಮತಿ ಮತ್ತಿತರ ಧಾರವಾಹಿಗಳಲ್ಲಿ ಅಭಿನಯಿಸಿ ನಾಡಿನ ಜನರ ಹೃದಯಲ್ಲಿ ಒಂದು ಸ್ಥಾನ ಪಡೆದ ಹೆಮ್ಮೆ ನನಗಿದೆ. ಅಷ್ಟೇ ಅಲ್ಲದೇ ಪಟಾಕಿ, ನನ್ನ ನಿನ್ನ ಪ್ರೇಮಕಥೆ, ಮಟಾಶ್, ನರಗುಂದ ಬಂಡಾಯ, ಚರಂತಿ, ಪ್ರಯಾಣಿಕರ ಗಮನಕ್ಕೆ ಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ಅವುಗಳಲ್ಲಿ ಪಟಾಕಿ, ನನ್ನ ನಿನ್ನ ಪ್ರೇಮಕಥೆ ಬಿಡುಗಡೆಯಾಗಿವೆ. ಉಳಿದ ಸಿನೆಮಾಗಳು ಬಿಡುಗಡೆಯಾಗಲು ಸನ್ನದ್ಧ ಇವೆ. ಕಲಾ ಪ್ರೇಮಿಗಳು ಇಲ್ಲಿವರೆಗೂ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲ ನೀಡಿ ಪೋಷಿಸುತ್ತಾರೆ ಎಂಬ ನಂಬಿಕೆ ನನ್ನದು.